‘ಸಹಜ’ವಾದ ಫೈಲಿಂಗ್‌ ಸುಲಭವಾಗಿ ಮಾಡಿ

Team Udayavani, Jul 22, 2019, 5:01 AM IST

ಕಡ್ಡಾಯ ಆಡಿಟ್ ಇರುವ ಬಿಸಿನೆಸ್‌ ಹಾಗೂ ಪ್ರೊಫೆಶನಲ್ ವ್ಯಕ್ತಿಗಳನ್ನು ಹೊರತುಪಡಿಸಿ ಸಂಬಳ, ಪೆನ್ಶನ್‌, ಮನೆ ಬಾಡಿಗೆ, ಬಡ್ಡಿ ಆದಾಯ ಇತ್ಯಾದಿ ನಿಗದಿತ ಆದಾಯವುಳ್ಳ ಬಹುತೇಕ ಜನಸಾಮಾನ್ಯರೆಲ್ಲರಿಗೆ ಅದಾಯ ತೆರಿಗೆಯ ರಿಟರ್ನ್ ಫೈಲಿಂಗ್‌ ಮಾಡಲು ಕೊನೆಯ ದಿನಾಂಕ ಜುಲೈ 31. ಆ ಗಡಿ ದಾಟಿ ವಿಳಂಬ ಸಲ್ಲಿಕೆ ಮಾಡಿದರೆ ಡಿಸೆಂಬರ್‌ 31ರವರೆಗೆ ರೂ. 5000 ಹಾಗೂ ಮಾರ್ಚ್‌ 31ರ ವರೆಗೆ ರೂ.10000 ದಂಡ ಬೀಳುತ್ತದೆ. (ಆದರೆ ಒಟ್ಟು ಆದಾಯ ರೂ. 5 ಲಕ್ಷದ ಒಳಗಿನವರಿಗೆ ಇದನ್ನು ರೂ.1,000ಕ್ಕೆ ಸೀಮಿತಗೊಳಿಸಲಾಗಿದೆ) ಮಾರ್ಚ್‌ 31,2020ರ ಅನಂತರ ಫೈಲಿಂಗ್‌ ಮಾಡಲು ಬರುವುದಿಲ್ಲ. ಕರ ಇಲಾಖೆಯನ್ನು ಕಾನೂನು ಮೂಲಕವೇ ಎದುರಿಸಬೇಕಾಗುತ್ತದೆ. ಹಾಗಾಗಿ ಜಾಹೀರಾತುಗಳು ಹೇಳುವಂತೆ ತ್ವರೆ ಮಾಡಿ.

ಕೆಲ ವರ್ಷಗಳಿಂದ ರಿಟರ್ನ್ ಫೈಲಿಂಗ್‌ ಮಾಡಲು ಮೊದಲಿನಂತೆ ಟ್ಯಾಕ್ಸಾಫೀಸಿಗೆ ಹೋಗಿ ಕ್ಯೂ ನಿಲ್ಲುವ ಅಗತ್ಯವೇ ಇಲ್ಲ. ಯಾರು ಬೇಕಾದರೂ ಆನ್‌ಲೈನ್‌ ರಿಟರ್ನ್ ಫೈಲಿಂಗ್‌ ಮಾಡಬಹುದು. ಕೆಲ ವರ್ಗದವರಿಗೆ ರೂ.5 ಲಕ್ಷ ಮೀರಿದ ಆದಾಯದವರಿಗೆ, ರಿಫ‌ಂಡ್‌ ಪಡೆಯಬೇಕಾದವರಿಗೆ ಆನ್‌ಲೈನ್‌ ಫೈಲಿಂಗ್‌ ಕಡ್ಡಾಯವೇ ಆಗಿದೆ. ಇದು ಸುಲಭವೂ ಹೌದು.

ರಿಟರ್ನ್ ಫೈಲಿಂಗ್‌ ಮಾಡಲು ಯಾವ ಫಾರ್ಮ್ ಬಳಸಬೇಕೆನ್ನುವುದು ಹಲವರಿಗೆ ತಿಳಿದಿಲ್ಲ. ಫಾರ್ಮುಗಳು ಹಲವಾರು ಇವೆ. ನಮ್ಮ ಸಂದರ್ಭಕ್ಕೆ ಸೂಕ್ತ ಯಾವುದು? ನಾಲ್ಕು ಪ್ರಾಮುಖ್ಯ ಫಾರ್ಮುಗಳು ಮತ್ತು ಅವುಗಳ ಬಳಕೆಯ ಸಂದರ್ಭ ಈ ಕೆಳಗಿನಂತೆ:

