ಉಚಿತವಾಗಿ ನೋಡಿರಿ ನಿಮ್ಮ ಸಿಬಿಲ್‌ ಸ್ಕೋರ್‌

Team Udayavani, Nov 18, 2019, 5:47 AM IST

ಎರಡು ವಾರದ ಹಿಂದೆ ರಿಪೋ ದರ ಆಧಾರಿತ ಬಡ್ಡಿ ದರಗಳ ಹೊಸ ಪದ್ಧತಿಯ ಬಗ್ಗೆ ಬರೆದೆನಷ್ಟೆ? ಆರ್‌.ಬಿ.ಐ. ನಿರ್ದೇಶಿಸಿದ ಈ ಹೊಸ ಪದ್ಧತಿಯಲ್ಲಿ ಗೃಹ ಸಾಲದ ಬಡ್ಡಿ ದರವನ್ನು ರಿಪೋ ದರ, ಬ್ಯಾಂಕಿಗೆ ಇರುವ ವೆಚ್ಚ ಮಾತ್ರವಲ್ಲದೆ ಸಾಲದ ಮರುಪಾವತಿಯ ಬಗ್ಗೆ ಇರುವ ರಿಸ್ಕ್ ಅಥವಾ ಅಪಾಯದ ಮೇಲೂ ಕೂಡಾ ನಿರ್ಧರಿಸಲಾಗುತ್ತದೆ. ಸಾಲ ಮರು ಪಾವತಿ ಆಗದೆ ಬ್ಯಾಂಕಿಗೆ “ಗೋವಿಂದ’ ಆಗುವ ಅಪಾಯವನ್ನೂ ಕೂಡಾ ಬ್ಯಾಂಕುಗಳು ನಿರ್ಧರಿಸಿ ಆ ಕಾರಣಕ್ಕಾಗಿ ಬಡ್ಡಿ ದರವನ್ನು ತುಸು ಏರಿಸಬಹುದು. ಅಂತೆಯೇ ಸಾಲ ಪಡೆದ ಬಳಿಕವೂ ಕೂಡಾ ಇಂತಹ ರಿಸ್ಕ್ ಪ್ರೀಮಿಯಂ ಅನ್ನು ನಿಮ್ಮ ರಿಸ್ಕ್ ಪ್ರಮಾಣ ನೋಡಿ ಏರಿಳಿ ಸುವ ಹಕ್ಕನ್ನು ಬ್ಯಾಂಕುಗಳು ಹೊಂದಿರುತ್ತವೆ. ಈ ರೀತಿಯ ರಿಸ್ಕ್ ಆಧಾರಿತ ಹೆಚ್ಚುವರಿ ದರ ಸುಮಾರು ಶೇ.0.1 ಅಥವಾ ತುಸು ಜಾಸ್ತಿಯೇ ಇರಬಹುದು.ಬಡ್ಡಿಯ ವಿಷಯ ಹಾಗಿರಲಿ, ಲಾಗಾಯ್ತಿನಿಂದಲೂ ಬ್ಯಾಂಕುಗಳು ಯಾವುದೇ ಸಾಲವನ್ನು ಮಂಜೂರು ಮಾಡುವಾಗಲೂ ನಿಮ್ಮ ರಿಸ್ಕ್ ಪ್ರಮಾಣವನ್ನು ನೋಡಿಯೇ ನೀಡುತ್ತಿರುವುದು ಸರಿ ಸುಮಾರು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ.

