ಗೆದ್ದು ಬರಲಿ ಕೊಹ್ಲಿ ಪಡೆ

Team Udayavani, Jun 5, 2019, 6:00 AM IST

ಇಂಗ್ಲೆಂಡ್‌ನ‌ಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕ್ರಿಕೆಟ್ ಕೂಟದಲ್ಲಿ ಭಾರತದ ಅಭಿಯಾನ ತುಸು ತಡವಾಗಿಯೇ ಪ್ರಾರಂಭವಾಗುತ್ತಿದೆ. ಮೇ 30ರಂದೇ ಪಂದ್ಯಗಳು ಪ್ರಾರಂಭಗೊಂಡಿದ್ದರೂ ಭಾರತ ಮೈದಾನಕ್ಕಿಳಿಯುತ್ತಿರುವುದು ಜೂ. 5ರಂದು. ಐಪಿಎಲ್ ಆಡಿರುವ ಆಟಗಾರರಿಗೆ ಕನಿಷ್ಠ 15 ದಿನಗಳ ವಿಶ್ರಾಂತಿ ಅಗತ್ಯ ಎಂಬ ಕಾರಣಕ್ಕೆ ಬಿಸಿಸಿಐ ಮಾಡಿದ ಮನವಿ ಮೇರೆಗೆ ಐಸಿಸಿ ಭಾರತದ ವೇಳಾಪಟ್ಟಿಯನ್ನು ಬದಲಾಯಿಸಿದೆಯಂತೆ. ಐಪಿಎಲ್ನಲ್ಲಿ ಉಳಿದ ತಂಡಗಳ ಆಟಗಾರರೂ ಆಡಿದ್ದಾರೆ. ಅವರಿಗೆ ಅನ್ವಯಿಸದ ವಿಶ್ರಾಂತಿಯ ಮಾನದಂಡ ಭಾರತಕ್ಕೇಕೆ ಎನ್ನುವುದು ಸಮಂಜಸವಾದ ಪ್ರಶ್ನೆಯೇ.

ಏನೇ ಆದರೂ ಬುಧವಾರದಿಂದ ಭಾರತದಲ್ಲಿ ಕ್ರಿಕೆಟ್ ಜ್ವರ ಎನ್ನುವುದು ಏರಲಿದೆ. ಭಾರತದ ಕ್ರೀಡಾ ಅಭಿಮಾನಿಗಳ ಉತ್ಸಾಹ, ಕುತೂಹಲ, ನಿರೀಕ್ಷೆ ಮುಗಿಲು ಮುಟ್ಟಿದೆ. ಭಾರತದಲ್ಲಿ ಕ್ರಿಕೆಟ್ ಆಟವನ್ನು ಆರಾಧಿಸುವ ಒಂದು ದೊಡ್ಡ ವರ್ಗವೇ ಇದೆ. ಗೆಲುವೇ ಇರಲಿ, ಸೋಲೇ ಇರಲಿ ಭಾರತೀಯರನ್ನು ಕ್ರಿಕೆಟ್ನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಅಷ್ಟರಮಟ್ಟಿಗಿನ ಭಾವೈಕ್ಯವನ್ನು ಈ ಆಟದಿಂದ ಸಾಧಿಸಲು ಸಾಧ್ಯವಾಗಿದೆ ಎನ್ನುವುದು ಕೂಡ ಮುಖ್ಯ ವಾಗುತ್ತದೆ. ವಿಶ್ವಕಪ್‌ ಏಕದಿನ ಕೂಟದಲ್ಲಿ ಭಾರತದ ಎರಡು ಸಲ (1983, 2011)ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಒಂದು ಬಾರಿ ರನ್ನರ್‌ಅಪ್‌ (2003) ಆಗಿ ಹೊರಹೊಮ್ಮಿದೆ.