ಐಟಿಆರ್‌-1/ಸಹಜ್‌

ವ್ಯಕ್ತಿಗತ , ಸಂಬಳ, ಪೆನ್ಶನ್‌ ಆದಾಯ, ಒಂದು ಮನೆಯ ಗೃಹಸಂಬಂಧಿ ಆದಾಯ, ಇತರ ಆದಾಯ, ಹಾಗೂ ರೂ.50 ಲಕ್ಷ ಮೀರದ ಒಟ್ಟು ಆದಾಯ ಉಳ್ಳವರು ಈ ಫಾರ್ಮನ್ನು ಉಪಯೋಗಿಸಬಹುದು. ಬಹುತೇಕ ನೌಕರರಿಗೆ ವೇತನ/ಪೆನ್ಶನ್‌ ಹಾಗೂ ಕೆಲವೊಂದು ಇತರ ಆದಾಯ (ಬಹುತೇಕ ಬಡ್ಡಿ) ಮಾತ್ರವೇ ಇರುವ ಕಾರಣ ಅಂಥ‌ವರಿಗೆ ಈ ಫಾರ್ಮ್ ಸೂಕ್ತ. ಒಂದು ಸ್ವಂತ ವಾಸದ ಅಥವಾ ಬಾಡಿಗೆಗೆ ನೀಡಿದ ಮನೆಯಿದ್ದವರೂ ಇದನ್ನು ಉಪಯೋಗಿಸಬಹುದಾಗಿದೆ.

ಐಟಿಆರ್‌- 2

ವ್ಯಕ್ತಿಗತ ಹಾಗೂ ಹಿಂದು ಅವಿಭಕ್ತ ಕುಟುಂಬದವರಿಗಾಗಿ ಹಾಗೂ ಇದು ಸ್ವಂತ ಬಿಸಿನೆಸ್‌, ಪ್ರೊಫೆಶನ್‌ ಆದಾಯ ಇಲ್ಲದವರಿಗಾಗಿ ಮಾತ್ರ ಸೀಮಿತ.

ಐಟಿಆರ್‌- 3

ಇದು ಸ್ವಂತ ಬಿಸಿನೆಸ್‌/ಪ್ರೊಫೆಶನ್‌ ಆದಾಯ ಉಳ್ಳವರಿಗಾಗಿ. ಇಲ್ಲಿ ನಿಮ್ಮ ಆದಾಯ ವೆಚ್ಚ ಮತ್ತು ಲಾಭಾಂಶದ ಸಂಪೂರ್ಣ ವಿವರಗಳನ್ನು ನೀಡಬೇಕಾಗುತ್ತದೆ. ಎಲ್ಲಾ ಲೆಕ್ಕಪತ್ರಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ.

ಐಟಿಆರ್‌- 4/ಸುಗಮ್

ಇದು ಮೇಲಿನಂತೆ ಬಿಸಿನೆಸ್‌/ಪ್ರೊಫೆಶನ್‌ ಆದಾಯಕ್ಕೆ ಸಂಬಂಧಪಟ್ಟದ್ದು. ಆದರೆ, ಲಾಭಾಂಶವನ್ನು ಕೇವಲ ಬಿಸಿನೆಸ್‌/ಪ್ರೊಫೆಶನ್‌ ಟರ್ನ್ ಓವರ್‌ ಅನುಸರಿಸಿ ಅದರ ಮೇಲೆ ಯಾವುದೇ ಖರ್ಚುವೆಚ್ಚ, ಲೆಕ್ಕಪತ್ರಗಳ ಅಗತ್ಯವಿಲ್ಲದೆ ಒಂದು ನಿಗದಿತ ಶೇಕಡಾ ಲಾಭಾಂಶವನ್ನು ಊಹಿಸಿ ಅದರ ಮೇಲೆ ತೆರಿಗೆ ಕಟ್ಟುವಂತಹ ‘ಪ್ರಿಸಂಪ್ಟಿವ್‌ ಟ್ಯಾಕ್ಸ್‌ ಪದ್ಧತಿ’ಯಲ್ಲಿ ಕರಕಟ್ಟುವವರಿಗಾಗಿ ಈ ಫಾರ್ಮ್.

ಇನ್ನು ಇವತ್ತಿನ ಪ್ರಸಂಗ – ಐಟಿಆರ್‌-1 ಅಥವಾ ಸಹಜ್‌ ಫಾರ್ಮ್ ಉಪಯೋಗಿಸಿ ಆನ್‌ಲೈನ್‌ ಆಗಿ ರಿಟರ್ನ್ ಫೈಲಿಂಗ್‌ ಮಾಡುವುದು ಹೇಗೆ ಎನ್ನುವುದು.

