ಜನಸ್ಪಂದನೆಯತ್ತ ಚಿತ್ತ ಹರಿಸಲಿ

Team Udayavani, Apr 25, 2019, 6:00 AM IST

ಇನ್ನಾದರೂ ಸಚಿವರು, ಶಾಸಕರು ರಾಜಕೀಯ ಲಾಭ- ನಷ್ಟದ ಲೆಕ್ಕಾಚಾರ, ಆರೋಗ್ಯ- ಪ್ರತ್ಯಾರೋಪಗಳನ್ನು ಬದಿಗಿಟ್ಟು ಜನರ ಸಮಸ್ಯೆಗೆ ಪರಿಹಾರ ನೀಡಲು ಖುದ್ದು ಧಾವಿಸುವ ಅಗತ್ಯವಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಸಂಪೂರ್ಣ ಮುಗಿದಿದ್ದು, ಫ‌ಲಿತಾಂಶಕ್ಕಾಗಿ ಇಡೀ ರಾಜ್ಯವೇ ಕಾದು ಕುಳಿತಿದೆ. ಈ ನಡುವೆ ಲೋಕಸಭಾ ಚುನಾವಣೆ ಪ್ರಕ್ರಿಯೆ ಬಹುತೇಕ ಪೂರ್ಣಗೊಳ್ಳುತ್ತಿದ್ದಂತೆ ಅಭಿವೃದ್ಧಿ ಕಾರ್ಯದತ್ತ ದೃಷ್ಟಿ ಹರಿಸಬೇಕಿದ್ದ ಆಡಳಿತಯಂತ್ರ ಬಹುತೇಕ ಇನ್ನೂ ಜಡಾವಸ್ಥೆಯಲ್ಲಿದ್ದರೆ, ಹಲವು ಸಚಿವರು, ಆಡಳಿತ- ಪ್ರತಿಪಕ್ಷ ಶಾಸಕರು ರಾಜಕೀಯ ಜಂಜಾಟದಲ್ಲಿ ದಿನಕಳೆಯುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಗತಿಯಲ್ಲಿದ್ದ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡಿದ್ದು, ಕಾಮಗಾರಿಗೆ ಮತ್ತೆ ಚಾಲನೆ ದೊರಕಿಲ್ಲ. ಇನ್ನೊಂದೆಡೆ ಚುನಾವಣಾ ಪ್ರಚಾರ, ಕಾರ್ಯತಂತ್ರದಲ್ಲೇ ನಿರತರಾಗಿದ್ದ ಸಚಿವರು, ಶಾಸಕರು, ಸಂಸದರು ಮತದಾನ ಮುಗಿದರೂ ಚುನಾವಣಾ ಗುಂಗಿನಿಂದ ಹೊರಬಂದಿಲ್ಲ. ರಾಜ್ಯದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತದಲ್ಲಿ ತಲಾ 14 ಕ್ಷೇತ್ರಗಳ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಬಹುತೇಕ ಸಚಿವರು, ಜನಪ್ರತಿನಿಧಿಗಳು ವಿಶ್ರಾಂತಿ ಮೊರೆ ಹೋಗಿದ್ದರೆ, ಇನ್ನೂ ಕೆಲವರು ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವತ್ತ ಬಹುತೇಕರು ಈವರೆಗೆ ಚಿತ್ತ ಹರಿಸಿಲ್ಲ.

ರಾಜ್ಯದ ಬಹುತೇಕ ಕಡೆ ಜನ ಶುದ್ಧ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರು. ಜಾನುವಾರುಗಳು ಸಹ ನೀರು, ಮೇವಿನ ಕೊರತೆಯಿಂದ ಬಳಲುತ್ತಿವೆ. ತೀವ್ರ ತಾಪಮಾನ, ಅಕಾಲಿಕ ಮಳೆಯಿಂದ ಕೃಷಿ, ತೋಟಗಾರಿಕೆ ಬೆಳೆಗಳ ನಾಶವಾಗಿ ದ್ದರೆ, ಕರಾವಳಿಯಲ್ಲಿ ಮತ್ಸಕ್ಷಾಮ, ಮಲೆನಾಡಿನಲ್ಲಿ ಮಂಗನ ಕಾಯಿಲೆ, ಉತ್ತರ ಕರ್ನಾಟಕ ಹಾಗೂ ಮಧ್ಯಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಕೊರತೆ, ಅಭಿವೃದ್ಧಿ ಕಾರ್ಯಗಳ ಹಿನ್ನಡೆ ಸಹಿತವಾಗಿ ನೂರಾರು ಸಮಸ್ಯೆಗಳು ನಗರ ಮತ್ತು ಗ್ರಾಮೀಣ ಪ್ರದೇಶದ ಜನರನ್ನು ಕಾಡುತ್ತಿವೆ.

