ಆದಾಯ ತೆರಿಗೆ ಇಲಾಖೆ ಸ್ವಾಯತ್ತೆಗೆೆ ಧಕ್ಕೆ ಆಗದಿರಲಿ

Team Udayavani, Apr 27, 2019, 11:55 AM IST

ಲೋಕಸಭೆ ಚುನಾವಣೆ ಶುರುವಾಗುತ್ತಿದ್ದಂತೆಯೇ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಧ್ಯಪ್ರದೇಶಗಳ ಹಲವೆಡೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ರಾಜಕೀಯ ಪಕ್ಷಗಳ ಜತೆಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದವರು ಎಂದು ಹೇಳಲಾಗಿರುವವರ ನಿವಾಸಗಳಿಗೆ ದಾಳಿ ನಡೆಸಿ ಅಕ್ರಮವಾಗಿ ಇತ್ತು ಎಂದು ನಂಬಲಾಗಿರುವ ದಾಖಲೆಗಳಿಲ್ಲದ ನಗದು ವಶಪಡಿಸಿಕೊಳ್ಳಲಾಗಿತ್ತು. ಪ್ರತಿಪಕ್ಷಗಳನ್ನು ಗುರಿಯಾಗಿರಿಸಿಕೊಂಡು ಇಂಥ ಕ್ರಮ ನಡೆಸಲಾಗುತ್ತಿದೆ ಎಂದು ಆರೋಪಗಳೂ ವ್ಯಕ್ತವಾದವು. ಇನ್ನು ತಮಿಳುನಾಡಿನ ವೆಲ್ಲೂರಿನಲ್ಲಿ ದಾಳಿಯಾಗಿ ದಾಖಲೆಗಳು ಇಲ್ಲಿಂದ ಕೋಟ್ಯಂತರ ರೂಪಾಯಿಗಳು, ಮದ್ಯ ಪತ್ತೆಯಾದ ಬಳಿಕ ಅಲ್ಲಿನ ಲೋಕಸಭೆ ಚುನಾವಣೆಯನ್ನೇ ರದ್ದು ಮಾಡಲಾಗಿತ್ತು.

ಮಧ್ಯಪ್ರದೇಶದ ಸಿಧಿಯಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ “ನರೇಂದ್ರ ಮೋದಿ ತಪ್ಪು ಮಾಡಿದ್ದು ಹೌದಾದರೆ, ಆದಾಯ ತೆರಿಗೆ ಇಲಾಖೆ ಅವರ ಮನೆಯ ಮೇಲೂ ದಾಳಿ ನಡೆಸಲಿ’ ಎಂದು ಹೇಳಿದ್ದಾರೆ. ಇತ್ತೀಚೆ ಗಷ್ಟೇ ಮಧ್ಯಪ್ರದೇಶದಲ್ಲಿ ನಡೆದಿದ್ದ ದಾಳಿ ಪ್ರಕರಣವನ್ನು ಉಲ್ಲೇಖೀಸಿ ಪ್ರಧಾನಿ ಈ ಮಾತು ಹೇಳಿದ್ದಾರಾದರೂ, ಭಾರಿ ಮಹತ್ವ ಪಡೆದಿದೆ.

ರಾಜ್ಯ, ಕೇಂದ್ರ ಸರ್ಕಾರಗಳ ಇಲಾಖೆಗಳು ಕಾನೂನಿನ ಅನ್ವಯವೇ ಕೆಲಸ ಮಾಡು ತ್ತವೆ. ಇತ್ತೀಚಿನ ಆದಾಯ ತೆರಿಗೆ ಇಲಾಖೆ ಕೈಗೊಂಡ ಕ್ರಮದಲ್ಲಿ ಯಾರೊಬ್ಬ ರಾಜಕೀಯ ಪಕ್ಷದ ಪ್ರಮುಖ ಮುಖಂಡರ ನಿವಾಸಗಳ ಮೇಲೆ ದಾಳಿ ನಡೆಸಲಾಗಿಲ್ಲ. ತಪ್ಪು ಎಸಗಿದವರ ಮೇಲೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳುವುದಕ್ಕೆ ಆಕ್ಷೇಪ ಮಾಡಲಾಗುತ್ತದೆ ಎಂದಾದರೆ, ವಿವಿಧ ತನಿಖಾ ಸಂಸ್ಥೆಗಳು ಕಾರ್ಯನಿರ್ವಹಿಸುವುದಾದರೂ ಹೇಗೆ?

ಕೆಲವೊಂದು ಪ್ರಕರಣಗಳಲ್ಲಿ ಯಾವುದೇ ಇಲಾಖೆ, ತನಿಖಾ ಸಂಸ್ಥೆಗಳು ಎಡವಿರಬಹುದು. ಹಾಗೆಂದು ಉದ್ದೇಶಪೂರ್ವಕವಾಗಿ ದಾಳಿ ಮಾಡುತ್ತಿವೆ ಎಂದು ಆರೋಪಿಸಿದರೆ ಹೇಗಾಗುತ್ತದೆ? ಶುಕ್ರವಾರ ಮಾತನಾಡಿದ ಅಂಶವನ್ನೇ ಪ್ರಧಾನಿ ನರೇಂದ್ರ ಮೋದಿಯವರು ಕೆಲ ದಿನಗಳ ಹಿಂದೆ ಸಂದರ್ಶನದಲ್ಲಿ ಉಲ್ಲೇಖೀಸಿದ್ದರು. ದಾಳಿಗಳು ಯಾವುದೇ ರಾಜಕೀಯ ಪ್ರತೀಕಾರಕ್ಕಾಗಿ ನಡೆಯುತ್ತಿಲ್ಲ. ನಿಯಮಗಳ ಅನ್ವಯವೇ ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದ್ದರು. ಹೀಗಾಗಿ, ದಾಳಿ ವಿಚಾರದಲ್ಲಿ ವ್ಯಕ್ತವಾಗುತ್ತಿರುವ ಆಕ್ಷೇಪಗಳ ಬಗ್ಗೆ ವಿಷಾದ ವ್ಯಕ್ತಪಡಿಸಬೇಕಾಗುತ್ತದೆ.
ಗುರುವಾರ ಕೂಡ ಮಹಾರಾಷ್ಟ್ರದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ 1.5 ಕೋಟಿ ರೂ. ನಗದು ವಶಪಡಿಸಿಕೊಂಡಿತ್ತು. ಏ.29ರಂದು ನಾಲ್ಕನೇ ಹಂತದ ಚುನಾವಣೆಗೆ ಪೂರಕವಾಗಿಯೇ ಈ ದಾಳಿ ನಡೆದಿದೆ.

