ಪಾಕ್‌ಗೆ ಯುದ್ಧ ಸಾಮರ್ಥ್ಯವಿಲ್ಲ

Team Udayavani, Mar 4, 2019, 12:30 AM IST

ಪಾಕಿಸ್ತಾನವಿಂದು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಪೂರ್ಣ ಪ್ರಮಾಣದ ಯುದ್ಧವೇನಾದರೂ ನಡೆದರೆ ಅದು ಮೂರು-ನಾಲ್ಕು ದಿನ ಕೂಡ ತಡೆದುಕೊಳ್ಳಲಾರದು. ಏಕೆಂದರೆ ಯುದ್ಧವೆನ್ನುವುದು ಬಹಳ ಖರ್ಚನ್ನು ಬೇಡುತ್ತದೆ. ಅದಕ್ಕಿಂತಲೂ ಹೆಚ್ಚಾಗಿ, ಪಾಕಿಸ್ತಾನಕ್ಕೆ  ಯುದ್ಧಕ್ಕೆ ಧುಮುಕಿದರೆ ಭವಿಷ್ಯದಲ್ಲಿ ತನಗೇನು ಕಾದಿದೆ ಎನ್ನುವುದರ ಅರಿವಾಗಿದೆ.  ಒಂದೇ ಒಂದು ರಾಷ್ಟ್ರವೂ ಭಾರತದ ಕಾರ್ಯಾಚರಣೆಯನ್ನು ವಿರೋಧಿಸಿಲ್ಲ. ಪಾಕಿಸ್ತಾನಕ್ಕೆ ಮತ್ತಷ್ಟು ನಿರಾಸೆ ಮೂಡಿಸಿರುವ ಸಂಗತಿಯೆಂದರೆ, ಅದರ ಆಪ್ತ ರಾಷ್ಟ್ರ ಚೀನಾ ಕೂಡ ಭಾರತವನ್ನು ವಿರೋಧಿಸುವ ಬದಲು, ಸಂಯಮ ಕಾಯ್ದುಕೊಳ್ಳಬೇಕು ಎಂದು ಹೇಳಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಕ್ಕಟ್ಟು ಹೆಚ್ಚಾದ ಸಮಯದಲ್ಲಿಯೇ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಶಾಂತಿ ಸ್ಥಾಪನೆ ಅಗತ್ಯವೆಂದರು. ಈ ವಿಷಯದಲ್ಲಿ ಭಾರತದ ನಿಲುವು ಏನಿದೆ? 
– ಬಾಲಕೋಟ್‌ ಮೇಲೆ ದಾಳಿ ಮಾಡಿದ ವಿಷಯವನ್ನು ಘೋಷಿಸು ವಾಗಲೇ ಭಾರತ ಇದೇ ದಿಕ್ಕಿನಲ್ಲೇ ಮಾತನಾಡಿದ್ದನ್ನು ನೀವು ಗಮನಿಸಿ ಲ್ಲವೇ? “ಪಾಕಿಸ್ತಾನದ ಮಿಲಿಟರಿ ಅಥವಾ ನಾಗರಿಕರನ್ನು ಟಾರ್ಗೆಟ್‌ ಮಾಡುವ ಉದ್ದೇಶ ನಮಗಿಲ್ಲ’ ಎಂದು ಭಾರತ ಸ್ಪಷ್ಟಪಡಿಸಿದೆ. ಭಾರತ ಕ್ಕಾಗಲಿ ಅಥವಾ ಪಾಕಿಸ್ತಾನಕ್ಕಾಗಲಿ ಈಗಿನ ವಿದ್ಯಮಾನಗಳು ಪೂರ್ಣ ಪ್ರಮಾಣದ ಯುದ್ಧವಿರಲಿ, ಚಿಕ್ಕ ಯುದ್ಧವಾಗಿ ಬದಲಾಗುವುದೂ ಬೇಕಿಲ್ಲ.  

