ಬೆಕ್ಕು-ನಾಯಿ, ಮನುಷ್ಯನ ಅಸಹಾಯಕ ಬದುಕು

Team Udayavani, Oct 20, 2019, 5:14 AM IST

ಯಾವುದೇ ಬದಲಾವಣೆ ಇರಲಿ, ಅದು ಒಂದು ಪ್ರಶ್ನೆಯಿಂದ ಆರಂಭವಾಗುತ್ತದೆ. “ಏಕೆ ಹೀಗೆ?’ ಎನ್ನುವುದೇ ಆ ಪ್ರಶ್ನೆ. ಪ್ರಶ್ನೆಯಲ್ಲಿ ಎರಡೇ ಪದಗಳಿವೆ. ಆದರೆ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ, ಈ ಚಿಕ್ಕ ಪ್ರಶ್ನೆಯು ನಮ್ಮ ಗುಣವನ್ನೇ ಸಂಪೂರ್ಣವಾಗಿ ಬದಲಿಸುವಂಥ ಸಾಮರ್ಥ್ಯವನ್ನು ಹೊಂದಿದೆ.ನಮ್ಮ ವರ್ತನೆಗಳ ಮೂಲವನ್ನು ಕಂಡುಕೊಳ್ಳಲು ಸಫ‌ಲರಾದಾಗ ಮಾತ್ರ ಬದಲಾವಣೆಗೆ
ತೆರೆದುಕೊಳ್ಳುವುದಕ್ಕೆ ಸಾಧ್ಯ ತಾನೆ?

ಅದೊಂದು, ಸಂಪ್ರದಾಯಸ್ಥ ಮನೆ. ಹಬ್ಬದ ಸಮಯದಲ್ಲಿ ಹಿರಿಯರು ತಪ್ಪದೇ ಪೂಜೆ ಮಾಡುತ್ತಿದ್ದರು. ಸರಿಯಾಗಿ ಹಬ್ಬದ ದಿನವೇ ಆ ಮನೆಗೆ ಬೆಕ್ಕೊಂದು ಪ್ರವೇಶಿಸುತ್ತಿತ್ತು. ಹೀಗಾಗಿ, ಪೂಜೆ ಮಾಡುವವರಿಗೂ ಡಿಸ್ಟರ್ಬ್ ಆಗುತ್ತಿತ್ತು. ಈ ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕೆಂದು ತಲೆಕೆಡಿಸಿಕೊಂಡ ಮನೆಯ ಯಜಮಾನರು, ಬಿದಿರಿನ ಬುಟ್ಟಿಯೊಂದನ್ನು ತಂದು ಆ ಬೆಕ್ಕಿನ ಮೇಲಿಟ್ಟು, ಬುಟ್ಟಿಯ ಮೇಲೆ ಭಾರದ ವಸ್ತುವೊಂದನ್ನಿಟ್ಟು ಪೂಜೆ ಆರಂಭಿಸಿದರಂತೆ. ಪ್ರತಿ ಹಬ್ಬದಂದೂ ಈ ಕ್ರಿಯೆ ಪುನರಾವರ್ತನೆಯಾಗಲಾರಂಭಿಸಿತು. ವರ್ಷಗಳುರುಳಿದವು, ತಲೆಮಾರುಗಳು ಬದಲಾದವು. ಆದರೆ ಆ ಮನೆಯಲ್ಲಿ ಈ ಸಂಪ್ರದಾಯ ಬದಲಾಗಲೇ ಇಲ್ಲ. ಆದರೆ, ಇಲ್ಲೊಂದು ಟ್ವಿಸ್ಟ್‌ ಇತ್ತು. ತದನಂತರದ ತಲೆಮಾರಿನವರಿಗೆ ತಮ್ಮ ಪೂರ್ವಿಕರು ಬೆಕ್ಕಿನ ಮೇಲೇಕೆ ಬುಟ್ಟಿ ಮುಚ್ಚಿಡುತ್ತಿದ್ದರು ಎನ್ನುವುದೇ ತಿಳಿದಿರಲಿಲ್ಲ! ಅಲ್ಲದೇ ಅವರ ಮನೆಯಲ್ಲಿ ಬೆಕ್ಕೂ ಇರಲಿಲ್ಲ. ಹೀಗಾಗಿ, ಪ್ರತಿ ಹಬ್ಬದ ಸಮಯದಲ್ಲೂ ಇವರು ಊರೆಲ್ಲ ಹುಡುಕಾಡಿ ಒಂದು ಬೆಕ್ಕನ್ನು ಹಿಡಿದು ತಂದು, ಅದರ ಮೇಲೆ ಬುಟ್ಟಿ ಮುಚ್ಚಿಟ್ಟು ಪೂಜೆ ಆರಂಭಿಸುತ್ತಿದ್ದರಂತೆ!

