ಚಿಕಿತ್ಸೆಯಲ್ಲಿ ಪಾರದರ್ಶಕತೆ ಸ್ಪಷ್ಟವಿರಲಿ ವೈದ್ಯರ ಕೈಬರಹ

Team Udayavani, Jul 10, 2019, 5:00 AM IST

ವೈದ್ಯರ ಅಕ್ಷರಗಳು ಸ್ಪಷ್ಟವಾಗಿ ಇರಬೇಕು ಎಂಬ ಆಗ್ರಹ ಕೇಳಿಬರುತ್ತಲೇ ಇರುತ್ತದೆ. ಕೇವಲ ಅಂಗಡಿಯವರಿಗೆ ಮಾತ್ರವಲ್ಲ, ರೋಗಿಗಳಿಗೆ ಮತ್ತು ಅವರ ಕುಟುಂಬದವರಿಗೂ ಸ್ಪಷ್ಟವಾಗಿ ಅರ್ಥಆಗುವಂತೆ ಇರಬೇಕು. ಇದರಿಂದಾಗಿ ಪಾರದರ್ಶಕತೆ ಬೆಳೆಯುತ್ತದೆ.

ನಮ್ಮ ದೇಶದಲ್ಲಿ ರೋಗ ಮತ್ತು ಚಿಕಿತ್ಸೆಯ ವಿಷಯದಲ್ಲಿ ಸಾಮಾನ್ಯ ಜನರಲ್ಲಿ ಜಾಗರೂಕತೆಯ ಸ್ತರ ಮೊದಲಿನಿಂದಲೂ ಕಡಿಮೆಯೇ ಇದೆ. ಬಹಳಷ್ಟು ಜನರು ಆರೋಗ್ಯ ಹದಗೆಟ್ಟ ಮೇಲೆಯೂ ವೈದ್ಯರ ಬಳಿ ಹೋಗದೇ, ವಿವಿಧ ರೀತಿಯ ಅಂದಾಜು ಹಾಕುತ್ತಾ, ಅಂತರ್ಜಾಲದಲ್ಲಿ ಕಾರಣಗಳನ್ನು ಹುಡುಕುತ್ತಾ ಸಮಯ ಹಾಳು ಮಾಡಿಕೊಳ್ಳುತ್ತಾರೆ. ಆಮೇಲೆ ವೈದ್ಯರ ಬಳಿ ತೆರಳಿದ ನಂತರ ರೋಗ ಪತ್ತೆಯಾಗುತ್ತದೆ.

ಇಲ್ಲಿ ಗಮನಿಸಲೇಬೇಕಾದ ಅಂಶವೆಂದರೆ, ವೈದ್ಯರು ರೋಗದ ಬಗ್ಗೆ, ತೆಗೆದುಕೊಳ್ಳ ಬೇಕಾದ ಔಷಧಿಗಳ ಬಗ್ಗೆ ಚೀಟಿ ಬರೆದುಕೊಡುತ್ತಾರಾದರೂ, ಬಹುತೇಕ ಸಂದರ್ಭಗಳಲ್ಲಿ ರೋಗಿಗಳಿಗೆ ಡಾಕ್ಟರ್‌ ಏನು ಬರೆದಿದ್ದಾರೆ ಎನ್ನುವುದು ತಿಳಿಯುವುದೇ ಇಲ್ಲ. ಇದಕ್ಕೆ ಮುಖ್ಯ ಕಾರಣ ವೈದ್ಯರ ಅಸ್ಪಷ್ಟ ಕೈಬರಹ. ಅನೇಕ ಬಾರಿ ಔಷದಧ ಅಂಗಡಿಗಳಲ್ಲಿ ಇರುವವರೂ ವೈದ್ಯರು ಏನು ಬರೆದಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳುವಲ್ಲಿ ಗೊಂದಲ ಗೊಳ್ಳುತ್ತಾರೆ. ದವಾಖಾನೆಯ ಬಳಿಯೇ ಇರುವ ಔಷಧದ ಅಂಗಡಿಯಾದರೆ ತೊಂದರೆ ಆಗದು. ಆದರೆ ಅಪ್ಪಿತಪ್ಪಿ ಜನರೇನಾದರೂ ಬೇರೆ ಮೆಡಿಕಲ್ ಶಾಪ್‌ಗಳಿಗೆ ಹೋದರೆಂದರೆ, ಗೊಂದಲ ಎದುರಾಗುವ ಸಾಧ್ಯತೆ ಅಧಿಕವಿರುತ್ತದೆ. ಇದರಿಂದಾಗಿ ಅನೇಕ ರೀತಿಯ ಸಮಸ್ಯೆಗಳು ಎದುರಾಗಬಹುದು, ಪರಿಣಾಮವನ್ನು ಎದುರಿಸಬೇಕಾದವರು ರೋಗಿಗಳೇ. ವೈದ್ಯರು ಏಕೆ ಹೀಗೆ ಬರೆಯುತ್ತಾರೆ ಎನ್ನುವ ಬಗ್ಗೆ ಹಲವು ಕಾರಣಗಳನ್ನು ನೀಡಲಾಗುತ್ತದೆ. ಆದರೆ ಹಾಗೆ ಬರೆಯುವುದು ಸರಿಯಲ್ಲ ಎಂದು ಖುದ್ದು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಕೂಡ ಅನೇಕ ಬಾರಿ ಹೇಳಿದೆ.