ಮೊತ್ತಮೊದಲಾಗಿ ಆದಾಯ ತೆರಿಗೆಯ ಜಾಲತಾಣ www.incometaxindiaefiling.gov.inಗೆ ಹೋಗಿ ಲಾಗ್‌ಇನ್‌ ಬಟನ್‌ ಒತ್ತಿ, ನೀವು ಈಗಾಗಲೇ ರಿಜಿಸ್ಟರ್‌ ಮಾಡಿಕೊಂಡಿದ್ದಲ್ಲಿ ನಿಮ್ಮ ಪ್ಯಾನ್‌ ನಂಬರ್‌, ಪಾಸ್‌ವರ್ಡ್‌ ಬಳಸಿಕೊಂಡು ಲಾಗ್‌ಇನ್‌ ಆಗಿಬಿಡಿ. ರಿಜಿಸ್ಟರ್‌ ಆಗಿರದ ಕುಳವಾರುಗಳು ಮೊತ್ತ ಮೊದಲು ಈ ಜಾಲತಾಣದಲ್ಲಿ ರಿಜಿಸ್ಟರ್‌ ಆಗಿರಬೇಕಾದದ್ದು ಅವಶ್ಯ. ಕೇವಲ ಪ್ಯಾನ್‌ ನಂಬರ್‌ ಹೊಂದಿರುವ ಕೂಡಲೇ ಜಾಲತಾಣದಲ್ಲಿ ನಿಮ್ಮ ಖಾತೆ ರಿಜಿಸ್ಟ್ರೇಶನ್‌ ಆಗಿರುವುದಿಲ್ಲ. (ಲಾಗ್‌ಇನ್‌ ಆಗುವ ಸಂದರ್ಭದಲ್ಲಿ ಜಾಲತಾಣ ನಿಮ್ಮ ಆಧಾರ್‌ ನಂಬರ್‌ ಲಿಂಕ್‌ ಮಾಡಿಕೊಳ್ಳಲು – ಹಾಗೆ ಈಗಾಗಲೇ ಮಾಡಿರದಿದ್ದಲ್ಲಿ- ಕೇಳಬಹುದು ಅಥವಾ ನಿಮ್ಮ ವಿಳಾಸ ವಿವರಗಳನ್ನು ಪರಿಷ್ಕರಿಸಲು ಕೇಳಬಹುದು).

ಆನ್‌ಲೈನ್‌ ಫೈಲಿಂಗ್‌

ಮೇಲೆ ತಿಳಿಸಿದ ಇ-ಫೈಲಿಂಗ್‌ ಜಾಲತಾಣದಲ್ಲಿ ಲಾಗ್‌ಇನ್‌ ಆಗಿ ಒಳಹೊಕ್ಕ ಕೂಡಲೇ ಕಾಣಿಸಿಕೊಳ್ಳುವ ಪರದೆಯಲ್ಲಿ ನಿಮ್ಮ ಪ್ಯಾನ್‌ ನಂಬರ್‌, ಬೇಕಾದ ಐಟಿಆರ್‌ ಫಾರ್ಮ್ ನಂಬರ್‌,ಅಸೆಸ್ಮೆಂಟ್ ವರ್ಷ (ಸದ್ರಿ 2019-20, ಅಂದರೆ, ವಿತ್ತ ವರ್ಷ 2018-19; ದಯವಿಟ್ಟು ಗಮನಿಸಿ), ಮೋಡ್‌ (ಆನ್‌ಲೈನ್‌ ತಯಾರಿ ಅಥವಾ XML upload), ಇಷ್ಟು ಆಯ್ಕೆಗಳನ್ನು ತುಂಬಿ ಮುಂದಕ್ಕೆ ಹೋಗಿರಿ. ಮುಂದೆ ತೆರೆದುಕೊಳ್ಳುವ ಸ್ಕ್ರೀನಿನಲ್ಲಿ ಸೂಚನೆಗಳ ಪುಟ ಸಹಿತ ಇನ್ನು 5 ಪುಟಗಳು ಇರುತ್ತವೆ. ಅವುಗಳನ್ನು ಒಂದೊಂದಾಗಿ ತೆರೆದು ಮಾಹಿತಿಗಳನ್ನು ತುಂಬಿರಿ

