ಕಪ್ಪುಹಣ ಹೆಚ್ಚಳ ಕಾರ್ಯತಂತ್ರ ಬದಲಾಗಲಿ

Team Udayavani, Jul 3, 2018, 8:27 AM IST

ಸ್ವಿಸ್‌ ಬ್ಯಾಂಕಿನಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ ಕಳೆದೊಂದು ವರ್ಷದಲ್ಲಿ ಶೇ.50 ಹೆಚ್ಚಳವಾಗಿದೆ ಎಂಬ ವರದಿ ದೇಶದ ಜನರಿಗೆ ಅಚ್ಚರಿಯುಂಟು ಮಾಡಿದ್ದರೆ, ಕೇಂದ್ರ ಸರಕಾರಕ್ಕೆ ತೀರಾ ಮುಜುಗರವುಂಟು ಮಾಡಿದೆ. 2017ರಲ್ಲಿ ಸ್ವಿಸ್‌ಬ್ಯಾಂಕಿನಲ್ಲಿ ಭಾರತೀಯರು ಜಮೆ ಮಾಡಿರುವ ಮೊತ್ತ 7000 ಕೋ. ರೂ.2016ರಲ್ಲಿ ಕಪ್ಪುಹಣದ ಮೊತ್ತ 4660 ಕೋ. ರೂ. ಇತ್ತು. ಒಂದೇ ವರ್ಷದಲ್ಲಿ ಈ ಮೊತ್ತ ಬಹುತೇಕ ಇಮ್ಮಡಿಯಾಗಿರುವುದು ಜನಸಾಮಾನ್ಯರ ಅಚ್ಚರಿಗೆ ಕಾರಣ. 

ಸ್ವಿಸ್‌ ಬ್ಯಾಂಕಿನಲ್ಲಿರುವ ಎಲ್ಲ ಕಪ್ಪುಹಣವನ್ನು ತರುವುದಾಗಿ 2014ರ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮೋದಿ ಸಾರಿದ್ದರು. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭರ್ಜರಿ ಗೆಲುವಿನಲ್ಲೂ ಕಪ್ಪುಹಣದ ವಿರುದ್ಧ ನೀಡಿದ್ದ ಹೇಳಿಕೆಗಳ ಪಾಲೂ ಇತ್ತು. ಅನಂತರ ಮೋದಿ ಸರಕಾರ ಕಪ್ಪುಹಣದ ವಿರುದ್ಧ ಹಲವು ಕಠಿನ ಕಾನೂನುಗಳನ್ನು ರಚಿಸಿ ಸಮರ ಸಾರಿದರೂ ಕಪ್ಪುಹಣದ ಹರಿವು ನಿಂತಿಲ್ಲ ಎನ್ನುವುದು ಸೋಜಿಗವೇ ಸರಿ. ಕಪ್ಪುಹಣ ತರುವುದು ಬಿಡಿ ಕನಿಷ್ಠ ಕಪ್ಪುಹಣ ದೇಶದಿಂದ ಹೊರಗೆ ಹೋಗುವುದನ್ನು ತಡೆಯುವುದಕ್ಕೂ ನಿಮ್ಮಿಂದ ಸಾಧ್ಯವಾಗಿಲ್ಲ ಎಂಬ ಲೇವಡಿಗೆ ಕೇಂದ್ರ ಸರಕಾರ ಗುರಿಯಾಗಿದೆ. 2019ರ ಲೋಕಸಭಾ ಚುನಾವಣೆಗೆ ತಯಾರಾಗುತ್ತಿರುವ ಹೊತ್ತಿಗೆ ಬಹಿರಂಗವಾಗಿರುವ ವರದಿ ಸರಕಾರಕ್ಕಾಗಿರುವ ಒಂದು ಹಿನ್ನಡೆಯೂ ಹೌದು. ಉಳಿದೆಲ್ಲ ದೇಶಗಳಿಂದ ಸ್ವಿಸ್‌ ಬ್ಯಾಂಕಿಗೆ ಹರಿದು ಹೋಗಿರುವ ಮೊತ್ತದಲ್ಲಿ ಶೇ. 3 ಏರಿಕೆಯಾಗಿದ್ದರೆ ಭಾರತದಿಂದ ಹೋಗಿರುವ ಮೊತ್ತದಲ್ಲಿ ಶೇ. 50 ಏರಿಕೆಯಾಗಿರುವುದು ಕಪ್ಪುಹಣದ ವಿರುದ್ಧದ ಹೋರಾಟದಲ್ಲಿ ನಾವು ಸಾಧಿಸಬೇಕಾದದ್ದೂ ಇನ್ನೂ ಬಹಳ ಇದೆ ಮತ್ತು ಹೋರಾಟದ ಕಾರ್ಯತಂತ್ರವೂ ಬದಲಾಗಬೇಕಿದೆ ಎನ್ನುವುದನ್ನು ತಿಳಿಸುತ್ತದೆ. 

ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಸಮರ ಎಂದು ಘೋಷಿಸಿ ಮಾಡಿದ್ದ ನೋಟು ರದ್ದು ಕ್ರಮವೂ ಕಪ್ಪುಹಣವನ್ನು ನಿಯಂತ್ರಿಸುವಲ್ಲಿ ವಿಫ‌ಲವಾಗಿದೆ ಎಂಬ ಕಹಿಸತ್ಯವನ್ನು ಕೇಂದ್ರ ಒಪ್ಪಿಕೊಳ್ಳಲೇಬೇಕಾಗಿದೆ. ನೋಟು ರದ್ದು ಕಪ್ಪುಹಣದ ವಿರುದ್ಧ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಎಂದು ಸರಕಾರ ಹೇಳಿಕೊಂಡರೆ ಇದೀಗ ಇದಕ್ಕೆ ತದ್ವಿರುದ್ಧವಾಗಿರುವ ಬೆಳವಣಿಗೆ ಸಂಭವಿಸಿರುವುದು ಅಚ್ಚರಿ ಮೂಡಿಸುತ್ತಿದೆ.

ಹಾಗೇ ನೋಡಿದರೆ ನೋಟು ರದ್ದಾಗುವುದಕ್ಕಿಂತ ಮುಂಚೆ ಕಪ್ಪುಹಣದ ಪ್ರಮಾಣ ಇಳಿಕೆಯಾಗಿತ್ತು. 1987ರಲ್ಲಿ ಸ್ವಿಸ್‌ ಬ್ಯಾಂಕಿನಲ್ಲಿರುವ ಭಾರತೀಯರ ಕಪ್ಪುಹಣದ ಮೊತ್ತದಲ್ಲಿ ಇಳಿಕೆ ಕಂಡು ಬಂದಿತ್ತು. ಕಳೆದ ಒಂದು ದಶಕದಲ್ಲಿ ಕಪ್ಪುಹಣದ ಮೊತ್ತ ಕುಸಿತವಾಗುತ್ತಲೇ ಇತ್ತು. 2006ರಲ್ಲಿ ಭಾರತೀಯರ 23,000 ಕೋ. ರೂ. ಕಪ್ಪುಹಣವಿತ್ತು. ಈ ಮೊತ್ತಕ್ಕೆ ಹೋಲಿಸಿದರೆ 7,000 ಕಡಿಮೆಯಾಗಿದ್ದರೂ ಕಪ್ಪುಹಣದ ಮೊತ್ತದ ಏರಿಕೆ ಪ್ರಾರಂಭವಾಗಿರುವುದು ಮಾತ್ರ ಕಳವಳಕಾರಿ ವಿಚಾರ. 