ಆದರೆ ಈಗಲೂ ಪಾಕ್‌ನ ಉಗ್ರ ಅಡಗುತಾಣಗಳನ್ನೆಲ್ಲ ಹೊಡೆದುರುಳಿಸುವ ಕೆಲಸವನ್ನು ತಾನು ಮುಂದುವರಿಸುವುದಾಗಿ ಮಾತನಾಡುತ್ತಿದೆಯಲ್ಲ ಭಾರತ?
– ಭಾರತ ತನ್ನ ಗುರಿಯೇನಿದ್ದರೂ ಉಗ್ರವಾದವಷ್ಟೇ ಹೊರತು ಪಾಕ್‌ ಮಿಲಿಟರಿ ಅಥವಾ ನಾಗರಿಕರಲ್ಲ ಎಂದು ಸ್ಪಷ್ಟಪಡಿಸಿದೆ. 

ಅದೇಕೆ ಇಮ್ರಾನ್‌ ಖಾನ್‌ ಶಾಂತಿ ಮಾತುಕತೆಯ ಪ್ರಸ್ತಾವ ಎದುರಿಡುತ್ತಿದ್ದಾರೆ ಎಂದು ನಿಮಗನಿಸುತ್ತದೆ? ಒಂದು ವೇಳೆ ಯುದ್ಧ ಸಂಭವಿಸಿದರೆ ಪಾಕಿಸ್ತಾನ ಭಾರೀ ಬೆಲೆ ತೆರಬೇಕಾಗುತ್ತದೆ ಎಂಬ ಭಯದಿಂದಲೇ? 
– ಪಾಕಿಸ್ತಾನವಿಂದು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಪೂರ್ಣ ಪ್ರಮಾಣದ ಯುದ್ಧವೇನಾದರೂ ನಡೆದರೆ ಅದು ಮೂರು-ನಾಲ್ಕು ದಿನ ಕೂಡ ತಡೆದುಕೊಳ್ಳಲಾರದು. ಏಕೆಂದರೆ ಯುದ್ಧವೆನ್ನುವುದು ಬಹಳ ಖರ್ಚನ್ನು ಬೇಡುತ್ತದೆ. ಅದಕ್ಕಿಂತಲೂ ಹೆಚ್ಚಾಗಿ, ಪಾಕಿಸ್ತಾನಕ್ಕೆ  ಯುದ್ಧಕ್ಕೆ ಧುಮುಕಿದರೆ ಭವಿಷ್ಯದಲ್ಲಿ ತನಗೇನು ಕಾದಿದೆ ಎನ್ನುವುದರ ಅರಿವಾಗಿದೆ. 

