ವಿಮೆ ಮತ್ತು ಹೂಡಿಕೆಯ ಹೈಬ್ರಿಡ್‌ ತಳಿ ಯುಲಿಪ್‌

Team Udayavani, Sep 9, 2019, 5:45 AM IST

ಸರಳವಾಗಿ ಒಂದು ಯುಲಿಪ್‌ ಯೋಜನೆಯನ್ನು ವಿಮೆ ಮತ್ತು ಮ್ಯೂಚುವಲ್‌ ಫ‌ಂಡುಗಳ ಹೈಬ್ರಿಡ್‌ ತಳಿ ಎಂದು ಮಾರುಕಟ್ಟೆಯಲ್ಲಿ ಗುರುತಿಸಲಾಗುತ್ತದೆ ಮತ್ತು ಅದೇ ರೀತಿಯಲ್ಲಿ ತುಲನೆಗೂ ಒಳಗಾಗಿಸಲಾಗುತ್ತದೆ.

ಯುಲಿಪ್‌ ಹೂಡಿಕೆ
ಈಗಾಗಲೇ ತಿಳಿಸಿದಂತೆ ಯುಲಿಪ್‌ ಅಡಿಯಲ್ಲಿ ನೀವು ನೀಡುವ ಪ್ರೀಮಿಯಂ ಮೊತ್ತದ ಒಂದಂಶ ವಿಮಾ ವೆಚ್ಚಕ್ಕೆ ಹೋದರೆ, ಉಳಿದ ಬಾಕಿ ಅಂಶ ಹೂಡಿಕೆಗೆ ಹೋಗುತ್ತದೆ. ಈ ಹೂಡಿಕೆ ಬಹುತೇಕ ಮ್ಯೂಚುವಲ್‌ ಫ‌ಂಡುಗಳನ್ನು ಹೋಲುತ್ತದೆ. ಯುಲಿಪ್‌ ನಡೆಸುವ ವಿಮಾ ಕಂಪೆನಿಗಳು (ಐಸಿಐಸಿಐ ಪ್ರುಡೆನ್ಶಿಯಲ…, ಎಚ್‌.ಡಿ.ಎಫ್.ಸಿ ಲೈಪ್‌, ಬಜಾಜ್‌ ಅಲಿಯಾನ್ಸ್‌, ಬಿರ್ಲಾ ಸನ್‌ ಲೈಫ್, ಎಲ್ಲೆ„ಸಿ ಇತ್ಯಾದಿ) ನೀವು ನೀಡಿದ ಪ್ರೀಮಿಯಂ ಮೊತ್ತವನ್ನು ಸಾಲಪತ್ರ (ಡೆಟ್‌) ಅಥವಾ ಶೇರುಗಟ್ಟೆ (ಈಕ್ವಿಟಿ)ಗಳನ್ನು ನೀವೇ ನಿರ್ದೇಶಿಸಿದ ಅನುಪಾತದಲ್ಲಿ ಹೂಡಿಕೆ ಮಾಡುತ್ತವೆ. ಡೆಟ್‌ ಮತ್ತು ಈಕ್ವಿಟಿಯಲ್ಲಿ ಎಷ್ಟೆಷ್ಟು ಪಾಲು ಹೂಡಬೇಕು ಎನ್ನುವುದಕ್ಕೆ ಕೆಲವು ಯೋಜನೆಗಳಿರುತ್ತವೆ. ಅವುಗಳಲ್ಲಿ ಒಂದನ್ನು ಅಥವಾ ಜಾಸ್ತಿ ಆಯ್ಕೆಯನ್ನು ನೀವು ಆಯ್ದುಕೊಳ್ಳಬಹುದು. ಇದು ಕಂಪೆನಿಯಿಂದ ಕಂಪೆನಿಗೆ ಬದಲಾಗುತ್ತದೆ. ಒಂದು ಉದಾಹರಣೆ ಈ ಕೆಳಗಿನಂತೆ:

ಗ್ರೋಥ್‌ ಸುಪರ್‌ ಫ‌ಂಡ್‌: ಇಲ್ಲಿ ಸುಮಾರು ಶೇ.70 ಹೂಡಿಕೆ ಈಕ್ವಿಟಿ ಅಥವಾ ಶೇರುಗಳಲ್ಲಿ ಹೂಡಲ್ಪಡುತ್ತದೆ. ಉಳಿದ ಶೇ. 30 ಸರಕಾರಿ, ಖಾಸಗಿ ಮತ್ತು ಮನಿ ಮಾರ್ಕೆಟ್‌ ಸಾಲ ಪತ್ರಗಳಲ್ಲಿ. ಇಲ್ಲಿ ರಿಸ್ಕ್ ಅತ್ಯಧಿಕ.

