ಸೀದಾ ಸಾದಾ ಬಜೆಟ್

ಸಂಪಾದಕೀಯ, Jul 6, 2019, 5:23 AM IST

ನಿರ್ಮಲಾ ಸೀತಾರಾಮನ್‌ ಹೊಸದೇನನ್ನಾ ದರೂ ಕೊಡುತ್ತಾರೆ ಎಂಬ ನಿರೀಕ್ಷೆ ಬಜೆಟ್‌ನಲ್ಲಿ ಪೂರ್ತಿಯಾಗಿ ಈಡೇರಿಲ್ಲ. ಆದರೂ ತಕ್ಕಮಟ್ಟಿಗೆ ಬಡವರು, ಮಧ್ಯಮ ವರ್ಗದವರು ಮತ್ತು ಕಾರ್ಪೊರೇಟ್ ವಲಯ ಸೇರಿ ಎಲ್ಲರಿಗೂ ತಟ್ಟಬಲ್ಲಂಥ ಕೆಲವು ಪ್ರಸ್ತಾವಗಳೊಂದಿಗೆ ಸಂತುಲಿತವಾದ ಬಜೆಟ್ನ್ನು ಮಂಡಿಸಿದ್ದಾರೆ.

ಅಂಕಿಅಂಶಗಳ ಕಸರತ್ತಿಗೆ ಆದ್ಯತೆ ನೀಡದೆ ನೀತಿ ನಿರೂಪಣೆಗೆ ಒತ್ತು ಕೊಟ್ಟಂತೆ ಕಾಣಿಸು ತ್ತದೆ. ದೇಶ ಎದುರಿಸುತ್ತಿರುವ ಕೆಲ ಜ್ವಲಂತ ಸಮಸ್ಯೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸಚಿವರು ಮುಂಗಡಪತ್ರವನ್ನು ರೂಪಿಸಿದ್ದಾರೆ. ಒಟ್ಟಾರೆ ಇದು ಹೆಚ್ಚೇನೂ ಏರುಪೇರು ಮಾಡದ ‘ನಿರ್ಮಲ’ವಾದ ಬಜೆಟ್ ಎನ್ನಬಹುದು.

ಉದ್ಯೋಗ ಸೃಷ್ಟಿಗೆ ಒತ್ತು ನೀಡಲು ಕಿರು ಕೈಗಾರಿಕೆ, ಸಾರಿಗೆ, ಹೂಡಿಕೆ, ಗ್ರಾಮೀಣ ಅಭಿವೃದ್ಧಿ, ಕೃಷಿ ನಗರಾಭಿವೃದ್ಧಿ, ಬ್ಯಾಂಕಿಂಗ್‌ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಕಾರ್ಪೊ ರೇಟ್ ತೆರಿಗೆ ವ್ಯಾಪ್ತಿ ವಿಸ್ತರಿಸಿ, ಕಾರ್ಪೊರೇಟ್ ವಲಯದ ದಶಕದ ಬೇಡಿಕೆ ಈಡೇರಿಸಿದ್ದಾರೆ. ರೈಲ್ವೆ ಅಭಿವೃ ದ್ಧಿಗಾಗಿ ಸರಕಾರಿ-ಖಾಸಗಿ ಸಹ ಭಾಗಿತ್ವದ ಹೂಡಿಕೆಗೆ ಅವಕಾಶ ಕೊಡುವ ನೀತಿ ಘೋಷಿಸಲಾಗಿದೆ. ನಗರದ ಮಧ್ಯಮ ವರ್ಗ ದವರ ಸ್ವಂತ ಮನೆ ಕನಸು ನನಸಾಗಿಸುವ ಘೋಷಣೆ, ಪರೋಕ್ಷವಾಗಿ ಇದು ರಿಯಲ್ ಎಸ್ಟೇಟ್‌ಗೆ ನೀಡಿದ ಉತ್ತೇಜನ.

ವಾರ್ಷಿಕ 1.5 ಕೋ. ರೂ. ತನಕ ವಹಿವಾಟು ಇರುವ ವರ್ತಕರಿಗೆ ಪಿಂಚಣಿ ನೀಡುವ ಯೋಜನೆ ಸ್ವಾಗತಾರ್ಹ ಉಪಕ್ರಮ. ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್‌ ಏರಿಸುವ ಮೂಲಕ ಎಲ್ಲ ವರ್ಗದವರಿಗೆ ಶಾಕ್‌ ನೀಡಿದ್ದಾರೆ. ಸದ್ಯ ಈ ಎರಡು ತೈಲಗಳ ಬೆಲೆ ತುಸು ನಿಯಂತ್ರಣದಲ್ಲಿದ್ದು ಜನರು ಬಜೆಟ್‌ನಲ್ಲಿ ಈ ಏರಿಕೆಯ ಬರೆಯನ್ನು ನಿರೀಕ್ಷಿಸಿರಲಿಲ್ಲ. ಅಂತೆಯೇ ಚಿನ್ನದ ಮೇಲಿನ ಕಸ್ಟಮ್ಸ್‌ ಶುಲ್ಕ ಹೆಚ್ಚಿಸುವ ಮೂಲಕ ಚಿನ್ನ ಇನ್ನಷ್ಟು ದುಬಾರಿಯಾಗುವಂತೆ ಮಾಡಿದ್ದಾರೆ. ಒಂದಷ್ಟು ಚಿನ್ನ ಧರಿಸುವ ಮಧ್ಯಮ ವರ್ಗದವರ ಕನಸಿಗೆ ತಣ್ಣೀರು ಎರಚಿದ ಘೋಷಣೆಯಿದು. ಚುನಾವಣೆ ಪ್ರಣಾಳಿಕೆಯಲ್ಲಿ ಇದ್ದ ಕೆಲವು ಆಶ್ವಾಸನೆಗಳನ್ನೂ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಪ್ರಸ್ತಾವಿಸಿದ್ದಾರೆ. ಒಟ್ಟಾರೆ ತಕ್ಷಣದ ಲಾಭಕ್ಕಿಂತ ದೂರಗಾಮಿ ಪರಿಣಾಮಗಳ ಬಗ್ಗೆ ಹೆಚ್ಚು ಆಸ್ಥೆ ವಹಿಸಿದ್ದಾರೆ ಎನ್ನುವುದು ನಿಜ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