ಅನೇಕ ಕಡೆಗಳಲ್ಲಿ ಈಗ ವೈದ್ಯರು ರೋಗ ಲಕ್ಷಣಗಳ ವಿಚಾರದಲ್ಲಿ ಆಬ್ಸರ್ವೇಶನ್‌ಗಳನ್ನು ಬರೆದಿರುತ್ತಾರೆ. ಅವಕ್ಕಿಂತಲೂ ಮುಖ್ಯವಾಗಿ ಔಷಧ‌ ಪಟ್ಟಿ ಕೊಟ್ಟಿರುತ್ತಾರೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರೇನು ಬರೆದಿದ್ದಾರೆಂದು ಜನರಿಗೆ ತಿಳಿಯುವುದೇ ಇಲ್ಲ. ಈ ಕಾರಣಕ್ಕಾಗಿಯೇ, ಅಕ್ಷರಗಳು ಸ್ಪಷ್ಟವಾಗಿರಬೇಕು ಎಂಬ ಆಗ್ರಹ ಕೇಳಿಬರುತ್ತಲೇ ಇರುತ್ತದೆ. ಕೇವಲ ಕಾಂಪೌಂಡರ್‌ಗಳಿಗೆ, ಅಂಗಡಿಯವರಿಗೆ ಮಾತ್ರವಲ್ಲ, ರೋಗಿಗಳಿಗೆ ಮತ್ತು ಅವರ ಕುಟುಂಬದವರಿಗೂ ಸ್ಪಷ್ಟವಾಗಿ ಅರ್ಥವಾಗುವಂತೆ ಇರಬೇಕು. ಇದರಿಂದ ಒಂದು ರೀತಿಯ ಪಾರದರ್ಶಕತೆಯೂ ಇರುತ್ತದೆ. ಬಹುಶಃ ಈ ಕಾರಣಕ್ಕಾಗಿ, ಉತ್ತರಪ್ರದೇಶದ ಕಿಂಗ್‌ ಜಾರ್ಜ್‌ ವೈದ್ಯಕೀಯ ಯೂನಿವರ್ಸಿಟಿಯು ತನ್ನಲ್ಲಿ ಕೆಲಸ ಮಾಡುವ ಎಲ್ಲಾ ವೈದ್ಯರೂ ಓಷಧದ ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಬರೆಯಬೇಕೆಂದು ಆದೇಶಿಸಿದೆ. ಅಕ್ಷರಗಳು ಅಸ್ಪಷ್ಟವಾಗಿದ್ದರೆ, ಮುಂದೆ ಬೇರೆ ವೈದ್ಯರ ಬಳಿ ಹೋದಾಗ ಅವರಿಗೂ ಗೊಂದಲವಾಗುವ ಅಪಾಯವಿರುತ್ತದೆ ಎಂಬ ಬುದ್ಧಿಮಾತನ್ನೂ ವೈದ್ಯರಿಗೆ ಹೇಳಲಾಗಿದೆ.

