ಫೋನ್‌ ಮಾಡೋಣ ಅಂದರೆ, ನಿನ್ನ ನಂಬರ್‌ ಗೊತ್ತಿರಲಿಲ್ಲ…

Team Udayavani, Oct 13, 2019, 5:37 AM IST

ಗಂಡನಿಗೆ ಒಳ್ಳೆಯ ನೌಕರಿಯಿದೆ. ಮಡಿಲಲ್ಲಿ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಒಂದಷ್ಟು ಬ್ಯಾಂಕ್‌ ಬ್ಯಾಲೆನ್ಸ್‌ ಇದೆ. ಸಾಹಿತ್ಯ, ಸಂಗೀತ, ನೃತ್ಯ… ಹೀಗೆ, ವಿವಿಧ ಕೇತ್ರಗಳಲ್ಲಿ ಆಸಕ್ತಿಯೂ ಇದೆ. ಹೀಗೆಲ್ಲ ಇದ್ದಾಗ ಗೃಹಿಣಿ ಏನು ಮಾಡ್ತಾಳೆ ಹೇಳಿ? ಹೊಸದೊಂದು ಮನೆ ಕಟ್ಟುವ, ಉದ್ಯಮ ಆರಂಭಿಸುವ, ಭವಿಷ್ಯದ ದಿನಗಳ ಕುರಿತು ಪ್ಲಾನ್‌ ಮಾಡುವುದರಲ್ಲಿ ಬ್ಯುಸಿ ಆಗುತ್ತಾಳೆ. ಆದರೆ, ಯಶ್ಮಿತಾ ಕೆನೆತ್‌ ಅಂಥವರಲ್ಲ. ಇಬ್ಬರು ಸ್ವಂತ ಮಕ್ಕಳನ್ನು ಹೊಂದಿದ ನಂತರವೂ, ಮತ್ತೂಂದು ಮಗುವನ್ನು, ಅದೂ ಅಂಗವಿಕಲ ಹೆಣ್ಣುಮಗುವನ್ನು ದತ್ತು ಪಡೆದು, ಆಕೆಯನ್ನು ಮಹಾರಾಣಿಯಂತೆ ಸಾಕುತ್ತಿದ್ದಾರೆ. ನೀವೀಗ ಓದಲಿರುವುದು ಯಶ್ಮಿತಾ ಎಂಬ ಕರುಣಾದ್ರ ಮನಸ್ಸಿನ ಅಮ್ಮನ ಕಥೆಯನ್ನೇ.

ಯಶ್ಮಿತಾ, ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯವರು. ಪತಿ ಮತ್ತು ಮಕ್ಕಳೊಂದಿಗೆ ಈಗ ಪುಣೆಯಲ್ಲಿ ನೆಲೆಸಿದ್ದಾರೆ. “ಹೆತ್ತವರಿಗೆ ಹೆಣ್ಣು ಭಾರ’, “ಹೆಣ್ಣು ಮಗು ಹುಣ್ಣು ಇದ್ದಂತೆ’ ಎಂದೆಲ್ಲ ಯೋಚಿಸುವ ಜನರೇ ಹೆಚ್ಚಿರುವ ಈ ಸಮಾಜದಲ್ಲಿ, ಸ್ವಂತ ಮಕ್ಕಳನ್ನು ಹೊಂದಿದ ನಂತರವೂ ಹೆಣ್ಣು ಮಗುವನ್ನು ದತ್ತು ಪಡೆದದ್ದು ಯಾಕೆ? ಆ ಮಗುವಿನಿಂದ ತಮ್ಮ ಬದುಕಿನಲ್ಲಿ ಏನೇನೆಲ್ಲಾ ಬದಲಾವಣೆ ಆಯಿತು ಎಂಬುದನ್ನು ಅವರಿಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಓದಿಕೊಳ್ಳಿ.

