ಬಂಗಾಳದಲ್ಲೀಗ ಸರ್ವಾಧಿಕಾರಿ ಆಡಳಿತ

Team Udayavani, Feb 12, 2019, 12:30 AM IST

ಮಹಾಘಟಬಂಧನದ ಪ್ರಮುಖ ಚಹರೆಯಾಗಿ ಗುರುತಿಸಿಕೊಳ್ಳುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ನಿರಂತರವಾಗಿ ಹರಿಹಾಯುತ್ತಿದ್ದಾರೆ. ಚಿಟ್‌ ಫ‌ಂಡ್‌ ಹಗರಣದಲ್ಲಿ ತಮ್ಮ ಪರಮಾಪ್ತ ರಾಜೀವ್‌ ಕುಮಾರ್‌ರನ್ನು ಸಿಬಿಐ ವಿಚಾರಣೆ ನಡೆಸಲು ಮುಂದಾದಾಗ 3 ದಿನ ಧರಣಿ ನಡೆಸಿ ಪ್ರತಿಭಟಿಸಿದ್ದರು. ಆದರೆ, ಮಮತಾ ಸತ್ಯವನ್ನು ಮುಚ್ಚಿಡುತ್ತಿದ್ದಾರೆ ಎನ್ನುತ್ತಾರೆ ಪಶ್ಚಿಮ ಬಂಗಾಳ ಸಿಪಿಐ(ಎಂ) ನಾಯಕ, ಡಾ. ಸುಜಾನ್‌ ಚಕ್ರವರ್ತಿ. ಈ ವಿಷಯವಾಗಿ ಅವರು ರೆಡಿಫ್ ಜಾಲತಾಣಕ್ಕೆ ನೀಡಿದ ಸಂದರ್ಶನ ಇಲ್ಲಿದೆ…

ತೃಣಮೂಲ ಕಾಂಗ್ರೆಸ್‌ ಶಾರದಾ ಚಿಟ್‌ ಫ‌ಂಡ್‌ ಹಗರಣದಲ್ಲಿ ಬಿಜೆಪಿ ನಾಯಕರಾದ ಮುಕುಲ್‌ ರಾಯ್‌ ಮತ್ತು ಹಿಮಾಂತಾ ಬಿಸ್ವಾಸ್‌ರನ್ನು ದೂಷಿಸಿದರೆ, ಬಿಜೆಪಿಯು ತೃಣಮೂಲ‌ ನಾಯಕರತ್ತ ಬೆರಳು ತೋರಿಸುತ್ತದೆ. ಇಲ್ಲಿ ಏನಾಗುತ್ತಿದೆ ಎನ್ನುವುದರ ಬಗ್ಗೆ ಸ್ಪಷ್ಟ ಚಿತ್ರಣ ನೀಡುವಿರಾ? 
ನೋಡಿ, ಮಮತಾ ಬ್ಯಾನರ್ಜಿಯವರು ಬಿಂಬಿಸುತ್ತಿರುವಂತೆ ಇದು ಕೇಂದ್ರ ಸರ್ಕಾರ ಮತ್ತು ರಾಜ್ಯದ ನಡುವಿನ ತಿಕ್ಕಾಟವಲ್ಲ. ಇದು ಪೂರ್ಣವಾಗಿ ಭ್ರಷ್ಟಾಚಾರಕ್ಕೆ ಸಂಬಂಧ ಪಟ್ಟ ವಿಚಾರ. ಚಿಟ್‌ ಫ‌ಂಡ್‌ ಹಗರಣದಿಂದ ದೇಶದ ಲಕ್ಷಾಂತರ ಜನರ ಹಣ ಲೂಟಿಯಾಗಿದೆ. ತೃಣಮೂಲ ಕಾಂಗ್ರೆಸ್‌ ನಾಯಕರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಅವರೊಂದಿಗೆ ಅಸ್ಸಾಂ ಬಿಜೆಪಿಯ ಹಿಮಾಂತಾ ಬಿಸ್ವಾಸ್‌  ಶರ್ಮಾ ಮತ್ತು ಒಡಿಶಾÏದ ಕೆಲ ನಾಯಕರೂ ಸೇರಿದಂತೆ ವಿವಿಧ ಪಕ್ಷಗಳ ರಾಜಕಾರಣಿಗಳ 
ಹೆಸರುಗಳು ಇವೆ. ಒಂದೇ ವ್ಯತ್ಯಾಸವೇನೆಂದರೆ, ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳೂ ಈ ವಿಚಾರದಲ್ಲಿ ಸಿಬಿಐ ತನಿಖೆ ನಡೆಯಲು ಒಪ್ಪಿಕೊಂಡವು. 