  1. ವೈಯಕ್ತಿಕ ಮಾಹಿತಿ

ಈ ಪುಟದಲ್ಲಿ ಹೆಸರು, ಪ್ಯಾನ್‌ ನಂಬರ್‌, ಲಿಂಗ, ವಿಳಾಸ, ಸ್ಟೇಟಸ್‌, ಇ-ಮೈಲ್, ಮೊಬೈಲ್, ಆಧಾರ್‌ ನಂಬರ್‌ ಇತ್ಯಾದಿ ವಿವರಗಳನ್ನು ತುಂಬಿರಿ. ಅಲ್ಲೇ ಕೆಳಗೆ ನಿಮ್ಮ ಎಂಪ್ಲಾಯೀ ಕೆಟಗರಿ, ರೆಸಿಡೆಂಟ್/ಎನ್ನಾರೈ, ಟ್ಯಾಕ್ಸ್‌ ರಿಫ‌ಂಡ್‌/ಪಾವತಿ ಬಾಕಿ ಇದೆ ಯಾ ಇಲ್ಲ, ಈ ಸಲ್ಲಿಕೆಯು ಕೊನೆ ದಿನಾಂಕದ ಮೊದಲೋ ಅನಂತರವೋ ಅಥವಾ ಇನ್ಯಾವುದಾದರು ಕಾರಣಕ್ಕೆ ಪರಿಷ್ಕೃತವೋ, ಅಲ್ಲದೆ ನೀವು ಪೋರ್ಚುಗೀಸ್‌ ಕಾನೂನಿನಡಿ ಬರುತ್ತೀರಾ? ಇತ್ಯಾದಿ ವಿವರಗಳನ್ನು ಆಯ್ದು ನಮೂದಿಸಬೇಕು.

2. ಆದಾಯದ ವಿವರಗಳು

ಈ ಪುಟದಲ್ಲಿ ಸಂಬಳದ ಆದಾಯ, ಗೃಹ ಸಂಬಂಧಿ ಆದಾಯ ಹಾಗೂ ಈ ಇತರ ಆದಾಯಗಳ ಮೊತ್ತವನ್ನು ನಮೂದಿಸಿರಿ. ಈ ವರ್ಷದ ಸಲ್ಲಿಕೆಯಲ್ಲಿ ಕೆಲ ವಿಷಯಗಳು ಸ್ವಯಂ ತುಂಬಿಕೊಳ್ಳುತ್ತವೆ. ಉದಾ: ಸ್ಯಾಲರಿ ಮೌಲ್ಯ ತುಂಬಿದ ಕೂಡಲೇ ಪ್ರೊಫೆಶನಲ್ ಟ್ಯಾಕ್ಸ್‌ ಹಾಗೂ ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತಗಳು ಅವಾಗಿಯೇ ಉಂಬಿಕೊಳ್ಳುತ್ತವೆ. ಕೆಲ ವಿವರಗಳನ್ನು ನಾವೇ ತುಂಬ ಬೇಕಾಗಿದೆ. ಸಂಬಳದ ಆದಾಯದ ಅಡಿಯಲ್ಲಿ ಸ್ಯಾಲರಿ, ಅಲ್ಲೋವೆನ್ಸಸ್‌, ಪಕ್ಸ್‌ ರ್ ಮೌಲ್ಯ, ಸಂಬಳದ ಬದಲಿನ ಪ್ರಾಫಿಟ್ ಇತ್ಯಾದಿ.

ಗೃಹ ಸಂಬಂಧಿ ಆದಾಯದ ಅಡಿಯಲ್ಲಿ ಅಂತಹ ಆದಾಯ ಇದ್ದಲ್ಲಿ ಮಾತ್ರ – ಮನೆಯ ನಮೂನೆ (ಸ್ವಂತ ವಾಸ ಯಾ ಬಾಡಿಗೆಗೆ ನೀಡಿದ್ದು) ಆದಾಯ (ಸಿಕ್ಕಿದ್ದು/ಸಿಗಬೇಕಾದ್ದು/ಸಿಗುವಂತದ್ದು), ಸ್ಥಳೀಯ ತೆರಿಗೆ ಪಾವತಿಸಿದ ವಿವರಗಳನ್ನು ತುಂಬಿದರೆ ಸಾಕು ವಾರ್ಷಿಕ ಮೌಲ್ಯ ಬರುತ್ತದೆ. ಬಾಡಿಗೆಗೆ ನೀಡಿದ ಮನೆ ಆಗಿದ್ದರೆ ಅದರ 30% ಸ್ಟಾಂಡರ್ಡ್‌ ಡಿಡಕ್ಷನ್‌ ಕಳೆಯಲಾಗುತ್ತದೆ. ಸ್ವಂತ ವಾಸದ ಮನೆಗೆ ಬಾಡಿಗೆ ಆದಾಯ ಶೂನ್ಯವಾದ ಕಾರಣ ಈ ಸೌಲಭ್ಯ ಇಲ್ಲ. ಅವಲ್ಲದೆ ಹೌಸಿಂಗ್‌ ಲೋನ್‌ ಪಡೆದವರಾಗಿದ್ದರೆ ಅದರ ಮೇಲಣ ಬಡ್ಡಿ ಪಾವತಿಸಿದ್ದು/ ಪಾವತಿಸಬೇಕಾದದ್ದರ ಮೌಲ್ಯವನ್ನು ತುಂಬಿರಿ. ಹಾಗೆ ತುಂಬಿದರೆ ಒಟ್ಟಾರೆ ಮನೆಮಟ್ಟು ಆದಾಯದ ಮೌಲ್ಯ ದೊರಕುತ್ತದೆ.

