ಈ ಸಾವು ನ್ಯಾಯವಲ್ಲ

ಮಿದುಳು ಜ್ವರಕ್ಕೆ ಮಕ್ಕಳ ಬಲಿ

Team Udayavani, Jun 20, 2019, 5:08 AM IST

ಬಿಹಾರದ ಮುಜಫ‌್ಫರಪುರದಲ್ಲಿ ಮಿದುಳು ಜ್ವರಕ್ಕೆ ಒಂದು ವಾರದಲ್ಲಿ 125ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿರುವುದು ದೇಶ ತಲೆ ತಗ್ಗಿಸಬೇಕಾದ ಘಟನೆ. ದೇಶ ಸ್ವತಂತ್ರವಾಗಿ ಏಳು ದಶಕಗಳೇ ಕಳೆದಿದ್ದರೂ ಇನ್ನೂ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ನೀಡಲು ವಿಫ‌ಲವಾಗಿರುವುದು ನಮ್ಮ ಆಡಳಿತ ವ್ಯವಸ್ಥೆಯ ವೈಫ‌ಲ್ಯಕ್ಕೆ ಹಿಡಿದ ಕೈಗನ್ನಡಿ. ಆರಂಭದಲ್ಲಿ ಆರೋಗ್ಯ ಅಧಿಕಾರಿಗಳು ಮಕ್ಕಳ ಸಾವಿಗೆ ಉಷ್ಣ ಹವೆ, ಹೈಪೊಗ್ಲಿಸಿಮಿಯ (ರಕ್ತದಲ್ಲಿ ಸಕ್ಕರೆ ಅಂಶ ಹಠಾತ್‌ ಕಡಿಮೆಯಾಗುವುದು) ಮತ್ತು ಜನರ ಅರಿವಿನ ಕೊರತೆಯ ಕಾರಣ ಹೇಳಿದರು. ಆದರೆ ಕೊನೆಗೂ ಪೌಷ್ಟಿಕಾಂಶ ಕೊರತೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುಃಸ್ಥಿತಿಯೇ ಕಾರಣ ಎನ್ನುವುದನ್ನು ಅವರು ಒಪ್ಪಿಕೊಳ್ಳಬೇಕಾಯಿತು.

ಬೇಸಿಗೆಯಲ್ಲಿ ಮಕ್ಕಳನ್ನು ಮಿದುಳು ಜ್ವರ ಬಾಧಿಸುವುದು ಮುಜಫ‌್ಫರ ಪುರದಲ್ಲಿ ಮಾಮೂಲು ವಿಚಾರ. 1995ರಿಂದೀಚೆಗೆ ಈ ರೋಗ ಹಾವಳಿಯಿಡುತ್ತಿದೆ. ಕಳೆದೊಂದು ದಶಕದಲ್ಲಿ ಕನಿಷ್ಠ 1000 ಮಕ್ಕಳು ಈ ರೋಗಕ್ಕೆ ಬಲಿಯಾಗಿದ್ದಾರೆ. ಇಷ್ಟೆಲ್ಲ ಅಂಕಿಅಂಶ ಕಣ್ಣ ಮುಂದೆ ಇದ್ದರೂ ಕನಿಷ್ಠ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸುಸಜ್ಜಿತವಾಗಿಟ್ಟುಕೊಳ್ಳಲು ಕೂಡಾ ಸಾಧ್ಯವಾಗಿಲ್ಲ ಎನ್ನುವುದಾದರೆ ಇದಕ್ಕೆ ಆಡಳಿತ ವ್ಯವಸ್ಥೆಯನ್ನೇ ದೂರಬೇಕು.

