ಕಾಲಿಲ್ಲದಿದ್ದರೂ ಅವನು, ಕನಸುಗಳ ಆಕಾಶಕ್ಕೆ ಏಣಿ ಹಾಕಿದ!

Team Udayavani, Nov 17, 2019, 5:55 AM IST

ನಮ್ಮ ಕಥಾನಾಯಕನ ಹೆಸರು: ದೇವ್‌ ಮಿಶ್ರಾ. ನಾಲ್ಕು ವರ್ಷಗಳ ಹಿಂದೆ, ಇವನ ಮೈಮೇಲೆ ರೈಲು- ಒಂದಲ್ಲ, ಎರಡು ಬಾರಿ ಹರಿಯಿತು. ಪರಿಣಾಮ: ಎರಡೂ ಕಾಲುಗಳು ತುಂಡಾದವು. ಇನ್ನೂ ವಿವರವಾಗಿ ಹೇಳಬೇಕೆಂದರೆ- ಇವನಿಗೆ ತೊಡೆಯಿಂದ ಕೆಳಗಿನ ಭಾಗ ಇಲ್ಲ! ಆನಂತರದಲ್ಲಿ ನಡೆದಿದೆಯಲ್ಲ; ಅದು ನಿಜವಾದ ಪವಾಡ. ಕಾಲಿಲ್ಲದ ಮಿಶ್ರಾ, ವಿಧಿಯ ಎದುರು ತೊಡೆತಟ್ಟಿ ಗೆದ್ದಿದ್ದಾನೆ. ಸೆಲೆಬ್ರಿಟಿ ಅನ್ನಿಸಿಕೊಂಡಿದ್ದಾನೆ. ಕಾಲಿಲ್ಲ ಎಂಬುದು ಗೊತ್ತಾದ ನಂತರವೂ ಅವನು ಕನಸುಗಳಿಗೆ ಏಣಿ ಹಾಕಿ ಚಕಚಕನೆ ಹತ್ತಿಬಿಟ್ಟಿದ್ದಾನಲ್ಲ; ಆ ಕಥನ ನಿಜಕ್ಕೂ ರೋಚಕ, ರೋಮಾಂಚಕ.

ದೇವ್‌ ಮಿಶ್ರಾ, ಬಿಹಾರ ರಾಜ್ಯದ ಬೆಗುಸರಾಯ್‌ ಜಿಲ್ಲೆಗೆ ಸೇರಿದ ಒಂದು ಹಳ್ಳಿಯವನು. ರಾಜ್‌ಕುಮಾರ್‌ ಮಿಶ್ರಾ-ವಂದನಾದೇವಿ ದಂಪತಿಗೆ ಇವನು ಮೊದಲ ಮಗ. ಇವನಿಗೆ ಇಬ್ಬರು ತಮ್ಮಂದಿರು. ಮಕ್ಕಳು ಚಿಕ್ಕವರಿದ್ದಾಗಲೇ, ಅನಾರೋಗ್ಯದ ಕಾರಣದಿಂದ ರಾಜ್‌ಕುಮಾರ್‌ ಮಿಶ್ರಾ ತೀರಿಕೊಂಡರು. ಆನಂತರದ ದಿನಗಳನ್ನು ನೆನಪಿಸಿಕೊಂಡು ದೇವ್‌ ಹೇಳುತ್ತಾನೆ: ತಂದೆಯವರು ತೀರಿಕೊಂಡ ಮೇಲೆ ಬಹಳ ಕಷ್ಟವಾಯಿತು. ಮಕ್ಕಳನ್ನು ಸಾಕಲು ಅಮ್ಮ ಅವರಿವರ ಮನೆಯಲ್ಲಿ, ಜಮೀನಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಹಣ ಸಿಕ್ಕಿದಾಗ ಹೊಟ್ಟೆ ತುಂಬ ಉಣ್ಣುವುದು, ಉಳಿದ ಸಮಯದಲ್ಲಿ ಉಪವಾಸ ಮಲಗುವುದು ನಮಗೆ ಅಭ್ಯಾಸವಾಗಿತ್ತು. ಮಕ್ಕಳು ಖಾಲಿ ಹೊಟ್ಟೆ ಯಲ್ಲಿ ಇರಬಾರದು ಎನ್ನುತ್ತಿದ್ದ ಅಮ್ಮ, ಅನ್ನವಿಲ್ಲದಿದ್ದರೆ, ಪಪ್ಪಾಯ -ಸೀಬೆ ಹಣ್ಣುಗಳನ್ನಾದರೂ ತಿನ್ನಿಸಿ ನಮ್ಮನ್ನು ಮಲಗಿಸುತ್ತಿದ್ದಳು.

