ತೈಲ ಆಮದು ಕಗ್ಗಂಟನ್ನು ಬಿಡಿಸುವುದೆಂತು?

Oil Delivery Issues

Team Udayavani, Apr 26, 2019, 5:55 AM IST

ಇರಾನ್‌ನಿಂದ ಕಚ್ಚಾ ತೈಲ ಆಮದು ವಿಷಯದಲ್ಲಿ ಅಮೆರಿಕ ಅನೇಕ ದೇಶಗಳಿಗೆ ನಿರ್ಬಂಧ ಸಡಿಲಿಕೆ ಮಾಡಿತ್ತು. ಈಗ ಮೇ 2ನೇ ತಾರೀಕು ನಿರ್ಬಂಧ ಮತ್ತೆ ಜಾರಿಗೆ ಬರಲಿದ್ದು, ಭಾರತವೀಗ ಕಚ್ಚಾ ತೈಲ ಆಮದಿಗೆ ಬೇರೆ ರಾಷ್ಟ್ರಗಳತ್ತ ನೋಡುತ್ತಿದೆ. ಒಂದು ವೇಳೆ ಅದೇನಾದರೂ ಇರಾನ್‌ನಿಂದ ತೈಲ ಆಮದು ಮಾಡುವುದನ್ನು ಮುಂದುವರಿಸಿತೆಂದರೆ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಭಾರತದ ಒಟ್ಟು ತೈಲ ಆಮದಿನಲ್ಲಿ ಇರಾನ್‌ನ ಪಾಲು 10 ಪ್ರತಿಶತದಷ್ಟಿತ್ತು. ಹೀಗಾಗಿ ಸದ್ಯದ ವಿದ್ಯಮಾನವೆಲ್ಲ ಭಾರತದ ಪಾಲಿಗೆ ಸಂಕಷ್ಟ ತಂದೊಡ್ಡಿದೆ ಎನ್ನುವುದಂತೂ ನಿಜ. ಇವೆಲ್ಲದರಿಂದಾಗಿ ಪೆಟ್ರೋಲ್-ಡೀಸೆಲ್ನ ಬೆಲೆಯಲ್ಲಿ ಏರಿಕೆಯಾಗುತ್ತದಾ? ಆಮದು ದರಗಳು ಹೆಚ್ಚಾಗಿ ಖಜಾನೆಗೆ ಹೊರೆಯಾಗುತ್ತದಾ? ಸುಧಾರಿಸಿಕೊಳ್ಳುತ್ತಿರುವ ರೂಪಾಯಿಗೆ ಪೆಟ್ಟು ಬೀಳಬಹುದೇ ಎನ್ನುವ ಪ್ರಶ್ನೆಗಳು ಕಾಡಲಾರಂಭಿಸಿವೆ.

ಒಂದು ರೀತಿಯಲ್ಲಿ ಈ ಸಂಕಷ್ಟಗಳಿಗೆ ಅಮೆರಿಕವೇ ಕಾರಣ ಎನ್ನಬಹುದು. ಏಕೆಂದರೆ ಭಾರತ ಯಾವ ರಾಷ್ಟ್ರಗಳೊಂದಿಗೆ ದೀರ್ಘ‌ಕಾಲದಿಂದ ತೈಲ ವ್ಯವಹಾರ ನಡೆಸಿದೆಯೋ ಆ ರಾಷ್ಟ್ರಗಳೊಂದಿಗೆ ಈಗ ಅಮೆರಿಕ ತಿಕ್ಕಾಟಕ್ಕೆ ಇಳಿದಿದೆ. ಇರಾನ್‌ ಅಷ್ಟೇ ಅಲ್ಲದೆ, ವೆನಿಜುವೆಲಾ ಕೂಡ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ. ಮೂರು ತಿಂಗಳಿಂದ ಅಮೆರಿಕ ವೆನುಜುವೆಲಾದ ಆಡಳಿತವನ್ನು ಕೆಳಕ್ಕುರುಳಿಸಿ ತನ್ನ ಕೈಗೊಂಬೆಯನ್ನು ಕುರ್ಚಿಯಲ್ಲಿ ಕೂರಿಸುವ ಪ್ರಯತ್ನದಲ್ಲಿ ತೊಡಗಿದೆ. ಈ ಸಮಯದಲ್ಲಿ ವೆನಿಜುವೆಲಾದೊಂದಿಗೂ ಭಾರತದ ತೈಲ ಆಮದು ಅಜಮಾಸು ನಿಂತೇ ಹೋಗಿದೆ. ಅನೇಕ ತೈಲ ರಿಫೈನರಿಗಳು ವೆನಿಜುವೆಲಾದಿಂದ ತೈಲ ಆಮದನ್ನು ನಿಲ್ಲಿಸಿವೆ. ಸಹಜವಾಗಿಯೇ, ಅಮೆರಿಕ ‘ಭಾರತದ ಈ ಸಹಯೋಗದಿಂದ ನಮಗೆ ಖುಷಿಯಾಗಿದೆ’ ಎನ್ನುತ್ತಿದೆ!

