ಸ್ಪೇಸ್‌ ರೇಸ್‌ನಲ್ಲಿ ಚೀನ ಮುಂದಿದೆ 

Team Udayavani, Jan 26, 2019, 12:30 AM IST

ಈ ತಿಂಗಳ ಆರಂಭದಲ್ಲಿ ಚೀನದ ಬಾಹ್ಯಾಕಾಶ ನೌಕೆಯು ಚಂದ್ರನ ಕಡುಗತ್ತಲ ಮಗ್ಗುಲಲ್ಲಿ ಯಶಸ್ವಿಯಾಗಿ ಇಳಿಯಿತು. ಈ ಸಾಧನೆ ಮಾಡಿದ ಪ್ರಪಂಚದ ಮೊದಲ ರಾಷ್ಟ್ರವೆಂಬ ಗರಿಮೆ ಚೀನದ ಪಾಲಾಗಿದೆ.  ಅದರ ಈ ಸಾಧನೆ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಕ್ಕೆ ತಿರುವು ಕೊಡಲಿದೆ ಎನ್ನುತ್ತಿದ್ದಾರೆ ವಿಶ್ವವಿಜ್ಞಾನಿಗಳು. ಹಾಗಿದ್ದರೆ ಚೀನ ಈಗ ಸ್ಪೇಸ್‌ ರೇಸ್‌ನಲ್ಲಿ ಎಲ್ಲರನ್ನೂ ಹಿಂದೆ ತಳ್ಳಲಿದೆಯೇ? ಭಾರತ ಚೀನದ ನಡುವೆ ಹೋಲಿಕೆ ಹೇಗಿದೆ? ಇತ್ಯಾದಿ ಪ್ರಶ್ನೆಗಳನ್ನು ಇಸ್ರೋದ ಮಾಜಿ ಮುಖ್ಯಸ್ಥ ಜಿ. ಮಾಧವನ್‌ ನಾಯರ್‌ರ ಮುಂದಿಟ್ಟಾಗ…

ಚೀನ  ಈ ತಿಂಗಳ ಆರಂಭದಲ್ಲಿ ಚಾಂಗ್‌-4 ಎನ್ನುವ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮತ್ತೂಂದು ಮಗ್ಗುಲಾದ ದಕ್ಷಿಣ ಧೃವದಲ್ಲಿ(ನಮಗೆ ಕಾಣದ ಭಾಗ) ಇಳಿಸಿದೆ. ಅನ್ಯ ದೇಶಗಳನ್ನು ಹಿಂದಿಕ್ಕೆ ಅದ್ಹೇಗೆ ಚೀನ ಈ ಸಾಧನೆ ಮಾಡಿತು?
ಇದೊಂದು ವಿಶಿಷ್ಟ ಪ್ರಯೋಗವಾಗಿತ್ತು ಮತ್ತು ಹಲವು ಸಮಯದಿಂದ ಅವರು ಈ ಯೋಜನೆಯ ಮೇಲೆ ಕೆಲಸ ಮಾಡುತ್ತಿದ್ದರು. ಇದು ನಿಜಕ್ಕೂ ಪ್ರಮುಖ ಜಾಗತಿಕ ಬೆಳವಣಿಗೆ ಎನ್ನುವುದರಲ್ಲಿ ಸಂಶಯವೇ ಇಲ್ಲ.  ತಮ್ಮ ಅವಿರತ ಪರಿಶ್ರಮದಿಂದಾಗಿ ಅವರು ಈ ಮಿಷನ್‌ನಲ್ಲಿ ಯಶಸ್ವಿಯಾಗಿದ್ದಾರೆ.  ದೃಷ್ಟಿಗೆ ನಿಲುಕದ ಚಂದ್ರನ ಮತ್ತೂಂದು ಭಾಗದಲ್ಲಿ ಅವರು ಗಗನನೌಕೆಯನ್ನು ಇಳಿಸಿದ ಕಾರಣ, ಚಿತ್ರಗಳನ್ನು ಭೂಮಿಗೆ ಸಂವಹನ ಉಪಗ್ರಹದ ಮೂಲಕ ಕಳುಹಿಸಬೇಕಾಗಿತ್ತು. ಬಾಹ್ಯಾಕಾಶ ಕಾರ್ಯಕ್ರಮಗಳ ವಿಷಯಕ್ಕೆ ಬರುವುದಾದರೆ ಈ ಪ್ರಯೋಗವನ್ನು ಟರ್ನಿಂಗ್‌ ಪಾಯಿಂಟ್‌ ಎಂದೇ ಹೇಳಬೇಕು. 