ಅಮ್ಮ ಕಷ್ಟಪಡುವುದನ್ನು ನೋಡಿದ ಮೇಲೆ, ಬೇಗ ಯಾವುದಾದರೂ ಕೆಲಸಕ್ಕೆ ಸೇರಿ ಅಮ್ಮನಿಗೆ ನೆರವಾಗಬೇಕು ಎಂಬುದಷ್ಟೇ ನನ್ನ ಗುರಿಯಾಯಿತು. 8ನೇ ವರ್ಷದಿಂದಲೇ ಚಿಕ್ಕಪುಟ್ಟ ಕೆಲಸ ಮಾಡಲು ಆರಂಭಿಸಿದೆ. 15 ವರ್ಷ ತುಂಬುವ ವೇಳೆಗೆ ವೆಲ್ಡಿಂಗ್‌ ಕೆಲಸದಲ್ಲಿ ಪಳಗಿ ಕೊಂಡೆ. ಹೈದ್ರಾಬಾದ್‌ನಲ್ಲಿ ರಿಯಲ್‌ ಎಸ್ಟೇಟ್‌ ಬಿಜಿನೆಸ್‌ ಜೋರಾಗಿ ನಡೀತಿದೆ. ವೆಲ್ಡರ್‌ಗಳಿಗೆ ಕೈತುಂಬಾ ಸಂಬಳ ಸಿಗುತ್ತೆ ಎಂಬ ಸುದ್ದಿ ಕಿವಿಗೆ ಬಿದ್ದಾಗ, ನನಗೆ 19 ವರ್ಷ. ಕೆಲಸಕ್ಕೆ ಸೇರಿ, ಚೆನ್ನಾಗಿ ಸಂಪಾದನೆ ಮಾಡ್ತೇನೆ ಅಂತ ಅಮ್ಮನಿಗೂ-ತಮ್ಮಂದಿರಿಗೂ ಹೇಳಿಯೇ ಮನೆ ಬಿಟ್ಟೆ.

ಅವತ್ತು 2015ರ ಜೂನ್‌ 1, ಸೋಮವಾರ. ಹೈದ್ರಾಬಾದ್‌ನ ರೈಲು ಹತ್ತಲು ನಮ್ಮೂರಿಗೆ ಹತ್ತಿರವಿದ್ದ ಬರೌನಿ ರೈಲು ನಿಲ್ದಾಣಕ್ಕೆ ಬಂದಿದ್ದೆ. ದೂರ ಪ್ರಯಾಣವಲ್ಲವೆ? ಬೇಗ ರೈಲು ಹತ್ತಿ ಸೀಟ್‌ ಹಿಡಿಯಬೇಕು ಎಂಬ ಉದ್ದೇಶದಿಂದ ಮುಂದೆಯೇ ನಿಂತಿದ್ದೆ. ವಿಪರೀತ ಪ್ರಯಾಣಿಕರಿದ್ದರು. ರೈಲು ಬರುತ್ತಿದ್ದಂತೆಯೇ ಗದ್ದಲ, ನೂಕಾಟ ಶುರುವಾಯಿತು. ರೈಲು ಕೇವಲ ಹತ್ತು ಅಡಿಗಳಷ್ಟು ದೂರದಲ್ಲಿದೆ ಅನ್ನುವಾಗಲೇ, ಹಿಂದೆ ನಿಂತಿದ್ದವರೆಲ್ಲ ಒಟ್ಟಾಗಿ ನೂಕಿದ ಪರಿಣಾಮ; ಬ್ಯಾಲೆನ್ಸ್‌ ತಪ್ಪಿ ನಾನು ಟ್ರಾಕ್‌ ಮೇಲೆ ಬಿದ್ದುಹೋದೆ. ನಾನು ಅಲ್ಲಿಂದ ಜಿಗಿದು ಓಡಬೇಕು ಅಂದುಕೊಳ್ಳುವ ಮೊದಲೇ, ರೈಲು ನನ್ನ ಮೇಲೆ ಹೋಗಿಯೇ ಬಿಟ್ಟಿತು!