ಶತ್ರುರಾಷ್ಟ್ರಗಳನ್ನು ಹತ್ತಿಕ್ಕಲು ಅಮೆರಿಕ ಅನುಸರಿಸುವ ಈ ರೀತಿಯ ರಣತಂತ್ರಗಳಿಂದಾಗಿ ಭಾರತವಷ್ಟೇ ಅಲ್ಲ, ದೇಶದ ಅನೇಕ ರಾಷ್ಟ್ರಗಳು ಪರದಾಡುತ್ತಲೇ ಇವೆ. ಅನೇಕ ದೇಶಗಳ ಇಂಧನ ಅಗತ್ಯಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಇರಾನ್‌ ತನ್ನ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸಬೇಕು, ನಿಲ್ಲಿಸಿದರೆ ಅದರ ಮೇಲೆ ವಿಧಿಸಲಾಗಿರುವ ಆರ್ಥಿಕ ಪ್ರತಿಬಂಧಗಳನ್ನು ಸರಿಸಲಾಗುವುದು ಎಂದು 2015ರಲ್ಲಿ ಒಪ್ಪಂದವಾಗಿತ್ತು. ಈ ಕರಾರು ಬರಾಕ್‌ ಒಬಾಮ ಅವರ ಆಡಳಿತಾವಧಿಯಲ್ಲಿ ಆಗಿತ್ತು. ಆದರೆ ಕಳೆದ ವರ್ಷ ಡೊನಾಲ್ಡ್ ಟ್ರಂಪ್‌, ಇರಾನ್‌ ಒಪ್ಪಂದದ ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿ ಆರ್ಥಿಕ ಮತ್ತು ವ್ಯಾವಹಾರಿಕ ನಿರ್ಬಂಧಗಳನ್ನು ಹೇರಿಬಿಟ್ಟರು. ಆ ದೇಶದ ಅರ್ಥ್ಯವ್ಯವಸ್ಥೆಯನ್ನು ದುರ್ಬಲಗೊಳಿಸಲು ಟ್ರಂಪ್‌ ತೈಲ ಆಮದಿನ ಮೇಲೆ ನಿರ್ಬಂಧ ಹೇರಲು ಮುಂದಾದರು. ಇದೇ ವೇಳೆಯಲ್ಲೇ ಅನೇಕ ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿದ್ದರಿಂದ, ಭಾರತ, ಚೀನ, ಜಪಾನ್‌, ಟರ್ಕಿ, ಇಟಲಿ, ದಕ್ಷಿಣ ಕೊರಿಯಾ ಮತ್ತು ತೈವಾನ್‌ಗೆ ತೈಲ ಆಮದು ಮಾಡಿಕೊಳ್ಳಲು 6 ತಿಂಗಳ ‘ವಿನಾಯಿತಿ’ ನೀಡಿದ್ದರು. ಈಗ ಈ ಅವಧಿ ಮೇ ತಿಂಗಳಿಗೆ ಮುಗಿಯುತ್ತಿದೆ. ಅಚ್ಚರಿಯ ಸಂಗತಿಯೆಂದರೆ, ಅವಧಿ ಮುಗಿದ ಮೇಲೂ ಯಾವುದಾದರೂ ರಾಷ್ಟ್ರ ಇರಾನ್‌ನೊಂದಿಗೆ ತೈಲ ವ್ಯಾಪಾರ ನಡೆಸಿದರೆ ಅದರ ವಿರುದ್ಧ ಕ್ರಮ ಜರುಗಿಸುವುದಾಗಿ ಟ್ರಂಪ್‌ ಬಹಿರಂಗವಾಗಿಯೇ ಬೆದರಿಕೆ ಒಡ್ಡುತ್ತಿದ್ದಾರೆ. ಅಮೆರಿಕದ ಈ ವರ್ತನೆಯನ್ನು ಎಲ್ಲಾ ರಾಷ್ಟ್ರಗಳೂ ಅನಿವಾರ್ಯವಾಗಿ ಸಹಿಸಿಕೊಳ್ಳುತ್ತಿವೆ.

