“ಪರಿಸ್ಥಿತಿ ಸುಧಾರಿಸುತ್ತಿದೆ’ ಎನ್ನುವುದ‌ನ್ನು ನಿಲ್ಲಿಸಬೇಕು

Team Udayavani, Feb 17, 2019, 12:30 AM IST

ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯ ನಂತರ ಭಾರತ ಆಕ್ರೋಶಗೊಂಡಿದೆ. ಕಳವಳದ ಸಂಗತಿಯೆಂದರೆ, ದೇಶದಲ್ಲಿ ಮೊದಲ ಬಾರಿ ಯೋಧರ ಮೇಲೆ ವಾಹನ ಬಳಸಿ ಆತ್ಮಹತ್ಯಾ ದಾಳಿ ನಡೆದಿದ್ದು, ಮುಂದೆಯೂ ಇಂಥ ಅಪಾಯಗಳು ಎದುರಾಗದಂತೆ ತಡೆಯುವುದು ಹೇಗೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಅಲ್ಲದೆ ಉಗ್ರ ಸಂಘಟನೆಗಳು ತಮ್ಮ ತಂತ್ರವನ್ನು ಬದಲಿಸಿಕೊಂಡಿವೆಯೇ? ಈ ಹೊಸ ಸವಾಲನ್ನು ಎದುರಿಸುವುದು ಹೇಗೆ? ಸದ್ಯದಲ್ಲೇ ಭಾರತ ಕುಕೃತ್ಯ ಎಸಗಿದವರಿಗೆ ಪ್ರತ್ಯುತ್ತರ ನೀಡಲಿದೆಯೇ? ಮುಂತಾದ ಪ್ರಶ್ನೆಗಳಿಗೆಲ್ಲ ಬಹಳ ತಾರ್ಕಿಕವಾಗಿ ಉತ್ತರಿಸಿದ್ದಾರೆ ಲೆಫ್ಟಿನೆಂಟ್‌ ಜನರಲ್‌ ದೀಪೇಂದ್ರ ಸಿಂಗ್‌ ಹೂಡಾ(ನಿವೃತ್ತ). ಹೂಡಾ ಅವರನ್ನು 2016ರಲ್ಲಿ ಭಾರತೀಯ ಸೇನೆ ನಡೆಸಿದ ಯಶಸ್ವಿ ಸರ್ಜಿಕಲ್‌ ಸ್ಟ್ರೈಕ್‌ನ ಮಾಸ್ಟರ್‌ಮೈಂಡ್‌  ಎನ್ನಲಾಗುತ್ತದೆ… 

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಘಟನೆಯನ್ನು ನೋಡಿದಾಗ, ದೇಶದಲ್ಲಿ ಹೊಸ ಮಾದರಿಯ ಭಯೋತ್ಪಾದನಾ ದಾಳಿ ಆರಂಭವಾಗಿದೆಯೇ ಎಂಬ ಅನುಮಾನ ಕಾಡುತ್ತದೆ. 
ಇದು ಹೊಸ ಟ್ರೆಂಡ್‌ ಆಗದಿರಲಿ ಎಂದು ನಾನು ಆಶಿಸುತ್ತೇನೆ. ಇದು ನಿಜಕ್ಕೂ ಅತ್ಯಂತ ಭೀಕರ ದಾಳಿ. ವಾಹನ ಆಧರಿತ ಆತ್ಮಹತ್ಯಾ ದಾಳಿಗಳನ್ನು ಎದುರಿಸುವುದು ಅಷ್ಟು ಸುಲಭವಲ್ಲ. 2005ರಲ್ಲಿ ನಡೆದ ಕಾರು ಬಾಂಬ್‌ ದಾಳಿಗಳ ನಂತರ ಈ ರೀತಿಯ ದಾಳಿಗಳನ್ನು ನಾವು ಜಮ್ಮು ಕಾಶ್ಮೀರದಲ್ಲಿ ನೋಡಿರಲಿಲ್ಲ. ಕ್ಯಾಂಪ್‌ಗ್ಳ ಮೇಲೆ ಫಿದಾಯಿನ್‌ಗಳಿಂದ ದಾಳಿಗಳಾಗಿದ್ದವು.  ಇಂದು ಇರಾಖ್‌ ಮತ್ತು ಆಫ್ಘಾನಿಸ್ತಾನದಲ್ಲಿ ಅತಿಹೆಚ್ಚು ಸಾವುನೋವು ಸಂಭವಿಸುತ್ತಿರುವುದು ವಾಹನ ಆಧರಿತ ಆತ್ಮಹತ್ಯಾ ದಾಳಿಗಳಿಂದಲೇ ಎನ್ನುವುದನ್ನು ಗಮನಿಸಬೇಕು.

