ಕರ್ತಾರ್ಪುರದ ಮೇಲೆ ಕಾರ್ಮೋಡ

Team Udayavani, Nov 8, 2019, 6:00 AM IST

ಸಿಖ್‌ ಸಮುದಾಯಕ್ಕೆ ಪವಿತ್ರವಾಗಿರುವ ಕ್ಷೇತ್ರಗಳೆರಡರ ನಡುವೆ ಸಂಪರ್ಕ ಕಲ್ಪಿಸಿರುವ ಕರ್ತಾರ್ಪುರ ಕಾರಿಡಾರ್‌ ಮೇಲೆ ಅನುಮಾನದ ಕಾರ್ಮೋಡಗಳು ಮಡುಗಟ್ಟಿವೆ. ಗುರುದಾಸಪುರ ಜಿಲ್ಲೆಯ ಡೇರಾಬಾಬಾ ನಾನಕ್‌ ಗುರುದ್ವಾರ ಮತ್ತು ಪಾಕ್‌ನ ದರ್ಬಾರ್‌ ಸಾಹಿಬ್‌ ಅನ್ನು ಬೆಸೆಯುವ ಈ ಕಾರಿಡಾರ್‌ ನ.9ರಂದು ಉದ್ಘಾಟನೆಗೊಳ್ಳಲಿದ್ದು, ಪಾಕಿಸ್ಥಾನವಂತೂ ಭಾರತದ ಸಿಖ್‌ ಯಾತ್ರಾರ್ಥಿಗಳನ್ನು ಆಹ್ವಾನಿಸಲು ಅತಿ ಎನ್ನಿಸುವಷ್ಟು ಆಸಕ್ತಿ ತೋರುತ್ತಿದೆ.

ಸಿಖ್‌ ಧರ್ಮದ ಉಗಮಸ್ಥಾನವೆನ್ನಲಾಗುವ ಈ ಕ್ಷೇತ್ರದಲ್ಲೇ ಗುರುನಾನಕರು ತಮ್ಮ ಅಂತಿಮ 18 ವರ್ಷಗಳನ್ನು ಕಳೆದರು ಎಂಬ ನಂಬಿಕೆಯಿದೆ. ಈ ಕಾರಣದಿಂದಾಗಿಯೇ ಪ್ರಪಂಚದ ಸಿಖ್‌ ಸಮುದಾಯಕ್ಕೆ ಪಾಕಿಸ್ಥಾನದಲ್ಲಿನ ಈ ಪ್ರದೇಶ ಅತ್ಯಂತ ಪವಿತ್ರವಾದದ್ದು. ಹೀಗಾಗಿ, ಕರ್ತಾರ್ಪುರ ಆ ಸಮುದಾಯಕ್ಕೆ ಭಾವನಾತ್ಮಕ ವಿಚಾರವಾಗಿರುವುದರಿಂದ ಅಲ್ಲಿ ಯಾವುದೇ ತಂತ್ರ ಅಥವಾ ಕುತಂತ್ರಗಳಿಗೆ ಜಾಗವೇ ಇರಬಾರದಿತ್ತು. ಆದರೆ ಪಾಕಿಸ್ಥಾನ ಈ ಸಂಗತಿಯನ್ನು ಖಲಿಸ್ಥಾನಿ ಪ್ರತ್ಯೇಕತಾವಾದವನ್ನು ಬೆಳೆಸಲು ಬಳಸಿಕೊಳ್ಳುವ ಸಾಧ್ಯತೆಗಳೂ ಗೋಚರಿಸಲಾರಂಭಿಸಿವೆ. ಮಂಗಳವಾರ ಪಾಕಿಸ್ಥಾನಿ ಸರಕಾರವು ಕರ್ತಾರ್ಪುರ ಕುರಿತು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಖಲಿಸ್ಥಾನಿ ಉಗ್ರ ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲೇ ಮತ್ತು ಇತರೆ ಇಬ್ಬರು ಮೃತ ಉಗ್ರರ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಹೀಗಾಗಿ, ಈ ವಿಚಾರವನ್ನು ಭಾರತ ಸರಕಾರ ತೀವ್ರವಾಗಿ ಖಂಡಿಸಿದೆ. “ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಪ್ರತ್ಯೇಕತಾವಾದಿಗಳನ್ನು ಬೆಳೆಸಲು ಪಾಕ್‌ ಯೋಚಿಸುತ್ತಿದೆ’ ಎಂಬ ಪಂಜಾಬ್‌ ಮುಖ್ಯಮಂತ್ರಿ ಕ್ಯಾ.

