ಬಾಂಗ್ಲಾದೇಶ ಉಳಿಸಿಕೊಳ್ಳುವರೇ ಹಸೀನಾ?

Team Udayavani, Dec 29, 2018, 12:30 AM IST

ಭಾರತದಲ್ಲಿ 2019ರ ಏಪ್ರಿಲ್‌-ಮೇನಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಅದಕ್ಕಿಂತ ಮೊದಲೇ ನೆರೆಯ ದೇಶಗಳಾಗಿರುವ ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಚುನಾವಣೆ ನಡೆಯಲಿದೆ. ಬಾಂಗ್ಲಾದೇಶದ ಸಂಸತ್‌ ಅಥವಾ ಹೌಸ್‌ ಆಫ್ದ ನೇಷನ್‌ಗೆ ಈ ಬಾರಿ ನಡೆಯಲಿರುವ ಚುನಾವಣೆ ಭಾರಿ ಮಹತ್ವವನ್ನೇ ಪಡೆದಿದೆ. ಬಾಂಗ್ಲಾದೇಶದಲ್ಲಿ ಈಗಾಗಲೇ 20 ಪ್ರತಿಪಕ್ಷಗಳನ್ನು ಒಳಗೊಂಡ ಜಾತಿಯ ಐಕ್ಯ ಒಕ್ಕೂಟ (ಜೆಓಎಫ್) ರಚನೆಯಾಗಿ ಆಡಳಿತಾರೂಢ‌ ಅವಾಮಿ ಲೀಗ್‌ ಅನ್ನು ಎದುರಿಸಲು ಸಿದ್ಧಗೊಂಡಿವೆ. ದುರದೃಷ್ಟಕರವೆಂದರೆ ಬಾಂಗ್ಲಾದೇಶ್‌ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ)ಯ ನಾಯಕಿ ಮತ್ತು ಮಾಜಿ ಪ್ರಧಾನಿ ಖಾಲಿದಾ ಜಿಯಾ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅವರ ಪುತ್ರ ತಾರೀಖ್‌ ರೆಹಮಾನ್‌ ಲಂಡನ್‌ನಲ್ಲಿ ಕುಳಿತಿದ್ದಾರೆ. ಅವರ ವಿರುದ್ಧ 2005ರಲ್ಲಿ ಅವಾಮಿ ಲೀಗ್‌ ಪಕ್ಷದ ರ್ಯಾಲಿಯ ಮೇಲೆ ಬಾಂಬ್‌ ದಾಳಿ 24 ಮಂದಿಯ ಸಾವಿಗೆ ಕಾರಣರಾದ ಆರೋಪ ಇದೆ.

ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆ ಅನುಭವಿಸ ಬೇಕಾಗುತ್ತದೆ. ಹೀಗಾಗಿ, ಜನಪ್ರಿಯ ನ್ಯಾಯವಾದಿ, ರಾಜಕಾರಣಿ ಕಮಲ್‌ ಹಸನ್‌ ನೇತೃತ್ವದಲ್ಲಿ ಚುನಾವಣೆ ಎದುರಿಸುವ ಸ್ಥಿತಿ ಪ್ರತಿಪಕ್ಷಗಳಿಗೆ ಬಂದೊದಗಿದೆ.  ಡಿ.30ರಂದು ನಡೆಯಲಿರುವುದು 11ನೇ ಸಾರ್ವತ್ರಿಕ ಚುನಾವಣೆ. ಬಾಂಗ್ಲಾದೇಶದ ಸಂಸತ್‌ನಲ್ಲಿ ಒಟ್ಟು 350 ಸ್ಥಾನಗಳಿವೆ. ಈ ಪೈಕಿ 50 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಾಗಿ ಇರಿಸಲಾಗಿದೆ. ಚುನಾವಣೆಯಲ್ಲಿ ಗೆದ್ದ ಪಕ್ಷ ಮಹಿಳೆಯರನ್ನು ಸಂಸದರ ಸ್ಥಾನಕ್ಕೆ ನೇಮಕ ಮಾಡುತ್ತದೆ. 2014ರ ಚುನಾವಣೆಯಲ್ಲಿ ಈಗಿನ ಪ್ರತಿಪಕ್ಷ ಬಿಎನ್‌ಪಿ, ಹಾಲಿ ಆಡಳಿತಾರೂಢ ಪಕ್ಷ ಅವಾಮಿ ಲೀಗ್‌ ಅಕ್ರಮ ಎಸಗಿತ್ತು ಎಂದು ಆರೋಪಿಸಿ ಚುನಾವಣೆ ಬಹಿಷ್ಕರಿಸಿತ್ತು. ಹೀಗಾಗಿ ಶೇಖ್‌ ಹಸೀನಾಗೆ ಒಂದು ರೀತಿ ವಾಕ್‌ ಓವರ್‌ ಸಿಕ್ಕಿತ್ತು. ಹಾಲಿ ಸಂಸತ್‌ನಲ್ಲಿ ಪ್ರಧಾನ ಪ್ರತಿಪಕ್ಷವೇ ಇಲ್ಲ. ಸಣ್ಣ ಪುಟ್ಟ ಪಕ್ಷಗಳೆಲ್ಲ 6, 5 ಸ್ಥಾನಗಳನ್ನು ಗೆದ್ದಿದ್ದವು. ಆಡಳಿತಾರೂಢ ಅವಾಮಿ ಲೀಗ್‌ 234 ಸ್ಥಾನಗಳನ್ನು ಗೆದ್ದಿತ್ತು. 

165 ಮಿಲಿಯ ಜನಸಂಖ್ಯೆ ಇರುವ ಭಾರತದ ನೆರೆಯ ರಾಷ್ಟ್ರದಲ್ಲಿ ಜನರ ಸಾಮಾನ್ಯ ಜೀವಿತಾವಧಿ 73 ವರ್ಷ, ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ.94, ಪುರುಷರ ಸಾಕ್ಷರತೆಯ ಪ್ರಮಾಣ ಶೇ.91, ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ತೆರಳಿ ಶಿಕ್ಷಣ ಪಡೆಯುತ್ತಿದ್ದಾರೆ. ಇವೆಲ್ಲವೂ ವಿಶ್ವಸಂಸ್ಥೆ ನಡೆದ ಅಧ್ಯಯನ ಭಾಗವೇ ಆಗಿದೆ. 