ಬಿಹಾರದಲ್ಲಿ ವ್ಯಾಪಕವಾಗಿ ಬೆಳೆಯುವ ಲಿಚ್ಚಿ ಹಣ್ಣುಗಳನ್ನು ತಿಂದ ಪರಿಣಾಮವಾಗಿ ಮಕ್ಕಳು ರೋಗಕ್ಕೆ ತುತ್ತಾ ಗಿದ್ದಾರೆ ಎನ್ನಲಾಗಿದೆ. ಹಾಗೆಂದು ಹಣ್ಣಿನಲ್ಲಿ ಜ್ವರದ ವೈರಾಣು ಇರಲಿಲ್ಲ. ಹಸಿ ಲಿಚ್ಚಿ ಹಣ್ಣನ್ನು ತಿಂದರೆ ಮಕ್ಕಳ ರಕ್ತದಲ್ಲಿ ಸಕ್ಕರೆ ಅಂಶ ತ್ವರಿತವಾಗಿ ಕಡಿಮೆ ಯಾಗುತ್ತದೆ. ಇದಕ್ಕೆ ತಕ್ಷಣದ ಚಿಕಿತ್ಸೆಯೆಂದರೆ ಸಾಮಾನ್ಯ ಗ್ಲುಕೋಸ್‌ ನೀಡುವುದು. ಇಷ್ಟಕ್ಕೂ ಅಲ್ಲಿನ ಪ್ರಾಥಮಿಕ ಕೇಂದ್ರಗಳಲ್ಲಿ ಸೌಲಭ್ಯ ಇಲ್ಲ ಎನ್ನುವುದು ದುರಂತ. ಮಕ್ಕಳು ಹಸಿ ಲಿಚ್ಚಿ ಹಣ್ಣುಗಳನ್ನು ತಿನ್ನಲು ಕಾರಣ ಹಸಿವು. ವಿಷಯದ ಮೂಲ ಕೆದಕುತ್ತಾ ಹೋದರೆ ತಲುಪುವುದು ಬಡತನ, ಅದರ ಪರಿಣಾಮದಿಂದ ಬರುವ ಪೌಷ್ಟಿಕಾಂಶ ಕೊರತೆ ಹಾಗೂ ಮೂಲಭೂತ ವಿಚಾರಗಳತ್ತ. ಅರ್ಥಾತ್‌ ಬಿಹಾರ ದಂಥ ರಾಜ್ಯಗಳಲ್ಲಿ ಇನ್ನೂ ಬಡತನ ನಿರ್ಮೂಲನೆ ಎನ್ನುವುದು ಘೋಷಣೆ ಯಾಗಿಯೇ ಉಳಿದಿದೆ ಎಂಬ ವಾಸ್ತವವನ್ನು ಈ ಘಟನೆ ತೋರಿಸುತ್ತದೆ.

ಮಿದುಳು ಜ್ವರ ಹೆಚ್ಚಾಗಿ ಬಾಧಿಸುವುದು ಬಡ ಕುಟುಂಬಗಳ ಮಕ್ಕಳನ್ನು ಅಂದರೆ ಪೌಷ್ಟಿಕಾಂಶ ಕೊರತೆಯಿರುವ ಮಕ್ಕಳನ್ನು. ಈ ಹಿನ್ನೆಲೆಯಲ್ಲಿ ಸರಕಾರ ಈ ಜ್ವರದ ಹಾವಳಿಯಿರುವ ಪ್ರದೇಶಗಳಲ್ಲಿ ಪೌಷ್ಟಿಕಾಂಶ ವೃದ್ಧಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿತ್ತು. ಕಳೆದ ವರ್ಷ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಇದೇ ರೀತಿ ಮಿದುಳು ಜ್ವರಕ್ಕೆ ಸುಮಾರು 70 ಮಕ್ಕಳು ಬಲಿಯಾದ ಘಟನೆಗೆ ವ್ಯಾಪಕ ಖಂಡನೆ ಮತ್ತು ಟೀಕೆ ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡ ಅಲ್ಲಿನ ಸರಕಾರ ಪೌಷ್ಟಿಕಾಂಶ ಕೊರತೆ ವಿರುದ್ಧ ದಸ್ತಕ್‌ (ಬಾಗಿಲು ತಟ್ಟುವುದು) ಎಂಬ ಅಭಿಯಾನವನ್ನು ಪ್ರಾರಂಭಿಸಿದೆ.

