ಕನ್ನಡ ಜನಗಳ ಸ್ವಭಾವವೇ ಕನ್ನಡದ ಸಮಸ್ಯೆ

Team Udayavani, Jan 10, 2019, 12:30 AM IST

ಜನವರಿ 19, 20 ರಂದು  ಮೈಸೂರಿನ ಕಲಾಮಂದಿರದಲ್ಲಿ ಹಿರಿಯ ಸಾಹಿತಿ, ಡಾ. ಎಸ್‌. ಎಲ್‌. ಭೈರಪ್ಪನವರ ಸಾಹಿತ್ಯೋತ್ಸವ ನಡೆಯಲಿದೆ.  ಈ ರೀತಿ ಸಾಹಿತಿ, ಅವರ ಬದುಕು, ಬರಹಗಳನ್ನು ಒಂದೇ ಆವರಣದಲ್ಲಿ ಇಟ್ಟು, ಸಾಹಿತ್ಯ ಸಮಾರಾಧನೆ ಏರ್ಪಡಿಸುವುದು ಬಹಳ ಅಪರೂಪ.  ಈ ನೆಪದಲ್ಲಿ “ಉದಯವಾಣಿ’ ಎಸ್‌ ಎಲ್‌ ಭೈರಪ್ಪನವರನ್ನು ಮಾತನಾಡಿಸಿದಾಗ ಅವರು ಸಾಹಿತ್ಯ, ಭಾಷೆ, ಅದರ ಅಳಿವು-ಉಳಿವಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಿಷ್ಟು…  

ನಿಮ್ಮ ಹೆಸರಲ್ಲಿ ಸಾಹಿತ್ಯೋತ್ಸವ ನಡೀತಾ ಇದೆಯಲ್ಲಾ?
    ಹೌದು. ಈ ಫೇಸ್‌ಬುಕ್‌ನಲ್ಲಿ, “ಭೈರಪ್ಪ ಸಾಹಿತ್ಯ ಪ್ರಿಯರ ಕೂಟ’ ಅಂತಿದೆ. ಸುಮಾರು 21 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇವರೆಲ್ಲಾ ಇಷ್ಟೂ ದಿನ ಫೇಸ್‌ಬುಕ್‌ನಲ್ಲಿ ನನ್ನ ಪುಸ್ತಕಗಳ ಬಗ್ಗೆ ಚರ್ಚೆ ಮಾಡ್ತಾ ಇದ್ದರು. “ವಂಶವೃಕ್ಷ’ ಪ್ರಕಟವಾಗಿ 50 ವರ್ಷ ತುಂಬಿದಾಗ ಒಂದು ಕಾರ್ಯಕ್ರಮ ಮಾಡಿದರು. ಮಂಗಳೂರು, ಶಿವಮೊಗ್ಗ, ಮೈಸೂರು ಮುಂತಾದ ಕಡೆಗಳಲ್ಲಿ “ಕವಲು’, “ಮಂದ್ರ’ ಪುಸ್ತಕದ ಮೇಲೆ ಚರ್ಚೆಗಳನ್ನು ನಡೆದವು. ಮುಂದುವರಿದ ಭಾಗವಾಗಿ ಈಗ ದೊಡ್ಡ ಮಟ್ಟದಲ್ಲಿ ಸಾಹಿತ್ಯೋತ್ಸವ ಮಾಡ್ತಿದ್ದಾರೆ. 

ಏನೇನು ನಡೆಯುತ್ತೆ?
    ನನ್ನನ್ನು ಹೊಗೊಳ್ಳೋದು-ಗಿಗಳ್ಳೋದು ಅನ್ನೋದು ಎಲ್ಲಾ ಅಲ್ಲಿರಲ್ಲ. ಮುಖ್ಯವಾಗಿ ನನ್ನ ಪುಸ್ತಕಗಳ ಮೇಲೆ ಚರ್ಚೆ ನಡೆಯುತ್ತೆ. ಪಾತ್ರಗಳ ಬಗ್ಗೆ, ಬರವಣಿಗೆ ತಂತ್ರಗಾರಿಕೆಯ ಬಗ್ಗೆ ಮಾತುಕತೆ ನಡೆಯುತ್ತೆ. ವಿಮಶಾìತ್ಮಕವಾದ ಒಂದಷ್ಟು ಭಾಷಣ ಇರ್ತದೆ. ಓದುಗರಿಗೆ ಒಂಥರ ಟ್ರೈನಿಂಗ್‌ ಇದ್ದ ಹಾಗೆ. 

ಇದರಿಂದ ಪ್ರಯೋಜನ ಏನು ಅಂತೀರ?
    ಪ್ರಯೋಜನ ಅಂದರೆ, ಈ ಥರ ಸಾಹಿತ್ಯ ಸಂವಾದಗಳಿಂದ ಹೊಸ ಓದುಗರ ಸೇರ್ಪಡೆ ಆಗ್ತದೆ. ಹಳೆಯ ಓದುಗರಿಗೆ ಲೇಖಕರ ಮುಖಾಮುಖೀಯಾಗ್ತದೆ. ಸಕ್ಸಸ್‌ ಅನ್ನೋಕೆ ಇದೇನು ಸಿನಿಮಾ ಅಲ್ವಲ್ಲ? ಅಲ್ಲಾದರೆ ಸಕ್ಸಸ್‌ ಆಗುತ್ತದೆ ಅಂತ ಗುರಿ ಇಟ್ಟುಕೊಳ್ಳಬೇಕು. ಇಲ್ಲಿ ಯಾರೂ ಗುರಿ ಇಟ್ಟುಕೊಂಡಿಲ್ಲ. ನಟರು ಬ್ಯುಸಿನೆಸ್‌ ಜಾಸ್ತಿ ಮಾಡಿಕೊಳ್ಳೋಕೆ ಅಭಿಮಾನಿಗಳ ಕೂಟ ಅಂತ ಶುರು ಮಾಡ್ತಾರೆ. ಮೊದಲ ದಿನವೇ ಹೌಸ್‌ಫ‌ುಲ್‌ ಆಗಲಿ ಅಂತ ಒಂದಷ್ಟು ಫ್ರೀ ಟಿಕೆಟ್‌ ಕೊಡ್ತಾರೆ. ತುಂಬಾ ದುಡ್ಡು ಖರ್ಚು ಮಾಡ್ತಾರೆ. ಈ ಉತ್ಸವ ಆ ರೀತಿಯಲ್ಲ. ಯಾರೂನೂ ದುಡ್ಡು ಖರ್ಚು ಮಾಡ್ತಿಲ್ಲ. ಕಾರ್ಯಕ್ರಮಕ್ಕೆ ಬರ್ತಾರಲ್ಲ ಅವರೆಲ್ಲ ತಮ್ಮತಮ್ಮ ಊಟ, ವಾಸ್ತವ್ಯದ ವ್ಯವಸ್ಥೆ ಮಾಡಿಕೊಳ್ತಾರೆ. ಕಾರ್ಯಕ್ರಮ ಆಯೋಜನೆ ಮಾತ್ರ ಅಭಿಮಾನಿಗಳ ಕೂಟ ಏರ್ಪಾಟು ಮಾಡ್ತಾ ಇದೆ.

ಸಾಹಿತ್ಯ ಕ್ಷೇತ್ರವನ್ನು ಇಡಿಯಾಗಿ ನೋಡಿದರೆ, ಭೈರಪ್ಪನವರು ದ್ವೀಪದಂತೆ ಕಾಣಾ¤ರಲ್ಲಾ?
    ಸಾಹಿತ್ಯಾನ ಯಾವಾಗಲೂ ಮನುಷ್ಯ ಸೈಲೆಂಟಾಗಿದ್ದುಕೊಂಡೇ ಸೃಷ್ಟಿ ಮಾಡೋಕೆ ಸಾಧ್ಯ. ಗುಂಪಲ್ಲಿ ಇದ್ದುಕೊಂಡು ಸಾಹಿತ್ಯ ಸೃಷ್ಟಿ ಸಾಧ್ಯವಿಲ್ಲ. ಸಾಹಿತಿ ಯಾರ ಹಂಗಿಗೂ ಒಳಗಾಗಬಾರದು. ಅವನದ್ದೇ ಆದ ವ್ಯಕ್ತಿತ್ವ, ಸ್ವತಂತ್ರ ಆಲೋಚನೆ ಎಲ್ಲವೂ ಇರಬೇಕು, ಸಾಹಿತಿ ತನ್ನ ಪಾಡಿಗೆ ತಾನು ಇದ್ದುಬಿಡಬೇಕು ಅನೋದು ನನ್ನ ನಿಯಮ. ಇಲ್ಲ ಅಂದಿದ್ದರೆ ನಾನು ಇಷ್ಟೊಂದು ಬರೆಯೋಕೆ ಆಗ್ತಾನೆ ಇರಲಿಲ್ಲ. 

