ಕೃತಜ್ಞತೆಯ ಕೈ ಹಿಡಿದು ಕರುಣೆ ಮಾತಾಡಿತು!

Team Udayavani, Jan 29, 2019, 12:30 AM IST

ಯಾರಿಗಾದ್ರೂ ಸಹಾಯ ಮಾಡಲು ಹೊರಟಾಗ, ಇದರಿಂದ ನಮಗೆ ಏನು ಲಾಭವಿದೆ ಅಂತ ಯಾವತ್ತೂ ಯೋಚನೆ ಮಾಡಬಾರದು. ಈ ಸಂದರ್ಭದಲ್ಲಿ ನಾವೇನಾದ್ರೂ ಸಹಾಯ ಮಾಡದೇ ಹೋದ್ರೆ ಎದುರಿಗಿರುವ ಜನಕ್ಕೆ ಎಷ್ಟೊಂದು ತೊಂದರೆ ಆಗುತ್ತೆ ಎಂದು ಯೋಚನೆ ಮಾಡಬೇಕು.

ಆ ಹುಡುಗ ಅಮೆರಿಕದವನು. ಹೆತ್ತವರನ್ನು ಬಾಲ್ಯದಲ್ಲಿಯೇ ಕಳೆದುಕೊಂಡ. ಬಂಧುಗಳ ಆಶ್ರಯದಲ್ಲಿ ಬೆಳೆದ. 12 ವರ್ಷ ತುಂಬುತ್ತಿದ್ದಂತೆಯೇ, ಬಂಧುಗಳೂ ಕೈಚೆಲ್ಲಿದರು. “ಯಾವುದಾದರೂ ಹಾಸ್ಟೆಲ್‌ ಅಥವಾ ಅನಾಥಾಶ್ರಮದಲ್ಲಿ ಇದ್ದುಕೊಂಡು ಓದಿಕೋ-ಬದುಕು ರೂಪಿಸಿಕೋ’ ಎಂದುಬಿಟ್ಟರು. ಆ ಹುಡುಗ ಆಶಾವಾದಿ. ಚೆನ್ನಾಗಿ ಓದಿ ನಿಶ್ಚಿತ ಆದಾಯವಿರುವ ನೌಕರಿ ಹಿಡಿದುಬಿಟ್ಟರೆ, ಎಲ್ಲ ಬಗೆಯ ಕಷ್ಟಗಳಿಂದಲೂ ಪಾರಾಗಬಹುದು. ಬದುಕಿನಲ್ಲಿ ಸೆಟ್ಲ ಆಗಬಹುದು ಎಂಬುದು ಅವನ ನಂಬಿಕೆ ಆಗಿತ್ತು. ತುಂಬ ಶ್ರದ್ಧೆಯಿಂದ ಓದಿದ. ಕಾಲೇಜು ವಿದ್ಯಾಭ್ಯಾಸಕ್ಕೆಂದು ಕ್ಯಾಲಿಫೋರ್ನಿಯಾಕ್ಕೆ ಬಂದವ, ಅಲ್ಲಿನ ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್‌ಗೆ ಸೇರಿಕೊಂಡ.

ಕಷ್ಟಗಳ ಸರಮಾಲೆ ಶುರುವಾಗಿದ್ದೇ ಈ ಸಂದರ್ಭದಲ್ಲಿ. ಏಕೆಂದರೆ, ಈ ಹುಡುಗನ ಕಣ್ತುಂಬ ಕನಸುಗಳಿದ್ದವು. ಆದರೆ, ಕೈಯಲ್ಲಿ ಕಾಸಿರಲಿಲ್ಲ. ಎಂಜಿನಿಯರಿಂಗ್‌ ಓದುವುದು ಅಂದರೆ ಸುಮ್ಮನೆ ಆಯಿತೆ? ಅಡ್ಮಿಷನ್‌ ಫೀ, ಪುಸ್ತಕ ಖರೀದಿ, ಲ್ಯಾಬ್‌ ರೆಕಾರ್ಡ್ಸ್‌ ಖರೀದಿ… ಹೀಗೆ ಹಲವು ಖರ್ಚುಗಳ ಪಟ್ಟಿ ಈ ನಿರ್ಗತಿಕ ಹುಡುಗನ ಎದುರು ಬೆಳೆಯುತ್ತಲೇ ಹೋಯಿತು. ಹೆತ್ತವರು ಬದುಕಿಲ್ಲ, ಬಂಧುಗಳು ಜೊತೆಗಿಲ್ಲ. ಹೀಗಿರುವಾಗ ಖರ್ಚು ನಿಭಾಯಿಸುವುದು ಹೇಗೆ?

