ಜಾತಿ ಜಗಳದ ಅಂಗಳವಾಗುತ್ತಿದೆಯೇ ಕರ್ನಾಟಕ?

Team Udayavani, Sep 27, 2019, 5:20 AM IST

ಅತ್ಯಂತ ಕಳವಳಕಾರಿ ಸಂಗತಿಯೆಂದರೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡೂ ಡಿಕೆಶಿ ಬಂಧನದ ಪ್ರಸಂಗದ ಲಾಭ ಪಡೆಯಲು ಪ್ರಯತ್ನಿಸಿವೆ. ಅರ್ಥಾತ್‌ ಚುನಾವಣೆಯಲ್ಲಿ ಸೋತ ಕ್ಷೇತ್ರಗಳನ್ನು ಮರಳಿ ಬುಟ್ಟಿಗೆ ಹಾಕಿಕೊಳ್ಳಲು ಇದರಿಂದ ಸುಲಭವಾದೀತೆಂಬ ಲೆಕ್ಕಾಚಾರ ಅವುಗಳದು. ಆದರೆ ತಮ್ಮ ಈ ಪ್ರಯತ್ನದಿಂದ ಸಾಮಾಜಿಕ ಶಾಂತಿ-ಸಾಮರಸ್ಯಕ್ಕೆ ಹಾನಿಯುಂಟಾದರೆ, ಆ ಪ್ರಮಾದದ ಹೊಣೆಯನ್ನು ಅವು ತಪ್ಪಿಸಿಕೊಳ್ಳುವಂತಿಲ್ಲ.

ಕರ್ನಾಟಕದಲ್ಲಿ ಈಗ ಜಾತಿ ವಿಷಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಅಶುಭ ಸೂಚಕವಾಗಿವೆ; ರಾಜ್ಯದಲ್ಲಿ ಜಾತಿ ಜಗಳಗಳು ಸ್ಫೋಟಗೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿವೆ. ಸಕಾರಾತ್ಮಕವಾಗಿ ಚಿಂತಿಸಬಲ್ಲ ಯಾವನೇ ಮನುಷ್ಯ ಕೂಡ ಕರ್ನಾಟಕದಲ್ಲಿ ಜಾತಿ ಕಲಹಗಳು ಹುಟ್ಟಿಕೊಳ್ಳುವ ಅಪಾಯದ ಬಗ್ಗೆ ಜಾಗೃತನಾಗಿರಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಜಾತಿ ಜಗಳಗಳು ಕರ್ನಾಟಕದಲ್ಲಿ ನಡೆಯಲು ಯಾರೂ ಅವಕಾಶ ನೀಡಕೂಡದು.

ಬಿಹಾರದಲ್ಲಿ ರಜಪೂತರು ಹಾಗೂ ಭೂಮಿಹಾರರ ನಡುವೆ, ಹಾಗೆಯೇ ರಾಜಸ್ಥಾನ ಮತ್ತು ಹರಿಯಾಣಗಳಲ್ಲಿ ಜಾಟ್‌ ಸಮುದಾಯ ಹಾಗೂ ಗುಜ್ಜಾರ್‌ ಸಮುದಾಯಗಳ ನಡುವೆ ನಡೆಯುತ್ತಿರುವಂಥ ಜಾತಿ ಘರ್ಷಣೆಗಳು ಇಲ್ಲಿ ನಡೆಯಲು ಅವಕಾಶ ದೊರೆಯಕೂಡದು.

