ಅಮ್ಮಾ ಎಂದರೆ ಮೈಮನವೆಲ್ಲ ಹೂವಾಗುವುದಮ್ಮಾ

Team Udayavani, Feb 19, 2019, 12:30 AM IST

ಮಕ್ಕಳು ಹುಟ್ಟಿದಾಗ ಸಂಭ್ರಮಿಸಿ, ಮಗುವನ್ನು ಯಾವಾಗಲೂ ಕಂಕುಳಲ್ಲಿ ಎತ್ತಿಕೊಂಡು, ಮಡಿಲಲ್ಲಿ ಮಲಗಿಸಿಕೊಂಡು, ತಪ್ಪು ಮಾಡಿದರೂ ಮುತ್ತು ಕೊಡುತ್ತಾ ನಮ್ಮನ್ನು ತಿದ್ದಿದವಳು ತಾಯಿ. ನಾವು ಬೆಳೆದಾಗ ನಮಗೆ ಮಾತು ಬರುತ್ತದೆ ಅಂತ ತಾಯಿಯನ್ನೇ ನೀನು ಸರಿಯಾಗಿಲ್ಲ. ನೀನು ನಮ್ಮನ್ನು ಸರಿಯಾಗಿ ಬೆಳೆಸಿಲ್ಲ ಪಕ್ಕದ ಮನೆಯವರನ್ನು ನೋಡಿ ಕಲಿತುಕೋ, ನನ್ನ ಫ್ರೆಂಡ್ಸ್‌ ತಾಯಂದಿರ ಥರ ಇರು, ನೀನು ನನಗೇನೂ ಆಸ್ತಿ ಮಾಡಿಲ್ಲ ಎಂದು ಮೂದಲಿಸಿದರೆ ಹೇಗೆ? ಆಕೆಯ ಬಳಿ ಇದನ್ನೆಲ್ಲ ಪ್ರಶ್ನಿಸುವ ನೈತಿಕ ಹಕ್ಕು ನಮಗಿದೆಯಾ? 

ಅಮ್ಮಾ, ಮಾತಾಜೀ, ಮಮ್ಮಿ, ಮಾ ಹೇಗೆ ಕರೆದರೂ ಮನಸ್ಸಿಗೆ ಮುದ ನೀಡುವ ಪದವದು. ನಗುವಾಗ, ಅಳುವಾಗ, ಜೋರಾಗಿ ಪೆಟ್ಟು ಬಿದ್ದಾಗ, ಸುಸ್ತಾದಾಗ ನಮ್ಮ ಬಾಯಿಂದ ಹೊರಬರುವ ಮೊದಲ ಪದವೇ ಅಮ್ಮಾ. ಮಗು ಹುಟ್ಟಿದ ಮೇಲೆ ಅದರ ಬಾಯಿಂದ ಹೊರಬರುವ ಮೊದಲ ಪದವೂ ಮಾ ಅಥವಾ ಅಮ್ಮಾ ಎಂದು ನಾವೆಲ್ಲಾ ಹೇಳುತ್ತೇವೆ. ಆದರೆ ಅಮ್ಮಂದಿರನ್ನ ಕೇಳಿದರೆ ಮಗು ಹೊಟ್ಟೆಯೊಳಗಿರುವಾಗಲೇ ಎಷ್ಟೋ ಸಲ ಅಮ್ಮಾ ಅಂತ ಕರೆದಿದ್ದು ನನ್ನ ಗಮನಕ್ಕೆ ಬಂದಿದೆ ಎನ್ನುತ್ತಾರೆ. ಭ್ರೂಣದ ಕೂಗು ತರಂಗಗಳ ಮೂಲಕ ಅವರಿಗೆ ಕೇಳಿಸುತ್ತದೆಯಂತೆ. ಅದು ವೈಜ್ಞಾನಿಕವಾಗಿಯೂ ಸತ್ಯವೇ. 

