ಎಲ್ಲವನ್ನೂ ಕೊಟ್ಟ ದೇವರು “ಅವನನ್ನು’ ತೋರಿಸಲಿಲ್ಲ!

ನಮಗೆ ಯಾರೂ ದಿಕ್ಕಿಲ್ಲ ಎಂಬ ಫೀಲ್‌ ಜೊತೆಯಾದಾಗಲೆಲ್ಲಾ, ಆ ಅಪರಿಚಿತ ದಿಢೀರ್‌ ಪ್ರತ್ಯಕ್ಷನಾಗುತ್ತಿದ್ದ...

Team Udayavani, Apr 21, 2019, 6:00 AM IST

ಅಮ್ಮನನ್ನು ಪರೀಕ್ಷಿಸಿದ ವೈದ್ಯರು- “ಐದಾರು ಚೆಕಪ್‌ ಆಗಬೇಕಿದೆ. ಅಡ್ಮಿಟ್‌ ಮಾಡಿಕೊಳ್ತೇವೆ. ಪೇಶಂಟ್‌ ಜೊತೆ ಒಬ್ರು ಇರಬೇಕಾಗುತ್ತೆ. ನೀನು ಹೋಗಿ ಚಾಪೆ-ಬೆಡ್‌ಶೀಟ್‌ ತಗೊಂಡು ಬಂದುಬಿಡು’ ಅಂದರು. ನಾಳೆ, ಒಂದು ಕಾರ್ಡ್‌ ಬರೆದು ಅಪ್ಪನಿಗೆ ಎಲ್ಲ ವಿಷಯ ತಿಳಿಸಬೇಕು ಅಂದುಕೊಂಡೇ ಮನೆಗೆ ಬಂದರೆ- ಮನೆ ಬಾಗಿಲಿಗೆ ನಾವು ಹಾಕಿದ್ದ ಬೀಗ ಮಾಯವಾಗಿತ್ತು. ಅಲ್ಲಿ ಮತ್ತೂಂದು ಬೀಗ ಕಾಣಿಸಿಕೊಂಡಿತ್ತು. ಏನಿದು ವಿಚಿತ್ರ? ಯಾರು ಹೀಗೆಲ್ಲಾ ಮಾಡಿದ್ದು ಎಂದು ಯೋಚಿಸುತ್ತಿದ್ದಾಗಲೇ…

ಇದು, ಪದ್ಮಾವತಿ ಎಂಬ ಶಿಕ್ಷಕಿಯೊಬ್ಬರ ಅನುಭವ ಕಥನ. ಪರೋಪಕಾರವನ್ನು ಮೀರಿಸುವ ಸೇವೆ ಬೇರೊಂದಿಲ್ಲ ಎಂಬುದು ಈ ಕಥೆಯ ತಿರುಳು. “ಹೃದಯಂಗಮ ಪ್ರಸಂಗ’ ಎಂಬ ಶೀರ್ಷಿಕೆಯಲ್ಲಿ “ರೀಡರ್ಸ್‌ ಡೈಜೆಸ್ಟ್‌’ ಪತ್ರಿಕೆ, ಇದನ್ನು ಎರಡು ಬಾರಿ ಪ್ರಕಟಿಸಿದೆ. ಪದ್ಮಾವತಿಯವರ ಬಾಳ ಕಥೆ ನಿಮಗೂ ಇಷ್ಟವಾಗುತ್ತದೆ, ಓದಿಕೊಳ್ಳಿ…

“55 ವರ್ಷಗಳ ಹಿಂದೆ, ಅಂದರೆ 1964ರಲ್ಲಿ ನಡೆದ ಪ್ರಸಂಗ ಇದು. ಅವತ್ತಿನ ಸಂದರ್ಭದಲ್ಲಿ, ಕ್ಲರ್ಕ್‌ ಹುದ್ದೆಯಲ್ಲಿರುತ್ತಿದ್ದ ಸರ್ಕಾರಿ ನೌಕರನ ತಿಂಗಳ ಸಂಬಳ 70 ರುಪಾಯಿ ಆಗಿರುತ್ತಿತ್ತು. ಆಗೆಲ್ಲಾ 15 ರುಪಾಯಿಗೆ ಡಬಲ್‌ ಬೆಡ್‌ರೂಂನ ಚೆಂದದ ಮನೆ ಬಾಡಿಗೆಗೆ ಸಿಗುತ್ತಿತ್ತು. ನಾಲ್ಕೈದು ಜನರಿದ್ದ ಮನೆಯ ತಿಂಗಳ ಖರ್ಚನ್ನು 40 ರುಪಾಯಿಗಳಲ್ಲಿ ನಿಭಾಯಿಸಬಹುದಿತ್ತು.

