ಬಜೆಟ್‌ 2019 – ಟ್ಯಾಕ್ಸ್‌ ರಿಬೇಟ್‌ ಎಂಬ ಕರ ಮನ್ನಾ ಯೋಜನೆ

Team Udayavani, Feb 4, 2019, 12:30 AM IST

2019ರ ಈ ಮಧ್ಯಾಂತರ ಬಜೆಟ್ಟಿನಲ್ಲಿ ಆದಾಯ ಸ್ಲಾಬ್‌ ಮತ್ತು ಕರ ದರಗಳಲ್ಲಿ ಯಾವುದೇ ವ್ಯತ್ಯಾಸ ಮಾಡಲಾಗಿಲ್ಲ. ಶೂನ್ಯ ಕರದ ಬೇಸಿಕ್‌ ಸ್ಲಾಬ್‌ ಆಗಿದ್ದ ರೂ 2.5 ಲಕ್ಷದ ಮಟ್ಟವನ್ನು (ಹಿರಿಯ ನಾಗರಿಕರಿಗೆ 3 ಲಕ್ಷ, ಅತಿ ಹಿರಿಯ ನಾಗರಿಕರಿಗೆ 5 ಲಕ್ಷ) ಕಿಂಚಿತ್ತೂ ಏರಿಸಲಾಗಿಲ್ಲ. ಕರ ದರಗಳಾದ ಶೇ.5, ಶೇ.20 ಹಾಗೂ ಶೇ.30 ಮತ್ತದರ ಮೇಲಿನ ಶೇ.10/ಶೇ.15ಸರ್ಚಾರ್ಜ್‌, ಶೇ.4 ಸೆಸ್‌ ಗಳನ್ನು ಕಿಂಚಿತ್ತೂ ಇಳಿಸಲಾಗಿಲ್ಲ. ಆದರೂ ಮಧ್ಯಮ ವರ್ಗಕ್ಕೆ ಅನ್ವಯಿಸುವಂತೆ ಸಂಪೂರ್ಣ ಕರ ವಿನಾಯಿತಿ ನೀಡಿದ್ದಾರೆ. ಅದು ಹೇಗೆ ಅಂದರೆ, ಈ ಬಜೆಟ್ಟಿನಲ್ಲಿ ನೀಡಲಾಗಿದ್ದು ಕರ ರಿಯಾಯಿತಿ, ಕರ ವಿನಾಯಿತಿ ಅಲ್ಲ. ಅದು “ಟ್ಯಾಕ್ಸ್‌ ರಿಬೇಟ್‌’ ತರಗತಿಗೆ ಸೇರಿದ್ದು – ಒಂದು ರೀತಿಯ ಕರ ಮನ್ನಾ ಯೋಜನೆ!

1. ಟ್ಯಾಕ್ಸ್‌ ರಿಬೇಟ್‌
ಈ ಟ್ಯಾಕ್ಸ್‌ ರಿಬೇಟ್‌ ಅಥವಾ ಕರ ರಿಯಾಯಿತಿ – ಇದು ಈಗಾಗಲೇ ಜಾರಿಯಲ್ಲಿರುವ ಸೆಕ್ಷನ್‌ 87ರ ಒಳಗಡೆ ಬರುತ್ತದೆ. ಈ ಸೆಕ್ಷನ್‌ 2013ರಿಂದಲೇ ವಿವಿಧ ಮಟ್ಟಗಳಲ್ಲಿ ಜಾರಿಯಲ್ಲಿದೆ. ಆದರೆ ಆ ಸೆಕ್ಷನ್‌ ಸೂಪರ್‌ ಹಿಟ್‌ ಆಗಿದ್ದು ಈವಾಗಲೇ! ಸದ್ಯಕ್ಕೆ ಪರಿಸ್ಥಿತಿಯಲ್ಲಿ 87ಅಸೆಕ್ಷನ್‌, ಕರಾರ್ಹ ಆದಾಯ ರೂ. 