ಬಳಸದೆ ಬಿಟ್ಟ ರಸಗಳು ಯಾವುವು ಗೊತ್ತಾ? 

Team Udayavani, Mar 19, 2019, 12:30 AM IST

ನವರಸಗಳನ್ನು ವ್ಯಕ್ತಪಡಿಸುವ ಮಾಧ್ಯಮ ನಟನೆಯೇ ಆಗಿದ್ದರೂ ಅವು ವಾಸ್ತವದಲ್ಲಿ ನಮ್ಮೊಳಗೆ ಸಹಜವಾಗಿ ಅಡಗಿರುವ ಭಾವನೆಗಳು. ಆ ಭಾವನೆಗಳನ್ನು ಅದುಮಿಟ್ಟುಕೊಳ್ಳಬಾರದು. ಇವಳು ಅತೀ ನಟನೆ ಮಾಡ್ತಾಳೆ ಎಂದು ಬೇರೆಯವರು ಅಂದುಕೊಂಡರೂ ಪರವಾಗಿಲ್ಲ. ನಮ್ಮನ್ನು ನಾವು ಸಂಪೂರ್ಣ ವ್ಯಕ್ತಪಡಿಸುತ್ತಿರಬೇಕು. ಇಲ್ಲವಾದರೆ ಸಹಜವಾದ ನಟನೆ ನಮ್ಮಿಂದ ದೂರವಾಗಿ ಕೃತಕ ನಟನೆ ನಮ್ಮನ್ನು ಅಂಟಿಕೊಳ್ಳುತ್ತದೆ. ಆಗ ಜೀವನದಲ್ಲಿ ಪ್ರತಿಯೊಂದನ್ನೂ ಕೃತಕವಾಗಿ ನಟಿಸಲು ಶುರುಮಾಡುತ್ತೇವೆ. ಆದರಿಂದ ಬದುಕೇ ಕೃತ್ರಿಮವಾಗುತ್ತದೆ. ಇಂತಹ ನಟನೆ ಒಳ್ಳಯದಲ್ಲ. 

ನಟನೆ ಅಂದಾಕ್ಷಣ ನಮಗೆಲ್ಲ ಸಿನಿಮಾ ನಟರು ಮತ್ತು ನಾಟಕ ರಂಗದವರೇ ನೆನಪಿಗೆ ಬರುತ್ತಾರೆ. ನಟಿಸುವುದು ಅವರು ಮಾತ್ರ ಎಂದು ನಾವೆಲ್ಲ ಅಂದುಕೊಂಡಿದ್ದೇವೆ. ಸೂಕ್ಷ್ಮವಾಗಿ ಗಮನಿಸಿ ನೋಡಿ; ನಾವು ಜನಸಾಮಾನ್ಯರು ಕೂಡ ಪ್ರತಿದಿನ ನಮ್ಮ ದೈನಂದಿನ ವ್ಯವಹಾರದಲ್ಲಿ ಸಾಕಷ್ಟು ನಟನೆ ಮಾಡುತ್ತೇವೆ. ನಟನೆ ಅಂದಾಕ್ಷಣ ಅದು ಕೃತಕ, ಕಪಟ ಅಥವಾ ಕೃತ್ರಿಮ ಎಂದುಕೊಳ್ಳಬೇಕಿಲ್ಲ. ನಾವು ನಮಗೆ ಗೊತ್ತಿಲ್ಲದೆ ಬಹಳ ಸಹಜವಾಗಿಯೇ ನಟಿಸುತ್ತಿರುತ್ತೇವೆ. ಈ ವಿಷಯದಲ್ಲಿ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಒಂಥರಾ ನಟನೇ.

ನಂಬಿಕೆ ಬರಲಿಲ್ಲವೇ? ನೀವು ಇನ್ನೊಬ್ಬರ ಜೊತೆ ಮಾತನಾಡುವಾಗ ಹೇಗಿರುತ್ತೀರಿ ಎಂಬುದನ್ನೊಮ್ಮೆ ಕಲ್ಪಿಸಿಕೊಳ್ಳಿ, ನಿಮ್ಮ ಕೈಗಳು ಅತ್ತಿತ್ತ ಚಲಿಸುತ್ತಿರುತ್ತವೆ. ಮಾತಿನಲ್ಲಿ ಏರಿಳಿತ ಆಗುತ್ತಿರುತ್ತದೆ. ಮುಖದ ಭಾವನೆಗಳು ಬದಲಾಗುತ್ತಿರುತ್ತವೆ. ಉದ್ದೇಶಪೂರ್ವಕವಾಗಿ ಅಥವಾ ನಿಮಗೆ ಗೊತ್ತಿಲ್ಲದೆಯೇ 