ಗ್ರೋಥ್‌ ಫ‌ಂಡ್‌: ಇಲ್ಲಿ ಸುಮಾರು ಶೇ. 20-ಶೇ.70 ಹೂಡಿಕೆ ಶೇರುಗಳಲ್ಲಿ ಹಾಗೂ ಉಳಿದ ಶೇ.30- ಶೇ.80 ಸರಕಾರಿ, ಖಾಸಗಿ ಮತ್ತು ಮನಿ ಮಾರ್ಕೆಟ್‌ ಸಾಲ ಪತ್ರಗಳಲ್ಲಿ. ಇಲ್ಲಿ ರಿಸ್ಕ್ ಅಧಿಕ.

ಬ್ಯಾಲನ್ಸ್‌ಡ್‌ ಫ‌ಂಡ್‌: ಇಲ್ಲಿ ಸುಮಾರು ಶೇ. 50-ಶೇ. 60 ಹೂಡಿಕೆ ಈಕ್ವಿಟಿ ಹಾಗೂ ಉಳಿದ ಶೇ. 40-ಶೇ. 50 ಸರಕಾರಿ, ಖಾಸಗಿ ಮತ್ತು ಮನಿ ಮಾರ್ಕೆಟ್‌ ಸಾಲಪತ್ರಗಳು. ಇಲ್ಲಿ ರಿಸ್ಕ್ ಮಧ್ಯಮ.

ಕನ್ಸರ್ವೆಟಿವ್‌ ಫ‌ಂಡ್‌: ಇಲ್ಲಿ ಸುಮಾರು ಶೇ.15 ಹೂಡಿಕೆ ಮಾತ್ರವೇ ಈಕ್ವಿಟಿಯಲ್ಲಿ ಹಾಗೂ ಉಳಿದ ಶೇ. 85 ಹೂಡಿಕೆ ಸರಕಾರಿ, ಖಾಸಗಿ ಮತ್ತು ಮನಿ ಮಾರ್ಕೆಟ್‌ ಸಾಲ ಪತ್ರಗಳಲ್ಲಿ. ಇಲ್ಲಿ ರಿಸ್ಕ್ ಕಡಿಮೆ.

ಸೆಕ್ಯೂರ್‌ ಫ‌ಂಡ್‌: ಇಲ್ಲಿ ಹೂಡಿಕೆಯು ಸಂಪೂರ್ಣವಾಗಿ ಶೇ.100% ಸರಕಾರಿ, ಖಾಸಗಿ ಮತ್ತು ಮನಿ ಮಾರ್ಕೆಟ್‌ ಸಾಲ ಪತ್ರಗಳಲ್ಲಿ. ಇಲ್ಲಿ ರಿಸ್ಕ್ ಅತ್ಯಂತ ಕಡಿಮೆ.