ಅಪ್ಪ, ಅಮ್ಮ, ನಾನು ಮತ್ತು ಅಣ್ಣ -ಇದಿಷ್ಟೇ ನನ್ನ ಕುಟುಂಬ. ನಾವು ವಾಸವಿದ್ದುದು, ಕನ್ಯಾಕುಮಾರಿಗೆ ಸಮೀಪವಿದ್ದ ನಾಗರ್‌ಕೋಯಿಲ್‌ ಎಂಬ ಪುಟ್ಟ ನಗರದಲ್ಲಿ. ಆ ದಿನಗಳಲ್ಲಿ, ಜನರೆಲ್ಲಾ ಉದ್ಯೋಗ ಅರಸಿಕೊಂಡು ಬಾಂಬೆಗೆ ಹೋಗಿಬಿಡುತ್ತಿದ್ದರು. “ಊರಲ್ಲಿದ್ದು ಉಪಯೋಗವಿಲ್ಲ. ಬಾಂಬೆಯಲ್ಲೇ ಅದೃಷ್ಟ ಪರೀಕ್ಷೆ ಮಾಡೋಣ’ ಎನ್ನುತ್ತಾ ಅಪ್ಪ ಹೊರಟೇಬಿಟ್ಟರು. ಅಣ್ಣನೂ ಅವರನ್ನು ಹಿಂಬಾಲಿಸಿದ. ಊರಲ್ಲಿ, ಒಂದು ಬಾಡಿಗೆ ಮನೆಯಲ್ಲಿ, ನಾನೂ-ಅಮ್ಮನೂ ಉಳಿದುಕೊಂಡೆವು.

ಅಪ್ಪನೂ, ಅಣ್ಣನೂ ಬಾಂಬೆಗೆ ಹೋದಮೇಲೆ, ಅಮ್ಮ ನಿತ್ರಾಣಳಾಗಿ ಹಾಸಿಗೆ ಹಿಡಿದುಬಿಟ್ಟಳು. ಸರಿಯಾಗಿ ಕಣ್ಣು ಬಿಡುವುದಕ್ಕೂ ಅವಳಿಂದ ಆಗುತ್ತಿರಲಿಲ್ಲ. ಓಡಾಡುವುದಂತೂ ದೂರದ ಮಾತಾಯಿತು. ಸದಾ ಹಾಸಿಗೆಯಲ್ಲಿ ಮಲಗೇ ಇರುತ್ತಿದ್ದಳು. ಕೆಲವೊಮ್ಮೆ, ಕಂಗಳು ತೆರೆದೇ ಇರುತ್ತಿದ್ದವು. ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಕಣ್ಮುಚ್ಚಿಕೊಂಡುಬಿಡುತ್ತಿದ್ದಳು. ಅವಳ ಅನಾರೋಗ್ಯ, ಆಕೆಯ ಸಂಕಟದ ತೀವ್ರತೆ ಕಂಡಾಗೆಲ್ಲ, ಅಮ್ಮನಿಗೆ ಏನೋ ಕೆಟ್ಟದು ಆಗಿಬಿಡ್ತದೆ ಎಂಬ ಅನೂಹ್ಯ ಭಯವೊಂದು ನನ್ನನ್ನು ಬಿಡದೇ ಕಾಡುತ್ತಿತ್ತು. ನಾನು ಅದೆಷ್ಟರಮಟ್ಟಿಗೆ ಹೆದರಿಹೋಗಿದ್ದೆನೆಂದರೆ, ಆಗಾಗ್ಗೆ ಅಮ್ಮನ ಎದೆಯ ಮೇಲೆ ಕಿವಿಯಿಟ್ಟು, ಆಕೆಯ ಎದೆಯ ಬಡಿತ ಕೇಳಿಸಿಕೊಂಡು- ಸದ್ಯ, ಅಮ್ಮನಿಗೆ ಏನೂ ಆಗಿಲ್ಲ. ಆಕೆ ಬದುಕಿದ್ದಾಳೆ ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದೆ.