ಕಳೆದ ಐದು ವರ್ಷಗಳಿಂದ ಚಿಟ್‌ ಫ‌ಂಡ್‌ ಹಗರಣದಲ್ಲಿ ಸಿಬಿಐ ಏಕೆ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಈಗ ಏಕಾಏಕಿ ಅದು ಎದ್ದು ಕುಳಿತಿರುವುದೇಕೆ ಎಂಬ ಪ್ರಶ್ನೆ ಎದುರಾಗಿದೆ..
ಸಿಬಿಐಗೆ ಅನೇಕ ವಿಷಯಗಳ ಬಗ್ಗೆ ಜ್ಞಾನವಿದೆ. ಅದು ಈ ಹಗರಣದ ವಿಚಾರದಲ್ಲಿ ಅನೇಕರನ್ನು ಬಂಧಿಸಿದೆ. ಯಾವಾಗ ಸಿಬಿಐನವರು 
ತಮ್ಮ ಪಕ್ಷದ ನಾಯಕರನ್ನು ಅರೆಸ್ಟ್‌ ಮಾಡಲಾರಂಭಿಸಿದರೋ, 
ಮಮತಾ ಬ್ಯಾನರ್ಜಿಯವರು “ವಿವಿಧ ರೀತಿಯಲ್ಲಿ’ ವಿರೋಧಿಸ ಲಾರಂಭಿಸಿದರು.  ಉದಾಹರಣೆಗೆ, ತಮ್ಮ ಕ್ಯಾಬಿನೆಟ್‌ ಸಚಿವ ಮದನ್‌ ಮಿತ್ರಾ ಅರೆಸ್ಟ್‌ ಆದಾಗ ತೃಣಮೂಲ ಕಾಂಗ್ರೆಸ್‌, ಪ್ರತಿಭಟನಾ ರ್ಯಾಲಿ ನಡೆಸಿತು. ಈಗ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ವಿಚಾರದಲ್ಲಿ ಮಮತಾ ಧರಣಿ ನಡೆಸಿದರು. 

