ಕುಲಭೂಷಣ್‌ ಜಾಧವ್‌ ಪ್ರಕರಣ: ಹೋರಾಟ ಇನ್ನೂ ಮುಗಿದಿಲ್ಲ

Team Udayavani, Jul 19, 2019, 5:00 AM IST

ಕುಲಭೂಷಣ್‌ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆಸಿದ ಹೋರಾಟದಲ್ಲಿ ಭಾರತ ಗೆದ್ದಿದೆ. ಬುಧವಾರ ಈ ನ್ಯಾಯಾಲಯದ 16 ನ್ಯಾಯಾಧೀಶರ ಪೈಕಿ 15 ಮಂದಿ ಭಾರತದ ವಾದವನ್ನು ಎತ್ತಿ ಹಿಡಿದಿದ್ದಾರೆ. ಒಬ್ಬರು ಮಾತ್ರ ವಿರೋಧಿಸಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ಥಾನದ ಧೂರ್ತ ಮುಖವಾಡ ಮತ್ತೂಮ್ಮೆ ಕಳಚಿ ಬಿದ್ದಿದೆ. ಹಾಗೆಂದು ಇಷ್ಟಕ್ಕೆ ಈ ಹೋರಾಟ ಮುಗಿಯುವುದಿಲ್ಲ. ಜಾಧವ್‌ ಬಿಡುಗಡೆಯಾಗಿ ಸುರಕ್ಷಿತವಾಗಿ ಭಾರತಕ್ಕೆ ಬಂದಾಗಲೇ ಹೋರಾಟ ಅಂತ್ಯ ಕಾಣುವುದು.

ಪಾಕ್‌ 2016ರಲ್ಲಿ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿರುವ ಜಾಧವ್‌ರನ್ನು ಇರಾನ್‌ನಿಂದ ಅಪಹರಿಸಿ ಅವರ ಮೇಲೆ ಬೇಹುಗಾರಿಕೆಯ ಆರೋಪ ಹೊರಿಸಿದೆ. ಅಲ್ಲಿನ ಮಿಲಿಟರಿ ನ್ಯಾಯಾಲಯ ಜಾಧವ್‌ಗೆ ಮರಣ ದಂಡನೆ ವಿಧಿಸಿದೆ. ಉಗ್ರರು ಜಾಧವ್‌ರನ್ನು ಅಪಹರಿಸಿ ಬಳಿಕ ಪಾಕಿಸ್ಥಾನದ ಸೇನೆಗೆ ಮಾರಾಟ ಮಾಡಿದ್ದಾರೆ ಎಂಬ ತರ್ಕವೂ ಇದೆ. ಆದರೆ ಪಾಕಿಸ್ಥಾನ ಬಲೂಚಿಸ್ಥಾನದಲ್ಲಿ ಬೇಹುಗಾರಿಕೆ ನಡೆಸಿ ಉಗ್ರರನ್ನು ಸರಕಾರದ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾಗ ಜಾಧವ್‌ರನ್ನು ಬಂಧಿಸಲಾಗಿದೆ ಎಂದು ಹೇಳಿಕೊಂಡು ಅವರನ್ನು ತರಾತುರಿಯಲ್ಲಿ ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಿತ್ತು.