ನೀವು ನಿಮ್ಮ ಮಾತಿಗೆ ತಕ್ಕಂತೆ ಅಭಿನಯಿಸುತ್ತಿರುತ್ತೀರಿ. ಇದರಲ್ಲೇನೂ ತಪ್ಪಿಲ್ಲ. ನಾವು ಹೇಳಬೇಕಾದ್ದನ್ನು ಎದುರಿಗಿರುವವರಿಗೆ ಸರಿಯಾಗಿ ಅರ್ಥ ಮಾಡಿಸಲು ಇಂತಹ ಅಭಿನಯ ಅತ್ಯವಶ್ಯ. ಅದನ್ನೇ ನಾವೆಲ್ಲ ಮಾಡುತ್ತೇವೆ.  ವ್ಯತ್ಯಾಸವಿಷ್ಟೆ, ಸಿನಿಮಾ ಅಥವಾ ನಾಟಕದ ನಟರು ಮಾಡುವುದನ್ನು ನಟನೆ ಎಂದು ಕರೆಯುತ್ತೇವೆ, ನಾವು ಮಾಡುವುದನ್ನು ನಟನೆಯೆಂದು ಕರೆಯುವುದಿಲ್ಲ.

ನಟನೆ ಒಂದು ಸಂವಹನ ಮಾಧ್ಯಮ. ನಮ್ಮ ಮನಸ್ಸಿನಲ್ಲಿ ಇರುವುದನ್ನು ಬೇರೆಯವರಿಗೆ ಸುಲಭವಾಗಿ ತಲುಪಿಸಬೇಕೆಂದರೆ ಅದಕ್ಕೆ ತಕ್ಕ ಅಭಿನಯವೂ ಬೇಕಾಗುತ್ತದೆ. ನಮ್ಮೊಳಗೆ ಅಡಗಿರುವ ಭಾವನೆಗಳನ್ನು ಜನರಿಗೆ ಅರ್ಥ ಮಾಡಿಸಲು ಬೇರೆ ಬೇರೆ ರಸಗಳ ಮೂಲಕ ನಾವು ಅಭಿನುಸುತ್ತೇವೆ. ಕೆಲವರು ಬಯ್ಯುವಾಗಲೂ ನಾಟಕ ಆಡ್ಬೇಡಾ ಅಂತ ಬೈತಾರೆ… ನಾಟಕವೇ ಬೇರೆ, ಅಭಿನಯಿಸುವುದೆ ಬೇರೆ. ಆದರೂ ಕೆಲವರು ಓವರ್ರಾಗಿ ಆ್ಯಕ್ಟ್ ಮಾಡ್ಬೇಡ ಅಂತಲೂ ಬೈಯುತ್ತಾರೆ. ಪ್ರತಿಕ್ಷಣ ನಾವೆಲ್ಲ ಅಭಿನಯಿಸುತ್ತಲೇ ಇರುತ್ತೇವೆ. ಆ ಅಭಿನಯದ ಮೇಲೆ ನಮ್ಮ ವ್ಯಕ್ತಿತ್ವವೂ ನಿರ್ಧಾರವಾಗುತ್ತಿರುತ್ತದೆ. 

