ಚಳಿಗಾಲದಲ್ಲಿ ತಲೆ ಬಿಸಿಯೇರಿಸುವ ಹೂಡಿಕೆ ಲೆಕ್ಕಾಚಾರಗಳು 

Team Udayavani, Dec 24, 2018, 6:05 AM IST

ಚಳಿಗಾಲದ ಆ ಬೆಳಗ್ಗಿನ ದಿನಗಳು… ಬೇಗ ಏಳಲು ಒಂದಿಷ್ಟು ಕಷ್ಟ ಆಗುತ್ತದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಚಳಿ ನಿಮ್ಮನ್ನಾವರಿಸಿ ಕೊಳ್ಳುತ್ತದೆ. ಅದು ಬಿಡಿ ಮನೆಯೊಳಗೇನೇ ಡ್ರಾಯಿಂಗ್‌ ರೂಮಿನಲ್ಲಿ ಕುಳಿತು ಪೇಪರು ಮಗಚಲು ಆರಂಭಿಸಿದರೂ ಕೂಡಾ ಚಂಡಿಗಾಳಿ ತಣ್ಣಗೆ ಬೀಸಿ ನಿಮ್ಮ ಮೈಯೊಳಕ್ಕೆ ಚಳಿ ಇಳಿಸಲು ಪ್ರಯತ್ನಿಸುತ್ತಿರುತ್ತದೆ. ಬೆಳಗ್ಗೆ ಬೇಗನೆ ಎಚ್ಚರವಾಗಿ ಪುನಃ ನಿದ್ರೆ ಬಾರದೆ ಪೇಪರ್‌ ಮಗುಚುಹಾಕಿಕೊಂಡು ಕಾಲ ಹರಣ ಮಾಡುತ್ತಿ ರುವ ಸಂದರ್ಭದಲ್ಲಿ ಒಂದಿಷ್ಟು ಬಿಸಿಬಿಸಿ ಕಾಫಿ, ಜೊತೆಗೆ ಒಂದಷ್ಟು ಗರಿ ಗರಿ ಬೋಂಡಾ ಸ್ಯಾಂಕ್ಷನ್‌ ಆಗಬಹುದೇನೋ ಎಂಬ ಆಸೆ ಯಲ್ಲಿ ಅಡುಗೆಮನೆಯತ್ತ ನಿಮ್ಮ ಕಟಾಕ್ಷವನ್ನು ಹಾಯಿಸುತ್ತೀರಿ. ಆದರೆ ಅಡುಗೆಮನೆ ಬಾಗಿಲಿನ್ನೂ ತೆರೆದಿರುವುದಿಲ್ಲ. ಬಾಗಿಲನು ತೆರೆದು ಸೇವೆಯನು ಮಾಡೇ… ಅನ್ನಲು ನಿಮ್ಮಲ್ಲಿ ಸಾಕಷ್ಟು ಧೈರ್ಯವೂ ಇರುವುದಿಲ್ಲ. ಇರ್ಲಿ ಬಿಡಿ.. ಮೊದು ಬ್ರಷ್‌ ಮಾಡಿ ಬತೇìನೆ. ಆಮೇಲೆ ನೋಡೋಣ ಅನ್ನುತ್ತಾ ಬಾತ್‌ರೂಮ್‌ ಕಡೆ ಹೆಜ್ಜೆ ಹಾಕುತ್ತೀರಿ. 