ಇಲ್ಲಿ ಈಕ್ವಿಟಿಯ ಅನುಪಾತ ಜಾಸ್ತಿ ಇದ್ದಂತೆ ಹೂಡಿಕೆಯ ಅಪಾಯ ಅಥವ ರಿಸ್ಕ್ ಜಾಸ್ತಿಯಾಗುತ್ತದೆ ಎನ್ನುವುದನ್ನು ಗಮನಿಸ ಬಹುದು. ಅದೇ ರೀತಿಯಲ್ಲಿ ಪ್ರತಿಫ‌ಲವೂ ಜಾಸ್ತಿ ಸಿಗಬಹುದು. ನಿಮ್ಮ ರಿಸ್ಕ್ ಧಾರಣಾ ಶಕ್ತಿಯನ್ನು ಅನುಸರಿಸಿ ನಿಮ್ಮ ಹೂಡಿಕೆ ಯಾವುದರಲ್ಲಿ ಇರಬೇಕು ಎನ್ನುವ ನಿರ್ಧಾರವನ್ನು ನೀವೇ ತೆಗೆದುಕೊಳ್ಳಬಹುದು. ಈ ನಿರ್ಧಾರವನ್ನು ಯುಲಿಪ್‌ ಕೊಳ್ಳುವ ಸಮಯದಲ್ಲಿ ನಿರ್ದೇಶಿಸಬೇಕು. ಒಂದು ಮುಖ್ಯ ಅಂಶ ಏನೆಂದರೆ ನಿಮ್ಮ ಎÇÉಾ ಹೂಡಿಕೆ ಒಂದೇ ಐಟಂನಲ್ಲಿ ಮಾಡಬೇಕೆಂದೇನೂ ಇಲ್ಲ.

ವಿವಿಧ ಫ‌ಂಡ್‌ ಆಯ್ಕೆಗಳ ಒಳಗೂ ನಿಮ್ಮ ದುಡ್ಡನ್ನು ನಿಮ್ಮದೇ ಅನುಪಾತದ ಪ್ರಕಾರ ಹೂಡಿಕೆ ಮಾಡಲು ನಿರ್ದೇಶಿಸಬಹುದು. ಉದಾ: ಶೇ. 50 ಗ್ರೋಥ್‌ ಸುಪರ್‌ ಫ‌ಂಡ್‌, ಶೇ. 10 ಗ್ರೋಥ್‌ ಫ‌ಂಡ್‌, ಶೇ. 30 ಬ್ಯಾಲನ್ಸ್‌ಡ್‌ ಫ‌ಂಡ್‌ ಹಾಗೂ ಉಳಿದ ಶೇ. 10 ಸೆಕ್ಯೂರ್‌ ಫ‌ಂಡ್‌. ಈ ರೀತಿ ನೀವೇ ಹೂಡಿಕೆಯನ್ನು ನಿರ್ದೇಶಿಸಿ ನಿಮ್ಮ ರಿಸ್ಕ್ ಅನ್ನು ನೀವೇ ನಿರ್ವಹಿಸಬಹುದು. ಇದು ನಿಮಗೆ ಬಿಟ್ಟದ್ದು.

ನಿಮ್ಮ ನಿರ್ದೇಶನದ ಪ್ರಕಾರವೇ ವಿಮಾ ಕಂಪೆನಿಯು ನಿಮ್ಮ ಹೂಡಿಕೆಯನ್ನು ಮಾಡುತ್ತದೆ. ಅಲ್ಲದೆ, ಈ ಹೂಡಿಕೆಯ ನಿರ್ದೇಶನವನ್ನು ನಿಮಗೆ ಬೇಕಾದಂತೆ ಬೇಕಾದಾಗ ಬದಲಾಯಿಸಬಹುದು ಅಥವಾ “ಸ್ವಿಚ್‌’ ಮಾಡಬಹುದು.

