ಕುಡಿದು ವಾಹನ ಚಾಲನೆ ಪ್ರಮಾಣ ಇಳಿದಿದೆ

Team Udayavani, Jan 10, 2019, 5:53 AM IST

ಹೊಸ ವರುಷದ ಆಚರಣೆಯಲ್ಲಿ ಮೋಜು ಮಸ್ತಿ ಸಾಮಾನ್ಯ. ಆಲ್ಕೋಹಾಲ್‌ ಸೇವಿಸಿ ಹೊಸ ವರ್ಷದ ರಾತ್ರಿ ವಾಹನ ಚಲಾಯಿಸಿ ಪೊಲೀಸ್‌ ಕೇಸು ಬಿಗಿಸಿಕೊಳ್ಳುವುದು ಪ್ರತೀ ವರ್ಷದ ವಿದ್ಯ ಮಾನ. ಅಪಘಾತ, ಸಾವುನೋವು ಕೂಡ ನಡೆಯುತ್ತವೆ. ಆದರೆ ವರ್ಷದಿಂದ ವರ್ಷಕ್ಕೆ ಇದು ಕಡಿಮೆ ಯಾಗುತ್ತಿದೆಯೇ?

ಹೌದು ಎನ್ನುವ ಆಶಾದಾಯಕ ಬೆಳವಣಿಗೆ ಈ ವರ್ಷದ ಮತ್ತು ಕಳೆದ ವರ್ಷದ ಅಂಕಿ ಅಂಶಗಳನ್ನು ಗಮನಿಸಿದರೆ ತಿಳಿಯುತ್ತದೆ. ರಾಜ್ಯ ರಾಜಧಾನಿಯಲ್ಲಿ ಈ ಬಾರಿ ಹೊಸ ವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ 667 ಕೇಸುಗಳು ದಾಖಲಾದರೆ, ಕಳೆದ ಬಾರಿ 1,390 ದಾಖ ಲಾಗಿದ್ದವು. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಈ ಬಾರಿ 509 ಡ್ರಿಂಕ್‌ ಆ್ಯಂಡ್‌ ಡ್ರೈವ್‌ ಕೇಸುಗಳು ದಾಖಲಾಗಿದ್ದವು, ಕಳೆದ ಬಾರಿ ಇದು 765 ಆಗಿತ್ತು. ವಾಣಿಜ್ಯ ನಗರಿ ಮುಂಬಯಿಯಲ್ಲಿ ಈ ವರ್ಷ 455 ಕೇಸು, ಕಳೆದ ಬಾರಿ 615 ಪ್ರಕರಣ ದಾಖಲಾಗಿದ್ದವು.  ಕೋಲ್ಕತ್ತಾ ಮತ್ತು ಚೆನ್ನೈಗಳಲ್ಲಿ ಕ್ರಮವಾಗಿ 182 ಮತ್ತು 263 ಕೇಸುಗಳು ದಾಖಲಾಗಿವೆ. 

ವರ್ಷಾಚರಣೆ ಸಂದರ್ಭದಲ್ಲಿ ಕುಡಿದು ವಾಹನ ಚಾಲನೆ ಮಾಡುವವರ ತಪಾಸಣೆ, ಸುರಕ್ಷತೆಗಾಗಿ ಪ್ರಮುಖ ನಗರಗಳಾದ ಮುಂಬಯಿ, ದಿಲ್ಲಿ, ಕೋಲ್ಕತಾ ಸೇರಿದಂತೆ ದೇಶದ ಇತರೆಡೆ ಸಾವಿರಾರು ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಕಾನೂನು ಏನು?
1988ರ ಮೋಟಾರ್‌ ವಾಹನ ಕಾಯ್ದೆ ಪ್ರಕಾರ ಸೆಕ್ಷನ್‌ 185 ಅಡಿಯಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಶಿಕ್ಷಾರ್ಹ ಅಪರಾಧ. ಇದಕ್ಕೆ ದಂಡವನ್ನೂ ತೆರಬೇಕಾಗಿದೆ. ಮೊದಲ ಬಾರಿಯ ತಪ್ಪಿಗಾಗಿ 2,000 ರೂ. ದಂಡ ಮತ್ತು 6 ತಿಂಗಳ ಸೆರೆವಾಸ ಅನುಭವಿಸಬೇಕು. ಮೂರು ವರ್ಷಗಳಲ್ಲಿ ಪದೇ ಪದೇ ಡ್ರಿಂಕ್‌ ಆ್ಯಂಡ್‌ ಡ್ರೈವ್‌ ಕೇಸ್‌ ದಾಖಲಾದರೆ ಎರಡು ವರ್ಷಗಳ ಜೈಲು ಅನುಭವಿಸಬೇಕು ಮತ್ತು 3,000 ರೂ. ದಂಡ ಪಾವತಿಸಬೇಕು. 

