ಆಧುನಿಕ ಭಾರತ ಮರೆತ ಉದಾತ್ತಗುಣ, “ಅತಿಥಿ ದೇವೋ ಭವ’

Team Udayavani, Mar 5, 2019, 1:00 AM IST

ಅತಿಥಿ ದೇವೋಭವ ಎಂಬುದು ಭಾರತೀಯ ಪರಂಪರೆಯ ಘೋಷವಾಕ್ಯವಷ್ಟೇ ಅಲ್ಲ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯ ಕೂಡ. ಮನೆಗೆ ಬರುವ ಅತಿಥಿಗಳನ್ನು ದೇವರಂತೆ ಕಾಣಬೇಕೆಂಬುದು ಇದರ ಆಶಯ.

ಆದರೆ ನಾವು ಎಷ್ಟು ಜನ ನಿಜವಾಗಲೂ ಅತಿಥಿಗಳನ್ನು ದೇವರಂತೆ ಕಾಣುತ್ತೇವೆ? ದೇವರನ್ನೇ ದೇವರನ್ನಾಗಿ ಕಾಣದ ನಾವು, ಮನೆಗೆ ಬರುವ ಮನುಷ್ಯರನ್ನು ದೇವರೆಂದು ಆದರಿಸು ತ್ತೇವಾ? ನಿಜಕ್ಕೂ ಅತಿಥಿ ದೇವೋಭವ ಎಂಬ ಭಾವನೆ ಇಟ್ಟುಕೊಂಡವರು ಬಹಳ ವಿರಳ. ಬಹಳ ಜನರು ಆಯ್ದ ಕೆಲ ಅತಿಥಿಗಳನ್ನು ಬಹಳ ಗೌರವದಿಂದ ಕಾಣುತ್ತಾರೆ. ಇನ್ನು ಕೆಲವರನ್ನು ಬೇಕಾಬಿಟ್ಟಿ ನೋಡುತ್ತಾರೆ, ಮತ್ತೆ ಕೆಲವರನ್ನು ಕೇರ್‌ ಕೂಡ ಮಾಡುವುದಿಲ್ಲ. ಅಯ್ಯೋ ಬಿಡು, ಅವರನ್ನೇನು ಮಾತನಾಡಿಸೋದು, ಅವರಿಂದ ನಮಗೇನೂ ಆಗ್ಬೇಕಾಗಿಲ್ಲ ಅಂತ ಮನಸ್ಸಿನಲ್ಲೇ ಲೆಕ್ಕಹಾಕಿ ಕಡೆಗಣಿಸುತ್ತಾರೆ. ಆದರೆ, ತಾವು ಬೇರೆಯವರ ಮನೆಗೆ ಹೋದಾಗ ಮಾತ್ರ ಅಲ್ಲಿರುವ ಎಲ್ಲರೂ ಬಹಳ ಗೌರವಾದರದಿಂದ ನೋಡಿಕೊಳ್ಳಬೇಕು ಎಂದು ಬಯಸುತ್ತಾರೆ.

ಈಗ ಬಂದ್ರಾ, ಚೆನ್ನಾಗಿದ್ದೀರಾ, ಮನೆಯಲ್ಲೆಲ್ಲ ಚೆನ್ನಾಗಿದ್ದಾರಾ, ಕುಡಿಯೋದಕ್ಕೆ ಏನು ಕೊಡಲಿ, ಬನ್ನಿ ಊಟ ಮಾಡೋರಂತೆ… 

