ಎದ್ದು ನಿಲ್ಲಲು ಕಲಿಯೋಕ್ಕಾದ್ರೂ ಒಮ್ಮೆ ಬೀಳಬೇಕು!

Team Udayavani, Jul 21, 2019, 5:00 AM IST

ರೈಲು ಹತ್ತ ಬೇಕೆಂದರೆ ಕೈ ಗಟ್ಟಿಯಾಗಿರಬೇಕು.ರಾಡ್‌ ಹಾಕಿರುವ ಕಾಲು, ಶಕ್ತಿ ಹೀನ ಬಲಗೈ,ಎರಡು ಊರು ಗೋಲು-ಇದು ನನ್ನ ಸ್ಥಿತಿ. ಇಂಥ ಪರಿಸ್ಥಿತಿಯಲ್ಲಿ ರೈಲು ಹತ್ತು ವುದು ಹೇಗೆ ಅನ್ನಿಸಿತು. ಈ ಪೇಚಾ ಟದ ವೇಳೆಗೇ ರೈಲು ಬಂದೇ ಬಿಟ್ಟಿತು. ಆ ಕ್ಷಣ ದಲ್ಲಿ ಯಾಕೆ ಹಾಗೆ ಮಾಡಿದೆನೋ ಕಾಣೆ: ಊರು ಗೋಲನ್ನು ಒಳಗೆಸೆದು, ಪ್ಲಾಟ್‌ ಫಾ ರಂನಿಂದ ಬೋಗಿಯೊಳಕ್ಕೆ ಕಪ್ಪೆಯಂತೆ ಜಿಗಿದು ಬಿಟ್ಟೆ. ಆ ಕ್ಷಣಕ್ಕೆ, ನನ್ನೊಳಗೆ ವಿಶೇಷ ಶಕ್ತಿ ಹೊಕ್ಕಂತೆ ಭಾಸವಾಯಿತು. ಹತ್ತುವಾಗ ಬಳಸಿದ ತಂತ್ರವನ್ನೇ ಇಳಿಯು ವಾಗಲೂ ಬಳಸಿದೆ. ಈ ಬಾರಿ ಎಡವಟ್ಟಾಗಿ ಹೋಯಿತು.

ಈತನ ಹೆಸರು ತಸ್ವೀರ್‌ ಮಹಮ್ಮದ್‌. ಈತ, ಕೇರಳದ ಕೊಟ್ಟಾಯಂನವನು. ಚಿಕ್ಕ ವಯಸ್ಸಿಗೇ ಯಶಸ್ಸು, ಖ್ಯಾತಿ, ಕಾಸು-ಮೂರನ್ನೂ ಕಂಡವನು. 20ನೇ ವಯಸ್ಸಿಗೇ ಜನಪ್ರಿಯತೆಯ ಶಿಖರವೇರಿದ್ದ ಈತ, ಅಷ್ಟೇ ವೇಗದಲ್ಲಿ ಎಲ್ಲವನ್ನೂ ಕಳೆದುಕೊಂಡ! ಅನಿರೀಕ್ಷಿತ ದುರಂತದಲ್ಲಿ ಕಾಲು ಕಳೆದುಕೊಂಡ. ಆದರೆ, ಬಾಳು ಕಳೆದುಕೊಳ್ಳಲಿಲ್ಲ. ಒಂಟಿ ಕಾಲಲ್ಲಿಯೇ ಆತ ಎರಡನೇ ಬಾರಿಗೆ ಯಶಸ್ಸಿನ ಹಿಮಾಲಯ ಹತ್ತಿದ ಕಥೆಯೇ ರೋಚಕ. ಅದನ್ನೆಲ್ಲ ಅವನ ಮಾತಿನಲ್ಲಿಯೇ ಓದಿಕೊಳ್ಳಿ:

***

‘ನಿನ್ನ ಮುಖದಲ್ಲಿ ಫ್ರೆಶ್‌ನೆಸ್‌ ಇದೆ. ಎಂಥದೋ ಆಕರ್ಷಣೆಯಿದೆ. ಚಾಕೊಲೆಟ್ ಹೀರೋ ಥರದ ಲುಕ್‌ ಇದೆ. ಈ ಕಾರಣದಿಂದಲೇ, ಹತ್ತು ಜನರ ಮಧ್ಯೆ ಎದ್ದು ಕಾಣ್ತೀಯ. ಎಲ್ಲರೂ ನಿನ್ನನ್ನೇ ಮೆಚ್ಚುಗೆಯಿಂದ ನೋಡ್ತಾ ಇರ್ತಾರೆ. ಇದನ್ನೆಲ್ಲ ಕಂಡಾಗ, ನಿನ್ನ ಮೇಲೆ ಹೊಟ್ಟೆ ಉರಿ ಶುರುವಾಗುತ್ತೆ ಕಣೋ…’ ಹೀಗೆಂದು, ನನ್ನ ಗೆಳೆಯರೇ ಹೇಳುತ್ತಿದ್ದರು. ಅಂಥ ಮಾತುಗಳನ್ನು ಕೇಳಿದಾಗಲೆಲ್ಲ ಖುಷಿಯಾಗುತ್ತಿತ್ತು. ಹೆಮ್ಮೆಯಾಗುತ್ತಿತ್ತು. ಕಾಲೇಜಿನ ಹುಡುಗಿಯರು ವಾರೆನೋಟದಲ್ಲಿ ಆಸೆಯಿಂದ ನೋಡುತ್ತಾ, ‘ಹುಡುಗ ಮಸ್ತ್ ಇದಾನೆ’ ಎಂದು ಪಿಸುಗುಟ್ಟಿ ಕೊಂಡಾಗ ರೋಮಾಂಚನವಾಗುತ್ತಿತ್ತು. ಗೆಳೆಯರೆಲ್ಲಾ ನನ್ನನ್ನು Smart and Handosme ಎಂದೇ ಗುರುತಿಸುತ್ತಿದ್ದರು. ಮತ್ತೆ ಕೆಲವರು- ‘ಏನಪ್ಪಾ ಹೀರೋ…’ ಎಂದು ಕರೆದು, ನನ್ನ ಸಂತೋಷ ಹೆಚ್ಚಿಸುತ್ತಿದ್ದರು.