ಹಿಂದಿನ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೂ ಕೂಡ ಆದಾಯ ತೆರಿಗೆ ಮತ್ತು ಇತರ ತನಿಖಾ ಸಂಸ್ಥೆಗಳು ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ನಗದು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಹಾಗಿದ್ದರೆ ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಪಕ್ಷಗಳು ಕೈಗೊಂಡಿದ್ದ ಕ್ರಮ ಸರಿಯೇ? ಈಗಿನದ್ದು ತಪ್ಪಾಗಿದೆಯೇ ಎಂಬ ಸಂದೇಹ ಮೂಡುತ್ತದೆ.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಕೂಡ ರಾಜಕೀಯ ನೇತಾರರನ್ನು ಗುರಿಯಾಗಿಸಿ ಕ್ರಮ ಕೈಗೊಳ್ಳಲಾಗುತ್ತಿಲ್ಲವೆಂದು ಪದೇ ಪದೆ ಸ್ಪಷ್ಟನೆಯನ್ನೂ ಕೊಟ್ಟಿತ್ತು. ನಿಗದಿತ ಸಂಸ್ಥೆಗಳಿಗೆ ಕೈಗೊಳ್ಳಬೇಕಾದ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಅವುಗಳು ಕೆಲಸ ನಿರ್ವಹಿಸುವುದಾದರೂ ಹೇಗೆ? ಹೀಗಾಗಿ, ಆಯಾ ಸಂಸ್ಥೆಗಳಿಗೆ ನಿಯಮಗಳ ಅನ್ವಯ ಕೆಲಸ ಮಾಡಲು ಅವಕಾಶಕೊಟ್ಟು, ನಿಜವಾಗಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದಲ್ಲಿ ಹೇಳಿದ ಮಾತುಗಳು ಸ್ತುತ್ಯರ್ಹವಾಗಿವೆ.


ಈ ವಿಭಾಗದಿಂದ ಇನ್ನಷ್ಟು

  • ಅತ್ಯಂತ ತುರುಸಿನಿಂದ ನಡೆದ ಲೋಕಸಭಾ ಚುನಾವಣೆಯ ಫ‌ಲಿತಾಂಶ ಇಂದು ಸಂಜೆಯ ಹೊತ್ತಿಗಾಗುವಾಗ ಲಭ್ಯವಾಗಲಿದೆ. ಮತ ಎಣಿಕೆಗಾಗಿ ವ್ಯಾಪಕ ತಯಾರಿ ನಡೆದಿದ್ದು ಪ್ರಪಂಚವೇ...

  • ಮತ ಎಣಿಕೆಯ ಹೊಸ್ತಿಲಲ್ಲಿ ಇರುವಾಗಲೇ ಇಪ್ಪತ್ತೂಂದು ರಾಜಕೀಯ ಪಕ್ಷಗಳು ಇವಿಎಂ ಬಗ್ಗೆ ತಗಾದೆ ಎತ್ತಿವೆ. ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಪ್ರತಿ ಲೋಕಸಭಾ ಕ್ಷೇತ್ರ...

  • ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ ನಿಜವಾದರೆ ಎನ್‌ಡಿಎ ಅಭೂತಪೂರ್ವ ಬಹುಮತದೊಂದಿಗೆ ಮರಳಿ ಅಧಿಕಾರಕ್ಕೇರಲಿದೆ. ಪ್ರಧಾನಿ ಯಾರು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ....

  • ಏಳನೇ ಸುತ್ತಿನ ಮತದಾನ ಪ್ರಕ್ರಿಯೆ ಮುಕ್ತಾಯವಾಗುವುದರೊಂದಿಗೆ ಸುದೀರ್ಘ‌ ಮೂರು ತಿಂಗಳ ಕಾಲ ನಡೆದ ಪ್ರಜಾತಂತ್ರದ ಹಬ್ಬ ಒಂದು ಮುಖ್ಯ ಭಾಗಕ್ಕೆ ಬಿದ್ದಂತಾಗಿದೆ....

  • ಈ ಬಾರಿಯೂ ಕೆಲವು ಐತಿಹಾಸಿಕ ಪುರುಷರ ಹೆಸರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿದೆ. ಈ ಪೈಕಿ ಮಹಾತ್ಮ ಗಾಂಧಿಯ ಹತ್ಯೆಯ ಕುರಿತಾಗಿ ಮಾಡಿದ ಪ್ರಸ್ತಾವ...

ಹೊಸ ಸೇರ್ಪಡೆ