ಬದಲಾದ ಕಾಲಮಾನದಲಿ ಸರ್ಕಾರಿ ಸಾಹಿತ್ಯ ಸಮ್ಮೇಳನ, ಕಾರ್ಯಕ್ರಮಗಳ ಉದ್ದೇಶವೂ ಬದಲಾಗಬೇಕು ಅನಿಸುತ್ತಾ?
    ಸಮ್ಮೇಳನ ಮೊದಲು ಶುರುವಾದದ್ದು ಸಾಹಿತ್ಯ ವಿಷಯ ಚರ್ಚೆ ಮಾಡೋಕೆ. ಇದರ ಜೊತೆ ಏಕೀಕರಣದ ವಿಷಯ ಕೂಡ ಸೇರಿತ್ತು. ಆವಾಗ ಇನ್ನು ಮೈಸೂರು, ಬಾಂಬೆ, ಹೈದರಾಬಾದ್‌ ಕರ್ನಾಟಕ ಸಂಸ್ಥಾನ ಅಂತೆಲ್ಲ ಇತ್ತು. ಮುಂದೆ ಒಂದು ದಿನ ನಾವೆಲ್ಲ ಒಂದಾಗ್ತಿàವಿ, ಅಲ್ಲೀತನಕ ಸಾಂಸ್ಕೃತಿಕವಾಗಿ ನಾವೆಲ್ಲ ಒಂದು ಅಂತ ತೋರಿಸೋಕೆ ಸಮ್ಮೇಳನ ನೆರವಾಗಿತ್ತು. ಅಲ್ಲಿನ ಕವಿಗಳು ಇಲ್ಲಿಗೆ, ಇಲ್ಲಿನ ಕವಿಗಳು ಅಲ್ಲಿಗೆ ಬರೋರು. ಆಮೇಲೆ ಏಕೀಕರಣವಾಯಿತು. ಕೆಲವು ಪ್ರದೇಶಗಳು ಅಲ್ಲೆಲ್ಲೋ ಉಳಿದುಕೊಂಡವು. ಆ ಬಗ್ಗೆ ಈಗಲೂ ಸಮ್ಮೇಳನದಲ್ಲಿ ಚರ್ಚೆ ಮಾಡ್ತಾ ಇದ್ದಾರೆ.  ಸಾಹಿತ್ಯ ಸಮ್ಮೇಳನದಲ್ಲಿ ಬರೀ ಸಾಹಿತ್ಯದ ಬಗ್ಗೇನೇ ಚರ್ಚೆ ಮಾಡಿದರೆ ಏನಿರುತ್ತೆ ಹೇಳಿ? ಎಷ್ಟೋ ಸಮಸ್ಯೆಗಳ ಬಗ್ಗೆ ರಾಜಕಾರಣಿಗಳು ಚರ್ಚೆ ಮಾಡ್ಕೊàತಾರೆ. ಅದಕ್ಕಿಂತ ಭಿನ್ನವಾದ ವಿಚಾರಗಳು ಸಾಹಿತ್ಯಾಸಕ್ತರಲ್ಲಿ ಹುಟ್ಟಿಕೊಳ್ಳಬಹುದು. ಅಂಥವನ್ನು ಸಮ್ಮೇಳನಗಳಲ್ಲಿ ಚರ್ಚೆ ಮಾಡಬೇಕು. 

ಕನ್ನಡದಲ್ಲಿ ಓದುಗರ ಸಂಖ್ಯೆ ಕಡಿಮೆ ಆಗ್ತಿದೆ ಅನ್ನೋ ಆತಂಕವಿದೆ..
    ನನಗಂತೂ ಹಾಗೆ ಅನಿಸ್ತಿಲ್ಲ. ಆದರೆ ನನ್ನ ಈ ಅನುಭವ ಎಲ್ಲರ ಅನುಭವ ಅಂತಾನೂ ಹೇಳಕ್ಕಾಗಲ್ಲ. ನನ್ನ ಪುಸ್ತಕಗಳಂತೂ ಪ್ರಕಟವಾದ 6 ತಿಂಗಳಲ್ಲಿ ಎರಡು, ಮೂರು ಮರುಮುದ್ರಣ ಆಗ್ತಿವೆ. ಹೀಗಾಗಿ, ನನಗೆ ಆ ರೀತಿ ಅನ್ನಿಸ್ತಿಲ್ಲ.

ಲೇಖಕ ಎಲ್ಲವನ್ನೂ ಅಧ್ಯಯನ-ಸಂಶೋಧನೆ ಮಾಡಿಯೇ ಬರೆಯಬೇಕಾ?
    ಅಗತ್ಯವೇನಿಲ್ಲ. ಸಮಕಾಲೀನ ವಸ್ತು ವಿಷಯ ತೆಗೆದುಕೊಂಡ್ರೆ ಅದಕ್ಕೋಸ್ಕರ ಅಧ್ಯಯನ ಬೇಕಿಲ್ಲ. ಐತಿಹಾಸಿಕ ವಸ್ತು, ಧರ್ಮಕ್ಕೆ ಸಂಬಂಧಪಟ್ಟದ್ದಾದರೆ ಅಧ್ಯಯನ ಮಾಡಲೇಬೇಕು. ಸಾಹಿತಿ ಆದವರು ಜನರಲ್ಲಾಗಿ ಎಲ್ಲ ತಿಳಿದುಕೊಂಡಿರಬೇಕು. ಹಾಗೆ ತಿಳಿದುಕೊಂಡಿರಬೇಕು ಅಂದರೆ ಆತನ ಅಧ್ಯಯನ ವ್ಯಾಪ್ತಿ ದೊಡ್ಡದಾಗಿರಬೇಕು. ಅಲ್ಲೀತನಕ ಬರೆಯೋಕೆ ಹೋಗಬಾರದು ಅನಿಸುತ್ತೆ. ನಾನು ಏನೇನೋ ಓದಿಕೊಂಡುಬಿಟ್ಟಿದ್ದೀನಿ ಅನ್ನೋ ಕಾರಣಕ್ಕೆ ಬರೆಯೋಕೆ ಇಳಿಯಬಾರದು. 

ಹಾಗಾದರೆ, ಬರೆಯೋರು ಏನೇನು ತಿಳ್ಕೊಂಡಿರಬೇಕು? 
    ಧರ್ಮಶಾಸ್ತ್ರದ ಬಗ್ಗೆ, ಇತಿಹಾಸದ ಬಗ್ಗೆ ತಿಳಿದುಕೊಂಡಿರಬೇಕು. ಫಿಲಾಸಫಿ ಬಗ್ಗೆ ಗೊತ್ತು ಮಾಡಿಕೊಂಡರೆ ಒಳಿತು. ನೋಡಿ, ನಮ್ಮಲ್ಲಿ ಜಾತಿ ತೊಲಗಬೇಕು ಅಂತ ಬಾವುಟ ಹಿಡ್ಕೊಂಡು ಪ್ರತಿಭಟಿಸ್ತಾರಲ್ಲ ಅವರಿಗೆ ಜಾತಿ ಬಗ್ಗೆ ಏನೇನೂ ಗೊತ್ತಿರಲ್ಲ. ಜಾತಿ ಅನ್ನೋದು ಹೇಗೆ ಹುಟ್ಟಿಕೊಳು¤, ಅದರ ಒಳಸುಳಿಗಳು ಏನು, ಇದಕ್ಕೆ ಪೂರಕವಾಗಿ ಬೇರೆ ದೇಶಗಳಲ್ಲಿ ಏನಾದ್ರೂ ಬೆಳವಣಿಗೆ ಆಗಿದೆಯಾ ಅನ್ನೋದನ್ನ ಅಧ್ಯಯನ ಮಾಡಬೇಕು. ಏನೂ ಮಾಡದೆ ಜಾತಿ ಬಗ್ಗೆ ಬರೆಯೋದು, ಮಾತಾಡೋದು ತಪ್ಪಾಗುತ್ತೆ. ಜೀವನದ ಮೂಲಭೂತ ಸಮಸ್ಯೆಗಳು ಯಾವುವು ಅನ್ನೋದನ್ನ ಮೊದಲು ಅರಿಯಬೇಕಾಗ್ತ¤ದೆ.ಇದಕ್ಕೆ ವ್ಯಾಪಕ ಓದು, ಅಧ್ಯಯನ ಬೇಕು. ಓದು ಕೂಡ ಸರಿಯಾದವರ ಗೈಡೆನ್ಸ್‌ನಲ್ಲೇ ಆಗಬೇಕು. 

