ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಚರ್ಚೆ ಜಲ ಜಟಿಲತೆ ತಗ್ಗಲಿ

Team Udayavani, Sep 4, 2019, 5:45 AM IST

ನೆರೆಯ ಗೋವಾ ರಾಜ್ಯದೊಂದಿಗೆ ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಐದು ದಶಕದ ವಿವಾದ ಈಚಿನ ವರ್ಷಗಳಲ್ಲಿ ತೀವ್ರ ಉಲ್ಬಣಿಸಿತ್ತು. ಇದು ಕೇವಲ ನೀರು ಹಂಚಿಕೆ ವಿವಾದವಾಗಿರದೆ ಸರ್ಕಾರ ನಡೆಸುವ ಪಕ್ಷಗಳ ರಾಜಕೀಯ ಹಿತಾಸಕ್ತಿಯೂ ಸೇರಿದ್ದರಿಂದ ಸಮಸ್ಯೆ ಪರಿಹಾರ ಕಾಣುವುದಕ್ಕಿಂತ ತೀವ್ರ ಸ್ವರೂಪ ಪಡೆದಿದ್ದೇ ಹೆಚ್ಚು. ಹಾಗಾಗಿ ಇದು ಉಭಯ ರಾಜ್ಯಗಳ ಜನರಲ್ಲಿ ಪರಸ್ಪರ ವೈರತ್ವ ಸೃಷ್ಟಿಸಿ ಸಂಘರ್ಷಕ್ಕೂ ನಾಂದಿ ಹಾಡಿತ್ತು. ಆದರೆ ಅಪರೂಪದ ಸಂದರ್ಭದಲ್ಲಿ ಗೋವಾ, ಮಹಾರಾಷ್ಟ್ರದ ಜತೆಗೆ ಕರ್ನಾಟಕದಲ್ಲೂ ಬಿಜೆಪಿ ಸರ್ಕಾರವಿದ್ದು, ಕೇಂದ್ರದಲ್ಲೂ ಬಿಜೆಪಿಯೇ ಅಧಿಕಾರದಲ್ಲಿರುವ ಹೊತ್ತಿನಲ್ಲಿ ಜಲ ವಿವಾದದ ಜಟಿಲತೆಗಳು ಸರಳವಾಗುವ ಭರವಸೆ ಮೂಡಿದೆ.

ಅದಕ್ಕೆ ಪೂರಕವೆಂಬಂತೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಜತೆಗೆ ಗೋವಾ ಮುಖ್ಯಮಂತ್ರಿಗಳು ಸಭೆ ಸೇರಿ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮಹದಾಯಿ ನದಿ ವಿವಾದ ನ್ಯಾಯಾಧೀಕರಣ ನೀರು ಹಂಚಿಕೆ ಮಾಡಿರುವ ಆದೇಶವನ್ನು ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನಿಸಿದ್ದಾರೆ. ಕೆಲ ವರ್ಷಗಳಿಂದ ಸಾಧ್ಯವಾಗದ ಈ ಪ್ರಕ್ರಿಯೆಗೆ ಸದ್ಯ ಚಾಲನೆ ಸಿಗುವ ಲಕ್ಷಣ ಕಾಣುತ್ತಿರುವುದು ಆಶಾದಾಯಕ.

ಈ ಹಿಂದೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮುಖ್ಯಮಂತ್ರಿಗಳು ಸಭೆ ನಡೆಸಿ ವಿವಾದ ಇತ್ಯರ್ಥಗೊಳಿಸಿಕೊಳ್ಳುವ ಪ್ರಯತ್ನವೊಂದು ನಡೆದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅಂದಿನ ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್‌ ಪರ್ಶೇಕರ್‌ ಪಾಲ್ಗೊಳ್ಳದ ಕಾರಣ ಸಭೆ ರದ್ದಾಗಿತ್ತು. ಹಾಗಾಗಿ ಆ ಪ್ರಯತ್ನ ಅಲ್ಲಿಗೇ ಮೊಟಕಾಗಿತ್ತು.

2018ರಲ್ಲಿ ನ್ಯಾಯಾಧೀಕರಣವು ಕರ್ನಾಟಕಕ್ಕೆ 13.5 ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಆದರೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳು ಹೆಚ್ಚುವರಿ ನೀರು ಹಂಚಿಕೆ ಕೋರಿ ಸುಪ್ರೀಂ ಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿವೆ. ಹಿಂದೆ ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದಾಗಲೂ ಗೋವಾ ಮುಖ್ಯಮಂತ್ರಿಯಾಗಿದ್ದ ದಿವಂಗತ ಮನೋಹರ್‌ ಪರಿಕ್ಕರ್‌ ಅವರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿ ರಾಜ್ಯಕ್ಕೆ ಪತ್ರ ಕೂಡ ಬರೆದಿದ್ದರು.

ಆಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚಿಸಿ ಪ್ರಧಾನಿ ಬಳಿಗೆ ನಿಯೋಗ ತೆರಳಿದರೆ ಸಮಸ್ಯೆ ನಿವಾರಣೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಪ್ರಕರಣ ನ್ಯಾಯಾಧೀಕರಣದಲ್ಲಿ ಇರುವುದರಿಂದ ನಿಯೋಗದಲ್ಲಿ ಪ್ರಧಾನಿ ಭೇಟಿ ಸಾಧ್ಯವಾಗದ ಕಾರಣ ಸಮಸ್ಯೆ ಹಾಗೇ ಉಳಿದಿತ್ತು.