3.5 ಲಕ್ಷದವರೆಗೆ ಇರುವ ವರಿಗೆ ಮಾತ್ರ ಅನ್ವಯವಾಗುತ್ತದೆ, ಕರಾರ್ಹ ಆದಾಯ ಅಂದರೆ ಒಟ್ಟು ಆದಾಯ ಅಲ್ಲ. ಒಟ್ಟು ಆದಾಯದಿಂದ ಕಳೆಯುವುದನ್ನೆಲ್ಲಾ ಕಳೆದು ಅಂದರೆ – ಸ್ಟಾಂಡರ್ಡ್‌ ಡಿಡಕ್ಷನ್‌ (ಸಂಬಳ/ಪೆನ್ಶನ್‌ಗೆ ಮಾತ್ರ), ಹೌಸಿಂಗ್‌ ಲೋನ್‌ ಬಡ್ಡಿ, ಮೆಡಿಕಲ್‌ ವಿಮೆ, ಎಜುಕೇಶನ್‌ ಲೋನ್‌ ಬಡ್ಡಿ, ಸೆಕ್ಷನ್‌ 80ಇಅಡಿಯಲ್ಲಿ ಬರುವ ಎಲ್ಲೆ„ಸಿ, ಪಿ.ಪಿ.ಎಫ್, ಎನ್‌.ಎಸ್‌.ಸಿ, ಇ.ಎಲ….ಎಸ್‌.ಎಸ್‌, ಎನ್‌.ಪಿ.ಎಸ್‌, ಸುಕನ್ಯಾ ಸಮೃದ್ಧಿ, ಶಾಲಾ ಫೀಸ್‌ ಇತ್ಯಾದಿಗಳನ್ನು ಕಳೆದು ಅಂತಿಮವಾಗಿ ಕರಕಟ್ಟಲು ಸಿಗುವ ಮೊತ್ತವೇ ಕರಾರ್ಹ ಆದಾಯ. ಈ ರೀತಿ ಸಿಗುವ ಆದಾಯ ರೂ. 3.5 ಲಕ್ಷದ ಮೇಲೆ ಇದ್ದರೆ ಅಂತವರಿಗೆ ಈ ಸೆಕ್ಷನ್‌ ಅನ್ವಯವಾಗುವುದೇ ಇಲ್ಲ. ಸದ್ಯಕ್ಕೆ ಈ ಸೆಕ್ಷನ್‌ ಪ್ರಕಾರ ರೂ. 3.5 ಲಕ್ಷದವರೆಗೆ ಕರಾರ್ಹ ಆದಾಯ ಇರುವವರಿಗೆ ಕಟ್ಟುವ ಕರದಲ್ಲಿ (ಆದಾಯದಲ್ಲಿ ಅಲ್ಲ) ರೂ. 2,500 ವರೆಗೆ ರಿಯಾಯಿತಿ ನೀಡಲಾಗುತ್ತದೆ. ಇದರಿಂದ 3.5 ಲಕ್ಷ ಆದಾಯ ಉಳ್ಳವರಿಗೆ ಶೆ.50 ಕರ ರಯಾಯಿತಿ ನೀಡಿದಂತಾಯಿತು. ಆದರೆ ಈಗಿನ ಬಜೆಟ್ಟಿನ “ಮಾಸ್ಟರ್‌ ಸ್ಟ್ರೋಕ್‌’ ಎಂದರೆ, ಈ ಮಿತಿಯನ್ನು ರೂ. 5 ಲಕ್ಷಕ್ಕೆ ಏರಿಸಿ, ಕರ ರಿಯಾಯಿತಿಯನ್ನು ರೂ. 12,500 ವರೆಗೆ ಏರಿಸಿದ್ದು. ಈ ರೂ. 12,500 ಮಿತಿ ಆ ವರ್ಗದವರಿಗೆ ಸಂಪೂರ್ಣ ಶೆ.100 ಕರ ರಿಯಾಯಿತಿ ನೀಡುತ್ತದೆ. ಅಂದರೆ ಇನ್ನು ಮುಂದೆ ರೂ. 5 ಲಕ್ಷ ಕರಾರ್ಹ ಆದಾಯ ಇರುವವರು ಯಾವುದೇ ಕರ ಕಟ್ಟುವ ಅಗತ್ಯ ಇರುವುದಿಲ್ಲ. ಅದರಿಂದ ಮೇಲಿನ ಕರಾರ್ಹ ಆದಾಯ ಇರುವವರಿಗೆ ಈ ಸೆಕ್ಷನ್‌ ಅನ್ವಯ ಆಗುವುದೇ ಇಲ್ಲದ ಕಾರಣ ಅವರು ಯಥಾಪ್ರಕಾರ ಅವರವರ ಸ್ಲಾಬ್‌/ದರ ಅನುಸಾರ ಯಾವುದೇ ರಿಯಾಯಿತಿ ಇಲ್ಲದೆ ರೂ. 