ಸ್ವಿಸ್‌ ಬ್ಯಾಂಕಿನಲ್ಲಿರುವ ಎಲ್ಲ ಹಣ ಕಾಳಧನವಲ್ಲ. ಇದರಲ್ಲಿ ನಿಜವಾದ ವ್ಯಾಪಾರ, ವಹಿವಾಟಿನ ಹಣವೂ ಇರಬಹುದು ಎಂಬ ಸಚಿವ ಪಿಯೂಷ್‌ ಗೋಯಲ್‌ ಸಮರ್ಥನೆ ಮಾತ್ರ ಹಾಸ್ಯಾಸ್ಪದ. ಅಂತೆಯೇ ಹಿಂದಿನ ವಿತ್ತ ಸಚಿವ ಪಿ. ಚಿದಂಬರಂ ಪ್ರಾರಂಭಿಸಿದ ಉದಾರ ವರ್ಗಾವಣೆ ನೀತಿ ಯಿಂದಾಗಿ ಕಪ್ಪುಹಣ ಹರಿದು ಹೋಗುತ್ತಿದೆ ಎಂಬಂತಹ ಸಬೂಬುಗಳನ್ನು ತೋರಿಸುವುದನ್ನು ಬಿಟ್ಟು ಎಲ್ಲಿ ಲೋಪವಾಗಿದೆ ಎನ್ನುವುದರತ್ತ ಗಮನಹರಿಸಿ ಕ್ರಮಕೈಗೊಳ್ಳಲು ಇದು ಸಕಾಲ. ಈ ನಿಟ್ಟಿನಲ್ಲಿ ವರದಿಯನ್ನು ಒಂದು ಎಚ್ಚರಿಕೆಯ ಗಂಟೆ ಎಂಬಂತೆ ಪರಿಗಣಿಸಬೇಕು. ಪ್ರತಿಯೊಂದಕ್ಕೂ ಹಿಂದಿನ ಸರಕಾರವನ್ನು ದೂಷಿಸುತ್ತಾ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು ವಿವೇಕವಲ್ಲ ಎನ್ನುವುದನ್ನು ಸರಕಾರ ನಡೆಸುವವರು ಅರ್ಥ ಮಾಡಿಕೊಳ್ಳಬೇಕು. ಹಾಗೆಂದು ಕಪ್ಪುಹಣದ ವಿರುದ್ಧ ಸರಕಾರ ಕೈ ಗೊಂಡಿರುವ ಕ್ರಮಗಳೆಲ್ಲ ವಿಫ‌ಲಗೊಂಡಿವೆ ಎನ್ನುವಂತಿಲ್ಲ. ಕಪ್ಪುಹಣ ಸ್ವಯಂ ಘೋಷಿಸುವ ಯೋಜನೆಯೊಂದರಿಂದಲೇ ಸುಮಾರು 65,000 ಕೋ. ರೂ. ವಸೂಲಾಗಿದೆ. ಅಂತೆಯೇ ಕಪ್ಪುಹಣದ ವಿರುದ್ಧ ಸರಕಾರ ನಡೆಸುತ್ತಿರುವ ಹೋರಾಟದ ಪ್ರಾಮಾಣಿಕತೆಯನ್ನೂ ಶಂಕಿಸುವಂತಿಲ್ಲ. ಆದರೆ ಸತತ ಪ್ರಯತ್ನಗಳ ಹೊರತಾಗಿಯೂ ಕಪ್ಪುಹಣದ ಹರಿವು ನಿಂತಿಲ್ಲ ಎಂದಾದರೆ ಇದರ ಮೂಲವನ್ನು ಪತ್ತೆ ಹಚ್ಚುವಲ್ಲಿ ಇನ್ನಷ್ಟು ಸಾಧನೆ ಆಗಬೇಕು ಎಂದು ಅರ್ಥ. ಕಪ್ಪುಹಣದ ಉತ್ಪತ್ತಿ ಮತ್ತು ಹರಿವಿನ ಮೂಲವನ್ನು ಕಂಡುಕೊಳ್ಳುವ ತನಕ ಈ ಪಿಡುಗನ್ನು ಸಂಪೂರ್ಣವಾಗಿ ಮೂಲೋತ್ಪಾಟನೆ ಮಾಡುವುದು ಅಸಾಧ್ಯ. ಈ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಕಪ್ಪುಹಣ ವಿಪುಲವಾಗಿ ಸೃಷ್ಟಿಯಾಗುತ್ತಿರುವ ವಲಯಗಳನ್ನು ಕೇಂದ್ರೀಕರಿಸಿಕೊಂಡ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳುವುದು ತೀರಾ ಅಗತ್ಯ ಮತ್ತು ಈಗಿನ ತುರ್ತು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಟ್ರಂಪ್‌ ಭೇಟಿಯ ವೇಳೆಯಲ್ಲೇ, ಸಿಎಎ-ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯು ಏಕಾಏಕಿ ಹಿಂಸಾಚಾರಕ್ಕೆ ತಿರುಗಿರುವುದರ...

  • ಪ್ರಸ್ತುತ 18 ವರ್ಷ ಪ್ರಾಯವಾದವರು ಸಿಗರೇಟು ಅಥವಾ ಬೇರೆ ಯಾವುದೇ ತಂಬಾಕು ಉತ್ಪನ್ನಗಳನ್ನು ಅಂಗಡಿಯಿಂದ ಖರೀದಿಸಿ ಸೇವಿಸಬಹುದು. ಈ ವಯೋಮಿತಿಯನ್ನು 21 ವರ್ಷಕ್ಕೇರಿಸಿ...

  • ರಾಜತಾಂತ್ರಿಕವಾಗಿ ಮಾತ್ರವಲ್ಲದೆ ವೈಯಕ್ತಿಕವಾಗಿಯೂ ಮೋದಿ ಮತ್ತು ಟ್ರಂಪ್‌ ನಡುವೆ ಆತ್ಮೀಯತೆಯ ಸೆಲೆಯೊಂದು ಇದೆ. ಇದು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಗುಣಾತ್ಮಕವಾದ...

  • ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆಗಳಲ್ಲಿ ಅನೇಕ ಬಾರಿ ಪಾಕ್‌ ಪರವಾದ ಘೋಷಣೆ, ಪಾಕ್‌ ಗುಣಗಾನಗಳು ನಡೆದಿರುವುದು ಪ್ರತಿಭಟನೆಯ ನೈಜ ಉದ್ದೇಶವನ್ನು ಪ್ರಶ್ನಿಸುವಂತೆ...

  • ಹಲವು ಪ್ರಮುಖ ಪ್ರಕರಣಗಳನ್ನು ತನಿಖೆ ನಡೆಸಿದ ಪೊಲೀಸ್‌ ಅಧಿಕಾರಿ ರಾಕೇಶ್‌ ಮಾರಿಯಾ ಅವರ ದಕ್ಷತೆ ಬಗ್ಗೆ ಯಾರೂ ಅನುಮಾನ ಪಡುವಂತಿಲ್ಲ. ಭಯೋತ್ಪಾದನಾ ಪ್ರಕರಣಗಳ...

ಹೊಸ ಸೇರ್ಪಡೆ