ತಮ್ಮ ಕೃತ್ಯಕ್ಕೆ ಸಮರ್ಥನೆ ಕೊಟ್ಟುಕೊಳ್ಳುವ ಸಲುವಾಗಿ ಪಾಕ್‌ ಅಧಿಕಾರಿಗಳು ಜಾಧವ್‌ರನ್ನು ಮುಂಬಯಿ ಮೇಲೆ ದಾಳಿ ಮಾಡಿದ ಲಷ್ಕರ್‌ ಉಗ್ರ ಅಜ್ಮಲ್ ಕಸಬ್‌ಗ ಹೋಲಿಸಿದ್ದರು. ನೂರಾರು ಜನರನ್ನು ಗುಂಡಿಕ್ಕಿ ಸಾಯಿಸಿದ ಪಾತಕಿ ಅಜ್ಮಲ್ಗೂ ವ್ಯಾಪಾರ ನಿಮಿತ್ತ ಇರಾನ್‌ನಲ್ಲಿದ್ದ ಜಾಧವ್‌ಗೆ ಎಲ್ಲಿಂದೆಲ್ಲಿಯ ಹೋಲಿಕೆ? ಹೀಗೆ ಜಾಧವ್‌ಗೆ ಶಿಕ್ಷೆ ವಿಧಿಸುವ ಸಲುವಾಗಿ ಪಾಕಿಸ್ಥಾನ ಹಲವು ಕಪಟ ಮಾರ್ಗಗಳನ್ನು ಆಯ್ದುಕೊಂಡಿತ್ತು.

ಜಾಧವ್‌ ಪ್ರಕರಣದಲ್ಲಿ ವಿಯೆನ್ನಾ ಒಪ್ಪಂದದ ನಿಯಮ 36ನ್ನು ಉಲ್ಲಂಘಿಸಿರುವ ಪಾಕಿಸ್ಥಾನವನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಜಾಡಿಸಿದೆ. ಅನ್ಯ ದೇಶದ ಪ್ರಜೆ ಸೆರೆಯಾದಾಗ ಕೂಡಲೇ ಆ ದೇಶಕ್ಕೆ ಮಾಹಿತಿ ನೀಡಬೇಕು ಮತ್ತು ಸೆರೆಯಾದ ವ್ಯಕ್ತಿಗೆ ರಾಜತಾಂತ್ರಿಕ ನೆರವು ಪಡೆದುಕೊಳ್ಳಲು ಅವಕಾಶ ನೀಡಬೇಕೆಂದು ನಿಯಮ 36 ಹೇಳುತ್ತದೆ. ಆದರೆ ಭಾರತ ಪದೇ ಪದೇ ಮನವಿ ಮಾಡಿದರೂ ಪಾಕ್‌ ಸರಕಾರ ಜಾಧವ್‌ಗೆ ರಾಜತಾಂತ್ರಿಕ ನೆರವು ಪಡೆದುಕೊಳ್ಳುವ ಅವಕಾಶ ನೀಡಿರಲಿಲ್ಲ. ಭಯೋತ್ಪಾದನೆ ಮತ್ತು ಗೂಢಚಾರಿಕೆ ಪ್ರಕರಣಗಳಿಗೆ ವಿಯೆನ್ನಾ ಒಪ್ಪಂದ ಅನ್ವಯವಾಗುವುದಿಲ್ಲ ಎಂಬ ಪಾಕಿಸ್ಥಾನದ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ಇನ್ನು ಜಾಧವ್‌ಗೆ ರಾಜತಾಂತ್ರಿಕ ನೆರವು ಪಡೆದುಕೊಳ್ಳಲು ಅವಕಾಶ ನೀಡುವುದು ಅನಿವಾರ್ಯ. ಇಲ್ಲದಿದ್ದರೆ ತೀರ್ಪನ್ನು ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ.

