ನನ್ನಲ್ಲಿ ಹಣ ಇರಲಿಲ್ಲ, ಸೋತೆ!

Team Udayavani, Apr 20, 2017, 12:07 PM IST

ನನ್ನನ್ನು ಸಚಿವ ಸ್ಥಾನದಿಂದ ಕೈಬಿಟ್ಟ ಬಳಿಕ ನಂಜನಗೂಡು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆವರೆಗೆ ಏನೇನಾಯಿತು? ಕಾಂಗ್ರೆಸ್‌ 
ಈ ಚುನಾವಣೆ ಹೇಗೆ ಗೆದ್ದುಕೊಂಡಿತು ಎಂಬೆಲ್ಲಾ ವಿಚಾರಗಳ ಬಗ್ಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪುಸ್ತಕ ಹೊರತರುತ್ತೇನೆ. ಅದರಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ನಂಬುವವರು ನಂಬಲಿ, ನಾನಂತೂ ಅದರಲ್ಲಿ ಸತ್ಯವನ್ನೇ ಬರೆಯುತ್ತೇನೆ ವಿ.ಶ್ರೀನಿವಾಸ ಪ್ರಸಾದ್‌ ಬಿಜೆಪಿ ಮುಖಂಡ, ಮಾಜಿ ಸಚಿವ.

ಉಪ ಚುನಾವಣೆ ಫ‌ಲಿತಾಂಶ ಹೀಗೇಕಾಯ್ತು? 
 ಈಗ  ಆ ಬಗ್ಗೆ  ಹೇಳಿದರೆ ಜನ ನಂಬುವುದಿಲ್ಲ ಎಂಬುದು ನನಗೆ ಗೊತ್ತು. ಯಾರು ನಂಬಲಿ, ಬಿಡಲಿ ನಾನೇಕೆ ಸೋತೆ ಎಂಬುದು ಕ್ಷೇತ್ರದ ಜನ, ನನಗೆ ಗೊತ್ತಿದೆ. ಕಾಂಗ್ರೆಸ್‌ ಹೇಗೆ ಗೆದ್ದಿತು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ನಾನು ಪಕ್ಷೇತರನಾಗಿ ಲೋಕಸಭೆಗೆ ಸ್ಪರ್ಧಿಸಿದಾಗಲೂ ನನ್ನ ಪರವಾಗಿ ನಿಂತ ಜನ ಈ ಬಾರಿ ಸೋಲಿಸಿದರು. ನಮ್ಮ ಬೆಂಬಲಿಗರೇ ಹೆಚ್ಚಿದ್ದ ಕಡೆ ಬೂತ್‌ ಏಜೆಂಟರೂ ಸಿಗದ ರೀತಿಯಾಯಿತು. ಅಂದ ಮೇಲೆ ಅದರ ಹಿಂದೆ ಹಣ ಹಂಚಿಕೆ ಕೆಲಸ ಮಾಡಿದೆ ಎಂಬುದು ಸ್ಪಷ್ಟ.

ಕಾಂಗ್ರೆಸ್‌ಗೆ ನಂಜನಗೂಡಿನಲ್ಲಿ ಅಭ್ಯರ್ಥಿಗಳೇ ಸಿಗುಧಿತ್ತಿಲ್ಲ ಎಂದು  ನೀವೇ ಹೇಳಿದ್ದಿರಿ, ಇಡೀ ಸಂಪುಟಧಿದೊಂದಿಗೆ ಬಾರಯ್ನಾ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದ್ರಿ? 
ಈಗಲೂ ನನ್ನ ಮಾತನ್ನು ಸಮರ್ಥಿಸಿಕೊಳ್ಳುತ್ತೇನೆ, ನಾನು ಕಾಂಗ್ರೆಸ್‌ ತೊರೆದ ಬಳಿಕ ಆ ಪಕ್ಷಕ್ಕೆ ಅಭ್ಯರ್ಥಿ ಬಿಡಿ, ತಾಲೂಕು ಅಧ್ಯಕ್ಷರೂ ಇರಲಿಲ್ಲ, ಪಕ್ಷಕ್ಕೆ ಕಚೇರಿಯೂ ಇರಲಿಲ್ಲ. ಹೀಗಾಗಿ ಸಚಿವ ಎಚ್‌.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್‌ ಭೋಸ್‌, ಸಂಸದ ಧ್ರುವನಾರಾಯಣ್‌ ಹೀಗೆ ಹಲವು ಹೆಸರುಗಳು ಬಂದರೂ ನನ್ನ ವಿರುದ್ಧ ಸ್ಪರ್ಧಿಸಲು ಯಾರೂ ಇರಲಿಲ್ಲ. ಕೊನೆಗೆ ಅಭ್ಯರ್ಥಿಗಳಿಲ್ಲದೆ ಜೆಡಿಎಸ್‌ನಿಂದ ಕಳಲೆ ಕೇಶವಮೂರ್ತಿ ಅವರನ್ನು ಕರೆಸಿಕೊಂಡು ಬಂದರು. ಜೆಡಿಎಸ್‌ ಬೆಂಬಲಿಸಿದ್ದರಿಂದ ಮತ್ತು ಹಣದ ಪ್ರಭಾವದಿಂದ ಅವರು ಅಭ್ಯರ್ಥಿ ಗೆಲ್ಲಿಸಿಕೊಂಡರು.