ಗರಗಸದಿಂದ ಕುಯ್ದಾಗ ಆಗುತ್ತದಲ್ಲ; ಅಂಥ ನೋವು ಜೊತೆಯಾಯಿತು. ಅಮ್ಮಾ¾, ನೋವೂ, ಕಾಪಾಡೀ, ಆ್ಯಂಬುಲೆನ್ಸ್‌ಗೆ ಹೇಳೀ… ಎಂದೆಲ್ಲಾ ನಾನು ಚೀರುತ್ತಲೇ ಇದ್ದೆ. ಅಲ್ಲಿದ್ದ ಜನ- ಅಯ್ಯಯ್ಯೋ… ಅನ್ನುತ್ತಾ ಲೊಚಗುಟ್ಟಿದರೇ ವಿನಃ ಯಾರೊಬ್ಬರೂ ರಕ್ಷ ಣೆಗೆ ಮುಂದಾಗಲಿಲ್ಲ. ಆಗ ಲೇ, ಕನಸಲ್ಲೂ ನಿರೀಕ್ಷಿಸದ ಇನ್ನೊಂದು ಘಟನೆ ನಡೆಯಿತು. ಎದುರು ದಿಕ್ಕಿನಿಂದ ಇನ್ನೊಂದು ರೈಲು ಬಂದು, ಅದೂ ನನ್ನ ಮೈಮೇಲೆ ಹೋಗಿಯೇಬಿಟ್ಟಿತು. ಗಾಯ ಇದ್ದ ಜಾಗಕ್ಕೇ ಸುತ್ತಿಗೆಯಿಂದ ಹೊಡೆದಂತಾಯಿತು. ಮತ್ತೆ ಜೋರಾಗಿ ಚೀರಿಕೊಂಡೆ. ಈ ಬಾರಿ ಯಾರೋ ಪುಣ್ಯಾತ್ಮರು ಓಡಿಬಂದು ಟ್ರಾಕ್‌ನಿಂದ ಮೇಲೆತ್ತಿ, ನಿಲ್ದಾಣದ ಒಂದು ಮೂಲೆಯಲ್ಲಿ ಮಲಗಿಸಿದರು. ಆಗಲೂ; ನಾನು ಅದೆಷ್ಟೇ ಬೇಡಿಕೊಂಡರೂ, ಆಸ್ಪತ್ರೆಗೆ ಸೇರಿಸಲು ಯಾರೊಬ್ಬರೂ ಮುಂದಾ ಗಲಿಲ್ಲ. ನನ್ನ ಗೆಳೆಯರಿಗೆ ವಿಷಯ ತಿಳಿದು, ಅವರೆಲ್ಲ ಓಡಿಬಂದು ಆಸ್ಪತ್ರೆಗೆ ಸೇರಿಸುವುದರೊಳಗೆ ಬಹಳ ತಡವಾಗಿ ಹೋಗಿತ್ತು.

ರೈಲಿಗೆ ಸಿಕ್ಕವರು ಹೆಚ್ಚಿನ ಸಂದರ್ಭಗಳಲ್ಲಿ ಸತ್ತುಹೋಗ್ತಾರೆ. ಆದರೆ, ಕೆಲವೇ ನಿಮಿಷಗಳ ಅವಧಿಯಲ್ಲಿ, ಎರಡು ರೈಲುಗಳಿಗೆ ಸಿಕ್ಕಿಕೊಂಡ ನಂತರವೂ ನಾನು ಬದುಕುಳಿದಿದ್ದೆ. “ಆಕ್ಸಿಡೆಂಟ್‌ ಆಗಿ ಆಗಲೇ ಎಂಟು ಗಂಟೆ ಕಳೆದಿದೆ. ತುಂಡಾಗಿರುವ ಭಾಗದ ಜೀವಕೋಶಗಳಿಗೆ ರಕ್ತದ ಸಂಚಾರವೇ ಆಗಿಲ್ಲ. ಅವೆಲ್ಲ ಸತ್ತುಹೋಗಿವೆ. ಹಾಗಾಗಿ, ಎರಡೂ ಕಾಲುಗಳಿಗೆ ತೊಡೆಯಿಂದ ಕೆಳಗಿನ ಭಾಗವನ್ನು ತೆಗೆದುಹಾಕಲೇಬೇಕು’ ಅಂದರು ಡಾಕ್ಟರ್‌. ಮುಂದಿನ ಕೆಲವೇ ದಿನಗಳಲ್ಲಿ ಆಪರೇಷನ್‌ ಕೂಡ ಆಗಿಹೋಯಿತು. ಆಸೆ, ಕನಸು, ದೇಹ ಮತ್ತು ಮನಸ್ಸು -ಎಲ್ಲವೂ ಛಿದ್ರವಾಗಿದ್ದವು.