ಅದರ ಕೆಳಗೆ ಇತರ ಆದಾಯದ ಸರದಿ. ಎಫ್.ಡಿ ಬಡ್ಡಿ, ಎಸ್‌.ಬಿ ಬಡ್ಡಿ, ಫ್ಯಾಮಿಲಿ ಪೆನ್ಶನ್‌ ಇತ್ಯಾದಿ ಇತರ ಆದಾಯಗಳಿದ್ದರೆ ಅದರ ಮೊತ್ತವನ್ನೂ ಅಲ್ಲೇ ವಿವರಗಳೊಂದಿಗೆ ಕೆಳಗಿನ ಕೋಣೆಯಲ್ಲಿ ನಮೂದಿಸಿರಿ.

ಈಗ ಅದರ ಕೆಳಗೆ ಆದಾಯ ತೆರಿಗೆ ರಿಯಾಯಿತಿಗಾಗಿ ಮಾಡಿದ ಎಲ್ಲಾ ಹೂಡಿಕೆ/ಖರ್ಚುಗಳನ್ನೂ ನಮೂದಿಸಿ. ಇದರಲ್ಲಿ 80ಸಿ, ಸಿಸಿಸಿ, ಸಿಸಿಡಿ(1)/(1ಬಿ)/(2), ಸಿಸಿಜಿ, ಡಿ, ಡಿಡಿ, ಡಿಡಿಬಿ, ಇ, ಇಇ, ಟಿಟಿಎ, ಯು, ಜಿಜಿ, ಟಿಟಿಎ, ಟಿಟಿಬಿ ಇತ್ಯಾದಿ ಎಲ್ಲಾ ಕರವಿನಾಯಿತಿಯ ಸೆಕ್ಷನ್ನುಗಳಡಿಯಲ್ಲಿ ಮಾಡಿದ ಹೂಡಿಕೆ/ಪಾವತಿಯನ್ನು ತುಂಬಿರಿ. ಈ ಸೆಕ್ಷನ್ನುಗಳ ವಿವರಗಳೂ ಅಲ್ಲೇ ಲಭ್ಯವಾಗಿದೆ. (ಕಳೆದ ವಾರದ ಕಾಕು ಕಟ್ಟಿಂಗ್‌ ಕೂಡಾ ರೆಫ‌ರ್‌ ಮಾಡಬಹುದು.)

ಇನ್ನೂ ಕೆಳಭಾಗದಲ್ಲಿ ಕಂಪ್ಯೂಟರ್‌ ನಿಮ್ಮ ಕರ ಲೆಕ್ಕ ಹಾಕಿ ಅದರ ಮೊತ್ತವನ್ನು ನಮೂದಿಸುತ್ತದೆ. ಮೂಲ ಕರ, ಸೆಸ್‌, ಬಡ್ಡಿ ಅಲ್ಲದೆ ಸೆಕ್ಷನ್‌ 87ಎ ರಿಯಾಯಿತಿ (ಕಟ್ಟುವ ಕರದಲ್ಲಿ ರೂ. 2500 ವರೆಗೆ ರಿಯಾಯಿತಿ; ಕರಾರ್ಹ ಆದಾಯ ರೂ. 3 ಲಕ್ಷದ ಒಳಗಿನವರಿಗೆ ಮಾತ್ರ) ಇತ್ಯಾದಿ ವಿವರಗಳು ಸಿಗುತ್ತವೆ.

3.ಕರ ವಿವರಗಳು

ಈ ಪುಟದಲ್ಲಿ ಇದುವರೆಗೆ ಕಟ್ಟಿದ ಆದಾಯ ಕರ – ಟಿಡಿಎಸ್‌, ಎಡ್ವಾನ್ಸ್‌ ಟ್ಯಾಕ್ಸ್‌ ಹಾಗೂ ಅಂತಿಮವಾಗಿ ಕಟ್ಟಿದ ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್‌ ಮತ್ತು ಅವುಗಳ ಬಿಎಸ್‌ಆರ್‌ ಕೋಡ್‌, ಚಲನ್‌ ನಂಬರ್‌, ದಿನಾಂಕ, ಮೊತ್ತ ಇತ್ಯಾದಿಗಳನ್ನು ನಮೂದಿಸಿ. ಈ ವಿವರಗಳನ್ನು ನಮೂದಿಸುವ ಮೊದಲು ಫಾರ್ಮ್ 16, 16ಎ ಹಾಗೂ 26ಎಎಸ್‌ಗಳನ್ನೂ ಪರಿಶೀಲಿಸಿಕೊಳ್ಳಿ. ಅವುಗಳಲ್ಲಿ ಆ ವಿವರಗಳು ಇರುತ್ತವೆ.