ಮುದ್‌ಮುದ್ದಾಗಿ ಇದ್ದ ಕಾರಣದಿಂದಲೇ, ಮಾಡೆಲ್ ಆಗುವ ಅವಕಾಶ ಹುಡುಕಿಕೊಂಡು ಬಂತು. ಬಿ.ಕಾಂ. ವಿದ್ಯಾರ್ಥಿಯಾಗಿದ್ದಾಗಲೇ ಹೆಸರಾಂತ ವಸ್ತ್ರವಿನ್ಯಾಸಕ ಕಂಪನಿಯ ಉತ್ಪನ್ನಗಳಿಗೆ ಮಾಡೆಲ್ ಆದೆ. ‘ಮಾಡೆಲಿಂಗ್‌ ಎಂಬುದು ತೀವ್ರ ಪೈಪೋಟಿಯಿಂದ ಕೂಡಿರುವ ಕ್ಷೇತ್ರ. ಇಲ್ಲಿ ಹೆಚ್ಚು ಕಾಲ ಉಳಿಯಬೇಕೆಂದರೆ, ಫಿಟ್‌ನೆಸ್‌ ಕಾಪಾಡಿಕೊಳ್ಳಬೇಕು. ದೇಹ ಊದಿಕೊಳ್ಳದಂತೆ, ಚರ್ಮ ಸುಕ್ಕಾಗದಂತೆ, ಮುಖದಲ್ಲಿನ ಫ್ರೆಶ್‌ನೆಸ್‌ ಮರೆಯಾಗದಂತೆ ಕಾಳಜಿ ವಹಿಸಬೇಕು’ ಎಂದು ನನಗೆ ನಾನೇ ಹೇಳಿಕೊಂಡೆ. ಮಾಡೆಲಿಂಗ್‌ನ ಕಾರಣದಿಂದಲೇ ಬಟ್ಟೆ ತಯಾರಿಕಾ ಕಂಪನಿಯ ದಿಗ್ಗಜರೆಲ್ಲರ ಪರಿಚಯವಿದೆ. ಇದನ್ನೇ ಪಾಯಿಂಟ್ ಮಾಡಿ ಕೊಂಡು ಒಂದು ವಸ್ತ್ರ ಮಾರಾಟದ ಮಳಿಗೆ ಆರಂಭಿಸಬೇಕು. ಇದು ಸೈಡ್‌ ಬಿಜಿನೆಸ್‌ ಥರಾ ಇರಲಿ. ಮಾಡೆಲಿಂಗ್‌, ಫ‌ುಲ್ಟೈಂ ಕಾಯಕವಾಗಲಿ. ಅದೃಷ್ಟ ಅನ್ನುವುದಿದ್ದರೆ, ಮುಂದೊಂದು ದಿನ ಒಂದೆರಡು ಸಿನಿಮಾಗಳಲ್ಲಿ ಅಭಿನಯಿಸಿಬಿಡಬೇಕು. ಮಾಡೆಲ್ಗಳಾಗಿದ್ದ ಎಷ್ಟೋ ಜನ ಆನಂತರದಲ್ಲಿ ಸಿನಿಮಾದ ಹೀರೋಗಳಾಗಿದ್ದಾರೆ. ಅಂಥ ಕಾಲ ನನಗೂ ಬರಲಿ…