ಹೀಗೆ ಚಳಿಗಾಲದ ದಿನಚರಿ ಆರಂಭವಾಗುತ್ತದೆ. ಆದರೆ, ಬೋಂಡ ಕಾಯಿಸಲು ಮಡದಿ ಪೇಟೆಯಿಂದ ಎಣ್ಣೆ-ಬೇಳೆ ತಂದಿಟ್ಟಿರುವುದಿಲ್ಲ. ಬೇಕರಿ ತಿಂಡಿಯನ್ನಾದರೂ ಕಟುಕುಟು ಮಾಡೋಣವೆಂದರೆ ಗೆಸ್ಟ್‌ ಬಂದ್ರೆ ಇರ್ಲಿ ಅಂತ ಕಾಲು ಕಿಲೋ ಮಾತ್ರ ತಂದಿಟ್ಟಿರ್ತಾರೆ. ಅದು ನಿಮ್ಮ ಜುಜುಬಿ ಮುಖಭಾವಕ್ಕೆಲ್ಲಾ ಡಬ್ಬಿಯಿಂದ ಹೊರ ಅವತರಿಸುವುದಿಲ್ಲ. ಅಲ್ಲದೆ, ನಿಮಗೆ ಒಂದ್ಲೋಟ “ಕಾಲಿ ಕಾಪಿಯಲ್ಲೇ
ಚಳಿಕಾಯಿಸ್ಕೊಳ್ಳಿ’ ಅಂತಾರೆ ನಿಮ್ಮಾಕೆ. ಇನ್ನೂ ಬೇಕೆಂದ್ರೆ “ಪೇಟೆಯಲ್ಲಿ ಏರುತ್ತಿರುವ ಬೆಲೆಗಳ ಫಿಗರ್‌ ನೆನೆಸಿಕೊಂಡು ಮೈಬಿಸಿ ಮಾಡ್ಕೊಳಿ ಅಂತಾರೆ. ಚಳಿ ಮಯವಾದ ನಿಮ್ಮ ಜಗತ್ತಿನಲ್ಲಿ ಬಿಸಿಯಾಗಿ ನಿಮ್ಮನ್ನು ಕಾಡುವುದು ಬೆಲೆಯೇರಿಕೆಯ ಬಿಸಿ ಮಾತ್ರ.ಆವಾಗ, ಬೆಲೆಯೇರಿಕೆಯ ಅಂತಹ ಕಾಲತ್ತಿಲ…, ಕಿಮ್‌ ಕರ್ತವ್ಯಂ ಮಮ? ಎಂದು ಕೊಂಡು ನೀವು ಪೇಪರಿನಲ್ಲಿ ಕಾಸುಕುಡಿಕೆಯ ಪೇಜು ಮಗುಚುತ್ತೀರಿ. 
* * * * *
ಏರುತ್ತಿರುವ ಬೆಲೆಗಳ ಕಾಲದಲ್ಲಿ ಏನು ಮಾಡಬಹುದು ಎಂಬುದು ಹಲವರ ಪ್ರಶ್ನೆ. ವೆಲ್‌, ಏರುತ್ತಿರುವ ಬೆಲೆಗಳ ಕಾಲದಲ್ಲಿ ಮೊತ್ತ ಮೊದಲು ಖರ್ಚು ಮಾಡಿ ಎಂಬ “ಪೆದಂಬು’ ಉತ್ತರವನ್ನು ಹಿಂದೊಮ್ಮೆ ನಾನು ಕೊಟ್ಟಿದ್ದೆ. ಅಂದರೆ, ಇದ್ದ ದುಡ್ಡನ್ನೆಲ್ಲ ಹಿಡ್ಕೊಂಡು ಹೋಗಿ ಪಬ್ಟಾಸ್‌ನಲ್ಲಿ ಕೂತು ಗಡದ್ದಾಗಿ ಗಡ್‌ಬಡ್‌ ತಿಂದು ತೇಗಿ ಅಂತ ಅಲ್ಲ ಅರ್ಥ. ತಿನ್ನೋದು ಕುಡಿಯೋದು ಬಿಟ್ಟು ಉಳಿದ ಗೃಹೋಪಯೋಗಿ ಕೆಲಸಗಳ ಮೇಲೆ; ನಾಳೆ ಮಾಡಿದರೆ ಯಾವುದರ ಬೆಲೆ ಜಾಸ್ತಿಯಾಗಲಿರುವುದೋ ಅಂತಹ ಕೆಲಸಗಳ ಮೇಲೆ, ಖರ್ಚು ಮಾಡುವುದೊಳಿತು. ಅದನ್ನೂ ಬಿಟಿºಡಿ, ಏರುತ್ತಿರುವ ಬಡ್ಡಿದರದ ಸಮಯದಲ್ಲಿ ನಾವು ಉಳಿತಾಯ ಹೇಗೆ ಮಾಡಬಹುದು? ಎನ್ನುವುದರ ಬಗ್ಗೆ ಮಾತ್ರ ಸದ್ಯಕ್ಕೆ ಯೋಚನೆ ಮಾಡೋಣ:

1.ಸಾಲಗಳು
