ಗಂಡು-ಹೆಣ್ಣಿನ ಮಧ್ಯೆ ಪೈಪೋಟಿ ನಿಜಕ್ಕೂ ಎಷ್ಟು ಅಗತ್ಯ?

Team Udayavani, Jan 29, 2019, 12:30 AM IST

ಗಂಡು ಹೆಣ್ಣಿನ ನಡುವೆ ನಾನು ಮೇಲು ತಾನು ಮೇಲು ಎಂಬ ಪೈಪೋಟಿ ನಡೆಯುತ್ತಿದ್ದರೂ ಜೀವನದ ಪ್ರತಿ ಹಂತದಲ್ಲೂ ಗಂಡು ಹೆಣ್ಣಿನೆಡೆಗೆ ಆಕರ್ಷಿತನಾದರೆ, ಹೆಣ್ಣು ಗಂಡಿನೆಡೆಗೆ ಆಕರ್ಷಿತಳಾಗುತ್ತ ಇರುತ್ತಾಳೆ. ಇದು ಪ್ರಕೃತಿ-ಪುರುಷರ ನಡುವಿನ ಸೃಷ್ಟಿಯ ಆಟ. ಸಂತಾನೋತ್ಪತ್ತಿಗೂ ಗಂಡು ಹೆಣ್ಣೇ ಮೂಲ ಕಾರಣ.

ಇದು ಪೈಪೋಟಿಯ ಯುಗ, ಇಲ್ಲಿ ವಿದ್ಯಾರ್ಥಿಗಳ ಮಧ್ಯೆ, ಕ್ರೀಡಾಪಟುಗಳ ಮಧ್ಯೆ, ಉದ್ದಿಮೆಗಳ ಮಧ್ಯೆ, ನೌಕರರ ಮಧ್ಯೆ ಹೀಗೆ ಎಲ್ಲ ವರ್ಗದಲ್ಲೂ ಅಗಾಧ ಪೈಪೋಟಿಯಿದೆ. ಈ ಪೈಪೋಟಿ ಗಂಡು-ಹೆಣ್ಣಿನ ನಡುವೆಯೂ ಬೆಳೆಯುತ್ತಿದೆ. ಮಹಿಳೆಯರು ಪುರುಷರಿಗೆ ಸಮನಾಗಿ ನಿಲ್ಲಬೇಕು ಎಂಬ ಚಿಂತನೆ ಜನಪ್ರಿಯವಾದಂತೆ ಈ ಪೈಪೋಟಿ ಹೆಚ್ಚುತ್ತಿದೆ. 

ಗಂಡು-ಹೆಣ್ಣಿನ ಪೈಪೋಟಿ, ತಾರತಮ್ಯ, ಭೇದ-ಭಾವ ಇವತ್ತು ಶುರುವಾದ್ದಲ್ಲ. ಪುರಾತನ ಕಾಲದಿಂದಲೂ, ಪುರಾಣಗಳಲ್ಲೂ, ಅಷ್ಟೇ ಯಾಕೆ ಮನು ತನ್ನ ಧರ್ಮಶಾಸ್ತ್ರದಲ್ಲೂ ಧರ್ಮಾಚರಣೆಗಳು ಗಂಡು-ಹೆಣ್ಣಿಗೆ ಬೇರೆ ಬೇರೆ ಎಂದು ವಿವರಿಸಿದ್ದಾರೆ. ಕೆಲ ಮಹಿಳೆಯರು ಇದನ್ನು ಒಪ್ಪುವುದಿಲ್ಲ, ಇನ್ನು ಕೆಲವರು ಗಂಡಿನ ಅಡಿಯಾಳಾಗಿರುವುದೇ ಧರ್ಮವೆಂದು ಪರಿಪಾಲಿಸುತ್ತಾರೆ. ಮತ್ತೆ ಕೆಲವರು ಇದು ಅರ್ಧ ಸರಿ ಅರ್ಧ ತಪ್ಪು ಅಂತ ಜೀವನಪೂರ್ತಿ ಹೋರಾಟ ನಡೆಸುತ್ತಲೇ ಇರುತ್ತಾರೆ. 

