ಸಯೀದ್‌ ಬಂಧನದ ನಾಟಕ

Team Udayavani, Jul 22, 2019, 5:01 AM IST

ಭಯೋತ್ಪಾದಕ ಹಾಫಿಜ್‌ ಸಯೀದ್‌ನನ್ನು ಪಾಕಿಸ್ಥಾನದ ಪೊಲೀಸರು ಕಳೆದ ವಾರ ಬಂಧಿಸಿ ಜೈಲಿಗಟ್ಟಿದ್ದಾರೆ. 2001ರಲ್ಲಿ ನಡೆದ ಸಂಸತ್‌ ಮೇಲಿನ ದಾಳಿಯ ಬಳಿಕ ಹಾಫಿಜ್‌ ಸೆರೆಯಾಗುತ್ತಿರುವುದು ಇದು 8ನೇ ಸಲ. ಅಂತೆಯೇ 2008ರಲ್ಲಿ ಮುಂಬಯಿ ನಗರದ ಮೇಲಾದ ಭಯೋತ್ಪಾದಕ ದಾಳಿಯ ಬಳಿಕ 6ನೇ ಸಲ. ಅಂತಾರಾಷ್ಟ್ರೀಯ ಒತ್ತಡ ಹೆಚ್ಚಾದಾಗಲೆಲ್ಲ ಉಗ್ರ ಮುಖಂಡರನ್ನು ಬಂಧಿಸುವುದು, ಬಳಿಕ ಅಲ್ಲಿನ ನ್ಯಾಯಾಲಯಗಳು ಸಮರ್ಪಕ ಸಾಕ್ಷ್ಯಾ ಧಾರವಿಲ್ಲ ಎಂದು ಬಿಡುಗಡೆ ಮಾಡುವುದು ನಡೆದುಕೊಂಡು ಬಂದಿದೆ. ಈ ಸಲವೂ ಪಾಕಿಸ್ಥಾನದಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವಂತಿಲ್ಲ.

ಸಯೀದ್‌ನನ್ನು ಅಮೆರಿಕ ಜಾಗತಿಕ ಉಗ್ರನೆಂದು ಘೋಷಿಸಿ, ಸುಳಿವು ನೀಡುವವರಿಗೆ 10 ಲಕ್ಷ ಡಾಲರ್‌ ಬಹುಮಾನ ಘೋಷಿಸಿದೆ. ಮುಂಬಯಿ ದಾಳಿ ಸೇರಿದಂತೆ ದೇಶದಲ್ಲಿ ನಡೆದಿರುವ ಹಲವು ದಾಳಿಗಳ ಸೂತ್ರಧಾರ ನಾಗಿರುವ ಸಯೀದ್‌ನನ್ನು ಹಸ್ತಾಂತರಿಸಬೇಕೆಂದು ಭಾರತ ಮಾಡಿದ್ದ ನೂರಾರು ಮನವಿಗಳಿಗೆ ಕಿವಿಗೊಡದ ಪಾಕ್‌ ಈಗ ದಿಢೀರ್‌ ಎಂದು ಅವನನ್ನು ಬಂಧಿಸಿರುವುದರ ಹಿಂದೆ ಜಾಗತಿಕ ಹಿತಕ್ಕಿಂತಲೂ ಸ್ವಹಿತದ ಪಾಲೇ ಹೆಚ್ಚಿದೆ.