ಪುಲ್ವಾಮಾದಲ್ಲಿನ ಘಟನೆ ಮಧ್ಯಪ್ರಾಚ್ಯ ಮತ್ತು ಪಾಕಿಸ್ತಾನದಲ್ಲಿ ನಡೆಯುವ ದಾಳಿಗಳನ್ನು ನೆನಪಿಸುತ್ತದೆ. ಈಗ ಈ ಮಾದರಿಯ ದಾಳಿ ನಮ್ಮ ನೆಲಕ್ಕೂ ಕಾಲಿಟ್ಟಿದೆ.. ಹಾಗಿದ್ದರೆ, ಈಗ ನಾವು ಯಾವ ರೀತಿಯ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕೆನ್ನುತ್ತೀರಿ? 
ಮೊದಲನೆಯದಾಗಿ, ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಸ್ಫೋಟಕಗಳು ಎಲ್ಲಿಂದ ಬಂದವು ಎನ್ನುವುದರ ಬಗ್ಗೆ ನಾವು ಯೋಚಿಸಬೇಕಾದ ಅಗತ್ಯವಿದೆ. ಇದರ ಜೊತೆಗೆ ಈ ಸ್ಫೋಟಕಗಳನ್ನು ಎಲ್ಲಿ ಸಂಗ್ರಹಿಸಿ ಇಡಲಾಗಿತ್ತು ಎನ್ನುವುದನ್ನೂ ನೋಡಬೇಕಿದೆ. ಈಗ ಜಮ್ಮು ಕಾಶ್ಮೀರದಲ್ಲಿ ಬಹಳ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಬೃಹತ್‌ ಡ್ಯಾಂಗಳನ್ನು, ಬ್ರಿಜ್‌ಗಳನ್ನು ನಿರ್ಮಿಸಲಾಗುತ್ತಿದೆ. ಆ ಕಾಮಗಾರಿಗಳಿಗೋಸ್ಕರ ಅಗಾಧ ಪ್ರಮಾಣದಲ್ಲಿ ಸ್ಫೋಟಕಗಳನ್ನು ಬಳಸಬೇಕಾಗುತ್ತದೆ. ಒಂದು ವೇಳೆ ಅಲ್ಲಿಂದ ಏನಾದರೂ ಸ್ಫೋಟಕಗಳು ಸೋರಿಕೆ ಆಗುತ್ತಿವೆಯೇ ಅಥವಾ ಗಡಿಭಾಗದಿಂದ, ಇಲ್ಲವೇ ಇನ್ಯಾವುದೇ ಮಾರ್ಗದಿಂದ ಒಳಬರುತ್ತಿವೆಯೇ ಎನ್ನುವುದರ ಬಗ್ಗೆಯೂ ತನಿಖೆಯಾಗಬೇಕು. ಸ್ಫೋಟಕಗಳನ್ನು ಪತ್ತೆಹಚ್ಚುವ ಎಕ್ಸ್‌ಪ್ಲೋಸಿವ್‌ ಸ್ನಿಫ‌ರ್ಸ್‌ಗಳ ಅಗತ್ಯವಿದೆ. ಜೊತೆಗೆ ವಾಹನಗಳ ತಪಾಸಣೆ ಪ್ರಮಾಣವನ್ನು ಹೆಚ್ಚಿಸಬೇಕಿದೆ ಮತ್ತು ಉತ್ತಮ ಗುಪ್ತಚರ ವ್ಯವಸ್ಥೆಯ ಅಗತ್ಯವಿದೆ. 