ಗಮನಿಸಿ ನೋಡಿ, ಒಂದೇ ಒಂದು ರಾಷ್ಟ್ರವೂ ಭಾರತದ ಕಾರ್ಯಾಚರಣೆಯನ್ನು ವಿರೋಧಿಸಿಲ್ಲ. ಪಾಕಿಸ್ತಾನಕ್ಕೆ ಮತ್ತಷ್ಟು ನಿರಾಸೆ ಮೂಡಿಸಿರುವ ಸಂಗತಿಯೆಂದರೆ, ಅದರ ಆಪ್ತ ರಾಷ್ಟ್ರ ಚೀನಾ ಕೂಡ ಭಾರತವನ್ನು ವಿರೋಧಿಸುವ ಬದಲು, ಸಂಯಮ ಕಾಯ್ದುಕೊಳ್ಳಬೇಕು ಎಂದು ಹೇಳಿದೆ. ಅಲ್ಲದೇ, ಅದು ಮಾತುಕತೆ ಆರಂಭಿಸಿ, ಸಂಬಂಧ ಸುಧಾರಿಸಿಕೊಳ್ಳಿ ಎಂದು ಪಾಕಿಸ್ತಾನಕ್ಕೇ ಪಾಠ ಮಾಡಿದೆ.  ರಷ್ಯಾ, ಚೀನಾ ಮತ್ತು ಭಾರತ ಕೂಡ ತ್ರಿಪಕ್ಷೀಯ ಹೇಳಿಕೆಯಲ್ಲಿ “ಎಲ್ಲಾ ರಾಷ್ಟ್ರಗಳೂ ಉಗ್ರವಾದವನ್ನು ಕೊನೆಗೊಳಿಸಬೇಕು’ ಎಂದು ಮಾತನಾಡಿವೆ. ಪಾಕಿಸ್ತಾನ ತನ್ನ ನೆಲದಲ್ಲಿನ ಉಗ್ರವಾದವನ್ನು ಕೊನೆಗೊಳಿಸಬೇಕು ಎಂದು ಅಮೆರಿಕ ಸ್ಪಷ್ಟವಾಗಿ ಹೇಳಿದೆ.(ಈಗ ಫ್ರಾನ್ಸ್‌, ಬ್ರಿಟನ್‌, ಅಮೆರಿಕ ಕೂಡ ಜೈಶ್‌  ಅನ್ನು ಜಾಗತಿಕ ಉಗ್ರಸಂಘಟನೆಯೆಂದು ಘೋಷಿಸಲು ವಿಶ್ವಸಂಸ್ಥೆಯ ಮುಂದೆ ಪ್ರಸ್ತಾವವಿಟ್ಟಿವೆ). ಒಟ್ಟಲ್ಲಿ ಈಗ ಯಾರೂ ಕೂಡ ಪಾಕಿಸ್ತಾನದ ಜೊತೆಗೆ ಇಲ್ಲ.  ಪಾಕಿಸ್ತಾನದ ಮೇಲೆ ವಿಪರೀತವೆನಿಸುವಷ್ಟು ಅಂತಾರಾಷ್ಟ್ರೀಯ ಒತ್ತಡ ಸೃಷ್ಟಿಯಾಗಿದೆ. 

ಪಾಕಿಸ್ತಾನ 3-4 ದಿನ ಕೂಡ ಯುದ್ಧವನ್ನು ತಡೆದುಕೊಳ್ಳುವಂಥ ಸ್ಥಿತಿಯಲ್ಲಿ ಇಲ್ಲ ಎನ್ನುತ್ತೀರಿ. ಹಾಗಿದ್ದರೆ ಅದರ ಮೇಲೆ ಯುದ್ಧ ಸಾರಲು ಭಾರತಕ್ಕೆ ಇದು ಒಳ್ಳೆಯ ಸಮಯವಲ್ಲವೇ? 
– ಯುದ್ಧಕ್ಕೆ ಹೋಗುವುದು ಭಾರತದ ಹಿತದೃಷ್ಟಿಯಿಂದಲೂ ಒಳ್ಳೆಯದಲ್ಲ. ಯುದ್ಧವು ಭಾರತದ ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ ಮತ್ತು ಅಭಿವೃದ್ಧಿಗೆ ಪೆಟ್ಟುಕೊಡುತ್ತದೆ. ಯುದ್ಧ ಆರಂಭಿಸದಿರಲು ಭಾರತಕ್ಕೂ ಕೂಡ ತನ್ನದೇ ಕಾರಣಗಳಿವೆ. ನಾವಿಂದು ವೇಗದ ಬೆಳವಣಿಗೆ ಪಥದಲ್ಲಿದ್ದೇವೆ, ನಮ್ಮ ಆರ್ಥಿಕತೆ ಉತ್ತಮವಾಗಿದೆ. ಯುದ್ಧವು ಈ ಪ್ರಗತಿಗೆ ಅಡ್ಡಗಾಲಾಗುತ್ತದೆ. 