ಜೆಡಿಎಸ್‌ ನಾವು ಯಾರಿಗೂ ಬೆಂಬಲಿಸಲ್ಲ, ತಟಸ್ಥವಾಗಿರ್ತೇವೆ ಎಂದು ಹೇಳಿತ್ತಲ್ಲಾ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಸಿಟ್ಟಿನಿಂದ ಎಚ್‌.ಡಿ.ಕುಮಾರಸ್ವಾಮಿ ಅವರು ಅದೇ ನಿಲುವು ಹೊಂದಿದ್ದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರೂ ತಟಸ್ಥರಾಗಿರುವುದಾಗಿ ಘೋಷಣೆ ಮಾಡಿದ್ದರು. ಅಲ್ಲದೆ, ಕಳಲೆ ಕೇಶವಮೂರ್ತಿ ಕಾಂಗ್ರೆಸ್‌ ಸೇರಿದಾಗ ಆತ ನಮಗೆ ಮೋಸ ಮಾಡಿದ, ಸುಳ್ಳುಗಾರ ಎಂದೆಲ್ಲಾ ಕುಮಾರಸ್ವಾಮಿ ಹೇಳಿದ್ದರು. ಹೀಗಾಗಿ ಜೆಡಿಎಸ್‌ ತಟಸ್ಥ ಎಂದು ತಿಳಿದುಕೊಂಡಿದ್ದೆ. ಆದರೆ, ನಂಜನಗೂಡಿನವರೇ ಆದ ಮೈಸೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ನರಸಿಂಹಸ್ವಾಮಿ ಎಂಬುವರು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದಾಗ ಅಚ್ಚರಿಯಾಯಿತು. ದೇವೇಗೌಡರ ಸೂಚನೆ ಇಲ್ಲದೆ ಆತ ಹೇಗೆ ಈ ಮಾತು ಹೇಳಲು ಸಾಧ್ಯ. ಆಗಲೇ ಗೊತ್ತಾಗಿದ್ದು  ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮಧ್ಯೆ ಒಳ ಒಪ್ಪಂದ ಆಗಿದೆ ಅಂತ.

ನಿಮ್ಮ ಸೋಲಿಗೆ ನೀವೇ ಕಾರಣ, ಅತಿಯಾದ ಆತ್ಮವಿಶ್ವಾಸದಿಂದ ಸರಿಯಾಗಿ ಪ್ರಚಾರಕ್ಕೆ ಹೋಗಲಿಲ್ಲ ಅಂತಾರಲ್ಲಾ?
ಚುನಾವಣೆ ಬಗ್ಗೆ ಗೊತ್ತಿಲ್ಲದೇ ಇರುವವರು ಹೇಳುವ ಮಾತಿದು. ಎಂಟು ಬಾರಿ ಲೋಕಸಭೆ, ಎರಡು ಬಾರಿ ವಿಧಾನಸಭೆ ಚುನಾವಣೆಗೆ ನಿಂತಿದ್ದೆ. ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರಿ ಅದೇ ಕ್ಷೇತ್ರದಿಂದ ಗೆದ್ದಿದ್ದೆ. ಲೋಕಸಭೆ ಚುನಾವಣೆಯಲ್ಲಿ ಸೋತಾಗಲೂ ನಂಜನಗೂಡಿನಲ್ಲಿ ಇತರೆ ಅಭ್ಯರ್ಥಿಗಳಿಗಿಂತ ಹೆಚ್ಚು ಮತ ಗಳಿಸಿದ್ದೆ. ಅಲ್ಲಿನ ಜನ ನನ್ನನ್ನು ಮನೆ ಮಗ ಎಂದು ಭಾವಿಸಿದ್ದರು. ನಾನೂ ಹಾಗೆಯೇ ಇದ್ದೆ. ನನ್ನ ಬಗ್ಗೆ ಅಷ್ಟೊಂದು ಪ್ರೀತಿ ಇರುವ ಜನರ ಮನೆಬಾಗಿಲಿಗೆ ಚುನಾವಣೆ ಚೀಟಿ ಇಟ್ಟುಕೊಂಡು ಹೋಗಲು ನನಗೆ ನಾಚಿಕೆಯಾಗಬೇಕು. ಅದನ್ನೇ ಪ್ರಚಾರಕ್ಕೆ ಹೋಗಿಲ್ಲ ಎಂದು ಹೇಳಿದರೆ ಹೇಗೆ?