ಇದು ಮನೆಗೆ ಯಾರೇ ಬಂದರೂ ನಮ್ಮ ಹಿರಿಯರು ಆದರಿಸುತ್ತಿದ್ದ ರೀತಿ. ಈಗ ನಮಗೆ ಇದೆಲ್ಲ ಮರೆತೇ ಹೋಗಿದೆ. ಕೆಲ ಸಲ ಬೇರೆಯವರ ಮನೆಗೆ ಹೋದಾಗ ತುಂಬಾ ಹೊಟ್ಟೆ ಹಸಿದಿರುತ್ತದೆ. ಕನಿಷ್ಠ ಪಕ್ಷ ಒಂದು ಲೋಟ ಕಾಫಿಯನ್ನಾದರೂ ಕೊಡಲಿ ಎಂದು ಮನಸ್ಸು ಬಯಸುತ್ತಿರುತ್ತದೆ. ಆದರೆ ಆ ಮನೆಯವರು ಕಾಫಿ ಹಾಗಿರಲಿ, ನೀರು ಬೇಕಾ ಅಂತಲೂ ಕೇಳುವುದಿಲ್ಲ, ನೀರನ್ನೇನೋ ನಾವೇ ಕೇಳಬಹುದು. ಆದರೆ, ಕಾಫಿ ಕೊಡಿ, ತಿಂಡಿ ಕೊಡಿ ಎಂದು ಕೇಳಲು ಸಾಧ್ಯವೇ? ಇಂತಹ ಅನುಭವ ನಮಗೆಲ್ಲ ಒಮ್ಮೆಯಾದರೂ ಆಗಿಯೇ ಇರುತ್ತದೆ. ಆದರೆ ಇದರಿಂದ ಬುದ್ಧಿ ಕಲಿತು ನಾವೇನೂ ನಮ್ಮ ಮನೆಗೆ ಬರುವ ಅತಿಥಿಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುವುದಿಲ್ಲ, ಕಾಫಿ ಕುಡೀತೀರಾ ಎಂದು ಕಾಟಾಚರಕ್ಕೆ ಕೇಳಿ, ಅವರು ಶಿಷ್ಟಾಚಾರಕ್ಕೆ ಬೇಡ ಅಂದರೆ ಮುಗಿಯಿತು, ನಾವು ಸಮ್ಮನಾಗಿಬಿಡುವುದೂ ಉಂಟು.

ಅಭ್ಯಾಗತ ದೇವೋಭವ 
ಆಗೊಂದು ಕಾಲ ಇತ್ತು. ಜನರು ಅಪಾಯಿಂಟ್‌ಮೆಂಟ್‌ ತೆಗೆದುಕೊಳ್ಳದೆ ತಮಗಿಷ್ಟ ಬಂದಾಗ ನೆಂಟರಿಷ್ಟರ ಮನಗೆ ಹೋಗುತ್ತಿದ್ದರು. ಅತಿಥಿ ಅಂದರೆ ತಿಥಿ (ದಿನ, ಸಮಯ ಇತ್ಯಾದಿ) ನೋಡದೆ ಬರುವವ ಎಂದರ್ಥ. ಅವರು ಆಮಂತ್ರಿತರೂ ಆಗಿರಬಹುದು ಅಥವಾ ಆಮಂತ್ರಣವಿಲ್ಲದೆ ಬಂದವರೂ ಆಗಿರಬಹುದು. ಅಭ್ಯಾಗತ ಅಂದರೆ ಹೊರಗಿನಿಂದ ಬಂದವ, ಈಗಷ್ಟೇ ಬಂದವ ಎಂದು ಅರ್ಥ. ಇಬ್ಬರೂ ಅನಿರೀಕ್ಷಿತವಾಗಿ ಬಂದವರಾಗಿರಬಹುದು ಅಥವಾ ಕರೆಸಿಕೊಂಡು ಬಂದವರೂ ಆಗಿರಬಹುದು. ಇವರಿಬ್ಬರಿಗೂ ಹಿಂದೆಲ್ಲ ಭರಪೂರ ಆತಿಥ್ಯ ಸಿಗುತ್ತಿತ್ತು.

ಆದರೆ ಇಂದು ಯಾರೂ ತಮಗಿಷ್ಟ ಬಂದಾಗ ನೆಂಟರ ಮನೆಗೆ ಹೋಗುವಂತಿಲ್ಲ ಎಂಬ ಕಾಲ ಬಂದಿದೆ. ಸ್ವಂತ ನೆಂಟರಾದರೂ, ಅಕ್ಕ, ಅಣ್ಣ, ಗಂಡ, ಹೆಂಡತಿ ಯಾರೇ ಆಗಿದ್ದರೂ ಸಮಯವನ್ನು ಮೊದಲೇ ನಿಗದಿಪಡಿಸಿಕೊಂಡು ಹೋಗುವ ಪಾಶ್ಚಾತ್ಯ ಪದ್ಧತಿ ನಮ್ಮ ದೇಶಕ್ಕೂ ಕಾಲಿಟ್ಟಿದೆ. ಹೀಗೇ ಹೋಗುತ್ತಿದ್ದೆ, ನಿಮ್ಮ ಮನೆ ಇಲ್ಲೇ ಇರುವುದು ನೆನಪಾಯಿತು, ಯೋಗಕ್ಷೇಮ ವಿಚಾರಿಸಿಕೊಂಡು ಹೋಗೋಣ ಅಂತ ಬಂದೆ… ಎಂದು ನಮ್ಮ ತಂದೆ, ಅಜ್ಜನ ಕಾಲದಲ್ಲಿ ಹಿತೈಷಿಗಳು ಮನೆಗೆ ಬರುತ್ತಿದ್ದರು. ಹಾಗೆ ಬಂದವರು ಒಳ್ಳೆಯ ಆತಿಥ್ಯ ಪಡೆದು, ಊಟ ಮಾಡಿಕೊಂಡು ಹೋಗುತ್ತಿದ್ದರು. ಈಗ ಯಾರಾದರೂ ಹೇಳದೆ ಕೇಳದೆ ಬಂದರೆ, ಅಯ್ಯೋ ಈಗ್ಯಾಕೆ ಬರೋಕೆ ಹೋದೆ? ಮೊದಲೇ ಒಂದು ಪೋನ್‌ ಮಾಡಬಾರದಿತ್ತಾ? ನಾನು ಹೊರಗೆ ಹೋಗುತ್ತಿದ್ದೇನೆ, ಸ್ವಲ್ಪ ಕೆಲಸ ಇದೆ, ಆಮೇಲೆ ಸಿಗೋಣ ಎಂದು ಹೊರಟುಬಿಡುವವರೂ ಇದ್ದಾರೆ.