“ಅನಾಥ ಮಕ್ಕಳನ್ನು ದತ್ತು ಪಡೆದು ಸಾಕುವುದು ಬಹಳ ಶ್ರೇಷ್ಠ ಕೆಲಸ- ಇಂಥದೊಂದು ಸಾಲನ್ನು ನಾನು ಓದಿದ್ದುಕಾಲೇಜು ದಿನಗಳಲ್ಲಿ. ಮುಂದೆ, ನಾನೂ ಒಂದು ಮಗುವನ್ನು ದತ್ತು ತಗೋಬೇಕು ಎಂಬ ನಿರ್ಧಾರ, ಅವತ್ತೇ ನನ್ನ ಜೊತೆಯಾಯ್ತು. ಮದುವೆಯಾದಾಗ, ನನ್ನ ಗಂಡನಿಗೂ ಅದನ್ನೇ ಹೇಳಿದೆ. ಈ ಮಾತಿನಿಂದ ಅವರಿಗೆ ಸಂತೋಷವಾದಂತೆ ಕಾಣಲಿಲ್ಲ. “ನೋಡುವಾ; ಒಂದು ಗಂಡು, ಒಂದು ಹೆಣ್ಣು ಮಗು ಬೇಕೂಂತ ನನ್ನಾಸೆ. ನಮಗೆ ಮಕ್ಕಳಾಗದಿದ್ರೆ ದತ್ತು ತಗೊಳ್ಳುವ’ ಅಂದರು. ಕೆಲ ದಿನಗಳ ನಂತರ, ನಾನು ಗಂಡು ಮಗುವಿನ ತಾಯಿಯಾದೆ. ಮೂರು ವರ್ಷದ ನಂತರ ಮತ್ತೆ ಗರ್ಭಿಣಿಯಾದೆ- ಈ ಬಾರಿ ನಮಗೆ ಹೆಣ್ಣುಮಗುವಾದರೆ ಸಾಕು ಎಂದರು ನನ್ನ ಪತಿರಾಯ. ಒಂದು ಗಂಡು-ಒಂದು ಹೆಣ್ಣು ಮಗು ಬೇಕೆನ್ನುವುದು ಅವರ ಬಯಕೆಯಾಗಿತ್ತು ಅಂದೆನಲ್ಲವೆ? ಅಕಸ್ಮಾತ್‌ ಈಗ ಹೆಣ್ಣು ಮಗು ಆಗಿಬಿಟ್ಟರೆ, ಒಂದು ಮಗುವನ್ನು ದತ್ತು ಪಡೆಯಬೇಕು ಎಂಬ ಆಸೆ ಈಡೇರುವುದೇ ಇಲ್ಲ ಅನ್ನಿಸಿತು. ನಾನಾಗ ಮೌನವಾಗಿ ದೇವರನ್ನು ಪ್ರಾರ್ಥಿಸಿದೆ: ದೇವರೇ, ನನಗೆ ಈ ಬಾರಿಯೂ ಗಂಡು ಮಗುವನ್ನೇ ಕರುಣಿಸು. ಆ ಮೂಲಕ, ಹೆಣ್ಣುಮಗುವನ್ನು ದತ್ತು ಪಡೆಯಲು ಅವಕಾಶ ಕಲ್ಪಿಸು…

ದೇವರು, ನನ್ನ ಪ್ರಾರ್ಥನೆಯನ್ನು ಕೇಳಿಸಿಕೊಂಡ. ಎರಡನೆಯದೂ ಗಂಡು ಮಗು ಎಂದು ಗೊತ್ತಾದಾಗ, ಆಯ್ತು ನಿನ್ನ ಆಸೆಯಂತೆಯೇ ಹೆಣ್ಣು ಮಗುವೊಂದನ್ನು ದತ್ತು ಪಡೆಯೋಣ ಎಂದು ಯಜಮಾನರು ಹೇಳಿದರು. ಕಿರಿಯ ಮಗನಿಗೆ ಒಂದು ವರ್ಷ ಆಗುತ್ತಿದ್ದಂತೆಯೇ, ಮಗುವೊಂದನ್ನು ದತ್ತು ಪಡೆಯುವ ಕೆಲಸಕ್ಕೆ ನಾವು ಚಾಲನೆ ನೀಡಿದೆವು.

