ನಿಷ್ಪಕ್ಷಪಾತ ತನಿಖೆ ನಡೆಯಲಿ

ರಾಜಕೀಯ ಸಂಚಲನ ಮೂಡಿಸಿದ ಕದ್ದಾಲಿಕೆ

Team Udayavani, Aug 20, 2019, 5:55 AM IST

ಹಿಂದೆ ರಾಮಕೃಷ್ಣ ಹೆಗಡೆ ಮತ್ತು ಎಚ್ ಡಿ ದೇವೇಗೌಡರ ನಡುವಿನ ರಾಜಕೀಯ ಗುದ್ದಾಟಕ್ಕೆ ಫೋನ್‌ ಕದ್ದಾಲಿಕೆ ಕಾರಣವಾಗಿತ್ತು. ಈಗ ದೇವೇಗೌಡರ ಪುತ್ರ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ನಡುವೆ ಸಮರಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ಪ್ರಕರಣ ದೊಡ್ಡದಾಗಿಯೇ ಸದ್ದು ಮಾಡುತ್ತಿದೆ. ಹಿಂದೆ ರಾಜ್ಯದಲ್ಲಿ ಮೊದಲ ಬಾರಿಗೆ 1988ರಲ್ಲಿ ಜನತಾ ಪಕ್ಷದ ಸರ್ಕಾರ ಇದ್ದಾಗ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಇಂಥದ್ದೊಂದು ಆರೋಪ ಕೇಳಿಬಂದಿತ್ತು. ಇಡೀ ರಾಷ್ಟ್ರದಲ್ಲಿ ಇದು ಸಂಚಲನ ಮೂಡಿಸಿತ್ತು. ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಯಿತು. ಆಗ ರಾಮಕೃಷ್ಣ ಹೆಗಡೆ ವಿರುದ್ಧ ದೂರವಾಣಿ ಕದ್ದಾಲಿಕೆ ಆರೋಪ ಮಾಡಿದವರಲ್ಲಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಎಚ್.ಡಿ.ದೇವೇಗೌಡರು ಸೇರಿದ್ದರು.

ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಜನತಾಪಕ್ಷದ ಒಂದು ಗುಂಪು ವಿ.ಪಿ.ಸಿಂಗ್‌ ಆವರ ಜನತಾ ಮೋರ್ಚಾದಲ್ಲಿ ವಿಲೀನವಾಗಿತ್ತು. ಆದರೆ, ಎಚ್.ಡಿ.ದೇವೇಗೌಡರು ಜನತಾಪಕ್ಷದಲ್ಲೇ ಅಜಿತ್‌ ಸಿಂಗ್‌ ಅವರ ಜತೆಯೇ ಉಳಿದುಕೊಂಡಿದ್ದರು. ಆಗ, ದೇವೇಗೌಡರು ಹಾಗೂ ಅಜಿತ್‌ಸಿಂಗ್‌ ನಡುವೆ ಲ್ಯಾಂಡ್‌ಲೈನ್‌ (ಸ್ಥಿರ) ದೂರವಾಣಿ ಮೂಲಕ ನಡೆದ ಮಾತುಕತೆ ಟ್ಯಾಪಿಂಗ್‌ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

ಆ ವಿಚಾರ ಲೋಕಸಭೆಯಲ್ಲೂ ಪ್ರತಿಧ್ವನಿಸಿ ಆಗಿನ ದೂರಸಂಪರ್ಕ ಸಚಿವರು, ಕೆಲವೊಂದು ಸಮಾಜಘಾತುಕ ಶಕ್ತಿಗಳ ಚಲನವಲನಗಳ ಮೇಲೆ ನಿಗಾ ಇರಿಸಲು ಕರ್ನಾಟಕ ಗುಪ್ತದಳ (ಡಿಐಜಿ)ಗೆ ಅನುಮತಿ ನೀಡಲಾಗಿತ್ತು. 50 ಮಂದಿ ರಾಜಕಾರಣಿಗಳ ದೂರವಾಣಿ ಸಂಭಾಷಣೆ ಸಹ ಟ್ಯಾಪಿಂಗ್‌ ಮಾಡಲಾಗಿದೆ ಎಂದು ಸಂಸತ್‌ನಲ್ಲಿ ಹೇಳಿಕೆ ನೀಡಿದ್ದರು. ಇದು ತೀವ್ರ ಸಂಚಲನ ಮೂಡಿಸಿ ರಾಮಕೃಷ್ಣ ಹೆಗಡೆ ಅವರು ದೆಹಲಿಗೆ ಹೋಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಆ ನಂತರ ಆ ಪ್ರಕರಣದ ಬಗ್ಗೆ ಯಾವುದೇ ತನಿಖೆ ನಡೆದಿರಲಿಲ್ಲ.