ನಿಸ್ಸಂಶಯವಾಗಿಯೂ ಯುದ್ಧವೆನ್ನುವುದು ಕೊನೆಯ ಆಯ್ಕೆ. ಎರಡೂ ರಾಷ್ಟ್ರಗಳ ಬಳಿ ಪರಮಾಣು ಶಸ್ತ್ರಾಸ್ತ್ರಗಳಿವೆ ಎನ್ನುವ ಕಾರಣಕ್ಕಷ್ಟೇ ಅಲ್ಲ, ಬದಲಾಗಿ ಇದು ಖರ್ಚಿನ ಬಾಬತ್ತು ಎನ್ನುವುದೂ ಇದಕ್ಕೆ ಕಾರಣ. ಪಾಕಿಸ್ತಾನಕ್ಕೂ ಯುದ್ಧ ಬೇಡ, ಭಾರತಕ್ಕೂ ಬೇಡ. ಎರಡೂ ರಾಷ್ಟ್ರಗಳಿಗೂ ತಮ್ಮದೇ ಆದ ಕಾರಣಗಳಿವೆ.

ಪಾಕಿಸ್ತಾನ ಇಲ್ಲಿಯವರೆಗಿನ ತನ್ನ ಪರೋಕ್ಷ ಯುದ್ಧವನ್ನು(ಜಮ್ಮು-ಕಾಶ್ಮೀರದಲ್ಲಿ ಮಾಡುತ್ತಿರುವಂತೆ ಅಥವಾ 2003-2013ರಲ್ಲಿ  ಭಾರತದಾದ್ಯಂತ ಉಗ್ರ ದಾಳಿಗಳನ್ನು ನಡೆಸಿದಂತೆ) ಮುಂದುವರಿಸುವ ಸಾಧ್ಯತೆ ಇದೆ. ಹೀಗಿರುವಾಗ ಈಗಿನಂತೆ ಪಾಕ್‌ಗೆ ನುಗ್ಗಿ ಟಾರ್ಗೆಟ್‌ಗಳನ್ನು ಧ್ವಂಸ ಮಾಡುವ ಆಯ್ಕೆಯಂತೂ ಭಾರತದ ಮುಂದಿರುತ್ತದೆ. 

ಯಾಕೆ ಈಗ ಭಾರತೀಯರು ಮತ್ತು ಮುಖ್ಯವಾಗಿ ಮೋದಿ ಸರ್ಕಾರ, ಪಾಕಿಸ್ತಾನಕ್ಕೆ ವಾಯುದಾಳಿಯ ಮೂಲಕ ಪಾಠ ಕಲಿಸಲು ಇದು ಸುಸಮಯ ಎಂದು ಭಾವಿಸುತ್ತಾರೆ? ಹಿಂದೇಕೆ ಈ ಕೆಲಸ ಆಗಲಿಲ್ಲ. ಉದಾಹರಣೆಗೆ ಪಠಾಣ್‌ಕೋಟ್‌ ಉಗ್ರ ದಾಳಿಯ ಸಂದರ್ಭದಲ್ಲಿ ಅಥವಾ ಉರಿ ದಾಳಿಯಾದ ಸಂದರ್ಭದಲ್ಲೂ ನಾವು ವಾಯುದಾಳಿ ಮಾಡಲಿಲ್ಲ?
– ನಿಮ್ಮನ್ನು ಹತ್ತು ವರ್ಷ ಹಿಂದಕ್ಕೆ ಒಯ್ಯುತ್ತೇನೆ. ಮುಂಬೈ ಉಗ್ರ ದಾಳಿಯ ಸಮಯದಲ್ಲಿ ಮನಮೋಹನ್‌ ಸರ್ಕಾರದ ಮುಂದೆ ಏರ್‌ ಚೀಫ್ ಫಾಲಿ ಮೇಜರ್‌ ಅವರು ಇಂಥದ್ದೇ ಆಯ್ಕೆಯನ್ನು ಎದುರಿಟ್ಟಿದ್ದರು. ಪಾಕಿಸ್ತಾನದಲ್ಲಿನ ಲಷ್ಕರ್‌ ಕೇಂದ್ರವನ್ನು ವಾಯುದಾಳಿಯ ಮೂಲಕ ಧ್ವಂಸಗೊಳಿಸೋಣ ಎಂದಿತ್ತು ವಾಯುಪಡೆ. ಆದರೆ ಸರ್ಕಾರಕ್ಕೆ ಇದು ಉತ್ತಮ ಆಯ್ಕೆ ಎನಿಸಲಿಲ್ಲ. ಉಗ್ರರ ಮೇಲೆ ಕ್ರಮ ಕೈಗೊಳ್ಳುವಂತೆ ಪಾಕ್‌ ಮೇಲೆ ಒತ್ತಡ ತರುವುದೇ ಉತ್ತಮ ಆಯ್ಕೆ ಎಂದು ಅದಕ್ಕೆ ಅನ್ನಿಸಿತು. ಆದರೆ ಆ ಸಮಯ ಭಿನ್ನವಾಗಿತ್ತು. ನನ್ನ ಪ್ರಕಾರ, ಅಂದು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಅಷ್ಟೇನೂ ಮಹತ್ವ ಇರಲಿಲ್ಲ. 

ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಭೂ-ರಾಜಕೀಯ ಸನ್ನಿವೇಶ ಭಾರತಕ್ಕೆ ಅನುಕೂಲಕರವಾಗಿದೆ. ಅಫ್ಕೋರ್ಸ್‌, ಏನಕೇನ ದೇಶದ ಹಿತರಕ್ಷಣೆಗಾಗಿ ರಾಜಕೀಯ ರಿಸ್ಕ್ ತೆಗೆದುಕೊಳ್ಳುವ ಮೋದಿಯಂಥ ಸಕ್ರಿಯ ನಾಯಕರಿದ್ದಾರೆ.  ಹಾಗಾಗಿ ಅಂದಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ. 

ಉರಿ ಉಗ್ರ ದಾಳಿಯ ನಂತರ ಮೋದಿ ಗ್ರೌಂಡ್‌ ಆಪರೇಷನ್‌ ನಡೆಸುವ ನಿರ್ಧಾರಕ್ಕೆ ಸಮ್ಮತಿ ನೀಡಿದರು. ಆದರೆ ಒಂದು ಸರ್ಜಿಕಲ್‌ ಸ್ಟ್ರೈಕ್‌ನಿಂದ ಪಾಕಿಸ್ತಾನದ ವರ್ತನೆಯೇನೂ ಬದಲಾಗುವ ನಿರೀಕ್ಷೆ ಇರಲಿಲ್ಲ.  ಪುಲ್ವಾಮಾ ಉಗ್ರ ದಾಳಿ ನಡೆದಾಗ ಭಾರತದ ಸಹನೆಯ ಕಟ್ಟೆ ಒಡೆಯಿತು. ಆದರೆ ಈ ಬಾರಿ ನೆಲದ ಮೂಲಕ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ್ದರೆ ಪಾಕಿಸ್ತಾನ ಅದಕ್ಕೆ ಸಿದ್ಧವಾಗಿರುತ್ತಿತ್ತು. ಹೀಗಾಗಿ, ವಾಯುದಾಳಿಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. 

ಹೀಗಾಗಿ, ಎಲ್ಲರ ನಿರೀಕ್ಷೆಗೂ ಮೀರಿ ಭಾರತೀಯ ಸೇನೆ ಹೆಜ್ಜೆಯಿಟ್ಟಿತು. ಪಾಕ್‌ ಆಕ್ರಮಿತ ಕಾಶ್ಮೀರವನ್ನೂ ದಾಟಿ, ನೇರವಾಗಿ ಪಾಕ್‌ನೊಳಗೇ ನುಗ್ಗಿತು. ಇದು ನಿಜಕ್ಕೂ ಗೇಮ್‌ ಚೇಂಜರ್‌, ಏಕೆಂದರೆ, ಇಲ್ಲಿಯವರೆಗೂ ಭಾರತ ತನಗೆ ತಾನೆ ಹಾಕಿಕೊಂಡಿದ್ದ ಗೆರೆಯನ್ನು ದಾಟಿತ್ತು. ಭಾರತವೀಗ ಪಾಕಿಸ್ತಾನಕ್ಕೆ ಏನು ಹೇಳಬೇಕೋ ಅದನ್ನು ಸ್ಪಷ್ಟವಾಗಿ ಹೇಳಿದೆ. 