ಬ್ಯಾಂಕುಗಳು ರಿಸ್ಕ್ ಪ್ರಮಾಣವನ್ನು “ಸಿಬಿಲ್‌ ಸ್ಕೋರ್‌’ ನೋಡಿ ನೀಡುತ್ತವೆ ಎನ್ನುವುದರ ಬಗ್ಗೆ ಕೂಡಾ ಬಹುತೇಕರು ಕೇಳಿರುತ್ತಾರೆ. ಆದರೆ ಏನಿದು ಸಿಬಿಲ್‌ ಸ್ಕೋರ್‌? CIBIL ಅಂದರೆ ಕ್ರೆಡಿಟ್‌ ಇನ್ಫರ್ಮೇಶನ್‌ ಬ್ಯೂರೋ ಆಫ್ ಇಂಡಿಯಾ ಲಿಮಿಟೆಡ್‌. ಅವರು ನೀಡುವ ವರದಿಯನ್ನು CIBIL Report ಅಥವಾ CIR Report(ಕ್ರೆಡಿಟ್‌ ಇನ್ಫರ್ಮೇಶನ್‌ ರಿಪೋರ್ಟ್‌) ಅಂತಲೂ ಕರೆಯುತ್ತಾರೆ. ಈ ಸಂಸ್ಥೆಯು ವೈಯಕ್ತಿಕ ಮತ್ತು ಸಂಸ್ಥೆಗಳ ಕ್ರೆಡಿಟ್‌ ಅಥವಾ ಸಾಲಗಳ ಮಾಹಿತಿಯನ್ನು ಕಲೆಹಾಕುತ್ತದೆ ಮತ್ತು ಆ ಪ್ರಕಾರ ಒಂದು ಮೂರಂಕಿಯ ಸ್ಕೋì ಅನ್ನು ನೀಡುತ್ತದೆ. ಈ ಸ್ಕೋರ್‌ 300ರಿಂದ ಆರಂಭಗೊಂಡು 900 ವರೆಗೆ ಇರಬ ಹುದು. ಇದು ಸಾಲ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿ ಯನ್ನು ಮಾತ್ರ ಕಲೆ ಹಾಕುತ್ತದೆ ಎನ್ನುವುದನ್ನು ಇನ್ನೊಮ್ಮೆ ಸ್ಪಷ್ಟವಾಗಿ ಗಮನಿಸಿ. ಇದರಲ್ಲಿ ನಿಮ್ಮ ಉಳಿತಾಯ, ಹೂಡಿಕೆ,ಆಸ್ತಿ, ಸ್ಥಿತಿಗತಿ, ಇತ್ಯಾದಿಗಳ ವಿವರಗಳು ಬರುವುದಿಲ್ಲ. ಸುಮಾರಾಗಿ 700 ಅಥವಾ 750ರ ಮೇಲಿನ ಸ್ಕೋರ್‌ ಸಾಲ ಮಂಜೂರಾಗಲು ಉತ್ತಮ ಎಂದು ಪರಿಗಣಿಸಲ್ಪಡುತ್ತದೆ. ಸ್ಕೋರ್‌ ಕಡಿಮೆಯಾದಂತೆ ಮಂಜೂರಾಗುವುದು ಕಷ್ಟ ಅಲ್ಲದೆ ಹೆಚ್ಚಿನ ಬಡ್ಡಿ ತೆರಬೇಕಾಗಿ ಬರಬಹುದು.

ಸ್ಕೋರ್‌ ಲೆಕ್ಕಾಚಾರ ಹೇಗೆ?: ಸಿಬಿಲ್‌ ರಿಪೋರ್ಟಿನಲ್ಲಿ ಮುಖ್ಯವಾಗಿ ನಿಮ್ಮ ಸಿಬಿಲ್‌ ಕ್ರೆಡಿಟ್‌ ಸ್ಕೋರ್‌ ಇರುತ್ತದೆ. ಈ ಮೂರಂಕಿಯ ಸಂಖ್ಯೆಯನ್ನು ನಿಮ್ಮ ವಿವಿಧ ಸಾಲ ಖಾತೆಗಳ ಹಾಗೂ ಕ್ರೆಡಿಟ್‌ ಕಾರ್ಡುಗಳ ಮರುಪಾವತಿಯ ಚರಿತ್ರೆ ಯನ್ನು ನೋಡಿ ನೀಡಲಾಗುತ್ತದೆ, ಅಲ್ಲದೆ ಬ್ಯಾಂಕಿನವರು ನಿಮ್ಮ ಬಗ್ಗೆ ಸಿಬಿಲ್‌ನಲ್ಲಿ ಮಾಡುವ ವಿಚಾರಣೆಯನ್ನು ಸಹಿತ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನಿಮ್ಮ ಮರುಪಾವತಿಯ ಚರಿತ್ರೆ ಕೆಟ್ಟದಾಗಿದ್ದಲ್ಲಿ ನಿಮ್ಮ ಸ್ಕೋರ್‌ ಕಡಿಮೆಯಾದೀತು. ಉತ್ತಮ ಸಮಯಕ್ಕೆ ಸರಿಯಾದ ಪಾವತಿ ಇದ್ದಲ್ಲಿ ಸ್ಕೋರ್‌ ಜಾಸ್ತಿಯಾದೀತು. ಅಲ್ಲದೆ, ನೀವು ಪ್ರತಿ ಬಾರಿ ಒಂದು ಬ್ಯಾಂಕಿಗೆ ಹೋಗಿ ಸಾಲ/ಕ್ರೆಡಿಟ್‌ ಕಾರ್ಡ್‌ ಗೆ ಅರ್ಜಿ ಹಾಕಿದಾಗಲೂ ಆ ಬ್ಯಾಂಕ್‌ ನಿಮ್ಮ ಚರಿತ್ರೆಯ ಬಗ್ಗೆ ಸಿಬಿಲ್‌ ಸೈಟಿನಲ್ಲಿ ವಿಚಾರಣೆ ನಡೆಸುತ್ತದೆ. ಜಾಸ್ತಿ ವಿಚಾರಣೆ ಇದ್ದಷ್ಟೂ ನಿಮ್ಮ ಸಾಲದ ಅಭ್ಯಾಸ ಜಾಸ್ತಿ ಎಂದು ನಿಮ್ಮ ಸ್ಕೋರ್‌ ಕಡಿಮೆಯಾದೀತು.