ಈ ಕಥೆ ಕೇಳಿದ ಮೇಲೆ, ಆ ಮನೆಯವರನ್ನು ನಾವು ಪೆದ್ದರು ಎಂದು ಕರೆದು ನಕ್ಕುಬಿಡಬಹುದು. ಆದರೆ ಈ ರೀತಿಯ ಪೆದ್ದುತನ ನಮ್ಮೆಲ್ಲರಲ್ಲೂ ಇವೆಯಲ್ಲವೇ? ನಾವೂ ಕೂಡ ಅರಿಯದೇ ಇಂಥ ಅನೇಕ ಅಸಂಬದ್ಧ ಕಾರ್ಯಗಳನ್ನು ಮಾಡುತ್ತಲೇ ಇರುತ್ತೇವೆ, ನಮ್ಮ ಅಸಂಬದ್ಧ ನಡೆಗಳ ಅಗತ್ಯಗಳನ್ನು, ಹಿನ್ನೆಲೆಯನ್ನು ನಾವು ಪ್ರಶ್ನಿಸುವುದೇ ಇಲ್ಲ. ಬದಲಾಗಲು ಯೋಚಿಸುವುದೇ ಇಲ್ಲ.

ಯಾವುದೇ ಬದಲಾವಣೆ ಇರಲಿ, ಅದು ಒಂದು ಪ್ರಶ್ನೆಯಿಂದ ಆರಂಭವಾಗುತ್ತದೆ. “ಏಕೆ ಹೀಗೆ?’ ಎನ್ನುವುದೇ ಆ ಪ್ರಶ್ನೆ. ಪ್ರಶ್ನೆಯಲ್ಲಿ ಎರಡೇ ಪದಗಳಿವೆ. ಆದರೆ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ, ಈ ಚಿಕ್ಕ ಪ್ರಶ್ನೆಯು ನಮ್ಮ ಗುಣವನ್ನೇ ಸಂಪೂರ್ಣವಾಗಿ ಬದಲಿಸುವಂಥ ಸಾಮರ್ಥ್ಯವನ್ನು ಹೊಂದಿದೆ.

ನಮ್ಮ ವರ್ತನೆಗಳ ಮೂಲವನ್ನು ಕಂಡುಕೊಳ್ಳಲು ನಾವು ಸಫ‌ಲರಾದಾಗ ಮಾತ್ರ ಬದಲಾವಣೆಗೆ ತೆರೆದುಕೊಳ್ಳುವುದಕ್ಕೆ ಸಾಧ್ಯತಾನೆ? ನಾನು ಬಹಳಷ್ಟು ದೊಡ್ಡವರನ್ನು ನೋಡಿದ್ದೇನೆ, ಅವರು ಚಿಕ್ಕಂದಿನಲ್ಲಿ ತಾವು ನೋಡಿದ, ಅನುಭವಿಸಿದ ಸಂಗತಿಯನ್ನೇ “ಶಾಶ್ವತ ಸತ್ಯ’ ಎಂದು ಭಾವಿಸಿಬಿಡುತ್ತಾರೆ. ಕೆಲವರು ತಾವು ಗಣಿತದಲ್ಲಿ ತುಂಬಾ ವೀಕು ಎಂದು ಹೇಳುತ್ತಾರೆ, ಅದನ್ನೇ ನಂಬಿಕೊಂಡು ಬಂದಿರುತ್ತಾರೆ. ಏಕೆ ವೀಕು? ಎಂದು ಕೇಳಿ ನೋಡಿ..ಉತ್ತರಿಸಲು ತಡಬಡಾಯಿಸುತ್ತಾರೆ. “ನನಗೆ ಗಣಿತ ಅರ್ಥವಾಗಲ್ಲ’ ಎಂದೇ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಾರೆ.