ಸಮೀಕ್ಷೆಯೊಂದರ ಪ್ರಕಾರ ಅವಾಮಿ ಲೀಗ್‌ 168ರಿಂದ 220 ಸ್ಥಾನಗಳನ್ನು ಗಳಿಸಿ ಗೆಲ್ಲಲಿದೆ. ಒಂದು ವೇಳೆ ಈ ಸಮೀಕ್ಷೆ ನಿಜವಾದರೆ ನಾಲ್ಕನೇ ಬಾರಿಗೆ ಪ್ರಧಾನಿ ಹುದ್ದೆಯನ್ನು ಶೇಖ್‌ ಹಸಿನಾ ಅಲಂಕರಿಸಿದಂತಾಗುತ್ತದೆ. ಮಾತ್ರವಲ್ಲ ಆ ದೇಶದ ಇತಿಹಾಸದಲ್ಲಿ ಇದು ಒಂದು ದಾಖಲೆಯೇ.   ಈ ಬಾರಿ ಮಾತ್ರ ಬಿಎನ್‌ಪಿ ಚುನಾವಣಾ ಕಣದಲ್ಲಿ “ಒಂದು ಕೈ ನೋಡಬೇಕು’ ಎಂಬ  ಇರಾದೆಯಲ್ಲಿದ್ದುಕೊಂಡೇ ಪ್ರತಿಪಕ್ಷಗಳ ಜಾತಿಯ ಐಕ್ಯ ಒಕ್ಕೂಟ ರಚನೆ ಮಾಡಿಕೊಂಡಿದೆ. ಅದು ಎಷ್ಟು ಪರಿಣಾಮಕಾರಿಯಾದೀತು ಎಂದು ಫ‌ಲಿತಾಂಶದ ಬಳಿಕವಷ್ಟೇ ಗೊತ್ತಾದೀತು. ಶೇಖ್‌ ಹಸೀನಾ ಅವರು ಈ ಬಾರಿ ನಾಲ್ಕನೇ ಬಾರಿಗೆ ಅಧಿಕಾರದಲ್ಲಿ ಮುಂದುವರಿ ಯಲು ಶತಪ್ರಯತ್ನ ನಡೆಸಿದ್ದಾರೆ.  ಅಲ್ಲಿ ಚುನಾವಣೆಯೇನು ಶಾಂತಿಯಿಂದ ನಡೆಯುತ್ತಿಲ್ಲ. ಪ್ರತಿಪಕ್ಷಗಳು ಮಾಡುವ ಆರೋಪದ ಪ್ರಕಾರ  ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದಾಗಿನಿಂದ ಇಲ್ಲಿಯವರೆಗೂ 10,500ಕ್ಕೂ ಅಧಿಕ ಮಂದಿಯನ್ನು ರಾಜಕೀಯ ಕಾರಣಕ್ಕಾಗಿ ಬಂಧಿಸಲಾಗಿದೆ. ಜತೆಗೆ ಇದುವರೆಗಿನ ಮಾಹಿತಿ ಪ್ರಕಾರ ಆರು ಮಂದಿ ಮೃತಪಟ್ಟಿದ್ದಾರೆ. ಪ್ರತಿಪಕ್ಷಗಳು ಮಾಡುವ ಆರೋಪಗಳ ಬಗ್ಗೆ ಸರ್ಕಾರ ಮೌನ ವಹಿಸಿದೆ. ಜ.27ರಂದು ಢಾಕಾದಲ್ಲಿರುವ ಹೈಕೋರ್ಟ್‌ ಬಿಎನ್‌ಪಿಯ ಮೂವರು ಅಭ್ಯರ್ಥಿಗಳನ್ನು ಸರ್ಧಿಸದಂತೆ ಅನರ್ಹಗೊಳಿಸಿದೆ. 

ಇನ್ನು ಬಾಂಗ್ಲಾದೇಶದಲ್ಲಿ ಬಿಎನ್‌ಪಿ ನೇತೃತ್ವದ ಸರ್ಕಾರದ ಆಡಳಿತ ಬಂದರೆ ಭಾರತದಲ್ಲಿನ ಯಾವುದೇ ಪಕ್ಷದ ಸರ್ಕಾರಕ್ಕೂ ತಲೆನೋವೇ. ಏಕೆಂದರೆ ಖಾಲಿದಾ ಜಿಯಾ ಪಕ್ಷ ಅಲ್ಲಿನ ಉಗ್ರ ಸಂಘಟನೆಗಳ ಮೇಲೆ ಮೃದು ನಿಲುವು ಹೊಂದಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್‌ ಸರ್ವಿಸ್‌ ಇಂಟೆಲಿಜೆನ್ಸ್‌ಗೆ ಅದೇ ಬೇಕು. ಬಾಂಗ್ಲಾದೇಶದ ಮೂಲಕವಾಗಿ ಭಾರತಕ್ಕೆ ಉಗ್ರರನ್ನು ನುಗ್ಗಿಸಲು ಅನುಕೂಲವೇ ಆಗುತ್ತದೆ. ಭಾರತದಲ್ಲಿ 2019ರಲ್ಲಿ ನಡೆಯುವ ಚುನಾವಣೆಗೂ ಬಾಂಗ್ಲಾ ಎಲೆಕ್ಷನ್‌ಗೂ ಸಂಬಂಧವಿದೆ. 