ಶಿಕ್ಷಣ ವ್ಯವಸ್ಥೆ ಈ ರೀತಿಯ  ಓದನ್ನು ಪ್ರೇರೇಪಿಸುತ್ತಿದೆಯೇ?
    ಏನಾಗಿದೆ ಅಂದರೆ, ವಿಶ್ವವಿದ್ಯಾಲಯಗಳಲ್ಲಿ ಇರುವವರು ಯಾವುದೋ ಒಂದು ಪಂಥಕ್ಕೆ ಒಳಪುrಬಿಟ್ಟಿರುತ್ತಾರೆ. ಅವರಿಗೆ ಎಕನಾಮಿಕ್ಸ್‌ ಅಂದರೆ ಮಾರ್ಕ್ಸ್-ಮಾರ್ಕ್‌ಸಿಸಂ ಮಾತ್ರ, ಉಳಿದದ್ದೆಲ್ಲಾ ನಾನ್‌ಸೆನ್ಸ್‌ ಅನ್ನೋ ಮನೋಭಾವ ಇದೆ. ಅಂಥವರ ಕೈಗೆ ಸಿಕ್ಕಿ ಹಾಕಿಕೊಳ್ಳಬಾರದು. ಇಲ್ಲಿ ಪ್ಯೂರ್‌ಪಾಲಿಟಿಕ್ಸ್‌, ಪ್ಯೂರ್‌ ಎಕನಾಮಿಕ್ಸ್‌ ಅಂದರೆ ಏನು ಅನ್ನೋದನ್ನು  ತಿಳಿಕೊಳ್ಳ ಬೇಕಾಗ್ತದೆ. ಇದ್ಯಾವುದೂ ವಿಶ್ವವಿದ್ಯಾಲಯಗಳಲ್ಲಿ ಆಗ್ತಾ ಇಲ್ಲ. 

ಕಾಲೇಜುಗಳು ವಿದ್ಯಾರ್ಥಿಗಳನ್ನು ಸಾಹಿತ್ಯದೆಡೆ ಸೆಳೆಯುತ್ತಿಲ್ಲವೇ?
    ಈಗ ಸಾಹಿತ್ಯ ಪಾಠ ಮಾಡೋರು-  ಭಾಷೆ, ಸಾಹಿತ್ಯದ ತಾಂತ್ರಿಕ ವಿಷಯಗಳನ್ನು ಹೇಳಿಕೊಡುವ ಗೋಜಿಗೆ ಹೋಗುವುದೇ ಇಲ್ಲ. ಬದಲಾಗಿ ಅವರೆಲ್ಲ ವಿದ್ಯಾರ್ಥಿಗಳ ತಲೆಯಲ್ಲಿ ಐಡಿಯಾಲಜಿಯನ್ನು ತುಂಬಿ- ತುಂಬಿ ನಿಜವಾದ ಸಾಹಿತ್ಯವನ್ನು ಸಾಯಿಸ್ತಾ ಇದ್ದಾರೆ. ಇಲ್ಲಿ ಸಾಹಿತ್ಯ ಅಂದರೆ ಕನ್ನಡ, ಇಂಗ್ಲಿಷ್‌ ವಿಭಾಗ, ಅದೇ ಅಲ್ವೇ? ಅದರಲ್ಲಿ ಎರಡು ಥರ. ಸಾಹಿತ್ಯದ ನಾನಾ ಪ್ರಾಕಾರಗಳನ್ನ ತಿಳಿಸೋದು. ಕಾದಂಬರಿ ಅಂದರೇನು, ಅದರ ಸ್ವರೂಪ ಹೇಗೆ ಬಂತು ಎನ್ನುವುದು. ಇದನ್ನೇ ಸ್ಟ್ರಕ್ಚರ್‌, ಕ್ಯಾರಕ್ಟರೈಸೇಷನ್‌ ಅನ್ನೋದು. ಪಶ್ಚಿಮ ದೇಶಗಳಲೆಲ್ಲ ಸಾಹಿತ್ಯ ಹೇಗಾಗಿದೆ ಎಂದು ಪಾಠ ಮಾಡುವುದು ಶುದ್ಧ ಸಾಹಿತ್ಯ ಪಾಠ. ಅದೇ ರೀತಿ ಪದ್ಯ, ಛಂದಸ್ಸು ಅಂದರೇನು ಅಂತ ತಿಳಿಸೋದು ಇನ್ನೊಂದು ರೀತಿಯದ್ದು. ನಮ್ಮಲ್ಲಿ ಛಂದಸ್ಸಿನ ಮೇಲೆ ಸಿಕ್ಕಾಪಟ್ಟೆ ಕೆಲಸಗಳು ಆಗಿವೆ. ಎಲ್ಲವನ್ನೂ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟು, ಅವರನ್ನು “ಇನ್ನು ಮುಂದೆ ನಿಮಗೆ ಹೇಗೆ ತೋಚುತ್ತೋ ಹಾಗೇ ಮಾಡ್ರಪ್ಪ’ ಅಂತ ಸ್ವತಂತ್ರ ಆಲೋಚನೆಗೆ ಬಿಟ್ಟು ಬಿಡಬೇಕು. ಏನಾದರೂ ಬರೆದರೆ ವಿದ್ವತ್‌ ಇರೋರಿಗೆ ತೋರಿಸಿ ಅಂತ ಹೇಳಿ ಮುಂದಿನ ತೀರ್ಮಾನ ಅವರಿಗೇ ಕೊಡಬೇಕು. 

ನಮ್ಮ ಉಪಾಧ್ಯಾಯ ವರ್ಗಕ್ಕೆ ಇದೆಲ್ಲ ತಿಳಿದಿಲ್ಲ ಅಂತೀರಾ?
    ಎಷ್ಟೋ ಜನಕ್ಕೆ ಈ ವಿಚಾರಗಳೇ ತಿಳಿದಿಲ್ಲ. ಇನ್ನು ಶುದ್ಧ ಸಾಹಿತ್ಯ ಏನು ಗೊತ್ತಿರುತ್ತೆ ಇವರಿಗೆ? ಬಿ.ಎಂ.ಶ್ರೀ, ಕೃಷ್ಣಶಾಸ್ತ್ರಿಗಳು, ನರಸಿಂಹಚಾರ್ಯರು, ವೆಂಕಣ್ಣಯ್ಯನವರೆಲ್ಲಾ ಶುದ್ಧ ಸಾಹಿತ್ಯ ಪಾಠ ಮಾಡಿ ವಿದ್ಯಾರ್ಥಿಗಳನ್ನು ಸ್ವತಂತ್ರ ಯೋಚನೆಗೆ ಹಚ್ಚೋರು. ಈಗ ಈ ರೀತಿ ಯಾರು ಮಾಡ್ತಾರೆ ಹೇಳಿ? ಬರೀ ಈ ವಾದ, ಆ ವಾದ ಅಂತ ತಲೆಗೆ ತುಂಬಿಕೊಂಡವರು. ಸಾಹಿತ್ಯ ಸಮಾಜದ ಹುಳುಕಗಳನ್ನು ತೆಗೆಯಬೇಕು, ಅದನ್ನು ಹೋಗಲಾಡಿಸಬೇಕು ಅಂತೆಲ್ಲ ಬರೀತಾ ಹೋದರೆ, ಯಾರೂ ಓದಲ್ಲ. ಪ್ರತಿದಿನ ಪತ್ರಿಕೆಗಳಲ್ಲಿ ರಾಜಕಾರಣಿಗಳು ಮಾತಾಡುವುದನ್ನೇ ಇಟ್ಟಕೊಂಡು ಇವನೂ ಕತೆ ಬರೆದಿದ್ದಾನೆ ಅಂತ ನಿರ್ಲಕ್ಷ್ಯ ಮಾಡ್ತಾರೆ. 