ತಕರಾರು: ನಿಮ್ಮ ಕ್ರೆಡಿಟ್‌ ಚರಿತ್ರೆಯ ಬಗ್ಗೆ ಇರುವ ಈ ಏಕಮಾತ್ರ ವರದಿಯಲ್ಲಿ ತಪ್ಪುಗಳು ನುಸುಳಬಹುದು. ನೀವು ಪಡಕೊಂಡು, ಮರು ಪಾವತಿಸಿ ರದ್ದು ಮಾಡಿದ ಸಾಲಗಳ ವಿವರಗಳೂ ಕೂಡಾ ತಪ್ಪಾಗಿ ವರದಿಯಾಗಿರ ಬಹುದು ಅಥವಾ ನಿಮ್ಮ ಕ್ರೆಡಿಟ್‌ ಕಾರ್ಡ್‌ ಪಾವತಿಗಳು ವರದಿಯಾಗದೆ ಬಾಕಿ ಮೊತ್ತವೆಂದು ಕಾಣಿಸಿಕೊಳ್ಳಬಹುದು. ಈ ರೀತಿ ಯಾವುದೇ ತಕರಾರು ಇದ್ದರೂ ಅಲ್ಲಿಯೇ ಇರುವ Dispute Resolution ಬಟನ್‌ ಒತ್ತಿ ನಿಮ್ಮ ತಕರಾರನ್ನು ದಾಖಲಿಸಬೇಕು. ತಪ್ಪು ಮಾಹಿತಿಯಿಂದ ವೃಥಾ ನಿಮ್ಮ ಕ್ರೆಡಿಟ್‌ ಸ್ಕೋರ್‌ ಕಡಿಮೆಯಾಗಬಾರದು.

ಎಲ್ಲಿದೆ ರಿಪೋರ್ಟ್‌?: ನಿಮ್ಮ ಸಿಬಿಲ್‌ ವರದಿ ಎಲ್ಲಿದೆ? ನೀವು ಒಂದು ಸಾಲಕ್ಕೆ ಅಥವಾ ಕ್ರೆಡಿಟ್‌ ಕಾರ್ಡಿಗೆ ಅರ್ಜಿ ಹಾಕುವುದಿದ್ದರೆ ಅದಕ್ಕೆ ಅತ್ಯಗತ್ಯವಾಗಿರುವ ಸಿಬಿಲ್‌ ಸ್ಕೋರ್‌ ಹೇಗಿರಬಹುದು ಎನ್ನುವ ಕುತೂಹಲ ನಿಮಗೆಲ್ಲರಿಗೂ ಇರುತ್ತದೆ. ಬ್ಯಾಂಕಿನವರು ಅದನ್ನು ನೋಡಿಯೇ ಅಲ್ಲವೇ ಅರ್ಜಿ ಮಂಜೂರು ಮಾಡುವುದು? ನಿಮ್ಮ ವಿಸ್ತೃತವಾದ ಸಿಬಿಲ್‌ ರಿಪೋರ್ಟನ್ನು ಪಡೆಯಲು ಚಂದಾ ಕಟ್ಟಬೇಕು. ಮೂರು ರೀತಿಯ ಪ್ಲಾನ್‌ಗಳಿವೆ. ಸುಮಾರು ರೂ. 550 ರಿಂದ 1200 ವರೆಗೆ ಪ್ಲಾನ್‌ಗಳಿವೆ. ಆದರೆ ಈಗ ಕೇವಲ ಸ್ಕೋರ್‌ ಮತ್ತು ಕೆಲ ಮೂಲಭೂತ ವಿಚಾರಗಳನ್ನು ಉಚಿತ ವಾಗಿ ಪಡೆಯಲು ಬರುತ್ತದೆ.

ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ರಿಜಿಸ್ಟರ್‌ ಮಾಡಿಕೊಳ್ಳಿ. ಹಾಗೆ ನೋಂದಾಯಿಸಿಕೊಳ್ಳಲು ನಿಮ್ಮ ಹೆಸರು, ಲಿಂಗ, ಜನ್ಮ ದಿನಾಂಕ, ಪಿನ್‌ಕೋಡ್‌, ಪ್ಯಾನ್‌ ನಂಬರ್‌, ಇ-ಮೈಲ್, ಮೊಬೈಲ್‌ ಮಾಹಿತಿಗಳನ್ನು ನಮೂದಿ ಸಿದರೆ ಸಾಕು. ನಿಮ್ಮ ಗುರುತನ್ನು ಖಚಿತಪಡಿಸಿಕೊಳ್ಳಲು ಒಂದು ಒಟಿಪಿ ನಿಮ್ಮ ಮೊಬೈಲಿಗೆ ಬರುತ್ತದೆ. ಹಾಗೆ ರಿಜಿಸ್ಟ್ರೇಶನ್‌ ಮಾಡಿಸಿಕೊಂಡಲ್ಲಿ ಉಚಿತವಾಗಿ ನಿಮ್ಮ ಸಿಬಿಲ್‌ ಸ್ಕೋರ್‌ ನೋಡಲು ಸಾಧ್ಯ.

ಏನಿದೆ ಈ ರಿಪೋರ್ಟಿನಲ್ಲಿ?: ನಿಮ್ಮ ಸಾಲಗಳ ಹಾಗೂ ಕ್ರೆಡಿಟ್‌ ಕಾರ್ಡುಗಳ ಸಮಗ್ರ ವಿವರಗಳಲ್ಲದೆ, ನಿಮ್ಮ ವೈಯಕ್ತಿಕ ವಿವರಗಳನ್ನೂ ಕೂಡಾ ಈ ವರದಿಯಲ್ಲಿ ಕಾಣಬಹುದು. ನಿಮ್ಮ ಹೆಸರು, ಜನ್ಮ ದಿನಾಂಕ, ಲಿಂಗ ಹಾಗೂ ನಿಮ್ಮ ಗುರುತು; ಅಂದರೆ ಪ್ಯಾನ್‌/ಪಾಸ್‌ ಪೋರ್ಟ್‌,ವೋಟರ್‌ ಸಂಖ್ಯೆ ಇತ್ಯಾದಿ. ಅಲ್ಲದೆ ನಿಮ್ಮ ವಿಳಾಸ, ಉದ್ಯೋಗ ಹಾಗೂ ಆದಾಯದ ವಿವರಗಳು ಕೂಡಾ ಅದರಲ್ಲಿ ಕಾಣಬಹುದು.

ಸ್ಕೋರ್‌ ಹೆಚ್ಚಿಸುವುದು ಹೇಗೆ?: ನಿಮ್ಮ ಕ್ರೆಡಿಟ್‌ ಸ್ಕೋರ್‌ 700ಕ್ಕಿಂತ ಕೆಳಗೆ ಇದ್ದರೆ ನಿಮಗೆ ಸಾಲ ಸಿಗುವುದು ಕಷ್ಟಕರ ವಾಗಬಹುದು ಅಥವಾ ನಿಮ್ಮ ಬಡ್ಡಿ ದರ ಹೆಚ್ಚಳ ವಾಗ ಬಹುದು. ಸಂಪೂರ್ಣ ಭದ್ರತೆ ನೀಡಬೇಕಾಗಿ ಬರಬಹುದು. 900 ಕ್ಕೆ ಹತ್ತಿರವಾದಂತೆ ಸಾಲ ಸುಲಭ ಮತ್ತು ಅಗ್ಗವಾಗ ಬಹುದು. ಹಗಾಗಿ ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ಹೆಚ್ಚಿಸಿ ಕೊಳ್ಳುವುದು ಹೇಗೆ ಎನ್ನುವುದು ನಿಮ್ಮ ಆಸಕ್ತಿಯಿರಬಹುದು.