ಏನೇ ಕಷ್ಟವಾದರೂ ಸರಿ, ಓದುವುದನ್ನು ನಿಲ್ಲಿಸಬಾರದು. ಹೇಗಾದರೂ ಮಾಡಿ ಕಾಲೇಜು ಶಿಕ್ಷಣಕ್ಕೆ ಅಗತ್ಯವಿರುವಷ್ಟು ಹಣ ಹೊಂದಿಸಬೇಕು ಎಂದು ಈ ಹುಡುಗ ಯೋಚಿಸಿದ. ಆಗಲೇ ಅವನಿಗೊಂದು ದಿವ್ಯ ಯೋಚನೆ ಬಂತು. ಅದೆಂದರೆ, ಯೂನಿವರ್ಸಿಟಿಯಲ್ಲೇ ಹೆಸರಾಂತ ಕಲಾವಿದರೊಬ್ಬರಿಂದ ಮ್ಯೂಸಿಕಲ್‌ ಪ್ರೋಗ್ರಾಂ ಏರ್ಪಡಿಸುವುದು. ಅದಕ್ಕೆ ಟಿಕೆಟ್‌ ಮೂಲಕ ಪ್ರವೇಶ ಇಡುವುದು. ಕಾರ್ಯಕ್ರಮದ ಖರ್ಚು-ವೆಚ್ಚ, ಕಲಾವಿದರ ಸಂಭಾವನೆಯನ್ನೆಲ್ಲ ಕಳೆದಾಗ ಉಳಿಯುವ ಹಣದಲ್ಲಿ ಕಾಲೇಜು ಶುಲ್ಕ ಪಾವತಿಸುವುದು.

ಈ ಐಡಿಯಾವನ್ನು ಜೊತೆಗಿದ್ದ ಸಹಪಾಠಿಯೊಂದಿಗೆ ಈ ಹುಡುಗ ಹೇಳಿಕೊಂಡ. ಆ ಗೆಳೆಯ- “ಐಡಿಯಾ ಚೆನ್ನಾಗಿದೆ ಕಣೋ. ನಿನ್ನ ಜೊತೆ ನಾನೂ ಕೆಲಸ ಮಾಡ್ತೇನೆ. ಲಾಭದ ಹಣವನ್ನು ಇಬ್ಬರೂ ಹಂಚಿಕೊಳ್ಳುವಾ. ನನಗೂ ಕಾಲೇಜು ಫೀ ಕಟ್ಟಲು ಹಣವಿಲ್ಲ…’ ಎಂದ. ಆ ಕ್ಷಣದಿಂದಲೇ ಇಬ್ಬರೂ ಹೊಸ ಕನಸಿನ ಹಿಂದೆ ಬಿದ್ದರು. ಯಾವ ಸಂಗೀತಗಾರನಿಂದ ಕಾರ್ಯಕ್ರಮ ಏರ್ಪಡಿಸಿದರೆ ಜಾಸ್ತಿ ಜನ ಬರಬಹುದು? ಕ್ಯಾಲಿಫೋರ್ನಿಯಾದಲ್ಲಿ ಯಾವ ಕಲಾವಿದನ ಕಾರ್ಯಕ್ರಮಕ್ಕೆ ಡಿಮ್ಯಾಂಡ್‌ ಇದೆ ಎಂದು ಹತ್ತಾರು ಮಂದಿಯನ್ನು ವಿಚಾರಿಸಿದಾಗ, ಹೆಚ್ಚಿನವರು ಸೂಚಿಸಿದ್ದು ಪೋಲೆಂಡ್‌ನ‌ ಹೆಸರಾಂತ ಪಿಯಾನೋ ವಾದಕ ಪಡೆರೇವ್‌ಸ್ಕಿಯ ಹೆಸರನ್ನು. ಆ ವೇಳೆಗಾಗಲೇ ಅಮೆರಿಕದಾದ್ಯಂತ ಪಡೆರೇವ್‌ಸ್ಕಿ ಹತ್ತಕ್ಕೂ ಹೆಚ್ಚು ಬಾರಿ ಕಾರ್ಯಕ್ರಮ ನೀಡಿದ್ದ. ಪ್ರತಿಬಾರಿಯೂ ಟಿಕೆಟ್‌ ಸಿಗದೆ ನಿರಾಸೆಯಿಂದ ಮನೆಗೆ ಹೋದ ಸಂಗೀತಪ್ರಿಯರ ಸಂಖ್ಯೆ ದೊಡ್ಡದಿತ್ತು.