ಹೀಗೆಲ್ಲಾ ಯೋಚಿಸುತ್ತಿದ್ದ ಸಂದರ್ಭದಲ್ಲಿ, ನನಗೆ 15 ವರ್ಷವಾಗಿತ್ತು. ಆದರೆ ರೋಗಿಯನ್ನಾಗಲಿ, ಅವರ ಜೀವನವನ್ನಾಗಲಿ ಅರ್ಥ ಮಾಡಿಕೊಳ್ಳುವಂಥ ತಿಳಿವಳಿಕೆ ಇರಲಿಲ್ಲ. “ಅಪ್ಪ-ಅಣ್ಣ ಬಾಂಬೆಗೆ ಹೋದರೆ ನನಗೇನು? ಮನೇಲಿ ಅಮ್ಮ ಇರುತ್ತಾಳೆ. ಅವಳ ಕಣ್ಗಾವಲಿನಲ್ಲಿ ಆರಾಮಾಗಿ ಇರಬಹುದು’ ಎಂದಷ್ಟೇ ನಾನು ಯೋಚಿಸಿದ್ದೆ. ಆದರೆ, ಅಮ್ಮ ಹಾಸಿಗೆ ಹಿಡಿದಿದ್ದರಿಂದ, ಏನು ಮಾಡಬೇಕೆಂದೇ ತೋಚದೆ ನಾನು ಒದ್ದಾಡುತ್ತಿದ್ದೆ. ನಾನು ಶಾಲೆಗೆ ಹೋದ ನಂತರ ಅಮ್ಮನ ಆರೋಗ್ಯ ಹದಗೆಟ್ಟು ಆಕೆಗೆ ಏನಾದರೂ ಆಗಿಬಿಟ್ಟರೆ? ಎಂಬ ಅನುಮಾನವೂ-ಭಯವೂ ಜೊತೆಯಾದದ್ದು ಆಗಲೇ. ಶಾಲೆಗಿಂತ ಅಮ್ಮನೇ ಮುಖ್ಯ ಎಂದು ನನಗೆ ನಾನೇ ಹೇಳಿಕೊಂಡು ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆಯುತ್ತಿದ್ದೆ.

ನಾನು ಅದೆಷ್ಟೇ ಕೇರ್‌ ತೆಗೆದುಕೊಂಡರೂ ಪ್ರಯೋಜನವಾಗಲಿಲ್ಲ. ಅದೊಂದು ದಿನ, ಅಮ್ಮ ವಿಪರೀತ ಸುಸ್ತಾದಳು. ಉಸಿರಾಡಲು ಕಷ್ಟವಾಗಿ ತೇಲುಗಣ್ಣು-ಮೇಲುಗಣ್ಣು ಬಿಡತೊಡಗಿದಳು. ತಕ್ಷಣ ಆಸ್ಪತ್ರೆಗೆ ಒಯ್ಯದಿದ್ದರೆ ಕಷ್ಟವಾಗುತ್ತೆ ಅನ್ನಿಸಿತು. ಅವತ್ತಿನ ದಿನಗಳಲ್ಲಿ ಎಲ್ಲರೂ ಸರ್ಕಾರಿ ಆಸ್ಪತ್ರೆಗೇ ಹೋಗಬೇಕಿತ್ತು. ಆಸ್ಪತ್ರೆಗೆ ನಮ್ಮ ಮನೆಯಿಂದ ಟ್ಯಾಕ್ಸಿಯಲ್ಲಿ ಒಂದು ಗಂಟೆಯ ಪ್ರಯಾಣ. ಬಾಡಿಗೆ 2 ರುಪಾಯಿ. ಅವತ್ತು ನನ್ನ ಬಳಿ ಅಷ್ಟು ಹಣವೂ ಇರಲಿಲ್ಲ. ಹಾಗಂತ ಸುಮ್ಮನೆ ಕೂರಲಾದೀತೆ? ಪರಿಚಯದವರ ಮನೆಗಳಿಗೆ ಹೋಗಿ ಕಾಡಿಬೇಡಿ ಹಣ ಹೊಂದಿಸಿ, ಒಂದು ಟ್ಯಾಕ್ಸಿಯನ್ನು ಬಾಡಿಗೆಗೆ ಹಿಡಿದೆ.

ಆಸ್ಪತ್ರೆಯೊಳಗೆ ಹೋಗುವ ಮುನ್ನ, ಟಾಕ್ಸಿ ಡ್ರೆçವರ್‌ಗೆ ಹಣ ನೀಡಲು ಹೋದೆ. ಆತ- “ದುಡ್ಡು ಬೇಡಮ್ಮ, ನಿನ್ನಲ್ಲೇ ಇಟ್ಕೊ. ಆಸ್ಪತ್ರೆ ಅಂದಮೇಲೆ ಊಟ, ತಿಂಡಿ, ಮಾತ್ರೆ… ಹೀಗೆಲ್ಲಾ ಖರ್ಚು ಬರುತ್ತೆ. ಒಂದು ಗಂಟೆ ಬಿಟ್ಟು ಮತ್ತೆ ವಾಪಸ್‌ ಬರ್ತೇನೆ. ಗೇಟ್‌ ಹತ್ರ ಕಾದಿರ್ತೇನೆ. ಅಷ್ಟರಲ್ಲಿ ಚೆಕಪ್‌ ಮುಗಿದ್ರೆ ಮನೆಗೆ ಡ್ರಾಪ್‌ ಮಾಡ್ತೇನೆ’ ಅಂದ. ಆ ಅಪರಿಚಿತ ಬಂಧುವಿನ ಮಾತಿಗೆ ಹೇಗೆ ಉತ್ತರಿಸುವುದೆಂದೇ ತಿಳಿಯಲಿಲ್ಲ. ಕೃತಜ್ಞತಾಭಾವದಿಂದ ಕೈಮುಗಿದು ಆಸ್ಪತ್ರೆಯೊಳಗೆ, ನಡೆದುಬಂದೆ.