ಬಡ್ಡಿದರಗಳು ಏರಿದಂತೆ ಕೈಯಲ್ಲಿರುವ ಸಾಲಗಳ (ವಾಹನಸಾಲ, ಮನೆಸಾಲ, ಇತ್ಯಾದಿ) ಬಡ್ಡಿಮೊತ್ತವೂ ಏರುತ್ತದೆ. ಇದನ್ನು ತಡೆಗಟ್ಟಲು ಯಾವುದಾದರು ರೀತಿಯಿಂದ ಆ ಸಾಲಗಳನ್ನು ಮುಚ್ಚುವುದು ಒಳ್ಳೆಯದು. ಆ ಸಾಲಕ್ಕಿಂತ ಕಡಿಮೆ ಬಡ್ಡಿದರದ ಡೆಪಾಸಿಟ್‌ಗಳು ಇದ್ದಲ್ಲಿ ಅವನ್ನು ತೆಗೆದು ಅಂತಹ ಸಾಲವನ್ನು ಚುಕ್ತ ಮಾಡುವುದೊಳ್ಳೆಯದು. ಉದಾ: ಹಳೆಯ ಎಫ್ಡಿ ಅಥವಾ ಪಿಪಿಎಫ್ ಖಾತೆಯಿಂದ ಹಣ ಪಡೆದು ಹೆಚ್ಚಿನ ದರದ ಗೃಹ ಸಾಲ ಮುಚ್ಚುವುದೊಳ್ಳೆಯದು ಅಥವಾ ಕಡಿಮೆ ಬಡ್ಡಿ ದರದಲ್ಲಿ ಬೇರೆ ಸಾಲ ಲಭ್ಯವಿದ್ದಲ್ಲಿ ಅದನ್ನು ಪಡೆದು ಹಳೆಯದನ್ನು ಮುಚ್ಚುವುದು ಒಳ್ಳೆಯದು. ಉದಾ ಪಿಪಿಎಫ್ ಲೋನ್‌, ಎಲ್‌ಐಸಿ ಲೋನ್‌, ಎಫ್ಡಿ ಲೋನ್‌ ಇತ್ಯಾದಿ

2. ಡೆಪಾಸಿಟ್‌ಗಳು 
ಹಳೆ ಡೆಪಾಸಿಟ್‌ಗಳನ್ನು ಶೇ.1 ಪೆನಾಲ್ಟಿ ಕೊಟ್ಟಾದರೂ ಹಿಂಪಡೆದು ಮರು ಠೇವಣಿ ಮಾಡಿದರೆ ಲಾಭಕರವಾಗಬಹುದೇನೋ ಎಂದು ಲೆಕ್ಕ ಹಾಕಿ ನೋಡಬೇಕು. ಈ ಲೆಕ್ಕಾಚಾರವನ್ನು ಹಿಂದೊಮ್ಮೆ ಕಾಕುವಿನಲ್ಲಿ ವಿವರಿಸಲಾಗಿದೆ. ನಿರಖು ಠೇವಣಿ ಅಥವ ಎಫ್ಡಿಯನ್ನು ಹಿಂಪಡೆದಾಗ ಆದು ಚಾಲ್ತಿಯಲ್ಲಿದ್ದ ಅವಧಿಗೆ ಠೇವಣಿ ಮಾಡುವಾಗ ಇದ್ದ ಬಡ್ಡಿದರವನ್ನು ಹಾಕಿ ಅದರಿಂದ ಪೆನಾಲ್ಟಿ (ಶೇ.1) ಕಳೆದು ಉಳಿದ ಮೊತ್ತವನ್ನು ನೀಡಲಾಗುವುದು. ಈ ಲೆಕ್ಕವನ್ನು ಸರಿಯಾಗಿ ಅರಿತುಕೊಂಡು ಪ್ರತಿಬಾರಿ ಬಡ್ಡಿದರ ಏರಿದಾಗಲೂ ತಾಳೆ ಹಾಕಿ ನೋಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕಡಿಮೆ ಬಡಿªದರ ನೀಡುವ ಪಿಪಿಎಫ್ ನಿಂದ ದುಡ್ಡು ತೆಗೆಯ ಬಹುದಾದಲ್ಲಿ ತೆಗೆದು ಹೆಚ್ಚು ಬಡ್ಡಿದರದ ಹೊಸ ಎಫ್ಡಿ ಕೂಡಾ ಮಾಡಬಹುದು. ಎಫ್ಡಿ ಬಡ್ಡಿಯ ಮೇಲೆ ತೆರಿಗೆ ಇದ್ದರೂ, ಶೂನ್ಯ ಅಥವಾ ಕಡಿಮೆ ಕರಭಾರ ಇರುವವರಿಗೆ ಎಫ್ಡಿ ಉತ್ತಮ. ಹೊಸ ಡೆಪಾಸಿಟ್‌ ಮಾಡುವವರು ಬಡ್ಡಿದರ ಗರಿಷ್ಟ ಮಟ್ಟಕ್ಕೆ ಏರುವವರೆಗೆ ಕಾದು ಆಮೇಲೆ ಗರಿಷ್ಟ ಕಾಲಾವಧಿಗೆ ಡೆಪಾಸಿಟ್‌ ಮಾಡಿಸಿ ಕೊಳ್ಳುವುದು ಉತ್ತಮ. ಏಕಗಂಟಿನಲ್ಲಿ ಮೊತ್ತ ಇರದವರು ಒಂದು ಆರ್‌ಡಿ (ರಿಕರಿಂಗ್‌ ಡೆಪಾಸಿಟ್‌) ಆರಂಭಿಸಿ ನಿಧಾನವಾಗಿ ಹಂತ ಹಂತವಾಗಿ ಡೆಪಾಸಿಟ್‌ ಮಾಡುತ್ತಾ ಹೋಗಬಹುದು. ಆರ್‌ಡಿಗಳಲ್ಲಿ ಖಾತೆ ತೆರೆಯುವಾಗಿನ ಆರಂಭಿಕ ಬಡ್ಡಿದರ ಪೂರ್ಣ ಅವಧಿಗೆ ಲಾಗೂ ಆಗುತ್ತದೆ.