ಆಂಗಿಕ, ವಾಚಿಕ ಅಭಿನಯ 
ಆಂಗಿಕ ಅಭಿನಯ ಅಂದರೆ ನಮ್ಮ ಕೈ-ಕಾಲು-ಕಣ್ಣು ದೇಹಾಂಗಗಳನ್ನು ಬಳಿಸಿಕೊಂಡು ವಿಚಾರಗಳನ್ನು ವ್ಯಕ್ತಪಡಿ ಸುವುದು. ನಾವ್ಯಾರೂ ಸುಮ್ಮನೆ ನಿಂತಲ್ಲೇ ನಿಂತು, ಕೈ ಕಟ್ಟಿಕೊಂಡು ಮಾತನಾಡುವುದಿಲ್ಲ. ಬಾಯಿಂದ ಯಾವ ವಿಚಾರ ಹೊರಬರುತ್ತದೋ ಅದನ್ನು ಅಂಗಗಳ ಮೂಲಕವೂ ವ್ಯಕ್ತಪಡಿಸಲು ಪ್ರಯತ್ನಿಸುತ್ತೇವೆ. ಹೆಚ್ಚಾಗಿ ಕೈಗಳನ್ನು ಹಾಗೂ ಕಣ್ಣುಗಳನ್ನು ಬಳಸುತ್ತೇವೆ. ಇನ್ನು ಕೆಲವರೂ ಮಾತೇ ಆಡದೆ ದುರದುರನೆ ಕಣ್ಣುಬಿಟ್ಟು ಎಲ್ಲಾ ವಿಚಾರಗಳನ್ನು ಕಣ್ಣುಗಳಿಂದಲೇ ತಿಳಿಸುತ್ತಾರೆ. ಉದ್ದೇಶ ಇಷ್ಟೆ-ನಾವು ಹೇಳುವುದು ನಮ್ಮೆದುರು ಇರುವವರಿಗೆ ಪರಿಣಾಮಕಾರಿಯಾಗಿ ತಲುಪಬೇಕು. 

ವಾಚಿಕ ಅಭಿನಯ ಮಾತಿನ ದಾಟಿಯಿಂದ ಭಾವನೆಗಳನ್ನು ತಿಳಿಸುವುದು. ನಮ್ಮೆಲ್ಲರ ಮಾತಿನ ಶಬ್ದ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಕೋಪ ಬಂದಾಗ ಬೇರೆ ರೀತಿ, ಪ್ರೀತಿ ಬಂದಾಗ ಬೇರೆ ರೀತಿ ವ್ಯಾವಹಾರಿಕವಾಗಿ ಮಾತನಾಡುವಾಗ ಬೇರೆ ರೀತಿ ಅಸಹನೆ ವ್ಯಕ್ತಪಡಿಸುವಾಗ ಬೇರೆ ರೀತಿ, ಸಮ್ಮತಿ ಸೂಚಿಸುವಾಗ ಬೇರೆ ರೀತಿ… ಹೀಗೆ ಪ್ರತಿ ಸಂದರ್ಭದಲ್ಲೂ ನಮ್ಮ ಧ್ವನಿಯ ಏರಿಳಿತಗಳು ನಮ್ಮ ಭಾವನೆಯನ್ನು ಅನುಸರಿಸುತ್ತವೆ.

ಕೆಲವರು ತಮ್ಮ ಮಾತುಗಳಿಂದಲೇ ಶತ್ರುಗಳನ್ನು ಹೊಡೆದು ಬೀಳಿಸುತ್ತಾರೆ. ಮತ್ತೆ ಕೆಲವರು ದೈಹಿಕವಾಗಿ ಹೊಡೆದಾಡಲು ಹೋಗುತ್ತಾರೆ. ಮನೆಯಲ್ಲಿರುವವರನ್ನೂ ಕೆಲವರು ಹೊಡೀತೀನಿ ನೋಡು ಎಂದು ಆಂಗಿಕ ಅಭಿನಯದಿಂದ ಹೆದರಿಸುತ್ತಾರೆ. ಕೆಲ ಸಲ ರಸ್ತೆಯಲ್ಲಿ ಯಾರನ್ನಾದರೂ ಅಡ್ರೆಸ್‌ ಕೇಳಿದರೆ… ಹೀಗೆ ಸೀದಾ ಹೋಗಿ ಎಡಗಡೆ ತಿರುಗಿ ಅಂತ ಬಾಯಿಯಲ್ಲಿ ಹೇಳುತ್ತಿರುತ್ತಾರೆ, ಆದರೆ ಕೈಯಿಂದ ಬಲಗಡೆ ತೋರಿಸು ತ್ತಿರುತ್ತಾರೆ. ಅವರ ವಾಚಿಕ ಮತ್ತು ಆಂಗಿಕ ಅಭಿನಯ ಒಂದಕ್ಕೊಂದು ಹೊಂದಿಕೊಂಡಿರುವುದಿಲ್ಲ. ನಮ್ಮೆಲ್ಲರಿಗೂ ಈ ರೀತಿಯ ಅನುಭವ ಆಗಿರುತ್ತದೆ. 