4.80ಜಿ

ಈ ಸೆಕ್ಷನ್‌ಗೆ ಪ್ರತ್ಯೇಕವಾಗಿ ಒಂದು ಪುಟವನ್ನು ಮೀಸಲಿಟ್ಟಿದ್ದಾರೆ. ನೀವು ಕರ ವಿನಾಯಿತಿ ಉಳ್ಳ ದೇಣಿಗೆ ಕೊಟ್ಟಿದ್ದಿದ್ದರೆ ಅದರ ವಿವರಗಳನ್ನು ಇಲ್ಲಿ ತುಂಬಬೇಕು. 100% ಹಾಗೂ 50% ವಿನಾಯಿತಿಗಳುಳ್ಳ (ಮಿತಿ ಇರುವ ಹಾಗೂ ಮಿತಿ ಇಲ್ಲದ) ಎಲ್ಲಾ ದೇಣಿಗೆಗಳ ವಿವರಗಳನ್ನು (ಹೆಸರು, ವಿಳಾಸ, ಪ್ಯಾನ್‌ ನಂಬರ್‌, ಮೊತ್ತ) ಇಲ್ಲಿ ತುಂಬಿ.

5.ಕಟ್ಟಿದ ಕರ ಮತ್ತು ಪರಿಶೀಲನೆ

ಈ ಪುಟದಲ್ಲಿ ನೀವು ಕಟ್ಟಿದ ಒಟ್ಟು ಕರಮೊತ್ತ, ಕಟ್ಟಬೇಕಾದ ಮೊತ್ತ, ಬಾಕಿ ಕಟ್ಟಬೇಕಾದ/ರಿಫ‌ಂಡ್‌ ಮೊತ್ತ ಇತ್ಯಾದಿಗಳ ವಿವರಗಳು ಅದರಷ್ಟಕ್ಕೇ ಲೆಕ್ಕ ಹಾಕಿ ಬರುತ್ತವೆ. ಕರ ಕಟ್ಟಲು ಬಾಕಿ ಇದ್ದರೇ ಅಲ್ಲೇ ಕೆಳಗೆ ಆನ್‌ಲೈನ್‌ ಕರ ಕಟ್ಟಲು ಸಹಾಯ ನೀಡುವ ಬಟನ್‌ ಇದೆ. ಅದನ್ನು ಒತ್ತಿದರೆ ಕರ ಕಟ್ಟಲು ಬೇಕಾದ ಚಲನ್‌ ಕಾಣಿಸಿಕೊಳ್ಳುತ್ತದೆ. ಅದನ್ನು ತುಂಬಿ ಆನ್‌ಲೈನ್‌ ಬ್ಯಾಂಕ್‌ ಸೌಲಭ್ಯ ಮೂಲಕ ಬಾಕಿ ಕರ ಕಟ್ಟಬಹುದು ಅಥವಾ ಬ್ಯಾಂಕಿಗೆ ಹೋಗಿಯೂ ಕಟ್ಟಬಹುದು.