ಇದನ್ನು ಭದ್ರತೆ ಮತ್ತು ಗುಪ್ತಚರ ವೈಫ‌ಲ್ಯ ಎಂದೆನ್ನಬಹುದೇ? 78 ವಾಹನಗಳಲ್ಲಿ 2,500 ಸಿಆರ್‌ಪಿಎಫ್ ಸೈನಿಕರು ಪಯಣಿಸುತ್ತಿದ್ದರು…
ಹಾಗೆ ಹೇಳುವುದು ಕಷ್ಟ.  ನಾವು ಪ್ರತಿಯೊಂದು ದಾಳಿಯನ್ನೂ ಕೌಂಟರ್‌ ಮಾಡುತ್ತೇವೆ ಎನ್ನುವುದು ಕಷ್ಟದ ಕೆಲಸ, ಮತ್ತದು ಪ್ರಾಕ್ಟಿಕಲ್‌ ಕೂಡ ಅಲ್ಲ. ನಾವು ಈ ವಿಷಯದಲ್ಲಿ ಏಕ್‌ದಂ ತೀರ್ಪು ನೀಡಬಾರದು. ತನಿಖೆ ಆಗಲಿ ತಡೀರಿ.  

ಪಠಾಣ್‌ಕೋಟ್‌ನಿಂದ ಪುಲ್ವಾಮಾದವರೆಗಿನ ದಾಳಿಗಳಲ್ಲಿ ಜೈಶ್‌-ಎ-ಮೊಹಮ್ಮದ್‌ನ ಕೈವಾಡವಿದೆ. ಹಾಗಿದ್ದರೆ ಜೈಶ್‌ ಸಂಘಟನೆ ಪಾಕಿಸ್ತಾನದ ಐಎಸ್‌ಐನ ಪ್ರಮುಖ ಉಗ್ರವಾದಿ ಅಂಗವಾಗಿ ಬದಲಾಗಿದೆಯೇ? 
ಇದರಲ್ಲಿ ಅನುಮಾನವಿಲ್ಲ. ಈ ರೀತಿಯ ಬಹಳಷ್ಟು ದಾಳಿಗಳು ಜೈಶ್‌ನಿಂದಲೇ ನಡೆಯುತ್ತಿವೆ. ಭಾರತದಲ್ಲಿ ವಿಧ್ವಂಸವೆಸಗಲು ಐಎಸ್‌ಐ ಜೈಶ್‌ ಅನ್ನು ಬಹಳ ಬಳಸಿಕೊಳ್ಳುತ್ತಿದೆ. ಕಳೆದ 3-4 ವರ್ಷಗಳಲ್ಲಿ ಜೈಶ್‌ ಸಂಘಟನೆಯ ಚಟುವಟಿಕೆಗಳು ಅಧಿಕವಾಗಿವೆ. 