ಹೇಳ್ಳೋದೇ ಬೇರೆ, ಕೈಯಿಂದ ತೋರಿಸುವುದೇ ಬೇರೆ. ಅಂದರೆ ಮಾತೇ ಬೇರೆ, ನಟನೆಯೇ ಬೇರೆ. ಹೀಗಾದಾಗ ಕೇಳುವವರು ಗೊಂದಲಕ್ಕೆ ಬೀಳುತ್ತಾರೆ. ಏಕೆಂದರೆ ನಮ್ಮ ನಟನೆ ಅವರನ್ನು ದಿಕ್ಕುತಪ್ಪಿಸಿರುತ್ತದೆ. ನಿತ್ಯ ಜೀವನದಲ್ಲೂ ನಟನೆಗೆ ಏಕೆ ಬಹಳ ಪ್ರಾಮುಖ್ಯತೆ ಎಂಬುದನ್ನು ಹೇಳಲು ಇದೊಂದೇ ಉದಾಹರಣೆ ಸಾಕು. ತುಂಬಾ ಸಲ ಹೀಗಾಗುವುದು ಸುಳ್ಳು ಹೇಳಬೇಕಾದರೆ. ನಾವು ಹೇಳುತ್ತಿರುವುದು ಸುಳ್ಳು ಅಂತ ಎಲ್ಲಿ ಗೊತ್ತಾಗಿಬಿಡುತ್ತದೆಯೋ ಎಂಬ ಧಾವಂತದಲ್ಲಿ ಅತಿಯಾಗಿ ಅಭಿನಯಿಸುತ್ತೇವೆ. ಆ ಅಭಿನಯವೇ ಕೇಳುಗರಲ್ಲಿ ಅನುಮಾನ ಹುಟ್ಟಿಸುತ್ತದೆ.

ಬಳಸುವ ರಸ, ಬಳಸದ ರಸ!
ದೇವರು ಎಲ್ಲಾ ಮನುಷ್ಯರಿಗೂ ನವರಸಗಳನ್ನು ಸಮಾನವಾಗಿ ಹಂಚಿದ್ದಾನೆ. ಅವು ನಮ್ಮ ನಮ್ಮ ದೇಹ-ಬುದ್ಧಿ- ಮನಸ್ಸಿಗನುಗುಣವಾಗಿ ಹೊರಹೊಮ್ಮುತ್ತವೆ. ಶೃಂಗಾರ, ಹಾಸ್ಯ, ರೌದ್ರ, ಕರುಣ, ಭೀಭತ್ಸ, ಭಯಾನಕ, ವೀರ, ಅದ್ಭುತ, ಶಾಂತ. ಈ ನವರಸಗಳಲ್ಲಿ ಕೆಲವಕ್ಕೆ ನಮ್ಮ ಬುದ್ಧಿ-ಮನಸ್ಸು ಬಾಗಿಲು ಹಾಕಿಕೊಂಡಿರುತ್ತವೆ. ಮುಖ್ಯವಾಗಿ ಕರುಣೆಯನ್ನು ನಾವು ಪದೇಪದೇ ಬಳಸುವುದಿಲ್ಲ. ಬೇರೆಯವರ ಬಗ್ಗೆ ಕರುಣೆ ತೋರಿಸುವುದು ತುಂಬಾ ಕಮ್ಮಿ. ಇನ್ನು ನಮ್ಮ ಬಗ್ಗೆ ನಾವೇ ಆಗಾಗ ಕರುಣೆ ತೋರಿಸಿಕೊಂಡು, ಅಯ್ಯೋ ಪಾಪ ನಾನು ಜೀವನದಲ್ಲಿ ಎಷ್ಟು ಕಷ್ಟಪಡ್ತೀದ್ದೀನಿ ಅಂದುಕೊಳ್ಳುತ್ತೇವೆ. ಅದ್ಭುತವೂ ಹಾಗೆಯೇ, ನಾವು ಬಹಳ ಕಮ್ಮಿ ಅದ್ಭುತಗಳನ್ನು ಗುರುತಿಸುತ್ತೇವೆ. ಅಥವಾ ವ್ಯಕ್ತ ಪಡಿಸುತ್ತೇವೆ. ಏಕೆಂದರೆ, ನಮ್ಮ ಪ್ರಕಾರ ನಾವೊಬ್ಬರೇ ಅತಿ ಬುದ್ಧಿವಂತರು. ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆ. ಬೇರೆಯವರಲ್ಲಿ ಅದ್ಭುತವನ್ನು ಹುಡುಕುವುದು ಬಿಟ್ಟು ನಮ್ಮನ್ನೇ ನಾವು ಒಂದು ಅದ್ಭುತದಂತೆ ತೋರಿಸಿಕೊಳ್ಳುತ್ತೇವೆ. 