ಭೂಮಿಯ ದೃಷ್ಟಿಗೆ ನಿಲುಕದ ಕಡುಗತ್ತಲು ಭಾಗದಲ್ಲಿ ಲ್ಯಾಂಡಿಂಗ್‌ ಮಾಡುವುದು ಎಷ್ಟು ಭಿನ್ನ ಮತ್ತು ಕಷ್ಟದ ಪ್ರಯೋಗ?
ಚಂದ್ರನ ಈ ಬದಿಯ ಮೇಲೆ ಇಳಿಯಲಿ ಅಥವಾ ಆ ಬದಿಯಲ್ಲಿ ಇಳಿಯಲಿ, ತಂತ್ರಜ್ಞಾನವಂತೂ ಒಂದೇ ರೀತಿ ಇರುತ್ತದೆ. ಆದರೆ ಚೀನಾ ನಡೆಸಿದ್ದು ಕಣ್ಣಿಗೆ ಕಾಣದ ಆಪರೇಷನ್‌ ಆಗಿತ್ತು. ಸಂವಹನ ಉಪಗ್ರಹದಿಂದ ಸಂದೇಶ ತಲುಪಿದ ನಂತರವೇ ಸುರಕ್ಷಿತವಾಗಿ ಇಳಿದಿದ್ದೇವೆ ಎನ್ನುವುದು ಅವರಿಗೆ ತಿಳಿಯಿತು. ಅಂದರೆ, ಮಾಹಿತಿ ಪಡೆಯಲು ತುಸು ಸಮಯ ಹಿಡಿಯುತ್ತದೆ. ಇದೇ ತುಸು ಕ್ಲಿಷ್ಟ ಕೆಲಸ. ಆದರೆ, ನಿರ್ವಹಣೆ ಮಾಡಬಹುದು. 

ಅದೇಕೆ ಇಂಥದ್ದೊಂದು ಸಾಧನೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ನಾಸಾ ಸಂಸ್ಥೆಗೆ ಸಾಧ್ಯವಾಗಲಿಲ್ಲ?
ಅಮೆರಿಕಕ್ಕೆ ಸಾಧ್ಯವಿಲ್ಲ ಎಂದೇಕೆ ಭಾವಿಸುತ್ತೀರಿ? ಅವರಿಗೂ ಸಾಮರ್ಥ್ಯವಿದೆ. ಅವರು ಈ ನಿಟ್ಟಿನಲ್ಲಿ ಯೋಚಿಸಿದ್ದರೆಂದರೆ, ಆಗಲೇ ಮಾಡಿರುತ್ತಿದ್ದರು. ಮಾನವಸಹಿತ ಚಂದ್ರಯಾತ್ರೆ ಮಾಡಿದ ನಂತರ ಅವರು ಚಂದ್ರನ ಮೇಲೆ ಆಸಕ್ತಿ ಕಳೆದುಕೊಂಡು, ಮಂಗಳ ಗ್ರಹದತ್ತ ಹೊರಟರು. ಈಗ ಅವರ ಆದ್ಯತೆ, ಮಾರ್ಸ್‌ ಮಿಷನ್‌ ಆಗಿದೆ. 

ನಾಸಾಕ್ಕೆ ಆರ್ಥಿಕ ಅನುದಾನವನ್ನು ತಗ್ಗಿಸಲಾಗಿದೆ. ಇದೂ ಒಂದು ಕಾರಣವಿರಬಹುದೇ? 
ಇಲ್ಲ. ನಾಸಾದ ಕಾರ್ಯಕ್ರಮಗಳು ದುಬಾರಿಯಾಗಿರುತ್ತವೆ. ಅದು ತನಗೆ ಲಭ್ಯವಿರುವ ಫ‌ಂಡ್‌ನ‌ಲ್ಲೇ ತನ್ನ ಗಮನವನ್ನು ಮಂಗಳ ಗ್ರಹದತ್ತ ಕೇಂದ್ರೀಕರಿಸಿದೆ. 