ಗಂಡು ಹೆಣ್ಣಿನ ನಡುವೆ ನಾನು ಮೇಲು ತಾನು ಮೇಲು ಎಂಬ ಪೈಪೋಟಿ ನಡೆಯುತ್ತಿದ್ದರೂ ಜೀವನದ ಪ್ರತಿ ಹಂತದಲ್ಲೂ ಗಂಡು ಹೆಣ್ಣಿನೆಡೆಗೆ ಆಕರ್ಷಿತನಾದರೆ ಹೆಣ್ಣು ಗಂಡಿನೆಡೆಗೆ ಆಕರ್ಷಿತಳಾಗುತ್ತ ಇರುತ್ತಾಳೆ. ಇದು ಪ್ರಕೃತಿ ಪುರುಷರ ನಡುವಿನ ಸೃಷ್ಟಿಯ ಆಟ. ಸಂತಾನೋತ್ಪತ್ತಿಗೂ ಗಂಡು ಹೆಣ್ಣೇ ಮೂಲ ಕಾರಣ. ಆ ವಿಚಾರದಲ್ಲೂ ಅನೇಕ ಗಂಡ ಹೆಂಡತಿ ಪ್ರತಿನಿತ್ಯ ಜಗಳವಾಡುತ್ತಾರೆ.

ನಾನು ಗಂಡಸು ಎಂಬ ಜಂಭ 
ಕೆಲ ಗಂಡುಮಕ್ಕಳು ಎಲ್ಲೇ ಇರಲಿ, ಸಂಸ್ಕಾರವಂತರಾಗಿ ಬೆಳೆದಿರಲಿ ಅಥವಾ ಅವಿದ್ಯಾವಂತರೇ ಆಗಿರಲಿ, ತಾವು ಗಂಡಸರು ಎಂಬ ಅಹಂಕಾರವನ್ನು ಮಾತ್ರ ಬಿಡುವುದಿಲ್ಲ. ಗಂಡಸಿನ ಪವರ್‌ ಅವರ ತಲೆಯಲ್ಲಿ ತುಂಬಿರುತ್ತದೆ. ಸಾಮಾನ್ಯವಾಗಿ ಮನೆಯವರೇ ಈ ಅಹಂ ತುಂಬಿರುತ್ತಾರೆ. ಗಂಡು ಹೆತ್ತಿರುವ ಕೆಲವು ತಂದೆ ತಾಯಿಗಂತೂ ಎಲ್ಲಿಲ್ಲದ ಜಂಭ. ನಮ್ಮ ಮಗ ಗಂಡಸು, ಅವನು ಹೇಗೆ ಬೇಕಾದರೂ ಬೆಳೆಯುತ್ತಾನೆ, ಅವನು ಏನು ಮಾಡಿದರೂ ಸರಿ ಅಂತ ಮುದ್ದು ಮಾಡಿ ಮಾಡಿ ಅವನ ಬುದ್ಧಿಗೆ ಮಂಕು ಕವಿಸುತ್ತಾರೆ. ಅವರ ಮನೆಗೆ ಅವನು ಮುದ್ದಿನ ಮಗನಿರಬಹುದು, ಆದರೆ ಜಗತ್ತಿನಲ್ಲಿ ಅವನು ಏನು ಸಾಧನೆ ಮಾಡಿದ್ದಾನೆ? ಎಷ್ಟು ಜನರಿಗೆ ಉಪಕಾರ ಮಾಡಿದ್ದಾನೆ? ಹೋಗಲಿ, ಅವನಿಗೆ ಬೇಸಿಕ್‌ ಮಾನವೀಯತೆಯಾದರೂ ಇದೆಯೇ ಎಂಬುದು ಮುಖ್ಯ. 