ಪಾಕಿಸ್ತಾನ, ನೇಪಾಳ, ಚೀನಾ, ಬಾಂಗ್ಲಾ, ಶ್ರೀಲಂಕಾ, ಭಾರತಗಳಲ್ಲಿ ಚುನಾವಣೆ ನಡೆದರೆ ಕುತೂಹಲದಿಂದ ಗಮನಿಸುತ್ತವೆ. ಅದರಲ್ಲೂ ಚೀನಾ ಮತ್ತು ಪಾಕಿಸ್ತಾನದ ಕಣ್ಣುಗಳಂತೂ ಈ ಸನ್ನಿವೇಶವನ್ನು ಹಾಳು ಮಾಡುವುದಕ್ಕೆ ಅವಕಾಶ ಸಿಗುತ್ತದಾ ಎಂಬುದನ್ನು ಹುಡುಕುತ್ತಲೇ ಇರುತ್ತವೆ. ಬಾಂಗ್ಲಾದೇಶ ರಚನೆಗೆ ಭಾರತವೇ ಕಾರಣ. 1971ರಲ್ಲಿ ಅದಕ್ಕಾಗಿ ಯುದ್ಧವೇ ನಡೆದಿತ್ತು. ಶೇಖ್‌ ಹಸೀನಾಗೆ ಭಾರತದ ಜತೆಗೆ ವಿಶೇಷ ರೀತಿಯ ಬಾಂಧವ್ಯವೂ ಇದೆ. ಗಮನಿಸಬೇಕಾದ ಮತ್ತೂಂದು ಅಂಶವಿದೆ. ಭಾರತದ ಸುತ್ತಲಿನ ರಾಷ್ಟ್ರಗಳಿಗೆ ಅತ್ಯಧಿಕ ಮೊತ್ತದ ಸಾಲ ನೀಡುವ ಚೀನಾ, ಬಾಂಗ್ಲಾದೇಶಕ್ಕೆ ಕೂಡ ನೆರವು ನೀಡಿದೆ. ಆದರೆ ಜಾಣತನದ ನಡೆ ಅನುಸರಿಸಿದ ಹಸೀನಾ ಅದರಿಂದ ಸರ್ಕಾರದ ನೀತಿ ನಿರ್ವಹಣೆಯ ಮೇಲೆ ಕರಿ ನೆರಳು ಬೀಳದಂತೆ ಗರಿಷ್ಠ ಪ್ರಮಾಣದ ಎಚ್ಚರ ವಹಿಸಿದ್ದಾರೆ. ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆಯನ್ವಯ 30 ಅಮೆರಿಕನ್‌ ಬಿಲಿಯನ್‌ ಡಾಲರ್‌ ಮೊತ್ತವನ್ನು ಮೂಲ ಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಚೀನಾ ಮುಂದಾಗಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಪಾಕಿಸ್ತಾನದ ಬಳಿಕ ಬಾಂಗ್ಲಾದೇಶ ಚೀನಾದಿಂದ ಹೆಚ್ಚು ನೆರವು ಪಡೆಯುವ ರಾಷ್ಟ್ರಗಳಲ್ಲಿ 2ನೇ ಸ್ಥಾನದಲ್ಲಿದೆ. ಹಸೀನಾ ಅವರ ಸಾಧನೆಯೆಂದರೆ ಭಾರತ, ಚೀನಾ ಜತೆಗೆ ಸೌದಿ ಅರೇಬಿಯಾದಿಂದಲೂ ನೆರವು ಪಡೆದುಕೊಂಡು ಬಾಂಧವ್ಯ ಸಮತೋಲನ ಕಾಯ್ದುಕೊಂಡಿದ್ದಾರೆ. 