ಹಾಲುಗಲ್ಲದ ಹಸುಳೆಯನ್ನು ತಂದು ಸಾಕುವುದು ಬಹಳ ರಿಸ್ಕಿ ಎಂಬುದು ಕೆಲವೇ ದಿನಗಳಲ್ಲಿ ನಮಗೂ ಅರ್ಥವಾಯಿತು. ಹಾಗಾಗಿ, 2-4 ವರ್ಷದೊಳಗಿನ ಮಗುವನ್ನು ದತ್ತು ಪಡೆಯಲು ನಿರ್ಧರಿಸಿದೆವು. ಅದಕ್ಕಿಂತ ಮೊದಲು, ಹೊಸ ಸದಸ್ಯನ ಕುರಿತು, ನಮ್ಮ ಮಕ್ಕಳಿಗೂ ತಿಳಿಸಬೇಕಿತ್ತು. ಇಬ್ಬರ ಮನದಲ್ಲೂ, ಮೂರನೇ ಮಗುವಿಗೆ ವಿಶೇಷ ಸ್ಥಾನ ಸಿಗುವಂತೆ ನೋಡಿಕೊಳ್ಳಬೇಕಿತ್ತು. ಮಕ್ಕಳನ್ನು ಎದುರಿಗೆ ಕೂರಿಸಿಕೊಂಡು-“ಕೆಲವು ಮಕ್ಕಳಿಗೆ ಯಾವ್ಯಾವುದೋ ಕಾರಣದಿಂದ ಪೇರೆಂಟ್ಸ್‌ ಇರುವುದಿಲ್ಲ. ಅವರೆಲ್ಲ ಹಾಸ್ಟೆಲ್‌ನಲ್ಲಿ ಇರ್ತಾರೆ. ಅಂಥ ಒಂದು ಹೆಣ್ಣುಮಗುವನ್ನು ಹಾಸ್ಟೆಲ್‌ನಿಂದ ತಗೊಂಡು ಬರೋಣ. ಅವಳನ್ನು ನಾವೇ ಸಾಕೋಣ…ಆಗಬಹುದಾ? ಅವಳಿಗೂ ಮನೇಲಿ ಜಾಗ ಕೊಡ್ತೀರಾ? ಅವಳ ಜೊತೆ ಆಟ ಆಡಿಕೊಂಡು ಇರಿ¤àರಾ?’ ಎಂದೆಲ್ಲಾ ಕೇಳಿದೆ. ನನ್ನ ಮಕ್ಕಳು, ಸಂಭ್ರಮದಿಂದ ಒಪ್ಪಿಗೆ ಕೊಟ್ಟರು. ಅಷ್ಟೇ ಅಲ್ಲ, ಅಮ್ಮಾ, ಯಾವಾಗ ಹೊಸ ಪಾಪು ಬರ್ತದೆ? ಅವಳನ್ನು ಯಾವತ್ತು ಕರೊRಂಡು ಬರಿ¤àಯ? ಎಂದೆಲ್ಲಾ ಪ್ರಶ್ನಿಸಲು ಮುಂದಾದರು. ಮತ್ತೂಂದು ಜೀವವನ್ನು ಸ್ವಾಗತಿಸಲು ಮಕ್ಕಳು ರೆಡಿಯಾಗಿದ್ದಾರೆ ಎಂಬುದು ಖಚಿತವಾದ ಮೇಲೆ, ನನ್ನ ಉತ್ಸಾಹಕ್ಕೆ ರೆಕ್ಕೆ ಬಂದಿತು. ಮರುದಿನದಿಂದಲೇ ಅನಾಥ ಮಕ್ಕಳನ್ನು ಹೊಂದಿರುವ ಆಶ್ರಮಗಳು, ಅಲ್ಲಿರುವ ಹೆಣ್ಣು ಮಕ್ಕಳು, ಅವರ ಹಿನ್ನೆಲೆಯನ್ನು ಚೆಕ್‌ ಮಾಡುತ್ತಾ ಹೋದೆ. ಆಗ ಗೊತ್ತಾದ ಸಂಗತಿಯೆಂದರೆ-ಅಂಗವಿಕಲ ಮಕ್ಕಳನ್ನು ದತ್ತು ಪಡೆದವರ ಸಂಖ್ಯೆ ವಿಪರೀತ ಕಡಿಮೆಯಿತ್ತು. ಎಲ್ಲರೂ, ಚೆನ್ನಾಗಿರುವ ಮಕ್ಕಳ ಕಡೆಗೆ ಮಾತ್ರ ಗಮನ ಹರಿಸಿದರೆ, ಈ ಪಾಪದ ಮಕ್ಕಳ ಗತಿಯೇನು ಅನ್ನಿಸಿತು. ನನ್ನ ಗಂಡನೂ ಇದೇ ಮಾತು ಹೇಳಿದರು. ತಕ್ಷಣ ನಾನು-“ಒಂದು ಅಂಗವಿಕಲ ಹೆಣ್ಣು ಮಗುವನ್ನೇ ದತ್ತು ಪಡೆಯೋಣ ರೀ’ ಅಂದೆ. ಯಜಮಾನರು, ಅದಕ್ಕೂ ಒಪ್ಪಿದರು.