ನಿಮ್ಮ ಬಡ್ಡಿ/ಸಾಲವನ್ನು ಯಾವತ್ತಿಗೂ ಸಮಯಕ್ಕೆ ಸರಿಯಾಗಿ ಪಾವತಿಸಿ.ವಿಳಂಬವಾದಲ್ಲಿ ನಿಮ್ಮ ಕ್ರೆಡಿಟ್‌ ಸ್ಕೋರ್‌ ಕೆಳಕ್ಕೆ ಇಳಿಯಬಹುದು. ಆದಷ್ಟು ಕಡಿಮೆ ಸಾಲ ಮಾಡಿ, ಜಾಸ್ತಿ ಸಾಲ ಇದ್ದರೆ ಕಟ್ಟುವುದು ವಿಳಂಬವಾಗ ಬಹುದು. ಆದಷ್ಟು ಮಟ್ಟಿಗೆ ಪರ್ಸನಲ್‌ ಸಾಲ/ಕ್ರೆಡಿಟ್‌ ಕಾರ್ಡ್‌ ಸಾಲಗಳಿಗೆ ಕಡಿವಾಣ ಹಾಕಿ. ಅವುಗಳಿಗೆ ಶ್ಯೂರಿಟಿ ಇರುವುದಿಲ್ಲ. ಹಾಗಾಗಿ ವಿಳಂಬವಾದರೆ ಸ್ಕೋರ್‌ ಪಾತಾಳಕ್ಕೆ ಇಳಿಯಬಹುದು. ನೀವು ಜಂಟಿಯಾಗಿ ತೆಗೆದುಕೊಂಡ ಸಾಲ, ಮೈನರ್‌ ಮಕ್ಕಳ ಹೆಸರಿನಲ್ಲಿ ತೆಗೆದುಕೊಂಡ ಸಾಲ ಮತ್ತು ಅತಿ ಮುಖ್ಯವಾಗಿ ನೀವು ಗ್ಯಾರಂಟಿ ನಿಂತ ಸಾಲ ಕೂಡಾ ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ಕೆಳಕ್ಕೆ ಇಳಿಸೀತು. ಅವೆಲ್ಲದಕ್ಕೂ ನೀವು ಬಾಧ್ಯಸ್ಥರು ಎನ್ನುವುದನ್ನು ಮರೆಯ ಬೇಡಿ. ಸಾಲ ಪಡೆಯುವ ಮುನ್ನ ನಿಮ್ಮ ಸ್ಕೋರ್‌ ತಪಾಸಣೆ ಮಾಡಿ ಸಮಸ್ಯೆ ಇದ್ದಲ್ಲಿ ಅದನ್ನು ಅಭಿವೃದ್ಧಿಪಡಿಸುವ ಯೋಚನೆ ಮಾಡಿ.

– ಜಯದೇವ ಪ್ರಸಾದ ಮೊಳೆಯಾರ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಾರಿಗೆ ತಂದಿರುವ ಫಾಸ್ಟಾಗ್‌ ವ್ಯವಸ್ಥೆ ವಾಹನ ಚಾಲಕ-ಮಾಲೀಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದೇ ಹೇಳಬೇಕಾಗುತ್ತದೆ....

  • ಶಬರಿಮಲೆ: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ವಾರ್ಷಿಕ ಯಾತ್ರೆ ಆರಂಭವಾಗಿ 28 ದಿನಗಳು ಪೂರೈಸಿದ್ದು, ದೇಗುಲದ ಆದಾಯವು 104 ಕೋಟಿ ರೂ. ದಾಟಿದೆ ಎಂದು ತಿರುವಾಂಕೂರು...

  • ಮುಂಬಯಿ: 'ಶೋಲೆ,' 'ಗರಂ ಹವಾ', 'ತ್ರಿಶೂಲ್‌' ಖ್ಯಾತಿಯ, ಹಿಂದಿ ಸಿನೆಮಾ ಕ್ಷೇತ್ರದ ಹಿರಿಯ ನಟಿ ಗೀತಾ ಸಿದ್ಧಾರ್ಥ್ ನಿಧನ ಹೊಂದಿದ್ದಾರೆ. ಸಿನೆಮಾ ಮತ್ತು ಟಿವಿ ಕಲಾವಿದರ...

  • ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಬೆಳ್ತಂಗಡಿಯ ಮಂಜೊಟ್ಟಿ ಮತ್ತು ಮೂಡುಬಿದಿರೆ ಸಮೀಪದ ಶಿರ್ತಾಡಿಯಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಐವರು ಮೃತಪಟ್ಟಿದ್ದಾರೆ....

  • ನೋಯ್ಡಾ: ನೋಯ್ಡಾದಲ್ಲಿ ರಸ್ತೆ ಬದಿಯಲ್ಲಿ ಬಿರಿಯಾನಿ ಮಾರುತ್ತಿದ್ದ ಯುವಕನ ಮೇಲೆ ಜಾತಿ ಹೆಸರಿನಲ್ಲಿ ನಿಂದಿಸಿ, ಥಳಿಸಲಾಗಿದೆ. ಈ ಬಗೆಗಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ...