126ನೇ ತಿದ್ದುಪಡಿ ಮಸೂದೆ: ಆಂಗ್ಲೋ ಇಂಡಿಯನ್ನರಿಗೆ ಕೊಕ್‌?

Team Udayavani, Dec 13, 2019, 6:15 AM IST

ತಿದ್ದುಪಡಿ ಮಸೂದೆಯನ್ನು ಮಂಡಿಸುವ ವೇಳೆ ಕೇಂದ್ರದ ಕಾನೂನು ಸಚಿವ ರವಿಶಂಕರ್‌ಪ್ರಸಾದ್‌ ಪ್ರತಿಪಾದಿಸಿದ ಅಂಶವನ್ನು ಇಲ್ಲಿ ಅಗತ್ಯವಾಗಿ ಗಮನಿಸಬೇಕು. ಇಡೀ ದೇಶದಲ್ಲಿರುವ ಆಂಗ್ಲೋ ಇಂಡಿಯನ್ನರ ಸಂಖ್ಯೆ ಕೇವಲ 296. ಆದರೆ ಇದನ್ನು ಮರೆಮಾಚಿ 1.5 ಲಕ್ಷ ಎಂದು ಅನಧಿಕೃತವಾಗಿ ದಾಖಲಿಸಲಾಗಿದೆ!

ನರೇಂದ್ರ ಮೋದಿ ಸರಕಾರ ಇದೀಗ ಲೋಕಸಭೆಯಲ್ಲಿ ಮಂಡಿಸಿರುವ ಸಂವಿಧಾನದ 126ನೇ ತಿದ್ದುಪಡಿ ಮಸೂದೆ ಒಂದು ಅಚ್ಚರಿಯ ಅಂಶವನ್ನೊಳಗೊಂಡಿದೆ. ಇದು ಲೋಕಸಭೆ ಹಾಗೂ ವಿವಿಧ ರಾಜ್ಯ ವಿಧಾನಸಭೆಗಳ ಸ್ಥಾನಗಳಿಗೆ ಮೀಸಲಾತಿ ಕಲ್ಪಿಸುವ ಪ್ರಕ್ರಿಯೆಗೆ ಸಂಬಂಧಿಸಿದ ಮಸೂದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಲೋಕಸಭೆ ಒಳಗೊಂಡಂತೆ ದೇಶದ ಎಲ್ಲ ಶಾಸನಸಭೆಗಳಿಗೆ ಆಂಗ್ಲೋ ಇಂಡಿಯನ್ನರನ್ನು ನಾಮಕರಣಗೊಳಿಸುವ ಕ್ರಮವನ್ನು ನಿಷೇಧಿಸಬೇಕೆಂಬ ಆಶಯವ ನ್ನೊಳಗೊಂಡ ಮಸೂದೆ.

ಆದರೂ ಈ ಸಂವಿಧಾನ ಮಸೂದೆಯ ಮುಖ್ಯ ಉದ್ದೇಶ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವ್ಯಕ್ತಿಗಳಿಗೆ ಮೀಸಲಾತಿ ಕಲ್ಪಿಸುವ ಕ್ರಮವನ್ನು ಇನ್ನೂ ಹತ್ತು ವರ್ಷಗಳವರೆಗೆ ಮುಂದುವರಿಸ ಬೇಕೆಂಬುದಾಗಿದೆ. ವಾಸ್ತವದಲ್ಲಿ ಇದೊಂದು ಮಾಮೂಲು ಕ್ರಮವಾಗಿ ಬಿಟ್ಟಿದೆ. ಯಾವುದೇ ಸರಕಾರ ಅಥವಾ ರಾಜಕೀಯ ಪಕ್ಷ ಪರಿಶಿಷ್ಟರಿಗೆ ಸಂಬಂಧಿಸಿದ ಈ ಸೌಲಭ್ಯವನ್ನು ಬದಲಾಯಿಸುವುದಕ್ಕೆ ಸಿದ್ಧವಿಲ್ಲ . ಈ ರೀತಿಯ (ಹತ್ತು ವರ್ಷಗಳ ) “ರಾಜಕೀಯ ಮೀಸಲಾತಿ’ ಉದ್ಯೋಗ ಹಾಗೂ ಶಿಕ್ಷಣ ಒದಗಣೆಗೆ ಸಂಬಂಧಿಸಿದ ಮೀಸಲಾತಿಗಿಂತ ಭಿನ್ನ. ಈ ನಡುವೆ, ಪರಿಶಿಷ್ಟ ವರ್ಗ ಹಾಗೂ ಪಂಗಡದವರಿಗೆ ಇರುವ ಮೀಸಲಾತಿಯನ್ನು ಸಾರಾಸಗಟಾಗಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ವಿಸ್ತರಿಸಬೇಕಾಗುತ್ತದೆಂಬ ತಪ್ಪು ಕಲ್ಪನೆಯೊಂದು ಜನಮಾನಸದಲ್ಲಿದೆ.

ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಆಂಗ್ಲೋ ಇಂಡಿಯ ನ್ನರನ್ನು ನಾಮಕರಣ ಸದಸ್ಯರನ್ನಾಗಿಸುವ ಸಂಪ್ರದಾಯವನ್ನು ನಿಷೇಧಿ ಸುವ/ಈ ಸೌಲಭ್ಯವನ್ನು ರದ್ದುಪಡಿಸುವ ಬಗೆಗಿನ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಕೋಲ್ಕತಾ ಕೇಂದ್ರಿತ ಅಖೀಲ ಭಾರತ ಆಂಗ್ಲೋ ಇಂಡಿಯನ್ನರ ಸಂಘದಿಂದ ಕ್ಷೀಣ ದನಿಯ ಪ್ರತಿಭಟನೆಯಷ್ಟೇ ವ್ಯಕ್ತವಾಗಿದೆ. ಸಂಘವು ಈ ಕುರಿತು ರಾಷ್ಟ್ರಪತಿ ಅವರಿಗೆ ದೂರೊಂದನ್ನು ಸಲ್ಲಿಸಲಿದೆ ಎಂದು ಆಂಗ್ಲೋ ಇಂಡಿಯನ್ನರ ಸಂಘದ ಅಧ್ಯಕ್ಷ ಬೇರಿ ಓ’ಬ್ರಿಯಾನ್‌ ಘೋಷಿಸಿದ್ದಾರೆ. ಕೇಂದ್ರದ ಇಂಥ ದೂರಗಾಮಿ ನಿರ್ಧಾರದ ವಿರುದ್ಧ ಪ್ರತಿಭಟನಾ ಪ್ರದರ್ಶನಕ್ಕಿಳಿಯಲು ಸಾಧ್ಯವಿಲ್ಲ ವೆಂಬಷ್ಟು ದುರ್ಬಲವಾಗಿದೆ ಈ ಪುಟಾಣಿ ಸ್ವರೂಪದ ಸಂಘಟನೆ.

ಬಿಜೆಪಿ ಸರಕಾರದ ಈ ನಿರ್ಧಾರ ಎರಡನೆಯ ದ್ರೋಹ ಎಂದು ಸಂಘ ಬಣ್ಣಿಸಿದೆ. ಮೊದಲನೆಯ ದ್ರೋಹ ಬ್ರಿಟಿಷರದು; ಅದು ಅವರು ದೇಶದಿಂದ ಕಾಲೆ¤ಗೆಯುವ ರೂಪದಲ್ಲಿ ನಡೆದುದು. ಸುವಿಖ್ಯಾತ ಆಂಗ್ಲೋ ಇಂಡಿಯನ್‌ ವ್ಯಕ್ತಿಯಾದ ಫ್ರಾಂಕ್‌ ಆ್ಯಂಟನಿ ಅವರ ಇದೇ ಶೀರ್ಷಿಕೆಯ (ಸೆಕೆಂಡ್‌ ಬಿಟ್ರೇಯಲ್‌) ಕೃತಿಯೊಂದನ್ನು ಕೂಡ ಪ್ರಕಟಿಸಿದ್ದಾರೆ. “ಸಂವಿಧಾನಸಭೆ’ಯ ಸದಸ್ಯರೂ 1952ರಿಂದ 1971ರವರೆಗಿನ ಅವಧಿಯಲ್ಲಿ ಲೋಕಸಭೆಯ ನಾಮಾಂಕಿತ ಸದಸ್ಯರೂ ಆಗಿದ್ದ ಆ್ಯಂಟನಿ ಅವರು ಸರ್ವೋಚ್ಚ ನ್ಯಾಯಲಯದ ಲಾಯರ್‌ ಕೂಡ ಆಗಿದ್ದವರು.

ಆಂಗ್ಲೋ ಇಂಡಿಯನ್ನರ ಸಂಘಟನೆಯ ನಡೆಗೆ ವ್ಯತಿರಿಕ್ತವಾಗಿ ಸಮುದಾಯವೊಂದರ ಕಲ್ಯಾಣ ಕ್ರಮಗಳು ಅಥವಾ ಪ್ರಾತಿನಿಧ್ಯಕ್ಕೆ ಹಾನಿ ತರುವ ಸರಕಾರಿ ನಿರ್ಧಾರಗಳನ್ನು ವಿರೋಧಿಸುವ ಹಲವಾರು ಹಿಂಸಾತ್ಮಕ ಪ್ರತಿಭಟನೆಗಳನ್ನು ಇತರ ಅನೇಕ ಹಿಂದೂ ಹಾಗೂ ಮುಸ್ಲಿಂ ಸಂಘಟ ನೆಗಳು ನಡೆಸಿರುವುದನ್ನು ನೋಡುತ್ತಾ ಬಂದಿದ್ದೇವೆ. ಉದಾಹರಣೆಗೆ ಪರಿಶಿಷ್ಟ ಜಾತಿ-ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕಾನೂನನ್ನು ದುರ್ಬಲಗೊಳಿಸಿದೆ ಎಂದು ಆಕ್ಷೇಪಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಪರಿಶಿಷ್ಟ ಸಮುದಾಯದ ಮಂದಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿದ್ದರು. ಬಳಿಕ ನ್ಯಾಯಾಲಯ ಈ ತೀರ್ಪನ್ನು ಪರಿಷ್ಕರಿಸಿತು. ಜಾಟ್‌, ಗುಜ್ಜರ್‌, ಮರಾಠಾ ಸಮುದಾಯಗಳು ಅಷ್ಟೇಕೆ ಕರ್ನಾಟಕದ ಒಕ್ಕಲಿಗ ಸಮುದಾಯ ಕೂಡ ಹಿಂದುಳಿದ ವರ್ಗಗಳವರ ಯಾದಿಯಿಂದ ತಮ್ಮನ್ನು ಕಿತ್ತು ಹಾಕಿದ್ದನ್ನು ವಿರೋಧಿಸಿ, ತಮ್ಮ ಸಮುದಾಯವನ್ನು ಈ ಯಾದಿಯಲ್ಲಿ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿ ತೀವ್ರ ಪ್ರತಿಭಟನೆ ನಡೆಸಿದ್ದರು.

ಯಾರು ನಿಜವಾಗಿ ಅಲ್ಪಸಂಖ್ಯಾತರು?
ನನ್ನ ಪ್ರಕಾರ ದೇಶದಲ್ಲಿರುವುದು ಎರಡೇ ಎರಡು ನೈಜ ಅಲ್ಪಸಂಖ್ಯಾತ ಸಮುದಾಯಗಳು. ಅವೆಂದರೆ ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್‌ ಸಮುದಾಯಗಳು. ಆಂಗ್ಲೋ ಇಂಡಿಯನ್ನರು ಇತರ ಕ್ರಿಸ್ತೀಯ ಸಮುದಾಯಗಳ ವ್ಯಾಪ್ತಿಯಲ್ಲಿ ಬರುತ್ತಾರೆ; ಧಾರ್ಮಿಕ ಅಲ್ಪಸಂಖ್ಯಾತರೆಂಬ ಉಪಾಧಿ ಮೂಲಕ ಗುರುತಿಸಲ್ಪಡುತ್ತಾರೆ ಎಂಬುದು ನಿಜ. ಅವರಲ್ಲಿ ಆರ್ಥಿಕ ಸಂಪನ್ಮೂಲಗಳ ಕೊರತೆಯಿದೆ. ಅವರಲ್ಲಿ ರಾಜಕೀಯ ಪ್ರಭಾವವೂ ಇಲ್ಲ . ಕೇಂದ್ರ ಅಥವಾ ರಾಜ್ಯ ಸರಕಾರದಲ್ಲಿ ಮಂತ್ರಿಗಿರಿಯ ಅವಕಾಶವನ್ನು ನಿರಾಕರಿಸಲಾದ ಒಂದೇ ಒಂದು ಸಮುದಾಯವೆಂದರೆ ಅದು ಆಂಗ್ಲೋ ಇಂಡಿಯನ್ನರದು. ಇದುವರೆಗೆ ಸಂಸತ್ತಿಗೆ ಚುನಾಯಿತರಾಗಿರುವುದು ಕೇವಲ ಇಬ್ಬರೇ ಇಬ್ಬರು ಆಂಗ್ಲೋ ಇಂಡಿಯನ್ನರು. ಇಂದಿನ ಲೋಕಸಭೆಯಲ್ಲಿ ಕೇರಳದ ಎರ್ನಾಕುಲಂನಿಂದ ಬಂದಿರುವ ಒಬ್ಬ ಕಾಂಗ್ರೆಸ್‌ ಸದಸ್ಯ – ಹಿಬಿ ಈಡನ್‌ ಇದ್ದಾರೆ. ಇನ್ನೊಬ್ಬ ಆಂಗ್ಲೋ ಇಂಡಿಯನ್‌ ಸಂಸದರೆಂದರೆ ಪಶ್ಚಿಮ ಬಂಗಾಲದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಡೆರೆಕ್‌ ಓ’ ಬ್ರಿಯಾನ್‌. ನಾಮಕರಣ ಸದಸ್ಯರೆನ್ನುವವರು ಇರದಿದ್ದರೆ ಈ ಸಮುದಾಯಕ್ಕೆ ಸಂಸತ್ತಿನಲ್ಲಿ ಪ್ರಾತಿನಿಧ್ಯವಿಲ್ಲವೆಂಬಂಥ ಪರಿಸ್ಥಿತಿ ಉಂಟಾಗುತ್ತದೆ.

ಕೇಂದ್ರೀಯ ಶಾಸನಸಭೆ ಅಥವಾ ಸಂಸತ್ತಿಗೆ ಆಂಗ್ಲೋ ಇಂಡಿಯನ್ನರ ನಾಮಕರಣಕ್ಕೆ ಒಂದು ಪ್ರತ್ಯೇಕ ಇತಿಹಾಸವಿದೆ. ಈ ಸಮುದಾಯಕ್ಕೆ ನಾಮಕರಣ ಸದಸ್ಯತ್ವದ ಅವಕಾಶ ಒದಗಿಸಿದ್ದು 1919ರ ಹಾಗೂ 1935ರ “ಭಾರತ ಸರಕಾರ ಕಾಯ್ದೆ’ (ಗವರ್ನಮೆಂಟ್‌ ಆಫ್ ಇಂಡಿಯಾ ಆ್ಯಕ್ಟ್). 1919ರಲ್ಲಿ ಕೋಲ್ಕತ್ತಾದ ಹೆನ್ರಿ ಗಾಡ್‌ವಿನ್‌ ಅವರನ್ನು ಕೇಂದ್ರೀಯ ಶಾಸನಸಭೆಗೆ “ಆಂಗ್ಲೋ ಇಂಡಿಯನ್ನರ ವಿಶೇಷ ಹಿತಾಸಕ್ತಿ’ ವಿಭಾಗದಡಿಯಲ್ಲಿ ನಾಮಕರಣಗೊಳಿಸಲಾಯಿತು. ಇನ್ನೊಂದು ಕುತೂಹಲಕಾರಿ ವಿಷಯವೆಂದರೆ, ಅಂದಿನ ಶಾಸನಸಭೆಗೆ ಕರ್ನಾಟಕ ದಿಂದ ನಾಮಕರಣ ಸದಸ್ಯರಾಗಿ ಪ್ರಪ್ರಥಮ ಬಾರಿಗೆ ನೇಮಿತರಾದವರು ಪ್ರೊ| ಜೆ.ಪಿ. ಕೋಟಿಲಿಂಗಂ. ಭಾರತೀಯ ಕ್ರಿಶ್ಚಿಯನ್‌ ಸಮುದಾಯದ ವಿಭಾಗದಲ್ಲಿ ಹೀಗೆ ನಾಮಾಂಕಿತರಾದ ಕೋಟಿಲಿಂಗಂ ಅವರು ಬಳ್ಳಾರಿಯ ವಾಡ್‌ಲಾ ಕಾಲೇಜಿನ ಪ್ರಾಂಶುಪಾಲರಾಗಿದ್ದವರು.

ಪಾರ್ಸಿಗಳಿಗೆ ಉತ್ತಮ ಅವಕಾಶ
ಒಂದು ರೀತಿಯಲ್ಲಿ ಪಾರ್ಸಿ ಸಮುದಾಯದವರು ಆಂಗ್ಲೋ ಇಂಡಿಯನ್ನರಿಗಿಂತ ಸ್ವಲ್ಪ ಉತ್ತಮ ಅವಕಾಶ ಪಡೆದಿದ್ದಾರೆ. ಮಿನೂ, ಮಸಾನಿ, ಪಿಲೂ, ಮೋದಿ ಅಥವಾ ಇಂದೋರ್‌ ಮೂಲದ ಕಮ್ಯುನಿಸ್ಟ್‌ ವಿಚಾರವಾದಿ ಹೋಮಿ ದಾಜಿ ಮುಂತಾದ ಗಣ್ಯ ವ್ಯಕ್ತಿಗಳು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಅವಿಭಜಿತ ಆಂಧ್ರಪ್ರದೇಶದಲ್ಲಿ ರಾಧಾ ಮಿಸಿŒ ಎಂಬ ಪಾರ್ಸಿ ಸಚಿವೆ ಇದ್ದರು. ಇನ್ನು ಕೇಂದ್ರದಲ್ಲಿ ಸಚಿವರಾಗಿ ಅವಕಾಶ ಪಡೆದ ಏಕೈಕ ಪಾರ್ಸಿ ಮಹನೀಯರೆಂದರೆ, ಸಿ.ಎಚ್‌. ಭಾಭಾ ಅವರು. ಅದೂ ಕೇವಲ ಐದು ವಾರಗಳ ಮಟ್ಟಿಗೆ ! ಪ್ರಖರ ಮಾತುಗಾರರಾಗಿದ್ದ ಕಾಂಗ್ರೆಸ್‌ ನಾಯಕ ಖುರ್ಷಿದ್‌ (ವೀರ್‌) ನಾರಿಮನ್‌ ಅವರಿಗೆ ಅವಿಭಜಿತ ಬಾಂಬೆ ಪ್ರಾಂತ್ಯದ ಮುಖ್ಯಮಂತ್ರಿ ಪದವಿಯ ಅವಕಾಶ ತಪ್ಪಿಹೋದುದು ಅವರ ದುರದೃಷ್ಟವೆಂದೇ ಹೇಳಬೇಕು. ಆದರೂ ಸ್ವಾತಂತ್ರ್ಯಪೂರ್ವ ದಿನಗಳಲ್ಲಿ ಇನ್ನೋರ್ವ ಪಾರ್ಸಿ, ವೈದ್ಯ ಎಂ.ಡಿ. ಗಿಲ್ಬರ್ಟ್‌ ಅವರು ಬಾಂಬೆ ಪ್ರಾಂತ್ಯದಲ್ಲಿ ಕಾಂಗ್ರೆಸ್‌ ಸಚಿವರಾಗಿದ್ದರು. ಭೂತಪೂರ್ವ ಸಂವಿಧಾನ ಸಭೆಯಲ್ಲಿ ಆರ್‌.ಕೆ. ಸಿಧ್ವಾ ಎಂಬ ಗಣ್ಯ ಪಾರ್ಸಿ ಸದಸ್ಯರೊಬ್ಬರಿದ್ದರು.