ಮಮತಾ ಬ್ಯಾನರ್ಜಿ ಧರಣಿಗೆ ಕುಳಿತದ್ದು ಏಕೆ? 
ಚಿಟ್‌ ಫ‌ಂಡ್‌ ಹಗರಣದ ಕುರಿತ ಎಲ್ಲಾ ದಾಖಲೆಗಳನ್ನೂ ರಾಜೀವ್‌ ಕುಮಾರ್‌ ಮುಚ್ಚಿಹಾಕಿದ್ದಾರೆ. ಅವರಿಗೆ ಅನೇಕ ವಿಚಾರಗಳು 
ತಿಳಿದಿವೆ. ದೊಡ್ಡ ದೊಡ್ಡ ನಾಯಕರ ಹಗರಣ ಮತ್ತು ಅಪರಾಧಗಳ ಬಗ್ಗೆ ರಾಜೀವ್‌ ಕುಮಾರ್‌ಗೆ ಗೊತ್ತಿದೆ. ಈ ಕಾರಣಕ್ಕೆ ಅವರನ್ನು ರಕ್ಷಿಸಲು ಮಮತಾ ಪ್ರಯತ್ನಿಸುತ್ತಿದ್ದಾರೆ. ಚಿಟ್‌ ಫ‌ಂಡ್‌ ಹಗರಣದಲ್ಲಿ ಇತರರು ತೊಂದರೆ ಅನುಭವಿಸಿದಾಗ ಮಮತಾ ಬ್ಯಾನರ್ಜಿ, ಆಗಿದ್ದು ಆಗಿಹೋಯಿತು ಏನೂ ಮಾಡಲಾಗದು ಎಂದುಬಿಟ್ಟರು. ಅದೇ ರಾಜೀವ್‌ ಕುಮಾರ್‌ ವಿಷಯದಲ್ಲಿ ಮಾತ್ರ ಅವರು ಜಾಗೃತರಾಗಿಬಿಟ್ಟಿದ್ದಾರೆ. ಇಷ್ಟು ವರ್ಷದ ನಂತರವೇಕೆ ಸಿಬಿಐ ಕ್ರಮ ಕೈಗೊಳ್ಳುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸುತ್ತೇನೆ. ಏಕೆಂದರೆ, ಬಿಜೆಪಿ ಈ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಬಿಜೆಪಿಯವರು ಚಿಟ್‌ ಫ‌ಂಡ್‌ ಹಗರಣದಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ವಿಚಾರದಲ್ಲಿ(ಹಣವನ್ನು ಹಿಂತರುವುದರಲ್ಲಿ ) ಸಿನ್ಸಿಯರ್‌ ಆಗಿಯೂ ಇಲ್ಲ, ಸೀರಿಯಸ್‌ ಆಗಿಯೂ ಇಲ್ಲ.  ಮೊದಲು ಮಮತಾ ಬ್ಯಾನರ್ಜಿಯವರೊಂದಿಗಿದ್ದ ಮುಕುಲ್‌ ರಾಯ್‌ ಈಗ ಬಿಜೆಪಿ ಸೇರಿದ್ದಾರೆ. ಬಿಜೆಪಿ ಅವರನ್ನು ರಕ್ಷಿಸುತ್ತಿದೆ. ಅದೇ ರೀತಿಯೇ ಮಾಜಿ ಪೊಲೀಸ್‌ ಭಾರತೀ ಘೋಷ್‌ ಕೂಡ ಈಗ ರಕ್ಷಣೆಗಾಗಿ ಬಿಜೆಪಿ ಸೇರಿದ್ದಾರೆ. ಬಿಜೆಪಿ ಈ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆಯಷೆ. 

ಸಿಬಿಐ ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿಯವರ ವಿಚಾರಣೆ ನಡೆಸಿದಾಗ, “ಕೇಂದ್ರ ಸರ್ಕಾರದಡಿಯಲ್ಲಿ ಸಿಬಿಐ ಗುಜರಾತ್‌ನ ಅಸ್ಮಿತೆಗೆ ಘಾಸಿ ಮಾಡುತ್ತಿದೆ’ ಎಂದು ಆ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡರು ಮೋದಿ. ಮಮತಾ ಬ್ಯಾನರ್ಜಿ ಮಾಡುತ್ತಿರುವುದೂ ಇದನ್ನೇ ಅಲ್ಲವೇ? 
ಪಶ್ಚಿಮ ಬಂಗಾಳದ ಜನರಿಗೆ ಮಮತಾರ ರಾಜಕೀಯದಾಟದ ಬಗ್ಗೆ ಅರಿವಿದೆ. ಅವರೇನೂ ಮೂರ್ಖರಲ್ಲ. ಇನ್ನು ಬಿಜೆಪಿ ಇದನ್ನು ಭ್ರಷ್ಟಾಚಾರದ ವಿರುದ್ಧದ ಸಮರವಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ. ಆದರೆ ಇದು ನಿಜವಾದ ಚಿತ್ರಣವಲ್ಲ. 

