ಇನ್ನಿಲ್ಲವಾದ ಶ್ರೇಷ್ಠ ರಾಜಕೀಯ ಪರಂಪರೆಯ ಕೊಂಡಿ

Team Udayavani, Aug 8, 2019, 5:12 AM IST

ಸಮರ್ಥ ಆಡಳಿತಗಾರ್ತಿ, ಉತ್ತಮ ವಾಗ್ಮಿ, ವಿನಮ್ರ ನಾಯಕಿ ಹೀಗೆ ಸುಷ್ಮಾ ಸ್ವರಾಜ್‌ ಅವರನ್ನು ಅನೇಕ ಗುಣ ವಿಶೇಷಣಗಳಿಂದ ಹೊಗಳಬಹುದು. ಆದರೆ ಇವೆಲ್ಲಕ್ಕಿಂತ ಮಿಗಿಲಾಗಿದ್ದದ್ದು ಅವರ ಮಾನವೀಯ ಅಂತಃಕರಣ. ಈ ಅಂತಃಕರಣದಿಂದಾಗಿಯೇ ಅವರು ಜನಮಾನಸದಲ್ಲಿ ಅಮ್ಮನ ಸ್ಥಾನಕ್ಕೇರಿದ್ದಾರೆ. ದೇಶದ ಮೊದಲ ಪೂರ್ಣ ಪ್ರಮಾಣದ ವಿದೇಶಾಂಗ ಸಚಿವರು ಎಂಬ ಹಿರಿಮೆಯೊಂದಿಗೆ ಆ ಹುದ್ದೆಯನ್ನು ಅಲಂಕರಿಸಿದ ಸುಷ್ಮಾ ತಾನು ಆ ಸ್ಥಾನಕ್ಕೆ ಯೋಗ್ಯ ಆಯ್ಕೆ ಎಂಬುದನ್ನು ಐದು ವರ್ಷದ ಅಧಿಕಾರ ವಧಿಯಲ್ಲಿ ತೋರಿಸಿಕೊಟ್ಟಿದ್ದರು. ಗಣ್ಯರು ಅಗಲಿದಾಗ ತುಂಬಲಾರದ ನಷ್ಟ ಎಂದು ವರ್ಣಿಸುವುದು ಒಂದು ಔಪಚಾರಿಕತೆಯಾಗಿದ್ದರೂ ಸುಷ್ಮಾ ಅಗಲಿಕೆ ಮಾತ್ರ ದೇಶಕ್ಕೆ ನಿಜವಾಗಿಯೂ ಭಾರೀ ನಷ್ಟವೇ ಸರಿ.

ರಾಜಕೀಯ ಮತ್ತು ಪರಿವಾರವನ್ನು ಪ್ರತ್ಯೇಕವಾಗಿಯೇ ಇರಿಸಿಕೊಂಡ ನಾಯಕರ ಸಾಲಿಗೆ ಸೇರಿದವರು ಸುಷ್ಮಾ. ರಾಜ್ಯ-ಕೇಂದ್ರದಲ್ಲಿ ಸಚಿವೆ, ಮುಖ್ಯಮಂತ್ರಿ, ವಿಪಕ್ಷ ನಾಯಕಿಯಾಗಿ ಹೀಗೆ ವಿವಿಧ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದರೂ ಎಂದಿಗೂ ಅಧಿಕಾರ ವ್ಯಾಪ್ತಿಯ ಮೇಲೆ ಕುಟುಂಬದ ನೆರಳು ಕೂಡಾ ಬೀಳದಂತೆ ನೋಡಿಕೊಂಡರು. ಕೈ ಬಾಯಿ ಸ್ವಚ್ಛ ವಾಗಿಟ್ಟು ಕೊಂಡು, ಅಧಿಕಾರದ ಭ್ರಮೆ ತಲೆಗೇರಿಸಿಕೊಳ್ಳದೆ ಸುಮಾರು ಐದು ದಶಕದ ರಾಜಕೀಯ ಪಯಣವನ್ನು ನಡೆಸಿದರು.