ಅತಿಪುಟ್ಟ ಅಲ್ಪಸಂಖ್ಯಾತ ಆಂಗ್ಲೋ ಇಂಡಿಯನ್‌ ಸಮುದಾಯದ ಮೇಲೆ ಮೋದಿ ಸರಕಾರದ ಅಸಂತೋಷಕ್ಕೆ ಏನು ಕಾರಣ ಎಂದು ವಿಶ್ಲೇಷಿಸುವುದು ಕಷ್ಟಕರವೇ. ಬಹುಶಃ ತೃಣಮೂಲ ಪಕ್ಷದ ಡೆರೆಕ್‌ ಓ’ ಬ್ರಿಯಾನ್‌ ಅವರು ಸಂಸತ್ತಿನ ಒಳಗೆ ಹಾಗೂ ಹೊರಗಡೆ ನೀಡುತ್ತಾ ಬಂದಿರುವ ಕಟು ವಾಗ್ಧಾಳಿಗಳೇ ಇದಕ್ಕೆ ಪ್ರೇರಣೆ ನೀಡಿರಬೇಕು. ಓ’ ಬ್ರಿಯಾನ್‌ ಅವರು ಈ ಹಿಂದೆ ಪ್ರಧಾನಿಯನ್ನು “ಗುಜರಾತಿನ ಕಟುಕ” ಎಂದು ಬಣ್ಣಿಸಿದ್ದರು. ತಮ್ಮ ಪಕ್ಷದ ನಾಯಕಿಯಾದ ಮಮತಾ ಬ್ಯಾನರ್ಜಿಯವರನ್ನು ಖುಷಿಪಡಿಸುವುದೇ ಅವರ ಇಂಥ ಹರಿತ ಹೇಳಿಕೆಯ ಹಿಂದಿನ ಉದ್ದೇಶವಾಗಿದ್ದಿರಬಹುದು. ಆಂಗ್ಲೋ ಇಂಡಿಯನ್‌ ಸಮುದಾಯದ ಮೇಲೆ ಸಾರಾಸಗಟಾಗಿ ಅಸಮಾಧಾನಗೊಳ್ಳಲು ಬಿಜೆಪಿಗೆ ಇಂಥ ಹೇಳಿಕೆಯೇ ಒಂದು ದೊಡ್ಡ ಕಾರಣವಾಯಿತೇನೋ.

ಲೋಕಸಭೆಯಲ್ಲಿ ಇಬ್ಬರು ನಾಮಾಂಕಿತ ಸದಸ್ಯರನ್ನು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಒಬ್ಬೊಬ್ಬ ಸದಸ್ಯರನ್ನು ಹೊಂದಿರುವುದಕ್ಕೆ ಕಾರಣ ಈ ಸಮುದಾಯದ ಜನಸಂಖ್ಯೆಯ ದೃಷ್ಟಿಯಿಂದ ತುಂಬಾ ಚಿಕ್ಕದು ಎನ್ನುವುದಾದರೆ, ಭೌಗೋಳಿಕವಾಗಿ ತುಂಬಾ ಚಿಕ್ಕ ಪ್ರದೇಶಗಳಾದ ಲಕ್ಷದ್ವೀಪ, ಅಂಡಮಾನ್‌ – ನಿಕೋಬಾರ್‌ ಹಾಗೂ ದಾದ್ರಾ-ನಗರ್‌ಹವೇಲಿಗಳೂ ಲೋಕಸಭೆಯಲ್ಲಿ ತಲಾ ಒಬ್ಬ ಸದಸ್ಯನನ್ನು ಹೊಂದಿವೆ ಎಂದೂ ವಾದಿಸಬಹುದಾಗಿದೆ. ಬಿಜೆಪಿ ಸರಕಾರ ಎಷ್ಟೋ ತಿಂಗಳುಗಳ ಹಿಂದೆಯೇ ಆಂಗ್ಲೋ ಇಂಡಿಯನ್ನರ ನಾಮಕರಣ ಸದಸ್ಯತ್ವದ ಸಂಪ್ರದಾಯವನ್ನು ಕೈಬಿಡಲು ತೀರ್ಮಾನಿಸಿತ್ತು. ಹಾಗೆಂದೇ 17ನೆಯ ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್‌ ಸದಸ್ಯರನ್ನು ನಾಮಾಂಕಿತ ಗೊಳಿಸಲಾಗಿಲ್ಲ. ಈ ಹಿಂದಿನ ಲೋಕಸಭೆಯಲ್ಲೂ ಅವರನ್ನು ನಾಮಕರಣಗೊಳಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗಿತ್ತು. ಆದರೂ ಹಿಂದಿನ ಲೋಕಸಭೆ ಅಸ್ತಿತ್ವಕ್ಕೆ ಬಂದ 1 ವರ್ಷದ ಬಳಿಕ ಜಾರ್ಜ್‌ ಬೇಕರ್‌, ರಿಚರ್ಡ್‌ ಹೇ ಅವರನ್ನು ನಾಮಕರಣ ಸದಸ್ಯರನ್ನಾಗಿ ಸ್ವೀಕರಿಸಲಾಯಿತು.

