ನೆಲವ ಫ‌ಲವತ್ತಾಗಿಸುವ ಗುರಿ ಸ್ವಾಗತಾರ್ಹ ನಿರ್ಧಾರ

Team Udayavani, Sep 11, 2019, 5:03 AM IST

ಬಂಜರು ಭೂಮಿಯನ್ನು ಫ‌ಲವತ್ತಾಗಿಸುವ ಭಾರತದ ಗುರಿಯನ್ನು ಹೆಚ್ಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಬಂಜರು ತಡೆಗೆ ವಿಶ್ವಸಂಸ್ಥೆಯ ಸಮಿತಿಯ (ಯುಎನ್‌ಸಿಸಿಡಿ) 14 ದೇಶಗಳ ಸದಸ್ಯರನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಪ್ರಧಾನಿ ಮೋದಿಯವರು, ಸದ್ಯ 2.1 ಲಕ್ಷ ಹೆಕ್ಟೇರ್‌ ಭೂಮಿಯನ್ನು ಫ‌ಲವತ್ತಾಗಿಸುವ ಗುರಿಯಿದ್ದು, 2030ರ ವೇಳೆಗೆ 2.6 ಲಕ್ಷ ಹೆಕ್ಟೇರ್‌ ಭೂಮಿಯನ್ನು ಪುನಶ್ಚೇತನಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಪರಿಯಾವರಣ ರಕ್ಷಣೆಯ ವಿಚಾರದಲ್ಲಿ ಪ್ರಧಾನಮಂತ್ರಿಯವರ ಸಂಕಲ್ಪವು ಶುಭ ಸಂಕೇತ. ಈ ಸಂಕಲ್ಪವು ಸರ್ಕಾರದ ನೀತಿಗಳಲ್ಲಿ ಇನ್ನಷ್ಟು ಪ್ರಖರ ರೂಪದಲ್ಲಿ ಕಾಣಿಸಿಕೊಳ್ಳಲಿ ಎನ್ನುವುದೇ ಎಲ್ಲರ ನಿರೀಕ್ಷೆ. ಬಂಜರು ಭೂಮಿಯನ್ನು ಫ‌ಲವತ್ತಾಗಿಸುವುದು ಇಡೀ ಜಗತ್ತನ್ನೇ ಕಾಡುತ್ತಿರುವ ಬಹುದೊಡ್ಡ ಸವಾಲು. ಬಂಜರು ಭೂಮಿಯ ಹೆಚ್ಚಳವನ್ನು ಈಗ ಪ್ರಾಕೃತಿಕ ವಿಪತ್ತು ಎಂದೇ ನೋಡಲಾಗುತ್ತದೆ.

ಸಾಮಾನ್ಯವಾಗಿ ಆರ್ಥಿಕ ಗತಿವಿಧಿಗಳ ಕುರಿತು ಚರ್ಚೆ ನಡೆಯುವಾಗ ಮತ್ತು ಅಂಕಿ-ಅಂಶದ ಆಧಾರದ ಮೇಲೆ ಬೆಳವಣಿಗೆ/ ವಿಕಾಸದ ವೇಗವನ್ನು ಅಂದಾಜು ಹಾಕುವಾಗ, ಭೂಮಿಯು ಬಂಜರಾಗುವುದು ಮತ್ತು ತತ್ಪರಿಣಾಮವಾಗಿ ಉಂಟಾಗುವ ಸಮಸ್ಯೆಗಳನ್ನು ಮರೆಯಲಾಗು ತ್ತದೆ. ಆದರೆ, ಸತ್ಯವೇನೆಂದರೆ ಧಾನ್ಯದ ಉತ್ಪಾದನೆಯಿಂದ ಹಿಡಿದು, ನೀರು ಮತ್ತು ಮರಗಿಡಗಳ ಸಂರಕ್ಷಣೆಯು ಕೂಡ ಆರ್ಥಿಕ ಚಕ್ರದ ಜತೆಗೆ ಅವಿನಾಭಾವ ನಂಟು ಹೊಂದಿದೆ. ಈ ಕಾರಣಕ್ಕಾಗಿಯೇ, ದೇಶದ ಆರ್ಥಿಕ ಶ್ರೇಯೋಭಿವೃದ್ಧಿಯ ಮಾತನಾಡುವಾಗ ಬಂಜರು ನೆಲದ ಸಮಸ್ಯೆಯೂ ಚರ್ಚೆಯಾಗಲೇಬೇಕು.