ಜೂನ್‌ ಆರಂಭದಲ್ಲಿ ಮುಂಗಾರು ನಿರೀಕ್ಷೆಯಿದ್ದು, ರಾಜಧಾನಿ ಸಹಿತವಾಗಿ ಹಲವು ನಗರ, ಪಟ್ಟಣ ಪ್ರದೇಶಗಳಲ್ಲಿ ಮಳೆ ಅವಾಂತರ ತಡೆಗೆ ಕ್ರಿಯಾ ಯೋಜನೆಯೂ ಸಿದ್ಧವಾಗಿಲ್ಲ. ರಾಜಧಾನಿಯಲ್ಲಂತೂ ಈ ನಿಟ್ಟಿನಲ್ಲಿ ಯಾವುದೇ ಸಿದ್ಧತೆ ಮಾಡಿಕೊಳ್ಳದಿರುವುದು ನಗರದ ಜನರಲ್ಲಿ ಆತಂಕ ಸೃಷ್ಟಿಸಿದೆ.
ಲೋಕಸಭಾ ಚುನಾವಣೆಯ ಫ‌ಲಿತಾಂಶ ಘೋಷಣೆಯಾಗುವುದು ಬಾಕಿಯಿರುವುದನ್ನು ಹೊರತುಪಡಿಸಿದರೆ ರಾಜ್ಯದಲ್ಲಿ ಚುನಾವಣೆ ಪ್ರಕ್ರಿಯೆಗಳು ಬಹುತೇಕ ಮುಗಿದಿದೆ. ಇನ್ನು ಒಂದು ತಿಂಗಳು ಫ‌ಲಿತಾಂಶಕ್ಕಾಗಿ ಕಾಯಬೇಕಿದೆ. ಇನ್ನಾದರೂ ಸಚಿವರು, ಶಾಸಕರು ರಾಜಕೀಯ ಲಾಭ- ನಷ್ಟದ ಲೆಕ್ಕಾಚಾರ, ಆರೋಪ- ಪ್ರತ್ಯಾರೋಪಗಳನ್ನು ಬದಿಗಿಟ್ಟು ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಿ ರಾಜ್ಯದ ಜನರ ಸಮಸ್ಯೆಗೆ ಪರಿಹಾರ ನೀಡಲು ಖುದ್ದು ಧಾವಿಸುವ ಅಗತ್ಯವಿದೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಮೇಲಾಟಗಳೇ ಜೋರಾಗಿದೆ.

ಶಾಸಕರ ರಾಜೀನಾಮೆ, ಮೈತ್ರಿ ಸರ್ಕಾರದ ಪತನ, ಹೊಸ ಸರ್ಕಾರದ ರಚನೆಗೆ ಕಾರ್ಯತಂತ್ರ ಇತ್ಯಾದಿ ವಿಷಯಗಳ ಬಗ್ಗೆಯೇ ರಾಜಕೀಯ ಪಕ್ಷದ ಮುಖಂಡರು ಶಾಸಕರು, ಸಚಿವರು ಚರ್ಚಿಸುತ್ತಿರುವುದು ಕಾಣುತ್ತಿದೆ. ಗ್ರಾಮೀಣ ಭಾಗದ ಜನ, ಜಾನುವಾರು ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಹಲವು ಕಡೆಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಪ್ರಕ್ರಿಯೆ ಆರಂಭವಾಗಿದೆ. ಸ್ಥಳೀಯ ಆಡಳಿತಗಳ ಕಾರ್ಯವೈಖರಿ, ಜನರ ಸಮಸ್ಯೆಗಳಿಗೆ ಸ್ಪಂದನೆ ಬಗ್ಗೆ ಯಾರೊಬ್ಬರು ಮಾತನಾಡುತ್ತಿಲ್ಲ. ಚುನಾವಣೆ ಮುಗಿದ ತಕ್ಷಣವೇ ಜನರ ಸಮಸ್ಯೆಯನ್ನು ಆಲಿಸಬೇಕಾದ‌ವರೆ, ಕಣ್ಣು ಮುಚ್ಚಿ ಕುಳಿತರೆ, ಜನ ಸಾಮಾನ್ಯರ ಪಾಡು ಏನಾಗಬೇಕು?

