ಅಜ್ಜೀ…ಎಂಬ ಅಕ್ಕರೆಯ ದನಿ ಎಲ್ಲರನ್ನೂ ನಿಲ್ಲಿಸಿತು!

ರಿಸರ್ವೇಶನ್‌ ಮಾಡಿಲ್ಲ ತಾನೆ? ತೆಪ್ಪಗಿದ್ದು ಬಿಡಿ. ಜಾಸ್ತಿ ಮಾತಾಡಿದ್ರೆ ಕೇಸ್‌ ಹಾಕ್ತೀವಿ ಎಂದು ರೈಲ್ವೆ ಪೊಲೀಸರು ಗದರಿದರು

Team Udayavani, Jun 9, 2019, 6:00 AM IST

ನಾಲ್ಕು ಜನ ಕೂರಬಹುದಾದ ಸ್ಥಳದಲ್ಲಿ ಗಂಡ-ಹೆಂಡತಿ, ಪುಟ್ಟಮಗು ಮಾತ್ರ ಇದ್ದರು. ಅದನ್ನು ಗಮನಿಸಿದ ಗಿರಿ, ಎರಡು ಸೀಟು ಖಾಲಿ ಇವೆ. ಹೋಗಿ ಕೂತ್ಕೊಂಡ್‌ ಬಿಡಿ ಎಂದು ಅಮ್ಮನನ್ನೂ- ಹೆಂಡತಿಯನ್ನೂ ಅಲ್ಲಿಗೆ ಕಳಿಸಿದ. ಸೀಟ್‌ನಲ್ಲಿದ್ದವರು – “ಇದು ರಿಸರ್ವೇಷನ್‌ ಸೀಟ್‌. ಖಾಲಿ ಇಲ್ಲ’ ಅಂದುಬಿಟ್ಟರು. “ನಾಲ್ಕು ಜನ ಕೂತ್ಕೊàಬಹುದು ಇಲ್ಲಿ. ನೀವು ಇಬ್ರೇ ಇದೀರ. ಮಗೂಗೆ ಟಿಕೆಟ್‌ ಇದ್ಯಾ? ಅದನ್ನು ಎತ್ತಿ ಕೂರಿಸ್ಕೊಳ್ಳಿ. ನಾವೂ ಟಿಕೆಟ್‌ ತಗೊಂಡೇ ಬಂದಿದೀವಿ. ಜಾಗ ಬಿಡಿ’ ಎಂದು ಗಿರಿ ತುಸು ಗದರುವ ದನಿಯಲ್ಲೇ ಹೇಳಿದ.

“ಅರಸೀಕೆರೆಗೆ ಹೋದ್ರೆ, ಹುಬ್ಬಳ್ಳಿ-ಬೆಂಗಳೂರು ಇಂಟರ್‌ಸಿಟಿ ರೈಲು ಸಿಗುತ್ತೆ. ಅದರಲ್ಲಿ ಹೋದ್ರೆ ಬೆಂಗಳೂರಿಗೆ ಮೂರು ಗಂಟೆಯ ಪ್ರಯಾಣ. ಟ್ರೆ„ನ್‌ ಜರ್ನಿಯಲ್ಲಿ ಹೆಚ್ಚಿನ ಆಯಾಸ ಆಗಲ್ಲ. ರೈಲು ನಿಲ್ದಾಣದಿಂದ ಮನೆಗೆ ಹೋಗಿ, ಒಂದೆರಡು ಗಂಟೆ ರೆಸ್ಟ್‌ ತಗೊಂಡು, ಸಂಜೆ ರಿಸೆಪ್ಷನ್‌ಗೆ ಹೋಗಬಹುದು. ಅಥವಾ, ರೈಲ್ವೆ ಸ್ಟೇಷನ್‌ನಿಂದ ನೇರವಾಗೇ ಚೌಲಿóಗೆ ಹೋದರೂ ಆದೀತು. ನಾವೀಗ ತಿಂಡಿ ಮುಗಿಸಿ, ಬೇಗ ರೆಡಿ ಆದರೆ ಹಳೇಬೀಡು-ಜಾವಗಲ್‌-ಬಾಣಾವರ ಮಾರ್ಗವಾಗಿ ಅರಸೀಕೆರೆ ತಲುಪಬಹುದು. ಅರಸೀಕೆರೆ ತಲುಪುವತನಕ ಸ್ವಲ್ಪ ಕಷ್ಟ ಆಗಬಹುದು. ಅಲ್ಲಿಂದಾಚೆಗೆ ಜರ್ನಿ ಆರಾಮ್‌ ಇರುತ್ತೆ’…

ಗಿರಿ, ಎಲ್ಲರನ್ನೂ ಉದ್ದೇಶಿಸಿ ಈ ಮಾತು ಹೇಳಿದ. ಎಲ್ಲರೂ ಏಕಕಂಠದಲ್ಲಿ-“ಹಾಗೇ ಆಗಲಿ’ ಅನ್ನುತ್ತಾ ರೆಡಿಯಾಗುವ ನೆಪದಲ್ಲಿ ಬ್ಯುಸಿಯಾದರು.