ಪ್ರಧಾನಿ ಮೋದಿಯವರ ಘೋಷಣೆಯಂತೆ ಪ್ರಯತ್ನಗಳು ಯಶಸ್ವಿಯಾಗಿ ಸಾಗಲೇಬೇಕಿದೆ. ಇದು ದೇಶದಲ್ಲಿ ಭೂಮಿಯ ಉತ್ಪಾದಕತೆಯ ದೃಷ್ಟಿಯಿಂದಷ್ಟೇ ಅಲ್ಲದೇ ಹವಾಮಾನ ಬದಲಾವಣೆ, ಜೈವಿಕ ವೈವಿಧ್ಯತೆ ಎದುರಿಸುತ್ತಿರುವ ಅಪಾಯ ಮತ್ತು ಮಣ್ಣಿನ ಸವೆತದಂಥ ಪ್ರಮುಖ ಸಮಸ್ಯೆಗಳನ್ನು ಎದುರಿಸುವ ವಿಚಾರದಲ್ಲೂ ಪ್ರಮುಖ ಪಾತ್ರ ವಹಿಸಬಲ್ಲದು. ಮತ್ತೂಂದೆಡೆ ಪ್ರಮುಖ ಸಮಸ್ಯೆಯೇನೆಂದರೆ ಕಳೆದ ಕೆಲವು ವರ್ಷಗಳಿಂದ ವಿಪರೀತವಾಗುತ್ತಿರುವ ಪ್ಲಾಸ್ಟಿಕ್‌ ಬಳಕೆಯೂ ಒಳ್ಳೆಯ ಮಣ್ಣನ್ನೂ ಅಜಮಾಸು ಬಂಜರಾಗಿಸುತ್ತಿದೆ. ಈ ವಿಷಯವಾಗಿಯೂ ಸಮ್ಮೇಳನದಲ್ಲಿ ಪ್ರಧಾನಮಂತ್ರಿಗಳು ಚಿಂತೆ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ವಿರುದ್ಧದ ಸಮರವೂ ಮುಖ್ಯವಾಗುತ್ತದೆ.

ಸುಮಾರು ಎರಡು ವರ್ಷಗಳ ಹಿಂದೆ ಬಂದ ಒಂದು ಅಧ್ಯಯನ ವರದಿಯ ಪ್ರಕಾರ ಭಾರತದ ಅಜಮಾಸು 30 ಪ್ರತಿಶತ ಜಮೀನು ಹಾಳಾಗುವ ಅಥವಾ ಬಂಜರಾಗುವ ಹಂತದಲ್ಲಿದೆ. ಅಂದರೆ ಈ ವಿಚಾರದಲ್ಲಿ ಈಗಲೇ ತ್ವರಿತ ಕ್ರಮಗಳನ್ನು ಕೈಗೊಳ್ಳದೇ ಹೋದರೆ, ಮುಂದೆ ಇದೇ ವಿಷಯ ದೇಶಕ್ಕೆ ಬಹುದೊಡ್ಡ ಸಂಕಟವಾಗಿ ಮಾರ್ಪಡುತ್ತದೆ. ದೇಶಾದ್ಯಂತ ಅರಣ್ಯ ಪ್ರದೇಶಗಳ ಮಹತ್ವವನ್ನು ಕಡೆಗಣಿಸಿ ಅಭಿವೃದ್ಧಿಯ ಹೆಸರಲ್ಲಿ ನಡೆಯುತ್ತಿರುವ ಮರಗಳ ಮಾರಣಹೋಮ ನಿಲ್ಲಲೇಬೇಕಿದೆ. ವೇಗದ ನಗರೀಕರಣದಿಂದಾಗಿ ನಗರಗಳ ಸುತ್ತಮುತ್ತಲಿನ ಕೃಷಿ ಭೂಮಿಗಳೂ ಈಗ ಕಾಂಕ್ರೀಟ್ ಕಾಡುಗಳಾಗುತ್ತಿವೆ. ಹಲವೆಡೆ, ಹೊಸ ಕಾಲನಿಗಳನ್ನು ಸೃಷ್ಟಿಸುವುದಕ್ಕಾಗಿ ಕೆರೆಗಳನ್ನು ಮುಚ್ಚಿಹಾಕಲಾಗುತ್ತಿದೆ. ಇದಕ್ಕೆ ಬೆಂಗಳೂರಿಗಿಂತ ಮತ್ತೂಂದು ಉದಾಹರಣೆ ಬೇಕಿಲ್ಲ.