ಇದರ ಪರಿಣಾಮ ಸಾಹಿತ್ಯದ ಮೇಲೆ ಆಗುತ್ತದಾ?
    ಆಗುತ್ತದೆ ಅಲ್ಲ, ಆಗಿಹೋಗಿದೆ. ನಮ್ಮಲ್ಲಿ ಶುದ್ಧ ಸಾಹಿತ್ಯವನ್ನು ಓದುವವರು ಕಡಿಮೆಯಾಗಿದ್ದಾರೆ ಅಂದರೆ ಅದಕ್ಕೆ ಇದೇ ಮೂಲ ಕಾರಣ. ಲೇಖಕ ಇಡೀ ಮಾನವ ಸಮಾಜವನ್ನು ಯಾವ ಸಮಸ್ಯೆ, ಎಲ್ಲಾ ಕಾಲಕ್ಕೂ ಬಾಧಿಸ್ತಾ ಇರುತ್ತೆ ಅಂಥದ್ದನ್ನು ಹಿಡಿದು ಬರೆಯಬೇಕು. ಲೇಖಕನಿಗೆ ಇದು ಸವಾಲಾಗುತ್ತೆ.  ನಾವು ಹುಟ್ಟಿದ ಜಾತಿಯಲ್ಲಿ ಕೆಲ ಗುಣಗಳು ಇರ್ತವೆ, ಲೇಖಕ ಅದಕ್ಕೆ ಜಾಸ್ತಿ ಎಕ್ಸ್‌ಪೋಸ್‌ ಆಗಿರ್ತಾನೆ. ಆತ ಬರೆಯುವ ಪ್ರತಿಯೊಂದು ಕತೆಯಲ್ಲೂ ಅದು ಇರ್ತದೆ. ಬಿಡಿ, ಅದನ್ನು ಹೋಗಲಾಡಿಸಕ್ಕಾಗಲ್ಲ, ಹೋಗಲಾಡಿಸುವುದೂ ಬೇಕಾಗಿಲ್ಲ. ಆದರೆ, ಅದರೊಳಗಿರುವ ಮೂಲಭೂತ ಸಮಸ್ಯೆ ಯಾವುದು ಅನ್ನೋದನ್ನ ಹಿಡಿದು ಬರೆಯಬೇಕು. ಅದಕ್ಕೆ ಸಾಕಷ್ಟು ಚಿಂತನೆ, ಅಧ್ಯಯನ ಮಾಡಬೇಕಾಗುತ್ತೆ. ಮನಸ್ಸನ್ನು ಮುಕ್ತವಾಗಿಟ್ಟುಕೊಳ್ಳಬೇಕಾಗುತ್ತೆ.

ಹಾಗಿದ್ದರೆ, ಇವರು ಅಧ್ಯಯನ ಹೇಗಿರುತ್ತದೆ?
    ತಮ್ಮದೇ ಆದ ಐಡಿಯಾಲಜಿ ಪುಸ್ತಕಗಳನ್ನು ಮಾತ್ರ ಓದ್ತಾರೆ. ಅದನ್ನು ಬಿಟ್ಟು ಬೇರೆಯದನ್ನ ಕಣ್ಣೆತ್ತಿ ನೋಡಲ್ಲ. ಉದಾಹರಣೆ ಜಾತಿ ವಿಷಯ ತಗೋಳಿ. ಜಾತಿ ಹೋಗಬೇಕು, ಜಾತಿ ನಿರ್ಮೂಲನ ಮಾಡಬೇಕು ಅಂತೆಲ್ಲಾ ಬೊಬ್ಬೆ ಹೊಡೀತಾರೆ. ಸಮ್ಮೇಳನಗಳಲೆಲ್ಲ ಅದನ್ನೇ ಮಾತಾಡ್ತಾರೆ. ಜಾತಿ ಹೇಗೆ ಹುಟ್ಟಿತು, ಒಂದು ವರ್ಣದಲ್ಲಿ ಎಷ್ಟು ಜಾತಿಗಳಿವೆ? ಅವುಗಳನ್ನು ತಿಳಿಯದೇ ಜಾತಿ ಬಗ್ಗೆ ಮಾತಾಡ್ತಾರೆ. ಇದಕ್ಕೆಲ್ಲ ಅಧ್ಯಯನ ಬೇಕು. ಅದನ್ನು ಮಾಡೋಲ್ಲ. ಐಡಿಯಾಲಜಿಗಳು ತಲೆಯಲ್ಲಿ ಇದ್ದರೆ ಹೀಗೇ ಆಗೋದು. ಜಾತಿಯ ಹುಟ್ಟಿನ ಬಗ್ಗೆ ವೈಜ್ಞಾನಿಕವಾಗಿ ತಿಳಿಯಬೇಕಾದರೆ ಮಹಾರಾಷ್ಟ್ರದ ಸಮಾಜಶಾಸ್ತ್ರಜ್ಞ ಜಿ.ಎಸ್‌. ಗುರಿ ಅವರು “ಕ್ಲಾಸ್‌, ಕಾಸ್ಟ್‌ ಅಂಡ್‌ ಆಕ್ಯುಪೇಷನ್‌’ ಅಂತ ಒಂದು ಪುಸ್ತಕ ಬರೆದಿದ್ದಾರೆ, ಅದನ್ನು ಓದಬೇಕು. ಉದಾಹರಣೆಗೆ- ರೇಷ್ಮೆ ಮಗ್ಗದವರು ಇದ್ದಾರಲ್ಲ ಅವರ ಮನೆಯಲ್ಲಿ ಬೆಳೆದು ಹುಡುಗಿ ಸಹಜವಾಗಿ ಮಗ್ಗದ ಕೆಲಸಗಳನ್ನು ಕಲಿತಿರ್ತಾಳೆ. ಹೀಗಾಗಿ, ಇನ್ನೊಬ್ಬ ಮಗ್ಗ ಕುಟುಂಬದವರು ಈ ಹುಡಗೀನ ಸೊಸೆಯಾಗಿ ತಂದುಕೊಳ್ತಾರೆ. ಅದೇ, ಬೇರೆ ಕಸುಬಿನ ಮನೆ ಹುಡಿಯನ್ನು ಸೊಸೆ ಮಾಡಿಕೊಂಡರೆ ಮಗ್ಗದ ಕೆಲಸ ಸುಲಭವಾಗಿ ಆಗೋಲ್ಲ ಅಂತ. ಆ ಹುಡುಗಿ ಮನೆಯವರೂ ಕೂಡ ಈಕೆ ಅಲ್ಲಿಗೆ ಹೋದರೆ ಕೆಲಸ ಸುಲಭವಾಗಿ, ಸುಖವಾಗಿರ್ತಾಳೆ ಅಂತ ಯೋಚಿಸ್ತಾರೆ. ಹಿಂದೆ 15 ಮೈಲಿಗೆ ಒಂದು ಸೀಮೆ ಇತ್ತು. ಸಂಚಾರ ಬಹಳ ಕಷ್ಟವಾಗಿತ್ತು. 