2.5 ಲಕ್ಷದಿಂದಲೇ (ಯಾ ಹಿರಿಯ ನಾಗರಿಕರಿಗೆ ರೂ. 3 ಲಕ್ಷದಿಂದ) ಲೆಕ್ಕ ಹಾಕುತ್ತಾ “ಫ‌ುಲ್‌ ಟ್ಯಾಕ್ಸ್‌’ ಕಟ್ಟಬೇಕು. ಅಂದರೆ, ಇದು ಮಧ್ಯಮ ವರ್ಗದವರಿಗೆ ಮಾತ್ರವೇ ನೀಡಿದ ಕರ ರಿಯಾಯಿತಿಯೇ ಹೊರತು ಎಲ್ಲಾ ವರ್ಗಕ್ಕೂ ಸಲ್ಲುವ ಕರ ವಿನಾಯಿತಿ ಯೋಜನೆ ಅಲ್ಲ. ಇದು 87ಅಎಂಬ ಈ ಸೆಕ್ಷನ್ನಿನ ವಿಶೇಷತೆ. ಎಲ್ಲರಿಗೂ ಅನ್ವಯವಾಗುವಂತೆ ಟ್ಯಾಕ್ಸ್‌ ಸ್ಲಾಬ್‌ ಹಾಗೂ ದರಗಳಲ್ಲಿ ಯಾವುದೇ ವ್ಯತ್ಯಾಸ ಮಾಡಲಾಗಿಲ್ಲ ಎನ್ನುವುದನ್ನು ಇನ್ನೊಮ್ಮೆ ಒತ್ತಿ ಹೇಳುತ್ತಿದ್ದೇನೆ. ಇನ್ನು ಮುಂದೆ ನಮ್ಮನ್ನು ನಾವು ಎರಡು ಪಂಗಡಗಳಾಗಿ ಗುರುತಿಸಬಹುದು – “87ಅಕೆಟಗರಿ’ ಅಥವಾ “87ಅ-ಏತರ ಕೆಟಗರಿ’! ಈ ಬಜೆಟ್‌ 87ಅಕೆಟಗರಿಯವರಿಗೆ ಮಹಾನ್‌ ದೊಡ್ಡ ಕೊಡುಗೆ.

ಈ 87ಅಪ್ರಸ್ತಾಪವನ್ನು ಇನ್ನೂ ಸ್ವಲ್ಪ ಮುಂದುವರಿಸಿ ನೋಡಿದರೆ ಇದರ ಪೂರ್ತಿ ಲಾಭದ ಅರಿವಾದೀತು. ರೂ. 5 ಲಕ್ಷ ಕರಾರ್ಹ ಆದಾಯ ಎಂದರೆ ಒಟ್ಟು ಆದಾಯ ಅದಕ್ಕಿಂತಲೂ ಜಾಸ್ತಿ ಇರುತ್ತದೆ. ಸೆಕ್ಷನ್‌ 80ಇಯ ಮಿತಿಯಾದ ರೂ. 1.5 ಲಕ್ಷ ಸೇರಿಸಿದರೆ ಇದು ರೂ. 6.5 ಲಕ್ಷದ ಒಟ್ಟು ಆದಾಯ ಆಗುತ್ತದೆ. ಗೃಹ ಸಾಲದ ಬಡ್ಡಿಯ ಮೇಲಿನ ರಿಯಾಯ್ತಿ ರೂ. 2 ಲಕ್ಷ ಸೇರಿಸಿದರೆ ಇದು ರೂ. 8.5 ಲಕ್ಷ ಆಗುತ್ತದೆ. 80ಈಯ ಸ್ವಂತ ಮತ್ತು ಹೆತ್ತವರ ಮೆಡಿಕಲ್‌ ವಿಮೆಯ ರೂ. 50,000 ಸೇರಿಸಿದರೆ ಇದು ಸುಮಾರು ರೂ. 