ಐಟಿ ದಾಳಿ: ರಾಜಕೀಯ ಬಣ್ಣ ಬೇಡ

Team Udayavani, Mar 30, 2019, 6:00 AM IST

ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳ ಮನೆಗಳ ಮೇಲೆ ದಾಳಿ ಮಾಡಿರುವುದು ಸಾಕಷ್ಟು ರಾಜಕೀಯ ಚರ್ಚೆಗೆ ಎಡೆ ಮಾಡಿದೆ.

ಐಟಿ ದಾಳಿಯಾದ ತಕ್ಷಣ ರಾಜ್ಯದ ಮೈತ್ರಿ ಪಕ್ಷದ ನಾಯಕರು ಜಂಟಿಯಾಗಿ ಆದಾಯ ತೆರಿಗೆ ಇಲಾಖೆಯ ಎದುರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಆದಾಯ ತೆರಿಗೆ ಇಲಾಖೆ ಮೂಲಕ ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷಗಳ ನಾಯಕರು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಟ್ಟುಕೊಂಡು ಕೇಂದ್ರ ಸರ್ಕಾರ ಈ ದಾಳಿ ನಡೆಸಿದೆ ಎನ್ನುವುದು ಮೈತ್ರಿ ಪಕ್ಷಗಳ ನೇರ ಆರೋಪವಾಗಿತ್ತು.

ಅಲ್ಲದೇ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನಿಕ ಸಂಸ್ಥೆಗಳಾದ ಆದಾಯ ತೆರಿಗೆ ಇಲಾಖೆ, ಸಿಬಿಐ, ಜಾರಿ ನಿರ್ದೇಶನಾಲಯಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಆರೋಪವನ್ನು ಪ್ರತಿಪಕ್ಷಗಳು ಮಾಡುತ್ತಲೇ ಇವೆ.

ಪ್ರತಿಬಾರಿಯೂ ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಗಳಿಂದ ದಾಳಿ ನಡೆದಾಗಲೂ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಕ್ಷದ ಮೇಲೆ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಆರೋಪ ಕೇಳಿ ಬರುತ್ತದೆ. ಆದರೆ, ಸಾಂವಿಧಾನಿಕ ಸಂಸ್ಥೆಗಳು ಮಾತ್ರ ದೇಶದ ಹಿತದೃಷ್ಟಿಯಿಂದ ತಮ್ಮ ಕಾರ್ಯವನ್ನು ನಿರಂತರ ಮಾಡುತ್ತಲೇ ಬರುತ್ತಿವೆ. ಕೆಲವು ಬಾರಿ ಸಂಸ್ಥೆಗಳ ಮುಖ್ಯಸ್ಥರು ಅಧಿಕಾರದಲ್ಲಿರುವ ಪಕ್ಷದ ಅಣತಿಯಂತೆ ನಡೆಯುತ್ತಾರೆ ಎಂಬ ಆರೋಪ ಸಾಮಾನ್ಯವಾಗಿ ಕೇಳಿ ಬರುತ್ತದೆ.

ಕೆಲವು ಸಾಂವಿಧಾನಿಕ ಸಂಸ್ಥೆಗಳ ನಿರ್ಧಾರಗಳು ಸಾರ್ವಜನಿಕರಲ್ಲಿ ಅಂತಹದೊಂದು ಸಂಶಯ ಮೂಡುವಂತೆಯೂ ನಡೆದುಕೊಳ್ಳುವುದೂ ಇದಕ್ಕೆ ಕಾರಣ ಇರಬಹದು.

ರಾಜಕಾರಣಿಗಳು ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ತಮ್ಮ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಹಾಗೂ ಪ್ರತಿ ವರ್ಷ ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸುತ್ತಾರೆ. ಸರ್ಕಾರಿ ಅಧಿಕಾರಿಗಳೂ ಲೋಕಾಯುಕ್ತಕ್ಕೆ ಪ್ರತಿ ವರ್ಷ ತಮ್ಮ ಆಸ್ತಿ ವಿವರ
ಸಲ್ಲಿಸುತ್ತಾರೆ. ಅವರು ಸಲ್ಲಿಸಿರುವ ಆಸ್ತಿಯ ವಿವರ ಬಹಿರಂಗ ಗೊಳ್ಳುವುದರಿಂದ ಸಾರ್ವಜನಿಕರು ಸಂಶಯ ಬರುವ ರಾಜಕಾರಣಿ, ಅಧಿಕಾರಿ, ಉದ್ಯಮಿಗಳ ಮೇಲೆ ಅಕ್ರಮ ಆಸ್ತಿಗಳಿಗೆ ಅಥವಾ ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಅವರು ದೂರು ನೀಡುತ್ತಾರೆ.