ಅದಾದ ಬಳಿಕ ಈ ಪುಟದಲ್ಲಿ ನಿಮ್ಮ ಇಡೀ ವರ್ಷದ ಕರಮುಕ್ತ ಆದಾಯದ ಬಗ್ಗೆ ವಿವರಗಳನ್ನು ತುಂಬಬೇಕಾಗುತ್ತದೆ. ರೂ.5,000 ಮೀರದ ಕೃಷಿ ಆದಾಯ ಹಾಗೂ ಸೆಕ್ಷನ್‌ 10(38) ಅಡಿಯಲ್ಲಿ ಬರುವ ದೀರ್ಘ‌ಕಾಲಿಕ ಕರಮುಕ್ತ ಶೇರು ಆದಾಯ ಹಾಗೂ ಸೆಕ್ಷನ್‌ 10(34) ಅಡಿಯಲ್ಲಿ ಬರುವ ಕರಮುಕ್ತವಾದ ಡಿವಿಡೆಂಡ್‌ ಆದಾಯ ಮತ್ತು ಇನ್ನಿತರ ಯಾವುದೇ ಕರಮುಕ್ತ ಆದಾಯದ ಬಗ್ಗೆ ನಮೂದಿಸಬೇಕು. ಈ ಬಗ್ಗೆ ಅಲ್ಲಿ ಒಂದು ಉದ್ದದ ಪಟ್ಟಿಯೇ ಇದೆ. ಕರಮುಕ್ತ ಆದಾಯವಾದ್ದರಿಂದ ಇವುಗಳನ್ನು ಕರಲೆಕ್ಕಕ್ಕೆ ತೆಗೆದುಕೊಳ್ಳದಿದ್ದರೂ ಕೇವಲ ಮಾಹಿತಿಗಾಗಿ ಇವುಗಳನ್ನು ತುಂಬತಕ್ಕದ್ದು. ಭವಿಷ್ಯತ್ತಿನಲ್ಲಿ ನಿಮ್ಮಲ್ಲಿರುವ ಒಟ್ಟಾರೆ ಧನ ಸಂಪತ್ತನ್ನು ಸಮರ್ಥಿಸಲು ಈ ಮಾಹಿತಿಗಳು ಸಹಾಯವಾದೀತು. ನಿಮ್ಮ ಖಾತೆಗೆ ಬಂದಿರುವ ದೊಡ್ಡ ಮೊತ್ತವನ್ನು ತಾಳೆ ಹಾಕಲೂ ಇದು ಸಹಾಯಕವಾದೀತು.

ಅಷ್ಟೇ ಅಲ್ಲದೆ, ಇನ್ನೂ ಕೆಳಗೆ ಕಳೆದ ವಿತ್ತ ವರ್ಷದಲ್ಲಿ ಚಾಲನೆಯಲ್ಲಿ ಇದ್ದ ನಿಮ್ಮ ಎಲ್ಲಾ ಎಸ್‌ಬಿ ಖಾತೆಗಳ ನಂಬರ್‌, ಬ್ಯಾಂಕ್‌ ಹೆಸರು ಹಾಗೂ ಕೋಡ್‌ ಅನ್ನು ನಮೂದಿಸಿರಿ. ಖಾತೆಯಲ್ಲಿರುವ ಮೊತ್ತವನ್ನು ತುಂಬುವ ಅವಶ್ಯಕತೆ ಇಲ್ಲ. ರಿಫ‌ಂಡ್‌ ಬರುವುದಿದ್ದರೆ ಅದು ಯಾವ ಖಾತೆಗೆ ಬರಬೇಕು ಎನ್ನುವುದನ್ನೂ ಅಲ್ಲಿ ಗುರುತಿಸಿರಿ. ಎಲ್ಲದಕ್ಕೂ ಕೊನೆಗೆ ನಿಮ್ಮ ಹೆಸರು, ತಂದೆಯ ಹೆಸರು, ಸ್ಥಳ, ದಿನಾಂಕಗಳನ್ನು ನಮೂದಿಸಿ ಎಲ್ಲಾ ಮಾಹಿತಿಗಳನ್ನು ದೃಢೀಕರಿಸಿ. ಅಲ್ಲದೆ ಅಲ್ಲೇ ಕೆಳಗೆ ನೀವು ನಿಮ್ಮ ಕರ ಹೇಳಿಕೆಯನ್ನು ಯಾವ ರೀತಿಯಲ್ಲಿ ದೃಡೀಕರಿಸುತ್ತೀರಿ ಎನ್ನುವ ಆಯ್ಕೆಯನ್ನು ಟಿಕ್‌ ಮಾಡಿರಿ. (ವಿವರಗಳನ್ನು ಮುಂದೆ ನೀಡಲಾಗಿದೆ)

ಈ ಎಲ್ಲಾ ಮಾಹಿತಿಗಳನ್ನು ತುಂಬುತ್ತಿರುವಾಗಲೂ ಎಲ್ಲಾ ಪುಟಗಳ ಕೆಳಗೆಯೂ ಕಾಣುವ ‘ಸೇವ್‌ ಬಟನ್‌’ ಅನ್ನು ಅಗಾಗ್ಗೆ ಒತ್ತಿ ಮಾಹಿತಿಗಳನ್ನು ಉಳಿಸಿಕೊಳ್ಳಿ. ಎಲ್ಲಾ ಮಾಹಿತಿಗಳನ್ನು ಸಂಪೂರ್ಣವಾಗಿ ತುಂಬಿದ ಬಳಿಕ ಸಬ್ಮಿಟ್ ಬಟನ್‌ ಒತ್ತಿ ನಿಮ್ಮ ರಿಟರ್ನ್ ಹೇಳಿಕೆಯನ್ನು ಸಲ್ಲಿಸಿಬಿಡಿ.