9 ಲಕ್ಷವಾಗುತ್ತದೆ. ಸಂಬಳ/ಪೆನ್ಶನ್‌ನವರಿಗಾದರೆ ರೂ. 50,000ದ ಸ್ಟಾಂಡರ್ಡ್‌ ಡಿಡಕ್ಷನ್‌ ಕೂಡಾ ಸೇರಿಸಬಹುದು. ಆವಾಗ ಒಟ್ಟು ಆದಾಯ ರೂ.9.5 ಲಕ್ಷ ಆಗುತ್ತದೆ. ಇನ್ನು ಎನ್‌ಪಿಎಸ್‌ನ ಹೆಚ್ಚುವರಿ ದೇಣಿಗೆ ರೂ. 50,000 (80ಇಇಈ1ಚಿಅಡಿಯಲ್ಲಿ) ಸೇರಿಸಿದರೆ ಇದು ಬರೋಬ್ಬರಿ ಹತ್ತು ಲಕ್ಷವಾಗುತ್ತದೆ. ಅಷ್ಟೇ ಅಲ್ಲದೆ, ಎಜುಕೇಷನ್‌ ಲೋನ್‌ ಇರುವವರು ಅದರ ಬಡ್ಡಿಯನ್ನೂ ಸೇರಿಸಬಹುದು. ಇನ್ನೂ ಕೆಲ ಸೆಕ್ಷನ್‌ಗಳ ರಿಯಾಯಿತಿಗಳನ್ನು ಪರಿಗಣಿಸಿದರೆ 10 ಲಕ್ಷಕ್ಕೂ ಮೀರಿ ಆದಾಯ ಇರುವವರು ಕೂಡಾ ಈ ಬಜೆಟ್‌ ಬಳಿಕ ಚಿಕ್ಕಾಸು ಆದಾಯ ಕರವನ್ನು ಕಟ್ಟಬೇಕಿಲ್ಲ. ಈ ರೀತಿಯ ಟ್ಯಾಕ್ಸ್‌ ಪ್ಲಾನಿಂಗ್‌ ಬಹಳ ಮಹತ್ವದ್ದಾಗಿರುತ್ತದೆ. 

2.ಸ್ಟಾಂಡರ್ಡ್‌ ಡಿಡಕ್ಷನ್‌ 
ಸ್ಟಾಂಡರ್ಡ್‌ ಡಿಡಕ್ಷನ್‌ನಲ್ಲಿ ರೂ. 10,000 ಹೆಚ್ಚಳವು (ಹಿಂದಿನ ರೂ. 40,000 ಬದಲಾಗಿ ರೂ. 50,000) ಎಲ್ಲಾ ಸಂಬಳ ಹಾಗೂ ಪೆನ್ಶನ್‌ ಆದಾಯವುಳ್ಳವರಿಗೆ ಸಮಾನವಾಗಿ ಅನ್ವಯವಾಗುತ್ತದೆ. ಆದರೆ ಇದು ಸಂಬಳ/ಪೆನ್ಶನ್‌ ಹೊರತಾಗಿ ಉಳಿದ ಆದಾಯದ ಮೇಲೆ ಇರುವುದಿಲ್ಲ. ಈ ರೂ. 10,000ದ ಹೆಚ್ಚಳವು ಅವರವರ ಸ್ಲಾಬ್‌ ಅನುಸಾರ ಶೇ.20 ಯಾ ಶೇ.30 ಲಾಭವನ್ನು ಕೊಡುತ್ತದೆ. ಬಹುತೇಕ ಉತ್ತಮ ಸಂಬಳದ “87ಅ ಯೇತರ’ ಜನರಿಗೆ ಈ ಬಜೆಟ್ಟಿನಿಂದ ಆಗುವ ಲಾಭ ಈ ಎರಡು ಅಥವಾ ಮೂರು ಸಾವಿರ ರೂಪಾಯಿ ಮಾತ್ರ! ಹಾಗಾಗಿ ಈ ಬಜೆಟ್‌ ಮಧ್ಯಮದವರನ್ನು ದೃಷ್ಟಿಯಲ್ಲಿಟ್ಟು ಮಾಡಿದ್ದು ಅನ್ನಲಾಗುತ್ತದೆ. 