    ನಮ್ಮಲ್ಲಿನ ಗೊಲ್ಲರು- ಉತ್ತರ ಭಾರತದ ಯಾದವರು ಹೆಣ್ಣನ್ನು ಕೊಟ್ಟು- ತಂದು ಮಾಡ್ತಾ ಇದ್ದರಾ? ಇಲ್ಲ. ಅವರ ಭಾಷೆ ಬೇರೆ, ಊರು ಬೇರೆ. ಹೀಗಾಗಿ, ಇಲ್ಲಿನ ಗೊಲ್ಲರೇ ಬೇರೆ ಅಲ್ಲಿನ ಯಾದವರೇ ಬೇರೆ ಜಾತಿ ಅಂತಾಗಿತ್ತು. ನಮ್ಮಲ್ಲೂ ಅಷ್ಟೇ ಕೋಲಾರದ ಮಗ್ಗದವರು ಬೇರೆ, ಮೇಲುಕೋಟೆ ಮಗ್ಗದವರು ಬೇರೆ. ಮೇಲುಕೋಟೆ ಮಗ್ಗದವರು ಮಾಂಸ ತಿನ್ನುತ್ತಿರಲಿಲ್ಲ. ರಾಮಾನುಜರ ಪ್ರಭಾವದಿಂದ ಶುದ್ಧ ಸಸ್ಯಹಾರಿಗಳಾಗಿದ್ದರು. 

    ಈಗ ಏನಾಗಿದೆ ಅಂದರೆ, ನಾವೆಲ್ಲ ಒಂದಾಗಬೇಕು ಅಂತ ನಮ್ಮಲ್ಲಿರುವ ಗೊಲ್ಲರು ಯಾದವ್‌ ಅಂತ ಸರ್‌ ನೇಮ್‌ ಇಟ್ಟುಕೊಳ್ತಾ ಇದ್ದಾರೆ. ಚುನಾವಣೆ ಬಂದರೆ ಲಾಲೂ ಪ್ರಸಾದ್‌ ಯಾದವ್‌ ಬಂದು ಇಲ್ಲಿ ಗೊಲ್ಲ ಸಮುದಾಯ ಇರೋ ಕಡೆ ಪ್ರಚಾರ ಮಾಡ್ತಾರೆ. ಅಂದರೆ ಜಾತಿ ವಿಸ್ತಾರ ಆಗುತ್ತಿದೆ. ಇದು ಸೋಶಿಯಲ್‌ ಪ್ರೋಸಸ್‌. ನಮ್ಮ ಲೇಖಕರಿಗೆ ಇದ್ಯಾಕೆ ತಿಳಿಯುತ್ತಿಲ್ಲ? ಮ್ಯಾಟ್ರಿಮೋನಿಯಲ್‌ ಜಾಹೀರಾತನ್ನು ಗಮನಿಸಿ. ವೈದ್ಯಕೀಯ ಎಂಡಿ ಓದಿರೋ ಹುಡುಗ- ಮದುವೆಗೆ ಗೈನಕಾಲಜಿ ಓದಿರೋ ಹುಡುಗಿ ಬೇಕು. ಕ್ಯಾಸ್ಟ್‌ ನೋ ಬಾರ್‌ ಅಂತ ಹಾಕಿಬಿಡ್ತಾನೆ. ಹೀಗೇಕೆ? ಹುಡುಗ ನರ್ಸಿಂಗ್‌ ಹೋಂ ಶುರು ಮಾಡಬೇಕು. ಗಂಡಸರ ಕಾಯಿಲೆ ಇವನು ಗುಣ ಮಾಡಿದರೆ, ಹೆಂಡತಿ ಹೆಂಗಸರ ಕಾಯಿಲೆ ಗುಣ ಮಾಡೋದಾದರೆ ನರ್ಸಿಂಗ್‌ ಹೋಮ್‌ನಲ್ಲಿ ಚೆನ್ನಾಗಿ ವ್ಯಾಪಾರ ಆಗುತ್ತೆ ಅಂತ. ಇದು ಅವರ ಲೆಕ್ಕಾಚಾರ. “ಕ್ಲಾಸ್‌, ಕ್ಯಾಸ್ಟ್‌  ಆಕ್ಯುಪೇಷನ್‌’ ಅಂದರೆ ಇದೇ ಅಲ್ಲವೇ? ನಮ್ಮ ಸಾಹಿತಿಗಳೇಕೆ ಇವನ್ನೆಲ್ಲ ಅಧ್ಯಯನ ಮಾಡಿ ಬರೀತಾ ಇಲ್ಲ? ಅವರಿಗೆ ಗೊತ್ತಿರುವುದು ಬರೀ ಬಾವುಟ ಹಿಡಿದುಕೊಂಡು ಜೈ ಜೈ ಅನ್ನೋದು.

ಸಾಹಿತಿಗೆ ಬೆಳೆಯೋಕ್ಕೆ ಜಾತಿ ಬೆಂಬಲ ಬೇಕಾ? ಅದನ್ನು ಮೀರೋಕೆ ಆಗಲ್ವಾ?
    ನನ್ನ ಪ್ರಕಾರ ಬೆಳೆಯಬೇಕು ಅಂದರೆ ಪರಿಶ್ರಮ, ಅಧ್ಯಯನ ಬೇಕು. ಯಾವ ಜಾತಿಯವರೇ ಆದರೂ ಕಲಿಯಬೇಕು, ಕಲಿತು ಬರೆಯಬೇಕು. ಬರೀ ಜಾತಿ, ಜಾತಿ ಅಂದುಕೊಂಡರೆ ಅವನ ಜಾತಿಯವರಷ್ಟೇ ಅವನ ಪುಸ್ತಕ ಕೊಳ್ಳುತ್ತಾರೆ. 

ಪಂಜಾಬಿಗಳು, ಮರಾಠಿಗರ ಹಾಗೇನೇ ಉತ್ತರ ಭಾರತದವರಲ್ಲೂ ನಿಮ್ಮ ಓದುಗರು ಇದ್ದಾರೆ. ಅದು ಹೇಗೆ ಸಾಧ್ಯವಾಯಿತು? 
    ನನ್ನ ಪುಸ್ತಕವನ್ನು ಎಲ್ಲ ಜಾತಿಯವರೂ ಓದುತ್ತಾರೆ. ಏಕೆಂದರೆ, ಅವರ ಬದುಕಿನ ಅನುಭವ ನನ್ನ ಪುಸ್ತಕದಲ್ಲಿದೆ. ಪ್ರತಿಯೊಬ್ಬರ ಕುಟುಂಬದಲ್ಲೂ, ವೈಯಕ್ತಿಕ ಜೀವನದಲ್ಲೂ ಯೂನಿವರ್ಸಲ್‌ ಆದ ಅನುಭವ ಇರುತ್ತದೆ. ಅದನ್ನು ಹಿಡಿದು ಅದರ ತಳ ಶೋಧಿಸಿ ಬರೆದರೆ ಆ ಪುಸ್ತಕಕ್ಕೆ, ಲೇಖಕನಿಗೆ ಎಲ್ಲೆಡೆ ಮಾನ್ಯತೆ ಸಿಗುತ್ತದೆ. ಅದಕ್ಕೆ ಬೇಕಾದದ್ದು ಯಥಾಪ್ರಕಾರ- ಅಧ್ಯಯನ, ಸಂಚಾರ. 