ಮಾರುಕಟ್ಟೆಯ ನಡೆಯನ್ನು ಊಹಿಸಿ ನಿಮ್ಮ ಹೂಡಿಕೆಯನ್ನು ಡೆಟ್‌ ಮತ್ತು ಈಕ್ವಿಟಿಯ ನಡುವೆ ಆಚೆಈಚೆ ಮಾಡಲು ಈ ಸ್ವಿಚ್‌ ಸೌಲಭ್ಯ ಸಹಾಯಕಾರಿ. ಇಂತಹ ಸುಲಭವಾದ ಸ್ವಿಚ್ಚಿಂಗ್‌ ಮತ್ತು ರಿಡೈರೆಕ್ಷನ್‌ ಆಯ್ಕೆಗಳು ಮ್ಯೂಚುವಲ್‌ ಫ‌ಂಡುಗಳಲ್ಲಿ ಇರುವುದಿಲ್ಲ. ಮ್ಯೂಚುವಲ್‌ ಫ‌ಂಡುಗಳÇÉಾದರೆ ಸ್ವಿಚ್ಚಿಂಗ್‌ ಮಾಡುವಾಗ ಇರುವ ಫ‌ಂಡನ್ನು ಪ್ರಸ್ತುತ ಬೆಲೆಗೆ ಮಾರಿ ಇನ್ನೊಂದು ಫ‌ಂಡನ್ನು ಹೊಸತಾಗಿ ಕೊಂಡಂತಾಗುತ್ತದೆ. ಅದು ಕೆಲವೊಮ್ಮೆ ಸ್ವಲ್ಪ ದುಬಾರಿ ಬೀಳುತ್ತದೆ. ಇನ್ನು ಸ್ವಿಚ್ಚಿಂಗ್‌ ಆಯ್ಕೆಯು ಈಗ ಇರುವ ಫ‌ಂಡ್‌ ಮೊತ್ತವನ್ನು ಆಚೆಈಚೆ ಮಾಡಲು ಸಹಕಾರಿಯಾದರೆ ರಿಡೈರೆಕ್ಷನ್‌ ಆಯ್ಕೆಯು ಭವಿಷ್ಯದ ಹೂಡಿಕೆಯನ್ನು ಬೇರೆಯೇ ಆಯ್ಕೆಯಲ್ಲಿ ಹೂಡಲು ಸಹಕಾರಿ.

ಯುಲಿಪ್‌ ವೆಚ್ಚ
“ಯುಲಿಪ್‌ ವೆಚ್ಚ-ಮಂಡೆ ಬೆಚ್ಚ’ ಎಂಬ ಒಂದು ನಾಣ್ಣುಡಿ ಇದೆ. “ಯುಲಿಪ್‌- ಸಕತ್‌ ಚಾರ್ಜ್‌ ಮಗಾ’ ಎಂಬ ಶಿರೋನಾಮೆಯಲ್ಲಿ ಕಾಸು-ಕುಡಿಕೆಯ ಒಂದು ಎಪಿಸೋಡನ್ನು ಸುಮಾರು ಹತ್ತು ವರ್ಷಗಳ ಹಿಂದೆ ನಾನೇ ಬರೆದಿ¨ªೆ. ಆದರೆ 2010ರ ವಿಮಾ ಸುಧಾರಣೆಯ ಬಳಿಕ ಹಿಂದೊಮ್ಮೆ ಕಡ³ಕತ್ತಿಯಾಗಿದ್ದ ಯುಲಿಪ್‌ ರೂಪಾಂತರಗೊಂಡು ತನ್ನ ವೆಚ್ಚಗಳನ್ನು ಸಾಕಷ್ಟು ಇಳಿಸಿಕೊಂಡಿದೆ. ಅನ್ಯಾಯ ಎನ್ನುವಷ್ಟು ವೆಚ್ಚ ಯುಲಿಪ್‌ ತಲೆ ಮೇಲೆ ಈಗ ಇಲ್ಲದಿದ್ದರೂ ಪ್ರತಿಸ್ಪರ್ಧಿ ಮ್ಯೂಚುವಲ್‌ ಫ‌ಂಡ್‌ ಮತ್ತು ಟರ್ಮ್ ವಿಮೆಗೆ ಹೋಲಿಸಿದರೆ ಜಾಸ್ತಿಯೇ ಇದೆ. ಈ ಕೆಳಗಿನ ಯುಲಿಪ್‌ ವೆಚ್ಚಗಳ ಪಟ್ಟಿಯನ್ನು ತುಸು ಅವಲೋಕಿಸಿ. ಇವುಗಳ ಪ್ರಮಾಣ ಕಂಪೆನಿಯಿಂದ ಕಂಪೆನಿಗೆ ಹಾಗೂ ಪಾಲಿಸಿಯಿಂದ ಪಾಲಿಸಿಗೆ ಬದಲಾಗುತ್ತದೆ.