3. ಹೊಸ ಪೆನ್ಶನ್‌ 
ನಿರ್ಮಾಣ ಉದ್ಯಮ, ಬೀದಿ ಬದಿ ವ್ಯಾಪಾರಿ ಇತ್ಯಾದಿ ಅಸಂಘಟಿತ ವರ್ಗಕ್ಕೆ ಸೇರಿದವರಿಗೆ ಅವರು 60 ತಲುಪಿದ ಮೇಲೆ ಮಾಸಿಕ ರೂ. 3,000 ಕೊಡುವ ಶ್ರಮಯೋಗಿ ಮಾನ್‌ಧನ್‌ ಪೆನ್ಶನ್‌ ಯೋಜನೆ ಒಂದು ಉತ್ತಮವಾದ ಹೆಜ್ಜೆ. ಮಾಸಿಕ ಆದಾಯ ರೂ. 15,000ಕ್ಕಿಂತ ಕಡಿಮೆ ಇರುವ 18-40 ವಯೋವರ್ಗದವರು ಸೇರಬಹುದಾದ ಈ ಯೋಜನೆಗೆ ಕನಿಷ್ಠ 20 ವರ್ಷ ದೇಣಿಗೆ ಕಟ್ಟಬೇಕು. ಇದಕ್ಕೆ ಮಾಸಿಕ ದೇಣಿಗೆ ವಯಸ್ಸನ್ನು ಆಧರಿಸಿ ನಿಗಧಿಪಡಿಸಲಾಗುವುದು. 29 ವಯಸ್ಸಿನವರಿಗೆ ಮಾಸಿಕ ದೇಣಿಗೆ ರೂ. 100 ಬಂದರೆ 19 ವಯಸ್ಸಿನವರಿಗೆ ಅದು ರೂ 55. ಕಾರ್ಮಿಕನ ದೇಣಿಗೆಯ ಸಮಪಾಲು ಸರಕಾರವು ಭರಿಸುತ್ತದೆ. ಎಲ್ಲೆ„ಸಿಯಿಂದ ಹೊರಬರಲಿರುವ ಈ ಯೋಜನೆಯ ವಿವರಗಳು ಇನ್ನೂ ಸಿದ್ಧವಾಗಿಲ್ಲ. ಕ್ರಮೇಣ ಘೋಷಣೆಯಾಗಲಿದೆ. ಘೋಷಣೆಯಾದಾಗ ಅದಕ್ಕಾಗಿಯೇ ಒಂದು ಪ್ರತ್ಯೇಕ ಕಾಕು ಕುಟ್ಟೋಣವಂತೆ. 

4. ಟಿಡಿಎಸ್‌ 
ಸದ್ಯದ ಕಾನೂನು ಪ್ರಕಾರ ಒಬ್ಟಾತ ಭೂಮಿ/ಕಟ್ಟಡ/ಮೆಶೀನ್‌/ಫ‌ರ್ನಿಚರ್‌ ಇತ್ಯಾದಿಗಳನ್ನು ಯಾವುದೇ ಬಿಸಿನೆಸ್‌ ಸಂಸ್ಥೆಗೆ ಬಾಡಿಗೆಗೆ ನೀಡಿದ್ದಲ್ಲಿ ಮತ್ತು ರೂ. 1.8 ಲಕ್ಷ ಮೀರಿದ ವಾರ್ಷಿಕ ಬಾಡಿಗೆ ಪಡೆಯುತ್ತಿದ್ದರೆ ಅಂತಹ ಬಿಸಿನೆಸ್ಸಿನವರು ಆತನ ಬಾಡಿಗೆಯಿಂದ ಶೇ.10 ಟಿಡಿಎಸ್‌ ಕಡಿತ ಮಾಡಿ ಸರಕಾರಕ್ಕೆ ಪ್ರತ್ಯೇಕವಾಗಿ ಕಟ್ಟಬೇಕು. ಈ ಬಾರಿ ಆ ಮಿತಿಯನ್ನು ರೂ. 2.4 ಲಕ್ಷಕ್ಕೆ ಏರಿಸಲಾಗಿದೆ. ಈ ಕ್ರಮ ಬಾಡಿಗೆಗೆ ನೀಡುವ ಸೊತ್ತುಗಳ ಮಾಲೀಕರಿಗೆ ತುಸು ಉತ್ತೇಜಕವಾಗಿ ಕಂಡೀತು. 