ವಯಸ್ಸಾಗಿದ್ದ ಅಮ್ಮ, ಹೆಂಡತಿ ಹಾಗೂ ಇಬ್ಬರು ಬಂಧುಗಳೊಂದಿಗೆ ಗಿರಿ ಮದುವೆಯೊಂದನ್ನು ಅಟೆಂಡ್‌ ಮಾಡಬೇಕಿತ್ತು. ಹಳೇಬೀಡಿನಿಂದ ಬೆಂಗಳೂರಿಗೆ ಬಸ್‌ನಲ್ಲೇ ಹೋದರೆ ಐದಾರು ಗಂಟೆಗಳ ಪ್ರಯಾಣ. ಮುಖ್ಯವಾಗಿ, ಗಿರಿಯ ಅಮ್ಮ ಮತ್ತು ಹೆಂಡತಿಗೆ ಬಸ್‌ ಪ್ರಯಾಣ ಒಗ್ಗುತ್ತಿರಲಿಲ್ಲ. ಅಮ್ಮನಿಗೆ ಶುಗರ್‌ ಇದ್ದುದರಿಂದ, ಆಗಿಂದಾಗ್ಗೆ ಶೌಚಾಲಯಕ್ಕೆ ಹೋಗಬೇಕಾಗುತ್ತಿತ್ತು. ಜೊತೆಗೆ, ಐದಾರು ಗಂಟೆಗಳ ಕಾಲ ಕಾಲು ಮಡಿಚದೆ ಕೂತರೆ, ಮೇಲಿಂದ ಮೇಲೆ ಜೋಮು ಹಿಡಿದು ಅವರಿಗೆ ಹಿಂಸೆಯಾಗುತ್ತಿತ್ತು. ಇಷ್ಟು ಸಾಲದೆಂಬಂತೆ, ದೀರ್ಘ‌ ಪ್ರಯಾಣದ ಸಂದರ್ಭದಲ್ಲಿ ಗಿರಿಯ ಹೆಂಡತಿಗೆ ವಾಂತಿ ಆಗಿಬಿಡುತ್ತಿತ್ತು. ಇದನ್ನೆಲ್ಲ ಯೋಚಿಸಿಯೇ, ರೈಲಿನಲ್ಲಿ ಹೋದರೆ ಎಲ್ಲರಿಗೂ ಅನುಕೂಲ ಎಂದು ಗಿರಿ ಅಂದಾಜು ಮಾಡಿಕೊಂಡಿದ್ದ.

ಬಾಕಿ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಬಂದು ಬಿಡುವ ಸರ್ಕಾರಿ ಬಸ್ಸು, ಅವತ್ತು ಬರಲೇ ಇಲ್ಲ. ಹಳೆಬೀಡಿನಿಂದ ಜಾವಗಲ್‌ಗೆ, ಅಲ್ಲಿಂದ ಬಾಣಾವರಕ್ಕೆ, ಆ ಊರಿನಿಂದ ಅರಸೀಕೆರೆಗೆ ಆಟೋದಲ್ಲಿ, ಗೂಡ್ಸ್‌ ಟ್ಯಾಕ್ಸಿಯಲ್ಲಿ ಪ್ರಯಾಸದಿಂದಲೇ ತಲುಪಿಕೊಂಡದ್ದಾಯಿತು. ನಿಲ್ದಾಣಕ್ಕೆ ಬಂದು ನೋಡಿದರೆ- ನೂರಾರು ಜನ ರೈಲಿಗೆ ಕಾದು ನಿಂತಿದ್ದರು. ಆ ಪೈಕಿ ರಿಸರ್ವೇಷನ್‌ ಮಾಡಿಸಿದ್ದವರು, ಸ್ಟೇಷನ್‌ ಮಾಸ್ಟರನ್ನು, ನಿಲ್ದಾಣದಲ್ಲಿ ಗಸ್ತು ತಿರುಗುವ ಪೊಲೀಸರನ್ನು, ಸಹಪ್ರಯಾಣಿಕರನ್ನು- “ನಾವು ಕಾಯ್ದಿರಿಸಿದ್ದ ಸೀಟ್‌ ಹೊಂದಿರುವ ಬೋಗಿ ಇಲ್ಲಿ ಬರುತ್ತಾ?’ ಎಂದು ಮೇಲಿಂದ ಮೇಲೆ ವಿಚಾರಿಸುತ್ತಿದ್ದರು. ಮತ್ತೂಂದಷ್ಟು ಜನ, ನಿಲ್ದಾಣದಿಂದ ಏನಾದರೂ ಸೂಚನೆ ಹೊರಡಿಸಬಹುದಾ ಎಂಬ ಕುತೂಹಲದಿಂದ ಅಲ್ಲಿದ್ದ ಸ್ಪೀಕರ್‌ಗಳನ್ನು ಗಮನಿಸುತ್ತಿದ್ದರು.