ಹಾಗಿದ್ದರೆ ಏನು ಮಾಡಬೇಕಂತೀರಿ?
“ಪರಿಸ್ಥಿತಿ ಸುಧಾರಿಸುತ್ತಿದೆ’ ಎಂದು ಹೇಳುವುದನ್ನು ನಾವು ಬಿಡಬೇಕು. ಮೊದಲು ರಿಯಾಲಿಟಿ ಚೆಕ್‌ ಮಾಡಬೇಕು. ಎಚ್ಚೆತ್ತುಕೊಂಡು, ಸತ್ಯವನ್ನು ಒಪ್ಪಿಕೊಳ್ಳಬೇಕು. ಕಾಶ್ಮೀರದಲ್ಲಿ ನಡೆಯುತ್ತಿರುವುದರ ವಿದ್ಯಮಾನಗಳ ಬಗ್ಗೆ  ನಾವು ಸೀರಿಯಸ್‌ ಆಗಬೇಕಿದೆೆ. ಕಳೆದ ವರ್ಷವೇ ನಮ್ಮ ಎಷ್ಟು ಜನ ಸೈನಿಕರು ಪ್ರಾಣ ಕಳೆದುಕೊಂಡರೋ ನೋಡಿ.. 2018ರಲ್ಲಿ 91 ಸೈನಿಕರು ಉಗ್ರರಿಂದಾಗಿ ಮೃತಪಟ್ಟಿದ್ದಾರೆ.ಕಳೆದ ಹತ್ತು ವರ್ಷದಲ್ಲಿಯೇ ಇದು ಅತ್ಯಧಿಕ. ನಾವು ಎಷ್ಟು ಉಗ್ರರನ್ನು ಸಾಯಿಸಿದ್ದೇವೆ ಎಂದು ಅಂಕಿಸಂಖ್ಯೆಯನ್ನಷ್ಟೇ ತೋರಿಸುತ್ತೇವೆ. ಸತ್ಯವೇನೆಂದರೆ ನಾವು ಬಹಳ ಪ್ರಮಾಣದಲ್ಲಿ ಸೈನಿಕರನ್ನು ಕಳೆದುಕೊಂಡಿದ್ದೇವೆ. ಪಾಕ್‌ನಿಂದ ಕದನವಿರಾಮ ಉಲ್ಲಂಘನೆ ಅಧಿಕವಾಗಿದೆ. ನಾವು ಎಷ್ಟೋ ನಾಗರಿಕರನ್ನು ಕಳೆದುಕೊಳ್ಳುತ್ತಿದ್ದೇವೆ. ಹೀಗಾಗಿ ವಾಸ್ತವವನ್ನು ಅರಿತುಕೊಳ್ಳುವ ಅಗತ್ಯವಿದೆ. ಎರಡೂ ಆಯಾಮಗಳಿಂದಲೂ ಈ ವಿಷಯವನ್ನು ನಾವು ನೋಡಬೇಕು. ಮೊದಲನೆಯ ಮತ್ತು ಬೃಹತ್‌ ಆಯಾಮವೆಂದರೆ ಪಾಕಿಸ್ತಾನದ ಮುಂದುವರಿದ ಬೆಂಬಲ. ಎರಡನೆಯ ಆಯಾಮವೆಂದರೆ, ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಉಗ್ರಸಂಘಟನೆಗಳನ್ನು ಸೇರುತ್ತಿರುವುದು. ಮೊದಲೆಲ್ಲ ಪ್ರಮುಖ ದಾಳಿಗಳನ್ನು ಹೊರಗಿನಿಂದ ಬಂದ ಗುಂಪುಗಳು ನಡೆಸುತ್ತಿದ್ದವು. ಪುಲ್ವಾಮಾ ಸೂಸೈಡ್‌ ಬಾಂಬರ್‌ ಸ್ಥಳೀಯನೆಂದು ಕೇಳಲ್ಪಟ್ಟಿದ್ದೇನೆ.