ಚೀನಾದ ಕಾರ್ಯಕ್ರಮವನ್ನು ಮಾನವ ಕುಲದ ಬಾಹ್ಯಾಕಾಶ ಪರಿಶೋಧನಾ ಯಾತ್ರೆಯ ಹೊಸ ಅಧ್ಯಾಯ ಎಂದು ಬಣ್ಣಿಸಲಾಗುತ್ತಿದೆ. ಯಾವ ರೀತಿಯಲ್ಲಿ ಅದರ ಈಗಿನ ಯಶಸ್ಸು ಬಾಹ್ಯಾಕಾಶ ಅನ್ವೇಷಣೆಯನ್ನು ಬದಲಿಸಬಲ್ಲದು?
ಇದು ಖಂಡಿತ ಹೊಸ ಅಧ್ಯಾಯವೇ. ಈ ಯಶಸ್ಸು ಬಾಹ್ಯಾಕಾಶ ವಿಜ್ಞಾನದ ಮೇಲೆ ಹೆಚ್ಚಿನ ಬೆಳಕು ಚೆಲ್ಲಲಿದೆ. ಚಂದ್ರನು 4.2 ಶತಕೋಟಿ ವರ್ಷಗಳ ಹಿಂದೆಯೇ ಭೂಮಿಯಿಂದ ತುಂಡರಿಸಿಕೊಂಡು ಹೋಯಿತು. ಆಗಿನಿಂದಲೂ ಪೂರ್ಣವಾಗಿ ಅದರ ಅನ್ವೇಷಣೆ ಸಾಧ್ಯವಾಗಿಲ್ಲ. ಈಗ ನಮಗೆ ಸೂರ್ಯನ ಬೆಳಕು ಬೀಳುವ ಭಾಗಕ್ಕೂ, ಕಡುಗತ್ತಲ ಭಾಗಕ್ಕೂ ಇರುವ ವ್ಯತ್ಯಾಸವೇನು ಎನ್ನುವುದು ತಿಳಿಯಲಿದೆ. ಒಂದರ್ಥದಲ್ಲಿ, ಈಗ ಸಂಗ್ರಹವಾಗಲಿರುವ ಅಂಶಗಳು ಹೇಗೆ ಗ್ರಹಗಳು ವಿಕಸನಗೊಂಡವು ಎನ್ನುವುದನ್ನು ತಿಳಿದುಕೊಳ್ಳಲು ಸಹಕರಿಸುತ್ತವೆ. 
ಇನ್ನು ಅವರ ಬಾಹ್ಯಾಕಾಶ ನೌಕೆ, ಅತಿದೊಡ್ಡ ಕುಳಿಯಲ್ಲಿ ಇಳಿದಿದೆ. ಯಾವುದೋ ಕ್ಷುದ್ರಗ್ರಹವೊಂದು ಅಪ್ಪಳಿಸಿದ ಕಾರಣದಿಂದ ಆ ಕುಳಿ ನಿರ್ಮಾಣವಾಗಿರಬಹುದು. ಈಗ ಅದರ ಮಾಹಿತಿ ಮತ್ತು ಇತಿಹಾಸವನ್ನು ಅವರು ತಿಳಿದುಕೊಳ್ಳಬಹುದು. 