ಇಂಥ ಸಂದರ್ಭದಲ್ಲಿ, ಬಂಡೆಯಂತೆ ನನ್ನೊಂದಿಗೆ ನಿಂತವಳು ಅಮ್ಮ. “ಯಾಕೋ ನಮ್ಮ ಅದೃಷ್ಟಾನೇ ಸರಿಯಿಲ್ಲ ಅನಿಸುತ್ತೆ. ಆಗಬಾರದ್ದು ಆಗಿಹೋಗಿದೆ. ಅದಕ್ಕಾಗಿ ಯೋಚಿಸಿ ಪ್ರಯೋಜನವಿಲ್ಲ. ಎಷ್ಟೇ ಕಷ್ಟವಾದರೂ ಸರಿ; ನಿನ್ನನ್ನು ಉಳಿಸಿಕೊಳೆ¤àನೆ’ ಅಂದಳು ಅಮ್ಮ. ಆನಂತರದಲ್ಲಿ ನಾನು ಸಂಪೂರ್ಣವಾಗಿ ಆಛಿಛ rಜಿಛಛಛಿn ಅಂತಾರಲ್ಲ; ಹಾಗಾಗಿಬಿಟ್ಟೆ. ಪ್ರತಿಯೊಂದು ಕೆಲಸಕ್ಕೂ ಇನ್ನೊಬ್ಬರನ್ನು ಅವಲಂಬಿಸುವಂತಾಯ್ತು. ಅದುವರೆಗೂ ಮೆಚ್ಚುಗೆಯಿಂದ ನೋಡುತ್ತಿದ್ದ ಜನರೇ, ಈಗ ಅನುಕಂಪದಿಂದ, ತಿರಸ್ಕಾರದಿಂದ ನೋಡತೊಡಗಿದರು. ಒಮ್ಮೆಯಂತೂ, ನನ್ನ ಸ್ವಂತ ತಮ್ಮನೇ- “ಸಾಯುವವರೆಗೂ ನೀನು ಇನ್ನೊಬ್ಬರ ಮೇಲೆ ಡಿಪೆಂಡ್‌ ಆಗಿಯೇ ಇರಬೇಕು. ಅಷ್ಟೇ ನಿನ್ನ ಹಣೆಬರಹ’ ಅಂದುಬಿಟ್ಟ.

ಸ್ವಂತ ತಮ್ಮನಿಂದ ಇಂಥ ಮಾತುಗಳನ್ನು ನಾನು ಕನಸಲ್ಲೂ ನಿರೀಕ್ಷಿಸಿರಲಿಲ್ಲ. ಸಂಪಾದನೆ ಇಲ್ಲದ ಮನುಷ್ಯ ಶವಕ್ಕೆ ಸಮ ಎಂಬ ನಿಷ್ಠುರ ಸತ್ಯವನ್ನು ಅವನು ಪರೋಕ್ಷವಾಗಿ ತಿಳಿಸಿದ್ದ. ಆನಂತರದಲ್ಲೂ ಮನೆಯಲ್ಲಿರುವ ಮನಸ್ಸಾಗಲಿಲ್ಲ. ಈ ವೇಳೆಗೆ, ಕಾಲಿಲ್ಲದವರಿಗೆ ಜೈಪುರದಲ್ಲಿ ಕೃತಕ ಕಾಲು ಅಳವಡಿಸುತ್ತಾರೆ ಎಂಬ ಸುದ್ದಿ ಓದಿದ್ದೆ. ಅಲ್ಲಿಗೇ ಹೋಗಿ ಕೃತಕ ಕಾಲು ಅಳವಡಿಸಿಕೊಂಡು, ನಂತರ ಏನಾದರೂ ಕೆಲಸ ಮಾಡಿ, ನನ್ನ ಅನ್ನವನ್ನು ನಾನೇ ಸಂಪಾದಿಸಬೇಕು ಎಂದು ನಿರ್ಧರಿಸಿ ಜೈಪುರದ ರೈಲು ಹತ್ತಿದೆ. “ಕಾಲು ಮತ್ತು ತೊಡೆಯ ಭಾಗದ ಮಾಂಸಖಂಡಗಳು ತುಂಬಾ ಗಟ್ಟಿಯಿದ್ದಾಗ ಮಾತ್ರ ಜೈಪುರ ಕಾಲು ಅಳವಡಿಸಬಹುದು. ನಿಮಗೆ ತೊಡೆಯವರೆಗೂ ಪೂರ್ತಿ ಕಟ್‌ ಮಾಡಿರುವುದರಿಂದ ಕೃತಕ ಕಾಲು ಅಳವಡಿಸಲು ಸಾಧ್ಯವಿಲ್ಲ’ ಎಂದು ಅಲ್ಲಿನ ವೈದ್ಯರೂ ಕೈಚೆಲ್ಲಿಬಿಟ್ಟರು.