ರಿಯಾಲಿಟಿ ಚೆಕ್‌ ಮಾಡುವ ಅಗತ್ಯವಿದೆ ಎಂದು ನೀವನ್ನುತ್ತೀರಿ. ಹಾಗಿದ್ದರೆ ನಿಮ್ಮ ಪ್ರಕಾರ, ಈಗ ಆಗಬೇಕಾಗಿರುವ ಕೆಲಸಗಳೇನು? 
ಅತ್ತ ಪಾಕಿಸ್ತಾನ ಉಗ್ರವಾದವನ್ನು ಬೆಂಬಲಿಸುತ್ತಿರುವುದರಿಂದ ಒಳನುಸುಳುವಿಕೆ ಮತ್ತು ಗಡಿಯಾಚೆಗಿಂದ ಗುಂಡಿನ ದಾಳಿಗಳು ಮುಂದುವರಿದಿವೆ. ಗಡಿ ನಿಯಂತ್ರಣ ರೇಖೆಯಲ್ಲಿ ಪ್ರಮುಖ ದಾಳಿಗಳು ಆಗುತ್ತಿವೆ. ಪಾಕಿಸ್ತಾನವನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ನಾವು ನೋಡಬೇಕಿದೆ. ಇದು ಬಾಹ್ಯ ವಿಷಯವಾಯಿತು. ಆಂತರಿಕವಾಗಿ ನೋಡಿದಾಗ, ಕಾಶ್ಮೀರದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಉಗ್ರಸಂಘಟನೆಗಳನ್ನು ಸೇರುತ್ತಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಪ್ರತಿಬಾರಿಯೂ ಸ್ಥಳೀಯ ವ್ಯಕ್ತಿಯೊಬ್ಬ ಸತ್ತಾಗ, ಹೊಸಬನೊಬ್ಬ ಉಗ್ರ ಸಂಘಟನೆಯನ್ನು ಸೇರಿಕೊಳ್ಳುತ್ತಾನೆ. ಅಲ್ಲಿ ಮೂಲಭೂತವಾದ ಹೆಚ್ಚಾಗುತ್ತಿದೆ. ಅದನ್ನು ತಡೆಯುವುದಕ್ಕೆ ಕೆಲವು ಸಕ್ಷಮ ಹೆಜ್ಜೆಗಳನ್ನು ಇಡಬೇಕಾದ ಅಗತ್ಯವಿದೆ. ಆದರೆ ಈ ನಿಟ್ಟಿನಲ್ಲಿ ಕೆಲಸಗಳಾಗುತ್ತಿರುವುದು ನನಗೆ ಕಾಣಿಸುತ್ತಿಲ್ಲ. 

“ನಾವು ಅಷ್ಟೊಂದು ಉಗ್ರರನ್ನು ಕೊಂದೆವು’ ಎಂದು ಹೇಳಿಬಿಟ್ಟ ತಕ್ಷಣ, ಸಮಸ್ಯೆಗೆ ಉತ್ತರ ಸಿಗುವುದಿಲ್ಲ. ಕಳೆದ 2-3 ವರ್ಷಗಳಲ್ಲಿ ನಾವು ಅದೆಷ್ಟೋ ಉಗ್ರರನ್ನು ಕೊಂದಿದ್ದೇವೆ, ಆದರೆ ಪರಿಸ್ಥಿತಿ ಸುಧಾರಿಸುತ್ತಿಲ್ಲ.  ಹಾಗಿದ್ದರೆ ನಮ್ಮ ಸ್ಟ್ರಾಟೆಜಿಗಳನ್ನು ಮತ್ತೂಮ್ಮೆ ಅವಲೋಕಿಸುವ ಅಗತ್ಯವಿದೆಯೇ? ಪಾಕಿಸ್ತಾನವನ್ನು ನಾವು ಹೇಗೆ ಎದುರಿಸಬೇಕು? ಈ ವಿಚಾರಗಳ ಬಗ್ಗೆ ನಮ್ಮಲ್ಲಿ ಚರ್ಚೆಗಳೇ ಆಗುತ್ತಿಲ್ಲ. ಮೊದಲು ವಾಸ್ತವವನ್ನು ಅರಿತು, ನಂತರ, ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸುವ ಅಗತ್ಯವಿದೆ. 