ನನ್ನ ಈ ಮಾತುಗಳು ದೇವರಿಗೆ ಕೇಳಿಸಿರಬೇಕು. ನಂತರದ ಕೆಲವೇ ದಿನಗಳಲ್ಲಿ ಒಂದೊಂದೇ ಅವಕಾಶಗಳು ದೊರೆಯುತ್ತಾ ಹೋದವು. ವಸ್ತ್ರ ತಯಾರಿಕಾ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಮಾಡೆಲ್ ಆಗುವಂತೆ ದುಂಬಾಲು ಬಿದ್ದವು. ನನ್ನ ಬಟ್ಟೆ ಅಂಗಡಿಗೆ, ರಿಯಾಯಿತಿ ದರದಲ್ಲಿ ಬಟ್ಟೆ ನೀಡಲು ಒಪ್ಪಿಕೊಂಡವು. ಇಷ್ಟು ಸಾಲದೆಂಬಂತೆ, ಒಂದು ಸಿನಿಮಾದಲ್ಲಿ ಹೀರೋ ಆಗಿ ನಟಿಸುವ ಅವಕಾಶವೂ ಸಿಕ್ಕಿಬಿಟ್ಟಿತು. ಪರಿಣಾಮ, ಕಡೆಯ ವರ್ಷದ ಬಿ.ಕಾಂ. ವಿದ್ಯಾರ್ಥಿಯಾಗಿದ್ದಾಗಲೇ ನಾನು ಹಣ, ಖ್ಯಾತಿ ಹಾಗೂ ಯಶಸ್ಸಿನ ರುಚಿ ಕಂಡೆ. ಭವಿಷ್ಯದ ಕುರಿತು ನೂರಾರು ಕನಸು ಕಾಣುತ್ತಿದ್ದಾಗಲೇ ನನ್ನ ಹುಟ್ಟುಹಬ್ಬದ ದಿನ ಬಂತು!

ಅದು 2013ರ ನವೆಂಬರ್‌ 17, ಭಾನುವಾರ. ಗೆಳೆಯರ ಸಮ್ಮುಖದಲ್ಲಿ ಅವತ್ತು ಬರ್ತ್‌ಡೇ ಪಾರ್ಟಿ ಬಲು ಜೋರಾಗಿಯೇ ನಡೆಯಿತು. ಹೇಳಲು ಮರೆತಿದ್ದೆ: ಕಾಲೇಜಿನಲ್ಲಿ ಕ್ರಿಕೆಟ್ ಮತ್ತು ಫ‌ುಟ್ಬಾಲ್ ತಂಡದ ಮುಖ್ಯ ಆಟಗಾರ ನಾನು. ಹಾಗಾಗಿ, ಪಾರ್ಟಿಗೆ ಬಂದವರಲ್ಲಿ ಸೆಲೆಬ್ರಿಟಿಗಳೂ ಇದ್ದರು. ಕೇಕೆ-ಹಾಡು-ಕುಣಿತದೊಂದಿಗೆ ಪಾರ್ಟಿ ಮುಗಿದಾಗ ರಾತ್ರಿ 12 ಗಂಟೆ! ಈ ಬರ್ತ್‌ಡೇಯನ್ನು ಸ್ಪೆಷಲ್ಲಾಗಿ ಆಚರಿಸಬೇಕೆಂದು ತುಂಬ ಹಿಂದೆಯೇ ನಾನೂ-ಇನ್ನೊಬ್ಬ ಗೆಳೆಯನೂ ಪ್ಲಾನ್‌ ಮಾಡಿದ್ದೆವು. ಪಾರ್ಟಿ ಮುಗಿಯುತ್ತಿದ್ದಂತೆಯೇ ಒಂದೆರಡು ಗಂಟೆ ಕೋಳಿನಿದ್ರೆ ತೆಗೆಯುವುದು, ನಂತರ ಬೈಕ್‌ ಹತ್ತಿ ಬೆಂಗಳೂರಿಗೆ ಹೋಗುವುದು -ಹೀಗೆ, ಬೈಕ್‌ ರೈಡ್‌ನ‌ ಮೂಲಕ ಬರ್ತ್‌ಡೇ ಸ್ಮರಣೀಯವಾಗಿಸೋದು ನಮ್ಮ ಉದ್ದೇಶವಾಗಿತ್ತು.

ಆದರೆ, ಬೆಂಗಳೂರು ತಲುಪುವ ಮೊದಲೇ, ತಮಿಳುನಾಡಿನ ಕೃಷ್ಣಗಿರಿ ಬಳಿ ನಮ್ಮ ಬೈಕ್‌ ಸ್ಕಿಡ್‌ ಆಗಿ ಆಕ್ಸಿಡೆಂಟ್ ಆಗಿಬಿಡ್ತು. ಅಪಘಾತದ ತೀವ್ರತೆ ಎಷ್ಟಿತ್ತು ಅಂದರೆ, ನನ್ನ ಎರಡೂ ಕಾಲು ಸೊಟ್ಟಂಪಟ್ಟ ತಿರುಚಿಕೊಂಡಿದ್ದವಂತೆ. ಲೀಟರುಗಟ್ಟಲೆ ರಕ್ತ ಹರಿದಿತ್ತಂತೆ. ಬದುಕುವ ಛಾನ್ಸ್‌ ಕಡಿಮೆ, ಆದ್ರೂ ರಿಸ್ಕ್ ತಗೊಳ್ಳುವ ಅಂದುಕೊಂಡೇ ಅಡ್ಮಿಟ್ ಮಾಡಿಕೊಂಡರಂತೆ -ಈ ಮಾತನ್ನು ಮುಂದೊಮ್ಮೆ ನನಗೆ ಡಾಕ್ಟರೇ ಹೇಳಿದರು.