ಟಿಕೆಟ್‌ ಖರೀದಿಸಲು ಹೋಗಿದ್ದ ಗಿರಿ, ಅವಸರದಿಂದಲೇ ಬಂದು, ಎಲ್ಲರನ್ನೂ ಉದ್ದೇಶಿಸಿ- “ಸೀಟ್‌ ರಿಸರ್ವ್‌ ಮಾಡಿಸಬಹುದಾ ಅಂತ ನೋಡಿದೆ. ಎಲ್ಲಾ ಸೀಟ್‌ಗಳೂ ಭರ್ತಿ ಆಗಿವೆ. ಈಗ ರಿಸರ್ವೇಷನ್‌ ಕ್ಯಾಟಗರಿಲಿ ಟಿಕೆಟ್‌ ಕೊಡಲ್ಲ. ಜನರಲ್‌ ಟಿಕೆಟ್‌ ಕೊಡ್ತೇವೆ. ಯಾವುದಾದ್ರೂ ಬೋಗೀಲಿ ಸೀಟ್‌ ಸಿಕ್ಕಿದ್ರೆ ನಿಮ್ಮ ಅದೃಷ್ಟ , ಅಂದರು. ಇನ್ನೇನು ಮಾಡೋಕಾಗುತ್ತೆ? ಎಲ್ಲಾದ್ರೂ ಅಡ್ಜಸ್ಟ್‌ ಮಾಡಿಕೊಂಡು ಕೂತುಬಿಡೋಣ…’ ಅಂದ.

ಅವನು ಮಾತು ಮುಗಿಸುತ್ತಿದ್ದಂತೆಯೇ, ಹುಬ್ಬಳ್ಳಿ-ಬೆಂಗಳೂರು ಇಂಟರ್‌ಸಿಟಿ ರೈಲು ಗಾಡಿಯು ಇನ್ನು ಹತ್ತು ನಿಮಿಷದಲ್ಲಿ ಬರಲಿದೆ ಎಂಬ ಘೋಷಣೆ ಕೇಳಿಬಂತು. ತಕ್ಷಣ, ಪ್ರಯಾಣಿಕರೆಲ್ಲ ಅಲರ್ಟ್‌ ಆದರು. ಲಗೇಜ್‌ಗಳನ್ನು ಕೈಗೆ ತೆಗೆದುಕೊಂಡರು. ಮೊಬೈಲ್‌ಗ‌ಳನ್ನು ಬ್ಯಾಗ್‌ನಲ್ಲಿ/ ಜೇಬಿನೊಳಗೆ ಇಟ್ಟುಕೊಂಡರು.

ಗಿರಿ, ಅಷ್ಟೂ ಜನರನ್ನು ಸೂಕ್ಷ್ಮವಾಗಿ ಗಮನಿಸಿದ. ರೈಲು ಬಂದ ತಕ್ಷಣ ತಾವೇ ಮೊದಲು ಹತ್ತಿ ಸೀಟ್‌ ಹಿಡಿಯಬೇಕು ಎಂಬ “ಅವಸರ’ ಎಲ್ಲರ ಮುಖದಲ್ಲೂ ಸ್ಪಷ್ಟವಾಗಿ ಕಾಣುತ್ತಿತ್ತು. ಪ್ಲಾಟ್‌ಫಾರ್ಮ್ನಲ್ಲಿ ನಿಂತುಕೊಂಡೇ ರೈಲು ಹತ್ತಲು ಹೋದರೆ, ಸೀಟ್‌ ಹಿಡಿಯಲು ಸಾಧ್ಯವೇ ಇಲ್ಲ ಎಂದು ಅವನಿಗೆ ಅರ್ಥವಾಗಿಹೋಯಿತು. ಜೊತೆಗಿದ್ದ ಬಂಧುಗಳನ್ನು ಕರೆದು- “ತುಂಬಾ ಜನ ಇದ್ದಾರೆ. ಸೀಟ್‌ ಸಿಗೋದು ಕಷ್ಟ. ನಾವು ಈ ಟ್ರ್ಯಾಕ್‌ ಜಿಗಿದು ಕಂಬಿಗಳಿವೆಯಲ್ಲ, ಅಲ್ಲಿಗೆ ಹೋಗೋಣ. ರೈಲು ನಿಂತ ತಕ್ಷಣ ಆ ಕಡೆಯಿಂದ ಹತ್ಕೊಬಿಡೋಣ. ಪ್ಲಾಟ್‌ಫಾರ್ಮ್ ಮೇಲೆ ನಿಂತಿರೋ ಜನ, ಎಲ್ಲಾ ಇಳಿದ ಮೇಲೆ ಹತ್ಕೊಬೇಕು. ಅಷ್ಟರೊಳಗೆ ನಾವು ಆ ಕಡೆಯಿಂದ ಹತ್ತಿ, ಸೀಟ್‌ ಎಲ್ಲಿದೆ ಅಂತ ನೋಡಿ ಹೋಗಿ ಕೂತುಬಿಡೋಣ. ಲೇಡೀಸ್‌ ಮಾತ್ರ, ಪ್ಲಾಟ್‌ಫಾರ್ಮ್ ಕಡೆಯಿಂದಲೇ ಹತ್ತಲಿ’ ಎಂದ. ನಂತರ, ಅಮ್ಮನಿಗೂ ಹೆಂಡತಿಗೂ ಸೂಚನೆ ನೀಡಿ, ಆ ಕಡೆಗೆ ಹೋಗಿಯೇಬಿಟ್ಟ.