ಇಲ್ಲಿಂದ ನೇರವಾಗಿ ಬಾಂಬೆಗೆ ಹೋಗಬಾರದೇಕೆ ಎಂಬ ಯೋಚನೆ ಬಂದಿದ್ದೇ ಆಗ. ಏಕೆಂದರೆ, ಕೆಲಸ ಸಂಪಾದಿಸಬೇಕು, ಚೆನ್ನಾಗಿ ದುಡಿಯ ಬೇಕು ಎಂದು ಕನಸು ಕಂಡವರೆಲ್ಲಾ ಬಾಂಬೆಗೆ ಹೋಗುವುದನ್ನು ಕಂಡಿದ್ದೆ. ಎಲ್ಲರಿಗೂ ಆಶ್ರಯ ಮತ್ತು ಅನ್ನ ನೀಡಿದ ಆ ಮಹಾನಗರ, ನನ್ನನ್ನು ತಿರಸ್ಕರಿಸಲಾರದು ಎಂಬ ನಂಬಿಕೆಯಿತ್ತು. ನಾನು ಬಾಂಬೆ ತಲುಪಿದಂತೆ, ಆಕಸ್ಮಿಕವಾಗಿ ಹಿಂದಿ ಚಿತ್ರರಂಗದ ಸೆಲೆಬ್ರಿಟಿಗಳ ಕಣ್ಣಿಗೆ ಬಿದ್ದಂತೆ, ಅವರೆಲ್ಲ ನನ್ನ ಸ್ಥಿತಿ ಕಂಡು ಮರುಗಿ ತಕ್ಷಣವೇ ಕೆಲಸ ಕೊಡಿಸಿದಂತೆ, ದೊಡ್ಡವರ ಸಹಾಯದಿಂದ, ಕಷ್ಟಗಳೆಲ್ಲ ಕೊನೆಯಾ ದಂತೆ, ಕೃತಕ ಕಾಲುಗಳನ್ನು ಅಳವಡಿಸುವ ಪ್ರಯತ್ನ ಕಡೆಗೂ ಯಶಸ್ವಿ ಯಾದಂತೆ… ಹೀಗೆ, ನಾನು ಕಂಡ ಕನಸುಗಳಿಗೆ ಲೆಕ್ಕವೇ ಇರಲಿಲ್ಲ. ಕಷ್ಟ ಕೊಟ್ಟ ದೇವರು, ಖುಷಿಯನ್ನೂ ಕೊಡುತ್ತಾನೆ ಎಂಬ ಲೆಕ್ಕಾಚಾರದೊಂದಿಗೆ, ಜೈಪುರದಿಂದ ಮುಂಬಯಿಗೆ ಹೋಗುವ ರೈಲು ಹತ್ತಿಬಿಟ್ಟೆ.