ಆಮೇಲೆ ನಾವು ತಡಮಾಡಲಿಲ್ಲ. ನಮ್ಮ ಹೆತ್ತವರಿಗೆ, ಬಂಧುಗಳಿಗೆ ಈ ವಿಷಯ ತಿಳಿಸಿದೆವು. ಹೆಣ್ಣು ಮಗು, ಅದೂ ಏನು? ಅಂಗವಿಕಲಮಗೂನ ದತ್ತು ತಗೊಳ್ತಾ ಇದೀವಿ ಅಂದಾಗ ಕೆಲವರು ಗಾಬರಿಯಾದರು. ಹೆಣ್ಣು ಮಗೂನ ಸಾಕುವುದು ಬಹಳ ಕಷ್ಟ. ಎರಡೆರಡು ಬಾರಿ ಯೋಚನೆ ಮಾಡಿ ಮುಂದುವರೀರಿ ಅಂದರು. ಈ ಹೊತ್ತಿಗಾಗಲೇ-ಹೆಣ್ಣುಮಗು ಬೇಕೇ ಬೇಕು ಎಂಬ ತುಡಿತ ನಮಗೆ ಬಂದುಬಿಟ್ಟಿತ್ತು. ಹಾಗಾಗಿ, ಆಗಿದ್ದಾಗಲಿ ಅಂದುಕೊಂಡು, ನಮಗೆ ಒಪ್ಪಿಗೆಯಾಗುವಂಥ ಮಗುವಿನ ಹುಡುಕಾಟಕ್ಕೆ ಮುಂದಾದೆವು. ಕಂಪ್ಯೂಟರಿನ ಮುಂದೆ ಕೂರುವುದು, ಒಂದೊಂದೇ ಆಶ್ರಮದ, ಅಲ್ಲಿರುವ ಮಕ್ಕಳ ಚಿತ್ರ-ವಯಸ್ಸು, ಹಿನ್ನೆಲೆ ಗಮನಿಸುವುದೇ ನನ್ನ ಕೆಲಸವಾಯಿತು.

ಹೀಗೇ ಹದಿನೈದಿಪ್ಪತ್ತು ದಿನಗಳು ಕಳೆದವು. ಪ್ರತಿಯೊಂದು ಮಗುವನ್ನು ನೋಡಿದಾಗಲೂ ಮಾತಲ್ಲಿ ವಿವರಿಸಲು ಆಗದಂಥ ಫೀಲ್‌ ಉಂಟಾಗುತ್ತಿತ್ತು. ಅವತ್ತೂಂದು ದಿನ, ಒಂದು ಮಗುವಿನ ಫೋಟೋ ಕಾಣಿಸಿತು. ಯಾಕೋ ಕಾಣೆ: ಅಲ್ಲಿಂದ ಕಣ್ಣು ಕೀಲಿಸಲು ಮನಸ್ಸೇ ಬರಲಿಲ್ಲ. ಆ ಮಗು, ಕಂಪ್ಯೂಟರಿನ ಒಳಗಿಂದಲೇ-“ಅಮ್ಮಾ’ ಎಂದು ಕರೆದಂತೆ ಭಾಸವಾಗಿಬಿಡು¤. ಲವ್‌ ಅಟ್‌ ಫ‌ಸ್ಟ್‌ ಸೈಟ್‌ ಅಂತಾರಲ್ಲ: ಹಾಗೆ, ಮೊದಲ ನೋಟದಲ್ಲೇ ಆ ಮಗುವಿನ ಮುದ್ದು ನೋಟ ನನ್ನನ್ನು ಮರುಳು ಮಾಡಿತು. ತಕ್ಷಣ ಯಜಮಾನರಿಗೆ ಹೇಳಿದೆ: ನಮಗೆ ಇದೇ ಮಗು ಇರಲಿ!