ಪ್ರೀಮಿಯಂ ಅಲೋಕೇಶನ್‌ ಚಾರ್ಜ್‌: ಇದು ನೀವು ಪಾವತಿಸಿದ ಪ್ರೀಮಿಯಮ್ಮಿನಿಂದ ನೇರವಾಗಿ ಕಡಿತವಾಗುವ ಒಂದು ಚಾರ್ಜ್‌. ಇದು ಏಜೆಂಟರ ಕಮಿಶನ್‌ ಹಾಗೂ ಇತರ ಮಾರಾಟದ ವೆಚ್ಚವನ್ನು ಪ್ರತಿನಿಧಿಸುತ್ತದೆ. ಈ ವೆಚ್ಚ ಮೊದಲ ಕೆಲ ವರ್ಷಗಳಲ್ಲಿ ಜಾಸ್ತಿಯಿದ್ದು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಈ ಕಾರಣಕ್ಕೆ ಯುಲಿಪ್‌ ಪಾಲಿಸಿಗಳನ್ನು ದೀರ್ಘಾವಧಿಗೆ ಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ.

ದೀರ್ಘಾವಧಿಯಲ್ಲಿ ಸರಾಸರಿ ಪ್ರೀಮಿಯಂ ಅಲೋಕೇಶನ್‌ ಚಾರ್ಜ್‌ ಕಡಿಮೆಯಾಗುತ್ತದೆ. ಕಡ³ಕತ್ತಿ ಯುಗದಲ್ಲಿ ವಿವಿಧ ಕಂಪೆನಿಗಳಲ್ಲಿ ಶೇ. 20- ಶೇ. 40 ಅಲ್ಲದೆ ಶೇ. 60 ವರೆಗೂ ಇದ್ದ ಈ ಚಾರ್ಜ್‌ ಭಯಂಕರ ಪ್ರತಿಭಟನೆಗೆ ಕಾರಣವಾಗಿತ್ತು. 2010ರ ಸುಧಾರಣೆಯ ಬಳಿಕ ಈ ವೆಚ್ಚದ ಮೇಲೆ ಕಡಿವಾಣ ಹೇರಲಾಗಿದೆ. ಸದ್ಯ ಈ ಚಾರ್ಜ್‌ ವಿವಿಧೆಡೆ ಕಟ್ಟಿದ ಪ್ರೀಮಿಯಂ ಮೇಲೆ ಸುಮಾರು ಶೇ.1.5 ದಿಂದ ಶೇ.4 ವರೆಗೂ ಇದೆ. ಈ ವೆಚ್ಚ ಮ್ಯೂಚುವಲ್‌ ಫ‌ಂಡುಗಳಲ್ಲಿ ಇರುವುದಿಲ್ಲ.

ಮಾರ್ಟಾಲಿಟಿ ಚಾರ್ಜ್‌: ನೀವು ಪಾವತಿಸಿದ ಪ್ರೀಮಿಯಮ್ಮಿನ ಒಂದು ಭಾಗ ಸ್ವಾಭಾವಿಕವಾಗಿಯೇ ವಿಮಾ ವೆಚ್ಚಕ್ಕೆ ಹೋಗುತ್ತದೆ. ಇದು ನಿಮ್ಮ ವಯಸ್ಸನ್ನು ಹೊಂದಿಕೊಂಡು ಯಾವುದೇ ವಿಮಾ ಪಾಲಿಸಿಯ ರೀತಿಯಲ್ಲಿಯೇ ಅನ್ವಯವಾಗುತ್ತದೆ, ಬಹುತೇಕ ಮಾರ್ಟಾಲಿಟಿ ಚಾರ್ಜ್‌ ಪ್ರತಿ ತಿಂಗಳು ನಿಮ್ಮ ಫ‌ಂಡಿನಿಂದ ಕಡಿತವಾಗುತ್ತದೆ. ಈ ಚಾರ್ಜಸ್‌ ಬೇರೆ ಆನ್‌ಲೈನ್‌ ಟರ್ಮ್ ವಿಮಾ ಪಾಲಿಸಿಗಳ ತುಲನೆಯಲ್ಲಿ ಹೇಗೆ ಇದೆ ಎನ್ನುವುದನ್ನು ಗಮನಿಸುವುದು ಒಳ್ಳೆಯದು. ಬಹುತೇಕ ಆನ್‌ಲೈನ್‌ ಟರ್ಮ್ ಪಾಲಿಸಿಗಳು ಅವು ಅಗ್ಗವಾಗಿರುತ್ತವೆ.