ಅಂತಾರಾಷ್ಟ್ರೀಯ ಹಣಕಾಸು ಕಾರ್ಯಪಡೆ (ಎಫ್ಎಟಿಎಫ್) ಉಗ್ರರಿಗೆ ಹಣಕಾಸು ನೆರವು ನೀಡುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಪಾಕಿಗೆ ಎರಡು ಗಡುಗಳನ್ನು ವಿಧಿಸಿದೆ. ಜನವರಿ ಮತ್ತು ಮೇ ತಿಂಗಳ ಎರಡು ಗಡುಗಳಲ್ಲಿ ಪಾಕ್‌ ಈ ನಿಟ್ಟಿನಲ್ಲಿ ಏನನ್ನೂ ಸಾಧಿಸಿಲ್ಲ. ಹೀಗಾಗಿ 3ನೇ ತಥಾ ಬಹುತೇಕ ಕೊನೆಯ ಗಡುವನ್ನು ಅಕ್ಟೋಬರ್‌ನಲ್ಲಿ ವಿಧಿಸಲಿದೆ. ಈಗಾಗಲೇ ಎಫ್ಎಟಿಎಫ್ನ ಕಂದುಪಟ್ಟಿಯಲ್ಲಿರುವ ಪಾಕ್‌ ಮೂರನೇ ಗಡುವಿನ ಬಳಿಕ ಕಪ್ಪು ಪಟ್ಟಿಗೆ ಸೇರುವ ಸಾಧ್ಯತೆಯಿದೆ. ಕಪ್ಪು ಪಟ್ಟಿಗೆ ಸೇರ್ಪಡೆಯಾದರೆ ಜಾಗತಿಕ ಆರ್ಥಿಕ ನಿಷೇಧಕ್ಕೊಳಗಾಗಲಿದೆ. ಈಗಾಗಲೇ ದಿವಾಳಿಯಂಚಿನಲ್ಲಿರುವ ಪಾಕ್‌ ಈ ನಿಷೇಧವನ್ನು ತಾಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯದ ಕಣ್ಣಿಗೆ ಮಣ್ಣೆರಚುವ ಉದ್ದೇಶದಿಂದ ಸಯೀದ್‌ನನ್ನು ಬಂಧಿಸುವ ನಾಟಕವಾಡಿದೆ. ಇನ್ನು ಸಯೀದ್‌ ಬಂಧನಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್‌ ನೀಡಿದ ಪ್ರತಿಕ್ರಿಯೆಯಂತೂ ಹಾಸ್ಯಾಸ್ಪದ. 10 ವರ್ಷಗಳ ನಿರಂತರ ಹುಡುಕಾಟದ ಬಳಿಕ ಮುಂಬಯಿ ದಾಳಿಯ ಸೂತ್ರಧಾರ ಎನ್ನಲಾದ ಸಯೀದ್‌ನನ್ನು ಪಾಕಿಸ್ಥಾನ ಬಂಧಿಸಿದೆ. ಅವನನ್ನು ಪತ್ತೆಹಚ್ಚಲು ಕಳೆದೆರಡು ವರ್ಷಗಳಲ್ಲಿ ಭಾರೀ ಒತ್ತಡ ಹಾಕಿದ್ದೆವು ಎಂದು ಟ್ವೀಟ್ ಮಾಡಿದ್ದಾರೆ ಟ್ರಂಪ್‌. ಸಯೀದ್‌ನನ್ನು ಹುಡುಕುವ ಅಗತ್ಯವೇ ಇರಲಿಲ್ಲ. ಅವನು ಪಾಕಿಸ್ಥಾನದಲ್ಲಿ ಮುಕ್ತವಾಗಿ ಓಡಾಡಿಕೊಂಡು ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದ. ಟಿವಿ ವಾಹಿನಿಗಳ ಚರ್ಚೆಗಳಲ್ಲಿ ಭಾಗವಹಿಸಿ ಕಾಶ್ಮೀರಕ್ಕಾಗಿ ಭಾರತದ ಮೇಲೆ ಜೆಹಾದ್‌ ಮಾಡಿ ಎಂದು ಕರೆಕೊಡುತ್ತಿದ್ದ. ಶುಕ್ರವಾರದ ಪ್ರಾರ್ಥನೆ ಬಳಿಕ ಅವನ ಒಂದು ಸಾರ್ವಜನಿಕ ಸಭೆ ಇದ್ದೇ ಇರುತ್ತಿತ್ತು. ಪಾಕ್‌ ಪೊಲೀಸರೇ ಅವನಿಗೆ ರಕ್ಷಣೆ ನೀಡುತ್ತಿದ್ದರು. ಇಂಥವನನ್ನು ನಿರಂತರವಾಗಿ 10 ವರ್ಷ ಹುಡುಕಿದ್ದೇವೆ ಎಂದಿರುವುದು ಹಾಸ್ಯಾಸ್ಪದ ಹೇಳಿಕೆಯಲ್ಲವೇ? ‘ಸೂತ್ರಧಾರ ಎನ್ನಲಾದ’ ಎಂಬುದರ ಅರ್ಥವೇನು? ಅಮೆರಿಕ ಯಾವ ರೀತಿ ಯಲ್ಲಿ ಪಾಕ್‌ ಮೇಲೆ ಒತ್ತಡ ಹಾಕಿತ್ತು ಎನ್ನುವುದಕ್ಕೆಗಳಿಗೆ ಅಮೆರಿಕವೇ ಉತ್ತರಿಸಬೇಕು.