2ರಿಂದ 4 ವರ್ಷದೊಳಗಿನ ಮಗುವಿಗಾಗಿ ನಾವು ಹಂಬಲಿಸಿದ್ವಿ. ಆದರೆ, ಮಗುವನ್ನು ದತ್ತು ಪಡೆಯುವುದು ಒಂದೆರಡು ದಿನದಲ್ಲಿ ಆಗುವ ಕೆಲಸವಲ್ಲ. ಅದಕ್ಕೂ ಹಲವು ನಿಯಮಗಳಿವೆ. ಕಾನೂನುಗಳಿವೆ. ಅವನ್ನೆಲ್ಲ ಪಾಲಿಸುವ ವೇಳೆಗೆ ಒಂದು ವರ್ಷವೇ ಆಗಿಬಿಡು¤. ಹಾಗಾಗಿ, ಮಗಳು ಮನೆಗೆ ಬಂದಾಗ, ಅವಳಿಗೆ 5 ವರ್ಷ ತುಂಬಿತ್ತು.

ಅಂಗವಿಕಲ ಹೆಣ್ಣು ಮಗೂನ ದತ್ತು ತಗೊಂಡೆ ಅಂದೆನಲ್ವ? ಅವಳಿಗೆ ರುತ್‌ ಎಂದು ಹೆಸರಿಟ್ಟೆವು. ನಮ್ಮ ಮಗಳಿಗೆ, ಎಡಗಾಲಿನಲ್ಲಿ ಮಂಡಿಯ ಕೆಳಗಿನ ಭಾಗ ಇರಲಿಲ್ಲ. ಬಲಗಾಲಿನಲ್ಲಿ ಪಾದ ತಿರುಚಿಕೊಂಡಿತ್ತು. ಎರಡೂ ಕಾಲುಗಳಲ್ಲಿ ತೊಂದರೆ. ಆಕೆ, ಎಲ್ಲಾ ಕೆಲಸವನ್ನೂ ಮಂಡಿಯ ಮೇಲೆ ಕೂತುಕೊಂಡೇ ಮಾಡುತ್ತಿದ್ದಳು. ಇಂಥದೊಂದು ದೈಹಿಕ ತೊಂದರೆಯು ಮಗು ಮನೆಗೆ ಬಂದಾಗ, ಉಳಿದವರು ಅವಳನ್ನು ಗೇಲಿ ಮಾಡುವ ನಮ್ಮ ಮಧ್ಯೆ ಇವಳ್ಯಾಕೆ ಬಂದಳ್ಳೋ ಎಂದು ಯೋಚಿಸುವ ಸಾಧ್ಯತೆಗಳಿರುತ್ತವೆ. ಇದನ್ನೆಲ್ಲ ಯೋಚಿಸಿ, ನನ್ನ ಮಕ್ಕಳನ್ನೂ ಎದುರು ಕೂರಿಸಿಕೊಂಡು ಹೇಳಿದೆ: “ಈಗ ಮನೆಗೆ ಬಂದಿರೋದು ದೇವರ ಮಗು. ಅವಳನ್ನು ಮುದ್ದಾಗಿ ಬೆಳೆಸಬೇಕು. ಅದು ನಮ್ಮ ಜವಾಬ್ದಾರಿ. ಅವಳು ಬಂದಿರುವುದರಿಂದ ನಿಮಗೆ ಏನೂ ಕಡಿಮೆಯಾಗಲ್ಲ. ಬದಲಿಗೆ, ಅಕ್ಕ-ತಂಗಿಯ ಪ್ರೀತಿ ಸಿಗುತ್ತೆ…’ ಎಂದೆಲ್ಲ ವಿವರಿಸಿದೆ. ಪುಣ್ಯಕ್ಕೆ, ನನ್ನ ಮಕ್ಕಳು, ಎಲ್ಲವನ್ನೂ ಅರ್ಥಮಾಡಿಕೊಂಡರು.