ಮಾತು ಬಾರದ ಮೂಕ ಮಕ್ಕಳು ಹುಟ್ಟಿದಾಗಲೂ, ಆ ಮಕ್ಕಳು ಏನೂ ಮಾತನಾಡದಿದ್ದಾಗಲೂ ತಾಯಿಗೆ ತನ್ನ ಮಗುವಿನ ಕೂಗು, ಅದರ ಹೊಟ್ಟೆ ಹಸಿವು, ಅದರ ನೋವು, ಅದು ಎಲ್ಲೋ ಸಿಕ್ಕಿಹಾಕಿಕೊಂಡು ತೊಳಲಾಡುತ್ತಿದೆ ಎಂಬ ಇಂಟ್ಯೂಷನ್‌ ಚೆನ್ನಾಗಿಯೇ ಅರಿವಿಗೆ ಬರುತ್ತದೆ. ತಾಯಿ ಮಗುವಿನ ಸಂಬಂಧವನ್ನು ಮಾತಿನಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ. ಈ ಸಂಬಂಧ ಜಗತ್ತಿನ ಎಲ್ಲಾ ಸಂಬಂಧಗಳನ್ನೂ ಮೀರಿದ್ದು. ಅಮ್ಮ ಮತ್ತು ಮಗು ಇಬ್ಬರೂ ದೇಹ, ರಕ್ತ, ಮಾಂಸ, ಉಸಿರು, ಆಹಾರ, ಎಲ್ಲವನ್ನೂ ಶೇರ್‌ ಮಾಡಿಕೊಂಡೇ ಹೊಸ ಜೀವನ ಶುರು ಮಾಡಿರುತ್ತಾರೆ. ಅವರಿಬ್ಬರನ್ನು ಬೇರ್ಪಡಿಸಲು ಯಾರಿಗೂ ಸಾಧ್ಯವಿಲ್ಲ. ಪ್ರೀತಿಗೆ ನಿಜವಾದ ಅರ್ಥವೇ ಅಮ್ಮ. ಜೀವನದಲ್ಲಿ ಬೇರೆ ಪ್ರೀತಿ ಹಾಗೂ ಸಂಬಂಧಗಳೆಲ್ಲ ಬಂದು ಹೋಗುತ್ತವೆ. ಆದರೆ ಅಮ್ಮನ ಪ್ರೀತಿ ಎಲ್ಲಕ್ಕಿಂತ ಮೊದಲು ಶುರುವಾಗಿ ಯಾರು ಬಿಟ್ಟು ಹೋದರೂ ಕೊನೆಯವರೆಗೂ ಶಾಶ್ವತವಾಗಿರುತ್ತದೆ. 

ಜೈಲಿನ ಹೊರಗೆ ಕಂಡ ಅಮ್ಮಂದಿರು 
ಕೆಲವು ಅಮ್ಮಂದಿರು ಮಕ್ಕಳನ್ನು ಪ್ರೀತಿಯಿಂದ ಬೆಳೆಸಿದರೆ, ಇನ್ನು ಕೆಲವರು ಮನದೊಳಗೆ ಪ್ರೀತಿಯಿದ್ದರೂ ಸದಾ ಬೈಯುತ್ತಾ ಹೊಡೆಯುತ್ತಾ ಬೆಳೆಸುತ್ತಾರೆ. ಅದು ತಪ್ಪೇನಲ್ಲ. ನಮ್ಮನ್ನು ಹೆತ್ತವರಿಗೆ ನಮ್ಮನ್ನು ಶಿಕ್ಷಿಸುವ ಹಕ್ಕೂ ಇರುತ್ತದೆ. ಕೆಲವು ಸಲ ಮಕ್ಕಳು ತಾಯಿಯನ್ನು ದ್ವೇಷಿಸುತ್ತಾರೆ, ಆದರೆ ತಾಯಿ ಯಾವ ಅಸಹಾಯಕ ಸ್ಥಿತಿಯಿಂದ ನಮ್ಮನ್ನು ದಂಡಿಸುತ್ತಾಳೆ ಎಂಬ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನವನ್ನೇ ಮಾಡುವುದಿಲ್ಲ. ಮಕ್ಕಳು ತಪ್ಪು ಮಾಡಿದರೂ ಅಮ್ಮಂದಿರು ಅವರನ್ನು ಬಿಟ್ಟುಕೊಡದೆ ರಕ್ಷಣೆ ಮಾಡುತ್ತಾರೆ. ಆದರೂ ಕೆಲ ಮಕ್ಕಳು ತಂದೆ ತಾಯಿ ಸಮಾಜವನ್ನು ಲೆಕ್ಕಿಸದೆ ಕೆಟ್ಟ ಕೆಲಸ ಮಾಡಿ ತಾಯಿಯ ಕರುಳನ್ನು ಕಿವುಚುತ್ತಾರೆ. 