ಇದಿಷ್ಟೂ ವಿವರ ತಿಳಿದ ಮೇಲೆ, ತಮ್ಮ ಕಾರ್ಯಕ್ರಮ ಯಶಸ್ವಿಯಾಗುವ ಕುರಿತು ಈ ಹುಡುಗರಿಗೆ ಅನುಮಾನ ಉಳಿಯಲಿಲ್ಲ. ಅವರು ಕೂಡಲೇ ಪಡೆರೇವ್‌ಸ್ಕಿಯ ಮೆನೇಜರ್‌ನನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಡೇಟ್‌ ಕೇಳಿದರು. “ಸಂಭಾವನೆಯಾಗಿ ಎಷ್ಟು ಹಣ ಕೊಡಬೇಕು ಸರ್‌?’ ಎಂದೂ ಪ್ರಶ್ನಿಸಿದರು. “ಕಾರ್ಯಕ್ರಮ ಮುಗಿದ ನಂತರ, ಒಂದೇ ಕಂತಿನಲ್ಲಿ ಎರಡು ಸಾವಿರ ಡಾಲರ್‌ ಕೊಡಬೇಕು. ಯಾವುದೇ ಕಾರಣಕ್ಕೂ ಚೌಕಾಸಿಗೆ ಅವಕಾಶವಿಲ್ಲ’ ಎಂಬ ಉತ್ತರ ಬಂತು. ಈ ಮಾತಿಗೆ ಒಪ್ಪಿದ ಹುಡುಗರು, ಕಾರ್ಯಕ್ರಮದ ಯಶಸ್ಸಿಗಾಗಿ ಇನ್ನಿಲ್ಲದಂತೆ ಶ್ರಮಿಸಿದರು. ಹಾಂ ಹೂಂ ಅನ್ನುವುದರೊಳಗೆ ಕಾರ್ಯಕ್ರಮದ ದಿನವೂ ಬಂದುಬಿಟ್ಟಿತು. ಈ ಹುಡುಗರು ಅಂದಾಜು ಮಾಡಿದ್ದರಲ್ಲ; ಅದಕ್ಕಿಂತ ಎರಡು ಪಟ್ಟು ಚೆನ್ನಾಗಿ ಪಡೆರೇವ್‌ಸ್ಕಿ ನೇತೃತ್ವದ ತಂಡ, ಸಂಗೀತ ಸಂಜೆಯನ್ನು ನಡೆಸಿಕೊಟ್ಟಿತು.