ಅನಾಥಾಶ್ರಮ ಅಂದಮೇಲೆ, ಅವರಿಗೂ ನೂರೆಂಟು ಸಮಸ್ಯೆಗಳಿರುತ್ತವೆ. ಅದೇ ಕಾರಣದಿಂದ, ಈ ಮಗುವಿಗೆ ಆಪರೇಷನ್‌ ಮಾಡಿಸುವ, ಅವಳಿಗೆ ಕೃತಕ ಕಾಲು ಅಳವಡಿಸುವ ಕೆಲಸವೇ ಆಗಿರಲಿಲ್ಲ.”ಕಾಲಿಲ್ಲದ ಮಗು’ ಎಂಬ ಯೋಚನೆಯೇ ಅವಳಿಗೆ ಬಾರದಂತೆ ಬೆಳೆಸಬೇಕು ಎಂದು ಯೋಚಿಸಿದ್ದರಿಂದ, ದತ್ತು ಪಡೆಯುವ ಮೊದಲೇ ಹತ್ತಾರು ವೈದ್ಯರನ್ನು ಸಂಪರ್ಕಿಸಿದ್ದೆ. ಅವರಿಂದ, ಸಲಹೆಯನ್ನೂ ಪಡೆದಿದ್ದೆ. ಮಗಳನ್ನು ಎದುರು ಕೂರಿಸಿಕೊಂಡು, ಕೃತಕ ಕಾಲಿನ ಬಳಕೆ, ಅದರಿಂದ ಇರುವ ಅನುಕೂಲವನ್ನೆಲ್ಲ ವಿವರವಾಗಿ ಹೇಳಿದ್ದೆ.

ಹಾಲುಗಲ್ಲದ ಕಂದಮ್ಮಗಳೇ ದತ್ತು ಮಕ್ಕಳಾಗಿ ಬಂದರೆ, ಪೋಷಕರ ಜೊತೆಗೆ ಬೇಗ ಹೊಂದಿಕೊಳ್ತಾರೆ. ಆದರೆ, ನಮ್ಮ ಪಾಲಿಗೆ ಸಿಕ್ಕವಳು 5 ವರ್ಷದ ಬಾಲೆ. ಯಾರೋ ಅಪರಿಚಿತರನ್ನು ಮಮ್ಮಿ-ಡ್ಯಾಡಿ ಅನ್ನುವುದು, ಗೊತ್ತಿಲ್ಲದ ಜಾಗವನ್ನು ನಮ್ಮ ಮನೆ ಎಂದು ಭಾವಿಸುವುದು ಅವಳಿಗೂ ಕಷ್ಟವಾಗಿತ್ತು ಅನಿಸುತ್ತೆ. ಆಕೆ ಆರಂಭದಲ್ಲಿ ನಮ್ಮಿಂದ ಒಂದು ಅಂತರ ಕಾಯ್ದುಕೊಂಡಂತೆಯೇ ಇದ್ದಳು. ಹೆಚ್ಚಿನ ಸಂದರ್ಭಗಳಲ್ಲಿ, ನನ್ನ ದೊಡ್ಡ ಮಗನನ್ನೇ ಫಾಲೋ ಮಾಡ್ತಾ ಇದ್ದಳು. ಅಂದರೆ, ಅವನು ಏನು ಮಾಡ್ತಾನೋ, ಅದನ್ನೇ ಇವಳೂ ಮಾಡ್ತಾ ಇದ್ದಳು. ಬಹುಶಃ ಭಯ ಮತ್ತು ಕೀಳರಿಮೆಯ ಕಾರಣಕ್ಕೆ ಹೀಗೆ ಮಾಡ್ತಿರಬಹುದು ಅನ್ನಿಸ್ತು. “ನೋಡೂ, ಇದು ನಿನ್ನ ಮನೆ. ನಿನಗೆ ಏನಿಷ್ಟವೋ ಅದನ್ನು ಮಾಡು. ಯಾರನ್ನೂ ಫಾಲೋ ಮಾಡಬೇಡ’ ಅಂದೆ. “ಸರಿ’ ಅನ್ನುವಂತೆ ತಲೆಯಾಡಿಸಿ ಸುಮ್ಮನಾದಳು.