ಪಾಲಿಸಿ ಅಡ್ಮಿನಿಸ್ಟ್ರೇಷನ್‌ ಚಾರ್ಜ್‌: ಇದು ನಿಮ್ಮ ವಿಮಾ ಪಾಲಿಸಿಯನ್ನು ನಿರ್ವಹಿಸುವ ಸಲುವಾಗಿ ತಗಲುವ ವೆಚ್ಚ. ಇದನ್ನು ಮಾಸಿಕ ಕಂತುಗಳಲ್ಲಿ ನಿಮ್ಮ ಫ‌ಂಡಿನಿಂದ ಕಡಿತ ಮಾಡಲಾಗುತ್ತದೆ. ಇದು ಸುಮಾರು ರೂ 30, 50 ಅಥವಾ 100 ಎಂಬಂತೆ ಮಾಸಿಕ ಕಡಿತವಾಗುತ್ತದೆ.

ಫ‌ಂಡ್‌ ಮ್ಯಾನೇಜೆ¾ಂಟ್‌ ಚಾರ್ಜ್‌: ಇದು ನಿಮ್ಮ ಹೂಡಿಕೆಯನ್ನು ನಿರ್ವಹಿಸಿದ್ದಕ್ಕಾಗಿ ಕಡಿತವಾಗುವ ಚಾರ್ಜ್‌. ಈಕ್ವಿಟಿ ವಿಭಾಗದಲ್ಲಿ ಶೇ.1.35 ಮಿತಿಯೊಳಗೆ ಕಡಿತವಾಗುವ ಈ ಚಾರ್ಜ್‌ ಸಾಲ ಪತ್ರಗಳ ವಿಭಾಗದಲ್ಲಿ ಇನ್ನೂ ಕಡಿಮೆ ಪ್ರಮಾಣದಲ್ಲಿ ಕಡಿತವಾಗುತ್ತದೆ. ಈ ವೆಚ್ಚ ನಿಮ್ಮ ಕಣ್ಣಿಗೆ ಕಾಣ ಸಿಗುವುದಿಲ್ಲ. ನಿಮ್ಮ ಫ‌ಂಡ್‌ ಮೌಲ್ಯ (ಎನ್‌.ಎ.ವಿ) ಈ ಕಡಿತದ ಬಳಿಕವೇ ಘೋಷಿತವಾಗುತ್ತದೆ. ಈ ವೆಚ್ಚ ಮ್ಯೂಚುವಲ್‌ ಫ‌ಂಡುಗಳಲ್ಲೂ ಇದೆ.

ಇತರ ವೆಚ್ಚಗಳು: ಒಂದು ಮಿತಿಯನ್ನು ಮೀರಿದರೆ ಫ‌ಂಡ್‌ ಮೊತ್ತದಿಂದ ಭಾಗಶಃ ಹಿಂಪಡೆತಕ್ಕೆ ಚಾರ್ಜ್‌ ಬೀಳುತ್ತದೆ ಹಾಗೂ ಕೆಲವೆಡೆ ಒಂದು ಮಿತಿಯನ್ನು ಮೀರಿದರೆ ಸ್ವಿಚ್‌ ಆಯ್ಕೆಗೂ ವೆಚ್ಚ ತಗಲುತ್ತದೆ. ಇದು ಕಂಪೆನಿಯಿಂದ ಕಂಪೆನಿಗೆ ವ್ಯತ್ಯಾಸವಾಗುತ್ತದೆ. ಇವೆಲ್ಲವನ್ನೂ ಪಾಲಿಸಿ ನಿಯಮಗಳನ್ನು ಕೂಲಂಕಷವಾಗಿ ಓದಿ ತಿಳಿದುಕೊಳ್ಳಬೇಕು.