ಬಿಜೆಪಿ ಪಕ್ಷದಿಂದ ಮುಖ್ಯಮಂತ್ರಿಯಾದ ಮೊದಲ ಮಹಿಳೆ, ಮೊದಲ ವಿಪಕ್ಷ ನಾಯಕಿ ಸೇರಿದಂತೆ ಹಲವು ಪ್ರಥಮಗಳ ಉಪಾಧಿಗೆ ಸುಷ್ಮಾ ಪಾತ್ರರಾಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದ ರಾಜಕೀಯ ಕ್ಷೇತ್ರ ಪ್ರವೇಶಿಸಿ ಹಂತಹಂತವಾಗಿ ಮೇಲೇರಿ ವಿದೇಶಾಂಗ ಸಚಿವೆಯ ಉನ್ನತ ಹುದ್ದೆ ಅಲಂಕರಿಸಿದವರು. ಹರ್ಯಾಣದ ಸಚಿವೆ, ದಿಲ್ಲಿಯ ಮುಖ್ಯಮಂತ್ರಿ, ಲೋಕಸಭೆಯಲ್ಲಿ ವಿಪಕ್ಷ ನಾಯಕಿ ಹೀಗೆ ಅವರ ಸುದೀರ್ಘ‌ ರಾಜಕೀಯ ಪಯಣಕ್ಕೆ ಅನೇಕ ಆಯಾಮಗಳುಂಟು. ನಿಭಾಯಿಸಿದ ಪ್ರತಿ ಹುದ್ದೆಯಲ್ಲೂ ತನ್ನದೇ ಛಾಪು ಮೂಡಿಸುವುದು ಅವರ ವೈಶಿಷ್ಟ್ಯವಾಗಿತ್ತು. ಅದರಲ್ಲೂ ವಿದೇ ಶಾಂಗ ಸಚಿವೆಯಾಗಿ ಅವರು ಮಾಡಿದ ಕೆಲಸಗಳನ್ನು ಇಡೀ ಜಗತ್ತು ಮೆಚ್ಚಿಕೊಂಡಿದೆ. ವಿದೇಶಾಂಗ ಇಲಾಖೆ ಮತ್ತು ಅದರ ಸಚಿವರೆಂದರೆ ಜನಸಾಮಾನ್ಯರ ಜೊತೆಗೆ ಯಾವ ಸಂಪರ್ಕವೂ ಇಲ್ಲದವರು. ಅವರೇ ನಿದ್ದರೂ ದೇಶಕ್ಕಾಗಮಿಸುವ ವಿದೇಶಿ ಗಣ್ಯರಿಗೆ ಹಸ್ತಲಾಘವ ನೀಡುವುದು, ವಿದೇಶ ಪ್ರಯಾಣ ಮಾಡುವುದು ಮತ್ತು ವಿದೇಶಾಂಗ ನೀತಿಗೆ ಸಂಬಂಧಪಟ್ಟಂತೆ ಮಾತನಾಡುವವರು ಎಂಬ ಸಾರ್ವತ್ರಿಕ ಗ್ರಹಿಕೆಯನ್ನು ಸುಳ್ಳು ಮಾಡಿದವರು ಸುಷ್ಮಾ ಸ್ವರಾಜ್‌. ವಿದೇಶಾಂಗ ಇಲಾಖೆಯನ್ನು ಜನಸಾಮಾನ್ಯರ ಬಳಿಗೊಯ್ದ ಕೀರ್ತಿ ಅವರಿಗೆ ಸಲ್ಲಬೇಕು.

ಬರೀ ಒಂದು ಟ್ವೀಟ್ನಿಂದ ದೇಶದ ವಿದೇಶಾಂಗ ಸಚಿವರನ್ನು ಸಂಪರ್ಕಿಸಬಹುದು ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದರು. ವಿದೇಶಗಳಲ್ಲಿದ್ದ ಭಾರತೀಯರು ಸಂಕಷ್ಟದ ಸಮಯದಲ್ಲಿ ಟ್ವೀಟ್ ಮೂಲಕ ಸುಷ್ಮಾ ನೆರವು ಪಡೆದು ಪಾರಾದ ಪ್ರಕರಣಗಳು ಅನೇಕ ಇವೆ. ಎಲ್ಲಿಯೇ ಇದ್ದರೂ ಒಂದು ಟ್ವೀಟ್ ನಮ್ಮನ್ನು ರಕ್ಷಿಸಬಹುದು ಎಂಬ ಸುರಕ್ಷತೆಯ ಭಾವನೆಯನ್ನು ಜನರಲ್ಲಿ ಮೂಡಿಸಿದ್ದು ಸುಷ್ಮಾರ ಬಹುದೊಡ್ಡ ಕೊಡುಗೆ. ಬಳಿಕ ಅನೇಕ ಸಚಿವರು ಈ ಮಾದರಿಯನ್ನು ಅನುಕರಿಸಿದ್ದಾರೆ. ಆರೋಗ್ಯ ಹದಗೆಟ್ಟು ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವಾಗಲೂ ನೆರವು ಕೋರಿ ಬಂದ ಟ್ವೀಟ್‌ಗೆ ತಕ್ಷಣ ಪ್ರತಿಸ್ಪಂದಿಸುವಷ್ಟು ಬದ್ಧತೆ ಅವರು ಹೊಂದಿದ್ದರು.