ಅಮ್ಮನನ್ನು ಪರೀಕ್ಷಿಸಿದ ವೈದ್ಯರು- “ಐದಾರು ಚೆಕಪ್‌ ಆಗಬೇಕಿದೆ. ಅಡ್ಮಿಟ್‌ ಮಾಡಿಕೊಳೆ¤àವೆ. ಪೇಶಂಟ್‌ ಜೊತೆ ಒಬ್ರು ಇರಬೇಕಾಗುತ್ತೆ. ನೀನು ಹೋಗಿ ಚಾಪೆ-ಬೆಡ್‌ಶೀಟ್‌ ತಗೊಂಡು ಬಂದುಬಿಡು’ ಅಂದರು. ನಾಳೆ, ಒಂದು ಕಾರ್ಡ್‌ ಬರೆದು ಅಪ್ಪನಿಗೆ ಎಲ್ಲ ವಿಷಯ ತಿಳಿಸಬೇಕು ಅಂದುಕೊಂಡೇ ಮನೆಗೆ ಬಂದರೆ- ಮನೆ ಬಾಗಿಲಿಗೆ ನಾವು ಹಾಕಿದ್ದ ಬೀಗ ಮಾಯವಾಗಿತ್ತು. ಅಲ್ಲಿ ಮತ್ತೂಂದು ಬೀಗ ಕಾಣಿಸಿಕೊಂಡಿತ್ತು. ಏನಿದು ವಿಚಿತ್ರ? ಯಾರು ಹೀಗೆಲ್ಲಾ ಮಾಡಿದ್ದು ಎಂದು ಯೋಚಿಸುತ್ತಿದ್ದಾಗಲೇ- ನಮ್ಮ ಓನರ್‌ ಆಂಟಿ ಪ್ರತ್ಯಕ್ಷವಾದರು. “ಏನೇ, ನಿಮ್ಮ ಅಮ್ಮನಿಗೆ ತುಂಬಾ ಹುಷಾರಿಲ್ವಂತೆ! ಹಾಸಿಗೆ ಹಿಡಿದಿದ್ದಾಳಂತೆ? ಆಸ್ಪತ್ರೆ ಸೇರಿದ್ಲಂತೆ? ಅಕಸ್ಮಾತ್‌ ಅವಳೇನಾದ್ರೂ ಈ ಮನೆಯೊಳಗೇ ಸತ್ತುಹೋದಳು ಅಂತಿಟ್ಕೊ; ಆಮೇಲೆ ಇಲ್ಲಿಗೆ ಯಾರೂ ಬಾಡಿಗೆಗೆ ಬರಲ್ಲ. ಇದನ್ನೆಲ್ಲ ಯೋಚನೆ ಮಾಡಿ, ಇವತ್ತಿಂದಲೇ ನಿಮಗೆ ಬಾಡಿಗೆಗೆ ಕೊಡಬಾರದು ಅಂತ ತೀರ್ಮಾನ ಮಾಡಿದೀನಿ. ಎಲ್ಲಾ ಲಗೇಜ್‌ನೂ ವರಾಂಡಕ್ಕೆ ಹಾಕಿಸಿದ್ದೀನಿ. ಅವನ್ನು ತಗೊಂಡು ಜಾಗ ಖಾಲಿಮಾಡಿ’ ಅನ್ನುತ್ತಾ ಎದ್ದು ಹೋಗಿಯೇಬಿಟ್ಟರು.

ಅಮ್ಮ ಆಸ್ಪತ್ರೇಲಿದಾಳೆ. ಅಪ್ಪ ನೂರಾರು ಮೈಲಿ ದೂರದ ಬಾಂಬೆಯಲ್ಲಿದ್ದಾರೆ. ನಾನು ನಡುರಸ್ತೆಯಲ್ಲಿ ದಿಕ್ಕಿಲ್ಲದೆ ನಿಂತಿದೀನಿ. ಖರ್ಚಿಗೆ ಹಣವಿಲ್ಲ. ದಾರಿ ತೋರುವ ಜನರಿಲ್ಲ! ಮುಂದೇನು ಮಾಡಬೇಕೆಂದು ತೋಚದೆ, ಅದೆಷ್ಟೋ ಹೊತ್ತು ಅದೇ ಮನೆಯೆದುರು ಬಿಕ್ಕಳಿಸುತ್ತಾ ಕೂತಿದ್ದೆ. ಸಂಜೆಯಾಗುತ್ತಿದ್ದಂತೆ, ಆಸ್ಪತ್ರೆಯಲ್ಲಿರುವ ಅಮ್ಮನಿಗೆ ಏನಾದರೂ ಆಗಿಬಿಟ್ಟರೆ… ಅನ್ನಿಸಿತು. ದಡಬಡಿಸಿ ಎದ್ದು, ದಾಪುಗಾಲಿಡುತ್ತಲೇ ಆಸ್ಪತ್ರೆಗೆ ಬಂದೆ.