ಬಹಳ ಅದ್ಭುತಗಳು ಪ್ರತಿನಿತ್ಯ ನಮ್ಮ ಕಣ್ಮುಂದೆ ಕಾಣಿಸಿದರೂ ನಾವು ಅದ್ಭುತ ರಸವನ್ನು ಹೊರಹಾಕುವುದಿಲ್ಲ. ಓ ಅದೇನು ಮಹಾ ಅಂತ ಸಪ್ಪೆ ಮುಖ ಹಾಕಿಕೊಂಡು ಬೇರೆ ಇನ್ನೇನನ್ನೋ ಹುಡುಕುತ್ತೇವೆ. ಇವೆರಡರ ಜೊತೆ ಶಾಂತ ರಸವನ್ನೂ ನಾವು ಬಹಳ ಕಡಿಮೆ ಬಳಸುತ್ತೇವೆ. ಅದನ್ನು ವ್ಯಕ್ತಪಡಿಸುವುದು ಬಹಳ ಕಡಿಮೆ. ಜೀವನದಲ್ಲಿ ಶಾಂತಿ ಬೇಕು ಅಂತ ಜನ ಎಷ್ಟೆಲ್ಲಾ ಪರದಾಡುತ್ತಾರೆ, ಆದರೆ ಅದು ತಮ್ಮೊಳಗೇ ಇರುವ ರಸ ಎಂಬುದನ್ನು ಗುರುತಿಸಲು ಮರೆಯುತ್ತಾರೆ. ರೌದ್ರ, ಭಯಾನಕ, ವೀರ, ಬೀಭತ್ಸ ರಸಗಳು ಹೇಳದೆ ಕೇಳದೆ ಆಗಾಗ ಹೊರಬರುತ್ತಿರುತ್ತವೆ.

ಇವೆಲ್ಲದರ ಮಧ್ಯೆ ಶೃಂಗಾರ-ಹಾಸ್ಯ, ರಸಗಳು ಬೇಕೆಂದಾಗಲೆಲ್ಲ ಹೊರಬರಲು ಸಾಧ್ಯವಿಲ್ಲ. ಮನಸ್ಥಿತಿ ಹಾಗೂ ಬುದ್ಧಿ ಸಮತೋಲನದಲ್ಲಿದ್ದರೆ ಆಗ ಒಂದಷ್ಟು ಹಾಸ್ಯರಸ ನಮ್ಮ ವ್ಯವಹಾರದಲ್ಲಿ ಬಂದು ಹೋಗುತ್ತದೆ. ಶೃಂಗಾರ ರಸಕ್ಕೆ ಬೇಕಾದ ಮನಸ್ಥಿತಿಯೇ ಬೇರೆ, ರೌದ್ರ ಭಯಾನಕ, ಬೀಭತ್ಸ ಇವುಗಳ ಹತ್ತಿರ ಸುಳಿಯದ ಶೃಂಗಾರ ರಸ ಅತ್ಯಂತ ಖಾಸಗಿಯಾದುದು.