ಅತಿಥೇಯರ ಸಣ್ಣ ಬುದ್ಧಿ
ನಾವು ಚಿಕ್ಕವರಿದ್ದಾಗ ರಜೆ ಬಂತೆಂದರೆ ಸಾಕು ಸಂಬಂಧಿಕರ ಮನೆಗೆ ಹೋಗುತ್ತಿದ್ದವು. ಅವರು ಇವಳಾÂಕೆ ಬಂದಳು ಎಂದುಕೊಳ್ಳದೆ ಪ್ರೀತಿಯಿಂದ ನೋಡಿಕೊಂಡು, ಎಷ್ಟು ದಿನ ಇದ್ದರೂ ಉಪಚರಿಸಿ ಕಳಿಸುತ್ತಿದ್ದರು. ಈಗ ಯಾರೇ ಅತಿಥಿ ಮನೆಗೆ ಬಂದರೂ ಮನೆಯ ದೊಡ್ಡವರೇ ಲೆಕ್ಕಾಚಾರ ಹಾಕುತ್ತಾರೆ, ಅಡುಗೆ ಮನೆಯಲ್ಲಿ ಗುಟ್ಟಾಗಿ ಮಾತನಾಡಿಕೊಳ್ಳುತ್ತಾರೆ, ಇವನು ಎಷ್ಟು ದಿನ ಇರ್ತಾನೆ… ಈಗಲೇ ಬರಬೇಕಿತ್ತಾ… ಸುಮ್ನೆ ಖರ್ಚು… ಹೇಳ್ಳೋ ಹಾಗೂ ಇಲ್ಲ ಬಿಡೋಹಾಗೂ ಇಲ್ಲ… ಎಂದೆಲ್ಲ ಗುಸುಗುಸು ಮಾಡುತ್ತಾರೆ. ದೊಡ್ಡವರು ಹೀಗೆ ಮಾಡುವುದನ್ನು ನೋಡಿ ಚಿಕ್ಕವರೂ ಅದನ್ನೇ ಕಲಿತಿದ್ದಾರೆ. ಅತಿಥಿಗಳನ್ನು ಸತ್ಕರಿಸುವುದು ಬಿಡಿ, ಅವರನ್ನು ನೋಡಿ ನಗೋದೂ ಇಲ್ಲ. ಕೆಲವು ಸಲ ನಮ್ಮ ಸಂಬಂಧಿಕರೇ ಬಂದಿದ್ದರೂ ಅವರು ಹೇಗೆ ನಮಗೆ ಸಂಬಂಧ ಎಂಬುದು ಕೂಡ ನಮಗೆ ಗೊತ್ತಿರುವುದಿಲ್ಲ. ಅದನ್ನು ತಿಳಿದುಕೊಳ್ಳಲು ಪ್ರಯತ್ನಪಡುವುದೂ ಇಲ್ಲ. 