“ನೋಡಮ್ಮಾ, ಆಸ್ತಮಾ ಇರುವಂತೆ ಕಾಣಿದೆ. ಟಿ.ಬಿ. ಆಸ್ಪತ್ರೆಗೆ ಕರ್ಕೊಂಡು ಹೋಗು. ಈಗ ಡಿಸಾcರ್ಜ್‌ ಮಾಡ್ತೇವೆ’ ಅಂದರು ಡಾಕ್ಟರ್‌. “ಸಾರ್‌, ನಮ್ಮ ಊರು ಇಲ್ಲಿಂದ ತುಂಬಾ ದೂರವಿದೆ.ಟ್ಯಾಕ್ಸಿ ಬೇರೆ ಸಿಗುತ್ತಿಲ್ಲ. ದಯವಿಟ್ಟು ಇವತ್ತೂಂದು ದಿನ ಅಮ್ಮನನ್ನು ಇಲ್ಲಿಯೇ ಉಳಿಸಿಕೊಳ್ಳಿ. ನಾಳೆ ಟಿ.ಬಿ. ಆಸ್ಪತ್ರೆಗೆ ಕರೆದೊಯ್ಯುತ್ತೇನೆ’ ಎಂದು ಮನವಿ ಮಾಡಿಕೊಂಡು. ಆಸ್ಪತ್ರೆಯ ವರಾಂಡದಲ್ಲಿ ಮಲಗಿ, ಹೇಗೋ ಆ ದಿನ ಕಳೆದೆ.

ಬೆಳಗಾಯಿತು. ಟಿ.ಬಿ. ಆಸ್ಪತ್ರೆಗೆ ಅಮ್ಮನನ್ನು ಕೊಂಡೊಯ್ಯುವುದು ಹೇಗೆ? ಎಂಬ ಚಿಂತೆಯಲ್ಲಿ ನಾನಿದ್ದಾಗಲೇ, ಆಸ್ಪತ್ರೆಯ ಗೇಟಿನ ಮುಂದೆ “ಆತ’ ಕಾಣಿಸಿದ. ಅವನೇ- ಟ್ಯಾಕ್ಸಿ ಡ್ರೈವರ್‌! ಮುಳುಗುತ್ತಿದ್ದವಳಿಗೆ ಹುಲ್ಲುಕಡ್ಡಿಯ ಆಸರೆ ಸಿಕ್ಕಿತ್ತು. ತಕ್ಷಣವೇ ಆತನ ಬಳಿಗೆ ಹೋದೆ. “ನಿನ್ನೆ ಎರಡು ಬಾರಿ ಬಂದಿದ್ದೆನಮ್ಮಾ. ನೀವು ಕಾಣಲಿಲ್ಲ. ಹಾಗಾಗಿ ವಾಪಸ್‌ ಹೋಗಿಬಿಟ್ಟೆ. ಡಾಕ್ಟರ್‌ ಏನೆಂದರು?’ - ಆತನೇ ಕೇಳಿದ. “ಕ್ಷಯರೋಗದ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದ್ದಾರೆ…’ ನನ್ನ ಮಾತು ಮುಗಿವ ಮೊದಲೇ, ಹೌದಾ? ಬನ್ನಿ, ಆ ಆಸ್ಪತ್ರೆಗೆ ತಲುಪಿಸ್ತೇನೆ ಅಂದ. ಮಾತ್ರವಲ್ಲ; ಹೇಳಿದಂತೆಯೇ ನಡೆದುಕೊಂಡ.