***

‘ಮೇಜರ್‌ ಆಕ್ಸಿಡೆಂಟ್. ಎರಡು ದಿನ ಕೋಮಾದಲ್ಲಿದ್ರಿ. ನೀವು ಉಳಿದಿರೋದೇ ಹೆಚ್ಚು. ಟ್ರೀಟ್ಮೆಂಟ್ ಶುರು ಮಾಡಿದೀವಿ. ಇನ್ನು ಮೂರು ತಿಂಗಳಲ್ಲಿ ನೀವು ಮೊದಲಿನಂತೆ ಆಗಬಹುದು. ಕ್ರಿಕೆಟ್, ಫ‌ುಟ್ಬಾಲ್ ಕೂಡ ಆಡಬಹುದು’ -ಡಾಕ್ಟರು ಭರವಸೆ ನೀಡಿದರು. ಅವರ ಮಾತು ಮುಗಿಯುತ್ತಿದ್ದಂತೆಯೇ ಒಮ್ಮೆ ಸುತ್ತಲೂ ಕಣ್ಣುಹಾಯಿಸಿದೆ. ಅಪ್ಪ-ಅಮ್ಮ, ಸೋದರ-ಸೋದರಿಯರು, ಬಂಧುಗಳ ಮುಖ ಕಾಣಿಸಿತು. ಎಲ್ಲರ ಮೊಗದಲ್ಲೂ ಭಯ, ಆತಂಕ, ಕಣ್ಣೀರು. ಏನೋ ಹೇಳಲು ಹೋದೆ. ಆದರೆ, ದನಿಯೇ ಹೊರಡಲಿಲ್ಲ.

ಮೂರು ದಿನ ಕಳೆಯುವುದರೊಳಗೆ ಕೆಂಡದಂಥ ಜ್ವರ ಬಂತು. ವೈದ್ಯರು ಧಾವಿಸಿ ಬಂದರು. ತರಾತುರಿಯಲ್ಲಿಯೇ ಐದಾರು ಬಗೆಯ ಟೆಸ್ಟ್‌ ಮಾಡಿದರು. ನಂತರ ವಿಷಾದದಿಂದ ಹೇಳಿದರು: ‘ಸಾರಿ, ಇನ್‌ಫೆಕ್ಷನ್‌ ಆಗಿಬಿಟ್ಟಿದೆ. ತಕ್ಷಣವೇ ತೊಡೆಯ ಭಾಗದವರೆಗೂ ಒಂದು ಕಾಲನ್ನು ತೆಗೆಯಬೇಕು. ಇಲ್ಲವಾದರೆ, ಗ್ಯಾಂಗ್ರಿನ್‌ ದೇಹವಿಡೀ ಹರಡುವ ಅಪಾಯವಿದೆ. ಆಪರೇಷನ್‌ ಮೂಲಕ, ಇವತ್ತು ಅಥವಾ ನಾಳೆ ಆ ಕೆಲಸ ಆಗಬೇಕು. ನೀವು, ಮಾನಸಿಕವಾಗಿ ಎಲ್ಲವನ್ನೂ ಎದುರಿಸಲು ಸಿದ್ಧರಾಗಿ…’

ಬರೀ ಮೂರೇ ದಿನಗಳ ಹಿಂದೆ ಇದೇ ಡಾಕ್ಟರ್‌- ‘ಮೂರು ತಿಂಗಳೊಳಗೆ ಮೊದಲಿನ ಥರಾ ಆಗಿಬಿಡ್ತೀರಿ ಕಣ್ರೀ’ ಎಂದಿದ್ದರು. ಈಗ ನೋಡಿದರೆ, ಕಾಲು ಕತ್ತರಿಸದಿದ್ದರೆ ಜೀವ ಹೋಗುತ್ತೆ ಎಂಬ ಮಾತಾಡಿದ್ದರು! ಅಲ್ಲಿಗೆ, ಮೊದಲಿನಂತೆ ಆಗಬಲ್ಲೆ ಎಂಬ ನಂಬಿಕೆ ಆ ಕ್ಷಣದಲ್ಲಿಯೇ ಸತ್ತುಹೋಯಿತು. ಏನಾಗುತ್ತೋ ಆಗಲಿ ಎಂದುಕೊಂಡು ಸುಮ್ಮನಾದೆ.