ಹೆಂಗಸರ ವಾದವೇನು?
ಕೆಲ ಸ್ವಾಭಿಮಾನಿ ಹೆಂಗಸರು ಗಂಡಸರನ್ನು ಕಂಡರೆ ಉರಿದುಬೀಳುತ್ತಾರೆ. ಅದಕ್ಕೇ ಅನೇಕರು ಮದುವೆ ಕೂಡ ಆಗುವುದಿಲ್ಲ. ಮದುವೆ ಆದರೂ ಗಂಡಸಿನ ಅಡಿಯಾಗಳಾಗಿರುವುದು ನನ್ನಿಂದ ಸಾಧ್ಯವಿಲ್ಲ ಎಂದು ಕೆಲ ತಿಂಗಳು ಅಥವಾ ವರ್ಷಗಳಲ್ಲೇ ದೂರವಾಗುತ್ತಾರೆ. ಸಮಾಜದಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರವೆಸಗಿ ಜೈಲಿನಲ್ಲಿರುವವರು ಗಂಡಸರು, ದೈಹಿಕ ಹಿಂಸೆ ನೀಡಿ ಮಹಿಳೆಯರನ್ನು ಸಾಯಿಸಿರುವವರಲ್ಲಿ ಗಂಡಸರೇ ಹೆಚ್ಚು. ರಸ್ತೆಯಲ್ಲಿ ಆ್ಯಕ್ಸಿಡೆಂಟ್‌ ಮಾಡಿ ಜಗಳವಾಡುವವರು ಗಂಡಸರು ಎಂದು ಪಟ್ಟಿ ಕೊಡುತ್ತಾರೆ. ನೀವೇ ಗಮನಿಸಿ, ಹೆಣ್ಣುಮಕ್ಕಳು ಅತಿ ವೇಗದಿಂದ ವಾಹನ ಚಲಾಯಿಸಿ ಓವರ್‌ಟೇಕ್‌ ಮಾಡಲು ಹೋಗುವುದಿಲ್ಲ. ಬಡಪಾಯಿ ಹೆಣ್ಣು ಬೀದಿಯಲ್ಲಿದ್ದರೂ ಗಂಡಸರು ಸುಮ್ಮನೆ ಬಿಡುವುದಿಲ್ಲ. ವೇಶ್ಯೆಯರ ಬಳಿ ಹೋಗುವ ಗಂಡಸರು ಆಕೆಯನ್ನು ಉಪಯೋಗಿಸಿಕೊಂಡು ಕೊನೆಗೆ ಆಕೆ ವೇಶ್ಯೆ ಎಂದು ಅವಳನ್ನೇ ದೂಷಿಸುತ್ತಾರೆ. ಆ ಗಂಡಿಗೆ ಜನ್ಮ ನೀಡಿರುವವಳೂ ಒಂದು ಹೆಣ್ಣು. ಅವನ ಮುಂದಿನ ಪೀಳಿಗೆಗೂ ಕಾರಣ ಒಂದು ಹೆಣ್ಣು ಅನ್ನುವುದನ್ನು ಮರೆತು ಹೆಣ್ಣನ್ನು ಹೀಯಾಳಿಸುವ ಗಂಡು ಜಾತಿಯಿಂದ ನಾವು ದೂರ ಇರುತ್ತೇವೆ ಎನ್ನುವ ಹುಡುಗಿಯರು ಹೆಚ್ಚಾಗಿದ್ದಾರೆ.