ನಾನನ್ನುವುದು ಇಷ್ಟೆ- ನಿಮಗೆ ತೀವ್ರವಾದಂಥ ಮಾನಸಿಕ ಸಮಸ್ಯೆಗಳು ಇಲ್ಲವೆಂದರೆ, ನಿಮ್ಮ ಮಿದುಳಿಗೆ ಡ್ಯಾಮೇಜ್‌ ಆಗಿಲ್ಲವೆಂದರೆ, ನಿಮಗೆ ಗಣಿತ ಅರ್ಥವಾಗಲೇಬೇಕು! ಏನಾಗಿರುತ್ತದೆಂದರೆ, ತಮಗೆ ಗಣಿತ ಬರುವುದಿಲ್ಲ ಎಂದು ಹೇಳುವವರು ಹಿಂದೆ, ತಾವು ಶಾಲೆಯಲ್ಲಿದ್ದಾಗ ಶಿಕ್ಷಕರೋ, ಅಪ್ಪ-ಅಮ್ಮನೋ ಹೇಳಿದ ಈ ಮಾತನ್ನೇ ನಂಬಿಬಿಟ್ಟಿರುತ್ತಾರೆ. ನೀನು ಶತದಡ್ಡ ಎಂದು ಶಿಕ್ಷಕ ಬೈದಿರುತ್ತಾನೆ. ಆಗಿನ ಮುಗ್ಧ ಮನಸ್ಸು ಇದನ್ನು ನಿಜ ಎಂದು ನಂಬಿಬಿಡುತ್ತದೆ. ಇದೇ ಮಾತನ್ನೇ ಆ ವ್ಯಕ್ತಿ ಜೀವನ ಪರ್ಯಂತ ಉಚ್ಚರಿಸುತ್ತಾ, ಅದನ್ನೇ ಸತ್ಯವೆಂದು ನಂಬಿಬಿಡುತ್ತಾನೆ. ಕಷ್ಟಪಟ್ಟು ಓದಿದರೆ, ಯಾವ ವಿಷಯವೂ ಕಬ್ಬಿಣದ ಕಡಲೆಯಲ್ಲ ಎನ್ನುವುದು ಅವರಿಗೆ ಅರ್ಥವಾಗುವುದೇ ಇಲ್ಲ, ಕೇವಲ ಓದಿನ ವಿಚಾರದಲ್ಲೇ ಅಲ್ಲ, ಇನ್ನೂ ಅನೇಕ ಸಂಗತಿಗಳಿಗೂ ಈ ವಿಷಯ ಅನ್ವಯವಾಗುತ್ತದೆ. ನನ್ನ ಈ ಮಾತಿಗೆ ಮನೋವಿಜ್ಞಾನ ಕೂಡ ಆಧಾರವಾಗಿ ನಿಲ್ಲುತ್ತದೆ.

1967ರಲ್ಲಿ ಮನಶಾಸ್ತ್ರಜ್ಞ ಮಾರ್ಟಿನ್‌ ಸೆಲಿಗ್ಮನ್‌ ನಾಯಿಗಳ ಮೇಲೆ ನಡೆಸಿದ ಪ್ರಯೋಗವೊಂದು ಇದರ ಮೇಲೆ ಬೆಳಕು ಚೆಲ್ಲುತ್ತದೆ.

ಡಾ. ಮಾರ್ಟಿನ್‌ ಸೆಲಿಗ್ಮನ್‌ ಕೆಲವು ಆರೋಗ್ಯವಂತ ನಾಯಿಗಳನ್ನು ತಮ್ಮ ಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡು ಅವನ್ನು ಮೂರು ಗುಂಪುಗಳನ್ನಾಗಿ ವಿಭಜಿಸಿದರು. ಮೊದಲನೇ ಗುಂಪಿನ ನಾಯಿಗಳಿಗೆ ವಿದ್ಯುತ್‌ ಬೆಲ್ಟಾಗಳನ್ನು ತೊಡಿಸಿ ಶಾಕ್‌ ಕೊಡಲಾಯಿತು. ವಿದ್ಯುತ್‌ ಆಘಾತವನ್ನು ನಿಲ್ಲಿಸಲು ಈ ನಾಯಿಗಳು ತಮ್ಮೆದುರಿದ್ದ ಸನ್ನೆಗೋಲನ್ನು ಮುಟ್ಟಿದರೆ ಸಾಕಿತ್ತು. ಕೆಲವೇ ಸಮಯದಲ್ಲಿ ಈ ತಂತ್ರವನ್ನು ಈ ಗುಂಪಿನ ನಾಯಿಗಳು ಅರಿತುಕೊಂಡವು. ಎರಡನೆಯ ಗುಂಪಿನ ನಾಯಿಗಳಿಗೂ ಇದೇ ಪ್ರಮಾಣದ ವಿದ್ಯುತ್‌ ಶಾಕ್‌ ನೀಡಲಾಯಿತಾದರೂ ಅದರಿಂದ ತಪ್ಪಿಸಿಕೊಳ್ಳುವ ಯಾವ ಆಯ್ಕೆಯೂ ಅವುಗಳ ಮುಂದಿರಲಿಲ್ಲ. ಇನ್ನು ಮೂರನೆಯ ಗುಂಪಿನ ನಾಯಿಗಳಿಗೆ ಶಾಕ್‌ ಕೊಡದೇ ಬಿಟ್ಟುಬಿಡಲಾಯಿತು.