ನೀತಿ ಸಂಹಿತೆ ಜಾರಿಯಲ್ಲಿದೆಯಾದರೂ, ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಅನುಷ್ಠಾನ ಮಾಡಬಹುದಾದ ಹತ್ತಾರು ಅಭಿವೃದ್ಧಿ ಕಾರ್ಯಗಳು ಹಾಗೇ ಉಳಿದುಕೊಂಡಿದೆ. ಇನ್ನಾದರೂ ಆ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ನೀತಿ ಸಂಹಿತೆ ತರೆವಾದ ನಂತರ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸುವ ಪ್ರಯತ್ನದ ಕುರುಹೂ ಕಾಣುತ್ತಿಲ್ಲ. ಮಳೆಗಾಲ ಸಮೀಪಿಸುತ್ತಿದ್ದು, ರಸ್ತೆ, ಕಾಲುವೆ, ಹೆದ್ದಾರಿಗಳ ದುರಸ್ತಿ, ಅಭಿವೃದ್ಧಿಗೆ ಆದ್ಯತೆ ಕಾಣುತ್ತಿಲ್ಲ. ಇನ್ನಾದರೂ ಜನ ಪ್ರತಿನಿಧಿಗಳು, ಅಧಿಕಾರಶಾಹಿ ಒಟ್ಟಿಗೆ ರಾಜ್ಯದ ಜನರಿಗೆ ಸ್ಪಂದಿಸುವ ತುರ್ತು ಅಗತ್ಯವಿದ್ದು, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಅಷ್ಟೂ ಬುದ್ಧಿ ಬೇಡ್ವೇನ್ರಿ ನಿಮ್ಗೆ? ಅವನು ಬೇಡ ಬೇಡ ಅಂದ್ರೂ ಒತ್ತಾಯ ಮಾಡಿ ತಿನ್ನಿಸಿದ್ರಂತಲ್ಲ; ಈಗ ಅವನಿಗೆ ಹೊಟ್ಟೆ ಅಪ್‌ಸೆಟ್‌ ಆದ್ರೆ ಏನ್ರೀ ಮಾಡೋದು? ಇವತ್ತು...

  • ಶಿಕಾರಿ ಎಂದೊಡನೆ ನೆನಪಾಗುವುದು ಯಾವುದೋ ಪ್ರಾಣಿ ಪಕ್ಷಿಯ ಬೇಟೆ. ಆದರೆ ಈ ಪುಸ್ತಕದಲ್ಲಿ ಇದು ಒಂದು ಪ್ರಾಣಿ ಪಕ್ಷಿಯ ಬೇಟೆಯಾಗಿರದೇ ಮನುಷ್ಯನಿಂದ ಮನುಷ್ಯನ ಬೇಟೆಯನ್ನು...

  • ಬೆಂಗಳೂರು: ದೇಶದ ಅತಿ ದೊಡ್ಡ ತಂತ್ರಜ್ಞಾನ ಮೇಳ "ಬೆಂಗಳೂರು ಟೆಕ್‌ ಸಮಿಟ್‌'ಗೆ ದಿನಗಣನೆ ಆರಂಭವಾಗಿದೆ. ನವೆಂಬರ್‌ 18ರಿಂದ 20ರವರೆಗೆ ಅರಮನೆ ಆವರಣದಲ್ಲಿ ನಡೆಯಲಿರುವ...

  • ಬೆಂಗಳೂರು/ಟಿ.ದಾಸರಹಳ್ಳಿ: ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಶುದ್ಧ ಕುಡಿವ ನೀರು ಪೂರೈಕೆ ಘಟಕ ಮಾಲೀಕನ ಪುತ್ರನ ಅಪಹರಣಕ್ಕೆ ವಿಫ‌ಲ ಯತ್ನ ನಡೆಸಿ, ಅವರ ಮನೆ ಮುಂದೆ ನಿಂತಿದ್ದ...

  • ಬೆಂಗಳೂರು: ಶಬರಿಮಲೆ ಯಾತ್ರೆ ಸಂಬಂಧ ರಾಜ್ಯದ ಭಕ್ತರು ಸಜ್ಜಾಗುತ್ತಿದ್ದು, ಕಳೆದ ವರ್ಷ ಇದ್ದ ಆತಂಕ ನಿವಾರಿಸಿ ರಾಜ್ಯದ ಯಾತ್ರಾರ್ಥಿಗಳಿಗೆ ಎಲ್ಲ ಸೌಕರ್ಯ ನೀಡಲು...