ಐದಾರು ಚೆಕಪ್‌ಗ್ಳಾದವು. “ಕ್ಷಯರೋಗದ ಯಾವುದೇ ಲಕ್ಷಣವೂ ಕಾಣಿಸುತ್ತಿಲ್ಲ. ಮನೆಗೆ ಕರ್ಕೊಂಡು ಹೋಗಿ. ಪಥ್ಯ ಅನುಸರಿಸಿ. ವಯಸ್ಸಾಗಿದೆ ಅಲ್ವ? ಆ ಕಾರಣಕ್ಕೆ ಹೀಗೆಲ್ಲಾ ಅನಾರೋಗ್ಯ ಕಾಣಿಸಿಕೊಂಡಿದೆ’ ಎಂಬ ಷರಾದೊಂದಿಗೆ ಆಸ್ಪತ್ರೆಯಿಂದ ಅಮ್ಮನನ್ನು ಡಿಸ್ಚಾರ್ಜ್‌ ಮಾಡಲಾಯಿತು. ಇಷ್ಟೆಲ್ಲಾ ಆಗುವುದರೊಳಗೆ ಸಂಜೆಯಾಗಿತ್ತು. ಈ ಹೊತ್ತಿನಲ್ಲಿ ಹೋಗುವುದಾದರೂ ಎಲ್ಲಿಗೆ? ಆಗ ಆಸ್ಪತ್ರೆಯ ಸಿಬ್ಬಂದಿಯೇ ಸಲಹೆ ನೀಡಿದರು. ಅದರಂತೆ, ಆಸ್ಪತ್ರೆಯ ಎದುರಿಗಿದ್ದ ಮನೆಯೊಂದರ ವರಾಂಡದಲ್ಲಿ ಅಮ್ಮನೊಂದಿಗೆ ರಾತ್ರಿ ಕಳೆದೆ. ಹಾಗೆ ಉಳಿದಿದ್ದಕ್ಕೆ, 50 ಪೈಸೆಯ ಬಾಡಿಗೆಯನ್ನು ಆ ಮನೆಯವರು ವಸೂಲಿ ಮಾಡಿದರು.

ಮರುದಿನ, ನಿತ್ಯಕರ್ಮಗಳನ್ನು ಮುಗಿಸಿಕೊಂಡು- ಮುಂದಿನ ದಾರಿ ಯಾವುದು? ಅಮ್ಮನನ್ನು ಕರೆದೊಯ್ಯುವುದು ಹೇಗೆ? ಎಲ್ಲಿಗೆ? ಅಪ್ಪ ತಕ್ಷಣವೇ ಬಾರದಿದ್ದರೆ ಗತಿಯೇನು? ಆಶ್ರಯ ಇಲ್ಲವೆಂಬ ಒಂದೇ ಕಾರಣಕ್ಕೆ ಯಾರಾದರೂ ಕಾಟ ಕೊಟ್ಟರೆ? -ಹೀಗೆಲ್ಲ ಯೋಚಿಸುತ್ತಿದ್ದಾಗಲೇ ಟ್ಯಾಕ್ಸಿಯ ಸದ್ದು ಕೇಳಿಸಿತು. ನೋಡಿದರೆ- ಅದೇ ಟ್ಯಾಕ್ಸಿಯ ಚಾಲಕ. ಬಹುಶಃ ಅವನು ನನಗಿಂತ ನಾಲ್ಕೆçದು ವರ್ಷ ದೊಡ್ಡವನಿರಬೇಕು. ನನಗೆ ಅಸಹಾಯಕತೆ ಕಾಡಿದಾಗಲೆಲ್ಲ, ನನಗೆ ಯಾರೂ ದಿಕ್ಕಿಲ್ಲ ಎಂಬಂಥ ಫೀಲ್‌ ಜೊತೆಯಾದಾಗಲೆಲ್ಲ, ನನ್ನ ಮನದೊಳಗಿನ ಮಾತನ್ನೆಲ್ಲ ಕೇಳಿಸಿಕೊಂಡವನಂತೆ ಆತ ಪ್ರತ್ಯಕ್ಷನಾಗುತ್ತಿದ್ದ. ಈ ಬಾರಿ, ಏನೊಂದೂ ಮಾತಾಡದೆ ಅಮ್ಮನೊಂದಿಗೆ ಟ್ಯಾಕ್ಸಿ ಹತ್ತಿ ಕುಳಿತೆ.