ಭಾರತ ನಿಜಕ್ಕೂ ಬಂಜರು ಭೂಮಿಯ ವಿಸ್ತರಣೆಯನ್ನು ತಡೆಯುವ ವಿಚಾರದಲ್ಲಿ ಪಣತೊಟ್ಟಿದೆ ಎಂದರೆ ಮೊದಲು ನಿರ್ಮಾಣ ಕ್ಷೇತ್ರವನ್ನು ನಿಯಂತ್ರಿಸಲೇಬೇಕಿದೆ. ಆದರೆ ಈ ಕೆಲಸ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಾಗುವಂಥದ್ದಲ್ಲ, ಅಭಿವೃದ್ಧಿಯೆಡೆಗಿನ ಸಮಾಜದ ದೃಷ್ಟಿಕೋನದಲ್ಲೂ ಬದಲಾವಣೆಯಾದಾಗ ಮಾತ್ರ ಇದು ಸಾಧ್ಯವಾಗುತ್ತದೆ. ನೆಲವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯೂ ಹೌದು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಸೈದ್ಧಾಂತಿಕ‌ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಪರಸ್ಪರರ ಮೇಲೆ ಗೌರವ ಮತ್ತು ಆತ್ಮೀಯ ಭಾವನೆ ಇರುವುದು ಆರೋಗ್ಯಕರ ರಾಜಕೀಯದ ಲಕ್ಷಣ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ...

  • ಇನ್ನೂ ಬೆಳೆಯುತ್ತಿರುವ ಪ್ರಜಾತಂತ್ರ ವ್ಯವಸ್ಥೆಗೆ ದ್ವಿಪಕ್ಷೀಯ ಪದ್ಧತಿ ಸ್ವೀಕರಾರ್ಹ ಅಲ್ಲ. ಆದರೆ ಬಹುಪಕ್ಷೀಯ ಪದ್ಧತಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು...

  • ಜಮ್ಮು-ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನಿ ಸೇನೆಯ ನಡುವೆ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟು ಚಿಂತೆಯ ವಿಷಯವಾಗಿದೆ. ಅದರಲ್ಲೂ ಕಲಂ 370 ದಯಪಾಲಿಸಿದ್ದ ವಿಶೇಷಾಧಿಕಾರವನ್ನು...

  • ಹೂಸ್ಟನ್‌ ಕಾರ್ಯಕ್ರಮ ಪಾಕ್‌ ಹಾಗೂ ಚೀನಾಕ್ಕೊಂದು ಬಲವಾದ ಸಂದೇಶ ನೀಡುವುದು ಖಚಿತ. ಏನೇ ಮಾಡಿ ದರೂ ಜಾಗತಿಕ ವೇದಿಕೆಯಲ್ಲಿ ಭಾರತದ ಪಾರಮ್ಯವನ್ನು ತಡೆಯಲು ಸಾಧ್ಯವಿಲ್ಲ...

  • ಹಿಂದಿಯನ್ನು ರಾಷ್ಟ್ರೀಯ ಭಾವೈಕ್ಯದ ಭಾಷೆ ಮಾಡಬೇಕು ಎಂದಿರುವ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ಸಹಜವಾಗಿಯೇ ದಕ್ಷಿಣದ ರಾಜ್ಯಗಳಲ್ಲಿ ವಿವಾದದ ಕಿಡಿ ಎಬ್ಬಿಸಿದೆ....

ಹೊಸ ಸೇರ್ಪಡೆ