ಬದುಕು, ಕನಸು ಕಂಡಷ್ಟು ಸುಲಭವಲ್ಲ ಎಂದು ಬಾಂಬೆಯಲ್ಲಿ ಕ್ಷಣಕ್ಷಣವೂ ಅರ್ಥವಾಯಿತು. ಆ ಮಹಾನಗರದಲ್ಲಿ ನನ್ನನ್ನು ಕ್ಯಾರೇ ಅನ್ನುವವರೇ ಇರಲಿಲ್ಲ. ಕೇರ್‌ ತಗೊಳ್ಳುವವರೂ ಸಿಗಲಿಲ್ಲ. ಒಂದು ಕೆಲಸ ಮತ್ತು ಸಂಪಾದನೆಗಾಗಿ ನಾನು ಎಲ್ಲರನ್ನೂ ಪ್ರಾರ್ಥಿಸುತ್ತಿದ್ದೆ. ಜನ, ನನ್ನನ್ನು ಭಿಕ್ಷುಕ ಎಂಬಂತೆ ನೋಡುತ್ತಿದ್ದರು! ಯಾರೂ ಕೆಲಸ ಕೊಡದೇ ಹೋದಾಗ, ಕಡೆಯ ಪ್ರಯತ್ನವೆಂಬಂತೆ ಬಾಲಿವುಡ್‌ ನಟರ ಮನೆಯ ಮುಂದೆ ಕಾದು ಕುಳಿತೆ. ಹೀರೋಗಳು ಹೊರಬಂದ ತಕ್ಷಣ- “ಸಾರ್‌, ನನಗೊಂದು ಕೆಲಸ ಕೊಡಿಸಿ’ ಎಂದು ಕೇಳಲು ಆರಂಭಿಸಿದೆ. ನನ್ನ ಸ್ಥಿತಿ ನೋಡಿ ಮರುಗಿದ ನಟ ಜಾಕಿಶ್ರಾಫ್, 5000 ರೂ. ಕೊಟ್ಟು- ಮೊದಲು ಊಟ ಮಾಡಿ ಎಂದರು.

ಇಷ್ಟಾದಮೇಲೂ, ನಾನು ಕನಸು ಕಾಣುವುದನ್ನು ನಿಲ್ಲಿಸಲಿಲ್ಲ. ಇವತ್ತಲ್ಲ ನಾಳೆ, ಏನಾದರೂ ಪವಾಡ ನಡೆದು, ನನ್ನ ಬದುಕಿಗೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕೇ ಬಿಡುತ್ತದೆ ಎಂದು ನನ್ನ ಒಳಮನಸ್ಸು ಪಿಸುಗುಡುತ್ತಿತ್ತು. ಬೇರೇನೂ ಬೇಡ, ಪ್ರತಿ ತಿಂಗಳೂ ಸಂಬಳ ಸಿಗುವಂಥ ಯಾವುದಾದರೂ ಒಂದು ನೌಕರಿ ಸಾಕು ಎಂದಷ್ಟೇ ನಾನು ಯೋಚಿಸುತ್ತಿದ್ದೆ.