ಅಮರಿಂದರ್‌ ಸಿಂಗ್‌ ಅವರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕಳೆದ 70 ವರ್ಷದಿಂದ ಸಿಖ್‌ ಸಮುದಾಯವು ಕರ್ತಾರ್ಪುರ ಗುರುದ್ವಾರಕ್ಕೆ ಭೇಟಿ ನೀಡಲು ಅವಕಾಶಕ್ಕಾಗಿ ವಿನಂತಿಸುತ್ತಾ ಬಂದಿದ್ದರೂ ಸುಮ್ಮನಿದ್ದ ಪಾಕಿಸ್ಥಾನ, ಈಗ ಏಕಾಏಕಿ ಒಪ್ಪಿಕೊಂಡಿರುವುದರ ಹಿಂದೆ ದುರುದ್ದೇಶವಿದೆ ಎಂಬ ಅಮರಿಂದರ್‌ ಸಿಂಗ್‌ ಮಾತು ಚಿಂತನಾರ್ಹವೇ. ಅವರ ಮಾತಿಗೆ ಪೂರಕ ಸಂಗತಿಗಳೂ ಹೇರಳವಾಗಿ ಸಿಗುತ್ತಿವೆ. ಪಾಕಿಸ್ಥಾನದ ಸೇನೆಯ ನಿವೃತ್ತ ಜನರಲ್‌ ಮಿರ್ಜಾ ಅಸ್ಲಾಂ ಅಂತೂ ಕರ್ತಾರ್ಪುರವನ್ನು ಖಲಿಸ್ಥಾನ ಪ್ರತ್ಯೇಕತಾ ವಾದಕ್ಕೆ ವೇದಿಕೆಯಾಗಿ ಬಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕಾಶ್ಮೀರದಿಂದ ಆರ್ಟಿಕಲ್‌ 370 ತೆರವುಗೊಂಡು, ಅದು ಕೇಂದ್ರಾಡಳಿತ ಪ್ರದೇಶವಾದ ನಂತರವಂತೂ ಪಾಕಿಸ್ಥಾನಕ್ಕೆ ಚಡಪಡಿಕೆ ಆರಂಭವಾಗಿದೆ. ಅಲ್ಲಿ ಇನ್ಮುಂದೆ ತನ್ನ ದುರುದ್ದೇಶಗಳನ್ನು ಈಡೇರಿಸಿಕೊಳ್ಳುವುದು ಕಷ್ಟಸಾಧ್ಯ ಎಂದು ಅರಿತಿರುವ ಪಾಕ್‌ ಸೇನೆ, ಪಂಜಾಬ್‌ನಲ್ಲಿ ಪ್ರತ್ಯೇಕತಾವಾದದ ಬೆಂಕಿ ಹಚ್ಚುವ ಬಗ್ಗೆ ಯೋಚಿಸುತ್ತಿದೆ. ಪಾಕಿಸ್ಥಾನಿ ಸೇನೆ-ಸರಕಾರ ಖಲಿಸ್ಥಾನಿ ಪ್ರತ್ಯೇಕತಾವಾದಿಗಳಿಗೆ ಮೊದಲಿನಿಂದಲೂ ಬೆಂಬಲ ನೀಡುತ್ತಲೇ ಬಂದಿವೆ. ಖಲಿಸ್ಥಾನ್‌ ಪರ ತೀವ್ರವಾದಿ ಸಂಘಟನೆ, ಎಸ್‌ಎಫ್ಜೆ(ಸಿಖ್‌ ಫಾರ್‌ ಜಸ್ಟಿಸ್‌) ಈಗ ಲಾಹೋರ್‌ನಲ್ಲಿ ಅಧಿಕೃತ ಕಚೇರಿಯನ್ನೂ ತೆರಿದಿದೆ ಎಂಬ ವರದಿಗಳಿವೆ. ಈ ಸಂಘಟನೆಗೆ ಭಾರತ ವಿರೋಧಿ ಶಕ್ತಿಗಳೆಲ್ಲ ಹಣಸಹಾಯ ಮಾಡುತ್ತಿವೆ.