3. ಡೆಟ್‌ ಫ‌ಂಡುಗಳು 
ಡೆಟ್‌ ಫ‌ಂಡುಗಳಲ್ಲೂ ಹಲವು ವಿಧ. ಓಪನ್‌ ಎಂಡೆಡ್‌ ಕೆಟಗರಿಯಲ್ಲಿ ದೀರ್ಘ‌ಕಾಲಿಕ (ಲಾಂಗ್‌ ಟರ್ಮ್), ಅಲ್ಪಕಾಲಿಕ (ಶಾರ್ಟ್‌ ಟರ್ಮ್) ಮತ್ತು ಕ್ಲೋಸ್ಡ್ ಎಂಡೆಡ್‌ ಕೆಟಗರಿಯಲ್ಲಿ ಫಿಕ್ಸ್‌ ಮೆಚೂÂರಿಟಿ ಪ್ಲಾನ್‌ಗಳು ದೊರೆಯುತ್ತವೆ. ಇವುಗಳ ಲಕ್ಷಣಗಳನ್ನು ಅರಿತುಕೊಂಡು ಬಡ್ಡಿದರದ ಚಲನವಲನ ಕ್ಕನುಸಾರವಾಗಿ ಇವುಗಳಲ್ಲಿ ಹೂಡಿಕೆಯನ್ನು ಮಾಡಬಹುದು. 

ಲಾಂಗ್‌ ಟರ್ಮ್ ಡೆಟ್‌ ಫ‌ಂಡುಗಳು 
ಈಗ ಬಡ್ಡಿದರ ಗರಿಷ್ಟವಾಗಿದೆ, ಇನ್ನೇನು ಕೆಳಕ್ಕೆ ಇಳಿಯುತ್ತದೆ ಅನ್ನುವಾಗ ದೀರ್ಘ‌ಕಾಲಕ್ಕೆ ಲಾಂಗ್‌ ಟರ್ಮ್ ಡೆಟ್‌ ಫ‌ಂಡುಗಳಲ್ಲಿ ದುಡ್ಡು ವಿನಿಯೋಗಿಸಬಹುದು. ಫ‌ಂಡುಗಳು ಈ ದುಡ್ಡನ್ನು ಸರಕಾರಿ ಗಿಲ್ಟ… ಸಾಲಪತ್ರ ಕಾರ್ಪೊರೇಟ್‌ ಬಾಂಡು/ಡಿಬೆಂಚರು ಗಳಲ್ಲಿ ವಿನಿಯೋಗಿಸುತ್ತವೆ. ಉತ್ತಮ ಬಡ್ಡಿದರಗಳ ದೀರ್ಘ‌ಕಾಲಿಕ ಲಾಭವಲ್ಲದೆ ಬಡ್ಡಿದರ ಇಳಿದಾಗ ಮಾರುಕಟ್ಟೆಯಲ್ಲಿ ಫ‌ಂಡುಗಳ ಮೌಲ್ಯವೂ ಏರುವುದು ಒಂದು ಹೆಚ್ಚುವರಿ ಆಕರ್ಷಣೆ. ಸಂದರ್ಭ ನೋಡಿಕೊಂಡು ಆ ಬಳಿಕ ಇವುಗಳನ್ನು ಪರಿಗಣಿಸಬಹುದು.