ಪುರಾಣಗಳಲ್ಲಿ ಋಷಿಮುನಿಗಳು ಅತಿಥಿಗಳಿಗೆ ಬಹಳ ಪ್ರಾಮುಖ್ಯತೆ ಕೊಡುತ್ತಿದ್ದರು. ಅತಿಥಿ ಬಂದರೆ ದೇವರೇ ಬಂದಂತೆ ಸೇವೆ ಮಾಡುತ್ತಿದ್ದರು. ಕಾಲು ತೊಳೆದು, ನೀರು ಕೊಟ್ಟು ಊಟ ಬಡಿಸಿ, ವಿಶ್ರಾಂತಿ ನೀಡಿ ಸತ್ಕರಿಸುತ್ತಿದ್ದರು, ಅವರಿಗೆ ಯಾವುದಕ್ಕೂ ಕೊರತೆ ಮಾಡದೆ ಒಳ್ಳೆಯ ಆಹಾರವನ್ನು ಅವರಿಗೆ ಬಡಿಸಿ, ಉಳಿದಿದ್ದನ್ನು ತಾವು ಸೇವಿಸುತ್ತಿದ್ದರು. ಭಕ್ತ ಸಿರಿಯಾಳನ ಮನೆಗೆ ಶಿವನೇ ವೇಷಧಾರಿಯಾಗಿ ಬಂದು ನಿನ್ನ ಮಗನನ್ನು ಕತ್ತರಿಸಿ ಅಡುಗೆ ಮಾಡಿ ಹಾಕಬೇಕು ಎಂದು ಹೇಳಿದ ಕತೆ ನಿಮಗೆ ಗೊತ್ತು. ಅದನ್ನು ದುಃಖದಿಂದ ಮಾಡಬಾರದು, ಸಂತೋಷದಿಂದ ಅಡುಗೆ ಮಾಡಿ ಬಡಿಸಬೇಕು ಎಂದು ಶಿವ ಪರೀಕ್ಷೆ ಒಡ್ಡಿದ. ಇದು ಅತಿಥಿ ದೇವೋಭವದ ಪರಾಕಷ್ಠೆ ಅನ್ನಿಸಿದರೂ ಅದರ ಹಿಂದಿನ ಆಶಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. 

ವಿದೇಶಿ ಅತಿಥಿಗಳ ದುರ್ಬಳಕೆ 
ಮನೆಗೆ ಬರುವ ಅತಿಥಿಗಳನ್ನು ಕಡೆಗಣಿಸುವುದು ಒಂದೆಡೆಯಾದರೆ, ನಮ್ಮ ದೇಶಕ್ಕೆ ಬರುವ ಅತಿಥಿಗಳನ್ನು ದುರ್ಬಳಕೆ ಮಾಡಿಕೊಳ್ಳುವವರೂ ಸಾಕಷ್ಟಿದ್ದಾರೆ. ಪ್ರವಾಸಿ ತಾಣಗಳಲ್ಲಿ ಇದನ್ನು ರಾಜಾರೋಷವಾಗಿ ಮಾಡುತ್ತಾರೆ. ಅತಿಥಿ ಸತ್ಕಾರ ಬಿಡಿ, ಕೆಲವರಿಗೆ ತಿಥಿ ಮಾಡಿ ಕಳಿಸಿದ್ದಾರೆ! ಅನೇಕ ವಿದೇಶಿ ಮಹಿಳೆಯರನ್ನು ಬಲಾತ್ಕಾರ ಮಾಡಿ ಕೊಲೆ ಮಾಡಿದ್ದಾರೆ. ಸಹಾಯ ಮಾಡುತ್ತೇವೆ ಎಂದು ಹೇಳಿ, ವಿದೇಶಿಗರ ಹಣ ಕದ್ದಿದ್ದಾರೆ. ಅತಿಥಿಗಳ ನಂಬಿಕೆಗೆ ದ್ರೋಹ ಮಾಡಿದ್ದಾರೆ. ಈ ಕೆಟ್ಟಬುದ್ದಿ ನಮಗೆ ಎಲ್ಲಿಂದ ಬಂತು? ಯಾರಿಂದ ಬಂತು? ನಮ್ಮ ಹಿರಿಯರಿಂದ ಬಂತಾ? ಅಥವಾ ನಾವು ತೀರಾ ಎಲ್ಲದರಲ್ಲೂ ಲೆಕ್ಕಾಚಾರಕ್ಕೆ ಇಳಿದು ಸ್ವಾರ್ಥಬುದ್ಧಿಯಿಂದ ಈಗ ಕಲಿತುಕೊಂಡಿದ್ದೇವಾ?