ಮನೆಯ ಎದುರಿಗೆ ಟ್ಯಾಕ್ಸಿ ನಿಂತಿತು. ಕೆಳಗಿಳಿದು ಏನು ಮಾಡಲಿ? ನಿಲ್ಲುವುದಕ್ಕೂ ತ್ರಾಣವಿಲ್ಲದ ಅಮ್ಮನನ್ನು ಎಲ್ಲಿ ಉಳಿಸಲಿ? ನನ್ನ ಗತಿಯೇನು? ಈ ಯಾವ ಪ್ರಶ್ನೆಗೂ ಉತ್ತರ ಗೊತ್ತಿರಲಿಲ್ಲ. ಆ ರಿûಾ ಡ್ರೆçವರ್‌ನ ಕುರಿತು ಅದೇನೋ ನಂಬಿಕೆಯಿತ್ತು. ಎಲ್ಲ ಸಂಗತಿಯನ್ನೂ ಅವನೊಂದಿಗೆ ಸಂಕೋಚದಿಂದಲೇ ಹೇಳಿಕೊಂಡೆ. ಆತ ಎಲ್ಲವನ್ನೂ ಮೌನವಾಗಿ ಕೇಳಿಸಿಕೊಂಡ. ನಂತರ- “ಸಮಸ್ಯೆ ದೊಡ್ಡದೇ ಇದೆ. ಆದರೆ ಹೆದರಬೇಡಿ. ಗಾಬರಿ ಆಗಬೇಡಿ. ಸಹಾಯ ಮಾಡುವ ಜನ ಯಾರಾದ್ರೂ ಸಿಕ್ಕೇಸಿಕ್ತಾರೆ. ಎಲ್ಲಾ ಲಗೇಜ್‌ನೂ ಟ್ಯಾಕ್ಸಿಗೆ ತುಂಬೋಣ. ಸಂಜೆಯವರೆಗೂ ಹುಡುಕೋಣ. ಅಷ್ಟರೊಳಗೆ, ಯಾರಾದ್ರೂ ಹೃದಯವಂತರು ಸಿಕ್ಕೇಸಿಕ್ತಾರೆ. ಅವರಲ್ಲಿ ತಾತ್ಕಾಲಿಕ ಆಶ್ರಯ ಕೇಳ್ಳೋಣ. ಇವತ್ತೇ ತಂದೆಯವರಿಗೆ ಕಾಗದ ಬರೆದುಬಿಡಿ’ ಅಂದ.

ಸರಿ ಸರಿ ಎಂದು ತಲೆಯಾಡಿಸುತ್ತಲೇ ಅಮ್ಮನೊಂದಿಗೆ ಟ್ಯಾಕ್ಸಿ ಹತ್ತಿ ಕುಳಿತೆ. ನಮಗೆ ಪರಿಚಯವಿರುವ, ಕೆಲ ದಿನಗಳ ಮಟ್ಟಿಗೆ ಆಶ್ರಯ ನೀಡಬಲ್ಲ ಹೃದಯವಂತರಿಗಾಗಿ ಹುಡುಕಾಟ ಆರಂಭವಾಯಿತು. ಎರಡು ಗಂಟೆಯ ಹುಡುಕಾಟದ ನಂತರ, ನಮ್ಮ ಕುಟುಂಬವನ್ನು ಚೆನ್ನಾಗಿ ತಿಳಿದಿದ್ದ ಹಿರಿಯರೊಬ್ಬರು ಕಾಣಿಸಿದರು. ತಕ್ಷಣವೇ- “ಅಣ್ಣಾ, ಇವರಿಗೆ ನಮ್ಮ ಪರಿಚಯವಿದೆ. ಒಂದ್ಮಾತು ಕೇಳ್ಳೋಣ’ ಅಂದೆ. ಆತನೇ ಮುಂದೆ ನಿಂತು, ಆ ಹಿರಿಯರೊಂದಿಗೆ ಮಾತಾಡಿದ. “ಒಂದಷ್ಟು ದಿನ ಇವರಿಗೆ ಆಶ್ರಯ ಕೊಡಿ ಸಾರ್‌. ನಿಮಗೆ ಪುಣ್ಯ ಬರುತ್ತೆ’ ಎಂದೆಲ್ಲ ಕೇಳಿಕೊಂಡು, ಆ ಹಿರಿಯರನ್ನು ಒಪ್ಪಿಸಿಯೂ ಬಿಟ್ಟ.

ಆತ ನಮ್ಮ ಬಂಧುವಲ್ಲ. ಪರಿಚಯದವನಲ್ಲ. ಗೆಳೆಯನಲ್ಲ. ನೆರೆಹೊರೆಯವನೂ ಅಲ್ಲ. ಹಾಗಿದ್ದರೂ, ಜನ್ಮಾಂತರದ ಬಂಧುವಿನಂತೆ ನಡೆದುಕೊಂಡಿದ್ದ. ನಾಲ್ಕು ದಿನಗಳ ಅವಧಿಯಲ್ಲಿ, ಹತ್ತಕ್ಕೂ ಹೆಚ್ಚು ಬಾರಿ ನಮಗೋಸ್ಕರ ಟ್ಯಾಕ್ಸಿ ತಗೊಂಡು ಬಂದಿದ್ದ. ಆತನೂ ನಮ್ಮಂತೆಯೇ, ಅಥವಾ ನಮಗಿಂತ ಹೆಚ್ಚಿನ ಬಡತನದ ಹಿನ್ನೆಲೆ ಹೊಂದಿದ್ದ. ಒಬ್ಬ ಸಾಮಾನ್ಯ ಟ್ಯಾಕ್ಸಿ ಡ್ರೆçವರ್‌ ಆದರೂ, ಒಂದಿಡೀ ಊರಿಗೆ ಹಂಚಬಹುದಾದಷ್ಟು ಹೃದಯಶ್ರೀಮಂತಿಕೆ ಅವನಿಗಿತ್ತು.