ಮೊದಲ ಮತ್ತು ಮೂರನೇ ಗುಂಪಿನ ನಾಯಿಗಳಿಗೆ ಈ ಪ್ರಯೋಗದಿಂದ ಯಾವುದೇ ತೊಂದರೆಯಾಗಲಿಲ್ಲ. ಆದರೆ ಪರಿಸ್ಥಿತಿಯ ಮೇಲೆ ನಿಯಂತ್ರಣವಿಲ್ಲದ, ಅಂದರೆ, ವಿದ್ಯುತ್‌ ಆಘಾತದಿಂದ ತಪ್ಪಿಸಿಕೊಳ್ಳಲಾಗದೇ ಪರದಾಡಿದ ಎರಡನೆ ಗುಂಪಿನ ನಾಯಿಗಳಲ್ಲಿ ಮಾತ್ರ ತೀವ್ರ ಖನ್ನತೆ ಮಾದರಿಯ ಲಕ್ಷ ಣಗಳು ಕಾಣಿಸಿಕೊಂಡವು.

ಮುಂದಿನ ಹಂತದ ಪ್ರಯೋಗದಲ್ಲಿ ಈ ಮೂರೂ ಗುಂಪಿನ ನಾಯಿಗಳನ್ನು ಡಬ್ಬಿಯಾಕಾರದ ರಚನೆಯಲ್ಲಿ(ಬಾಕ್ಸ್ ಲ್ಲಿ) ಇಡಲಾಯಿತು. ಬಾಕ್ಸ್ ಮಧ್ಯದಲ್ಲಿ ಚಿಕ್ಕ ಹಲಗೆಯನ್ನಿಟ್ಟು ಅದನ್ನು ಎರಡು ಭಾಗ ಮಾಡಲಾಯಿತು. ಅದನ್ನು ಎ ಮತ್ತು ಬಿ ಎನ್ನೋಣ. ಎಡಭಾಗದ(ಎ) ತಳದಲ್ಲಿ ವಿದ್ಯುತ್‌ ತಂತಿಗಳಿದ್ದವು. ನಾಯಿಗಳಿಗೆ ಈ ಬಾರಿಯೂ ಲಘು ಪ್ರಮಾಣದ ವಿದ್ಯುತ್‌ ಆಘಾತ ಕೊಡಲಾಯಿತು. ತಾವು ನಿಂತ ನೆಲದಲ್ಲಿ ವಿದ್ಯುತ್‌ ಪ್ರವಹಿಸುತ್ತಿದ್ದಂತೆಯೇ ಮೊದಲ ಹಾಗೂ ಮೂರನೆಯ ಗುಂಪಿನ ನಾಯಿಗಳು ಹಲಗೆಯನ್ನು ದಾಟಿ ಬಾಕ್ಸ್‌ ಬಲಬದಿಗೆ(ಬಿ) ಜಿಗಿದು ಸುರಕ್ಷಿತವಾದವು. ಆದರೆ ಎರಡನೆಯ ಗುಂಪಿನ ನಾಯಿ ಮಾತ್ರ ಶಾಕ್‌ ತಿನ್ನುತ್ತಾ ಅಲ್ಲೇ ಅಸಹಾಯಕವಾಗಿ ಕುಂಯುಟ್ಟುತ್ತಾ ಕುಳಿತುಬಿಟ್ಟವು. ಆ ಚಿಕ್ಕ ಹಲಗೆಯನ್ನು ಹಾರಿ ನೋವಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನೇ ಅವು ಮಾಡಲಿಲ್ಲ. ಹೊಸ ಪ್ರಚೋದನೆಗೆ ಹಳೆಯ ಪ್ರತಿಕ್ರಿಯೆಯನ್ನೇ ಪುನರಾವರ್ತಿಸುವ, ಪರಿಸ್ಥಿತಿಯನ್ನು ತನಗೆ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಭಾವಿಸುವ ಈ ಗುಣವನ್ನೇ ಸೆಲಿಕ್ಸ್ ನ್‌ ಲ®x…ì ಹೆಲ್ಪ್ಲೆಸ್‌ನೆಸ್‌(ರೂಢಿಸಿಕೊಂಡ ಅಸಹಾಯಕತೆ) ಎಂದು ಕರೆದರು. ಭೂತಕಾಲದಲ್ಲಿ ಅಸಹಾಯಕತೆ ಅನುಭವಿಸಿದ ಆ ಪ್ರಾಣಿಗಳು, ವರ್ತಮಾನದಲ್ಲಿ ಪರಿಸ್ಥಿತಿ ಭಿನ್ನವಾಗಿದೆ ಎನ್ನುವುದನ್ನೇ ನೋಡಲಿಲ್ಲ!