ಯಾವುದೇ ಗ್ಯಾರಂಟಿ ಇಲ್ಲದೆ ಉತ್ತಮವಾದ ಪ್ರತಿಫ‌ಲ ಕೊಡುವ ಈ ಫ‌ಂಡುಗಳು ಕನಿಷ್ಠ ಎಫ್ಡಿಯ ರೀತಿಯಲ್ಲಿಯೇ ರಿಟರ್ನ್ಸ್ ನೀಡುತ್ತವೆ. ಅಲ್ಲದೆ, ಡಿವಿಡೆಂಡ್‌ ಡಿಸ್ಟ್ರಿಬ್ಯೂಶನ್‌ ಟ್ಯಾಕ್ಸ್‌ ತೆತ್ತು ಕೈಸೇರುವ ಇದರ ಮೇಲೆ ಪುನಃ ಕರಭಾರ ಇರುವುದಿಲ್ಲ. ಎಫ್ಡಿ ಬಡ್ಡಿದರದ ಮೇಲೆ ಅನ್ವಯ ದರದಲ್ಲಿ ಕರಭಾರ ಇರುತ್ತದೆ. ಆದ್ದರಿಂದ ಹೆಚ್ಚಿನ ಆದಾಯವಂತರಿಗೆ ಇದು ಇನ್ನೂ ಹೆಚ್ಚು ಸೂಕ್ತ. 

ಶಾರ್ಟ್‌ ಟರ್ಮ್ ಲಿಕ್ವಿಡ್‌ ಫ‌ಂಡುಗಳು 
ಏರುಗತಿಯ ಬಡ್ಡಿಯ ಜಮಾನದಲ್ಲಿ ದೀರ್ಘ‌ಕಾಲಕ್ಕೆ ದುಡ್ಡನ್ನು ಡೆಟ್‌ ಫ‌ಂಡಿನಲ್ಲಿ ಹಾಕಬಾರದು. ಅದಕ್ಕಾಗಿ ಅಲ್ಪಕಾಲಕ್ಕೆ ಡೆಟ್‌ ಫ‌ಂಡಿನಲ್ಲಿ ದುಡ್ಡು ಹೂಡಿ ಉತ್ತಮ ಬಡ್ಡಿದರ ಬರುವವರೆಗೆ ಜನ ಕಾಯುತ್ತಾರೆ. ಅಲ್ಪಕಾಲಿಕದಲ್ಲಿ ಬಡ್ಡಿದರಗಳ ಏರಿಳಿತ ಅಷ್ಟಾಗಿ ಬಾಧಿಸುವುದಿಲ್ಲ. ಅಲ್ಲದೆ ಅಲ್ಪಕಾಲದ ಬಳಿಕ ಬೇರಾವುದೊ ಕಾರಣಕ್ಕೆ ದುಡ್ಡು ಬೇಕೆನಿಸುವವರು ಈ ಶಾರ್ಟ್‌ ಟರ್ಮ್ ಫ‌ಂಡುಗಳಲ್ಲಿ ದುಡ್ಡು ಹೂಡುತ್ತಾರೆ. ಸೇವಿಂಗ್ಸ್‌ ಅಕೌಂಟಿನಂತೆಯೇ ಬೇಕಾದಾಗ ಪಡಕೊಳ್ಳುವ ದ್ರವ್ಯತೆ ಹೊಂದಿರುವ ಈ ಫ‌ಂಡುಗಳಿಗೆ ಲಿಕ್ವಿಡ್‌ ಫ‌ಂಡ್‌ ಎಂದೂ ಕರೆಯುತ್ತಾರೆ. 91 ದಿನಗಳಿಗಿಂತ ಕಡಿಮೆ ಮೆಚ್ಯುರಿಟಿ ಉಳ್ಳ ಟ್ರೆಜರಿ ಬಿಲ್‌, ಸರ್ಟಿಫಿಕೇಟ್‌ ಆಫ್ ಡೆಪಾಸಿಟ್‌, ಕಮರ್ಶಿಯಲ್‌ ಪೇಪರ್‌, ಅಂತರ್‌ಬ್ಯಾಂಕ್‌ ಕಾಲ್‌ ಮನಿ ಮಾರುಕಟ್ಟೆಗಳಲ್ಲಿ ಈ ಲಿಕ್ವಿಡ್‌ ಫ‌ಂಡುಗಳು ಹೂಡಿಕೆ ಮಾಡುತ್ತವೆ. 