ಮತ್ತೇಕೆ ಸೋಲಾಯಿತು?
ಹಣ ಅಷ್ಟೇ ಕಾರಣ. ನನ್ನಲ್ಲಿ ಹಣ ಇರಲಿಲ್ಲ. ಆದರೆ, ಮುಖ್ಯಧಿಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ನವರು ಹಣದ ಹೊಳೆಯನ್ನೇ ಹರಿಸಿದರು. ನಾನು 43 ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ಆದರೆ, ಇಷ್ಟು ವ್ಯವಸ್ಥಿತವಾಗಿ ಹಣ ಹಂಚಿರೋದನ್ನು ನೋಡೇ ಇಲ್ಲ. ಪ್ರತಿಯೊಂದು ಜಾತಿ, ಸಮುದಾಯಕ್ಕೂ ಮನೆ ಮನೆಗಳಿಗೆ ಹೋಗಿ ಹಂಚುವ ವ್ಯವಸ್ಥೆ ಮಾಡಿದ್ದರು. ಸಂಸದ ಧ್ರುವನಾರಾಯಣ್‌ ಖುದ್ದಾಗಿ ಹಣ ಹಂಚಲು ನಿಂತರು. ಅವರ ಆಪ್ತ ಸಹಾಯಕ ಸಿಕ್ಕಿಬಿದ್ದಿದ್ದೇ ಇದಕ್ಕೆ ಉದಾಹರಣೆ. ಪೊಲೀಸರೇ ಅವರ ಕಡೆ ವ್ಯವಸ್ಥಿತವಾಗಿ ನಿಂತು ಹೇಗೆ, ಎಲ್ಲಿ ಹಂಚಬೇಕು ಎಂದು ಮಾಹಿತಿ ನೀಡುತ್ತಿದ್ದರು. ಕೆಂಪಯ್ಯ ಅವರೇ ನೇತೃತ್ವ ವಹಿಸಿ ಎಲ್ಲಾ ಮಾಹಿತಿ ಸಂಗ್ರಹಿಸುತ್ತಿದ್ದರು. 

ನಿಮ್ಮ ಮೇಲಿನ ವಿಶ್ವಾಸಕ್ಕಿಂತ ಹಣವೇ ಪ್ರಮುಖವಾಯಿತಾ?
1963ರಲ್ಲಿ ಇಂಡೋ-ಚೈನಾ ಯುದ್ಧವಾಯಿತು. ಆಗ ನೆಹರು ಪ್ರಧಾನಿಯಾಗಿದ್ದರು. ಕೃಷ್ಣ ಮೆನನ್‌ ರಕ್ಷಣಾ ಸಚಿವರಾಗಿದ್ದರು. ಭಾರತ-ಚೀನಾ ಭಾಯಿ ಭಾಯಿ ಎಂಬ ಘೋಷಣೆಯೊಂದಿಗೆ ನಮ್ಮ ಸೇನೆ ಗಡಿಯಲ್ಲಿ ಶಾಂತಿಯಿಂದ ಇತ್ತು. ಆದರೆ, ಚೀನಾದವರು ಕುರಿಮಂದೆ ಮೇಲೆ ತೋಳಗಳು ಬಿದ್ದಂತೆ ಬಿದ್ದರು. ಯುದ್ಧದ ಮಾಹಿತಿಯೇ ಇಲ್ಲದ ನಮ್ಮ ಯೋಧರು ಅಸಹಾಯಕರಾಗಬೇಕಾಯಿತು. ಅದೇ ರೀತಿ ಕಾಂಗ್ರೆಸ್‌ನವರು ಹಣದ ಹೊಳೆ ಇಟ್ಕೊಂಡು ಏ. 7 ಮತ್ತು 8ರ ರಾತ್ರೋ ರಾತ್ರಿ ನಮ್ಮ ಮೇಲೆ ಬಿದ್ದರು. ಅದು ಗೊತ್ತಾದರೂ ಏನೂ ಮಾಡಲು ನಮ್ಮಿಂದ ಸಾಧ್ಯವಾಗದೆ ನಾವು ಅಸಹಾಯಕರಾಗಬೇಕಾಯಿತು. ಅಷ್ಟೊಂದು ಹಣ ಕೊಟ್ಟರೆ ಯಾರು ತಾನೇ ತೆಗೆದುಕೊಳ್ಳುವುದಿಲ್ಲ? ಆದರೆ, ಸತ್ಯ ನಮಗೂ ಗೊತ್ತು, ಸಿದ್ದರಾಮಯ್ಯನವರಿಗೂ ಗೊತ್ತು.