ಹಾಗೆಂದು ಆದಾಯ ತೆರಿಗೆ ಇಲಾಖೆ ದೂರು ಬಂದ ವ್ಯಕ್ತಿಯ ಮೇಲೆ ಏಕಾಏಕಿ ದಾಳಿಯೇನೂ ಮಾಡುವುದಿಲ್ಲ. ಅವರ ಚಲನವಲನಗಳು, ಅವರಿಗೆ ಸಂಬಂಧಿಸಿದ ವ್ಯಕ್ತಿಗಳು, ಸಂಸ್ಥೆಗಳ ಆದಾಯದ ಮೇಲೆ ನಿರಂತರ ನಿಗಾ ಇಟ್ಟು ಕಾಯುತ್ತಾರೆ. ಅಲ್ಲದೇ ಒಮ್ಮೆ ದಾಳಿ ಮಾಡಲು ಸುಮಾರು ಮೂರರಿಂದ ಆರು ತಿಂಗಳು ಸಮಯವನ್ನೂ ತೆಗೆದುಕೊಳ್ಳುತ್ತಾರೆ. ಅಲ್ಲದೇ ತಮ್ಮ ದಾಳಿಯ ಬಗ್ಗೆ ಯಾರಿಗೂ ಮಾಹಿತಿ ದೊರೆಯದಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ. ವಿಶೇಷವಾಗಿ ದಾಳಿ ಸಂದರ್ಭದಲ್ಲಿ ರಕ್ಷಣೆಗೆ ಪೊಲಿಸ್‌ ಇಲಾಖೆ, ಅರೆ ಮಿಲಿಟರಿ ಪಡೆಗಳನ್ನು ಬಳಸಿಕೊಳ್ಳುವ ಆದಾಯ ತೆರಿಗೆ ಇಲಾಖೆಯವರು, ತಾವು ಯಾರ ಮನೆ ಮೇಲೆ ದಾಳಿ ಮಾಡುತ್ತಿದ್ದೇವೆ ಎನ್ನುವುದನ್ನೂ ಇಲಾಖೆಯ ಅಧಿಕಾರಿಗಳಿಗೂ, ರಕ್ಷಣೆಗೆ ಬರುವ ಪೊಲೀಸರಿಗೂ ತಿಳಿಸದೇ ಗೌಪ್ಯತೆ ಕಾಪಾಡಿಕೊಳ್ಳುತ್ತಾರೆ.

ಅಕ್ರಮ ಆಸ್ತಿ ಸಂಪಾದನೆ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವುದದಲ್ಲೇ, ಸಮಾಜದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಳ ಮಾಡುವುದರಿಂದ ಸಮಾಜದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ, ಆರ್ಥಿಕ ಅಸಮತೋಲನ, ಸಮಾಜ ಘಾತುಕ ಶಕ್ತಿಗಳು ಹೆಚ್ಚಾಗಲೂ ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಕಾನೂನು ಬದ್ದವಾಗಿ ನಡೆಸುವ ದಾಳಿಗಳು ರಾಜಕೀಯ ಬಣ್ಣ ಪಡೆದರೂ, ದೇಶದ ಹಿತದೃಷ್ಟಿಯಿಂದ ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ.

ಯಾವುದೇ ದಾಖಲೆಯಿಲ್ಲದೇ ಸಂಗ್ರಹಿಸಿರುವ ಹಣದ ಬಗ್ಗೆ
ತನಿಖೆ ನಡೆಸುವುದು ಆರೋಗ್ಯವಂತ ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನವೇ ಹೊರತು. ಅದರಿಂದ ಬೇರೆ ದುರುದ್ದೇಶ ಇರುವುದಿಲ್ಲ. ಆದರೆ, ದೇಶದ ಸಮಗ್ರತೆ ಹಾಗೂ ಸಾರ್ವಭೌಮತೆಯನ್ನು ಕಾಪಾಡಬೇಕಾದ ಸ್ಥಾನದಲ್ಲಿರುವವರು, ಸಂವಿಧಾನಿಕ ಸಂಸ್ಥೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಎಷ್ಟು ಅಪಾಯಕಾರಿಯೋ, ಅದೇ ಗೌಪ್ಯತೆಯನ್ನು ದಾಳಿಗೂ ಮೊದಲೇ ಬಹಿರಂಗಗೊಳಿಸುವುದೂ ಆತಂಕಕಾರಿ ಬೆಳವಣಿಗೆ. ಆರೋಪ ಮಾಡುವವರೂ ಹಾಗೂ ದುರುಪಯೋಗಪಡಿಸಿಕೊಳ್ಳುವವರೂ ಸಾಂವಿಧಾನಿಕ ಸಂಸ್ಥೆಗಳ ಘನತೆ ಕಾಪಾಡಬೇಕಿರುವುದು ಇಂದಿನ ಅಗತ್ಯ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