ನೀವು ಕ್ಯಾಪಿಟಲಿಸ್ಟಾ?
    ಒಂದು ಘಟನೆ ಹೇಳ್ತೀನಿ ಕೇಳಿ.  1975ನೇ ಇಸವಿ ಅನಿಸುತ್ತೆ.  ಆಗತಾನೇ ದೆಹಲಿಯಿಂದ ಮೈಸೂರಿಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದೆ. ಕಾಲೇಜುಗಳಲ್ಲಿ ಭಾಷಣ ಮಾಡೋಕೆ ನನ್ನ ಕರೆಯೋರು. ಹಾಗೇ ಒಂದೆರಡು ಕಾಲೇಜಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ- “ನೋಡಿ, ನೀವು ಸರ್ಕಾರಿ ಕೆಲಸಾನ ನೆಚ್ಚಿಕೊಳ್ಳಬೇಡಿ. ಸ್ವಂತ ಏನಾದರೂ ಮಾಡಿ.  ಸರ್ಕಾರದಲ್ಲಿ ಕಡಿಮೆ ನೌಕರಿಗಳಿವೆ. ಜೊತೆಗೆ ಮೀಸಲಾತಿ ಅಂತೆಲ್ಲಾ ಮಾಡಿಕೊಂಡಿರ್ತಾರೆ. ಹೀಗಾಗಿ ನೀವು ಧಣಿಯಾಗಿ, ಹತ್ತು ಜನಕ್ಕೆ ಕೆಲಸ ಕೊಡಂವಂಥವರಾಗಿ, ಏನೂ ಇಲ್ಲ ಅಂದರೆ, ನಟ್‌ ಅÂಂಡ್‌ ಬೋಲ್ಟ್ ತಯಾರು ಮಾಡಿ’ ಅಂತ ಹೇಳಿದೆ. ನನ್ನ ವಿರೋಧಿಸುವ ಗುಂಪೊಂದು ಇತ್ತಲ್ಲ, ಅದು “ಭೈರಪ್ಪ ಕ್ಯಾಪಿಟಲಿಸ್ಟ್‌.  ಕ್ಯಾಪಿಟಲಿಸ್ಟ್‌ ಅಂದರೆ ಪರರ ರಕ್ತ ಹೀರುವವನು’ ಅಂತೆಲ್ಲ ಬೊಬ್ಬೆ ಹೊಡೆದರು. ಕ್ಯಾಪಿಟಲಿಸ್ಟ್‌ ಜಾಬ್‌ ಕ್ರಿಯೇಟ್‌ ಮಾಡ್ತಾನೆ. ರಕ್ತ ಹೀರಲ್ಲ. ಇಟ್ಟಿಗೆ ತಯಾರು ಮಾಡೋನೂ ಕ್ಯಾಪಿಟಲಿಸ್ಟ್‌ ಅಲ್ವೆ?  ಹಾಗಂತ ಅವನು ಇಟ್ಟಿಗೆ ತಯಾರು ಮಾಡದೇ ಇದ್ದರೆ ನೀವು ಮನೆ ಹೇಗೆ ಕಟ್ಟೋಕೆ ಆಗುತ್ತೆ?  

    ಅಮೆರಿಕದಲ್ಲಿ ಯಾರೂ ಬರೀ ನೌಕರಿ ಮಾಡ್ಕೊಂಡು ಇರ್ತೀನಿ ಅನ್ನೋ ಮನೋಭಾವದಲ್ಲಿ ಇರಲ್ಲ. ಅಲ್ಲಿ ಕೆಲಸ ಮಾಡೋನು ಈ ವಸ್ತುವನ್ನು ನಾನು ತಯಾರು ಮಾಡಿದರೆ ಹೇಗೆ ಅಂತಲೇ ಯೋಚಿಸುತ್ತಾ ಇರ್ತಾನೆ. ಅದಕ್ಕೆ ಆ ದೇಶ ಅಷ್ಟು ಮುಂದುವರಿದಿರೋದು. 

ಈಗ ಯಾರೇ ಸ್ವತಂತ್ರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರೂ ಅವರನ್ನು ಲೆಫ‌ುr, ರೈಟು ಅನ್ನೋ ಗೂಟಕ್ಕೆ ಕಟ್ಟಿಹಾಕ್ತಾರಲ್ಲ?
    ನಾನು ಬರೆಯೋಕ್ಕೆ ಶುರು ಮಾಡಿದ ದಿನಗಳಿಂದ 
ಅಟ್ಯಾಕ್‌ ಮಾಡೋ ಗುಂಪು ಇದ್ದೇ ಇದೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ನನ್ನ ಪಾಡಿಗೆ ನಾನು ಬರಕೊಂಡು ಹೋಗ್ತಾ ಇದ್ದೀನಿ. ನಾನು ಬೆಳೀಲಿಲ್ವಾ? ಅಟ್ಯಾಕ್‌ ಮಾಡ್ತಾ 
ಇಧ್ದೋರೆಲ್ಲಾ ಈಗ ಮೆತ್ತಗಾಗೋದ್ರು. ಅವರಿಗೂ ಭೈರಪ್ಪ ಬರೆಯೋದು ನಿಜ ಅಂತ ಅನಿಸ್ತಾ ಇದೆ. ಶಿಕ್ಷಿತವರ್ಗ 
ಅಗಾಧವಾಗಿ ಬೆಳೆದಿದೆ. ಇವತ್ತು ಗೃಹಿಣಿಯರು “ಭೈರಪ್ಪನೋರು ಜೀವನದಲ್ಲಿ ನಡೆಯೋದನ್ನು ಬರೀತಾರೆ ಅದಕ್ಕೆ ಅವರ ಕಾದಂಬರಿ ಓದಬೇಕು’ ಅಂತಾರೆ. 

ನಮ್ಮ ಭಾಷೆಗೆ ಏನಾದರೂ ಸಮಸ್ಯೆ ಆಗಿದೆಯಾ?
    ಕನ್ನಡ ಜನಗಳ ಸ್ವಭಾವವೇ ಕನ್ನಡದ ಸಮಸ್ಯೆ. ಅವರಿಗೆ ಹೋರಾಟ ಮನೋಭಾವ ಇಲ್ಲ. ಭಾಷೆ ವಿಚಾರದಲ್ಲಿ ಮಾತ್ರವಲ್ಲ; ಎಲ್ಲದರಲ್ಲೂ. ನೋಡಿ ಆಗ ತುಂಗಭದ್ರ ಅಣೆಕಟ್ಟು ಕಟಾ¤ ಇದ್ದಾಗ- ಮುಂದೆ ಇಲ್ಲಿ ನಾಲೆ ಬರುತ್ತೆ, ನೀರು ಸಿಗುತ್ತೆ, ಚೆನ್ನಾಗಿ ಕೃಷಿ ಮಾಡಬಹುದು, ಬೆಳೆ ತೆಗೆಯಬಹುದು ಅಂತೆಲ್ಲ ಯೋಚನೆ ಮಾಡಿದವರು ನಮ್ಮವರಲ್ಲ-ಆಂಧ್ರದವರು. ಅವರು ಬಂದು ಎಲ್ಲೆಲ್ಲಿ ನಾಲೆ ಬರುತ್ತೋ ತಿಳಕೊಂಡ್ರು. ಅಲ್ಲಿದ್ದ ರೈತರಿಗೆ- “ನೀವು ಇಲ್ಲೆಲ್ಲಾ ಏನು ಬೆಳೀತಾ ಇದ್ದೀರ ಮಹಾ? ಎಷ್ಟು ಬೆಳೆದರು ಅಷ್ಟೇಯಾ. ನಿಮಗೆ ಎಕರೆಗೆ ಎಷ್ಟು ದುಡ್ಡು ಬೇಕು? 30 -40-50 ಸಾವಿರ ಬೇಕಾ? ತಗೋಳ್ಳಿ’ ಅಂತ ಹೆಚ್ಚು ದುಡ್ಡು ಕೊಟ್ಟು ಎಲ್ಲಾ ಜಮೀನು ಕೊಂಡುಕೊಂಡ್ರು. ನಾಲೆಯಲ್ಲಿ ನೀರು ಬರೋ ಹೊತ್ತಿಗೆ ಅಲ್ಲಿ ಕನ್ನಡಿಗರಿಗೆ ಜಮೀನೇ ಇರಲಿಲ್ಲ. ಇವತ್ತು ತುಂಗಭದ್ರ ಸುತ್ತಮುತ್ತ ಪ್ರದೇಶ ಆಂಧ್ರದವರ ಕೈಯಲ್ಲಿದೆ. ಜಮೀನು ಮಾರಿಕೊಂಡವರು, ಅವರ ಜಮೀನಿನಲ್ಲಿ ಕೂಲಿ ಮಾಡ್ತಾ ಇದ್ದಾರೆ. ಈಗ ಆಂಧ್ರದವರು ಆಕ್ರಮಿಸಿಕೊಂಡ್ರು ಅಂತ ಹೋರಾಟ ಮಾಡಿದರೆ ಪ್ರಯೋಜನ ಏನು?

     ತುಂಗಭದ್ರ ಮಾತ್ರವಲ್ಲ. ಇವತ್ತು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲ ಜಮೀನುಗಳೂ ಇದೇ ರೀತಿ ಆಂಧ್ರದವರ ಪಾಲಾಗಿವೆ. ನಮ್ಮ ಪ್ರದೇಶದಲ್ಲಿ ಇನ್ನೊಬ್ಬರನ್ನು ತಡೆಯೋಕ್ಕಿಂತ, ನಾವೇ ಏಕೆ ನುಗ್ಗಬಾರದು ಅನ್ನೋ ಮನೋಭಾವ ಬೆಳೆಸಿಕೊಳ್ಳದೇ ಇದ್ದರೆ, ಹೀಗೆ ಆಗೋದು. 