ರೈಲು ಬಂದಾಗ, ಗಿರಿ ಅಂದುಕೊಂಡಂತೆ ಏನೂ ನಡೆಯಲಿಲ್ಲ. ಕಂಬಿಯ ಪಕ್ಕದಲ್ಲೇ ಇದ್ದ ಜಲ್ಲಿಕಲ್ಲಿನ ಮೇಲೆ ಓಡಲು ಇವರಿಗೆ ಸಾಧ್ಯವಾಗಲೇ ಇಲ್ಲ. ಕಡೆಗೂ ಕಷ್ಟಪಟ್ಟು ರೈಲು ಹತ್ತುವ ವೇಳೆಗೆ ತಡವಾಗಿ ಹೋಗಿತ್ತು. ಅಷ್ಟು ದೂರದಲ್ಲಿದ್ದ ಅಮ್ಮ ಮತ್ತು ಹೆಂಡತಿ, ಇವರನ್ನು ಕಂಡಾಕ್ಷಣ- ಸೀಟ್‌ ಇದ್ಯಾ ಅನ್ನುತ್ತಲೇ ಬಳಿಬಂದರು. ಉಹುಂ, ಯಾವ ಸೀಟೂ ಖಾಲಿ ಇರಲಿಲ್ಲ. ಎಲ್ಲರೂ ಬೆಂಗಳೂರಿಗೆ ನಮುª ಥ್ರೂ ಸೀಟ್‌ ಅನ್ನುತ್ತಿದ್ದರು. ಹುಡುಕೋಣ ಬನ್ನಿ ಎನ್ನುತ್ತಾ, ಎಲ್ಲರನ್ನೂ ಕರೆದುಕೊಂಡು ಮತ್ತೂಂದು ಬೋಗಿಗೆ ಬಂದ ಗಿರಿ.

ಅಲ್ಲಿ ಒಂದು ಕಡೆ, ನಾಲ್ಕು ಜನ ಕೂರಬಹುದಾದ ಸ್ಥಳದಲ್ಲಿ ಗಂಡ-ಹೆಂಡತಿ, ಪುಟ್ಟಮಗು ಮಾತ್ರ ಇದ್ದರು. ಎರಡು ಸೀಟು ಖಾಲಿ ಇವೆ. ಹೋಗಿ ಕೂತ್ಕೊಂಡ್‌ ಬಿಡಿ ಎಂದು ಅಮ್ಮನನ್ನೂ- ಹೆಂಡತಿಯನ್ನೂ ಕಳಿಸಿದ. ಸೀಟ್‌ನಲ್ಲಿದ್ದವರು – “ಇದು ರಿಸರ್ವೇಷನ್‌ ಸೀಟ್‌. ಖಾಲಿ ಇಲ್ಲ’ ಅಂದುಬಿಟ್ಟರು.

“ನಾಲ್ಕು ಜನ ಕೂತ್ಕೊಬಹುದು ಇಲ್ಲಿ. ನೀವು ಇಬ್ರೇ ಇದೀರ. ಮಗೂಗೆ ಟಿಕೆಟ್‌ ಇದ್ಯಾ? ಅದನ್ನು ಎತ್ತಿ ಕೂರಿಸ್ಕೊಳ್ಳಿ. ನಾವೂ ಟಿಕೆಟ್‌ ತಗೊಂಡೇ ಬಂದಿದೀವಿ. ಜಾಗ ಬಿಡಿ’ ಎಂದು ಗಿರಿ ತುಸು ಗದರುವ ದನಿಯಲ್ಲೇ ಹೇಳಿದ.

“ನೋಡ್ರೀ, ಮಿಸ್ಟರ್‌, ನಾಲ್ಕು ಸೀಟು ರಿಸರ್ವ್‌ ಮಾಡಿÕದೀನಿ. ನಿಮಗೂ ಇದೇ ಸೀಟ್‌ ರಿಸರ್ವ್‌ ಆಗಿದ್ರೆ ಮಾತ್ರ ಕ್ವಶ್ಚನ್‌ ಮಾಡಿ. ಇಲ್ಲಾಂದ್ರೆ ಜಾಗ ಖಾಲಿ ಮಾಡಿ’- ಕೂತಿದ್ದವನೂ ಅಷ್ಟೇ ಬಿರುಸಾಗಿ ಉತ್ತರಕೊಟ್ಟ. “ಸಾರ್‌, ಇಲ್ಲಿ ರೂಲ್ಸ್‌ ಹೇಳಲು ಬರಬೇಡಿ. ನಮಗೆ ಸೀಟು ಬೇಡ. ಇಬ್ಬರು ಹೆಂಗಸರಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಅವರಿಗೆ ಸೀಟು ಕೊಡಿ’-ಗಿರಿ, ಮತ್ತೆ ವಾದ ಮಂಡಿಸಿದ.
“ನೋಡ್ರೀ, ಆರಾಮಾಗಿ ಟ್ರಾವಲ್‌ ಮಾಡಬೇಕು ಅಂತಾನೇ ನಾವು ನಾಲ್ಕು ಸೀಟ್‌ಗಳನ್ನೂ ಬುಕ್‌ ಮಾಡಿದೀವಿ. ನಿಮಗೆ ಸೀಟ್‌ ಬಿಡೋಕೆ ಬಿಲ್‌ಕುಲ್‌ ಆಗೋದಿಲ್ಲ. ಸುಮ್ನೆ ವಾದ ಮಾಡಬೇಡಿ. ಆ ಕಡೆ ಹೋಗಿಬಿಡಿ’-ರಿಸರ್ವ್‌ ಮಾಡಿಸಿದ್ದ ಆಸಾಮಿಯೂ ಸೇರಿಗೆ ಸವ್ವಾಸೇರು ಎಂಬಂತೆಯೇ ಉತ್ತರಕೊಟ್ಟ. ಇದನ್ನೆಲ್ಲಾ ನೋಡುತ್ತಿದ್ದ ಗಿರಿಯ ಬಂಧುಗಳಿಗೆ ಸಿಟ್ಟು ಬಂತು. ಅವರು- “ನಿಂಗೇನು ಸ್ವಲ್ಪವೂ ಮನುಷ್ಯತ್ವ ಇಲ್ಲವೇನಯ್ಯ? ವಯಸ್ಸಾದವರಿಗೆ ಸೀಟ್‌ ಬಿಟ್ಟುಕೊಡು ಅಂದ್ರೆ ತಲೆಯೆಲ್ಲಾ ಮಾತಾಡ್ತೀಯ? ರೈಲೇನು ನಿಮ್ಮ ಅಪ್ಪನ ಮನೇದಾ?’ ಅಂದುಬಿಟ್ಟರು. ಅಲ್ಲಿಯೇ ನಿಂತಿದ್ದ ಇನ್ನೊಂದಿಬ್ಬರು, ಅವನನ್ನೇನು, ಕೇಳ್ಳೋದು? ಸ್ವಲ್ಪ ಒತ್ತರಿಸಿಕೊಂಡು ಕೂತ್ಕೊಳಿÅ. ಅದೇನ್‌ ಮಾಡ್ತಾನೋ ನೋಡೇ ಬಿಡುವಾ’ ಅಂದರು. ರಿಸರ್ವ್‌ ಮಾಡಿಸಿದ್ದವನು, ಎಲ್ಲರನ್ನೂ ಒಮ್ಮೆ ದುರುಗುಟ್ಟಿ ನೋಡಿ, ಸೀದಾ ಟಾಯ್ಲೆಟ್‌ಗೆ ಹೋಗಿಬಿಟ್ಟ. ಎರಡು ನಿಮಿಷದ ನಂತರ ಹೊರಬಂದು, ಮೊದಲಿನಂತೆಯೇ ಸೀಟಿನುದ್ದಕ್ಕೂ ಕಾಲು ಚಾಚಿ ಕೂತುಕೊಂಡ.