ನಾನು ಯಾವಾಗ ಸೆಂಟ್ರಲ್‌ ಜೈಲಿಗೆ ಭೇಟಿಕೊಟ್ಟಾಗಲೂ ಅಲ್ಲಿ ಗೇಟಿನ ಹೊರಗಿರುವವರನ್ನು ಗಮನಿಸುತ್ತೇನೆ. ಅವರಲ್ಲಿ ಬಹಳಷ್ಟು ತಾಯಂದಿರಿರುತ್ತಾರೆ. ತನ್ನ ಮಗ ಜೈಲಿನೊಳಗಿದ್ದಾನೆ ಅಂತ ನೊಂದು ಜೈಲಿನ ಬಾಗಿಲಿನಲ್ಲೇ ಕುಳಿತು ಕಣ್ಣೀರು ಹಾಕುತ್ತಿರುತ್ತಾರೆ. ತಂದೆಯಂದಿರಿಗಿಂತ ಹೆಚ್ಚಾಗಿ ತಾಯಂದಿರೇ ಊಟದ ಬುತ್ತಿ ಹಿಡಿದು ಮಗನನ್ನು ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ. ಬಾಗಿಲಲ್ಲಿರುವ ಪೋಲೀಸರು ಏನಮ್ಮಾ ನಿನ್ನ ಮಗನ ಸರಿಯಾಗಿ ಬೆಳಸಕ್ಕೆ ಆಗಲ್ವಾ? ಹೋಗು, ಎರಡು ಗಂಟೆ ಆದ್ಮೇಲೆ ಬಾ, ಈಗ ಯಾರನ್ನೂ ಒಳಗೆ ಬಿಡಲ್ಲಾ ಅಂತ ಗದರಿದರೂ ಅಮ್ಮ ತನ್ನ ಮಗನನ್ನು ಬಿಟ್ಟು ಕೊಡದೆ ಇಲ್ಲಾ. ಸ್ವಾಮಿ, ಅವನಿನ್ನೂ ಚಿಕ್ಕವ್ನು. ಏನೋ ಗೊತ್ತಿಲೆª ತಪ್ಪು ಮಾಡಿºಟ್ಟಾ, ಅವನನ್ನ ಹೊರಗೆ ಯಾವಾಗ ಬಿಡಬಹುದು? ಎಷ್ಟು ವರ್ಷ ಆಗುತ್ತೆ? ಎಂದು ಆಶಾದಾಯಕ ಕಣ್ಣುಗಳಿಂದ ಅಮಾಯಕರಾಗಿ ಕೇಳಿಕೊಳ್ಳುತ್ತಾರೆ. ಇವರ ದುಃಖಕ್ಕೆ ಉತ್ತರವೇ ಇಲ್ಲ. ಮಗ ಜೈಲಿನಲ್ಲಿದ್ದರೂ ಅಮ್ಮ ಅವನಿಗೆ ಏನು ಇಷ್ಟವೋ ಅದೇ ಅಡುಗೆ ಮಾಡಿಕೊಂಡು ತಂದುಕೊಡುತ್ತಾಳೆ. ಆದರೆ ಮಗ ಅಮ್ಮನಿಗೆ ಏನು ಇಷ್ಟವೋ ಆ ಕೆಲಸ ಮಾಡಿರುವುದಿಲ್ಲ. ಅವರ ಇಷ್ಟ-ಕಷ್ಟಗಳನ್ನೂ ಯೋಚಿಸಿರುವುದಿಲ್ಲ. 

ವೇಶ್ಯೆಯಲ್ಲೊಬ್ಬಳು ಅತೃಪ್ತ ತಾಯಿ 
ನಾನು ಕೆಲವು ದೇವದಾಸಿಗಳು ಹಾಗೂ ವೇಶ್ಯೆಯರನ್ನು ಸಂದರ್ಶನ ಮಾಡಿದ್ದೆ. ಆ ತಾಯಂದಿರ ಕಥೆಗಳು ಇನ್ನೂ ದುಃಖಭರಿತವಾಗಿರುತ್ತವೆ. ತಾನು ಹೆತ್ತ ಮಕ್ಕಳಿಗೆ ಯೋಗ್ಯ ತಾಯಿಯಾಗಲಿಲ್ಲ, ಅವರನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ, ಮಗುವಾಗಿದ್ದಾಗ ಎತ್ತಿ ಮುದ್ದಾಡಲೂ ನನಗೆ ಸಾಧ್ಯವಾಗಲಿಲ್ಲ ಅಂತ ಗೋಳಿಡುತ್ತಾರೆ. ತಾನೇ ಆ ಮಗುವಿನ ತಾಯಿ ಅಂತ ಮಕ್ಕಳಿಗೆ ಗೊತ್ತಾದರೆ ಎಲ್ಲಿ ಅವರು ಕೆಟ್ಟ ಮಾತನಾಡಿ ತಿರಸ್ಕರಿಸುತ್ತಾರೋ ಎಂಬ ಭಯ ಕೆಲವರಿಗೆ. ಕೆಲವು ಮಕ್ಕಳು ಹಾಗೆ ಮಾಡಿದ್ದಾರೆ ಕೂಡ. ತಾಯಿ ಏಕೆ ಆ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ ಎಂಬುದನ್ನು ಅರಿತುಕೊಳ್ಳುವ ತಾಳ್ಮೆ ಮಕ್ಕಳಿಗಿರುವುದಿಲ್ಲ. ಆದರೆ ತಾಯಂದಿರು, ಮಕ್ಕಳು ಏನೇ ಮಾಡಿದರೂ, ಹೇಗೆ ನಡೆದುಕೊಂಡರೂ, ಹೇಗೆ ಹಿಯಾಳಿಸಿದರೂ ಮಕ್ಕಳ ಒಳಿತನ್ನೇ ಬಯಸುತ್ತಾರೆ. 