ಹಾಗಿದ್ದರೆ ಈ ಸಾಧನೆಯ ನಂತರ ಚೀನಾ ಸರ್ಕಾರ ತಮ್ಮ ದೇಶದ ಬಾಹ್ಯಾಕಾಶ ಸಂಶೋಧನೆಗೆ ಹೆಚ್ಚಿನ ಧನ ಸಹಾಯ ಮಾಡಲಿದೆಯೇ? ಹೌದು ಎನ್ನುವುದಾದರೆ ಬಾಹ್ಯಾಕಾಶ ವಿಜ್ಞಾನದಲ್ಲಿ ಚೀನಾ ಅಮೆರಿಕವನ್ನು ಹಿಂದಿಕ್ಕಬಲ್ಲದಾ?
ಇಲ್ಲ, ಇಲ್ಲ. ಅವರು ಸದ್ಯಕ್ಕಂತೂ(ಹತ್ತಿರ ಭವಿಷ್ಯದಲ್ಲಿÉ) ಅಮೆರಿಕವನ್ನು ಓವರ್‌ಟೇಕ್‌ ಮಾಡಲಾರರು. ಚೀನಾ ಮಾನವ ಸಹಿತ ಯಾನ, ಮಿನಿ ಸ್ಪೇಸ್‌ ಸ್ಟೇಷನ್‌, ಈಗ ಚಂದ್ರಾನ್ವೇಷಣೆಯಂಥ ನಿರ್ದಿಷ್ಟ ಕ್ಷೇತ್ರಗಳ ಮೇಲಷ್ಟೇ ತನ್ನ ಗಮನ ಕೇಂದ್ರೀಕರಿಸಿದೆ. ಎರಡೂ ರಾಷ್ಟ್ರಗಳ ಬಾಹ್ಯಾಕಾಶ ಚಟುವಟಿಕೆಗಳನ್ನು ಹೋಲಿಸುವುದಕ್ಕೇ ಸಾಧ್ಯವಿಲ್ಲ.

ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ವಿಷಯಕ್ಕೆ ಬರೋಣ. ಅದೇಕೆ ಈ ಕ್ಷೇತ್ರದಲ್ಲಿ ಚೀನಾ ನಮಗಿಂತ ಬಹಳ ಮುಂದಿದೆ? 
ಪ್ರಮುಖ ಕಾರಣವೆಂದರೆ, ಅವರು ಬಾಹ್ಯಾಕಾಶ ಸಂಶೋಧನೆಗೆ ನಮಗಿಂತ ಹೆಚ್ಚು ಹಣ ಮೀಸಲಿಡುತ್ತಿದ್ದಾರೆ. ಚೀನಾದ ಬ್ಯಾಹ್ಯಾಕಾಶ ಬಜೆಟ್‌ ಅಜಮಾಸು 5 ಶತಕೋಟಿ ಡಾಲರ್‌ನಷ್ಟಿದೆ. ಭಾರತ ಹೆಚ್ಚೆಂದರೆ 1 ಶತಕೋಟಿ ಡಾಲರ್‌ ಖರ್ಚು ಮಾಡುತ್ತದೆ. ನಾವು ಕಡಿಮೆ ಹಣದಲ್ಲೇ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೇವೆ., ನಮ್ಮ ಕಾರ್ಯಕ್ರಮಗಳಿಗೆ ಸಾಮಾನ್ಯ ಜನರಿಗೆ ಲಾಭಮಾಡಿಕೊಡುವುದೇ ಆದ್ಯತೆಯಾಗಿರುತ್ತದೆ. ನಮ್ಮ 80 ಪ್ರತಿಶತದಷ್ಟು ಬಜೆಟ್‌ ಇದೇ ಕಾರಣಕ್ಕೆ ಬಳಕೆಯಾಗುತ್ತದೆ. ಈಗ ನಾವು ಉದ್ದೇಶಿಸಿರುವ ಮಾನವಸಹಿತ ಬಾಹ್ಯಾಕಾಶ ಯಾತ್ರೆಗೇ ನಮ್ಮ ಒಟ್ಟು ಬಜೆಟ್‌ನ 20 ಪ್ರತಿಶತದಷ್ಟು ಖರ್ಚಾಗುತ್ತದೆ. ಆದರೆ ಇದರಿಂದ ಈ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಭಿವೃದ್ಧಿ ಸಾಧ್ಯವಾಗುತ್ತದೆ. ಪರಿಣಾಮವಾಗಿ ನಾವು ಮುಂಚೂಣಿ ರಾಷ್ಟ್ರಗಳ ಜೊತೆಗೆ ಹೆಜ್ಜೆ ಹಾಕಲು ಸಾಧ್ಯವಾಗುತ್ತದೆ. ಚೀನಾದ ಬಹುತೇಕ ಬಾಹ್ಯಾಕಾಶ ಕಾರ್ಯಕ್ರಮಗಳು ಮತ್ತು ನಮ್ಮ ಯೋಜನೆಗಳು ಒಂದೇ ರೀತಿ ಇವೆ. ಅವರೂ ಕೂಡ ಮಾನವ ಸಹಿತ ಮಿಷನ್‌ಗಳಲ್ಲಿ ಪಫೆìಕ್ಷನ್‌ ಬಯಸುತ್ತಿದ್ದಾರೆ. ಹೌದು, ನಾವು ಅತಿ ಕಡಿಮೆ ಬಜೆಟ್‌ನಲ್ಲೇ ಬಾಹ್ಯಾಕಾಶ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ನಾವು ಈಗಾಗಲೇ ಚಂದ್ರಯಾನ 2, ಮಂಗಳ ಮತ್ತು ಶುಕ್ರ ಗ್ರಹದ ಯೋಜನೆಯ ರೂಪುರೇಷೆ ಸಿದ್ಧಪಡಿಸಿದ್ದೇವೆ. ನಾವು ನಮ್ಮದೇ ಆದ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿದ್ದೇವೆ. ಇದೆಲ್ಲವೂ ವೈಜ್ಞಾನಿಕ ಸಮುದಾಯದ ಆಸಕ್ತಿಯ ಮೇಲೆ ಅವಲಂಬಿತವಾಗಿದೆ. 