ಟೈಪ್‌-1, ಟೈಪ್‌-2 ಪಾಲಿಸಿ
ಯುಲಿಪ್‌ನಲ್ಲಿ ಟೈಪ್‌-1 ಹಾಗೂ ಟೈಪ್‌-2 ಎಂಬ ಪ್ರಬೇಧಗಳಿವೆ. ಟೈಪ್‌-1ರಲ್ಲಿ ಸಾವು ಸಂಭವಿಸಿದಲ್ಲಿ ವಿಮಾ ಮೊತ್ತ ಅಥವಾ ಫ‌ಂಡ್‌ ಮೊತ್ತ ಯಾವುದು ಹೆಚ್ಚೋ ಅದನ್ನು ಕಂಪೆನಿಯು ನಾಮಿನಿಗೆ ನೀಡುತ್ತದೆ. ಟೈಪ್‌-2 ಪಾಲಿಸಿಯಲ್ಲಿ ವಿಮಾ ಮೊತ್ತ ಮತ್ತು ಫ‌ಂಡ್‌ ಮೊತ್ತ – ಎರಡನ್ನೂ ಜೊತೆಯಾಗಿ ಕಂಪೆನಿಯು ನಾಮಿನಿಗೆ ನೀಡುತ್ತದೆ.

ಲಾಕ್‌ಇನ್‌ ಅವಧಿ ಮತ್ತು ಸರೆಂಡರ್‌
ಯುಲಿಪ್‌ ಪಾಲಿಸಿಗಳಿಗೆ 5 ವರ್ಷಗಳ ಲಾಕ್‌ಇನ್‌ ಅವಧಿ ಇರುತ್ತವೆ. ಆ ಮೊದಲು ಅವುಗಳಿಂದ ಹೊರಬರಲು ಆಗುವುದಿಲ್ಲ. ಹೊರ ಬರ ಬೇಕೆಂದರೆ ಸರೆಂಡರ್‌ ಚಾರ್ಜಸ್‌ ತೆತ್ತು ಹೊರ ಬರಬೇಕು. ಕಂಪೆನಿಯಿಂದ ಕಂಪೆನಿಗೆ ಪಾಲಿಸಿಯಿಂದ ಪಾಲಿಸಿಗೆ ಇಂತಹ ವೆಚ್ಚಗಳು ವ್ಯತ್ಯಯವಾಗುವ ಕಾರಣ ಪ್ರತಿಯೊಂದು ಪಾಲಿಸಿಯನ್ನೂ ಕೂಡಾ ಸರಿಯಾಗಿ ಅಧ್ಯಯನ ಮಾಡಿಯೇ ಕೊಳ್ಳಬೇಕು.

ಆದಾಯ ತೆರಿಗೆ
ಇವತ್ತಿನ ತಾರೀಕಿನಲ್ಲಿ ಇದು ಯುಲಿಪ್ಪಿನ ಹೆಚ್ಚುಗಾರಿಕೆ ಇದರ ಬಹುಭಾಗ ಒಂದು ಮ್ಯೂಚುವಲ್‌ ಫ‌ಂಡ್‌ ರೂಪದ ಹೂಡಿಕೆಯಾದರೂ ಕೂಡಾ ಆದಾಯ ತೆರಿಗೆ ಇಲಾಖೆ ಇದನ್ನು ಇವತ್ತಿಗೂ ಒಂದು ವಿಮಾ ಪಾಲಿಸಿಯಾಗಿಯೇ ಕಾಣುತ್ತದೆ. ಹಾಗಾಗಿ, ಯುಲಿಪ್‌ ಪ್ರೀಮಿಯಂ ರೂಪದಲ್ಲಿ ಪಾವತಿಸಿದ ಮೊತ್ತವೂ ಇತರ ಯಾವುದೇ ವಿಮಾ ಪಾಲಿಸಿಗೂ ಅನ್ವಯವಾಗುವಂತೆ ಸೆಕ್ಷನ್‌ 80ಸಿ ಅಡಿಯಲ್ಲಿ ಕರ ವಿನಾಯಿತಿಗೆ ಅರ್ಹವಾಗುತ್ತದೆ ಹಾಗೂ ಯುಲಿಪ್ಪಿನಿಂದ ಹಿಂಪಡೆಯುವ ಎÇÉಾ ಮೊತ್ತವೂ ಕೂಡಾ ಇತರ ಯಾವುದೇ ವಿಮಾ ಪಾಲಿಸಿಗಳಂತೆ ಸೆಕ್ಷನ್‌ 10(10ಡಿ) ಅಡಿಯಲ್ಲಿ ಸಂಪೂರ್ಣವಾಗಿ ಕರಮುಕ್ತವಾಗುತ್ತದೆ. (ಸದ್ಯದ ಕಾನೂನಿನ ಪ್ರಕಾರ ವಿಮಾ ಪ್ರೀಮಿಯಂ ಯಾವುದೇ ವರ್ಷದಲ್ಲೂ ವಿಮಾ ಮೊತ್ತದ ಶೇ. 10 ಮೀರಿರಬಾರದು ಎನ್ನುವ ಶರತ್ತು ಇದೆ ಎನ್ನುವುದನ್ನು ಗಮನಿಸಿ. ಅಂತೆಯೇ ನೀವು ಒಂದು ಯುಲಿಪ್‌ ಪಾಲಿಸಿಯಿಂದ ಅಂಶಿಕ ಹಿಂಪಡೆತ ಪಡೆದರೆ ಕಂಪೆನಿಯು ಆ ಕೂಡಲೇ ವಿಮಾ ಮೊತ್ತವನ್ನು ಇಳಿಸುತ್ತದೆ ಅಥವಾ ಶೂನ್ಯವಾಗಿಸುತ್ತದೆ.