ತಿದ್ದುಪಡಿ ಮಸೂದೆಯನ್ನು ಮಂಡಿಸುವ ವೇಳೆ ಕೇಂದ್ರದ ಕಾನೂನು ಸಚಿವ ರವಿಶಂಕರ್‌ಪ್ರಸಾದ್‌ ಪ್ರತಿಪಾದಿಸಿದ ಅಂಶವನ್ನು ಇಲ್ಲಿ ಅಗತ್ಯವಾಗಿ ಗಮನಿಸಬೇಕು. ಇಡೀ ದೇಶದಲ್ಲಿರುವ ಆಂಗ್ಲೋ ಇಂಡಿಯನ್ನರ ಸಂಖ್ಯೆ ಕೇವಲ 296. ಆದರೆ ಇದನ್ನು ಮರೆಮಾಚಿ 1.5 ಲಕ್ಷ ಎಂದು ಅನಧಿಕೃತವಾಗಿ ದಾಖಲಿಸಲಾಗಿದೆ! ಈ ನಡುವೆ ಕೇರಳದ ನಾಮಾಂಕಿತ ಸಂಸದ, ಹಿಬಿ ಈಡನ್‌ ಅವರು ಆಂಗ್ಲೋ ಇಂಡಿಯನ್ನರ ಆರ್ಥಿಕ ಹಾಗೂ ಸಾಮಾಜಿಕ ಗತಿ-ಸ್ಥಿತಿ ಕುರಿತಂತೆ ಸತ್ಯಶೋಧಾಧ್ಯಯನ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಆಂಗ್ಲೋ ಇಂಡಿಯನ್ನರನ್ನು ಅನುಕೂಲವಂತ ವರ್ಗ ಎಂದು ವರ್ಗೀಕರಿಸುವುದು ತಪ್ಪು ಎಂಬ ಅವರ ಮಾತು ನ್ಯಾಯೋಚಿತವಾದದ್ದೇ . ಸ್ವಾತಂತ್ರ್ಯ ಸಿಕ್ಕ ಬಳಿಕ, ಅಂದರೆ ಬ್ರಿಟಿಶ್‌ ಆಡಳಿತ ಇಲ್ಲಿ ಕೊನೆಗೊಂಡ ಬಳಿಕ ಆಂಗ್ಲೋ ಇಂಡಿಯನ್‌ ಸಮುದಾಯದ ಅನುಕೂಲವಂತರೆಲ್ಲ ಉತ್ತಮ ಜೀವನಾವಕಾಶವನ್ನು ಅರಸಿ ಇಂಗ್ಲೆಂಡ್‌, ಕೆನಡ, ಆಸ್ಟ್ರೇಲಿಯಾ ಮತ್ತಿತರ ರಾಷ್ಟ್ರಗಳಿಗೆ ವಲಸೆ ಹೋದರು. ಕೇವಲ ಬಡವರಷ್ಟೇ ಭಾರತದಲ್ಲಿ ಉಳಿದರು.