ಆದಾಗ್ಯೂ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ನಿಯಮಗಳಲ್ಲಿ, ವೈದ್ಯರು ಸ್ಪಷ್ಟವಾಗಿ, ಕ್ಯಾಪಿಟಲ್ ಅಕ್ಷರಗಳಲ್ಲಿ ಔಷಧ ಮತ್ತು ಪರೀಕ್ಷೆಯ ವಿವರಗಳನ್ನು ಬರೆಯಬೇಕೆಂದು ಸ್ಪಷ್ಟಪಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಮಾನ್ಯತೆ ನೀಡುವ ಸಮಯದಲ್ಲೂ ಷರತ್ತುಗಳಲ್ಲಿ ಈ ಅಂಶ ಇರುತ್ತದೆ. ಖುದ್ದು ಸರ್ಕಾರಗಳೂ ಅನೇಕ ಬಾರಿ ಈ ವಿಷಯವಾಗಿ ಸ್ಪಷ್ಟ ನಿರ್ದೇಶನಜಾರಿಗೊಳಿಸಿವೆ. ಆದರೆ ಅನೇಕ ವೈದ್ಯರಿಗೇಕೋ ಈ ನಿಯಮಗಳ ಪಾಲನೆ ಅವಶ್ಯ ಎನಿಸುತ್ತಿಲ್ಲ.

ಮತ್ತೂಂದು ಅಂಶವೆಂದರೆ, ಕೆಲ ವೈದ್ಯರು ರೋಗಿಗಳಿಗೆ ಔಷಧಗಳನ್ನು ನಿರ್ದಿಷ್ಟ ಅಂಗಡಿಗಳಿಂದಲೇ ಖರೀದಿಸಬೇಕೆಂದು ಹೇಳುತ್ತಾರೆ. ಆ ಅಂಗಡಿಯವರು ಕ್ಷಣಮಾತ್ರದಲ್ಲಿ ಅಕ್ಷರಗಳನ್ನು ಅರ್ಥಮಾಡಿಕೊಂಡು ಔಷಧ ಕೊಟ್ಟುಬಿಡುತ್ತಾರೆ. ಈ ವಿಷಯವೂ ಅನೇಕ ರೋಗಿಗಳಿಗೆ, ಅವರ ಕುಟುಂಬದವರಿಗೆ ಕಿರಿಕಿರಿಯ ವಿಷಯವಾಗಿರುತ್ತದೆ. ಆ ಔಷಧಗಳು ಆ ಔಷಧಾಲಯವನ್ನು ಬಿಟ್ಟು ಬೇರೆ ಕಡೆ ಸಿಗುವುದೇ ಕಠಿಣವಾಗಿರುತ್ತದೆ. ಈ ವಿಷಯದಲ್ಲೂ ಸರ್ಕಾರ ಮತ್ತು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ, ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಬೇಕಾದ ಅಗತ್ಯವಿದೆ.

ಮೇಲ್ನೋಟಕ್ಕೆ ಕೈಬರಹದ ವಿಷಯ ಅಷ್ಟೇನೂ ಗಂಭೀರವಲ್ಲ ಎನಿಸಿದರೂ, ವೈದ್ಯರೆಡೆಗೆ ಜನರಿಗೆ ನಂಬಿಕೆ ಬೆಳೆಯುವುದಕ್ಕೆ, ಪಾರದರ್ಶಕತೆ ಬೆಳೆಯುವುದಕ್ಕೆ ಇಂಥ ಚಿಕ್ಕಪುಟ್ಟ ಬದಲಾವಣೆಗಳೂ ಅತ್ಯವಶ್ಯಕ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