ಇದೀಗ ಎಚ್.ಡಿ.ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪ ಎದುರಾಗಿದೆ. ಆರೋಪ ಮಾಡಿರುವವರಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಸೇರಿದ್ದಾರೆ. ಜೆಡಿಎಸ್‌ ಜತೆ ಸೇರಿ ಸರ್ಕಾರ ರಚನೆ ಮಾಡಿದಾಗಲೇ ಇಂತದ್ದೊಂದು ಆರೋಪ ಕೇಳಿಬಂದಿದೆ. ಇದೀಗ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡಿದೆ. ಈ ಹಂತದಲ್ಲಿ ಸಿಬಿಐ ತನಿಖೆಯಿಂದ ಮುಂದೇನಾಗಬಹುದು ಎಂಬ ಪ್ರಶ್ನೆ ಮೂಡಿದೆ. ರಾಜಕೀಯವಾಗಿ ಕುಮಾರಸ್ವಾಮಿಯವರನ್ನು ಹಣಿಯಲು ಈ ಪ್ರಕರಣ ಬಳಕೆ ಮಾಡಬಹುದೇ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಮಧ್ಯೆ, ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ರಾಜಕಾರಣಿಗಳಿಗಿಂತ ಕೆಲವು ಪೊಲೀಸ್‌ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಲಿದೆ. ಯಾಕೆಂದರೆ ದೂರವಾಣಿ ಕದ್ದಾಲಿಕೆ ಮಾಡಿರುವುದು ಬಹಿರಂಗಗೊಂಡಿರುವುದು ಅಧಿಕಾರಿಗಳ ನಡುವಿನ ಆಂತರಿಕ ಸಂಘರ್ಷದಿಂದ. ಹೀಗಾಗಿ, ಮೊದಲಿಗೆ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗಳ ನೆತ್ತಿ ಮೇಲೆಯೇ ತೂಗುಕತ್ತಿಯಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಆ ನಂತರದ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ನಡೆದಿರುವ ಕದ್ದಾಲಿಕೆಗಳೂ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಪರೇಷನ್‌ ಕಮಲ ಕಾರ್ಯಾಚರಣೆ ಬಗ್ಗೆಯೂ ಸಿಬಿಐ ತನಿಖೆಯಾಗಲಿ ಎಂದು ಆಗ್ರಹವನ್ನೂ ಮಾಡಿದ್ದಾರೆ.

ಆದರೆ, ಈಗ ರಾಜ್ಯ ಸರ್ಕಾರ ಒಂದು ವರ್ಷದ ಅವಧಿಯಲ್ಲಿ ನಡೆದ ದೂರವಾಣಿ ಕದ್ದಾಲಿಕೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಿದೆ. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಹೊರಬರಲಿ ಎನ್ನುವುದು ಎಲ್ಲರ ಆಶಯ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ದೇಶದ ರಸ್ತೆಗಳನ್ನು ಹೆಚ್ಚು ಸುರಕ್ಷಿತ ಮತ್ತು ಶಿಸ್ತುಬದ್ಧವಾಗಿಸಬೇಕು ಎಂಬ ಆಶಯದಿಂದ ರೂಪಿಸಲಾಗಿದ್ದ ಹೊಸ ಸಾರಿಗೆ ನಿಯಮವನ್ನು ಕರ್ನಾಟಕದಲ್ಲೂ ದುರ್ಬಲಗೊಳಿಸಲಾಗಿದೆ....

  • ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ದೇಶೀಯ ಕಾರ್ಪೊರೇಟ್‌ ಕಂಪನಿಗಳ ಮತ್ತು ಹೊಸ ಉತ್ಪಾದಕ ಕಂಪೆನಿಗಳ ಕಾರ್ಪೊರೇಟ್‌ ತೆರಿಗೆ ಕಡಿತ ಘೋಷಿಸುವ ಮೂಲಕ ಹಣಕಾಸು ಸಚಿವೆ...

  • ಸೈದ್ಧಾಂತಿಕ‌ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಪರಸ್ಪರರ ಮೇಲೆ ಗೌರವ ಮತ್ತು ಆತ್ಮೀಯ ಭಾವನೆ ಇರುವುದು ಆರೋಗ್ಯಕರ ರಾಜಕೀಯದ ಲಕ್ಷಣ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ...

  • ಇನ್ನೂ ಬೆಳೆಯುತ್ತಿರುವ ಪ್ರಜಾತಂತ್ರ ವ್ಯವಸ್ಥೆಗೆ ದ್ವಿಪಕ್ಷೀಯ ಪದ್ಧತಿ ಸ್ವೀಕರಾರ್ಹ ಅಲ್ಲ. ಆದರೆ ಬಹುಪಕ್ಷೀಯ ಪದ್ಧತಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು...

  • ಜಮ್ಮು-ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನಿ ಸೇನೆಯ ನಡುವೆ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟು ಚಿಂತೆಯ ವಿಷಯವಾಗಿದೆ. ಅದರಲ್ಲೂ ಕಲಂ 370 ದಯಪಾಲಿಸಿದ್ದ ವಿಶೇಷಾಧಿಕಾರವನ್ನು...

ಹೊಸ ಸೇರ್ಪಡೆ