91 ದಿನಕ್ಕೆ ಮೀರಿದ ಹೂಡಿಕೆಯುಳ್ಳ ಫ‌ಂಡುಗಳಿಗೆ ಲಿಕ್ವಿಡ್‌ ಪ್ಲಸ್‌ ಎಂದು ಹೆಸರು. ಅವಧಿ ಜಾಸ್ತಿಯಾದಂತೆ ಪ್ರತಿಫ‌ಲವೂ ಜಾಸ್ತಿ. ಸೇವಿಂಗ್ಸ್‌ ಬಡ್ಡಿದರದ ಹೋಲಿಕೆಯಲ್ಲಿ ಲಿಕ್ವಿಡ್‌ ಮತ್ತು ಲಿಕ್ವಿಡ್‌ ಪ್ಲಸ್‌ ಫ‌ಂಡುಗಳು ಹೆಚ್ಚಿನ ಪ್ರತಿಫ‌ಲವನ್ನು ನೀಡುತ್ತವೆ. ಅದಲ್ಲದೆ ಡಿವಿಡೆಂಡ್‌ ಡಿಸ್ಟ್ರಿಬ್ಯೂಶನ್‌ ಟ್ಯಾಕ್ಸ್‌ ತೆತ್ತು ಕೈಸೇರುವ ಇದರ ಮೇಲೆ ಪುನಃ ಕರಭಾರ ಇರುವುದಿಲ್ಲ. ಎಸ್‌ಬಿ/ಎಫ್ಡಿ ಬಡ್ಡಿದರದ ಮೇಲೆ ಅನ್ವಯ ದರದಲ್ಲಿ ಟ್ಯಾಕ್ಸ್‌ ಇರುತ್ತದೆ. ಆದ್ದರಿಂದ ಹೆಚ್ಚಿನ ಆದಾಯವಂತರಿಗೆ ಇದು ಇನ್ನೂ ಹೆಚ್ಚು ಸೂಕ್ತ. 

ಫಿಕ್ಸ್‌ ಮೆಚೂÂರಿಟಿ ಪ್ಲಾನ್‌ 
ಒಂದು ಓಪನ್‌ ಎಂಡೆಡ್‌ ಗಿಲ್ಟ… ಫ‌ಂಡ್‌ ಬಡ್ಡಿದರಗಳ ಏರಿಳಿತಕ್ಕೆ ಸಿಲುಕಿ ಹಾಕಿಕೊಳ್ಳುವುದರಿಂದ ಒಂದು ನಿರ್ದಿಷ್ಟ ಅವಧಿಗೆ ಅಂತ್ಯಗೊಳ್ಳುವ ಈ ಫಿಕ್ಸ್‌ ಮೆಚ್ಯುರಿಟಿ ಪ್ಲಾನ್‌ಗಳು ಕಳೆದ ಕೆಲ ವರ್ಷಗಳಿಂದ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿವೆ. ಇವು ನಿರ್ದಿಷ್ಟ ಅವಧಿಗೆ (3,6,12,36 ಇತ್ಯಾದಿ ತಿಂಗಳುಗಳು) ಅಂತ್ಯಗೊಳ್ಳುವ ಕ್ಲೋಸ್ಡ್ ಎಂಡೆಡ್‌ ಫ‌ಂಡುಗಳು. ಇದರಿಂದಾಗಿ ಆರಂಭಿಕ ಹಂತದಲ್ಲಿ ಇದ್ದ ಬಡ್ಡಿದರಗಳು ಕೊನೆಯವರೆಗೆ ಸಿಗುತ್ತವೆ. ಮಾರುಕಟ್ಟೆಯ ಏರಿಳಿತದಂತೆ ಬದಲಾಗುವುದಿಲ್ಲ. ಇದು ಈ ಫ‌ಂಡುಗಳ ವಿಶೇಷತೆ. 