ಬೆಂಗಳೂರಿನಂಥ ನಗರಗಳಲ್ಲಿ ಆಂಗ್ಲೋ ಇಂಡಿಯನ್‌ ಪ್ರಜೆಗಳು ಹಳೇ ಕಂಟೋನ್ಮೆಂಟ್‌ ಪ್ರದೇಶಗಳಲ್ಲಿದ್ದ ತಮ್ಮ ಪ್ರತಿಷ್ಠಿತ ಆಸ್ತಿಪಾಸ್ತಿಗಳನ್ನು ಈಗಾಗಲೇ ಕಳೆದುಕೊಂಡಾಗಿದೆ. ಇಲ್ಲಿ ಕೆಲ ಕುಟಿಲ ಕಾರಸ್ಥಾನಿಗಳು ಇವರುಗಳ ಆಸ್ತಿಗಳನ್ನು ಬಾಚಿಕೊಂಡರು; ಅನಧಿಕೃತವಾಗಿ ಆಕ್ರಮಿಸಿಕೊಂಡರು. ಕ್ರಿಶ್ಚಿಯನ್‌ ಅಲ್ಪಸಂಖಾತರು ಇಂದು ನಡೆಸುತ್ತಿರುವ ತಥಾಕಥಿತ ಆಂಗ್ಲೋ ಇಂಡಿಯನ್‌ ಸ್ಕೂಲ್‌ಗ‌ಳಲ್ಲಿ ಆಂಗ್ಲೋ ಇಂಡಿಯನ್‌ ಶಿಕ್ಷಕರೂ ಇಲ್ಲ , ಮಕ್ಕಳೂ ಇಲ್ಲ !

ರೈಲ್ವೇ ಇಲಾಖೆ ಹಾಗೂ ಅಂಚೆ-ತಂತಿ ಇಲಾಖೆಯಲ್ಲಿ ಆಂಗ್ಲೋ ಇಂಡಿಯನ್ನರಿಗಾಗಿ ಹುದ್ದೇ ಮೀಸಲಾತಿ ವ್ಯವಸ್ಥೆಯಿತ್ತು; ಆದರೆ ಅದನ್ನು ರದ್ದು ಮಾಡಲಾಯಿತು. ಈ ಮೂಲಕ ಈ ಸಮುದಾಯದ ಜೀವನೋಪಾಯಕ್ಕೆ ಭಾರೀ ಹೊಡೆತ ಬಿದ್ದಂತಾಯಿತು. ಈ ಸಮುದಾಯದ ಯುವಕ ಯುವತಿಯರು ಉನ್ನತ ಶಿಕ್ಷಣದ ಮೇಲೆ ತೋರಿದ ನಿರ್ಲಕ್ಷ್ಯದ ಫ‌ಲವನ್ನು ಅವರಿಂದು ಅನುಭವಿಸುತ್ತಿದ್ದಾರೆ. ಇಂದು ಕೂಡ ವೃತ್ತಿಪರ ಶಿಕ್ಷಣ ನೀಡುವ ಕಾಲೇಜುಗಳಲ್ಲಿ ಅವರಿಗೆ ಮೀಸಲಾಗಿರುವ ಸೀಟುಗಳಿವೆ. ಬಹುಶಃ ಅವು ಇತರರಿಂದ ಖರೀದಿಸ ಲ್ಪಡುತ್ತಿರಬಹುದು. ಹಿಂದೆ ಬೆಂಗಳೂರಿನ ಇಂಗ್ಲಿಷ್‌ ದೈನಿಕಗಳಲ್ಲಿ, ಆಂಗ್ಲೋ ಇಂಡಿಯನ್‌ ಪತ್ರಕರ್ತರಿದ್ದರು. ಅದರಲ್ಲೂ ವಿಶೇಷವಾಗಿ ಕ್ರೀಡಾ ವಿಭಾಗಗಳಲ್ಲಿ . ಅಂಥವರು ಇಂದು ಕಾಣಿಸುತ್ತಿಲ್ಲ .

ಅಂದು ಕುದುರೆ ರೇಸ್‌ಗಳ ಬಗ್ಗೆ ಚೆನ್ನಾಗಿ ಬರೆಯಬಲ್ಲ ಅಥವಾ ರೇಡಿಯೋದಲ್ಲಿ ಕಾಮೆಂಟರಿ ನೀಡಬಲ್ಲ ಎಲ್‌.ಎ. ಡೋಹರ್ಟಿ, ಲೆಸ್ಲಿ ವಿಲ್ಸನ್‌, ರಾನ್‌ ಹೆಂಡ್ರಿಕ್ಸ್‌ ಹಾಗೂ ಡೆನಿjಲ್‌ ಲ’ ಟೊಯ್ಲಿ ಮುಂತಾದವರಿದ್ದರು. ಸಿಡ್ನಿ ಸ್ಮಿತ್‌ ಎಂಬುವರು ತಮ್ಮ ಅದ್ಭುತ ವಾಗಾjಲದಿಂದ ಖ್ಯಾತರಾಗಿದ್ದರು.