ರಾಜತಾಂತ್ರಿಕ ಮತ್ತು ಕಾನೂನು ಹೋರಾಟದಲ್ಲಿ ಗೆದ್ದ ಕೂಡಲೇ ಪಾಕಿಸ್ಥಾನದಲ್ಲಿ ಜಾಧವ್‌ ಸುರಕ್ಷಿತರಾಗಿರುತ್ತಾರೆ ಎಂಬ ಯಾವ ಭರವಸೆಯೂ ಇಲ್ಲ. ಏಕೆಂದರೆ ನ್ಯಾಯಾಲಯ ಜಾಧವ್‌ರನ್ನು ಬಿಡುಗಡೆಗೊಳಿಸಬೇಕೆಂಬ ಭಾರತದ ವಾದವನ್ನು ಎತ್ತಿಹಿಡಿದಿಲ್ಲ. ಇದನ್ನೇ ಪಾಕಿಸ್ಥಾನ ತನ್ನ ಗೆಲುವು ಎಂದು ಹೇಳಿಕೊಳ್ಳುತ್ತಿದೆ. ಇನ್ನೂ ಅಲ್ಲೇ ಜಾಧವ್‌ ವಿಚಾರಣೆ ಎದುರಿಸಬೇಕಾಗುತ್ತದೆ. ಅಲ್ಲದೆ ಈ ವಿಚಾರಣೆ ಮತ್ತೆ ನಡೆಯುವುದು ಮಿಲಿಟರಿ ಕೋರ್ಟಿನಲ್ಲೇ. ಅಲ್ಲಿ ಸಿವಿಲ್ ಕೋರ್ಟ್‌ ಮತ್ತು ಮಿಲಿಟರಿ ಕೋರ್ಟ್‌ ಸಮಾನವಾಗಿದೆ. ಆದರೆ ಮಿಲಿಟರಿ ಕೋರ್ಟಿಗೆ ನ್ಯಾಯಾಧೀಶರಾಗಿ ಬರುವವರು ಮಾತ್ರ ನ್ಯಾಯಾಂಗ ಪಾರಂಗತರಲ್ಲ ಬದಲಾಗಿ ಸೇನೆಯ ಅಧಿಕಾರಿಗಳು. ಜಾಧವ್‌ ಅನಿರ್ದಿಷ್ಟಾವಧಿಗೆ ಪಾಕಿಸ್ಥಾನದ ಜೈಲಿನಲ್ಲೇ ಇರಬೇಕಾಗುತ್ತದೆ. ಜೈಲಿನಲ್ಲಿ ಸಹ ಕೈದಿಗಳಿಂದ ಹಲ್ಲೆಗೊಳಗಾಗುವ ಭೀತಿಯಿದೆ. ಜೈಲು ಅಧಿಕಾರಿಗಳೇ ಹಲ್ಲೆ ಮಾಡಿ ಸಹ ಕೈದಿಗಳ ಮೇಲೆ ದೂರು ಹಾಕಬಹುದು. ಸರಬ್ಜಿತ್‌ ಪ್ರಕರಣದಲ್ಲಿ ಹೀಗೆ ಆಗಿತ್ತು. ಕೊನೆಗೂ ಸರಬ್ಜಿತ್‌ರನ್ನು ಜೀವಂತವಾಗಿ ವಾಪಾಸು ಕರೆತರಲು ನಮಗೆ ಸಾಧ್ಯವಾಗಿರಲಿಲ್ಲ.

ಹೀಗಾಗಿ ಭಾರತ ಈಗ ಎಲ್ಲ ರಾಜತಾಂತ್ರಿಕ ಬಲವನ್ನು ಉಪಯೋಗಿಸಿಕೊಂಡು ಆದಷ್ಟು ಕ್ಷಿಪ್ರವಾಗಿ ವಿಚಾರಣೆ ಶುರುವಾಗುವಂತೆ ನೋಡಿಕೊಳ್ಳಬೇಕು. ವಿಚಾರಣೆಯನ್ನು ಮಿಲಿಟರಿ ನ್ಯಾಯಾಲಯದಿಂದ ಸಿವಿಲ್ ಕೋರ್ಟಿಗೆ ವರ್ಗಾಯಿಸಲು ಒತ್ತಡ ಹೇರಬೇಕು. ಇದೇ ವೇಳೆ ಪಾಕಿಸ್ಥಾನವೂ ತನ್ನ ಮೊಂಡು ವಾದವನ್ನು ಬಿಟ್ಟು ಜಾಧವ್‌ರನ್ನು ನಿರ್ದೋಷಿ ಎಂದು ಸಾರಿ ಬಿಡುಗಡೆಗೊಳಿಸುವುದು ದ್ವಿಪಕ್ಷೀಯ ಸಂಬಂಧ ಮರು ಸ್ಥಾಪನೆಗೂ ಪೂರಕವಾಗುವ ಕ್ರಮವಾದೀತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