ಹಾಗೆ ಆದಾಗ ಆದಾಯ ತೆರಿಗೆಯ ಶರತ್ತು ಮುರಿದು ಬಿದ್ದು ನಿಮ್ಮ ಆದಾಯ ತೆರಿಗೆ ವಿನಾಯಿತಿ ರದ್ದಾಗುವ ಸಂಭವ ಇದೆ. (ಪಾಲಿಸಿ ಕೊಳ್ಳುವಾಗ ಮತ್ತು ಅಂಶಿಕ ಹಿಂಪಡೆತ ಪಡೆಯುವಾಗ ಈ ಬಗ್ಗೆ ವಿವರಗಳನ್ನು ಪಡೆದುಕೊಳ್ಳಿ) ಮ್ಯೂಚುವಲ್‌ ಫ‌ಂಡುಗಳಿಗೂ ಆದಾಯ ತೆರಿಗೆ ವಿನಾಯಿತಿ ಇರುವ ಕಾಲದಲ್ಲಿ ಯುಲಿಪ್‌ ಮತ್ತು ಮ್ಯೂಚುವಲ್‌ ಫ‌ಂಡುಗಳು ಕರ ವಿಚಾರದಲ್ಲಿ ಸಮಾನವಾಗಿದ್ದವು. ಆದರೆ ಈಗ ರೂ. 1 ಲಕ್ಷ ಮೀರಿದ ಈಕ್ವಿಟಿ ಮ್ಯೂಚುವಲ್‌ ಫ‌ಂಡು ಆದಾಯಕ್ಕೆ ಶೇ.10 ಕ್ಯಾಪಿಟಲ್‌ ಗೈನ್ಸ್‌ ತೆರಿಗೆ ಹಾಕುವ ಹೊಸ ಕಾನೂನು (ಬಜೆಟ್‌ 2018) ಬಂದ ಬಳಿಕ ತೆರಿಗೆ ವಿಚಾರದಲ್ಲಿ ಯುಲಿಪ್‌ ಮ್ಯೂಚುವಲ್‌ ಫ‌ಂಡುಗಳನ್ನು ಹಿಂದಿಕ್ಕಿವೆ. ಪ್ರೀಮಿಯಂ ಅಲೊಕೇಶನ್‌ ಚಾರ್ಜಸ್‌ನಲ್ಲಿ ಹೋದ ಯುಲಿಪ್ಪಿನ ಮಾನ ಆದಾಯ ತೆರಿಗೆಯಲ್ಲಿ ವಾಪಾಸು ಬಂದಂತಾಯಿತು.

– ಜಯದೇವ ಪ್ರಸಾದ ಮೊಳೆಯಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