ಕೇಂದ್ರದಿಂದ ರಾಜ್ಯಕ್ಕಿದೆ ಹಲವು ನಿರೀಕ್ಷೆ ಉತ್ತಮವಾಗಿರಲಿ ಸಂಬಂಧ

ಸಂಪಾದಕೀಯ, Jun 8, 2019, 6:00 AM IST

ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಸರ್ಕಾರ ಸಂಪುಟ ವಿಸ್ತರಣೆಗೊಳಿಸಿ ‘ಚುನಾವಣಾ ಗುಂಗಿ’ನಿಂದ ಹೊರಬಂದು ಪೂರ್ಣ ಪ್ರಮಾಣದಲ್ಲಿ ಕಾರ್ಯಮಗ್ನವಾಗಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳು ಸಾಕಷ್ಟು ನಿರೀಕ್ಷೆಯನ್ನು ಹೊಂದಿರುವುದು ಸಹಜ. ಅದರಂತೆ ಕರ್ನಾಟಕವೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಸಹಿತ ನೆರವು ಬಗ್ಗೆ ವಿಶ್ವಾಸ ಹೊಂದಿದೆ. ರಾಜ್ಯದಿಂದ 25 ಬಿಜೆಪಿ ಸಂಸದರು ಗೆಲುವು ಸಾಧಿಸಿರುವುದು ಹಾಗೂ ನಾಲ್ವರಿಗೆ ಸಂಪುಟದಲ್ಲಿ ಸ್ಥಾನವೂ ದೊರೆತಿರುವುದರಿಂದ ರಾಜ್ಯದ ಜನತೆಯೂ ಕೇಂದ್ರ ಸರ್ಕಾರದ ಬಗ್ಗೆ ಉತ್ತಮ ನಿರೀಕ್ಷೆ ಹೊಂದಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವುದರಿಂದ ಎಲ್ಲೋ ಒಂದು ಕಡೆ ಕೇಂದ್ರದಿಂದ ಹೆಚ್ಚಿನ ನೆರವು ಬರುವುದೋ ಇಲ್ಲವೋ ಎಂಬ ಅನುಮಾನವೂ ಇದೆ. ಆದರೆ, ಅದಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಬಾರದು. ಜತೆಗೆ, ರಾಜ್ಯ ಸರ್ಕಾರವು ಕೇಂದ್ರದ ಜತೆ ಸಂಘರ್ಷಕ್ಕೆ ಇಳಿಯದೆ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರದ ಜತೆ ಉತ್ತಮ ಸಂಬಂಧವಿಟ್ಟುಕೊಂಡು ರಾಜ್ಯಕ್ಕೆ ಬರಬೇಕಿರುವ ಅನುದಾನ, ವಿಶೇಷ ಪ್ಯಾಕೇಜ್‌, ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯಕ್ಕೆ ಹೆಚ್ಚಿನ ಪಾಲು ಪಡೆಯಬೇಕು. ಆ ನಿಟ್ಟಿನಲ್ಲಿ ಸಮನ್ವಯತೆಯಿಂದ ಕೆಲಸ ಮಾಡಬೇಕು.

ಪ್ರಮುಖವಾಗಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನೇಮಕಗೊಂಡಿರುವವರು ದೆಹಲಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ರೈಲು ಯೋಜನೆಗಳು, ರಾಜಧಾನಿ ಬೆಂಗಳೂರಿನ ಮೆಟ್ರೋ ವಿಸ್ತರಣೆ ಹಂತದ ಯೋಜನೆ, ಸಬ್‌ ಅರ್ಬನ್‌ ರೈಲು ಯೋಜನೆಗಳ ಬಗ್ಗೆ ಗಮನಹರಿಸಬೇಕು.

ರಾಜ್ಯದ ಸತತ ಬರದಿಂದ ತತ್ತರಿಸುತ್ತಿರುವುದರಿಂದ ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ನೀಡುವ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚು ಜನರಿಗೆ ಉದ್ಯೋಗ ನೀಡಲು ಹೆಚ್ಚು ಮಾನವ ದಿನ ಮಂಜೂರು ಮಾಡಬೇಕಾಗಿದೆ. ಜತೆಗೆ, ಹಿಂದಿನ ವರ್ಷಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಹಾಗೂ ಪರಿಕರ ಬಾಬ್ತು ಕೇಂದ್ರದಿಂದ 1351 ಕೋಟಿ ರೂ. ಬಾಕಿ ಬರಬೇಕಿದ್ದು, ತಕ್ಷಣಕ್ಕೆ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿದೆ. ಆ ಮೊತ್ತವೂ ಬರಬೇಕಿದೆ.

ಕಳೆದ ವರ್ಷದ ಹಿಂಗಾರು ಹಾಗೂ ಮುಂಗಾರು ಅವಧಿಯಲ್ಲಿ ಮಳೆ ಕೊರತೆ ಹಾಗೂ ಬರ ಹಿನ್ನೆಲೆಯಲ್ಲಿ ಉಂಟಾಗಿರುವ ನಷ್ಟದಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 176 ತಾಲೂಕುಗಳಲ್ಲಿ 156 ತಾಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದ್ದು, ಮುಂಗಾರು ಮತ್ತು ಹಿಂಗಾರು ಹಂಗಾಮುಗಳೆರಡಲ್ಲಿಯೂ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಂಭವಿಸಿದ ನಷ್ಟ 32,325 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮುಂಗಾರು ಹಂಗಾಮಿನ ನಷ್ಟಕ್ಕೆ ಸಂಬಂಧಿಸಿದಂತೆ ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ 2434 ಕೋಟಿ ರೂ. ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ 949.49 ಕೋಟಿ ರೂ. ಪರಿಹಾರ ಮಾತ್ರ ಮಂಜೂರು ಮಾಡಲಾಗಿದೆ. ಹಿಂಗಾರು ಅವಧಿಯಲ್ಲಿ 11,384.47 ಕೋಟಿ ರೂ. ಮೌಲ್ಯದ ಬೆಳೆ ನಷ್ಟ ಉಂಟಾಗಿದ್ದು, ಮಾರ್ಗಸೂಚಿ ಪ್ರಕಾರ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿ, ತತಕ್ಷಣಕ್ಕೆ ಕೇಂದ್ರದಿಂದ ಬರ ಪರಿಹಾರಕ್ಕೆ ಹೆಚ್ಚು ಅನುದಾನ ಪಡೆಯುವುದು ರಾಜ್ಯದ ಕರ್ತವ್ಯವಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