ಆದರೆ…ಎಷ್ಟೇ ಶ್ರಮವಹಿಸಿ ಟಿಕೆಟ್‌ ಮಾರಿದರೂ, ಸಂಗ್ರಹವಾದ ಒಟ್ಟು ಮೊತ್ತ 1600 ಡಾಲರ್‌ಗಳನ್ನು ದಾಟಲಿಲ್ಲ. ಕಾರ್ಯಕ್ರಮ ಮುಗಿದ ನಂತರ, ಈ ಹುಡುಗರು ಪಡೆರೇವ್‌ಸ್ಕಿಯ ಎದುರು ನಿಂತರು.. ಸಂಗ್ರಹವಾಗಿದ್ದ ಹಣವನ್ನೆಲ್ಲ ಅವನ ಮುಂದಿಟ್ಟು – “ಸರ್‌, ಮೂರು ತಿಂಗಳಿಂದ ಇನ್ನಿಲ್ಲದಂತೆ ಶ್ರಮಪಟ್ಟೆವು. ಆದರೂ 2000 ಡಾಲರ್‌ನಷ್ಟು ಟಿಕೆಟ್‌ಗಳು ಮಾರಾಟವಾಗಲಿಲ್ಲ. ಅದಕ್ಕಾಗಿ ಕ್ಷಮಿಸಿ. ಇಲ್ಲೀಗ 1600 ಡಾಲರ್‌ ಹಣವಿದೆ. ಉಳಿದ 400 ಡಾಲರ್‌ ಹಣಕ್ಕೆ ಚೆಕ್‌ ಕೊಡುತ್ತೇವೆ. ಎರಡು ತಿಂಗಳ ಸಮಯ ಕೊಡಿ. ಅಷ್ಟರಲ್ಲಿ 400 ಡಾಲರ್‌ ಹಣವನ್ನು ಹೇಗಾದರೂ ಹೊಂದಿಸಿಕೊಡುತ್ತೇವೆ’ ಅಂದರು. 

ಪಡೆರೇವ್‌ಸ್ಕಿ, ಆ ಹುಡುಗರನ್ನು ಒಮ್ಮೆ ಅಪಾದಮಸ್ತಕ ದಿಟ್ಟಿಸಿದ. ನಂತರ, ಈ ಕಾರ್ಯಕ್ರಮ ನಡೆಸಿದ್ದರ ಹಿಂದಿನ ಉದ್ದೇಶವನ್ನು ಆ ಹುಡುಗರಿಂದಲೇ ವಿವರವಾಗಿ ತಿಳಿದ. ಅವರನ್ನೇ ದಿಟ್ಟಿಸಿ ನೋಡುತ್ತ- “ಈಗ ಒಂದ್ಕೆಲ್ಸ ಮಾಡಿ. ಇಲ್ಲಿದೆಯಲ್ಲ, ಅಷ್ಟೂ ದುಡ್ಡು ತಗೊಳ್ಳಿ. ಈ ಪ್ರೋಗ್ರಾಂ ಮಾಡಲು ಎಷ್ಟು ಖರ್ಚಾಯ್ತು? ಅದನ್ನು ಮೊದಲು ಯಾರ್ಯಾರಿಗೆ ಕೊಡಬೇಕೋ ಅವರಿಗೆ ಕೊಡಿ. ಆಮೇಲೆ ಉಳಿಯುತ್ತಲ್ಲ, ಆ ಹಣದಲ್ಲಿ ನಿಮ್ಮ ಕಾಲೇಜು ಫೀಗೆ ಆಗುವಷ್ಟು ಹಣವನ್ನೂ ಎತ್ತಿಕೊಳ್ಳಿ. ಇಷ್ಟೆಲ್ಲ ಆದಮೇಲೂ ಏನಾದ್ರೂ ಹಣ ಉಳಿದರೆ, ಅದು ಒಂದೇ ಒಂದು ಡಾಲರ್‌ ಆದ್ರೂ ಪರವಾಗಿಲ್ಲ. ಅದನ್ನು ನನಗೆ ಕೊಡಿ. ಅಕಸ್ಮಾತ್‌ ಏನೂ ಉಳಿಯದಿದ್ರೆ ತೊಂದರೆಯಿಲ್ಲ. ನೀವು ಚೆನ್ನಾಗಿ ಓದಿ. ನಿಮಗೆ ಒಳಿತಾಗಲಿ’ ಎಂದು ನಸುನಕ್ಕ. 