ರಸವಾಗಿ ಹೊರ ಬರುವ ಭಾವನೆ 
ನವರಸಗಳನ್ನು ವ್ಯಕ್ತಪಡಿಸುವ ಮಾಧ್ಯಮ ನಟನೆಯೇ ಆಗಿದ್ದರೂ ಅವು ವಾಸ್ತವದಲ್ಲಿ ನಮ್ಮೊಳಗೆ ಸಹಜವಾಗಿ ಅಡಗಿರುವ ಭಾವನೆಗಳು. ಆ ಭಾವನೆಗಳನ್ನು ಅದುಮಿಟ್ಟುಕೊಳ್ಳಬಾರದು. ಇವಳು ಅತೀ ನಟನೆ ಮಾಡ್ತಾಳೆ ಎಂದು ಬೇರೆಯವರು ಅಂದುಕೊಂಡರೂ ಪರವಾಗಿಲ್ಲ. ನಮ್ಮನ್ನು ನಾವು ಸಂಪೂರ್ಣ ವ್ಯಕ್ತಪಡಿಸುತ್ತಿರಬೇಕು. ಇಲ್ಲವಾದರೆ ಸಹಜವಾದ ನಟನೆ ನಮ್ಮಿಂದ ದೂರವಾಗಿ ಕೃತಕ ನಟನೆ ನಮ್ಮನ್ನು ಅಂಟಿಕೊಳ್ಳುತ್ತದೆ. ಆಗ ಜೀವನದಲ್ಲಿ ಪ್ರತಿಯೊಂದನ್ನೂ ಕೃತಕವಾಗಿ ನಟಿಸಲು ಶುರುಮಾಡುತ್ತೇವೆ. ಆದರಿಂದ ಬದುಕೇ ಕೃತ್ರಿಮವಾಗುತ್ತದೆ. ಇಂತಹ ನಟನೆ ಒಳ್ಳಯದಲ್ಲ. ಕೃತಕ ನಟನೆ ಸಿನಿಮಾದಲ್ಲಿ ನೋಡುವುದಕ್ಕಷ್ಟೇ ಚಂದ. ಬದುಕಿನಲ್ಲಿ ನಟನೆಯೆಂಬುದು ನಾವು ಉಸಿರಾಡಿದಷ್ಟೇ ಸಹಜವಾಗಿರಬೇಕು. ಅಂತಹ ನಟನೆ ಎಲ್ಲರಿಗೂ ಸಿದ್ಧಿಸಲಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಂಶೋಧಕರ ತಂಡವೊಂದು ಬೃಹತ್‌ ಶಾರ್ಕ್‌ ಮೀನನ‌್ನು ಒಂದು ದೊಡ್ಡ ಟ್ಯಾಂಕ್‌ನಲ್ಲಿ ಬಿಟ್ಟಿತು. ಆ ಟ್ಯಾಂಕ್‌ನಲ್ಲಿ ಮೊದಲೇ ಹಲವು ಚಿಕ್ಕ ಮೀನುಗಳನ್ನು ಬಿಡಲಾಗಿತ್ತು....

  • ಜೀವನದ ಅನೇಕ ಕ್ಷೇತ್ರಗಳಲ್ಲಿ ಸಾಫ‌ಲ್ಯ ಪಡೆಯುವ ಅತಿ ಮುಖ್ಯ ಮಾರ್ಗ ಯಾವುದು? ಒಂದು ಅತ್ಯುತ್ತಮ ಮಾರ್ಗವೆಂದರೆ ಆತ್ಮ ಸಂಯಮ. 1960ರಲ್ಲಿ ಸ್ಟಾನ್‌ಫ‌ರ್ಡ್‌ ವಿಶ್ವವಿದ್ಯಾಲಯದ...

  • ಒಬ್ಬ ಸಾಮಾನ್ಯ ವ್ಯಕ್ತಿಗೂ ಮತ್ತು ಮಹಾನ್‌ ವ್ಯಕ್ತಿಗೂ ಇರುವ ವ್ಯತ್ಯಾಸವೆಂದರೆ, ಅವರಲ್ಲಿನ ಏಕಾಗ್ರತೆಯ ಮಟ್ಟ ಏಕಾಗ್ರತೆಯನ್ನು ಸಾಧಿಸುವುದು ಹೇಗೆ? ನಮ್ಮ ಮನಸ್ಸನ್ನು...

  • ಒಂದು ಪುಟ್ಟ ಗ್ರಾಮದಲ್ಲಿ ವಾಸಿಸುತ್ತಿದ್ದ ಇಬ್ಬರು ಹುಡುಗರ ಕಥೆಯಿದು. ಅದರಲ್ಲಿ ಒಬ್ಬ ಹುಡುಗ ಆರು ವರ್ಷದವ. ಇನ್ನೊಬ್ಬ 10 ವರ್ಷದ ಹುಡುಗ. ಇಬ್ಬರೂ ಅತ್ಯಂತ ಖಾಸಾ...

  • ಒಂದು ದಿನ ಯುವಕನೊಬ್ಬ ತನ್ನ ಮೂರು ಕತ್ತೆಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೊರಟಿದ್ದ. ಮಾರ್ಗ ಮಧ್ಯೆ ಎದುರಾದ ನದಿಯನ್ನು ನೋಡಿದ್ದೇ, ಅವನಿಗೆ ಅದರಲ್ಲೊಮ್ಮೆ...

ಹೊಸ ಸೇರ್ಪಡೆ