ಆನಂತರದಲ್ಲಿ, ಒಟ್ಟು ನಾಲ್ಕು ತಿಂಗಳ ಅವಧಿಯಲ್ಲಿ 14 ಆಪರೇಷನ್‌ ಆದವು. ಒಂದು ಕಾಲನ್ನು ತೊಡೆಯ ಭಾಗದವರೆಗೂ ಕಟ್ ಮಾಡಿದರು. ಇನ್ನೊಂದು ಕಾಲಿಗೆ ಸ್ಟೀಲ್ರಾಡ್‌ ಹಾಕಿದರು. ಆಕ್ಸಿಡೆಂಟ್‌ನ ಸಂದರ್ಭದಲ್ಲಿ ರಕ್ತನಾಳಗಳೆಲ್ಲ ಜಜ್ಜಿಹೋಗಿದ್ದರಿಂದ ಬಲಗೈ ದುರ್ಬಲವಾಗಿತ್ತು. ಡ್ರಿಪ್ಸ್‌, ಇಂಜಕ್ಷನ್‌ಗಳನ್ನು ಪ್ರತಿಬಾರಿಯೂ ಎಡಗೈಗೇ ನೀಡಿದ್ದರಿಂದ, ಅದು ಮರಗಟ್ಟಿಹೋದಂತಾಗಿತ್ತು. ಎದ್ದು ನಿಲ್ಲುವುದಿರಲಿ, ಕೂರುವುದಕ್ಕೂ ಶಕ್ತಿಯಿರಲಿಲ್ಲ. ಬರೀ ನಾಲ್ಕು ತಿಂಗಳ ಹಿಂದೆ ಹಕ್ಕಿಯಂತೆ ಹಾರುತ್ತಿದ್ದವನು, ಬದಲಾದ ಸನ್ನಿವೇಶದಲ್ಲಿ ರೆಕ್ಕೆ ಕತ್ತರಿಸಿದ ಹಕ್ಕಿಯಂತೆ ನೆಲಕ್ಕೆ ಬಿದ್ದಿದ್ದೆ.

ಆನಂತರದ ಇಡೀ ವರ್ಷವನ್ನು, ಹಾಸಿಗೆಯಲ್ಲಿ ಮಲಗಿಯೇ ಕಳೆಯಬೇಕಾಯಿತು. ಊಟ, ನಿದ್ರೆ, ಸ್ನಾನ, ಶೌಚ -ಎಲ್ಲವೂ ಅಲ್ಲಿಯೇ. ಗ್ಲಾಸ್‌ ಎತ್ತಿಕೊಂಡು ನೀರು ಕುಡಿಯುವ ತ್ರಾಣವೂ ನನಗಿರಲಿಲ್ಲ. ಹೇಗಿದ್ದವನು ಹೇಗಾಗಿಹೋದೆನಲ್ಲ ಎಂಬ ಡಿಪ್ರಶನ್‌ಗೆ ನಿದ್ರೆಯೇ ಬರುತ್ತಿರಲಿಲ್ಲ. ಅಕಸ್ಮಾತ್‌ ಸಾಯುವವರೆಗೂ ಹೀಗೇ ಇರಬೇಕಾಗಿಬಂದ್ರೆ ಗತಿಯೇನು ಅನ್ನಿಸಿ ಭಯವಾಗುತ್ತಿತ್ತು. ಅಸಹಾಯಕತೆಯಿಂದ ಕೆಲವೊಮ್ಮೆ ಚೀರುತ್ತಿದ್ದೆ. ಕಣ್ಣೀರಿಡುತ್ತಿದ್ದೆ. ಇಂಥ ಸಂದರ್ಭಗಳಲ್ಲಿ ಸ್ನೇಹಿತರು- ಬಂಧುಗಳು ಧೈರ್ಯ ತುಂಬಿದರು. ‘ಎಲ್ಲಾ ಸರಿಹೋಗುತ್ತೆ. ನಿಧಾನಕ್ಕೆ ಎದ್ದು ಕೂರಲು ಟ್ರೈ ಮಾಡು’ ಎಂದರು. ಹತ್ತಾರು ಬಾರಿ ಬಿದ್ದೆ ನಿಜ. ಆದರೂ ಕಡೆಗೊಮ್ಮೆ ಎದ್ದು ಕೂತೇಬಿಟ್ಟೆ. ನಂತರದ ಕೆಲವೇ ದಿನಗಳಲ್ಲಿ, ವ್ಹೀಲ್ಚೇರ್‌ ಮೇಲೆ ಕೂತು ಚಿಕ್ಕಪುಟ್ಟ ಕೆಲಸ ಮಾಡತೊಡಗಿದೆ. ಈ ಮಧ್ಯೆಯೇ ಚಿಕಿತ್ಸೆಗೆಂದು ಹೋದಾಗ, ಡಾಕ್ಟರ್‌ ಹೇಳಿದರು: ‘ನೀನು ಸಾಹಸಿ ಕಣಯ್ಯ. ತುಂಬಾ ಬೇಗ ರಿಕವರ್‌ ಆಗಿದೀಯ. ಇದೇ ಸ್ಪೀಡ್‌ಲಿ ಪಿಕಪ್‌ ಆದ್ರೆ ಮೂರೇ ತಿಂಗಳಲ್ಲಿ ನೀನು ಓಡಾಡಬಹುದು…’!