ಭಾರತಕ್ಕೆ ಇರುವ ಕಳವಳವೇನೆಂದರೆ ಜಮಾತ್‌-ಎ- ಇಸ್ಲಾಮಿ ಎಂಬ ಪಕ್ಷ ಪರೋಕ್ಷವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡೀತು ಎಂದು. ಈ ಪಕ್ಷ ಇಸ್ಲಾಮಿಕ್‌ ಮೂಲಭೂತವಾದಕ್ಕೆ ಆದ್ಯತೆ ನೀಡುತ್ತದೆ. ಹೀಗಾಗಿ, ಶೇಖ್‌ ಹಸೀನಾ ಸರ್ಕಾರ ಅದನ್ನು ನಿಷೇಧಿಸಿದೆ. ಅದಕ್ಕೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್‌ ಸರ್ವಿಸ್‌ ಇಂಟೆಲಿಜೆನ್ಸ್‌  ಬೆಂಬಲ ನೀಡುತ್ತಿದೆ. ಜಮಾತ್‌-ಎ-ಇಸ್ಲಾಮಿ ಪಶ್ಚಿಮ ಬಂಗಾಳದಲ್ಲಿ ಉಗ್ರರ ಸ್ಲಿàಪರ್‌ ಸೆಲ್‌ಗ‌ಳನ್ನು ಆರಂಭಿಸಲು ಕುಮ್ಮಕ್ಕು ನೀಡುತ್ತದೆ ಎಂಬ ಗುಮಾನಿಯೂ ಇದೆ. ಈ ಪಕ್ಷ 300 ಸ್ಥಾನಗಳ ಪೈಕಿ 60 ಕ್ಷೇತ್ರಗಳಲ್ಲಿ ತನ್ನ ಸ್ವತಂತ್ರ ಅಭ್ಯರ್ಥಿಗಳು, 

ಬಿಎನ್‌ಪಿ ಮೂಲಕ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಈ 
ಸಂಘಟನೆ ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್‌-ಎ-
ತೊಯ್ಬಾ ಸೇರಿದಂತೆ ಹಲವು ಸಂಘಟನೆಗಳ ಬೆಂಬಲವನ್ನೂ ಪಡೆದುಕೊಂಡಿದೆ. 
2001-2006ರ ನಡುವೆ ಬಿಎನ್‌ಪಿ ಅಧಿಕಾರದಲ್ಲಿದ್ದಾಗ ಈ ಪಕ್ಷ ಸರ್ಕಾರದ ಭಾಗವಾಗಿಯೂ ಇತ್ತು. ಹೀಗಾಗಿ ಸುಲಭವಾಗಿ ಭಾರತದ ವಿರುದ್ಧ ಉಗ್ರಗಾಮಿ ಚಟುವಟಿಕೆಗಳನ್ನು ಯಥೇತ್ಛವಾಗಿ ನಡೆಸಿಕೊಂಡು ಬರುತ್ತಿತ್ತು. ಇನ್ನೊಂದು ಕಳವಳಕಾರಿ ಅಂಶವೆಂದರೆ ಸರ್ಕಾರದ ಭಾಗವಾಗಿಯೇ ಇದ್ದರೂ ಅದು ಬಾಂಗ್ಲಾದೇಶದ ಸಂವಿಧಾನಕ್ಕೆ ಗೌರವಿಸುತ್ತಿರಲಿಲ್ಲ. ಹೀಗಾಗಿಯೇ ಶೇಖ್‌ ಹಸೀನಾ ಸರ್ಕಾರ 1971ರ ಬಾಂಗ್ಲಾದೇಶದ ಯುದ್ಧಾಪರಾಧಗಳಲ್ಲಿ ಭಾಗಿಯಾದ ಜಮಾತ್‌ ನಾಯಕರಿಗೆ ನಿರ್ದಾಕ್ಷಿಣ್ಯವಾಗಿ ಗಲ್ಲು ಶಿಕ್ಷೆ ವಿಧಿಸಿತ್ತು. ಶೇಖ್‌ ಹಸೀನಾ ಸರ್ಕಾರ ಅಧಿಕಾರದಲ್ಲಿದ್ದರೂ, ಬಾಂಗ್ಲಾದೇಶದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸಕ್ರಿಯವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಎನ್‌ಪಿ ಮತ್ತು ಜಮಾತ್‌-ಎ-ಇಸ್ಲಾಮಿ ಬಾಂಗ್ಲಾದೇಶದಲ್ಲಿ ಅಧಿಕಾರಕ್ಕೆ ಬರಲೇಬೇಕು ಎನ್ನುವುದು ಐಎಸ್‌ಐ ಬಯಕೆ. 