ನರೇಂದ್ರ ಮೋದಿ ಸರಕಾರದ ವಿದೇಶಾಂಗ ನೀತಿಗಳನ್ನು ಯಶಸ್ವಿಯಾಗಿ ಅನುಷ್ಠಾನಿಸಿದ ಹಿರಿಮೆ ಅವರಿಗೆ ಸಲ್ಲಬೇಕು. ಸರ್ಜಿಕಲ್ ಸ್ಟ್ರೈಕ್‌, ಬಾಲಾಕೋಟ್ ದಾಳಿ, ಡೋಕ್ಲಾಂ ಬಿಕ್ಕಟ್ಟು ಮತ್ತಿತರ ಕಠಿಣ ಸಂದರ್ಭಗಳಲ್ಲಿ ರಾಜತಾಂತ್ರಿಕತೆಯನ್ನು ಸಮರ್ಥವಾಗಿ ನಿಭಾಯಿಸಿದವರು ಅವರು. ಭಯೋತ್ಪಾದನೆ ಮತ್ತು ಮಾತುಕತೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ ಎಂಬುದನ್ನು ಪಾಕಿಸ್ಥಾನಕ್ಕೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟದ್ದು ಅವರ ರಾಜತಾಂತ್ರಿಕ ಕೌಶಲಕ್ಕೊಂದು ಉದಾಹರಣೆ.

ಪ್ರಾಯವಾಗಿ, ಅನಾರೋಗ್ಯ ಪೀಡಿತರಾಗಿ ಓಡಾಡಲೂ ಸಾಧ್ಯವಾಗ ದಿದ್ದರೂ ಅಧಿಕಾರ ಚಪಲ ಬಿಡದ ಅನೇಕ ರಾಜಕಾರಣಿಗಳನ್ನು ನೋಡುವಾಗ ಜನರಿಗೆ ಜುಗುಪ್ಸೆ ಉಂಟಾಗುತ್ತದೆ. ಆದರೆ ಸುಷ್ಮಾ ಈ ವಿಚಾರದಲ್ಲೂ ಮಾದರಿಯಾದರು. ಓರ್ವ ಯಶಸ್ವಿ ಸಚಿವೆಗೆ ಇನ್ನೊಂದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಕಷ್ಟವೇನೂ ಆಗಿರಲಿಲ್ಲ. ಓಡಾಡಲು ಸಾಧ್ಯವಾಗದಿದ್ದರೆ ಪಕ್ಷವೇ ಅವರನ್ನು ಗೆಲ್ಲಿಸುವ ಹೊಣೆಯನ್ನೂ ವಹಿಸಿಕೊಳ್ಳಲು ತಯಾರಿತ್ತು. ಆದರೆ ಸಾರ್ವಜನಿಕ ಬದುಕಿಗೆ ಪರಿಪೂರ್ಣ ನ್ಯಾಯ ಸಲ್ಲಿಸುವ ದೈಹಿಕ ಕ್ಷಮತೆ ತನ್ನಲ್ಲಿ ಇಲ್ಲ ಎಂದು ಅರಿವಾದ ಕೂಡಲೇ ಸುಷ್ಮಾ ಚುನಾವಣಾ ರಾಜಕೀಯದಿಂದ ಹಿಂದೆ ಸರಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇದ್ದ ಬಲವಾದ ಒತ್ತಡವನ್ನು ನಯವಾಗಿಯೇ ತಿರಸ್ಕರಿಸಿದರು. ಪ್ರಸ್ತುತ ರಾಜಕಾರಣದಲ್ಲಿ ಕಂಡುಬರುವ ವಿರಳ ನಿದರ್ಶನವಿದು. ದೇಶದ ಹೊಸ ಪೀಳಿಗೆಯ ರಾಜಕಾರಣಿಗಳಿಗೆ ಸುಷ್ಮಾ ಮಾದರಿಯಾಗುವ ವ್ಯಕ್ತಿತ್ವ. ಸುಷ್ಮಾ ಅಗಲಿಕೆಯಿಂದ ಶ್ರೇಷ್ಠ ರಾಜಕೀಯ ಪರಂಪರೆಯ ಕೊಂಡಿಯೊಂದು ಕಳಚಿಕೊಂಡಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