ಬೆಂಗಳೂರು ಕೆಲ ಪ್ರಖ್ಯಾತ ಆಂಗ್ಲೋ ಇಂಡಿಯನ್ನರ ಪಾಲಿಗೆ ಸ್ವಂತ ಊರೇ ಎಂಬಂತಿದ್ದ ದಿನಗಳಿದ್ದವು. “ಸ್ಟ್ರೇಸಿ ಸೋದರ’ರೆಂದೇ ಪರಿಚಿತ ರಾಗಿದ್ದ ಐಸಿಎಸ್‌ ಅಧಿಕಾರಿ ರಾಲ್ಫ್ ಸ್ಟ್ರೇಸಿ ಹಾಗೂ ಮದ್ರಾಸ್‌ ಪ್ರಾಂತ್ಯದ ಪೊಲೀಸ್‌ ಮುಖ್ಯಾಧಿಕಾರಿಯಾಗಿದ್ದ ಎರಿಕ್‌ ಸ್ಟ್ರೇಸಿ ಇದ್ದುದು ಬೆಂಗಳೂರಿ ನಲ್ಲೇ.

ಇನ್ನೋರ್ವ ಗಣ್ಯ ಆಂಗ್ಲೋ ಇಂಡಿಯನ್‌, ಕರ್ನಲ್‌ ಸಿರಿಲ್‌ ಬ್ರಿಟಿಶ್‌ ಭಾರತೀಯ ಸೇನೆಯ ಸೇವೆಯಿಂದ ಹೊರಬಿದ್ದು ಸುಭಾಶ್ಚಂದ್ರ ಬೋಸರ ಐಎನ್‌ಎ (ಇಂಡಿಯನ್‌ ನ್ಯಾಶನಲ್‌ ಆರ್ಮಿ)ಗೆ ಸೇರ್ಪಡೆ ಗೊಂಡರು. ದಕ್ಷಿಣ ಭಾರತದ ವನ್ಯಜೀವಿಗಳ ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದ ವಿಶ್ವವಿಖ್ಯಾತ “ಶಿಕಾರಿ’ ಲೇಖಕ ಕೆನೆತ್‌ ಆ್ಯಂಡರ್‌ಸನ್‌ ಇದ್ದುದು ಬೆಂಗಳೂರಿನಲ್ಲೇ . ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಇನ್ನೊಬ್ಬ ಆ್ಯಂಡರ್‌ಸನ್‌ ಇದ್ದರು – ಡಿಐಜಿ ಆಗಿ ಸೇವೆ ಸಲ್ಲಿಸಿದ್ದರು. ಈಚಿನ ವರ್ಷಗಳಲ್ಲಿ ಕರ್ನಾಟಕದ ವಿಧಾನಸಭಾ ಸದಸ್ಯರಾಗಿ ನಾಮಕರಣ ಗೊಂಡವರೆಂದರೆ (ದಿವಂಗತ) ಜೋಸ್‌ ಫೆರ್ನಾಂಡಿಸ್‌ (ಜನತಾದಳ) ಹಾಗೂ ಡೆರೆಕ್‌ ಫ‌ುಲಿನ್‌ಫಾ (ಬಿಜೆಪಿ). ಇಬ್ಬರೂ ಅದ್ಭುತ ವಾಕ³ಟುಗಳು.

ಸಿರಿವಂತಿಕೆಯ ಹಿನ್ನಲೆಯಿದ್ದ ಆಂಗ್ಲೋ ಇಂಡಿಯನ್ನರುಗಳ ಬಗೆಗೊಂದು ಆಕ್ಷೇಪವಿದೆ. ಅದೆಂದರೆ, ಇಂಥ ಶ್ರೀಮಂತ ಕುಳಗಳು ಬ್ರಿಟಿಶ್‌ ಆಡಳಿತಕ್ಕಿಂತಲೂ ಹೆಚ್ಚು ನಿಷ್ಠೆಯಿಂದ ಇದ್ದುದು ಇಲ್ಲಿನ ರಾಜ ಮಹಾರಾಜರುಗಳಿಗೆ! ಇದೇ ವೇಳೆ ಇಡೀ ಸಮುದಾಯಕ್ಕೆ ಸಂಬಂಧಿಸಿ ಕೇಳಿ ಬರುವ ಆಕ್ಷೇಪವೆಂದರೆ, ಆಂಗ್ಲೋ ಇಂಡಿಯನ್ನರಿಗೆ ಸ್ವತಂತ್ರ ಭಾರತದೊಂದಿಗೆ ಹೊಂದಾಣಿಕೆ ಸಾಧ್ಯವಾಗಲಿಲ್ಲವೆಂಬುದು. ಆದರೂ ಸಂಸತ್ತು ಅಥವಾ ರಾಜ್ಯ ವಿಧಾನಸಭೆಗಳಲ್ಲಿ ಅವರಿಗೆ ಸಲ್ಲಬೇಕಿದ್ದ ಪ್ರಾತಿನಿಧ್ಯವನ್ನು ರದ್ದುಗೊಳಿಸುವುದಕ್ಕೆ ಮೇಲೆ ಹೇಳಿದ “ಹೊಂದಾಣಿಕೆಯ ತೊಡಕು’ ಒಂದು ಕಾರಣವಾಗಕೂಡದು.

– ಅರಕೆರೆ ಜಯರಾಮ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