ನಮ್ಮ ವ್ಯವಸ್ಥೆ ಒಳಗೆ ಅವರೆಲ್ಲ ಹೇಗೆ ಬಂದ್ರು ?
    ಇವತ್ತು ಕರ್ನಾಟಕದಲ್ಲಿ ಎಲ್ಲೇ ಮನೆ ಕಟ್ಟಬೇಕು ಅಂದರೆ ಬಡಗಿ ಕೆಲಸಕ್ಕೆ ರಾಜಸ್ಥಾನದವರು, ಕೂಲಿಗೆ ಒರಿಸ್ಸಾದವರು ಬರ್ತಾರೆ.   ಇವರೆಲ್ಲಾ ನಾಲ್ಕೈದು ವರ್ಷ ಇಲ್ಲೇ ಇದ್ದರೆ, ಕೈತುಂಬ ಕೆಲಸ ಸಿಗುತ್ತಿದ್ದರೆ ಮತ್ತೆ ತಮ್ಮ ಊರಿಗೆ ಹೋಗಲ್ಲ. ಇಲ್ಲೆ ಸಣ್ಣ ಸೈಟೋ, ಮನೇನೋ ಮಾಡ್ಕೊಂಡು ಇದ್ದು ಬಿಡ್ತಾರೆ. ಇದು ಯಾರ ತಪ್ಪು? ಹಾಗೇನೇ, ಮಂಡ್ಯದಲ್ಲಿ ಕನ್ನಂಬಾಡಿ ಕಟ್ಟೆ ಆದ ಮೇಲೆ ಕೃಷಿ ಬಹಳ ಚೆನ್ನಾಗಿ ಆಯ್ತು. ಅಲ್ಲಿಗೆ ಲೇಬರ್‌ ಬೇಕಲ್ಲ, ಅದಕ್ಕೆ ತಮಿಳುನಾಡಿಂದ ಬಂದವರು ಅಲ್ಲೇ ಗುಡಿಸಲು ಹಾಕ್ಕೊಂಡು ಕೂತರು. ಇವತ್ತು ಜಾಸ್ತಿಯಾಗಿದ್ದಾರೆ. ನಮ್ಮೊರು ತಮ್ಮದೇ ಗದ್ದೆಗಳಿಗಾಗಿ ತಾವೇ ಏಕೆ ಆ ಕೆಲಸ ಮಾಡಲಿಲ್ಲ? ಬದಲಿಗೆ ದುಡ್ಡು ಯಾವಾಗ ಬಂತೋ ಮೋಟರ್‌ ಬೈಕ್‌ ತಗೊಂಡು ಬಿಟ್ರಾ. ಬೆಳಗ್ಗೆ ಎದ್ದು ತಿಂಡಿ ತಿನ್ನೋದಕ್ಕೆ ಮಂಡ್ಯಕ್ಕೆ ಹೋಗೋದು, ಇಲ್ಲಾಂದ್ರೆ ಮೈಸೂರಿಗೆ ಬರೋದು. ಈ ಥರ ಬದುಕು ಮಾಡ್ಕೊಂಡು ಬಂತು ಅಂದ್ರೆ ಮುಂದೊಂಂದು ದಿವಸ ತಮಿಳರೇ ಒಡೆಯರಾಗ್ತಾರೆ. ಯಾರು ಆರ್ಥಿಕವಾಗಿ ಗಟ್ಟಿಯಾಗಿರ್ತಾನೋ ಅವನ ಭಾಷೆ ಗೆಲ್ಲುತ್ತದೆ. ಯಾವತ್ತೂ ಧಣಿ ಭಾಷೇನೇ ಕೈ ಕೆಳಗೆ ಕೆಲಸ ಮಾಡುವವನೂ ಆಡ್ತಾನೆ. ಬರಲ್ಲ ಅಂದರೆ ಕಲಿತುಕೊಳ್ತಾನೆ. ಕನ್ನಡ ಉದ್ಧಾರ ಆಗಬೇಕಂದ್ರೆ ಆರ್ಥಿಕವಾಗಿ ಏನಾದರೂ ಆಗಬೇಕು. ಮನುಷ್ಯನ ಸ್ವಭಾವದಲ್ಲಿ ಬದಲಾವಣೆ ಆಗದಿದ್ದರೆ, ಯಾವ ಭಾಷೆ, ಪ್ರಾಧಿಕಾರಗಳಿಂದಲೂ ಏನೂ ಮಾಡಕ್ಕೆ ಆಗೋಲ್ಲ. 

ಇದು ಫಾಸ್ಟ್‌ಫ‌ುಡ್‌ ಕಾಲ. ಓದೋದು, ಬರೆಯೋದು ಕೂಡ  ಹಾಗೇ ಆದಂತಿದೆ?!
    ನನಗೆ ಹಾಗೆ ಅನಿಸೋಲ್ಲ. ಏಕೆಂದರೆ, ಓದುಗರಲ್ಲೂ ಬೇರೆ ಬೇರೆ ಲೆವೆಲ್‌ನೋರು ಇರ್ತಾರೆ. ಒಂದೇ ಲೆವೆಲ್‌ ಓದುಗರು ಯಾವ ದೇಶದಲ್ಲೂ ಇಲ್ಲ. ಒಂದು ಸತ್ಯ ಏನೆಂದರೆ, ಸಾಹಿತ್ಯಕ್ಕೆ ಗೌರವ, ತೂಕ ತಂದುಕೊಡೋದು ಗಂಭೀರವಾದ ಪುಸ್ತಕಗಳು ಮಾತ್ರ. 

ಇಂಗ್ಲಿಷ್‌ ಕಲಿತರೆ ಬದುಕು ಉದ್ಧಾರ ಆಗುತ್ತಾ?
    ಎಲ್ಲರೂ ಏನು ತಿಳಿದುಕೊಂಡು ಬಿಟ್ಟಿದ್ದಾರೆ ಅಂದರೆ, ಇಂಗ್ಲಿಷ್‌ ಕಲಿತರೆ ಸಾಕು ಕೆಲಸ ಸಿಕ್ಕಿಬಿಡುತ್ತೆ ಅಂತ. ಮೊದಲು ಉದ್ಯೋಗ ಸೃಷ್ಟಿ ಆಗಬೇಕು. ಅದಕ್ಕೆ ನಮ್ಮವರು ಎಂಟರ್‌ಪ್ರೈಸ್‌ ಮಾಡಬೇಕು. ಈಗ ಎಂಟರ್‌ಪ್ರೈಸ್‌ ಮಾಡೋರೆಲ್ಲರೂ ಮಾರವಾಡಿಗಳು, ತಮಿಳರು, ದಕ್ಷಿಣ ಭಾರತದವರು ಅಲ್ವೇ? ಅವರು ಏನು ಮಾಡ್ತಾರೆ? ಕೆಲಸಗಾರರನ್ನು ತಮ್ಮ ಕಡೆಯಿಂದ ಕರೆಸಿಕೊಳ್ತಾರೆ. ಅವರು ಕಷ್ಟಪಟ್ಟು ಕೆಲ್ಸ ಮಾಡ್ತಾರೆ. ಜೊತೆಗೆ ನಮ್ಮವರು ಅನ್ನೋ ಭಾವನೆ ಇರುತ್ತೆ. ಹೀಗಾಗಿ ಪ್ರತಿಭಟನೆ ಅಂತೆಲ್ಲ ಮಾಡೋಲ್ಲ. ಭಾಷಾಭಿಮಾನ ಬೇರೆ ಇರುತ್ತದೆ. ಇಲ್ಲಿ ತಮ್ಮ ಭಾಷೆ ವಿಸ್ತರಿಸಬೇಕು ಅಂತೆಲ್ಲಾ ಲೆಕ್ಕಾಚಾರ ಇರುತ್ತದೆ.  ಹೀಗಾಗಿ ನಾವು ನಮ್ಮ ನೆಲದಲ್ಲಿ ನಮ್ಮ ಭಾಷೆನ ಕಳಕೊಳ್ತಾ ಇದ್ದೀವಿ.  ಇವತ್ತು ಕೊಡಗಿನ ಪರಿಸ್ಥಿತಿ ನೋಡಿ, ಅಲ್ಲಿ ಮಲಯಾಳಿಗಳು ಏಕೆ ಸೇರಿಕೊಂಡಿದ್ದಾರೆ? ಕೊಡಗಿನ ಮೂಲ ನಿವಾಸಿಗಳು ಇಂಗ್ಲಿಷ್‌ ಎಜುಕೇಷನ್‌, ಕೆಲಸ ಅಂತ ಮೈಸೂರು, ಬೆಂಗಳೂರ ಕಡೆ ಹೋಗಿದ್ದಾರೆ, ಅದಕ್ಕೇ. ಒಂದು ಸತ್ಯ ಏನೆಂದರೆ, ಯಾವಾಗ ಕೂಲಿಗಳ ಡಾಮಿನೇಷನ್‌ ಆಗುತ್ತೋ ಅಲ್ಲಿ ಅವರೇ ಡಿಕ್ಟೇಟ್‌ ಮಾಡ್ತಾರೆ.