ಗಂಡಸರ ವಾದವೇನು? 
ನಾವು ಹೊರಗಡೆ ಗಂಡ ಅಂತ ಹಣೆಪಟ್ಟಿ ಹಚ್ಚಿಕೊಂಡಿದ್ದರೂ ಮನೆಯಲ್ಲಿ ಅವಳೇ ಗಂಡ. ಹೆಣ್ಣು ಕೊಡುವ ಕಿರುಕುಳವನ್ನು ಸಹಿಸಿಕೊಂಡು ಗಂಡ ಹೊರಗಡೆಯೂ ಹೋಗಿ ದುಡಿಯಬೇಕು. ಇನ್ನೊಂದೆಡೆ ನಾನು ಜೀವನ ಪೂರ್ತಿ ದುಡಿದು ಮನೆಗೆ ತಂದು ಹಾಕಿದರೂ ನನ್ನನ್ನು ಆಟ ಆಡಿಸುವವಳು ಹೆಣ್ಣು. ಚಿಕ್ಕ ವಯಸ್ಸಿನಿಂದ ಅಮ್ಮ ಗದರುತ್ತಿದ್ದಳು, ಈಗ ಹೆಂಡತಿ ಕಣ್ಣಲ್ಲೇ ಅರೆಸ್ಟ್‌ ಮಾಡುತ್ತಾಳೆ. ವಾಸ್ತವ ಹೀಗಿದ್ದರೂ ಹೊರಗೆ ಸಮಾಜದಲ್ಲಿ ಗಂಡು-ಹೆಣ್ಣಿಗೆ ಸಮಾನತೆ ಇರಬೇಕು, ಹೆಣ್ಣಿನ ಮೇಲೆ ದೌರ್ಜನ್ಯ ನಿಲ್ಲಬೇಕು ಎಂದು ಹೋರಾಟ ನಡೆಯುವುದನ್ನು ನೋಡಿದಾಗ ನಮ್ಮಂತಹ ಬಡಪಾಯಿ ಗಂಡಸರು ಬಾಯಿಬಿಟ್ಟು ನಮ್ಮ ಕಷ್ಟ ಹೇಳಿಕೊಂಡರೂ ಯಾರೂ ನಂಬುವುದಿಲ್ಲ ಎಂದು ಸುಮ್ಮನಿರುತ್ತೇವೆ. ಇವೆಲ್ಲದರ ನಡುವೆ ಬೇರೆ ದಾರಿಗೆ ತರಲು ಸಾಧ್ಯವಿಲ್ಲ. ಇವರು ಗಂಡಸಿನ ಥರ ಆಡಿದ ಮಾತ್ರಕ್ಕೆ ಗಂಡಸರಾಗುವುದಿಲ್ಲ ಬಿಡಿ ಎಂದೂ ಗಂಡಸರು ಹೇಳುತ್ತಾರೆ.

ಕೊನೆ ಬುಡವಿಲ್ಲದ ವಿತಂಡ ವಾದ
ಹೆಣ್ಣು ಹೀಗೇ ಇರಬೇಕು ಹಾಗೇ ಇರಬೇಕು ಎಂದು ದೇವರೇನೂ ಹೇಳಿಲ್ಲ. ಪುರಾಣಗಳಲ್ಲಿರುವ ಹೆಣ್ಣಿನ ಪಾತ್ರಗಳನ್ನು ಚಿತ್ರಿಸಿದವರೂ ಗಂಡಸರೇ. ಹೆಣ್ಣನ್ನು ಆಕರ್ಷಣೆಯ ಸರಕಿನಂತೆ, ಜೀವನ ಪೂರ್ತಿ ತನ್ನ ಸೇವೆ ಮಾಡಿಕೊಂಡು ಇರುವಂತೆ ಚಿತ್ರಿಸಿ, ಧರ್ಮದ ನೆಪ ಹೇಳಿ ಬೇಳೆ ಬೇಯಿಸಿಕೊಳ್ಳುತ್ತಾರೆ. ಹೆಣ್ಣನ್ನು ಇವರು ಯಾಕೆ ಬಗ್ಗಿಸಬೇಕು? ಅವಳ ಸ್ವಾಭಿಮಾನವನ್ನು ಮುರಿಯುವುದಕ್ಕೆ ನೀವು ಯಾರು? ಭೂಮಿ ತಾಯಿ, ಭಾರತ ಮಾತೆ, ಹೆಣ್ಣಿನ ಹೆಸರಿನಲ್ಲೇ ಇರುವ ನದಿಗಳು ಸಹ ಯಾವುತ್ತೂ ಎದ್ದುನಿಂತು ಗಂಡಿನ ಥರ ತಾಳ್ಮೆ ಮರೆತು ವರ್ತಿಸಿಲ್ಲ. ಹಾಗಿದ್ದ ಮೇಲೆ ನಾವ್ಯಾಕೆ ಗಂಡಸರ ರೀತಿ ವರ್ತಿಸಬೇಕು? ನಮಗೆ ನಾವು ಹೆಣ್ಣು ಎಂಬ ಗೌರವವಿದೆ ಎಂಬುದು ಹುಡುಗಿಯರ ವಾದ. 