ರೈಲು ತಿಪಟೂರಿನಲ್ಲಿ ನಿಲ್ಲುತ್ತಿದ್ದಂತೆಯೇ, ಗಿರೀಶನಿದ್ದ ಬೋಗಿಗೆ ಮೂವರು ಪೊಲೀಸರು ನುಗ್ಗಿಬಂದರು. ನೇರವಾಗಿ ಗಿರೀಶನಿದ್ದ ಸೀಟ್‌ ಬಳಿಗೇ ಬಂದು- “ಏನ್ರೀ, ರಿಸರ್ವೇಶನ್‌ ಮಾಡಿಸಿರೋರ ಮೇಲೆ ಜೋರು ಮಾಡಿದ್ರಂತೆ. ನೀವು ರಿಸರ್ವೇಶನ್‌ ಮಾಡಿಸಿಲ್ಲ ತಾನೆ? ತೆಪ್ಪಗೆ ಇದ್ದುಬಿಡಿ. ಮತ್ತೇನಾದ್ರೂ ಗಲಾಟೆ ಮಾಡಿದ್ರೆ ಕೇಸ್‌ ಬೀಳುತ್ತೆ…’ ಅಂದರು. ಗಿರಿ ಮಧ್ಯೆ ಬಾಯಿ ಹಾಕಿ- “ಸರ್‌, ಅದು ಹಾಗಲ್ಲ’ ಎಂದು ಏನೋ ಹೇಳಲು ಹೋದ. ಆದರೆ ಪೊಲೀಸರು ಮತ್ತೆ ಗದರಿದರು. ಲಾಠಿ ತೋರಿಸಿ ವಾರ್ನ್ ಮಾಡಿದರು.

ಅಕಸ್ಮಾತ್‌ ಪೊಲೀಸರು ಹೊಡೆದುಬಿಟ್ಟರೆ ಗತಿಯೇನು ಅನ್ನಿಸಿ ಗಿರಿಯ ಅಮ್ಮನಿಗೆ ಭಯವಾಯಿತು. ಆಕೆ ಗಿರಿಯ ಕೈ ಹಿಡಿದು -“ಮಗಾ, ಸುಮ್ನೆ ಜಗಳ ಯಾಕೆ? ಬಾಗಿಲ ಹತ್ರ ಜಾಗ ಇದ್ಯಲ್ಲ: ಅಲ್ಲಿ ಕೂತುಬಿಡೋಣ ಬಾಪ್ಪ…’ ಅನ್ನುತ್ತ, ಹೋಗಿ ಕೂತೇಬಿಟ್ಟಳು. ಗಿರಿಯ ಹೆಂಡತಿಯೂ ಅತ್ತೆಯನ್ನೇ ಹಿಂಬಾಲಿಸಿದಳು. ಕಾಫಿ, ಟೀ, ಬಿಸ್ಕತ್‌, ಚುರುಮುರಿ, ನೀರು, ಬೋಂಡಾ ಮಾರುವವರು, ಟಾಯ್ಲೆಟ್‌ಗೆ ಹೋಗುವವರು, ಎರಡು ನಿಮಿಷಕ್ಕೊಮ್ಮೆ ಬರುತ್ತಲೇ ಇದ್ದುದರಿಂದ ಬಾಗಿಲ ಬಳಿ ಕೂತಿದ್ದ ಹೆಂಗಸರಿಗೆ ಕಿರಿಕಿರಿ ಆಗುತ್ತಿತ್ತು. ಜೊತೆಗೆ, ಭರ್ರೆಂಬ ಗಾಳಿಯೂ ಮುಖಕ್ಕೆ ರಾಚುತ್ತಿತ್ತು. “ಅಲ್ಲ, ವಯಸ್ಸಾದ ಹೆಂಗಸಿಗೆ ಸೀಟ್‌ ಬಿಡಪ್ಪಾ ಅಂದ್ರೆ ಟಾಯ್ಲೆಟ್‌ಗೆ ಹೋಗಿ ಪೊಲೀಸ್‌ ಕಂಪ್ಲೆಂಟ್‌ ಕೊಟ್ಟಿದಾನಲ್ಲ; ಅದೆಂಥ ನೀಚ ಅವ್ನು’ ಎಂದುಕೊಳ್ಳುತ್ತ,, ತನ್ನ ಅಸಹಾಯಕತೆಗೆ ಒಳಗೊಳಗೇ ನೊಂದುಕೊಳ್ಳುತ್ತ ಗಿರಿ ಚಡಪಡಿಸುತ್ತಿದ್ದ. ರೈಲು ಶರವೇಗದಲ್ಲಿ ಸಾಗುತ್ತಿತ್ತು…
***
“ಅಯ್ಯಯ್ಯೋ, ಏಳಿ, ಬೇಗ ಎದ್ದೇಳಿ ಮಗೂಗೆ ಏನೋ ಆಗಿಬಿಟ್ಟಿದೆ ನೋಡ್ರಿ…’ ರಿಸರ್ವ್‌ ಸೀಟಿನಲ್ಲಿ ಕೂತಿದ್ದ ಆಕೆ ಚೀರುತ್ತಲೇ ಹೀಗೆಂದಳು. ಸೀಟಿನುದ್ದಕ್ಕೂ ಕಾಲು ಚಾಚಿ ಮಲಗಿದ್ದ ಆಕೆಯ ಗಂಡ , ದಡಬಡಿಸಿ ಎದ್ದು ಮಗುವನ್ನು ನೋಡಿ ಮಾತೇ ಹೊರಡದೆ ಪೆಚ್ಚಾದ. ಮರುಕ್ಷಣವೇ ಚೇತರಿಸಿಕೊಂಡು ಮಗುವಿನ ಕೆನ್ನೆ ಅಲುಗಿಸುತ್ತ- “ಪಾಪೂ, ಪಾಪೂ, ಕಂದಾ, ಚಿನ್ನಾ…’ ಎಂದೆಲ್ಲಾ ಕೂಗತೊಡಗಿದ. ಆಗಲೇ ಮಗು ತೇಲುಗಣ್ಣು ಮೇಲುಗಣ್ಣು ಬಿಡತೊಡಗಿತು. ತಕ್ಷಣವೇ ಮಗುವನ್ನು ಹೆಂಡತಿಗೆ ಕೊಟ್ಟು ಮೊಬೈಲ್‌ ತಗೊಂಡು ಐದಾರು ನಂಬರ್‌ ಒತ್ತಿ- “ಬ್ಯಾಡ್‌ಲಕ್‌, ನೆಟ್‌ವರ್ಕ್‌ ಸಿಗ್ತಾ ಇಲ್ಲ. ಮಗೂಗೆ ಏನೋ ತೊಂದರೆ ಆಗಿದೆ. ಉಸಿರಾಡೋಕೇ ಕಷ್ಟ ಆಗ್ತಿದೆ. ಯಾರಾದ್ರೂ ಹೆಲ್ಪ್ ಮಾಡಿ ಪ್ಲೀಸ್‌..’ ಎಂದು ಗೋಗರೆದ.