ನೀವು ಸೇನೆಯಲ್ಲಿದ್ದು ಪರಿಸ್ಥಿತಿಯನ್ನು ಸಾûಾತ್‌ ನೋಡಿದವರು. ಹಾಗಿದ್ದರೆ ರಕ್ಷಣಾ ಕ್ರಮಗಳು ಹೇಗಿರಬೇಕು ಎನ್ನುತ್ತೀರಿ? 
ಪಾಕಿಸ್ತಾನ ಮೊದಲಿನಂತೆಯೇ ನಿರ್ಭಯವಾಗಿ ತನ್ನ ಕುಕೃತ್ಯವನ್ನು ಮುಂದುವರಿಸಿದೆ. ಜೈಶ್‌-ಎ-ಮೊಹಮ್ಮದ್‌ ಸಂಘಟನೆಯನ್ನು (ಮಸೂದ್‌ ಅಜರ್‌ ಅದರ ಸ್ಥಾಪಕ) ಅಂತಾರಾಷ್ಟ್ರೀಯ ಉಗ್ರ ಸಂಘಟನೆಯೆಂದು ಘೊಷಿಸುವ ನಿಟ್ಟಿನಲ್ಲಿ ಯಶಸ್ಸು ಪಡೆಯಲು ನಮಗೆ ಸಾಧ್ಯವಾಗಿಲ್ಲ. ಇನ್ನು ಆಂತರಿಕವಾಗಿ, ಮೂಲಭೂತವಾದ ಹೆಚ್ಚುತ್ತಿದೆ. ಉಗ್ರ ಸಂಘಟನೆಗಳಿಗೆ ಸ್ಥಳೀಯರ ಬೆಂಬಲ ಹೆಚ್ಚಾಗುತ್ತಿದೆ. 
ಮೂರು ವರ್ಷದ ಹಿಂದೆ ಈ ರೀತಿ ಬಹಿರಂಗವಾಗಿ ಭಯೋತ್ಪಾದಕರ ಪರ ಘೋಷಣೆ ಕೂಗುವ ಗುಂಪುಗಳು ಕಾಣಿಸುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ.  ಮುಖ್ಯವಾಗಿ ನಾಗರಿಕ ಸಮಾಜವನ್ನು ನೀವು ಹೇಗೆ ತಲುಪುತ್ತೀರಿ, ಉಗ್ರವಾದದತ್ತ ವಾಲಿರುವ ಈ ಯುವಕರನ್ನು ಮತ್ತೆ ಮುಖ್ಯವಾಹಿನಿಗೆ ಹೇಗೆ ತರುತ್ತೀರಿ? ಜಮ್ಮು ಮತ್ತು ಕಾಶ್ಮೀರದ ನಡುವೆ ಸೃಷ್ಟಿಯಾಗಿರುವ ಕಂದರವನ್ನು ಹೇಗೆ ಸರಿಪಡಿಸುತ್ತೀರಿ? ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ. ನನಗನ್ನಿಸುತ್ತೆ, ಈ ಎಲ್ಲಾ ವಿಷಯಗಳಲ್ಲಿ ನಾವು ಸೀರಿಯಸ್‌ ಆಗಬೇಕಿದೆ.  ನಿಜಕ್ಕೂ ಸಮಸ್ಯೆ ಇದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಿದೆ. ಕಾಶ್ಮೀರದಲ್ಲಿ ಸಮಸ್ಯೆಯೇ ಇಲ್ಲ, ಪಾಕಿಸ್ತಾನವೊಂದೇ ನಿಜವಾದ ಸಮಸ್ಯೆ ಎಂದುನೀವು ವಾಸ್ತವವನ್ನು ಕಡೆಗಣಿಸಿದರೆ, ಪರಿಹಾರ ಸಿಗುವುದಾದರೂ ಹೇಗೆ? 