‘ಇದೆಂಥ ತಮಾಷೆ ಸಾರ್‌ ನಿಮ್ದು, ಕಾಲಿಲ್ಲದ ನಾನು ಓಡಾಡಲು ಸಾಧ್ಯವಾ? ಎದ್ದು ನಿಲ್ಲಲು ಸಾಧ್ಯವಾ?’ -ನಾನು ಅಸಹನೆಯಿಂದಲೇ ಕೇಳಿದೆ. ‘ಯಾಕೆ ಸಾಧ್ಯವಿಲ್ಲ? ಊರುಗೋಲಿನ ಸಹಾಯದಿಂದ ನಿಲ್ಲಲು, ಆರಾಮಾಗಿ ನಡೆಯಲು ಸಾಧ್ಯ. ನಾಳೆಯಿಂದಲೇ ಪ್ರಯತ್ನಿಸು. ಓಡಾಡ್ತಾ ಇದ್ದರೆ ರಕ್ತ ಸಂಚಲನೆ ಸರಾಗ ಆಗುತ್ತೆ. ದೇಹಕ್ಕೆ ತಂತಾನೇ ಶಕ್ತಿ ಬರುತ್ತೆ’ ಅಂದರು. ‘ಅರೇ, ಹೌದಲ್ಲವಾ? ಡಿಪ್ರಷನ್‌ನ ಕಾರಣಕ್ಕೆ ನಾನು ಇದನ್ನೆಲ್ಲ ಯೋಚಿಸಲೇ ಇಲ್ಲವಲ್ಲ?’ ಅನಿಸಿತು. ಮರುದಿನದಿಂದಲೇ ಊರು ಗೋಲಿನ ಮೊರೆಹೋದೆ. ಸ್ವತಂತ್ರವಾಗಿ ಬದುಕಬೇಕು ಎಂಬ ಆಸೆ ಅದೆಷ್ಟು ತೀವ್ರವಾಗಿತ್ತು ಅಂದ್ರೆ, ಎರಡೇ ವಾರದೊಳಗೆ, ಊರುಗೋಲಿನ ಸಹಾಯದಿಂದ ನಡೆಯಲು ಕಲಿತುಬಿಟ್ಟೆ…

ಇಷ್ಟಾದರೂ, ಎಷ್ಟೋ ಸಂದರ್ಭಗಳಲ್ಲಿ ನನಗೆ ಒಂದು ಕಾಲಿಲ್ಲ, ಒಂದು ಕೈ, ಭಾರ ಎತ್ತಲು ಆಗದಷ್ಟು ದುರ್ಬಲವಾಗಿದೆ ಎಂಬುದೇ ಮರೆತುಹೋಗುತ್ತಿತ್ತು. ಮಲಗಿದ್ದವನು, ಮಂಚದಿಂದ ಇಳಿಯಲು ಹೋಗಿ ದಭಾರನೆ ಬಿದ್ದುಬಿಡುತ್ತಿದ್ದೆ. ಅಶಕ್ತ ಕೈಯಿಂದಲೇ ನೀರಿನ ಜಗ್‌ ಎತ್ತಲು ಹೋಗಿ, ಅದನ್ನು ಮೈಮೇಲೆ ಬೀಳಿಸಿಕೊಳ್ಳುತ್ತಿದ್ದೆ. ಇವೆರಡು ಸಮಸ್ಯೆಗಳ ಜೊತೆಗೆ, ಊರುಗೋಲಿನ ಜೊತೆ ನಡೆಯುವಾಗೆಲ್ಲ ನಾನು ಒಂಟಿ ಅನ್ನಿಸಿ ವಿಪರೀತ ಹಿಂಸೆಯಾಗುತ್ತಿತ್ತು. ಇದರಿಂದ ಪಾರಾಗಲು ನನಗೊಂದು ಉಪಾಯ ಹೊಳೆಯಿತು. ಊರುಗೋಲಿನ ಎರಡೂ ಬದಿಗೆ ಸೂಪರ್‌ಮ್ಯಾನ್‌-ಬ್ಯಾಟ್ಮನ್‌ ಚಿತ್ರಗಳನ್ನು, ಸ್ಟಿಕರ್‌ಗಳನ್ನು ಅಂಟಿಸಿಕೊಂಡೆ. ನಾನಿನ್ನು ಒಂಟಿಯಲ್ಲ, ಸೂಪರ್‌ಮ್ಯಾನ್‌-ಬ್ಯಾಟ್ಮನ್‌ರಂಥ ಪ್ರಚಂಡರು ನನ್ನ ಜೊತೆಗಿದ್ದಾರೆ. ಈ ಇಬ್ಬರು ಹೀರೋಗಳ ಜೊತೆಗೆ ನಾನೂ ಒಬ್ಬ ಹೀರೋ ಅಂದುಕೊಂಡು, ಅಲ್ಲಿಂದಿಲ್ಲಿಗೆ-ಇಲ್ಲಿಂದಲ್ಲಿಗೆ ನಡೆಯತೊಡಗಿದೆ.