ಏನಾಗಿತ್ತೆಂದರೆ, ಸಣ್ಣ ಸಣ್ಣ ಮಣಿಗಳಿದ್ದ ಸರವೊಂದನ್ನು ಹಿಡಿದುಕೊಂಡು ಆಟವಾಡುತ್ತಿದ್ದ ಮಗು, ಅದ್ಯಾವ ಮಾಯದಲ್ಲೋ ಒಂದು ಮಣಿಯನ್ನು ಮೂಗಿನೊಳಗೆ ಹಾಕಿಕೊಂಡುಬಿಟ್ಟಿತ್ತು. ಮೊಬೈಲ್‌ಗ‌ಳಲ್ಲಿ ಕಳೆದುಹೋಗಿದ್ದ ಈ ದಂಪತಿ ಅದನ್ನು ಗಮನಿಸಿಯೇ ಇರಲಿಲ್ಲ. ಅವರು ನೋಡುವ ವೇಳೆಗೆ ಆ ಮಣಿ ಮೂಗಿನೊಳಗೆ ಸೇರಿಕೊಂಡು, ಉಸಿರಾಡುವುದೇ ಕಷ್ಟವಾಗಿ ಮಗು ಒದ್ದಾಡತೊಡಗಿತ್ತು. ಅದುವರೆಗೂ ಈ ದಂಪತಿಯ ಜಬರ್‌ದಸ್ತ್ ಹಾರಾಟವನ್ನು ನೋಡಿದ್ದ ಬೋಗಿಯ ಜನ, ಈಗ ಚೀರಾಟವನ್ನು ಕಂಡು ಕುತೂಹಲದಿಂದಲೇ ಒಮ್ಮೆ ಇಣುಕಿ ನೋಡಿ, ಏನಾಗಿದೆ ಎಂದು ವಿಚಾರಿಸಿಕೊಂಡು, ಆ ಮಗುವನ್ನು ಮುಟ್ಟುವ ಗೋಜಿಗೂ ಹೋಗದೆ ಕಾಲ್ಕಿàಳುತ್ತಿದ್ದರು. ಪರಿಚಯದ ಡಾಕ್ಟರ್‌ಗೆ, ರೈಲ್ವೆ ಕಂಟ್ರೋಲ್‌ ರೂಮ್‌ಗೆ ಫೋನ್‌ ಮಾಡಲು ಒಂದಿಬ್ಬರು ಯತ್ನಿಸಿದರೂ, ನೆಟ್‌ವರ್ಕ್‌ ಸಿಗದ ಕಾರಣ ಪೆಚ್ಚುಮೋರೆ ಹಾಕಿಕೊಂಡು ಸುಮ್ಮನಾದರು. ಹೀಗಿದ್ದಾಗಲೇ, ಮಗುವಿನ ತಂದೆಯೇ, ಆ ಮಣಿಯನ್ನು ಹೊರ ತೆಗೆಯಲೆಂದು ಮೂಗನ್ನು ಮೆತ್ತಗೆ ನೀವಲು ಹೋಗಿ, ಆ ಮಣಿ ಇನ್ನಷ್ಟು ಮುಂದಕ್ಕೆ ಹೋಗಿಬಿಟ್ಟಿತು. ಉಸಿರು ಕಟ್ಟಿದ್ದಕ್ಕೆ, ನೋವಿನ ಕಾರಣಕ್ಕೆ- ಆ ಮಗು ಕ್ಷಣಕಾಲ ಉಸಿರು ನಿಲ್ಲಿಸಿ ಕಣ್ಮುಚ್ಚಿತು. ಅಷ್ಟೆ; ಮಗುವಿನ ತಾಯಿ ಕಿಟಾರನೆ ಕಿರುಚಿಕೊಂಡಳು.

ಎಲ್ಲರ ಮಾತುಗಳನ್ನೂ ಕೇಳಿಸಿಕೊಂಡು, ಅದುವರೆಗೂ ಮೌನವಾಗಿ ಕೂತಿದ್ದ ಗಿರಿಯ ತಾಯಿ ಎದ್ದವರೇ, ಸೀದಾ ಮಗುವಿದ್ದ ಜಾಗಕ್ಕೆ ಬಂದರು. ಮಗುವಿಗೆ ತೊಂದರೆಯಾಗಿದೆ ಎಂಬುದನ್ನು ಕೇಳಿಯೂ ಸುಮ್ಮನಿರಲು ಆಕೆಗೆ ಸಾಧ್ಯವಾಗಲಿಲ್ಲ.

“ಸ್ವಲ್ಪ ಜಾಗ ಬಿಡ್ರಪ್ಪ. ನನ್ನ ಮಗ ಆಸ್ಪತ್ರೇಲಿ ಕೆಲಸ ಮಾಡ್ತಾನೆ. ಅವನಿಗೆ ಏನಾದ್ರೂ ಗೊತ್ತಾಗಬಹುದು…’ ಎಂದಳು. ಸ್ವಲ್ಪ ಸಮಯದ ಹಿಂದಷ್ಟೇ ಅದೇ ಜಾಗದಲ್ಲಿ ಅವರಿಗೆ ನಿಲ್ಲುವುದಕ್ಕೂ ಅವಕಾಶ ನೀಡದಿದ್ದ ದಂಪತಿ, ಈಗ ಕಂಬಗಳಂತೆ ನಿಂತುಬಿಟ್ಟಿದ್ದರು. ಆ ಅಜ್ಜಿ ಕಾಲು ಚಾಚಿ ಕೂತು, ಮಗುವನ್ನು ಮುಖ ಮೇಲಾಗಿ ಮಲಗಿಸಿಕೊಂಡಳು, ಪ್ರಯಾಣದ ವೇಳೆಯಲ್ಲಿ ಯಾರಿಗಾದರೂ ತಲೆನೋವು ಬಂದರೆ ಎಂಬ ಮುಂಜಾಗ್ರತೆಯಿಂದಲೇ ತಂದಿದ್ದ ವಿಕ್ಸ್‌ ಅನ್ನೇ, ಮಗುವಿನ ಮೂಗಿನುದ್ದಕ್ಕೂ ಹಚ್ಚಿದ ಗಿರಿ, ಗುಂಡುಮಣಿಯು ಕೆಳಬರುವಂತೆ ಮಾಡಲು ನಿಧಾನವಾಗಿ ಮೂಗನ್ನು ನೀವತೊಡಗಿದ. ಅವನ ತಾಯಿ, ಕೊರಳ ಸರದಲ್ಲಿದ್ದ, ಎಲೆ ಅಡಿಕೆ ಹಾಕುವಾಗ ಸುಣ್ಣ ತೆಗೆಯಲು ಬಳಸುವ ಚಿಮುಟಿಗೆಯನ್ನು ತೆಗೆದು, ಅದನ್ನು ನಿಧಾನವಾಗಿ ಮಗುವಿನ ಮೂಗಿನೊಳಗೆ ತೂರಿಸಿದಳು. ಇತ್ತ, ಗಿರಿ ಮಸಾಜ್‌ ಮುಂದುವರಿಸಿದ್ದ. ಗುಂಡುಮಣಿ ಚಿಮಟಕ್ಕೆ ತಾಗುತ್ತಿದ್ದಂತೆಯೇ, ಅಜ್ಜಿ ಚಿಮುಟದ ಮೇಲೆ ಸ್ವಲ್ಪ ಬಲ ಹಾಕಿ ಒತ್ತಿದಳು. ಅಷ್ಟೇ: ಮಗು ಒಮ್ಮೆ ಮಿಸುಕಾಡಿತು. ಇದ್ದಕ್ಕಿದ್ದಂತೆಯೇ ಅದು ತಲೆ ಅಲುಗಿಸಿದ್ದರಿಂದ ಚಿಮುಟ ಸೂಕ್ಷ್ಮ ಭಾಗಕ್ಕೆ ತಗುಲಿ ಮೂಗಿಂದ ರಕ್ತ ಬಂತು. ಹಿಂದೆಯೇ ಆಕ್ಷೀ…