ಹಾಗಿದ್ದರೆ ಸಾಮರ್ಥ್ಯದಲ್ಲಿ ನಾವೇನೂ ಚೀನಾಕ್ಕಿಂತ ಕಡಿಮೆಯಿಲ್ಲ, ಆದರೆ ನಮ್ಮ ಆದ್ಯತೆಗಳು ಬೇರೆ ಎನ್ನುತ್ತಿದ್ದೀರಾ? 
ಮಾನವಸಹಿತ ಬಾಹ್ಯಾಕಾಶ ಯೋಜನೆಗಳಲ್ಲಿ ನಾವು ಅವರಿಗಿಂತ ಹಿಂದಿದ್ದೇವೆ, ಆದರೆ ಕಾಲಾಂತರದಲ್ಲಿ  ಸಮಬಲ ಸಾಧಿಸುತ್ತೇವೆ.

ಚೀನಾದ ಈ ಯಶಸ್ವಿ ಯೋಜನೆಯ ನಂತರ, ಆ ದೇಶವನ್ನು ಜಾಗತಿಕ ಬಾಹ್ಯಾಕಾಶ ನಕಾಶೆಯ ಮೇಲೆ ಎಲ್ಲಿ ಗುರುತಿಸುತ್ತೀರಿ? 
ಅವರು 3ನೇ ಸ್ಥಾನದಲ್ಲೇ ಮುಂದುವರಿಯಲಿದ್ದಾರೆ. ಅಮೆರಿಕ ಮೊದಲ ಸ್ಥಾನದಲ್ಲಿ ಮತ್ತು ರಷ್ಯಾ ಎರಡನೇ ಸ್ಥಾನದಲ್ಲಿ ಇರಲಿವೆ. ನಾವು ನಾಲ್ಕನೇ ಸ್ಥಾನದಲ್ಲಿ ಇರಲಿದ್ದೇವೆ.  ಅತ್ತ ಯುರೋಪ್‌ ಕಮರ್ಷಿಯಲ್‌ ಉಡಾವಣೆಗಳ ಮೇಲೆ ಚಿತ್ತ ನೆಟ್ಟಿದೆ, ಮಾನವಸಹಿತ ಯೋಜನೆಗಳ ಮೇಲೆ ಅದು ಆಸಕ್ತಿ ತೋರಿಸುತ್ತಿಲ್ಲ.

ಜಿ. ಮಾಧವನ್‌ ನಾಯರ್‌, ಇಸ್ರೋದ ಮಾಜಿ ಮುಖ್ಯಸ್ಥ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