ಮೋದಿ ಸರ್ಕಾರದ ಅನೇಕ ಟೀಕಾಕಾರರು ಇದನ್ನು “ಚುನಾವಣಾ ಯುದ್ಧ’ ಎನ್ನುತ್ತಿದ್ದಾರೆ. ನೀವೂ ಹಾಗೇ ಭಾವಿಸುತ್ತೀರಾ? 
– ರಾಜಕೀಯ ಕಾರಣಗಳಿಂದಾಗಿ ಮೋದಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿತು ಎಂದೇನೂ ನನಗೆ ಅನಿಸುವುದಿಲ್ಲ. ಆದಾಗ್ಯೂ, ಸರ್ಕಾರದ ಮೇಲೆ “ಏನಾದರೂ ಮಾಡಲೇಬೇಕು’ ಎಂಬ ಒತ್ತಡವಂತೂ ಇತ್ತು. ಒಂದರ್ಥದಲ್ಲಿ 2016ರ ಸೆಪ್ಟೆಂಬರ್‌ನಲ್ಲೇ ಮೋದಿ, ಒಂದು ವೇಳೆ ಪಾಕಿಸ್ತಾನವೇನಾದರೂ ಅತಿಯಾಗಿ ವರ್ತಿಸಿತು ಎಂದರೆ, ನಾವು ಪ್ರಬಲ ಕಾರ್ಯಾಚರಣೆ ನಡೆಸಿ ಅದಕ್ಕೆ ಪಾಠ ಕಲಿಸಬೇಕು ಎಂದು ನಿರ್ಧರಿಸಿದ್ದರು. ಆದಾಗ್ಯೂ ಈಗಿನ ಎಲ್ಲಾ ಪ್ರಕ್ರಿಯೆಗಳಿಂದಾಗಿ ಅವರಿಗೆ ರಾಜಕೀಯವಾಗಿ ಲಾಭವಂತೂ ಆಗಲಿದೆ.   

ಆದರೆ ಒಂದು ವಿಷಯ ನೆನಪಿಡಿ. ಲೋಕಸಭಾ ಚುನಾವಣೆಗಳಿಗೆ ಇನ್ನೂ ಮೂರು ತಿಂಗಳಷ್ಟೇ ಉಳಿದಿದೆ. ಒಂದು ವೇಳೆ ಪಾಕಿಸ್ತಾನದಿಂದ ಭಾರತದ ಮೇಲೇನಾದರೂ ಪ್ರಮುಖ ದಾಳಿ ನಡೆದು, ಭಾರತಕ್ಕೆ ತಕ್ಷಣಕ್ಕೆ ತಡೆಯಲು ಆಗದಿದ್ದರೆ, ನರೇಂದ್ರ ಮೋದಿ ಚುನಾವಣೆಯಲ್ಲಿ ಸೋಲಲೂಬಹುದಲ್ಲವೇ? 

ಆದರೂ ಅವರು ರಿಸ್ಕ್ ತೆಗೆದುಕೊಂಡಿದ್ದಾರೆ. ಮಿಲಿಟರಿ ವಿಷಯದಲ್ಲೇ ಆಗಲಿ ಹಾಗೂ ರಾಜಕೀಯವಾಗಿಯೂ ಆಗಲಿ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಅವರಿಗಿದೆ. ಹೀಗಾಗಿ, ಮೋದಿ ಕೇವಲ ರಾಜಕೀಯ ಲಾಭಕ್ಕಾಗಿ ಈ ನಿರ್ಧಾರ ಕೈಗೊಂಡರು ಎನ್ನುವ ಮಾತನ್ನು, ವಾದವನ್ನು ನಾನು ಒಪ್ಪುವುದಿಲ್ಲ. 

– ನಿತಿನ್‌.ಎ.ಗೋಖಲೆ, 
ರಕ್ಷಣಾ ಪರಿಣತರು, ಲೇಖಕರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