ಆಸ್ಟ್ರೇಲಿಯ (5 ಬಾರಿ) ಮತ್ತು ವೆಸ್ಟ್‌ಇಂಡೀಸ್‌ (2 ಬಾರಿ) ಒಂದಕ್ಕಿಂತ ಹೆಚ್ಚು ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದ ತಂಡಗಳ ಪಟ್ಟಿಯಲ್ಲಿವೆ. ಭಾರತ ವಿಶ್ವಕಪ್‌ನ ಬಲಿಷ್ಠ ತಂಡಗಳಲ್ಲಿ ಒಂದು. 1983ರಲ್ಲಿ ಆಲ್ರೌಂಡರ್‌ ಕಪಿಲ್ದೇವ್‌ ನೇತೃತ್ವದಲ್ಲಿ ಇಂಗ್ಲೆಂಡ್‌ನ‌ಲ್ಲಿಯೇ ಭಾರತ ಮೊದಲ ವಿಶ್ವಕಪ್‌ ಟ್ರೋಫಿ ಎತ್ತಿತು. 2011ರಲ್ಲಿ ಧೋನಿ ಮುಂದಾಳತ್ವದಲ್ಲಿ ಆಡಿದ ಶ್ರೀಲಂಕಾ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿ ಎರಡನೇ ಬಾರಿಗೆ ಚಾಂಪಿಯನ್‌ ಆಗಿತ್ತು. ಇದೀಗ ವಿರಾಟ್ ಕೊಹ್ಲಿ ಸರದಿ. ಈ ಕೂಟದಲ್ಲಿ ಪ್ರಶಸ್ತಿ ಗೆಲ್ಲುವ ಮೆಚ್ಚಿನ ತಂಡಗಳಲ್ಲಿ ಭಾರತ ಒಂದಾಗಿದ್ದರೂ ಏಕದಿನ ಕ್ರಿಕೆಟಿನ ನಂಬರ್‌ ಒನ್‌ ತಂಡವಾಗಿರುವ ಹಾಗೂ ಅತಿಥೇಯ ಇಂಗ್ಲೆಂಡ್‌ನಿಂದ ಭಾರೀ ಸವಾಲು ಎದುರಾಗುವ ಸಾಧ್ಯತೆ ಇದೆ. ಕಳೆದ ಕೆಲವು ವಿಶ್ವಕಪ್‌ ಕೂಟಗಳಲ್ಲಿ ಆತಿಥ್ಯ ವಹಿಸಿದ ತಂಡಗಳೇ ಪ್ರಶಸ್ತಿ ತಮ್ಮದಾಗಿಸಿಕೊಂಡಿರುವುದರಿಂದ ಇಂಗ್ಲೆಂಡ್‌ಗೆ ಇದರ ಪ್ರಯೋಜನವಾಗಬಹುದು. ಅಂತೆಯೇ 5 ಬಾರಿಯ ಚಾಂಪಿಯನ್‌ ಹಾಗೂ ಹಾಲಿ ಚಾಂಪಿಯನ್‌ ಆಗಿರುವ ಆಸ್ಟ್ರೇಲಿಯ ತಂಡವನ್ನು ಅಲ್ಲಗಳೆಯುವಂತಿಲ್ಲ. ಯಾರು ಚೆನ್ನಾಗಿ ಆಡುತ್ತಾರೋ ಅವರು ಕಪ್‌ ಮೇಲೆ ಹಕ್ಕು ಸಾಧಿಸುತ್ತಾರೆ.