ಈ ರೀತಿಯ ದಾಳಿಗಳು ಜಮ್ಮು-ಕಾಶ್ಮೀರದಲ್ಲಿನ ಸೈನಿಕರ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು? 
ಅವರ ನೈತಿಕ ಸ್ಥೈರ್ಯ ಕುಸಿಯುತ್ತದೆ ಎಂದೇನೂ ನಾನು ಹೇಳುತ್ತಿಲ್ಲ, ಆದರೆ ನಿಜಕ್ಕೂ ಇದೊಂದು ಹಿನ್ನಡೆ. ನಾವು ಉರಿ ದಾಳಿಯ ಸಮಯದಲ್ಲಿ ಈ ರೀತಿ ಆದದ್ದನ್ನು ನೋಡಿದೆವು.  ಆಗ ಜನರೆಲ್ಲ “ಈಗೇನು ಮಾಡುತ್ತೀರಿ? ಸೈನಿಕರು ಮತ್ತು ಪೊಲೀಸರು ಹತ್ಯೆಗೀಡಾಗುತ್ತಿದ್ದಾರೆ, ಇವರ ತ್ಯಾಗವೆಲ್ಲ ವ್ಯರ್ಥವಾ ಗುತ್ತದೆಯೇ?’ ಎಂದು ಪ್ರಶ್ನಿಸಿದರು. 

ಹಾಗಿದ್ದರೆ ಇನ್ನೊಂದು ಪ್ರತಿದಾಳಿ ನಡೆಸಲು(ಸರ್ಜಿಕಲ್‌ ಸ್ಟ್ರೈಕ್‌) ನಮಗೆ ಇದೊಂದು ಕಾರಣ ಸಾಕಲ್ಲವೇ? 
ಈಗಿನ ಘಟನೆಯನ್ನು ಕಡೆಗಣಿಸಲಂತೂ ಸಾಧ್ಯವಿಲ್ಲ. ಗಮನಾರ್ಹ ಸಂಗತಿಯೆಂದರೆ, ಉರಿ ದಾಳಿಯಾದಾಗ ಯಾವೊಂದು ಉಗ್ರಸಂಘಟನೆಯೂ ಅದಕ್ಕೆ ಹೊಣೆ ಹೊತ್ತಿರಲಿಲ್ಲ. ಆದರೆ ಈಗ ಉಗ್ರಸಂಘಟನೆಯೊಂದು ಎದ್ದು ನಿಂತು, ತಾನೇ ಈ ಕೃತ್ಯ ಎಸಗಿರುವುದಾಗಿ ಹೇಳುತ್ತಿದೆ. ಈ ಸಂಘಟನೆಯ ನೆಲೆಯಿರುವುದು ಪಾಕಿಸ್ತಾನದಲ್ಲಿ.  ನಾವು ಪ್ರತ್ಯುತ್ತರ ನೀಡಲೇಬೇಕಿದೆ-ನೀಡುತ್ತೇವೆ ಎಂದು ಎಲ್ಲೋ ಒಂದು ಕಡೆ ನನ್ನ ಗಟ್‌ ಫೀಲಿಂಗ್‌ ಹೇಳುತ್ತಿದೆ. ಹೌದು ಎನ್ನುವುದಾದರೆ, ಪ್ರತಿದಾಳಿ ಯಾವ ರೂಪದಲ್ಲಿ ಇರಬೇಕು, ಯಾವಾಗ ನಡೆಯಬೇಕು, ಯಾವ  ಪ್ರಮಾಣದಲ್ಲಿ ಇರಬೇಕು ಎನ್ನುವುದನ್ನು ಸೇನೆ ನಿರ್ಧರಿಸುತ್ತದೆ. 