ಇನ್ನೊಬ್ಬರ ಸಹಾಯವಿಲ್ಲದೆ ನಡೆಯಬಲ್ಲೆನೆಂಬ ಕಾನ್ಫಿಡೆನ್ಸ್‌ ಬಂದಮೇಲೆ, ಒಂದ್ಸಲ ನಾನೊಬ್ಬನೇ ರೈಲು ಪ್ರಯಾಣ ಮಾಡಬೇಕು ಅನ್ನಿಸಿತು. ಕುಟುಂಬದವರಿಗೆ, ಗೆಳೆಯರಿಗೆ ಈ ವಿಚಾರ ಹೇಳಿದೆ. ಅವರೆಲ್ಲ ‘ಅಲ್ಲ ಕಣೋ, ನಿನಗೇನು ತಲೆ ಕೆಟ್ಟಿದೆಯಾ? ನಿನ್ನ ಸಮಸ್ಯೆ ನಿನಗೇ ಗೊತ್ತಿದೆ. ಹಾಗಿದ್ದೂ ರೈಲು ಪ್ರಯಾಣ ಮಾಡ್ತೀನಿ ಅಂತೀಯಲ್ಲ ಇಂಥ ಹುಚ್ಚಾಟಗಳನ್ನು ಮೊದಲು ನಿಲ್ಲಿಸು…’ ಅಂದರು. ಈ ಸಂದರ್ಭದಲ್ಲಿ ನನ್ನನ್ನು ಸಪೋರ್ಟ್‌ ಮಾಡಿ ಮಾತಾಡಿದವರು ಅಪ್ಪ. ‘ನಿನ್ನ ಮೇಲೆ ನನಗಂತೂ ನಂಬಿಕೆ ಇದೆ. ರಿಸ್ಕ್ ತಗೊಳ್ಳಲು ಹೆದರಲ್ಲ ಅನ್ನೋದಾದ್ರೆ ನೀನು ಹೋಗಿ ಬಾ’ ಅಂದರು. ಉಳಿದವರ ವಿರೋಧದ ಮಧ್ಯೆಯೇ ಕೊಟ್ಟಾಯಂನಿಂದ ವೈನಾಡಿಗೆ ತೆರಳಲು ನಿರ್ಧರಿಸಿ ರೈಲು ನಿಲ್ದಾಣಕ್ಕೆ ಬಂದೇಬಿಟ್ಟೆ.

ಹೊಸದೊಂದು ಸಮಸ್ಯೆ ಎದುರಾದದ್ದೇ ಆಗ. ರೈಲು ಹತ್ತಬೇಕೆಂದರೆ ಕೈ ಕಾಲು ಗಟ್ಟಿಯಾಗಿರಬೇಕು. ರಾಡ್‌ ಹಾಕಿರುವ ಕಾಲು, ಶಕ್ತಿಹೀನ ಬಲಗೈ, ಎರಡು ಊರುಗೋಲು-ಇದು ನನ್ನ ಸ್ಥಿತಿ. ಇಂಥ ಪರಿಸ್ಥಿತಿಯಲ್ಲಿ ರೈಲು ಹತ್ತುವುದು ಹೇಗೆ ಅನ್ನಿಸಿತು. ಈ ಪೇಚಾಟದ ವೇಳೆಗೇ ರೈಲು ಬಂದೇಬಿಟ್ಟಿತು. ಆ ಕ್ಷಣದಲ್ಲಿ ಯಾಕೆ ಹಾಗೆ ಮಾಡಿದೆನೋ ಕಾಣೆ: ಊರುಗೋಲನ್ನು ಒಳಗೆಸೆದು, ಪ್ಲಾಟ್ಫಾರಂನಿಂದ ಬೋಗಿಯೊಳಕ್ಕೆ ಕಪ್ಪೆಯಂತೆ ಜಿಗಿದುಬಿಟ್ಟೆ. ಆ ಕ್ಷಣಕ್ಕೆ, ನನ್ನೊಳಗೆ ವಿಶೇಷ ಶಕ್ತಿ ಹೊಕ್ಕಂತೆ ಭಾಸವಾಯಿತು. ಹತ್ತುವಾಗ ಬಳಸಿದ ತಂತ್ರವನ್ನೇ ಇಳಿಯುವಾಗಲೂ ಬಳಸಿದೆ. ಈ ಬಾರಿ ಎಡವಟ್ಟಾಗಿ ಹೋಯಿತು. ರೈಲೊಳಗಿಂದ ಜಿಗಿದವನು, ಪ್ಲಾಟ್ಫಾರಂನ ಬದಲು ಕಲ್ಲುಗಳಿದ್ದ ನೆಲದ ಮೇಲೆ ಬಿದ್ದೆ. ಕಾಲಿಂದ ರಕ್ತ ಚಿಮ್ಮಿತು. ಜೊತೆಗಿದ್ದವರು ಹೌಹಾರಿ, ತಕ್ಷಣವೇ ಆಸ್ಪತ್ರೆಗೆ ಸೇರಿಸಿದರು.