ಕಾಂಗ್ರೆಸ್‌ನಲ್ಲಿ ಅಧಿಕಾರ ಅನುಭವಿಸಿದ ನೀವು ಸಚಿವ ಸ್ಥಾನದಿಂದ ಕೆಳಗಿಳಿಸಿದರು ಎಂದು ಪ್ರತಿಷ್ಠೆಯಾಗಿ ಪರಿಗಣಿಸಿದ್ದು ಸರಿಯೇ?
ಇದು ಸಚಿವ ಸ್ಥಾನದಿಂದ ಕೆಳಗಿಳಿಸಿದ ಪ್ರಶ್ನೆಯಲ್ಲ. ಸೌಜನ್ಯಧಿಕ್ಕಾದರೂ ಒಂದು ಮಾತನಾಡದೆ ಕೆಳಗಿಳಿಸಿದ್ದರಿಂದ ಬೇಸರಧಿವಾಯಿತು. ಅಷ್ಟಕ್ಕೂ ನನ್ನನ್ನು ಕೆಳಗಿಳಿಸಿದವರಿಗೆ ಮತ್ತು ಅದಕ್ಕೆ ಬೆಂಬಲವಾಗಿ ನಿಂತವರಿಗೆ ಒಂದು ಕೃತಜ್ಞತೆ ಬೇಕಲ್ಲವೇ? ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್‌, ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ನನ್ನಿಂದ ಅನುಕೂಲ ಪಡೆದುಕೊಂಡವರು. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಖರ್ಗೆ ಸಚಿವರಾಗಿದ್ದೇ ನಾನು ಆಸ್ಕರ್‌ ಫ‌ರ್ನಾಂಡೀಸ್‌ ಮೇಲೆ ಒತ್ತಡ ಹೇರಿದ್ದರಿಂದಾಗಿ. ಕನಿಷ್ಠ ಈ ನೆನಪಾದರೂ ಅವರಿಗೆ ಆಗಬೇಕಿತ್ತಲ್ಲ?

ಕಳೆದ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿಧಿದಾಗಲೇ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದಿರಿ, ಉಪ ಚುನಾವಣೆ ಬೇಕಿತ್ತಾ?
ಹೌದು, ನಾನು ಮತ್ತೆ ಕಣಕ್ಕಿಳಿಯುವ ಯೋಚನೆಯಲ್ಲಿ ಇರಲಿಲ್ಲ. ಸೌಜನ್ಯಕ್ಕಾದರೂ ಒಂದು ಮಾತು ಹೇಳದೆ ಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಮತ್ತು ಕಾಂಗ್ರೆಸ್‌ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೇಲೆ ರಾಜಕೀಯದಿಂದ ದೂರವಿರುವ ಉದ್ದೇಶದಲ್ಲಿದ್ದೆ. ಆದರೆ, ಕ್ಷೇತ್ರದ ಜನ ನಾನು ಚುನಾವಣೆಗೆ ನಿಲ್ಲಲೇ ಬೇಕು. ನಿಮ್ಮ ವಿರುದ್ಧ ಸಿದ್ದರಾಮಯ್ಯ ಸರ್ವಾಧಿಕಾರಿ ಧೋರಣೆ ಅನುಧಿಸರಿಸಿದ್ದಾರೆ, ನಿಮಗೆ ಅನ್ಯಾಯ ಮಾಡಿದ್ದಾರೆ, ಸ್ವಜನ ಪಕ್ಷಪಾತ ಮಾಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಲು ನೀವು ಚುನಾವಣೆಗೆ ನಿಲ್ಲಲೇ ಬೇಕು ಎಂದು ಹೇಳಿದರು. ನೀವು ಚುನಾವಣೆಗೆ ನಿಂತರೆ ಮಾತ್ರ ನಾವು ಬೆಂಬಲಿಸುತ್ತೇವೆ ಎಂದು ಕಾಂಗ್ರೆಸ್‌ನಿಂದ ನನ್ನ ಜತೆ ಬಂದವರು ಹೇಳಿದರು. ಹೀಗಾಗಿ ಅಭ್ಯರ್ಥಿಯಾಗಬೇಕಾದ ಅನಿವಾರ್ಯ ಸ್ಥಿತಿ ಬಂತು.