ಎಲ್ಲಕ್ಕಿಂತ ಮೊದಲಿಗೆ, ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಪ್ಪು ಹಣ ಬಿಳಿ ಮಾಡುವ ವ್ಯವಹಾರದ ಆರೋಪದಲ್ಲಿ ಬಂಧಿಸಿದ್ದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಒಕ್ಕಲಿಗರ ಸಮುದಾಯದವರು ಪ್ರತಿಭಟನಾ ರ್ಯಾಲಿ ನಡೆಸಿದ್ದನ್ನು ಇಲ್ಲಿ ಉಲ್ಲೇಖೀಸಬೇಕು. ಎಲ್ಲರಿಗೂ ತಿಳಿದಿರುವಂತೆ ಈ ರ್ಯಾಲಿ ಹಾಗೂ ಪ್ರತಿಭಟನಾ ಪ್ರದರ್ಶನಗಳಿಗೆ ಕಾರಣ ಡಿಕೆಶಿ ಒಕ್ಕಲಿಗ ಸಮಾಜದವರೆಂಬುದು, ಕಳೆದ ಕೆಲ ವರ್ಷಗಳಿಂದ ಪ್ರಮುಖ ರಾಜಕಾರಣಿಯಾಗಿ ಬೆಳೆದು ಬಂದವರೆಂಬುದು. ಇಲ್ಲಿ ಹೇಳಬೇಕಾದ ಮಾತೆಂದರೆ ಪ್ರತಿಯೊಂದು ಜಾತಿಯಲ್ಲೂ ವಿವಿಧ ವೃತ್ತಿ ಕ್ಷೇತ್ರಗಳಿಗೆ ಹಾಗೂ ಹವ್ಯಾಸಗಳಿಗೆ ಸೇರಿದ ನಾಯಕರಿದ್ದಾರೆ. ರಾಜಕೀಯ ನಾಯಕರೂ ಇವರಲ್ಲಿ ಸೇರಿದ್ದಾರೆ. ಏನಿದ್ದರೂ ಕೆಲ ಹಿಂದೂ ಸಮುದಾಯಕ್ಕೆ ಸೇರಿದ ಜಾತಿ-ಪಂಗಡಗಳವರು ಅದೇ ರೀತಿ ಮುಸ್ಲಿಂ ಸಮುದಾಯದವರಲ್ಲಿ ಕೆಲವರು ಕೂಡ ತಮ್ಮ ಜಾತಿಯ ಪ್ರಮುಖ ರಾಜಕಾರಣಿಗಳನ್ನು ತಮ್ಮ ಸಮಾಜದ ಅಗ್ರಗಣ್ಯ ಮುಖಂಡರೆಂದು ಪರಿಗಣಿಸುತ್ತಾರೆ; ಏಕೆಂದರೆ ಈ ನಾಯಕರುಗಳು ಪ್ರಭಾವಶಾಲಿ ಕುಳಗಳು; ವಿಶೇಷವಾಗಿ ಅಧಿಕಾರದಲ್ಲಿರುವ ಸಂದರ್ಭದಗಳಲ್ಲಿ. ಮುಖಂಡನೆನಿಸಿಕೊಳ್ಳಬೇಕಾದರೆ ರಾಜಕೀಯ ಅಧಿಕಾರದ ಪ್ರದರ್ಶನದ ಜೊತೆಗೆ ತನ್ನ ಸಂಪತ್ತಿನ ದೌಲತ್ತನ್ನು ಪ್ರದರ್ಶಿಸಬೇಕಾಗುತ್ತದೆ. ಅತ್ಯಂತ ಕಳವಳಕಾರಿ ಸಂಗತಿಯೆಂದರೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡೂ ಡಿಕೆಶಿ ಬಂಧನದ ಪ್ರಸಂಗದ ಲಾಭ ಪಡೆಯಲು ಪ್ರಯತ್ನಿಸಿವೆ. ಅರ್ಥಾತ್‌ ಚುನಾವಣೆಯಲ್ಲಿ ಸೋತ ಕ್ಷೇತ್ರಗಳನ್ನು ಮರಳಿ ಬುಟ್ಟಿಗೆ ಹಾಕಿಕೊಳ್ಳಲು ಇದರಿಂದ ಸುಲಭವಾದೀತೆಂಬ ಲೆಕ್ಕಾಚಾರ ಅವುಗಳದು. ಆದರೆ ತಮ್ಮ ಈ ಪ್ರಯತ್ನದಿಂದ ಸಾಮಾಜಿಕ ಶಾಂತಿ-ಸಾಮರಸ್ಯಕ್ಕೆ ಹಾನಿಯುಂಟಾದರೆ, ಆ ಪ್ರಮಾದದ ಹೊಣೆಯನ್ನು ಅವು ತಪ್ಪಿಸಿಕೊಳ್ಳುವಂತಿಲ್ಲ.