ಸ್ಥಳದಿಂದ ಸ್ಥಳಕ್ಕೆ ಅಲೆದಾಡುತ್ತಾ, ಕೆಲಸ ಕೊಡಿಸೀ… ಎಂದು ಅವರಿವರ ಮುಂದೆ ಅಂಗಲಾಚುತ್ತಲೇ ಒಂದಿಡೀ ತಿಂಗಳು ಕಳೆದುಬಿಟ್ಟೆ. ಓಹ್‌, ಇಷ್ಟೇ ಆಗೋಯ್ತಲ್ಲಾ ಜೀವನ? ಎಂಬ ಸಂಕಟದಲ್ಲಿ ನಾನಿದ್ದಾಗಲೇ, ಅಮ್ಮನ ಮಮತೆಯ ದನಿಯೊಂದು ಕೇಳಿಸಿತು. “ಯಾರು ನೀನು? ಯಾವ ಊರಿನವನು? ದೇಹದ ಅರ್ಧಭಾಗವೇ ಇಲ್ಲವಲ್ಲ, ಏನಾಗಿಹೋಯ್ತು? ಯಾಕೆ ಇಲ್ಲಿ ಕೂತಿದೀಯ?’ ಹೀಗೆ ಕೇಳಿದವಳ ಹೆಸರು ಫ‌ರ್ಹಾ ಖಾನ್‌ ಆಲಿ. ಆಕೆಯ ಮಾತುಗಳಲ್ಲಿ ಕರುಣೆಯಿತ್ತು. ಕಾಳಜಿಯಿತ್ತು. ಪ್ರೀತಿಯಿತ್ತು. ಇಂಥದೊಂದು ಸಾಂತ್ವನದ ಮಾತಿಗೇ ಕಾದಿದ್ದನವನಂತೆ, ನನ್ನ ಕಥೆಯನ್ನೆಲ್ಲಾ ಹೇಳಿಕೊಂಡೆ. ಆಮೇಲೆ ನಡೆದಿದ್ದೆಲ್ಲಾ ಪವಾಡವೇ. ಆಕೆ ತಕ್ಷಣವೇ ಪರಿಚಯದವರಿಗೆ ಕಾಲ್‌ ಮಾಡಿ, ನಾವಿದ್ದª ಸ್ಥಳದ ಅಡ್ರೆಸ್‌ ಹೇಳಿ- “ಈಗಲೇ ಒಂದು ಟ್ರೈ ಸೈಕಲ್‌ ತಗೊಂಡು ಬನ್ನಿ’ ಅಂದರು. ಅಷ್ಟೇ ಅಲ್ಲ; ನನಗೆ ಊಟ-ವಸತಿಗೂ ವ್ಯವಸ್ಥೆ ಮಾಡಿದರು. 10 ಸಾವಿರ ರೂ. ಕೊಟ್ಟು- “ಇಟ್ಕೊà, ಖರ್ಚಿಗಿರಲಿ’ ಎಂದಳು. ಆಕೆಯ ಕೃಪೆಯಿಂದಲೇ, ಎರಡೇ ದಿನ ಗ ಳಲ್ಲಿ ಒಂದು ನೌಕರಿಯೂ ಸಿಕ್ಕಿತು. ಫ‌ರ್ಹಾ ಖಾನ್‌ ಅವರು ಆಭರಣ ವಿನ್ಯಾಸಕಿಯೆಂದೂ, ಅಸಹಾಯಕರನ್ನು, ಅಂಗವಿಕಲರನ್ನು ಕಂಡರೆ ಆಕೆ ವಿಪರೀತ ಕೇರ್‌ ತಗೋತಾರೆ ಎಂದೂ ಆನಂತರ ಗೊತ್ತಾಯಿತು. ಅಬ್ಟಾ, ಕಡೆಗೂ ನಾನು ಲೈಫ್ನಲ್ಲಿ ಸೆಟ್ಲ ಆದೆ ಎಂಬ ನೆಮ್ಮದಿಯ ನಿಟ್ಟುಸಿರುಬಿಡುತ್ತಲೇ, ಆಕೆಗೆ ಕೃತಜ್ಞತೆ ಅರ್ಪಿಸಿದೆ. ಆಗ ಫ‌ರ್ಹಾ ಹೇಳಿದರು: ನನ್ನ ಜೀವನದ ಕೊನೆಯುಸಿರು ಇರುವವರೆಗೂ ನಿನಗೆ ಸಹಾಯ ಮಾಡ್ತೇನೆ. ನೀನು ಸವಾಲುಗಳನ್ನು, ಆ ಮೂಲಕ ಬದುಕನ್ನು ಗೆಲ್ಲುತ್ತಾ ಹೋಗು. ನಿನ್ನ ಬೆಂಬಲಕ್ಕೆ ನಾನಿರ್ತೇನೆ…’