ಹೆಚ್ಚಾಗಿ ಕನಿಷ್ಠ ಎಫ್ಡಿಯಷ್ಟೇ (ಗ್ಯಾರಂಟಿಯಲ್ಲದ) ಪ್ರತಿಫ‌ಲ ನೀಡುವ ಇವುಗಳು ಉತ್ತಮ ಆಯ್ಕೆಯಾಗಿವೆ. ಅಲ್ಲದೆ ಕರಭಾರ ಇರುವ ಅಧಿಕ ಆದಾಯದ ವ್ಯಕ್ತಿಗಳಿಗೆ ಎಫ್ಡಿಯ ಅನ್ವಯ ದರದಲ್ಲಿ ತೆರಿಗೆ ನೀಡುವುದರ ಬದಲು ಎಫ್ಎಮ್‌ಪಿಯ ಸುಲಭದರದಲ್ಲಿ ತೆರಿಗೆ ನೀಡುವುದರಲ್ಲಿ ಲಾಭವಿದೆ. ಆದ್ದರಿಂದ ಜಾಸ್ತಿ ತೆರಿಗೆಯ ಸ್ಲಾಬಿನಡಿ ಬರುವ ವ್ಯಕ್ತಿಗಳು ಇದನ್ನು ಆಯ್ದುಕೊಳ್ಳುತ್ತಾರೆ. 3 ವರ್ಷ ಕಾಲಾವದಿ ಮೀರಿದ ಎಫ್ಎಮ್‌ಪಿ ಫ‌ಂಡುಗಳಿಗೆ ಸುಲಭ ದರದ ಲಾಂಗ್‌ ಟರ್ಮ್ ಕ್ಯಾಪಿಟಲ್‌ ಗೈನ್ಸ್‌ ತೆರಿಗೆ ಮಾತ್ರ ಅನ್ವಯವಾಗುತ್ತದೆ. (ಶೇ.10ಇಂಡೆಕ್ಸೇಶನ್‌ ಇಲ್ಲದೆ ಅಥವ ಶೇ.20 ಇಂಡೆಕ್ಸೇಶನ್‌ ಬಳಿಕ). ಎಫ್ಡಿ /ಎಸ್‌ಬಿಗಳಂತೆ ತಮ್ಮ ಸ್ಲಾಬಾನುಸಾರ ಅನ್ವಯ ದರದಲ್ಲಿ ತೆರಿಗೆ ಕಟ್ಟಬೇಕಾಗಿಲ್ಲ. 

ಎನ್‌.ಪಿ.ಎಸ್‌.- ತಪ್ಪು ಗ್ರಹಿಕೆ ಬೇಡ  
ಕೇಂದ್ರ ಸರಕಾರದ ವತಿಯಿಂದ ಮೊತ್ತ ಮೊದಲು ಎನ್‌.ಪಿ.ಎಸ್‌. ಜಾರಿಗೆ ಬಂದಿದ್ದು 2004 ರಲ್ಲಿ – ಸುಮಾರು 15 ವರ್ಷಗಳ ಹಿಂದೆ. ಕಾಲಕ್ರಮೇಣ ಇದರಲ್ಲಿ ಕೇಂದ್ರ ಸರಕಾರಿ ನೌಕರರಿಗೆ, ರಾಜ್ಯ ಸರಕಾರಿ ನೌಕರರಿಗೆ ಹಾಗೂ ಸಾರ್ವಜನಿಕರ ಸಿಟಿಜನ್‌ ಮಾಡೆಲ್‌ ಎಂಬ ಮೂರು ಪ್ರತ್ಯೇಕ ಪ್ರಬೇಧಗಳು ಉಂಟಾಗಿವೆ. ಸರಕಾರಿ ನೌಕರರಿಗೆ ಆ ಮೊದಲು ಸಿಗುತ್ತಿದ್ದ ಹಳೆಯ ಪೆನ್ಶನ್‌ ಪದ್ಧತಿಯಲ್ಲಿ ಕೊನೆಯ ಮಾಸಿಕ ಸಂಬಳದ ಅರ್ಧ ಭಾಗವನ್ನು ಪೆನ್ಶನ್‌ ರೂಪದಲ್ಲಿ ವಿತರಿಸುವ ಪದ್ಧತಿ ಇತ್ತು. ಅ ಪದ್ಧತಿ ಸರಕಾರಕ್ಕೆ ಆರ್ಥಿಕ ಹೊರೆಯಾದ ಹಿನ್ನೆಲೆಯಲ್ಲಿ ಸೀಮಿತ ಪೆನ್ಶನ್‌ ನೀಡುವ ನೌಕರರ ದೇಣಿಗೆ ಆಧಾರಿತ ಎನ್‌.ಪಿ.ಎಸ್‌. ಪದ್ಧತಿ ಜಾರಿಗೆ ಬಂತು. ಹೊಸ ಎನ್‌.ಪಿ.