ವೆರಿಫಿಕೇಶನ್‌/ದೃಢೀಕರಣ

ಸಬ್ಮಿಟ್ ಬಟನ್‌ ಒತ್ತಿದಾಗ ನಿಮ್ಮ ಹೇಳಿಕೆ ಆದಾಯ ತೆರಿಗೆ ಇಲಾಖೆಯ ಕಂಪ್ಯೂಟರಿನಲ್ಲಿ ಸಲ್ಲಿಕೆಯಾಗಿ ಅದು ನಿಮಗೊಂದು ಟ್ರಾನ್ಸಾಕ್ಷನ್‌ ನಂಬರನ್ನು ನೀಡುತ್ತದೆ. ಅಲ್ಲದೆ ನಿಮ್ಮ ಇ-ಮೈಲ್ಗೆ ರಶೀದಿ ಫಾರ್ಮ್ ಆದ ‘ಫಾರ್ಮ್-ವಿ’ಯನ್ನು ಹುಟ್ಟು ಹಾಕುತ್ತದೆ.

ಈಗ ಈ ಫಾರ್ಮ್-ವಿ ಅನ್ನು ದೃಢೀಕರಿಸಬೇಕು. ಇದಕ್ಕಾಗಿ ಕೆಲವು ಆನ್‌ಲೈನ್‌ ಹಾದಿಗಳಿವೆ. ಇದರ ಬಗ್ಗೆ ನೀವು ಈಗಾಗಲೇ ನಿಮ್ಮ ಆಯ್ಕೆಯನ್ನು (ಮೇಲೆ ನೋಡಿರಿ) ಕೊಟ್ಟಿರುತ್ತೀರಿ:

1.ನಿಮ್ಮ ಆಧಾರ್‌ ನಂಬರ್‌ ಮೂಲಕ: ನಿಮ್ಮ ಆಧಾರ್‌ ನೋಂದಾಯಿತ ಮೊಬೈಲ್ ನಂಬರಿಗೆ ಒಂದು ಒಟಿಪಿ ಹೋಗುತ್ತದೆ. ಅದನ್ನು ಇಲ್ಲಿ ದೃಢೀಕರಣ ಪುಟದಲ್ಲಿ ನಮೂದಿಸಿದರೆ ನಿಮ್ಮ ವೆರಿಫಿಕೇಶನ್‌ ಸಂಪೂರ್ಣವಾಗುತ್ತದೆ.

2.ಕರ ಇಲಾಖೆ ಕಳಿಹಿಸುವ ಇವಿಸಿ ಕೋಡ್‌ ನಮೂದಿಸುವ ಮೂಲಕ: ಇವಿಸಿ ಕೋಡ್‌ ಅನ್ನು ನಿಮ್ಮ ನೆಟ್ ಬ್ಯಾಂಕಿಂಗ್‌ ಮೂಲಕ, ಬ್ಯಾಂಕ್‌ ಖಾತೆಯ ಮೂಲಕ, ಎಟಿಎಂ ಮೂಲಕ, ಡಿಮ್ಯಾಟ್ ಖಾತೆ ಇತ್ಯಾದಿಗಳ ಮೂಲಕ ಪಡೆದುಕೊಳ್ಳಲು ಬರುತ್ತದೆ.

3.ಈ ರೀತಿಯ ಆನ್‌ಲೈನ್‌ ಪದ್ಧತಿ ಸಾಧ್ಯವಾಗದವರು ವಿ ಫಾರ್ಮಿನ ಅಚ್ಚು ತೆಗೆದು ನೀಲಿ ಶಾಯಿಯಲ್ಲಿ ಸಹಿ ಹಾಕಿ ಅದರಲ್ಲಿ ನೀಡಿದ ಬೆಂಗಳೂರಿನ ವಿಳಾಸಕ್ಕೆ ಅದನ್ನು 120 ದಿನಗಳೊಳಗೆ ಕಳುಹಿಸಿರಿ. ದೃಢೀಕರಣದ ಬಳಿಕವೇ ನಿಮ್ಮ ಸಲ್ಲಿಕೆ ಸಂಪೂರ್ಣವಾಗುತ್ತದೆ. ಇಲ್ಲವಾದರೆ ನೀವು ನಿಮ್ಮ ರಿಟರ್ನ್ ಫೈಲಿಂಗ್‌ ಮಾಡಿಯೇ ಇಲ್ಲ ಎಂದರ್ಥ.

  • ಜಯದೇವ ಪ್ರಸಾದ ಮೊಳೆಯರ 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