 ಒಂದಿಡೀ  ತಂಡದೊಂದಿಗೆ ವಿದೇಶದಿಂದ ಬಂದು ಪ್ರೋಗ್ರಾಂ ಕೊಡುವುದೆಂದರೆ ತಮಾಷೆಯೇ? ಅದಕ್ಕೆ ವಿಪರೀತ ಖರ್ಚಿರುತ್ತದೆ. ಇದೆಲ್ಲ ಗೊತ್ತಿದ್ದೂ, ನನಗೆ ಹಣವೇ ಬೇಡ ಎಂಬರ್ಥದಲ್ಲಿ ಮಾತಾಡಿದ ಪಡೆರೇವ್‌ಸ್ಕಿಯನ್ನು ಕಂಡು ಅವನ ಮ್ಯಾನೇಜರ್‌ಗೆ ಪಿಚ್ಚೆನ್ನಿಸಿತು. ಆತ ತಕ್ಷಣವೇ ಕೇಳಿಬಿಟ್ಟ: “ಸರ್‌, ಗುರುತು ಪರಿಚಯವಿಲ್ಲದ ಹುಡುಗರಿಗೆ ಹೀಗೆಲ್ಲ ಸಹಾಯ ಮಾಡೋಕೆ ನೋಡ್ತಿದೀರಲ್ಲ? ಇದರಿಂದ ನಿಮಗೆ ಏನು ಲಾಭ?’

ಮೆನೇಜರ್‌ನ್ನು ಒಮ್ಮೆ ಅನುಕಂಪದಿಂದ ನೋಡಿದ ಪಡೆರೇವ್‌ಸ್ಕಿ ಹೇಳಿದ: “ಯಾರಿಗಾದ್ರೂ ಸಹಾಯ ಮಾಡಲು ಹೊರಟಾಗ, ಇದರಿಂದ ನಮಗೆ ಏನು ಲಾಭವಿದೆ ಅಂತ ಯಾವತ್ತೂ ಯೋಚನೆ ಮಾಡಬಾರದು. ಈ ಸಂದರ್ಭದಲ್ಲಿ ನಾವೇನಾದ್ರೂ ಸಹಾಯ ಮಾಡದೇ ಹೋದ್ರೆ ಎದುರಿಗಿರುವ ಜನಕ್ಕೆ ಎಷ್ಟೊಂದು ತೊಂದರೆ ಆಗುತ್ತೆ ಎಂದು ಯೋಚನೆ ಮಾಡಬೇಕು. ಪಾಪ, ಈ ಹುಡುಗರು ಕಾಲೇಜಿಗೆ ಫೀ ಹೊಂದಿಸಲಿಕ್ಕೆ ಎಷ್ಟೆಲ್ಲಾ ಕಷ್ಟ ಪಡುತ್ತಿದ್ದಾರೆ. ಅವರಿಗೆ ನೆರವಾಗಬೇಕಾದ್ದು ನಮ್ಮ ಕರ್ತವ್ಯ’.

ಹೆಸರಾಂತ ಸಂಗೀತಗಾರನೊಬ್ಬ ಹೀಗೆ ಮಾತಾಡಿದ್ದನ್ನು ಕೇಳಿ, ಕಾರ್ಯಕ್ರಮ ಏರ್ಪಡಿಸಿದ್ದ ಹುಡುಗರು, ನಿಂತಲ್ಲಿಯೇ ಕಣ್ತುಂಬಿಕೊಂಡು, ಕೈಮುಗಿದರು.  “ಭವಿಷ್ಯದಲ್ಲಿ ಒಳ್ಳೆಯದಾಗಲಿ’ ಎಂದು ಹರಸಿ ಫ‌ಡರೇವ್‌ಸ್ಕಿ ಅವರನ್ನು ಬೀಳ್ಕೊಟ್ಟ.