ಆನಂತರದಲ್ಲಿ, ನನ್ನ ಬದುಕು ವೇಗವಾಗಿ ಬದಲಾಯಿತು. ಊಟ-ವಸತಿಗೆ ದಾರಿಯಾದ ಮೇಲೆ ಎಲ್ಲ ಕಷ್ಟಗಳೂ ಮರೆತು ಹೋದವು. ಟ್ರೈಸೈಕಲ್‌ ಬಂದ ನಂತರ, ಕಪ್ಪೆಯಂತೆ ಕುಪ್ಪಳಿಸಿ ಸಾಗುವ ಕಷ್ಟವೂ ತಪ್ಪಿತು. ಇಷ್ಟು ದಿನ ಅಬ್ಬೇಪಾರಿಯಂತೆ ಬದುಕಿಬಿಟ್ಟೆ. ಇನ್ನು ಮುಂದಾದರೂ ಶಿಸ್ತಿನ ಬದುಕು ರೂಪಿಸಿಕೊಳ್ಳಬೇಕು ಎಂದು ನಿರ್ಧರಿಸಿದೆ. ಇದನ್ನೆಲ್ಲಾ ಫ‌‌ರ್ಹಾ ಅವರಿಗೆ ಹೇಳಿದೆ. ಈಗ ಹೊಸ ಬಗೆಯ ಕೃತಕ ಕಾಲು ಬಂದಿವೆ. ಅವನ್ನು ತರಿಸಿಕೊಡುವೆ. ನೀನು ನಾಳೆಯಿಂದಾನೇ ಜಿಮ್‌ಗೆ ಹೋಗು ಅಂದರು. ಅಷ್ಟೇ ಅಲ್ಲ; ಐದು ಲಕ್ಷ ರೂ. ವೆಚ್ಚದ ಕೃತಕ ಕಾಲು ತರಿಸಿಯೇಬಿಟ್ಟರು. ಈಕೆ ಯಾವ ಜನ್ಮದ ತಾಯಿ? ಈಗ ನಡೆಯುತ್ತಿರುವುದೆಲ್ಲವೂ ನಿಜವೋ, ಕನಸೋ? ದಿನ ಕ್ಕೊಂದು ಬಗೆಯ ಪವಾಡ ನಡೀತಿದೆ ಯ ಲ್ಲ… ಎಂದು ನಾನು ಪದೇಪದೆ ಯೋಚಿಸುವ ಮಟ್ಟಕ್ಕೆ ನನ್ನ ಬಾಳ ರಥ ಚಲಿಸುತ್ತಿತ್ತು…

ಆನಂತರ ನಡೆದಿರುವುದನ್ನು ಸಂಕ್ಷಿಪ್ತವಾಗಿ ಹೇಳುವುದೇ ಸರಿ. ದೇಹವನ್ನು ಹುರಿಗೊಳಿಸಿಕೊಳ್ಳಲು ಈ ದೇವ್‌ ಶರ್ಮ ಕಸರತ್ತು ಮಾಡುತ್ತಿರುವುದನ್ನು ವಿಶಾಲ್‌ ಪಾಸ್ವಾನ್‌ ಎಂಬ ನೃತ್ಯ ನಿರ್ದೇಶಕ ಗಮನಿಸಿದ್ದಾರೆ. ನೀನೇಕೆ ಡ್ಯಾನ್ಸ್‌ ಕಲಿಯಬಾರದು ಎಂದು ಪ್ರಶ್ನಿಸಿದ್ದಾರೆ. ಈ ಹೊಸ ಸವಾಲು ಸ್ವೀಕರಿಸಲೂ ದೇವ್‌ ಶರ್ಮಾ ಒಪ್ಪಿದ್ದಾನೆ. ಅಷ್ಟೇ ಅಲ್ಲ; ಅಲ್ಪಾವಧಿಯಲ್ಲಿಯೇ ಡ್ಯಾನ್ಸ್‌ ಕಲಿತದ್ದು ಮಾತ್ರವಲ್ಲದೇ, ಡ್ಯಾನ್ಸ್‌ ಇಂಡಿಯಾ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಎಲ್ಲರ ಮನ ಗೆದ್ದು ಸೆಲೆಬ್ರಿಟಿ ಆಗಿಬಿಟ್ಟಿದ್ದಾನೆ. ಕಾಲಿಲ್ಲದಿದ್ದರೂ ವಿಧಿಯ ಎದುರೇ ನಿಂತು ತೊಡೆ ತಟ್ಟಿದ, ಕನಸುಗಳ ಆಗಸದಲ್ಲಿ ನಿಂತು, ಕೇಕೆ ಹಾಕಿದ ಈ ಧೀರ ಹಲೋ ಎನ್ನಲು ಬಿಡುವಿಲ್ಲದಷ್ಟು ಬ್ಯುಸಿ. ಹತ್ತು ದಿನಗಳಿಂದ ನಿರಂತರವಾಗಿ ಕಾಲ್‌ ಮಾಡಿದ್ದಕ್ಕೆ ಕಡೆಗೂ, ಬರೀ ಹತ್ತು ನಿಮಿಷಗಳ ಕಾಲ ಮಾತಿಗೆ ಸಿಕ್ಕಿದ. ಈವರೆಗೂ ನೀವು ಓದಿದಿರಲ್ಲ; ಅದನ್ನೆಲ್ಲ ಹೇಳಿಕೊಂಡ!

-ಎ.ಆರ್‌.ಮಣಿಕಾಂತ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