ಚುನಾವಣಾ ರಾಜಕೀಯದಿಂದ ದೂರ ಉಳಿಯುವ ಘೋಷಣೆ ಮಾಡಿದ್ದೀರಿ. ಹಿಂದಿನಂತೆಯೇ ಸ್ಪರ್ಧೆಗೆ ಒತ್ತಡ ಬಂದರೆ?
ಖಂಡಿತ ಮತ್ತೆ ಚುನಾವಣಾ ರಾಜಕೀಯಕ್ಕೆ ಬರುವ ಪ್ರಶ್ನೆ ಇಲ್ಲ. ಈ ಒಂದು ವಿಚಾರ ಬಿಟ್ಟು ಬೇರೆ ಏನಾದರೂ  ಹೇಳಿ, ಕೇಳುತ್ತೇನೆ ಎಂದು ಕ್ಷೇತ್ರದ ಜನರಿಗೆ ಸ್ಪಷ್ಟವಾಗಿ ಹೇಳಿದ್ದೇನೆ.

ಸೋತ ಮೇಲೆ ಮತ್ತೆ ಸ್ಪರ್ಧಿಸುವುದಿಲ್ಲ ಎಂದರೆ ಸಿದ್ದರಾಮಯ್ಯ ಅವರಿಗೆ ಮಣಿದಂತಲ್ಲವೇ?
ಯಾವುದೇ ಕಾರಣಕ್ಕೂ ಇಲ್ಲ. ಎಲ್ಲಾ ಚುನಾವಣೆಗಳನ್ನೂ ನಂಜನಗೂಡು, ಗುಂಡ್ಲುಪೇಟೆ ರೀತಿ ಮಾಡಲಾಗುತ್ತದೆಯೇ? ಅಷ್ಟೊಂದು ಹಣ ಎಲ್ಲಿಂದ ಬರಬೇಕು? ಈ ಸೋಲಿನ ನಂತರ ಸವಾಲು ಇನ್ನಷ್ಟು ಗಟ್ಟಿಯಾಗಿದೆ. ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ 15 ವಿಧಾನಸಭಾ ಕ್ಷೇತ್ರಗಳಿವೆ. ಈ ಹಿಂದೆ ನಡೆದ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ಕಾಂಗ್ರೆಸ್‌ ನೆಲಕಚ್ಚಿತ್ತು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಸೋಲಿಸಿ ನನ್ನ ಸವಾಲಿನ ಶಕ್ತಿ ತೋರಿಸುತ್ತೇನೆ.

ಸಚಿವ ಸ್ಥಾನದಿಂದ ಕೆಳಗಿಳಿಸಿದರು ಎಂಬ ಕಾರಣಕ್ಕೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದಿರಿ. ಬಿಜೆಪಿಯಲ್ಲಿ ವಯಸ್ಸಿನ ಕಾರಣಕ್ಕೆ ಹಿರಿಯರನ್ನು ಮೂಲೆ ಗುಂಪು ಮಾಡಲಾಗುತ್ತಿದೆ. ಅದೇ ರೀತಿ ನಿಮಗೂ ಆದರೆ?
ಅಧಿಕಾರ ಬೇಕು ಎಂದಾಗ ಮಾತ್ರ ಅಲ್ಲವೇ ಮೂಲೆಗುಂಪಾಗುವ ಪ್ರಶ್ನೆ. ಮತ್ತೆ ಚುನಾವಣಾ ರಾಜಕೀಯಕ್ಕೆ ಬರುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದೇನೆ. ಅಷ್ಟೇ ಅಲ್ಲ, ನಾನು ಪಕ್ಷದಲ್ಲಿ ಯಾವುದೇ ಹುದ್ದೆಯ ಆಕಾಂಕ್ಷೆ ಇಟ್ಟಿಲ್ಲ. ನನಗೆ ಯಾವುದೇ ತರಹದ ಅಧಿಕಾರ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದೇನೆ, ಕೊಟ್ಟರೂ ತೆಗೆದುಕೊಳ್ಳುವುದಿಲ್ಲ. ಮುಂಬರುವ ವಿಧಾನಸಭೆ, ಲೋಕಸಭೆ ಚುನಾವಣೆವರೆಗೆ ಬಿಜೆಪಿ ಸಂಘಟನೆ ತೊಡಗಿಸಿಕೊಳ್ಳುತ್ತೇನೆ.