ಊಹುಂ: ಈ ಬಾರಿ ನನಗೆ ಭಯವಾಗಲಿಲ್ಲ. ಬಿದ್ದಾಗ, ಏಳುವುದು ಹೇಗೆಂದು ಗೊತ್ತಾಯಿತು. ಜೊತೆಗೇ ಒಬ್ಬನೇ ಪ್ರಯಾಣಿಸಬಲ್ಲೆ ಎಂಬ ಕಾನ್ಫಿಡೆನ್ಸ್‌ ಬಂತು. ಆನಂತರದಲ್ಲಿ ನನಗೇ ಅನ್ನಿಸತೊಡಗಿತು: ಒಂದು ಕಾಲಿಲ್ಲ ಅಷ್ಟೆ. ಅದು ಬಿಟ್ರೆ ಉಳಿದೆಲ್ಲರಂತೆಯೇ ನಾನೂ ನೋಡಬಲ್ಲೆ, ಮಾತಾಡಬಲ್ಲೆ, ಉಸಿರಾಡಬಲ್ಲೆ, ಕಾಲುಗಳಲ್ಲಿಯೇ ನನ್ನ ಇಡೀ ಶಕ್ತಿ ಅಡಗಿಲ್ಲ. ಕಾಲು ಇಲ್ಲದಿದ್ದರೂ ನಾನು ಹಿಮಾಲಯ ತಲುಪಬಲ್ಲೆ!

ಇಂಥದೊಂದು ‘ಫೀಲ್’ ಜೊತೆಯಾದ ಮೇಲೆ, ನನ್ನ ಕಥೆಯನ್ನು ಎಲ್ಲರೊಂದಿಗೂ ಹೇಳಿಕೊಳ್ಳಬೇಕು ಅನ್ನಿಸಿತು. ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಲ್ಲಿ ನನ್ನ ಹೋರಾಟದ ಬದುಕಿನ ಕಥೆಯನ್ನು ಹೇಳಿಕೊಂಡೆ. ಊರುಗೋಲಿನೊಂದಿಗೆ ನಡೆದಾಡುವ, ವ್ಹೀಲ್ಚೇರ್‌ನಲ್ಲಿ ತಿರುಗಾಡುವ ಫೋಟೋಗಳನ್ನು ಹಂಚಿಕೊಂಡೆ. #one leg #oyeitsmystory ಹ್ಯಾಶ್‌ಟ್ಯಾಗ್‌ನಲ್ಲಿ ಎಲ್ಲವನ್ನೂ ಹೆಮ್ಮೆಯಿಂದಲೇ ಬರೆದುಕೊಂಡೆ. ನೋಡನೋಡುತ್ತಲೇ, ನನ್ನ ಪೋಸ್ಟ್‌ಗಳನ್ನು, ಫೋಟೋಗಳನ್ನು ಮೆಚ್ಚುವವರ ಸಂಖ್ಯೆ ಸಾವಿರವನ್ನು ದಾಟಿ, ಲಕ್ಷದ ಗಡಿಯನ್ನೂ ಮುಟ್ಟಿತು! ಕಥೆ ಹೇಳಲು ಹೊರಟವನು, ಕಥಾನಾಯಕನಾಗಿ ಬದಲಾಗಿಬಿಟ್ಟಿದ್ದೆ…

***

ಇದಿಷ್ಟು, ತಸ್ವೀರ್‌ ಮಹಮ್ಮದ್‌ನ ಯಶೋಗಾಥೆ. ಆನಂತರ ಏನೇನಾಗಿದೆ ಗೊತ್ತೆ? ಈತ ಬೈಕ್‌ನಲ್ಲಿ ಒಬ್ಬನೇ ಲಡಾಕ್‌ ಪ್ರಾಂತ್ಯಕ್ಕೆ ಹೋಗಿಬಂದಿದ್ದಾನೆ. one and only ಎಂಬ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾನೆ. ಕೃತಕ ಕಾಲಲ್ಲಿ, ಕ್ರಿಕೆಟ್-ಫ‌ುಟ್ಬಾಲ್ ಆಡಲು ಸಿದ್ಧನಾಗುತ್ತಿದ್ದಾನೆ! ಭಾರತದ ಆರು ಯೂತ್‌ ಐಕಾನ್‌ಗಳಲ್ಲಿ ತಸ್ವೀರ್‌ ಕೂಡ ಒಬ್ಬ ಎಂದು ಫೇಸ್‌ಬುಕ್‌ ಗುರುತಿಸಿದೆ. ಈತನ ಭಾಷಣಗಳಿಗೆ ವಿಪರೀತ ಬೇಡಿಕೆಯಿದೆ. ತಾನು ಎಡವಿಬಿದ್ದ ಪ್ರಸಂಗವನ್ನೂ ಮುಕ್ತವಾಗಿ ಹೇಳಿಕೊಳ್ಳುವ ಈತ ನಿಮ್ಮೊಳಗೂ ಒಬ್ಬ ಹೀರೋ ಇದ್ದಾನೆ. ಹಾಗಾಗಿ, ಯಾವ ಸಂದರ್ಭದಲ್ಲೂ ಬದುಕಲ್ಲಿ ಭರವಸೆ ಕಳೆದುಕೊಳ್ಳಬೇಡಿ ಅನ್ನುತ್ತಿದ್ದಾನೆ!

-ಎ.ಆರ್‌ .ಮಣಿಕಾಂತ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