ಆರೋಗ್ಯ, ಗ್ರಾಮೀಣ ಅಭಿವೃದ್ಧಿ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮನೆ ಮನೆಗೆ ಹೋಗಿ ಶುದ್ಧ ಕುಡಿಯುವ ನೀರು, ನೈರ್ಮಲ್ಯ, ಲಸಿಕೆ ಹಾಕಿಸುವುದು ಮತ್ತು ಜ್ವರದ ಲಕ್ಷಣ ಕಾಣಿಸಿದಾಗ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವೇ ದಸ್ತಕ್‌. ಇದರಿಂದಾಗಿ ಜನರಲ್ಲಿ ಮಿದುಳು ಜ್ವರದ ಬಗ್ಗೆ ಸಾಕಷ್ಟು ಅರಿವು ಮೂಡಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಕನಿಷ್ಠ ಪಕ್ಕದ ರಾಜ್ಯದ ಈ ಕಾರ್ಯಕ್ರಮವನ್ನಾದರೂ ಗಮನಿಸಿದ್ದರೆ ಅಮಾಯಕ ಮಕ್ಕಳ ಸಾವನ್ನು ತಪ್ಪಿಸಬಹುದಿತ್ತು. ಗಮನಿಸಬೇಕಾದ ಅಂಶ ಎಂದರೆ ಜನರ ಅರಿವಿನ ಕೊರತೆ ಮತ್ತು ಅಸಮರ್ಪಕ ಆರೋಗ್ಯ ಸೇವೆಯಿಂದಾಗಿ ಬಹುತೇಕ ರೋಗಗಳು ಉಲ್ಬಣಿಸುತ್ತವೆ. ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಒದಗಿಸುವುದು ಸರಕಾರಗಳ ಪ್ರಾಥಮಿಕ ಕರ್ತವ್ಯ. ಮುಜಫ‌್ಫರಪುರದ ಘಟನೆಯ ಹಿನ್ನೆಲೆಯಲ್ಲಿ ಹೇಳುವುದಾದರೆ ಈ ವಿಚಾರದಲ್ಲಿ ಬಿಹಾರ ಸರಕಾರ ವಿಫ‌ಲವಾದಂತಿದೆ. ಜಪಾನಿಸ್‌ ಎನ್ಸಫ‌ಲೈಟಿಸ್‌ ಮತ್ತು ಅಕ್ಯೂಟ್ ಎನ್ಸಫ‌ಲೈಟಿಸ್‌ ಸಿಂಡ್ರೋಮ್‌ ಎಂದು ಕರೆಯಲಾಗುವ ಮಕ್ಕಳನ್ನು ಬಾಧಿಸುವ ಮಿದುಳು ಜ್ವರವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರಕಾರ ಪ್ರಾಥಮಿಕ ಆರೋಗ್ಯ ಕಾರ್ಯಕರ್ತರು, ನರ್ಸ್‌ಗಳು, ಸಾಮಾಜಿಕ ಆರೋಗ್ಯ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನೊಳಗೊಂಡಿರುವ ವಿಶೇಷ ಕಾರ್ಯಕ್ರಮ ಪ್ರಾರಂಭಿಸಿದೆ. ಸಾಮಾನ್ಯವಾಗಿ ಮಿದುಳು ಜ್ವರ ಬಾಧಿಸುವ ಜೂನ್‌ನಿಂದ ಸೆಪ್ಟೆಂಬರ್‌ ನಡುವೆ ಮಿದುಳು ಜ್ವರ ಲಕ್ಷಣವಿರುವ ಮಕ್ಕಳಿವೆಯೇ ಎಂದು ಮನೆ ಮನೆಗೆ ಹೋಗಿ ಸರ್ವೇ ಮಾಡುವುದು ಇವರ ಕೆಲಸ. ಆದರೆ ಈ ಕಾರ್ಯಕ್ರಮವನ್ನು ಬಿಹಾರದಲ್ಲಿ ಇನ್ನೂ ಪ್ರಾರಂಭಿಸದೇ ಇರುವುದು ಸರಕಾರದ ನಿರ್ಲಕ್ಷ ್ಯ ಧೋರಣೆಯೇ ಸರಿ. ಮೊದಲಾಗಿ ಮಾಡಬೇಕಿರುವುದು ಮಿದುಳು ಜ್ವರದ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಸೈದ್ಧಾಂತಿಕ‌ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಪರಸ್ಪರರ ಮೇಲೆ ಗೌರವ ಮತ್ತು ಆತ್ಮೀಯ ಭಾವನೆ ಇರುವುದು ಆರೋಗ್ಯಕರ ರಾಜಕೀಯದ ಲಕ್ಷಣ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ...

  • ಇನ್ನೂ ಬೆಳೆಯುತ್ತಿರುವ ಪ್ರಜಾತಂತ್ರ ವ್ಯವಸ್ಥೆಗೆ ದ್ವಿಪಕ್ಷೀಯ ಪದ್ಧತಿ ಸ್ವೀಕರಾರ್ಹ ಅಲ್ಲ. ಆದರೆ ಬಹುಪಕ್ಷೀಯ ಪದ್ಧತಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು...

  • ಜಮ್ಮು-ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನಿ ಸೇನೆಯ ನಡುವೆ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟು ಚಿಂತೆಯ ವಿಷಯವಾಗಿದೆ. ಅದರಲ್ಲೂ ಕಲಂ 370 ದಯಪಾಲಿಸಿದ್ದ ವಿಶೇಷಾಧಿಕಾರವನ್ನು...

  • ಹೂಸ್ಟನ್‌ ಕಾರ್ಯಕ್ರಮ ಪಾಕ್‌ ಹಾಗೂ ಚೀನಾಕ್ಕೊಂದು ಬಲವಾದ ಸಂದೇಶ ನೀಡುವುದು ಖಚಿತ. ಏನೇ ಮಾಡಿ ದರೂ ಜಾಗತಿಕ ವೇದಿಕೆಯಲ್ಲಿ ಭಾರತದ ಪಾರಮ್ಯವನ್ನು ತಡೆಯಲು ಸಾಧ್ಯವಿಲ್ಲ...

  • ಹಿಂದಿಯನ್ನು ರಾಷ್ಟ್ರೀಯ ಭಾವೈಕ್ಯದ ಭಾಷೆ ಮಾಡಬೇಕು ಎಂದಿರುವ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ಸಹಜವಾಗಿಯೇ ದಕ್ಷಿಣದ ರಾಜ್ಯಗಳಲ್ಲಿ ವಿವಾದದ ಕಿಡಿ ಎಬ್ಬಿಸಿದೆ....

ಹೊಸ ಸೇರ್ಪಡೆ