ದಕ್ಷಿಣ ಕನ್ನಡದವರು ಮಾದರಿಯಾಗಲಿ…
ದಕ್ಷಿಣ ಕನ್ನಡದವರು ಸಾಹಸಿಗಳು. ಮುನ್ನುಗ್ಗಿ ಕೆಲಸ ಮಾಡ್ತಾರೆ. ಸುಮಾರು ನೂರು ವರ್ಷದ ಹಿಂದೆ ದಕ್ಷಿಣ ಕನ್ನಡದಲ್ಲಿ ಬಹಳ ಬಡತನ ಇತ್ತು. ಸೌಟ್‌ ಹಿಡ್ಕೊಂಡು ಹೊರಟರು. ಅಲ್ಲಿಲ್ಲಿ ಹೋಟೆಲ್‌ ಶುರು ಮಾಡಿದರು. ಮುಂಬೈ, ದುಬೈಗೆಲ್ಲಾ ಹೋದರು. ಉಡುಪಿ ಹೋಟೆಲ್‌ ತೆರೆದರು. ಜಾತಿ ಗೀತಿ ನೋಡಲಿಲ್ಲ. ಬಿಲ್ಲವರು, ಬಂಟರು ಎಲ್ಲಾ ಸೇರಿದರು. ಈಗ ಗಲ್ಫ್ನ  ಬಹುತೇಕ ಹೋಟೆಲ್‌ಗ‌ಳು ಇವರದೇನೆ. ಕಷ್ಟಪಟ್ಟು ಕೆಲಸ ಮಾಡುತ್ತಲೇ ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟರು. ಇವತ್ತೂ ಕೂಡ ದಕ್ಷಿಣ ಕನ್ನಡದಲ್ಲಿ ಇರುವಷ್ಟು ಒಳ್ಳೇ ಕಾಲೇಜುಗಳು ಇನ್ನೆಲ್ಲೂ ಇಲ್ಲ.  ಅಲ್ಲಿರುವ ಶೈಕ್ಷಣಿಕ ಶಿಸ್ತು ಬೇರೆಲ್ಲೂ ಕಾಣಲ್ಲ. ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿಯಲ್ಲ. ಮೇಷ್ಟ್ರುಗಳು ಬಹಳ ಶ್ರದ್ಧೆಯಿಂದ ಪಾಠ ಮಾಡ್ತಾರೆ. ಯಾವ ಮೇಷ್ಟ್ರಿಗೂ ಅಂಡರ್‌ ಪೇಮೆಂಟ್‌ ಇಲ್ಲ. ಬುದ್ಧಿವಂತರನ್ನು ಹುಡುಕಿ ನೇಮಕ ಮಾಡ್ತಾರೆ. ನಿಯಮದಂತೆ ಸಂಬಳ ಕೊಡ್ತಾರೆ. ಅವರಿಂದ ಎಷ್ಟು ಪಾಠ ಮಾಡಿಸಬೇಕೋ ಅಷ್ಟು ಮಾಡಿಸುತ್ತಾರೆ.  ಈ ಕಡೆ, ನಮ್ಮಲ್ಲಿ ಎಷ್ಟೋ ಖಾಸಗಿ ಶಾಲೆ ನಡೆಸ್ತಾರಲ್ಲ, ನೆಟ್ಟಗೆ ಸಂಬಳ ಕೊಡ್ತಾರ ಕೇಳಿ? ಮೋಸ ಮಾಡೋದೇ ಉದ್ದೇಶ. ನೈತಿಕತೆ ಇಲ್ಲ. ಇನ್ನು ಗುಣಮಟ್ಟ ಎಲ್ಲಿ ಉಳಿಯುತ್ತೆ? ಐದು ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಕೊಟ್ಟಿದ್ದು ದಕ್ಷಿಣ ಕನ್ನಡ. ಇದೆಲ್ಲ ಏಕೆ ಬಂತು, ಅನ್ಯ ಭಾಗದಲ್ಲಿ ಇದೇಕೆ ಮಾಡಲಿಲ್ಲ? ಮಾಡಲ್ಲ ಅಷ್ಟೇನೆಯಾ. ಯಾರು ಮುನ್ನುಗ್ಗಿ ಕೆಲಸ ಮಾಡೋಲ್ವೋ ಅವ್ರು ಮತ್ತು ಅವರ ಭಾಷೆ ದುರ್ಬಲ ಆಗಿಬಿಡ್ತದೆ.

ಸಂದರ್ಶನ
ಕಟ್ಟೆ ಗುರುರಾಜ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕನ್ನಡ ದೃಶ್ಯ ಜಗತ್ತನ್ನು ಕಲಾತ್ಮಕವಾಗಿ ಶ್ರೀಮಂತಗೊಳಿಸಿದ ಕೆಲವೇ ಕೆಲವು ನಿರ್ದೇಶಕರ ಪೈಕಿ ಗಿರೀಶ್‌ ಕಾಸರವಳ್ಳಿ ಕೂಡ ಒಬ್ಬರು. ಚೊಚ್ಚಲ ನಿರ್ದೇಶನ, "ಘಟಶ್ರಾದ್ಧ'...

  • ಬೆಂಗಳೂರು: ರಾಜ್ಯಾದ್ಯಂತ ಅನುಷ್ಠಾನದಲ್ಲಿರುವ ಶುದ್ಧ ಕುಡಿಯುವ ನೀರು ಘಟಕಗಳ ಕಾರ್ಯನಿರ್ವಹಣೆ ಸಂಬಂಧ ಸೂಕ್ತ ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ....

  • ರಘುರಾಮನು ವನರಾಮನಾಗಿ ಆರಾಮದಿಂದ ಇದ್ದ ಸ್ಥಳವೇ ಚಿತ್ರಕೂಟ. ರಾಮ, ಲಕ್ಷ¾ಣ, ಸೀತೆಯರ ಚಿತ್ತಾಪಹಾರ ಮಾಡಿದ್ದ ಚಿತ್ರಕೂಟವು ಪ್ರವಾಸಿಗರ ಚಿತ್ತವನ್ನೂ ಅಪಹರಿಸುವಷ್ಟು...

  • ಮಂಗಳೂರು: ಪಾಶ್ಚಾತ್ಯ ಪ್ರಭಾವದಿಂದಾಗಿ ಭಾರತೀಯ ಸಂಗೀತವು ಸ್ವಲ್ಪ ಮಂಕಾಗಿ ಕಂಡರೂ ಮತ್ತೆ ಚಿಗುರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|...

  • ಇಂದು ದೌರ್ಜನ್ಯಗಳಿಗೆ ಮೇರೆಗಳಿಲ್ಲ. ದೆಹಲಿಯಲ್ಲೋ, ಹೈದರಾಬಾದ್‌ನಲ್ಲೋ ಹೆಣ್ಣಿನ ಮೇಲೆ ಹಾಗಾಯ್ತಲ್ಲ ಎನ್ನುತ್ತಾ ಕಳವಳಿಸುತ್ತಿರುವಾಗಲೇ, ಬೆಂಗಳೂರಿನಲ್ಲಿ...