ಎಸ್‌. ಪದ್ಧತಿಯು ಓರ್ವ ಸರಕಾರಿ ನೌಕರನ ದೃಷ್ಟಿಕೋನದಿಂದ ಹಳೆಯ ಪದ್ಧತಿಯಿಂದ ಉತ್ತಮವಲ್ಲ ಎನ್ನುವ ವಿಚಾರವನ್ನು ಕಾಕುವಿನ ಆರಂಭದ ಹಂತದಲ್ಲಿಯೇ, ಅಂದರೆ ಸುಮಾರು 11 ವರ್ಷಗಳ ಹಿಂದೆಯೇ ಚರ್ಚಿಸಲಾಗಿತ್ತು. ಈಗಂತೂ ಅದು ಎಲ್ಲರಿಗೂ ಚೆನ್ನಾಗಿ ತಿಳಿದಿರುವ ಒಂದು ಕಾಮನ್‌ ಸೆನ್ಸ್‌. ಆ ನಿಟ್ಟಿನಲ್ಲಿ ಮುಷ್ಕರದಲ್ಲಿರುವ ರಾಜ್ಯ ಸರಕಾರಿ ನೌಕರರ ಅಳಲು ನ್ಯಾಯಯುತವಾಗಿಯೇ ಇದೆ ಎನ್ನುವುದೂ ಕೂಡಾ ಎಲ್ಲರಿಗೂ ತಿಳಿದಿರುವ ವಿಚಾರವೇ. ಕಳೆದ ವಾರದ ಕಾಕುವಿನಲ್ಲಿ ನೀಡಿದ ವಿಶ್ಲೇಷಣೆಯಲ್ಲಿ ಎಲ್ಲಿ ಕೂಡಾ ಒಂದಕ್ಷರದಷ್ಟೂ ಕೂಡಾ ಎನ್‌.ಪಿ.ಎಸ್‌. ಪದ್ಧತಿಯು ಹಳೆಯ ಸರಕಾರಿ ಪೆನ್ಶನ್‌ ವ್ಯವಸ್ಥೆಗಿಂತ ಉತ್ತಮ ಎಂಬ ಉಲ್ಲೇಖ ಇಲ್ಲ. ಇರಲು ಸಾಧ್ಯವೂ ಇಲ್ಲ. ಲೇಖನವನ್ನು ಆ ತುಲನಾತ್ಮಕ ದೃಷ್ಟಿಕೋನದಿಂದ ಬರೆಯಲಾಗಿಲ್ಲ. ಬದಲಾಗಿ, ಈಗಿರುವ ಎನ್‌.ಪಿ.ಎಸ್‌. ಪದ್ಧತಿಯಲ್ಲಿ ಇವತ್ತಿನಿಂದ ನಾಳೆಗೆ ಬರಲಿರುವ ಕೆಲವು ಒಳ್ಳೆಯ ಸುಧಾರಣೆಗಳನ್ನಷ್ಟೇ ಉಲ್ಲೇಖ ಮಾಡಲಾಗಿದೆ- ಅದೂ ಕೂಡಾ ಕೇಂದ್ರ ಸರಕಾರಿ ನೌಕರರಿಗೆ ಮಾತ್ರ. ರಾಜ್ಯ ಸರಕಾರದ ನೌಕರರಿಗೆ ಬಹುತೇಕ ಆ ಸುಧಾರಣೆಗಳೂ ಕೂಡಾ ಅನ್ವಯವಾಗುವುದಿಲ್ಲ; ಯಾಕೆಂದರೆ ರಾಜ್ಯ ಸರಕಾರಗಳು ಆ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಉಳಿದಂತೆ ಸಾರ್ವಜನಿಕ ಎನ್‌.ಪಿ.ಎಸ್‌ (ಸಿಟಿಜನ್‌ ಮಾಡೆಲ್‌) ಸಂದರ್ಭದಲ್ಲಿ ಸರಕಾರದ ಹಳೆಯ ಪೆನ್ಶನ್‌ ಯೋಜನೆಯ ಹೋಲಿಕೆ ಅಪ್ರಸ್ತುತ; ಆದ್ದರಿಂದ ಅಂತಹವರಿಗೆ ಉಳಿದ ಸಾರ್ವಜನಿಕ ಉಳಿತಾಯ ಯೋಜನೆಗಳ ಹೋಲಿಕೆಯಲ್ಲಿ ಎನ್‌.ಪಿ.ಎಸ್‌. ಒಂದು ಉತ್ತಮ ಯೋಜನೆ. ಈ ಮೂರೂ ಪ್ರಬೇಧಗಳನ್ನು, ಸಂದರ್ಭಗಳನ್ನು ವಸ್ತುನಿಷ್ಠವಾಗಿ ಗಮನಿಸಿಕೊಂಡು ಎನ್‌.ಪಿ.ಎಸ್‌. ಪದ್ಧತಿಯನ್ನೂ ಆ ಬಗ್ಗೆ ಬರುವ ಕಾಕು ಲೇಖನಗಳನ್ನೂ ಅಥೆìçಸಬೇಕಾಗಿ ಕೋರಲಾಗಿದೆ. ತಪ್ಪು ತಿಳುವಳಿಕೆಗೆ ಬಲಿಯಾಗಿ ಯಾರೂ ಕೂಡಾ ನೊಂದುಕೊಳ್ಳಬಾರದಾಗಿ ವಿನಂತಿ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