ಎಂದು ಮಗು ಸೀನಿದಾಗ, ರಕ್ತದೊಂದಿಗೆ ಗುಂಡುಮಣಿಯೂ ಹೊರಬಂದು, ಅಜ್ಜಿಯ ಮುಖಕ್ಕೇ ಬಿತ್ತು. ಮರುಕ್ಷಣವೇ, ಮಗು ಕಿಟಾರನೆ ಚೀರಿತು.

ಎದುರಾಗಿದ್ದ ಸಮಸ್ಯೆ ಬಗೆಹರಿಯಿತು. ಮಗುವಿಗೆ ಏನೂ ತೊಂದರೆಯಿಲ್ಲ ಎಂದು ಗ್ಯಾರಂಟಿಯಾದಾಗ, ಗಿರಿಯ ತಾಯಿ ಎದ್ದು ಹೋಗಲು ಅಣಿಯಾದಳು. ಆ ಮಗುವಿನ ದಂಪತಿ-“ಇಲ್ಲೇ ಕೂತ್ಕೊಳ್ಳಿ ಅಮ್ಮಾ’ ಎಂದು ಗೋಗರೆದರು. “ಪರವಾಗಿಲ್ಲಪ್ಪಾ, ನಾನು ಬಾಗಿಲ ಬಳಿಯೇ ಕೂತೇìನೆ. ಇನ್ನೇನು ಬೆಂಗಳೂರು ಬಂತಲ್ಲ…’ ಎಂದು ಆಕೆ ಹೋಗಿಯೇಬಿಟ್ಟಳು. ಅದಕ್ಕೂ ಮೊದಲೇ, ಬಟ್ಟೆಗೆ ಆಗಿದ್ದ ರಕ್ತದ ಕಲೆ ತೊಳೆಯಲು ಗಿರಿ ಟಾಯ್ಲೆಟ್‌ಗೆ ಹೋಗಿಬಿಟ್ಟಿದ್ದ. ಮಗುವಿನ ಜೀವ ಉಳಿಸಿದವರಿಗೆ ಥ್ಯಾಂಕ್ಸ್‌ ಹೇಳಲೂ ಮುಖವಿಲ್ಲದೆ, ಈ ದಂಪತಿ, ನಿಂತಲ್ಲೇ ಚಡಪಡಿಸಿದರು.
***
ರೈಲಿಳಿದು, ಲಗೇಜನ್ನೆಲ್ಲ ಮತ್ತೂಮ್ಮೆ ಚೆಕ್‌ ಮಾಡಿಕೊಂಡು “ಮನೆಗೆ ಹೋಗಿ ಬಂದುಬಿಡೋಣ’ ಅನ್ನುತ್ತಲೇ ಎಲ್ಲರೊಂದಿಗೆ ಬಸ್‌ನಿಲ್ದಾಣದತ್ತ ಗಿರಿ ಹೆಜ್ಜೆಹಾಕತೊಡಗಿದ. ಆಗಲೇ-“ಅ…ಜ್ಜೀ…ಅಂಕ…ಲ್‌…’ ಎಂಬ ಕಾಳಜಿಯ ದನಿಯೊಂದು ಅಲೆಯಲೆಯಾಗಿ ತೇಲಿ ಬಂತು. ಇವರೆಲ್ಲ, ಹೆಜ್ಜೆ ಮುಂದಿಡಲೂ ಮರೆತು ತಿರುಗಿನೋಡಿದರೆ- ಸೀಟು ಬಿಡದೆ ಜಗಳವಾಡಿದ್ದ ದಂಪತಿ, ಕೈ ಮುಗಿಯುತ್ತಾ ನಿಂತಿದ್ದರು. ಅವರ ಮಗು, ಬೆಳದಿಂಗಳ ನಗೆಯೊಂದಿಗೆ ಟಾಟಾ ಮಾಡುತ್ತಿತ್ತು….

-ಎ.ಆರ್‌.ಮಣಿಕಾಂತ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