ಈ ವಾದ ವಿವಾದಕ್ಕೆ ಮೂಲ, ಮಧ್ಯ, ಅಂತ್ಯ ಯಾವುದೂ ಇಲ್ಲ. ಗಂಡು ಹೆಣ್ಣು ಹೀಗೆ ಇರಬೇಕು ಎಂದು ಯಾವ ಅಪೌರುಷೇಯ ಗ್ರಂಥದಲ್ಲೂ ಚರ್ಚಿಸಿ ದೇವರು ಟೈಮ್‌ ವೇಸ್ಟ್‌ ಮಾಡಿಲ್ಲ! ಮುಕ್ತಿಗೆ, ಜೀವಾತ್ಮಕ್ಕೆ ಭಕ್ತಿಗೆ ಲಿಂಗಬೇಧ‌ವಿಲ್ಲ. ಈ ಹಿನ್ನೆಲೆಯಲ್ಲಿ ಭಗವದ್ಗೀತೆಯ ಒಂದು ಶ್ಲೋಕ ಗಮನಾರ್ಹ.

ಮಾಂ ಹಿ ಪಾರ್ಥ ವ್ಯಪಾಶ್ರತ್ಯ
ಯೇಪಿ ಸ್ಯು ಪಪಯೋನಯಃ|
ಸ್ತ್ರೀಯೋ ವೈಶ್ಯಾಸ್ತಥಾ ಶೂದ್ರಾಸ್ತೇಪಿ
ಯಾಂತಿ ಪರಾಂ ಗತಿಮ್‌||

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಲೇಖಕರ ಪರಿಚಯ ಅಮೆರಿಕದ ಶಿಕಾಗೋ ಮೂಲದ ರಿಚರ್ಡ್‌ ಸ್ಲಾéವಿನ್‌ ಆಧ್ಯಾತ್ಮದ ಹಾದಿ ಹಿಡಿದು ರಾಧಾನಾಥ ಸ್ವಾಮೀಜಿ  ಆದರು.ಇಸ್ಕಾನ್‌ನ ನಿರ್ದೇಶನ ಮಂಡಳಿಯ ಹಿರಿಯ...

  • ನಾನೀಗ ನಿಮಗೆ ಮೂವರು ಕಳ್ಳರ ಕಥೆಯನ್ನು ಹೇಳುತ್ತೇನೆ. ಮೊದಲ ಕಳ್ಳನ ಹೆಸರು ಇಮ್ಯಾನುವೆಲ್ ನಿಂಜರ್‌. ಈತನನ್ನು 'ಜಿಮ್‌, ದಿ ಪೆನ್‌ ಮ್ಯಾನ್‌' ಎಂದೂ ಕರೆಯಲಾಗುತ್ತಿತ್ತು. ಅದು...

  • ನವರಸಗಳನ್ನು ವ್ಯಕ್ತಪಡಿಸುವ ಮಾಧ್ಯಮ ನಟನೆಯೇ ಆಗಿದ್ದರೂ ಅವು ವಾಸ್ತವದಲ್ಲಿ ನಮ್ಮೊಳಗೆ ಸಹಜವಾಗಿ ಅಡಗಿರುವ ಭಾವನೆಗಳು. ಆ ಭಾವನೆಗಳನ್ನು ಅದುಮಿಟ್ಟುಕೊಳ್ಳಬಾರದು....

  • ಅತಿಥಿ ದೇವೋಭವ ಎಂಬುದು ಭಾರತೀಯ ಪರಂಪರೆಯ ಘೋಷವಾಕ್ಯವಷ್ಟೇ ಅಲ್ಲ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯ ಕೂಡ. ಮನೆಗೆ ಬರುವ ಅತಿಥಿಗಳನ್ನು ದೇವರಂತೆ...

  • ಮಕ್ಕಳು ಹುಟ್ಟಿದಾಗ ಸಂಭ್ರಮಿಸಿ, ಮಗುವನ್ನು ಯಾವಾಗಲೂ ಕಂಕುಳಲ್ಲಿ ಎತ್ತಿಕೊಂಡು, ಮಡಿಲಲ್ಲಿ ಮಲಗಿಸಿಕೊಂಡು, ತಪ್ಪು ಮಾಡಿದರೂ ಮುತ್ತು ಕೊಡುತ್ತಾ ನಮ್ಮನ್ನು...

ಹೊಸ ಸೇರ್ಪಡೆ