 ಕಾಲ ಉರುಳಿತು. ಸಂಗೀತಗಾರನಾಗಿದ್ದ ಫೆಡರೇವ್‌ಸ್ಕಿ, ರಾಜಕೀಯಕ್ಕೆ ಬಂದ. ರಾಜಕಾರಣದ ಒಂದೊಂದೇ ಮೆಟ್ಟಿಲೇರಿ ಕಡೆಗೆ ಪೋಲೆಂಡ್‌ ದೇಶದ ಪ್ರಧಾನಮಂತ್ರಿಯೇ ಆಗಿಬಿಟ್ಟ. ಮಾನವೀಯ ಕಳಕಳಿ, ಇನ್ನೊಬ್ಬರಿಗೆ ನೆರವಾಗುವ ಗುಣವನ್ನು ಅವನು ಪ್ರಧಾನಿಯಾದಾಗಲೂ ಉಳಿಸಿಕೊಂಡಿದ್ದ. ಪೋಲೆಂಡ್‌ನ‌ ಶೇಷ್ಠ ರಾಜಕಾರಣಿ ಅನ್ನಿಸಿಕೊಂಡ. ಆದರೆ, ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಪೋಲೆಂಡ್‌ ಅಪಾರ ನಷ್ಟ ಅನುಭವಿಸಿತ್ತು. ದೇಶವನ್ನು ಭೀಕರ ಬರ ಆವರಿಸಿಕೊಂಡಿತು. ಅದೇ ಸಮಯಕ್ಕೆ ಸರಿಯಾಗಿ ಆರ್ಥಿಕ ಸಂಕಷ್ಟವೂ ಜೊತೆಯಾಯಿತು. ಒಂದೆಡೆ ಬರಗಾಲ. ಇನ್ನೊಂದೆಡೆ ಖಜಾನೆ ಖಾಲಿ. ಪೋಲೆಂಡ್‌ನ‌ 15 ಲಕ್ಷಕ್ಕೂ ಹೆಚ್ಚು ಮಂದಿ ಹಸಿವು ಮತ್ತು ಅನಾರೋಗ್ಯದಿಂದ ನರಳತೊಡಗಿದರು. ಈ ಸಂದರ್ಭದಲ್ಲಿ, ಬಲಿಷ್ಠ ರಾಷ್ಟ್ರಗಳಲ್ಲಿ ನೆರವಿಗಾಗಿ ಪ್ರಾರ್ಥಿಸದೆ ಬೇರೆ ದಾರಿಯೇ ಇರಲಿಲ್ಲ. ತಕ್ಷಣವೇ ಪಡೆರೇವ್‌ಸ್ಕಿ ರೇಡಿಯೋ ಮೂಲಕ “ಅಮೆರಿಕದ ಆಹಾರ ಸಚಿವರಿಗೆ ಮನವಿ ಮಾಡಿಕೊಂಡ. ಅಗತ್ಯವಿರುವ ಆಹಾರ ಪದಾರ್ಥಗಳನ್ನು ಪೂರೈಸಿ, ಪೊಲೆಂಡ್‌ ದೇಶದ ನಾಗರಿಕರನ್ನು ಕಾಪಾಡಿ’ ಎಂದು ವಿನಂತಿಸಿದ. ಈ ಮನವಿಗೆ ತಕ್ಷಣವೇ ಸ್ಪಂದಿಸಿದ ಆಹಾರ ಮತ್ತು ಪರಿಹಾರ ಇಲಾಖೆಯ ಸಚಿವ ಹರ್ಬರ್ಟ್‌ ಹೂವರ್‌, ಟನ್‌ಗಟ್ಟಲೆ ಆಹಾರ ಪದಾರ್ಥವನ್ನು ಪೋಲೆಂಡ್‌ಗೆ ಕಳಿಸಿಕೊಟ್ಟ. ಹೇಳಬೇಕೆಂದರೆ, ಪಡೆರೇವ್‌ಸ್ಕಿ ಕೇಳಿದ್ದನಲ್ಲ; ಅದಕ್ಕಿಂತ ಎರಡು ಪಟ್ಟು ಹೆಚ್ಚಿನ ಆಹಾರ ಪದಾರ್ಥಗಳನ್ನು ಹರ್ಬರ್ಟ್‌ ಹೂವರ್‌ ಕಳಿಸಿಕೊಟ್ಟಿದ್ದ.