ನಮಗೋ, ಹೊಸದೊಂದು ಮಗುವನ್ನು ಮನೆ ತುಂಬಿಸಿಕೊಂಡ ಸಡಗರ, ಅವಳಿಗೋ- ಬೇರೊಂದು ಜಾಗಕ್ಕೆ ದಾರಿ ತಪ್ಪಿ ಬಂದಂಥ ಗೊಂದಲ- ಇಬ್ಬರಿಗೂ ಒಂದೊಂದು ಬಗೆಯ ತಳಮಳ. ಬಯಸಿ ತಂದ ಮಗುವಲ್ಲವೆ? ಅವಳನ್ನು ತಬ್ಬಿ ಮುದ್ದಾಡಬೇಕು. ಲಾಲಿ ಹಾಡಿ ಚುಕ್ಕು ತಟ್ಟಬೇಕು, ತೊಡೆಯ ಮೇಲೆ ಕೂರಿಸಿಕೊಳ್ಳಬೇಕು ಎಂದೆಲ್ಲಾ ನನಗೆ ಆಸೆಯಾಗುತ್ತಿತ್ತು. ನಾನು ಹಾಗೇನಾದರೂ ಮಾಡಲು ಮುಂದಾದರೆ, ನನ್ನ ಮಗಳು ಮುಖ ಕಿವುಚುತ್ತಿದ್ದಳು. ನಂಗಿದೆಲ್ಲಾ ಇಷ್ಟ ಆಗಲ್ಲ ಅಂದುಬಿಡುತ್ತಿದ್ದಳು. ಆಗೆಲ್ಲಾ ಸಂಕಟ ಆಗುತ್ತಿತ್ತು. ಆದರೆ, ಒಂದು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಸಮಯ ಬೇಕು. ಈ ಮನೆ, ಇಲ್ಲಿನ ಜನ, ಅವರ ಪ್ರೀತಿ ಅರ್ಥವಾಗಿ, ಈ ಮುದ್ದು ಮಗಳು ಆದ್ರìವಾಗಿ “ಅಮ್ಮಾ’ ಎನ್ನುವಂಥ ಸಂದರ್ಭವೊಂದು ಬಂದೇ ಬರುತ್ತೆ. ತಾಳ್ಮೆಯಿಂದ ಕಾಯಬೇಕಷ್ಟೇ… ಎಂದು ನನ್ನ ಒಳ ಮನಸ್ಸು ಪಿಸುಗುಡುತ್ತಿತ್ತು.