ಇವತ್ತಿನ ಮಕ್ಕಳು ಎಷ್ಟು ವಿಚಿತ್ರವಾಗಿ ನಡೆದುಕೊಳ್ಳುತ್ತಾರೆ ಅಂದರೆ, ನನಗೆ ಗೊತ್ತಿರುವ ಅನೇಕ ಹುಡುಗರು ತನ್ನ ತಾಯಿಯನ್ನೇ ಎಲ್ಲರ ಮುಂದೆ ಅವಳೊಬ್ಬಳು ವೇಶ್ಯೆ ಅಂತ ಕರೆಯುತ್ತಾರೆ. ಅವರೆಲ್ಲ ಸಂಪ್ರದಾಯಸ್ಥ ಕುಟುಂಬದವರೇ. ಅವರೆಲ್ಲರ ತಾಯಂದಿರು ಮರ್ಯಾದೆಗೆ ತುಂಬಾ ಬೆಲೆ ಕೊಟ್ಟು ಸಂಸ್ಕಾರಯುತವಾಗಿ ಜೀವನ ಸಾಗಿಸುತ್ತಿರುವವರು. ಆದರೂ ಮಕ್ಕಳು ತಾಯಿಯನ್ನು ಹೀಗೆಲ್ಲ ಬೈಯ್ಯುವುದು ನೋಡುವವರ ಕರುಳನ್ನೇ ಕಿವುಚುತ್ತದೆ. ಹಾಗಿರುವಾಗ ಹೆತ್ತ ತಾಯಿಯ ಪರಿಸ್ಥಿತಿ ಹೇಗಿರಬಹುದು ಊಹಿಸಿ. ಆಕೆ ಏನನ್ನೂ ಎದುರು ವಾದಿಸದೆ ಕಣ್ಣೀರಿಡುತ್ತಾ ಸುಮ್ಮನೆ ಕುಳಿತಿರುವ ಕರುಣಾಮಯಿ. ಕೆಲ ಮಕ್ಕಳು ಕಾಲಿನಿಂದ ಒದೆಯುತ್ತಾರೆ, ಹೊಡೆಯುತ್ತಾರೆ, ತಾಯಿಯ ಕತ್ತು ಹಿಸುಕಲೂ ಹೋಗುತ್ತಾರೆ, ನಿನ್ನ ಸಾಯಿಸಿಬಿಡ್ತೀನಿ ಅಂತ ತಮ್ಮ ಪೌರುಷವನ್ನು ಮುಗ್ಧ ತಾಯಿಯ ಮುಂದೆ ತೋರಿಸುತ್ತಾರೆ. ಆದರೂ ತಾಯಿ ತನ್ನ ಮಗುವನ್ನು ನೀನು ಸತ್ತು ಹೋಗು ಅಂತ ಬಯಸುವುದಿಲ್ಲ. 