ಅಧಿಕಾರ ಬೇಡ, ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಅಂದರೆ? 
ಹಳೇ ಮೈಸೂರು ಭಾಗದಲ್ಲಿ ದಲಿತರ ಜನಸಂಖ್ಯೆ ಹೆಚ್ಚಾಗಿದೆ. ವಿಶೇಷವಾಗಿ ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು. ಮುಂದಿನ ಒಂದು ವರ್ಷ ಕಾಲ ಸಂಪೂರ್ಣ ಈ ಭಾಗದಲ್ಲಿ ದಲಿತ ಸಮುದಾಯದ ಮತಗಳನ್ನು ಬಿಜೆಪಿ ಪರ ಕ್ರೋಢೀಕರಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ.

ಉಪ ಚುನಾವಣೆಯಲ್ಲಿ ಸೋತ ಬಳಿಕ ದಿಗ್ವಿಜಯ್‌ ಸಿಂಗ್‌ ಬಗ್ಗೆ ನಿಮಗೇಕೆ ಅಷ್ಟೊಂದು ಆಕ್ರೋಶ?
ಕಾಂಗ್ರೆಸ್‌ನ ಪರಿಸ್ಥಿತಿ ತೀವ್ರ ಬಾಯಾರಿದ ನಾಲಿಗೆಯಂತಾಗಿದೆ. ಬಹಳ ಬಾಯಾರಿದಾಗ ಎರಡು ತೊಟ್ಟು ನೀರು ನಾಲಿಗೆಗೆ ಬಿದ್ದರೆ ಅದೆಷ್ಟು ಸಂತೋಷವಾಗುತ್ತದೆ. ಒಂದೊಂದೇ ರಾಜ್ಯ ಕಾಂಗ್ರೆಸ್‌ನಿಂದ ಕಳಚಿಕೊಂಡು ಹೋಗುತ್ತಿರುವ ಸಂಕಟದಲ್ಲಿರುವ ಕಾಂಗ್ರೆಸ್‌ಗೆ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಸಿಕ್ಕಿದ ಗೆಲುವು ಅದೇ ರೀತಿ ಆಗಿದೆ. ಆದರೆ, ನನ್ನ ಜತೆಗೇ ಲೋಕಸಭೆಯಲ್ಲಿ ಕುಳಿತುಕೊಳ್ಳುತ್ತಿದ್ದ, ನನ್ನ ಆತ್ಮೀಯರೂ ಆಗಿದ್ದ ದಿಗ್ವಿಜಯ್‌ ಸಿಂಗ್‌ ಪ್ರತಿಕ್ರಿಯಿಸಿದ ರೀತಿ ನನಗೆ ಬೇಸರವಾಗಿದೆ. ಗೋವಾದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಗೆ ದಿಗ್ವಿಜಯ್‌ ಸಿಂಗ್‌ ಅವರನ್ನು ಕಳುಹಿಸಿಕೊಟ್ಟಾಗ ಏನು ಮಾಡಿದರು? ಇವರು ಉಸ್ತುವಾರಿಗೆ ಬಂದಿದ್ದಾರೆಯೇ, ಹನಿಮೂನ್‌ಗೆ ಬಂದಿದ್ದಾರೆಯೇ ಎಂದು ಆ ಪಕ್ಷದವರೇ ಪ್ರಶ್ನಿಸಿದ್ದರು. ಅಂತಹ ವ್ಯಕ್ತಿಗೆ ನನ್ನ ಬಗ್ಗೆ ಮಾತನಾಡಲು ನಾಚಿಕೆಯಾಗಬೇಕು.

ಸಂದರ್ಶನ ಪ್ರದೀಪ್‌ ಕುಮಾರ್‌ ಎಂ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