ಮೇಲ್ನೋಟಕ್ಕೆ ಸಯೀದ್‌ ಬಂಧನ ಅಮೆರಿಕ ಮತ್ತು ಪಾಕ್‌ ಸೇರಿ ರಚಿಸಿದ ನಾಟಕದ ಸ್ಕ್ರಿಪ್ಟ್ನಂತೆ ಕಾಣಿಸುತ್ತದೆ. ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಸದ್ಯದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸುವ ಸಲುವಾಗಿ ಬಂಧನದ ನಾಟಕವಾಡಲಾಗಿದೆ ಎಂಬ ಅನುಮಾನ ಆರಂಭದಿಂದಲೇ ಇತ್ತು. ಭಾರತ ಸಾವಿರಾರು ಪುಟಗಳ ಸಾಕ್ಷ್ಯಾದಾರಗಳನ್ನು ನೀಡಿದರೂ ಸರಿಯಾದ ಪುರಾವೆಗಳು ಇಲ್ಲ ಎನ್ನುತ್ತಿದ್ದ ಪಾಕಿಸ್ಥಾನಕ್ಕೆ ದಿಢೀರಾಗಿ ಪುರಾವೆಗಳು ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಈಗ ಸಹಜವಾಗಿಯೇ ಉದ್ಭವವಾಗುತ್ತದೆ. ಪಾಕ್‌ ನ್ಯಾಯಾಲಯ ಸಯೀದ್‌ ವಿರುದ್ಧ ತೀರ್ಪು ನೀಡೀತು ಎಂಬ ಯಾವ ಭರವಸೆಯೂ ಇಲ್ಲ. ಸಯೀದ್‌ನಿಂದ ಪಾಕಿಸ್ಥಾನದ ಭದ್ರತೆಗೆ ಯಾವುದೇ ಅಪಾಯವಿಲ್ಲ ಮತ್ತು ಅವನು ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆಗಳಲ್ಲಿ ಶಾಮೀಲಾಗಿರುವುದು ಸಾಬೀತಾಗಿಲ್ಲ ಎಂಬ ವಾದವನ್ನೇ ಅಲ್ಲಿನ ನ್ಯಾಯಾಲಯಗಳು ಇಷ್ಟರತನಕ ಎತ್ತಿಹಿಡಿದಿವೆ. ಹೀಗಾಗಿ ಈ ಬಂಧನ ದೀರ್ಘ‌ಕಾಲ ಮುಂದುವರಿಯಲಿದೆ ಎನ್ನುವಂತಿಲ್ಲ. ಹಾಗೊಂದು ವೇಳೆ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಪಾಕ್‌ಗೆ ಯಾವುದಾದರೂ ಬದ್ಧತೆ ಇರುವುದೇ ಆಗಿದ್ದರೆ ಭಾರತ ಇಷ್ಟರ ತನಕ ಕೊಟ್ಟಿರುವ ಸಾಕ್ಷ್ಯಾಧಾರಗಳೇ ಧಾರಾಳ ಸಾಕು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