ಎಲ್ಲಿ ಅತಿಹೆಚ್ಚು ?
ಉತ್ತರಪ್ರದೇಶ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ. ಅದೇ ರೀತಿ ಕುಡಿದು ವಾಹನ ಚಾಲನೆಯಿಂದ ಸಾವನ್ನಪ್ಪಿದವರ ಪ್ರಮಾಣವೂ ಇಲ್ಲೇ ಅಧಿಕ. 2017ರಲ್ಲಿ 3,336 ರಸ್ತೆ ಅಪಘಾತಗಳು ನಡೆದಿದ್ದು, 1,687 ಜನರು ಸತ್ತಿದ್ದರು, 2,524 ಮಂದಿ ಗಾಯಗೊಂಡಿದ್ದರು. ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಕ್ಕೀಡಾದ ಪ್ರಕರಣಗಳಲ್ಲಿ ಶೇ.24ರಷ್ಟು ಉತ್ತರಪ್ರದೇಶದಲ್ಲೇ ನಡೆದಿದೆ. ಅನಂತರದ ಸ್ಥಾನಗಳನ್ನು ದಕ್ಷಿಣದ ಆಂಧ್ರಪ್ರದೇಶ (2,064) ಮತ್ತು ತ.ನಾಡು (1,833) ಹೊಂದಿವೆ. 

ಬ್ರಿಕ್ಸ್‌ ಪಟ್ಟಿಯಲ್ಲಿ ಭಾರತದ ಸ್ಥಾನ 4
ಅಂಕಿಅಂಶಗಳು ವರ್ಷದಿಂದ ವರ್ಷಕ್ಕೆ ಆಶಾಭಾವನೆ ತೋರ್ಪಡಿಸುತ್ತಿದ್ದರೂ ಮದ್ಯಪಾನ ಮಾಡಿ ವಾಹನ ಚಲಾವಣೆಯನ್ನು ತಡೆಯುವ ಕಾನೂನನ್ನು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಿದ ದೇಶಗಳ ಪಟ್ಟಿಯಲ್ಲಿ ಭಾರತ ಕಳಪೆ ಸ್ಥಾನದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ 0-10ರ ರ್‍ಯಾಂಕಿಂಗ್‌ನಲ್ಲಿ ಭಾರತ 4 ಅಂಕ ಗಳಿಸಿದೆ. ಬ್ರಿಕ್ಸ್‌ ದೇಶಗಳ ಪೈಕಿಯೂ ಭಾರತ ಕೆಳಸ್ಥಾನದಲ್ಲಿದೆ.


ಮದ್ಯಪಾನ ಮಾಡಿ ವಾಹನ ಚಾಲನೆ: ಸಾವಿನ ಪ್ರಮಾಣ

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಹೊಸ ವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ವಾಹನ ಚಾಲನೆಯಿಂದ ಸಾವು, ಗಾಯಗೊಂಡವರ ಸಂಖ್ಯೆ ಪ್ರಮಾಣ ಇಂತಿದೆ. 2018ರಲ್ಲಿ  14,071 ಅಪಘಾತಗಳು ನಡೆದು 4,776 ಸಾವು ಸಂಭವಿಸಿದ್ದರೆ, 11,776 ಜನರು ಗಾಯಗೊಂಡಿದ್ದಾರೆ. 2017ರಲ್ಲಿ 6,131 ಜನರು ಕುಡಿದು ವಾಹನ ಚಾಲನೆಯಿಂದ ಸಾವಿಗೀಡಾಗಿದ್ದರು. ಇದಲ್ಲದೆ, ರಾಷ್ಟ್ರವ್ಯಾಪಿಯಾಗಿ 2008ರಿಂದ 2017ರವರೆಗೆ ಮದ್ಯಪಾನ ಮಾಡಿ ವಾಹನ ಚಾಲನೆಯಿಂದ 2,11,405 ರಸ್ತೆ ಅಪಘಾತಗಳಲ್ಲಿ 76,446 ಮಂದಿ ಸಾವು ಹೊಂದಿದ್ದಾರೆ. 


ಎಷ್ಟು ಪ್ರಮಾಣ ಶಿಕ್ಷಾರ್ಹ?

ಕಾಯಿದೆಯ ಪ್ರಕಾರ ಬ್ರೆಥ್‌ ಅನಲೈಸರ್‌ ಮೂಲಕ ತಪಾಸಣೆ ನಡೆಸುವಾಗ ಪ್ರತೀ 100 ಮಿ. ಲೀ. ರಕ್ತಕ್ಕೆ 30 ಮಿ. ಗ್ರಾಂ.ಗಿಂತ ಹೆಚ್ಚು ಪ್ರಮಾಣದ ಆಲ್ಕೋ ಹಾಲ್‌ ಅಂಶ ಪತ್ತೆಯಾದರೆ ವ್ಯಕ್ತಿಯನ್ನು ಶಿಕ್ಷೆಗೊಳಪಡಿಸಬಹುದು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