ಇಲ್ಲಿ ಪ್ರಶ್ನೆ ಏನೆಂದರೆ, ಈಗ ಭಾರತವೇನು ಮಾಡಬೇಕು ಎನ್ನುವುದು. ಭಾರತವು ಇರಾನ್‌ನ ಮೂರನೇ ಅತಿದೊಡ್ಡ ತೈಲ ಖರೀದಿದಾರ ರಾಷ್ಟ್ರ. ಅದಕ್ಕಿಂತಲೂ ಹೆಚ್ಚಾಗಿ ರೂಪಾಯಿಯಲ್ಲೂ ಅದರೊಂದಿಗೆ ವ್ಯವಹರಿಸುತ್ತದೆ. ಭಾರತದ ಒಟ್ಟು ತೈಲ ಆಮದಿನಲ್ಲಿ ಇರಾನ್‌ ಮತ್ತು ವೆನಿಜುವೆಲಾದ ಒಟ್ಟು ತೈಲ ಪ್ರಮಾಣವೇ 18 ಪ್ರತಿಶತ. ಹೀಗಿರುವಾಗ, ಈಗ ಎದುರಾಗುವ ಕೊರತೆಯನ್ನು ನೀಗಿಸುವುದು ಹೇಗೆ ಮಾಡಿಕೊಳ್ಳುವುದು? ಇವೆಲ್ಲದರಿಂದಾಗಿ ಭಾರತವೀಗ ಸೌದಿ ಅರೇಬಿಯಾ, ಯುಎಇ, ಮೆಕ್ಸಿಕೋ, ಬ್ರೆಜಿಲ್, ಕೊಲಂಬಿಯಾ ಸೇರಿದಂತೆ ಇತರೆ ಪರ್ಯಾಯ ರಾಷ್ಟ್ರಗಳತ್ತ ದೃಷ್ಟಿ ಹರಿಸಿದೆ.

ಇನ್ನೊಂದು ಸಂಗತಿ ಏನೆಂದರೆ, ಅಮೆರಿಕದ ಒತ್ತಡಕ್ಕೆ ಮಣಿದು ಇರಾನ್‌ನೊಂದಿಗೆ ಖಡಾಖಂಡಿತವಾಗಿ ಸಂಬಂಧವನ್ನು ಕಡಿದುಕೊಳ್ಳಲೂ ಭಾರತಕ್ಕೆ ಸಾಧ್ಯವಿಲ್ಲ. ಇರಾನ್‌ ಅನೇಕ ವರ್ಷಗಳಿಂದ ಭಾರತದ ಮಿತ್ರ ರಾಷ್ಟ್ರವಾಗಿದ್ದು, ಎರಡೂ ರಾಷ್ಟ್ರಗಳು ಚಬಹಾರ್‌ ಬಂದರು ಯೋಜನೆಯಲ್ಲಿ ಜೊತೆಯಾಗಿ ನಿಂತಿವೆ. ಒಟ್ಟಲ್ಲಿ ಅತ್ತ ಇರಾನ್‌ ಅನ್ನೂ ದೂರತಳ್ಳದೆ, ಇತ್ತ ಅಮೆರಿಕವನ್ನೂ ಎದುರುಹಾಕಿಕೊಳ್ಳದೆ, ಇನ್ನೊಂದೆಡೆ ಭಾರತದ ಆರ್ಥಿಕತೆಗೂ ಹೊರೆಯಾಗದಂತೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಸವಾಲು ಭಾರತದ ಎದುರಿಗೆ ಇದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