ದಿನಗಳು ಉರುಳುತ್ತಿದ್ದವು. ಮಕ್ಕಳು ಬೆಳೆಯುತ್ತಿದ್ದರು. ಅವತ್ತೂಂದು ದಿನ, ನನ್ನ ಮಗಳು “ಅಮ್ಮಾ’ ಅಂದಳು. ಮಾತಾಡು ಕಂದಾ ಅಂದೆ. “ಅಮ್ಮನ ಪ್ರೀತಿ ವಾತ್ಸಲ್ಯಕ್ಕಾಗಿ ಎಷ್ಟೊಂದು ಹಂಬಲಿಸಿದ್ದೆ ಗೊತ್ತೇನಮ್ಮ? ಯಾಕಮ್ಮ ನೀನು ಆಶ್ರಮಕ್ಕೆ ಮೊದಲೇ ಬರಲಿಲ್ಲ. ನನಗೆ ನಿನ್ನ ಫೋನ್‌ ನಂಬರ್‌ ಗೊತ್ತಿರಲಿಲ್ಲ. ಗೊತ್ತಿದ್ದರೆ, ಖಂಡಿತ ನಿನಗೆ ಕಾಲ್‌ ಮಾಡಿ, ನಾನು ಇಲ್ಲಿದೀನಿ. ಬೇಗ ಬಂದು ಕರ್ಕೊಂಡು ಹೋಗಮ್ಮಾ ಅನ್ನುತ್ತಿದ್ದೆ. ಅಮ್ಮ ಬೇಕೂ, ನಂಗೆ ಅಮ್ಮ ಬೇಕೂ ಅಂತ ದಿನಾಲೂ ಕೂಗ್ತಾನೇ ಇದ್ದೆ. ಆದರೆ, ನಮ್ಮ ಆಶ್ರಮ ಇಲ್ಲಿಂದ ತುಂಬಾ ದೂರ ಇತ್ತಲ್ವಾ? ಹಾಗಾಗಿ, ನಿನಗೆ ನಾನು ಕೂಗಿದ್ದು ಕೇಳಿಸಿಲ್ಲ. ನಿನ್ನನ್ನು ಬಿಟ್ಟು ನಾನೆಲ್ಲೂ ಹೋಗಲ್ಲಮ್ಮ. ನಂಗೆ ನೀನು ಬೇಕು ಕಣಮ್ಮ…’ ಅಂದುಬಿಟ್ಟಳು. ದೇವರು ಪ್ರತ್ಯಕ್ಷನಾಗಿ ಮಾತಾಡಿದಾಗ ಆಗ್ತದಲ್ಲ. ಅಂಥದ್ದೊಂದು ಥ್ರಿಲ್‌, ಫೀಲಿಂಗ್‌ ನನಗೆ ಆಗಿತ್ತು. ಮಗಳು ಏನು ಮಾತಾಡ್ತಾಳ್ಳೋ ಎಂಬ ಕುತೂಹಲದಿಂದ, ಬಾಗಿಲಲ್ಲೇ ನಿಂತು ಎಲ್ಲವನ್ನೂ ಕೇಳಿಸಿಕೊಂಡ ನನ್ನ ಗಂಡ, ಏನು ಹೇಳಲೂ ತೋಚದೆ ಬಿಕ್ಕಳಿಸತೊಡಗಿದರು.

ಮಗಳು ಬಂದಮೇಲೆ ನಮ್ಮ ಮನೆ ನಂದಗೋಕುಲ ಆಗಿದೆ. ಗಂಡುಮಕ್ಕಳಿಗಿಂತ ಹೆಚ್ಚುಆಸೆಯಿಂದ, ಅಕ್ಕರೆಯಿಂದ ಅವಳನ್ನು ಸಾಕ್ತಾ ಇದ್ದೀವಿ. ಕೃತಕ ಕಾಲುಗಳ ಸಹಾಯದಿಂದ ನನ್ನ ಮಗಳು ಓಡಾಡುವುದಷ್ಟೇ ಅಲ್ಲ, ಜಿಗಿಯುವುದು, ಡ್ಯಾನ್ಸ್‌ ಮಾಡುವುದನ್ನೂ ಕಲಿತಿದ್ದಾಳೆ. ಅವಳನ್ನು ನೋಡಿದಾಗಲೆಲ್ಲ, ದೇವರು ಮಾರುವೇಷದಲ್ಲೇ ನಮ್ಮ ಜೊತೆಗಿದ್ದಾನೆ ಅನಿಸುತ್ತೆ. ಇಂಥದೊಂದು ಫೀಲ್‌ ತಂದುಕೊಡುವ ಮಗಳಿಗೆ ತಾಯಿಯಾಗುವ ಭಾಗ್ಯ ಎಷ್ಟು ಜನಕ್ಕಿದೆ ಹೇಳಿ…ಹೀಗೆನ್ನುತ್ತಾರೆ ಯಶ್ಮಿತಾ. ಈಅಮ್ಮನಿಗೆ ಅಭಿನಂದನೆ ಹೇಳಬೇಕು ಅನ್ನಿಸಿದರೆ yashmitajoyce@gmail.com

ಎ.ಆರ್‌.ಮಣಿಕಾಂತ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