ಹಾಗಿದ್ದರೆ, ಪ್ರತಿದಾಳಿ ಸದ್ಯದಲ್ಲೇ ಆಗಬಹುದು ಎಂದು ನಿಮಗೆ ಅನಿಸುತ್ತಿದೆಯೇ? 
ಈ ವಿಷಯದಲ್ಲಿ ಸಮಚಿತ್ತದಿಂದ ಯೋಚಿಸಬೇಕಾಗುತ್ತದೆ. ಇಂಥ ವಿಚಾರಗಳನ್ನು ಭಾವನಾತ್ಮಕವಾಗಿ ಯೋಚಿಸುವುದಕ್ಕೆ ಸಾಧ್ಯವಿಲ್ಲ. ಮುಂದಿನ ಪ್ಲ್ರಾನ್‌ ಹೇಗಿರಬೇಕು ಎನ್ನುವ ಬಗ್ಗೆ ಚರ್ಚೆಗಳಾಗಬೇಕು ಮತ್ತು ಅದನ್ನು ಹೊರತುಪಡಿಸಿ ಇತರೆ ಆಯ್ಕೆಗಳನ್ನೂ ಹುಡುಕಬೇಕಾಗುತ್ತದೆ. ಸದ್ಯದಲ್ಲೇ  ಪ್ರತಿದಾಳಿ ನಡೆಸಲಾಗುತ್ತ¤ದಾ ಎಂದು ನನಗೆ ಗೊತ್ತಿಲ್ಲ. ಆದರೆ ಈ ವಿಚಾರದಲ್ಲಿ ತಡವಾಗಬಾರದು ಎಂದು ಮಾತ್ರ ಹೇಳಬಲ್ಲೆ.

ಭಯೋತ್ಪಾದಕರು ಹೀಗೆ ಬೆಳೆಯಲು ಕಾರಣವೇನು?
ಇಲ್ಲಿ ಮುಖ್ಯವಾಗಿ ಧಾರ್ಮಿಕ ಮೂಲಭೂತವಾದ ಕೆಲಸ ಮಾಡುತ್ತಿದೆ. ಈ ಉಗ್ರವಾದಿಗಳ ತಾಯಂದಿರು “ನನ್ನ ಮಗ ಪ್ರಾಣತ್ಯಾಗ ಮಾಡಿದ್ದು ತಮ್ಮ ಪುಣ್ಯ’ ಎಂದು ಹೇಳುತ್ತಿದ್ದಾರೆ. ಈಗ ಉಗ್ರರು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಲು ಆರಂಭಿಸಿದ್ದಾರೆ. (ಉದಾಹರಣೆಗೆ, ಈಗಿನ ವಾಹನ ಆಧಾರಿತ ಆತ್ಮಹತ್ಯಾ ದಾಳಿ). ಅದೇನು ಕಾರಣವೋ ತಿಳಿಯದು, ಆದರೆ ಕಾಶ್ಮೀರದ ಒಂದು ಯುವ ವರ್ಗದಲ್ಲಿ ಸಿಟ್ಟು ಮತ್ತು ಅಸಹನೆ ಗಾಢವಾಗಿದೆ. ಕೇವಲ ಉಗ್ರವಾದಿಗಳಲ್ಲಷ್ಟೇ ಅಲ್ಲ, ನಾಗರಿಕರಲ್ಲೂ ಸಿಟ್ಟು- ಅಸಹನೆ ಹೆಚ್ಚಾಗುತ್ತಿದೆ.  ಮೊದಲೆಲ್ಲ ಅವರು ಮಿಲಿಟರಿಯನ್ನು ನೋಡಿದರೆ  ಓಡಿಹೋಗುತ್ತಿದ್ದರು, ಈಗ ಕಲ್ಲು ಎಸೆಯಲಾರಂಭಿಸಿದ್ದಾರೆ. ನಾವು “ಎಲ್ಲವೂ ಸರಿಯಿದೆ’ ಎಂದು ಹೇಳುವುದನ್ನು ನಿಲ್ಲಿಸಿ, ವಾಸ್ತವವನ್ನು ಒಪ್ಪಿಕೊಳ್ಳಲೇಬೇಕಿದೆ.

ಸಂದರ್ಶನ ಕೃಪೆ: ರೆಡಿಫ್ 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