ಹೂವರ್‌ ಎಂಬಾತ ಅಮೆರಿಕದ ತರುಣ ಮಂತ್ರಿ. ಆತ ಸಜ್ಜನ ಎಂದಷ್ಟೇ ವಿವರ ಗೊತ್ತಿತ್ತೇ ಹೊರತು, ಆತನ ಪರಿಚಯ ಪಡೆರೇವ್‌ಸ್ಕಿಗೆ ಇರಲಿಲ್ಲ. ಪರಿಚಯವೇ ಇಲ್ಲದಿದ್ದರೂ, ಕೇವಲ ರೇಡಿಯೋ ಮೂಲಕ ಮಾಡಿಕೊಂಡ ಮನವಿಗೇ ಆತ ಸ್ಪಂದಿಸಿದ್ದು, ತಾನು ಕೇಳಿದ್ದಕ್ಕಿಂತ ಎರಡು ಪಟ್ಟು ಹೆಚ್ಚಿನ ನೆರವು ನೀಡಿದ್ದನ್ನು ಕಂಡು ಫೆಡರೇವ್‌ಸ್ಕಿಗೆ ಮನಸ್ಸು ತುಂಬಿ ಬಂತು. ಹೂವರ್‌ನನ್ನು ಖುದ್ದಾಗಿ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಲು ಆತ ನಿರ್ಧರಿಸಿದ. ಈ ಕುರಿತು ಪತ್ರ ವ್ಯವಹಾರವಾಗಿ, ಅವರ ಭೇಟಿಗೆ ಒಂದು ದಿನವೂ ನಿಗದಿಯಾಯಿತು.

ಕಡೆಗೂ ಆ ದಿನ ಬಂದೇಬಿಟ್ಟಿತು. ಅವತ್ತು ಫೆಡರೇವ್‌ಸ್ಕಿ ಭಾವುಕನಾಗಿದ್ದ. ಹೂವರ್‌ ಎದುರು ಬರುತ್ತಿದ್ದಂತೆಯೇ ಅವನ ಕೈಗಳನ್ನು ಎದೆಗೆ ಒತ್ತಿಕೊಂಡು- “ಪೋಲೆಂಡ್‌ನ‌ ಈ ಪ್ರಧಾನಿ ಮತ್ತು ಆ ದೇಶದ ಹದಿನೈದು ಲಕ್ಷ ಜನ ನಿಮಗೆ ಎಂದೆಂದೂ ಋಣಿಯಾಗಿರುತ್ತಾರೆ. ನೀವು ಮಾಡಿರುವ ಸಹಾಯವನ್ನು ನಾವು ಸದಾ ಕೃತಜ್ಞತೆಯಿಂದ ಸ್ಮರಿಸುತ್ತೇವೆ….’

ಪಡೆರೇವ್‌ಸ್ಕಿಯ ಮಾತುಗಳನ್ನು ಅಷ್ಟಕ್ಕೇ ತಡೆದ ಹರ್ಬರ್ಟ್‌ ಹೂವರ್‌ ಹೇಳಿದ: “ಅಯ್ಯಯ್ಯೋ, ನೀವು ನಮಗೆ ಥ್ಯಾಂಕ್ಸ್‌ ಹೇಳಬಾರದು ಸಾರ್‌. ನಾನು ನಿಮಗೆ ಥ್ಯಾಂಕ್ಸ್‌ ಹೇಳಬೇಕು. ನಿಮ್ಮ ಸಹಕಾರದಿಂದಲೇ ನಾನು ಈ ದೊಡ್ಡ ಹುದ್ದೆಗೆ ಬರಲಿಕ್ಕೆ ಸಾಧ್ಯ ಆಗಿದೆ. 27 ವರ್ಷಗಳ ಹಿಂದೆ, ಸ್ಟಾನ್‌ಫೋರ್ಡ್‌ ಯೂನಿವರ್ಸಿಟಿಯಲ್ಲಿ ಇಬ್ಬರು ಹುಡುಗರು ನಿಮ್ಮ ಸಂಗೀತ ಸಂಜೆ ಏರ್ಪಡಿಸಿದ್ರು. 2000 ಡಾಲರ್‌ ಬದಲು 1600 ಡಾಲರ್‌ ಹಿಡ್ಕೊಂಡು ನಿಮ್ಮೆದುರು ನಿಂತಿದ್ರು. ಆಗ, ಅಷ್ಟೂ ಹಣವನ್ನು ಆ ಹುಡುಗರಿಗೆ ಕೊಟ್ಟು, ಚೆನ್ನಾಗಿ ಓದಿಕೊಳ್ಳಿ. ನಿಮ್ಗೆ ಒಳ್ಳೇದಾಗ್ಲಿ ಅಂದಿದ್ರಿ… ನೆನಪಿದೆಯಾ ಸಾರ್‌? ಆ ಮ್ಯೂಸಿಕಲ್‌ ನೈಟ್‌ ಆಯೋಜಿಸಿದ್ದ ಬಡಪಾಯಿ ನಾನೇ… ನಿಮ್ಮ ಹಾರೈಕೆಯಿಂದ ಇವತ್ತು ಈ ಮಟ್ಟಕ್ಕೆ ಬಂದಿದೀನಿ. ನಿಮ್ಮ ಸಹಾಯವನ್ನು ನಾನು ಸಾಯುವವರೆಗೂ ಮರೆಯಲಾರೆ…’

ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಹಳೆಯದೇನನ್ನೋ ನೆನಪಿಸಿಕೊಳ್ಳುವಂತೆ ಪಡೆರೇವ್‌ಸ್ಕಿ  ಕ್ಷಣಕಾಲ ಕಣ್ಮುಚ್ಚಿಕೊಂಡ. ಮತ್ತೆ ಕಣ್ತೆರೆದಾಗ ಅಲ್ಲಿ ಅನಿರ್ವಚನೀಯ ಆನಂದ, ಬೆರಗು ಮತ್ತು ಸಂತೋಷದ ಕಂಬನಿಯಿತ್ತು. ಇತ್ತ, ಹೂವರ್‌ ಕೂಡ ಮಾತು ಮರೆತು, ಪುಟ್ಟ ಮಗುವಿನಂತೆ ಫೆಡರೇವ್‌ಸ್ಕಿಯನ್ನು ಬಾಚಿ ತಬ್ಬಿಕೊಂಡ…

ಹರ್ಬರ್ಟ್‌ ಹೂವರ್‌ ಎಂಬ ನಿರ್ಗತಿಕ ವಿದ್ಯಾರ್ಥಿ, ಸ್ಟಾನ್‌ಫೋರ್ಡ್‌ ಯೂನಿವರ್ಸಿಟಿಯಲ್ಲಿ ಫೆಡರೇವ್‌ಸ್ಕಿಯ ಸಂಗೀತ ಸಂಜೆ ಏರ್ಪಡಿಸಿದ್ದು 1892ರಲ್ಲಿ. ಮುಂದೆ ಪೋಲೆಂಡ್‌ ಪ್ರಧಾನಿಯಾಗಿ ಪಡೆರೇವ್‌ಸ್ಕಿ, ಅಮೆರಿಕದ ಸಚಿವನಾಗಿ ಹೂವರ್‌ (ಮುಂದೆ ಈತ ಅಮೆರಿಕದ ಅಧ್ಯಕ್ಷನೂ ಆದ) ಮುಖಾಮುಖಿಯಾದದ್ದು 1920ರಲ್ಲಿ. ಅಂದರೆ, ಈ ಪ್ರಸಂಗ ನಡೆದು 100 ವರ್ಷದಾಟಿದೆ. ಆದರೂ, ಈ ಪ್ರಸಂಗದಲ್ಲಿರುವ ಮಾನವೀಯ ಕಳಕಳಿ, ಅಂತಃಕರಣ, ಕಷ್ಟದಲ್ಲಿರುವವರಿಗೆ ಪ್ರತಿಫ‌ಲ ಬಯಸದೆ ನೆರವಾಗಬೇಕು ಎಂಬ ಸಂದೇಶ ಎಲ್ಲ ಕಾಲಕ್ಕೂ ಅನ್ವಯವಾಗುವಂತಿದೆ. ಹೌದಲ್ಲವೆ? 

ಎ.ಆರ್‌. ಮಣಿಕಾಂತ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