ಹೀಗಿದ್ದಾಗಲೇ, ಬಾಂಬೆಯಿಂದ ಅಪ್ಪ ಧಾವಿಸಿ ಬಂದರು. ನಮ್ಮ ವಾಸ್ತವ್ಯಕ್ಕೆ ಬೇರೊಂದು ಮನೆ ಹುಡುಕಿದರು. ಅಮ್ಮ ಹುಷಾರಾಗುವವರೆಗೆ ಬಾಂಬೆಗೆ ಹೋಗಲಾರೆ ಎನ್ನುತ್ತ, ಅಣ್ಣನೂ ನನ್ನೊಂದಿಗೇ ಉಳಿದ. ಆದರೆ, ವಿಧಿಯಾಟವೇ ಬೇರೆ ಇತ್ತು. ನಾವು ಬಾಡಿಗೆ ಮನೆಗೆ ಶಿಫ್ಟ್ ಆದ ಕೆಲವೇ ತಿಂಗಳುಗಳಲ್ಲಿ, ಅಮ್ಮ ತೀರಿಹೋದಳು.

ವಿಷಾದ, ನೋವು, ತಬ್ಬಲಿತನ ಮತ್ತು ಅಸಹಾಯಕತೆಯನ್ನು ಎದೆಯೊಳಗೆ ತುಂಬಿಕೊಂಡು ನಾಗರಕೋಯಿಲ್‌ಗೆ ವಿದಾಯ ಹೇಳಿದೆ. ಅಣ್ಣ ಮತ್ತು ತಂದೆಯೊಂದಿಗೆ ಬಾಂಬೆ ಸೇರಿಕೊಂಡೆ. ಆನಂತರದಲ್ಲಿ, ಪದವಿ, ಸರ್ಕಾರಿ ನೌಕರಿ, ಒಳ್ಳೆಯ ಮನಸ್ಸಿನ ಗಂಡ -ಹೀಗೆ ಬಯಸಿದ್ದೆಲ್ಲವೂ ನನ್ನದಾಗುವಂತೆ ಭಗವಂತ ಹರಸಿದ.

ಬಾಂಬೆಗೆ ಬಂದು “ಸೆಟ್ಲ’ ಆದಮೇಲೆ, ಅದೆಷ್ಟೋ ಬಾರಿ ಕೈ ತುಂಬಾ ಹಣ ಸಿಗುತ್ತಿತ್ತು. ಆಗೆಲ್ಲ ಅಬೋಧ ಕಂಗಳ, ನಿರ್ಮಲ ನಗೆಯ ಆ ಟ್ಯಾಕ್ಸಿ ಡ್ರೈವರ್‌ ನೆನಪಾಗುತ್ತಿದ್ದ. ಕಡು ಕಷ್ಟದ ದಿನಗಳಲ್ಲಿ ಆತ ನೆರವಾದಾಗ, ಒಮ್ಮೆಯೂ ನಮ್ಮಿಂದ ಹಣ ಪಡೆದಿರಲಿಲ್ಲ. ಈಗ, ಕೈತುಂಬ ಕಾಸಿದೆ. ಇದಿಷ್ಟನ್ನೂ ಆತನ ಮಡಿಲಿಗೆ ಸುರಿದು, ಒಮ್ಮೆ ಆತನ ಕಾಲಿಗೆರಗಿ, ಕೈಗಳನ್ನು ಕಣ್ಣಿಗೆ ಒತ್ತಿಕೊಂಡು ಆಶೀರ್ವಾದ ಪಡೆಯಬೇಕು ಎಂದು ಮೇಲಿಂದ ಮೇಲೆ ಆಸೆಯಾಗುತ್ತಿತ್ತು.

ಆದರೆ, ಆದರೆ… ಕಡುಕಷ್ಟದ ದಿನಗಳಲ್ಲಿ ಮಾರುವೇಷದ ದೇವರಂತೆ, ಆತ್ಮಬಂಧುವಿನಂತೆ, ಅನಾಥರಕ್ಷಕನಂತೆ ನಮ್ಮನ್ನು ಕಾಪಾಡಿದ- ಆ ಟ್ಯಾಕ್ಸಿ ಡ್ರೆçವರ್‌, ಆನಂತರದಲ್ಲಿ ಮತ್ತೆಂದೂ ಸಿಗಲೇ ಇಲ್ಲ. ಬದುಕಿನಲ್ಲಿ, ಎಲ್ಲವನ್ನೂ ಕೊಟ್ಟ ದೇವರು, ಅಣ್ಣನಂಥ “ಅವನನ್ನು’ ಮತ್ತೂಮ್ಮೆ ತೋರಿಸಲೇ ಇಲ್ಲ…

ಎ.ಆರ್‌.ಮಣಿಕಾಂತ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