ವಿಶ್ವದ ನಂಬರ್‌ ಒನ್‌ ಬ್ಯಾಟ್ಸ್‌ಮನ್‌ ಆಗಿರುವ ಭಾರತ ತಂಡದ ಕಪ್ತಾನ ವಿರಾಟ್ ಕೊಹ್ಲಿಗೆ ಈ ವಿಶ್ವಕಪ್‌ ಪ್ರಮುಖವಾದುದು. ಕಪಿಲ್ದೇವ್‌ ಹಾಗೂ ಎಂ.ಎಸ್‌. ಧೋನಿ ಸಾಲಿಗೆ ಸೇರಲು ಕೊಹ್ಲಿಗೆ ಇದು ಅದ್ಭುತ ಅವಕಾಶ. ಅತ್ಯುತ್ತಮ ಬ್ಯಾಟಿಂಗ್‌ ಲೈನ್‌ಅಪ್‌, ಉತ್ತಮ ಅಲ್ರೌಂಡರ್ ಮತ್ತು ಬೌಲರ್‌ಗಳನ್ನೊಳಗೊಂಡಿರುವ ತಂಡ ಹಿರಿಕಿರಿಯರಿಂದ ಕೂಡಿ ಸಂತುಲಿತವಾಗಿದೆ. ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಕೆ.ಎಲ್. ರಾಹುಲ್, ವಿಜಯ್‌ಶಂಕರ್‌, ಜಸ್‌ಪ್ರೀತ್‌ ಬುಮ್ರಾ, ಹಾರ್ದಿಕ್‌ ಪಾಂಡ್ಯ ಅವರಂಥ ಸಮರ್ಥ ಆಟಗಾರರನ್ನು ತಂಡ ಹೊಂದಿದೆ. ಮಧ್ಯಮ ಕ್ರಮಾಂಕ ಕ್ಲಿಕ್‌ ಆದರೆ 3ನೇ ಬಾರಿಗೆ ಟ್ರೋಫಿ ಭಾರತದ ಪಾಲಾಗುವುದು ಕಷ್ಟವಲ್ಲ.

341 ಏಕದಿನ ಪಂದ್ಯಗಳ ಅನುಭವ ಹೊಂದಿರುವ ಮಹೇಂದ್ರ ಸಿಂಗ್‌ ಧೋನಿ ತಂಡದ ಬಲ, ಸ್ಥೈರ್ಯ ಎಲ್ಲ. ಇವರ ಉಪಸ್ಥಿತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕು ಎನ್ನುವುದು ಭಾರತೀಯರ ಮನದಾಳದ ಹಾರೈಕೆ. ಧೋನಿಯೂ ಸೇರಿದಂತೆ ಹಲವು ಆಟಗಾರರಿಗೆ ಇದು ಕೊನೆಯ ವಿಶ್ವಕಪ್‌ ಆಗುವ ಸಾಧ್ಯತೆಯಿದೆ.

ಕ್ರಿಕೆಟ್‌ನ ಬದ್ಧ ಎದುರಾಳಿಗಳಾಗಿರುವ ಭಾರತ- ಪಾಕಿಸ್ತಾನ ತಂಡಗಳು ಈ ಬಾರಿಯ ವಿಶ್ವಕಪ್‌ನಲ್ಲಿ ಮುಖಾಮುಖೀಯಾಗಲೇಬೇಕು. ಏಕೆಂದರೆ ಹಿಂದಿನಂತೆ ಈ ಬಾರಿ ಗುಂಪು ಹಂತದ ಪಂದ್ಯಗಳಿಲ್ಲ, ಬದಲಾಗಿ ರೌಂಡ್‌ ರಾಬಿನ್‌ ಮಾದರಿಯಲ್ಲಿ ಪಂದ್ಯಗಳು ನಡೆಯುತ್ತಿವೆ. ಎಲ್ಲ ತಂಡಗಳು ಉಳಿದೆಲ್ಲ ತಂಡಗಳ ವಿರುದ್ಧ ಆಡಲೇಬೇಕು. ಸಾಮಾನ್ಯವಾಗಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖೀಯೆಂದರೆ ಕ್ರಿಕೆಟ್ನಾಚೆಗಿನ ಭಾವನೆಗಳೂ ವಿಜೃಂಭಿಸುವುದಿದೆ. ಏನೇ ಆದರೂ ಆಟವನ್ನು ಆಟವಾಗಿಯೇ ಆನಂದಿಸುವ ಮನೋಸ್ಥೈರ್ಯವನ್ನು ಉಭಯ ದೇಶಗಳ ಜನರು ಬೆಳೆಸಿಕೊಳ್ಳಬೇಕು.

ಒಂದೂವರೆ ತಿಂಗಳ ಕಾಲ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸುವ ವಿಶ್ವಕಪ್‌ ಏಕದಿನ ಕೂಟದಲ್ಲಿ ಭಾರತ ತಂಡ ಪೂರ್ಣ ಸಾಮರ್ಥ್ಯದಿಂದ ಆಡಿ ಗೆದ್ದು ಬರಲಿ ಎಂಬ ಆಶಯ ದೇಶದ್ದು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