ಆದರೆ ಇಲ್ಲಿ ಗಮನಿಸತಕ್ಕ ಅಂಶವೇನೆಂದರೆ 2017 ಬಜೆಟ್ಟಿನಲ್ಲಿ ಪ್ರಾರಂಭಿಸಿದ ಮಾಸಿಕ ರೂ. 50,000 ಮೀರಿದ ಬಾಡಿಗೆ ಮನೆಯ ಮೇಲೆ ಶೇ.5 ಟಿಡಿಎಸ್‌ ಕಡಿದು ಕಟ್ಟುವ ಕಾನೂನು ಹಾಗೆಯೇ ಇದೆ. ಅಂದರೆ, ಬಿಸಿನೆಸ್‌ ಅಲ್ಲದೆ ಜನ ಸಾಮಾನ್ಯರಿಗೆ ಬಾಡಿಗೆಗೆ ನೀಡುವಾಗ ಅನ್ವಯವಾಗುವ ಈ ಕಾನೂನಿನಲ್ಲಿ ಯಾವುದೇ ಬದಲಾವಣೆ ಇಲ್ಲ.
 
ಅಂತೆಯೇ ಜನ ಸಾಮಾನ್ಯರಿಗೆ ಬ್ಯಾಂಕ್‌ ಪೋಸ್ಟಾಫೀಸು/ಕೋ-ಓಪರೇಟಿವ್‌ ಬ್ಯಾಂಕ್‌ ಬಡ್ಡಿ ಮೇಲೆ ರೂ. 10,000 ದಾಟಿದಾಗ ಸಂಪೂರ್ಣ ಬಡ್ಡಿ ಮೊತ್ತದ ಮೇಲೆ ಶೇ.10 ಟಿಡಿಎಸ್‌ ಕಡಿತ ಮಾಡಲಾಗುತ್ತದೆ. ಈ ಟಿಡಿಎಸ್‌ ರಗಳೆಗೆ ಅಂಜಿ ಹಲವರು ಬ್ಯಾಂಕು ಎಫ್ಡಿ ಇಡಲು ಹಿಂದೇಟು ಹಾಕುತ್ತಾರೆ. ಆದರೆ ಇದೀಗ ಆ ಮಿತಿಯನ್ನು ರೂ. 10,000 ದಿಂದ ರೂ. 40,000ಕ್ಕೆ ಏರಿಸಲಾಗಿದೆ. ಇದು ಎಫ್ಡಿ ಇಡುವವರಿಗೆ ಉತ್ತೇಜನಕಾರಿ. ಇಲ್ಲಿ ಕೂಡಾ ಕಾರ್ಪೋರೇಟ್‌ ಡೆಪಾಸಿಟ್‌ ಅಥವಾ ಫೈನಾನ್ಸ್‌ ಕಂಪೆನಿಗಳ ಡೆಪಾಸಿಟ್‌ ಮೇಲಿನ ರೂ. 5,000 ದ ಟಿಡಿಎಸ್‌ ಮಿತಿಯಲ್ಲಿ ಹೆಚ್ಚಳವಾಗಿಲ್ಲ. 

(ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಟಿಡಿಎಸ್‌ ಬೇರೆ ಆದಾಯ ಕರ ಬೇರೆ. ಟಿಡಿಎಸ್‌ ಇಲ್ಲ ಎಂದರೆ ಕರ ಇಲ್ಲ ಎಂದರ್ಥವಲ್ಲ. ಟಿಡಿಎಸ್‌ ಒಂದು ಟೆಂಪರರಿ ಟ್ಯಾಕ್ಸ್‌ ಮಾತ್ರ. ಅಂತಿಮವಾಗಿ ಸರಿಯಾದ ಕರ ಲೆಕ್ಕ ಹಾಕಿ ಹೆಚ್ಚುವರಿ ಕಟ್ಟಬೇಕು ಅಥವಾ ಕಟ್ಟಿದ ಕರವನ್ನು ರಿಫ‌ಂಡ್‌ ಪಡೆಯಬಹುದು. ಈ ಬಗ್ಗೆ ಕೆಲವು ಬಾರಿ ವಿವರವಾಗಿ ಕಾಕು ಕುಟ್ಟಲಾಗಿದೆ) 

5. ಕ್ಯಾಪಿಟಲ್‌ ಗೈನ್ಸ್‌ ರಿಯಾಯಿತಿ 
ಸೆಕ್ಷನ್‌ 54ರ ಪ್ರಕಾರ ಪ್ರಸ್ತುತ ಒಂದು ಮನೆಯ ಮಾರಾಟದಿಂದ ದೀರ್ಘ‌ಕಾಲಿಕ (3 ವರ್ಷ ಮೀರಿದ) ಕ್ಯಾಪಿಟಲ್‌ ಗಳಿಕೆ ಉಂಟಾದರೆ ಅಂತಹ ಗಳಿಕೆಯನ್ನು (ಇಂಡೆಕ್ಸೇಷನ್‌ ಬಳಿಕದ) ಇನ್ನೊಂದು ಹೊಸ ಮನೆಗೆ ಮಾರಾಟದ 1 ವರ್ಷ ಮೊದಲಾದರೆ ಖರೀದಿಗಾಗಿ, 2 ವರ್ಷಗಳ ಒಳಗಾದರೆ ಖರೀದಿಗಾಗಿ ಅಥವ 3 ವರ್ಷಗಳ ಒಳಗಾದರೆ ನಿರ್ಮಾಣಕ್ಕಾಗಿ ಖರ್ಚು ಮಾಡಿದಲ್ಲಿ ಕಾಪಿಟಲ್‌ ಗಳಿಕೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಸಿಗುತ್ತದೆ. ಈ ಬಜೆಟ್ಟಿನಲ್ಲಿ ಈ ಸೌಲಭ್ಯವನ್ನು 2 ಮನೆಗಳ ಖರೀದಿ/ನಿರ್ಮಾಣಕ್ಕಾಗಿ ಬಳಸಲು ಅನುಮತಿ ನೀಡಲಾಗಿದೆ. ಈ ಅನುಕೂಲಕ್ಕೆ ರೂ.2 ಕೋಟಿಯವರೆಗಿನ ಕ್ಯಾಪಿಟಲ್‌ ಗೈನ್ಸ್‌ ಮಿತಿ ನೀಡಲಾಗಿದೆ. ಆದರೆ ಇದು ಜೀವನದಲ್ಲಿ ಒಂದೇ ಒಂದು ಬಾರಿ ಚಲಾಯಿಸಬಹುದಾದ ಅವಕಾಶ. ಆದರಿದು ಒಂದು ಅತ್ಯುತ್ತಮವಾದ ಹೆಜ್ಜೆ.

6. ಎರಡನೆಯ ಸ್ವಂತ ವಾಸದ ಮನೆ 
ಬಜೆಟ್‌ 2019 – ಆದಾಯ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ; ರಿಬೇಟ್‌ ಮಿತಿ ಹೆಚ್ಚಿಸಲಾಗಿದೆ. 