ಅದರಲ್ಲೂ ಮುಖ್ಯವಾಗಿ, ಪಾಕಿಸ್ಥಾನವೇ ಇದರ ಅತಿದೊಡ್ಡ ದೇಣಿಗೆದಾರ ದೇಶ.
ಪಾಕಿಸ್ಥಾನ ನಿಜಕ್ಕೂ ಸಿಖ್‌ರೆಡೆಗಿನ ಕಾಳಜಿಯಿಂದ, ಮಾನವೀಯತೆಯ ದೃಷ್ಟಿಯಿಂದ ಕರ್ತಾರಪುರದ ಕದ ತೆರೆದಿದೆ ಎನ್ನುವುದು ಮೂರ್ಖತನವಾದೀತು. ಏಕೆಂದರೆ, ದಶಕಗಳಿಂದ ತನ್ನ ನೆಲದಲ್ಲಿನ ಅಲ್ಪಸಂಖ್ಯಾತ ವರ್ಗಗಳನ್ನು ಅದು ನಡೆಸಿಕೊಳ್ಳುತ್ತಾ ಬಂದಿರುವ ರೀತಿ ಬೆಚ್ಚಿಬೀಳಿಸುವಂತಿದೆ. 1947ರಲ್ಲಿ ಪಾಕಿಸ್ಥಾನದಲ್ಲಿ 23 ಪ್ರತಿಶತದಷ್ಟಿದ್ದ ಅಲ್ಪಸಂಖ್ಯಾತ ಸಮುದಾಯಗಳ ಸಂಖ್ಯೆಯೀಗ, ಕೇವಲ 3 ಪ್ರತಿಶತಕ್ಕೆ ಬಂದು ನಿಂತಿದೆ. ಶಿಯಾಗಳು, ಅಹಮದೀಯರು, ಕ್ರಿಶ್ಚಿಯನ್ನರು, ಹಿಂದೂಗಳು ಮತ್ತು ಮುಖ್ಯವಾಗಿ ಸಿಖ್ಬರ ವಿರುದ್ಧ ಅದು ಎಸಗುತ್ತಿರುವ ಅತ್ಯಾಚಾರ- ಕ್ರೌರ್ಯವೆಲ್ಲ ಪುರಾವೆ ಸಹಿತ ಜಗತ್ತಿನ ಎದುರಿಗಿವೆ. ಆ ದೇಶದಲ್ಲಿನ ಪರಿಸ್ಥಿತಿ ಮತ್ತು ಮನಸ್ಥಿತಿ ಹೀಗಿರುವಾಗ ಈಗ ಇಮ್ರಾನ್‌ ಸರಕಾರ ಸಿಖ್‌ ಸಮುದಾಯವನ್ನು ತೆರೆದಬಾಹುಗಳಿಂದ ಸ್ವಾಗತಿಸುತ್ತಿರುವುದು ಇಬ್ಬಗೆಯಲ್ಲದೇ ಮತ್ತೇನು? ಒಂದು ಕಾಲದಲ್ಲಿ ಖಲಿಸ್ಥಾನ ಪ್ರತ್ಯೇಕತಾವಾದದ ಹುಚ್ಚು ಬೆಂಕಿಯು ಸಾವಿರಾರು ಜನರನ್ನು ಆಹುತಿ ತೆಗೆದುಕೊಂಡಿದ್ದಷ್ಟೇ ಅಲ್ಲದೇ, ಅಂದಿನ ಪ್ರಧಾನಿ ಇಂದಿರಾರ ಬಲಿ ಪಡೆಯಿತು. ಖಲಿಸ್ಥಾನಿ ಉಗ್ರರ ಹೆಡೆಮುರಿಕಟ್ಟಲು ಕೇಂದ್ರ ಮತ್ತು ಪಂಜಾಬ್‌ ಸರರ್ಕಾರಗಳು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈಗ ಮತ್ತೆ ದೇಶವು ಅಂಥ ಸ್ಥಿತಿಯನ್ನು ಎದುರಿಸುವಂತಾಗಬಾರದು ಎಂದಾದರೆ, ಅಪಾಯವನ್ನು ಚಿಗುರಿನಲ್ಲೇ ಚಿವುಟಿ ಹಾಕಬೇಕು. ಹಾಗೆಂದು ಕರ್ತಾರ್ಪುರಕ್ಕೆ ಸಿಖ್ಬರಿಗೆ ಯಾತ್ರೆಗೆ ಕಳುಹಿಸುವುದನ್ನು ನಿಲ್ಲಿಸುವ ಅಗತ್ಯ ಇಲ್ಲವಾದರೂ, ಅಲ್ಲಿ ಪ್ರತ್ಯೇಕತಾವಾದಕ್ಕೆ ಇಂಬುಕೊಡುವಂಥ ಕೆಲಸಗಳು ನಡೆಯದಂತೆ ಎಚ್ಚರಿಕೆ ವಹಿಸುವ ಕೆಲಸವಂತೂ ಆಗಬೇಕಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