ನ್ಯಾಯಾಧೀಕರಣ ಆದೇಶ ನೀಡಿದ್ದರೂ ಗೆಜೆಟ್ ನೋಟಿಫಿಕೇಷನ್‌ ಪ್ರಕಟವಾಗಿಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಗೋವಾ, ಮಹಾರಾಷ್ಟ್ರ ಮಾತ್ರವಲ್ಲದೆ ಕೇಂದ್ರದಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ. ಹಾಗಾಗಿ ಮೂರು ರಾಜ್ಯಗಳು ಪರಸ್ಪರ ಮಾತುಕತೆ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಕೇಂದ್ರ ಸರ್ಕಾರವೂ ಸಹಕರಿಸಬಹುದು. ಇದರಿಂದ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆ ಮೂಡಿದೆ. ಆ ನಿಟ್ಟಿನಲ್ಲಿ ರಾಜ್ಯದ ಮುಖ್ಯ ಮಂತ್ರಿಗಳು ಪ್ರಯತ್ನ ಆರಂಭಿಸಿದಂತೆ ಕಾಣುತ್ತಿದೆ.

ತಿಂಗಳ ಹಿಂದೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಸಿದ್ದರ ಜತೆಗೆ ಭಾರಿ ಮಳೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಜಲಾವೃತಗೊಂಡು ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು. ಇದೀಗ ಮುಂಗಾರು ಆರಂಭದ ಸಂದರ್ಭದಲ್ಲಿ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಉನ್ನತ ಮಟ್ಟದ ಸಮನ್ವಯ ಸಮಿತಿ ರಚಿಸಲು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ತೀರ್ಮಾನಿಸಿರುವುದು ಸ್ವಾಗತಾರ್ಹ. ಇದರಿಂದ ಕೊಯ್ನಾ ಜಲಾಶಯದಿಂದ ರಾಜ್ಯಕ್ಕೆ ಹರಿಸುವ ನೀರಿನ ಪ್ರಮಾಣದ ಬಗ್ಗೆ ಮುಂಚಿತವಾಗಿಯೇ ನಿಖರ ಮಾಹಿತಿ ಸಿಗಲಿದ್ದು, ಅದಕ್ಕೆ ಪೂರಕವಾಗಿ ಜಲಾಶಯಗಳಲ್ಲಿ ನೀರು ಸಂಗ್ರಹದ ಸಮನ್ವಯಕ್ಕೆ ಅನುಕೂಲವಾಗಲಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಮುಖ್ಯಮಂತ್ರಿಗಳು ಪರಸ್ಪರ ಸೌಹಾರ್ದಯುತ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾದರೆ ಮೂರು ರಾಜ್ಯದ ಜನ ನೆಲ-ಜಲ ಸಂಘರ್ಷವಿಲ್ಲದೆ ಬದುಕಲು, ಪ್ರಗತಿ ಹೊಂದಲು ಸಾಧ್ಯವಾಗುವ ವಿಶ್ವಾಸ ಮೂಡಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಅತ್ಯಗತ್ಯವಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ದೇಶೀಯ ಕಾರ್ಪೊರೇಟ್‌ ಕಂಪನಿಗಳ ಮತ್ತು ಹೊಸ ಉತ್ಪಾದಕ ಕಂಪೆನಿಗಳ ಕಾರ್ಪೊರೇಟ್‌ ತೆರಿಗೆ ಕಡಿತ ಘೋಷಿಸುವ ಮೂಲಕ ಹಣಕಾಸು ಸಚಿವೆ...

  • ಸೈದ್ಧಾಂತಿಕ‌ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಪರಸ್ಪರರ ಮೇಲೆ ಗೌರವ ಮತ್ತು ಆತ್ಮೀಯ ಭಾವನೆ ಇರುವುದು ಆರೋಗ್ಯಕರ ರಾಜಕೀಯದ ಲಕ್ಷಣ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ...

  • ಇನ್ನೂ ಬೆಳೆಯುತ್ತಿರುವ ಪ್ರಜಾತಂತ್ರ ವ್ಯವಸ್ಥೆಗೆ ದ್ವಿಪಕ್ಷೀಯ ಪದ್ಧತಿ ಸ್ವೀಕರಾರ್ಹ ಅಲ್ಲ. ಆದರೆ ಬಹುಪಕ್ಷೀಯ ಪದ್ಧತಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು...

  • ಜಮ್ಮು-ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನಿ ಸೇನೆಯ ನಡುವೆ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟು ಚಿಂತೆಯ ವಿಷಯವಾಗಿದೆ. ಅದರಲ್ಲೂ ಕಲಂ 370 ದಯಪಾಲಿಸಿದ್ದ ವಿಶೇಷಾಧಿಕಾರವನ್ನು...

  • ಹೂಸ್ಟನ್‌ ಕಾರ್ಯಕ್ರಮ ಪಾಕ್‌ ಹಾಗೂ ಚೀನಾಕ್ಕೊಂದು ಬಲವಾದ ಸಂದೇಶ ನೀಡುವುದು ಖಚಿತ. ಏನೇ ಮಾಡಿ ದರೂ ಜಾಗತಿಕ ವೇದಿಕೆಯಲ್ಲಿ ಭಾರತದ ಪಾರಮ್ಯವನ್ನು ತಡೆಯಲು ಸಾಧ್ಯವಿಲ್ಲ...

ಹೊಸ ಸೇರ್ಪಡೆ