ಪ್ರಶ್ನಿಸುವ ಹಕ್ಕು ನಮಗಿದೆಯಾ? 
ಮಕ್ಕಳು ಹುಟ್ಟಿದಾಗ ಸಂಭ್ರಮಿಸಿ, ಮಗುವನ್ನು ಯಾವಾಗಲೂ ಕಂಕುಳಲ್ಲಿ ಎತ್ತಿಕೊಂಡು, ಮಡಿಲಲ್ಲಿ ಮಲಗಿಸಿಕೊಂಡು, ತಪ್ಪು ಮಾಡಿದರೂ ಮುತ್ತು ಕೊಡುತ್ತಾ ನಮ್ಮನ್ನು ತಿದ್ದಿದವಳು ತಾಯಿ. ನಾವು ಬೆಳೆದಾಗ ನಮಗೆ ಮಾತು ಬರುತ್ತದೆ ಅಂತ ತಾಯಿಯನ್ನೇ ನೀನು ಸರಿಯಾಗಿಲ್ಲ. ನೀನು ನಮ್ಮನ್ನು ಸರಿಯಾಗಿ ಬೆಳೆಸಿಲ್ಲ ಪಕ್ಕದ ಮನೆಯವರನ್ನು ನೋಡಿ ಕಲಿತುಕೋ, ನನ್ನ ಫ್ರೆಂಡ್ಸ್‌ ತಾಯಂದಿರ ಥರ ಇರು, ನೀನು ನನಗೇನೂ ಆಸ್ತಿ ಮಾಡಿಲ್ಲ ಎಂದು ಮೂದಲಿಸಿದರೆ ಹೇಗೆ? ಆಕೆಯ ಬಳಿ ಇದನ್ನೆಲ್ಲ ಪ್ರಶ್ನಿಸುವ ನೈತಿಕ ಹಕ್ಕು ನಮಗಿದೆಯಾ? ತನಗಿದೆಯೋ ಇಲ್ಲವೋ, ತಾನು ಓದಿದ್ದಾಳ್ಳೋ ಇಲ್ಲವೋ, ತಾನು ಒಳ್ಳೆಯ ರೇಷ್ಮೆ ಸೀರೆ ಉಟ್ಟಿದ್ದಾಳ್ಳೋ ಇಲ್ಲವೋ, ತನ್ನ ಆಸೆಗಳನ್ನು ಪೂರೈಸಿಕೊಂಡಿದ್ದಾಳ್ಳೋ ಇಲ್ಲವೋ, ಆದರೆ ಮಗುವಿಗೆ ಏನೂ ಕಮ್ಮಿ ಆಗಬಾರದು ಅಂತ ಎಲ್ಲವನ್ನೂ ತ್ಯಾಗ ಮಾಡಿದವಳನ್ನು ಹೀಗೆ ಪ್ರಶ್ನೆ ಮಾಡುವುದೇ ಹೀನ ಮನಸ್ಥಿತಿ. ಅವಳು ಮನಸ್ಸು ಮಾಡಿದ್ದರೆ ನಮಗೆ ಜನ್ಮವನ್ನೇ ಕೊಡದೆ ಇರಬಹುದಿತ್ತು. ಈ ಮಗು ಬೇಡ ಎಂದು ನಮ್ಮನ್ನು ಹೊಟ್ಟೆಯಲ್ಲೇ ಸಾಯಿಸಬಹುದಿತ್ತು. ಅವಳ ಜೀವನದಲ್ಲಿ ಆವತ್ತು ಎಷ್ಟು ಕಷ್ಟ ಇತ್ತೋ ಗೊತ್ತಿಲ್ಲ. ಅವೆಲ್ಲವನ್ನೂ ಸಹಿಸಿಕೊಂಡು ನಮಗೆ ಜನ್ಮ ನೀಡಿದ್ದಾಳೆ. 

ಅವಳು ಬೆಳೆಯುವಾಗ, ಅವಳು ಕಷ್ಟದಲ್ಲಿದ್ದಾಗ, ಅವಮಾನದಲ್ಲಿದ್ದಾಗ ನಾವು ಅವಳ ಕೈಹಿಡಿದು ನಾನಿದ್ದೀನಿ ಯೋಚಿಸಬೇಡ ಅಂದಿಲ್ಲ. ಏಕೆಂದರೆ ನಾವಿನ್ನೂ ಹುಟ್ಟಿರಲಿಲ್ಲ. ಈಗಲೂ ಅವಳ ಕಷ್ಟಗಳನ್ನು ಅವಳು ನಮ್ಮ ತಲೆ ಮೇಲೆ ಹೇರಿಲ್ಲ. ಮಕ್ಕಳಿಗಾಗಿ ಬದುಕಿರುವ ತಾಯಿಗೆ ಮಕ್ಕಳೇ ಕಷ್ಟಗಳ ಸರಮಾಲೆ ಹಾಕಿರುವುದು. ಮತ್ತೂಂದು ಅಮ್ಮಂದಿರ ದಿನ ಕಳೆದುಹೋಯಿತು. ನಮ್ಮಲ್ಲೆಷ್ಟು ಜನ ಅಮ್ಮನಿಗೆ ಮನಸಾರೆ ವಂದಿಸಿದೆವು?


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