ನಮ್ಮನ್ನು ಬೇರೆಯವರು ಕೀಳಾಗಿ ಕಂಡಾಗಲೇ ನಮಗೆ ನೋವಿನ ಅರಿವಾಗುವುದು. ನಾವು ಬೇರೆಯವರ ಮನೆಗೆ ಹೋದಾಗ ಅವರು ನಮ್ಮನ್ನು ಸರಿಯಾಗಿ ಟ್ರೀಟ್‌ ಮಾಡಲಿಲ್ಲ ಅಂತಾದರೆ ನಮಗೆ ಬೇಸರವಾಗುವುದಿಲ್ಲವೇ? ಅದನ್ನು ಮನಸ್ಸಿನಲ್ಲಿಟ್ಟುಕೊಂಡಾದರೂ ಅತಿಥಿಗಳಿಗೆ ಸತ್ಕಾರ ಮಾಡಬೇಕು. ಯಾರೂ ತಮಗೆ ಊಟಕ್ಕೆ ಗತಿಯಿಲ್ಲವೆಂದು ನಿಮ್ಮ ಮನೆಗೆ ಬರುವುದಿಲ್ಲ. ಇವರು ನಮ್ಮವರು ಎಂಬ ಭಾವನೆಯಿಂದ ಬಂದಿರುತ್ತಾರೆ. ನಿಜವಾದ ಅತಿಥಿಗಳು ಹದಿನೈದಿಪ್ಪತ್ತು ದಿನ ಉಳಿದುಕೊಳ್ಳುವುದೂ ಇಲ್ಲ. ಒಂದೋ ಎರಡೋ ದಿನ ಇದ್ದು ಹೋಗುತ್ತಾರೆ. ಅವರನ್ನು ಕಡೆಗಣಿಸಿ ನಮ್ಮ ಪರಂಪರೆಯನ್ನು ಧಿಕ್ಕರಿಸಬೇಕೆ?

– ರೂಪಾ ಅಯ್ಯರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಯಾವುದೇ ಬದಲಾವಣೆ ಇರಲಿ, ಅದು ಒಂದು ಪ್ರಶ್ನೆಯಿಂದ ಆರಂಭವಾಗುತ್ತದೆ. "ಏಕೆ ಹೀಗೆ?' ಎನ್ನುವುದೇ ಆ ಪ್ರಶ್ನೆ. ಪ್ರಶ್ನೆಯಲ್ಲಿ ಎರಡೇ ಪದಗಳಿವೆ. ಆದರೆ, ಮೂರ್ತಿ ಚಿಕ್ಕದಾದರೂ...

  • ನಾವು ಈ ಜಗತ್ತಿನಲ್ಲಿ ಕೆಲವೇ ಸಮಯ ತಂಗಲು ಬಂದವರು. ಆದರೆ ನಮ್ಮ ಗೊಂದಲಮಯ ಬುದ್ಧಿ ಇದೆಯಲ್ಲ, ಇದು ಈ ಸತ್ಯವನ್ನು ಗಟ್ಟಿಯಾಗಿ ಮನನ ಮಾಡಿಕೊಳ್ಳುವುದೇ ಇಲ್ಲ. ಇಂದು...

  • ಖ್ಯಾತ ನೀತಿ ಕಥೆಯೊಂದನ್ನು ನೀವೂ ಕೇಳಿರುತ್ತೀರಿ. ಈ ಕಥೆ ಹಲವು ದೇಶಗಳಲ್ಲಿ ಜನಪ್ರಿಯವಾಗಿದೆ. ಬೌದ್ಧ ಭಿಕ್ಕುಗಳಿಬ್ಬರು ನದಿಯೊಂದರಲ್ಲಿ ತಮ್ಮ ಪಾತ್ರೆಗಳನ್ನು...

  • ಸಂಶೋಧಕರ ತಂಡವೊಂದು ಬೃಹತ್‌ ಶಾರ್ಕ್‌ ಮೀನನ‌್ನು ಒಂದು ದೊಡ್ಡ ಟ್ಯಾಂಕ್‌ನಲ್ಲಿ ಬಿಟ್ಟಿತು. ಆ ಟ್ಯಾಂಕ್‌ನಲ್ಲಿ ಮೊದಲೇ ಹಲವು ಚಿಕ್ಕ ಮೀನುಗಳನ್ನು ಬಿಡಲಾಗಿತ್ತು....

  • ಜೀವನದ ಅನೇಕ ಕ್ಷೇತ್ರಗಳಲ್ಲಿ ಸಾಫ‌ಲ್ಯ ಪಡೆಯುವ ಅತಿ ಮುಖ್ಯ ಮಾರ್ಗ ಯಾವುದು? ಒಂದು ಅತ್ಯುತ್ತಮ ಮಾರ್ಗವೆಂದರೆ ಆತ್ಮ ಸಂಯಮ. 1960ರಲ್ಲಿ ಸ್ಟಾನ್‌ಫ‌ರ್ಡ್‌ ವಿಶ್ವವಿದ್ಯಾಲಯದ...

ಹೊಸ ಸೇರ್ಪಡೆ