ಚಿಟ್‌ ಫ‌ಂಡ್‌ನ‌ಲ್ಲಿ ಹಣ ಹೂಡಿದವರ ಕಥೆಯೇನಾಯಿತು? ಈಗ ಅವರೆಲ್ಲ ಎಲ್ಲಿದ್ದಾರೆ? ಏನನ್ನುತ್ತಿದ್ದಾರೆ? 
ಪಶ್ಚಿಮ ಬಂಗಾಳದಲ್ಲೀಗ ಸಂಪೂರ್ಣವಾಗಿ ಸರ್ವಾಧಿಕಾರಿ ಆಡಳಿತವಿದೆ. ಮಾಧ್ಯಮಗಳಿಗೆ ಮಾತನಾಡಲು ಬಿಡುತ್ತಿಲ್ಲ. ಹೂಡಿಕೆದಾರರು (ಹಗರಣದಲ್ಲಿ ಹಣ ಕಳೆದುಕೊಂಡವರು) ಪ್ರತಿ ಜಿಲ್ಲೆಯಲ್ಲಿಯೂ ಕಾರ್ಯಕ್ರಮಗಳನ್ನು-ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ತಮ್ಮ ಹಣವನ್ನು ಹಿಂದಿರುಗಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಅವರೆಲ್ಲ ಸಂಘಟಿತರಾಗಿದ್ದಾರೆ. ಹಣ ಹಿಂಪಡೆಯಲು ನ್ಯಾಯಾಲಯಗಳ ಮೆಟ್ಟಿಲನ್ನೂ ಏರಿದ್ದಾರೆ. ಆದರೂ ಅವರೆಲ್ಲ ಬಡ ಜನರು. ದುಡಿಮೆ ಬಿಟ್ಟು ಪ್ರತಿ ಬಾರಿಯೂ ಪ್ರತಿಭಟನೆ ನಡೆಸಲು ಅವರಿಗೆ ಸಾಧ್ಯವಾಗುವುದಿಲ್ಲ. 

ಈ ಚಿಟ್‌  ಫ‌ಂಡ್‌ಗಳಲ್ಲಿ ಹಣ ಹೂಡಿದ ಬಡವರಿಗೆ ತಮ್ಮ ಹಣ ಒಂದಲ್ಲ ಒಂದು ದಿನ ಹಿಂದಿರುಗುತ್ತದೆ ಎಂಬ ಭರವಸೆ ಇದೆಯೇ?
ಕೆಲವರು ತಮ್ಮ ಹಣ ಬರುವುದೇ ಇಲ್ಲ ಎಂದು ಭಾವಿಸುತ್ತಾರೆ. ಕಳೆದ ನಾಲ್ಕು-ಐದು ವರ್ಷಗಳಲ್ಲಿ ಮಮತಾ ಬ್ಯಾನರ್ಜಿಯವರು ಏನೂ ಮಾಡಿಲ್ಲ. ಅತ್ತ ಅವರು ಸಿಬಿಐ ತನಿಖೆಯನ್ನೂ ವಿರೋಧಿಸುತ್ತಾರೆ, ಇತ್ತ ಜನರ ಹಣದ ಬಗ್ಗೆಯೂ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ. ತೃಣಮೂಲ ಕಾಂಗ್ರೆಸ್‌ ಪಕ್ಷ ಪಶ್ಚಿಮ ಬಂಗಾಳದಲ್ಲಿ ಪೊಲೀಸ್‌ ರಾಜ್‌ ನಡೆಸುತ್ತಿದೆ. ನೀವು ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದರೂ ದೂರು ದಾಖಲಾಗುವುದಿಲ್ಲ. ರಾಜಕೀಯ ಸಭೆಗಳಿಗೆ ಅನುಮತಿ ಸಿಗುವುದಿಲ್ಲ. ದೇಶದ ಪ್ರಧಾನಿಗಳು ಪಶ್ಚಿಮ ಬಂಗಾಳಕ್ಕೆ ಬಂದಾಗ, ಅವರಿಗೆ ಹೆಲಿಪ್ಯಾಡ್‌ ಒದಗಿಸಬೇಕೋ, ಬೇಡವೋ ಎನ್ನುವ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಪಶ್ಚಿಮ ಬಂಗಾಳದ ಸದ್ಯದ ಪರಿಸ್ಥಿತಿ ಹೀಗಿದೆ ನೋಡಿ. ಈ ರೀತಿ ಹಿಂದೆಂದೂ ರಾಜ್ಯದಲ್ಲಿ ಆಗಿರಲಿಲ್ಲ. ರಾಜಕೀಯ ವಲಯದಲ್ಲಿ ಎದುರಾಳಿ ಧ್ವನಿಗಳಿಗೆ ಜಾಗವೇ ಇಲ್ಲದಂತಾಗಿದೆ.

ಡಾ. ಸುಜಾನ್‌ ಚಕ್ರವರ್ತಿ, ಬಯೋಮೆಡಿಕಲ್‌ ವಿಜ್ಞಾನಿ, ಸಿಪಿಐ(ಎಂ) ನಾಯಕ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