ಶೇಖ್‌ ಹಸೀನಾ ಸರ್ಕಾರ ಜಿಹಾದಿಗಳ ವಿರುದ್ಧ ಕೈಗೊಂಡಿರುವ ಕ್ರಮಗಳು ಪಾಕಿಸ್ತಾನ ಸೇನೆ ಮತ್ತು ಐಎಸ್‌ಐಗೆ ನಿರಾಶೆ ಮತ್ತು ಸಿಟ್ಟು ತರಿಸಿದೆ. ಹೀಗಾಗಿ, ತಮ್ಮ ಪರವಾಗಿರುವ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವುದು ಪಾಕ್‌ನ ಆಸೆ.

ಮೂರು ವರ್ಷಗಳ ಅವಧಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ವಿವಿಧ ಕ್ಷೇತ್ರಗಳಲ್ಲಿ 91 ಒಪ್ಪಂದಗಳಿಗೆ ಸಹಿ ಹಾಕಿವೆ. ಭಾರತ ಬಾಂಗ್ಲಾದೇಶದಲ್ಲಿ ಎಂಟು ಮಿಲಿಯ ಡಾಲರ್‌ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನೂ ಕೈಗೊಂಡಿದೆ. 4 ಸಾವಿರ ಕಿಮೀ ದೂರದ ಗಡಿ ಹೊಂದಿರುವ ಬಾಂಗ್ಲಾದೇಶದ ಜತೆ ಉತ್ತಮ ಬಾಂಧವ್ಯ ಹೊಂದಲು ಹಾಲಿ ಸರ್ಕಾರವೇ ಅಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಭಾರತಕ್ಕೆ ಅಗತ್ಯವೂ ಆಗಿದೆ. ಚುನಾವಣೆ ಎದುರಿಸಲಿರುವ ಭಾರತದ ಮತ್ತೂಂದು ನೆರೆಯ ರಾಷ್ಟ್ರವೆಂದರೆ ಶ್ರೀಲಂಕ. ಅ.26ರಂದು ಪ್ರಧಾನಮಂತ್ರಿ ರನಿಲ್‌ ವಿಕ್ರಮ ಸಿಂಘೆ ಅವರನ್ನು ಪದಚ್ಯುತಿಗೊಳಿಸಲು ಹೋಗಿ ಸುಪ್ರೀಂಕೋರ್ಟಿಂದ ಮುಖಭಂಗಕ್ಕೆ ಈಡಾಗಿರುವ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ 2019ರಲ್ಲಿ ದ್ವೀಪ ರಾಷ್ಟ್ರದಲ್ಲಿ ಚುನಾವಣೆ ನಡೆಯಲಿದೆ ಎಂದು ಸುಳಿವಿತ್ತಿದ್ದಾರೆ. ಅಂದರೆ ಅವರು ಕೂಡ ತಮ್ಮ ಜನಪ್ರಿಯತೆ ಪಣಕ್ಕಿಡಲು ಮುಂದಾಗಿದ್ದಾರೆ. ಪ್ರಾಂತೀಯ ಮತ್ತು ಅಧ್ಯಕ್ಷೀಯ ಪದವಿಗೆ ಚುನಾವಣೆ ನಡೆಯಲಿದೆ. ಏಕೆಂದರೆ ಸಂಸತ್‌ ಚುನಾವಣೆಯನ್ನು ಜ.5ರಂದು ನಡೆಸಬೇಕು ಎಂದು ಹುಮ್ಮನಸ್ಸಿನಲ್ಲಿದ್ದ ಸಿರಿಸೇನೆಯನ್ನು ಸುಮ್ಮನಾಗಿಸಿದ್ದು ಸುಪ್ರೀಂಕೋರ್ಟ್‌. 

ಇಲ್ಲಿಯೂ ಕೂಡ ಭಾರತಕ್ಕೆ ಚೀನಾ ಸವಾಲು ಉಂಟು. ಏಕೆಂದರೆ ದ್ವೀಪ ರಾಷ್ಟ್ರದಲ್ಲಿಯೂ ಕೂಡ ಕೋಟ್ಯಂತರ ರೂ. ಮೊತ್ತವನ್ನು ಚೀನಾ ಸರ್ಕಾರ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಿದೆ. ಹೀಗಾಗಿ, ಎಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದೂ ಮುಖ್ಯ.

ಸದಾಶಿವ ಕೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