ಈ ರೀತಿಯ ವರ್ತನೆಯನ್ನು ಆನೆಯಂಥ ಬಲಿಷ್ಠ ಪ್ರಾಣಿಗಳಲ್ಲೂ ನೋಡಬಹುದು. ಆನೆಯನ್ನು ಪಳಗಿಸುವ ಕೆಲಸ ಅದು ಮರಿಯಾಗಿದ್ದಾಗಿನಿಂದಲೇ ಆರಂಭವಾಗುತ್ತದೆ. ಅದರ ಕಾಲನ್ನು ಗೂಟವೊಂದಕ್ಕೆ ಕಟ್ಟಲಾಗುತ್ತದೆ. ಚಿಕ್ಕದಾದ್ದರಿಂದ ತನ್ನ ಕಾಲಿಗೆ ಕಟ್ಟಿದ ಸರಪಳಿಯಿಂದ ತಪ್ಪಿಸಿಕೊಳ್ಳಲು ಅದಕ್ಕೆ ಸಾಧ್ಯವಾಗುವುದಿಲ್ಲ. ಆಗ ಅದು ಅಸಹಾಯಕತೆಯನ್ನು ಕಲಿತು, ದೊಡ್ಡದಾದ ಮೇಲೂ ಇದೇ ಗುಣವನ್ನು ಮುಂದುವರಿಸಿ, ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡುವುದಿಲ್ಲ.

ಈಗ ಬೆಕ್ಕು, ನಾಯಿ, ಆನೆಯನ್ನು ಒಂದು ಕ್ಷಣ ಅತ್ತ ಓಡಿಸಿ, ನಮ್ಮ ವಿಷಯಕ್ಕೆ ಬರೋಣ. ಈಗ ನಮ್ಮಲ್ಲಿ ಎಷ್ಟು ಮಂದಿ ಈ ರೀತಿಯ ಅಸಹಾಯಕತೆಯನ್ನು ಕಲಿತಿಲ್ಲ?
“ನನ್ನ ಹಣೆಬರಹದಲ್ಲಿ ದೇವರು ಇಷ್ಟೆೆ ಬರೆದಿದ್ದಾನೆ’ ಎಂದು ಆರ್ಥಿಕವಾಗಿ ಮೇಲಕ್ಕೇರುವ ಪ್ರಯತ್ನವನ್ನೆೆ ಕೈಬಿಟ್ಟವರು ಎಷ್ಟು ಜನರಿಲ್ಲ? “ಅದೇನೋಪ್ಪ ನನಗೆ ಓದು ತಲೆಗೇ ಹತ್ತಲಿಲ್ಲ’ ಎಂದು ತಮ್ಮನ್ನು ತಾವು ದಡ್ಡರೆಂದು ಭಾವಿಸುವವರ ಸಂಖ್ಯೆ ಎಷ್ಟಿಲ್ಲ?
, “ನನ್ನ ಕೈಯಲ್ಲಿ ಹಣವೇ ಉಳಿಯುವುದಿಲ್ಲ’ ಎಂದು ಇದ್ದಬದ್ದ ಹಣವನ್ನೆಲ್ಲ ಅನವಶ್ಯಕವಾಗಿ ಖರ್ಚು ಮಾಡುವವರು ಎಷ್ಟು ಜನರಿಲ್ಲ?

ಈ ಎಲ್ಲಾ ಕೆಟ್ಟ ಗುಣಗಳನ್ನು ಬದಲಿಸಿಕೊಳ್ಳಲು ಸಾಧ್ಯವಿದೆ. ಬದಲಾವಣೆಗೆ ನೀವು ಸಿದ್ಧರಾಗಬೇಕಷ್ಟೆ.

ಸ್ವಾಮಿ ಜ್ಞಾನವತ್ಸಲ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