ಈವರೆಗೆ ನಿಮ್ಮ ಬಳಿ ಒಂದಲ್ಲದೆ ಎರಡನೆಯ ಸ್ವಂತ ಮನೆ ಇದ್ದಲ್ಲಿ ಅದರಲ್ಲಿ ನಿಮ್ಮ ಕುಟುಂಬ ಅಥವಾ ಸಂಬಂಧಿಗಳು ವಾಸವಿದ್ದಲ್ಲಿ ಅಥವಾ ಯಾರೂ ವಾಸವಿಲ್ಲದೆ ಬಾಗಮ್ಮ-ಬೀಗಮ್ಮನ ಕೇರಾಫಿನಲ್ಲಿದ್ದರೂ ಕೂಡಾ ಎರಡನೆಯ ಸ್ವಂತ ಮನೆಯನ್ನು ಬಾಡಿಗೆಗೆ ನೀಡಲಾಗಿದೆ ಎಂದೇ ಪರಿಗಣಿಸಿ ಅದರಿಂದ ಬರಬಹುದಾಗಿದ್ದ ಬಾಡಿಗೆಯನ್ನು ಬಂದಿದೆ ಎಂದೇ ಕಲ್ಪಿಸಿ ಅದರ ಮೇಲೆ ಆದಾಯ ಕರ ಕಟ್ಟಬೇಕಿತ್ತು. (ಯಾವ ಕವಿಗೂ ನಿಲುಕದ ಕಲ್ಪನೆ ಇದು. ಕರಾಧಿಪತಿಗಳಿಗೆ ಕಲ್ಪನೆ ಇಲ್ಲ ಎಂದು ಯಾರು ಹೇಳಿದರು?) ಆದರೆ ಈಗ ಒಬ್ಟಾತನು ಎರಡು ಸ್ವಂತ ಮನೆಯನ್ನು ಹೊಂದಿರಬಹುದು ಮತ್ತು ಹಾಗಾಗಿ ಎರಡನೆಯ ಸ್ವಂತ ಮನೆಯ ಮೇಲೆ ಯಾವುದೇ ಊಹಾತ್ಮಕ ಬಾಡಿಗೆಯ ನೆಲೆಯಲ್ಲಿ ಕರ ಕಟ್ಟಬೇಕಿಲ್ಲ ಎನ್ನುವ ಘೋಷಣೆ ಹೊರಟಿದೆ. (ಹಾಂ! ಅದನ್ನು ಬಾಡಿಗೆ ನೀಡಿದ್ದಲ್ಲಿ ಅದರ ಮೇಲೆ ಸ್ವಾಭಾವಿಕವಾಗಿ ಕರ ಕಟ್ಟಬೇಕು) ಹಾಗೆಯೇ, ಮೂರನೆಯ/ನಾಲ್ಕನೆಯ ಮನೆಯಿದ್ದರೆ ಅದಕ್ಕೆ ಕರಕಲ್ಪನೆ ಮುಂದುವರಿಯುತ್ತದೆ. 

ಹಾಗೆಯೇ, ಸದ್ಯಕ್ಕೆ, ಸ್ವಂತ ವಾಸದ ಒಂದು ಮನೆಯ ಮೇಲೆ ಮಾತ್ರ ಗೃಹ ಸಾಲದ ಬಡ್ಡಿಯ ಮೇಲೆ ರೂ. 2 ಲಕ್ಷದವರೆಗೆ ಕರ ವಿನಾಯಿತಿ ಇರುತ್ತದೆ. ಇನ್ನು ಮುಂದೆ ಆ ವಿನಾಯಿತಿ 2 ಸ್ವಂತ ವಾಸದ ಮನೆಗಳ ಮೇಲೆ ಅದೇ ರೂ. 2 ಲಕ್ಷದ ಮಿತಿಯೊಳಗೆ ಲಭ್ಯ. 

(ವಿ.ಸೂ: ಕೆಲ ಪತ್ರಿಕೆ/ಟಿವಿಗಳಲ್ಲಿ ತಪ್ಪಾಗಿ ವರದಿಯಾದಂತೆ ಗ್ರಾಚೂÂಟಿ/ಇ.ಎಸ್‌.ಐ ವಿಚಾರಗಳಲ್ಲಿ ಈ ಬಜೆಟ್ಟಿನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ 4 ವರ್ಷಗಳ ಸಾಧನೆಯ ಬಗ್ಗೆ ಮಾತನಾಡುವಾಗ ಈ ವಿಚಾರಗಳು ಬಜೆಟ್‌ ಭಾಷಣದ ಮಧ್ಯೆ ತಲೆ ತೂರಿತ್ತು, ಅಷ್ಟೆ) 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