ಇನ್ನೂ ಒಂದು ಸಮಸ್ಯೆಯಿದೆ. ಭ್ರಷ್ಟ ವ್ಯಕ್ತಿಗಳನ್ನು ಹೀರೋಗಳೆಂದು ಪರಿಗಣಿಸುವವರು, ರಾಜಕಾರಣಿಗಳೆಲ್ಲ ಭ್ರಷ್ಟರಾಗಿದ್ದು ಧನದೌಲತ್ತಿನ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕೆಂದು ನಿರೀಕ್ಷಿಸುವವರು ಅನೇಕರಿದ್ದಾರೆ. ಕೆಲವರಂತೂ ಸಾರ್ವಜನಿಕ ಜೀವನದಲ್ಲಿ ಶುದ್ಧ ಹಸ್ತರಾಗಿ ರುವವರನ್ನು ಲೇವಡಿ ಮಾಡುತ್ತಲೇ ಇರುತ್ತಾರೆ. ನಮ್ಮ ಮಾಜಿ ಸಚಿವ ಪ್ರೊ| ಎ. ಲಕ್ಷ್ಮೀಸಾಗರ್‌ ಅವರನ್ನು “ಬ್ಯೂರೋಕ್ರಾಟ್‌ ರಾಜಕಾರಣಿ’ ಎಂದು ಕೆಲವರು ತಮಾಷೆ ಮಾಡುತ್ತಿದ್ದುದಿತ್ತು. ಕಾರಣ, ನೂರಕ್ಕೆ ನೂರರಷ್ಟು ಪ್ರಾಮಾಣಿಕರಾಗಿದ್ದ ದಿವಂಗತ ಲಕ್ಷ್ಮೀಸಾಗರ್‌ ಅವರು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾಗ ನೀತಿ- ನಿಯಮಾವಳಿಯಿಂದ ದೂರ ಸರಿಯುತ್ತಿರಲಿಲ್ಲ. ಅವರು ತಮ್ಮ ಸರಳ ಜೀವನಶೈಲಿಯ ಕಾರಣದಿಂದಲೂ ಸುಪರಿಚಿತ ರಾಗಿದ್ದವರು.

ಈ ನಡುವೆ ಗಮನಿಸಬೇಕಾದ ಆಶ್ಚರ್ಯಕರ ವಿದ್ಯಮಾನವೆಂದರೆ ಕೆಲ ಲಿಂಗಾಯತ ಮಠಾಧಿಪತಿಗಳು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ವಿಷಯದಲ್ಲಿ “ಸಂಬಂಧಪಟ್ಟವರಿಗೆ’ ಎಚ್ಚರಿಕೆ ನೀಡಿರುವುದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಅಥವಾ ಅವರನ್ನು “ಪ್ರಚೋದಿಸಿದರೆ’ ತಾವೆಲ್ಲ ಬೀದಿಗಿಳಿದೇವು ಎಂದು ಈ ಮಠಾಧಿಪತಿಗಳು ಬೆದರಿಕೆ ಹಾಕಿದ್ದಾರೆ. ಯಡಿಯೂರಪ್ಪನವರು ಮುಂದಿನ ಚುನಾವಣೆ ಯವರೆಗೂ ಮುಖ್ಯಮಂತ್ರಿಯಾಗಿ ಉಳಿಯಬೇಕು ಎಂದು ಈ ಸ್ವಾಮೀಜಿಗಳಲ್ಲೊಬ್ಬರು ಆಗ್ರಹಿಸಿದ್ದಾರೆ. ಅವರನ್ನು ಪದಚ್ಯುತಿ ಗೊಳಿಸಿದರೆ “ಮೂರು ಸಾವಿರ ಮಠಾಧಿಪತಿಗಳು ದಿಲ್ಲಿಗೆ ಮುತ್ತಿಗೆ ಹಾಕಲಿದ್ದಾರೆ’ ಎಂದಿದ್ದಾರೆ ಈ ಸ್ವಾಮೀಜಿಗಳು. ಕಲಬುರ್ಗಿಯಲ್ಲಿ ಸೆ. 17ರಂದು ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಗಳಲ್ಲಿ ನೀಡಲಾಗಿರುವ ಎಚ್ಚರಿಕೆ ಇದು “ಕಲ್ಯಾಣ ಕರ್ನಾಟಕ ಉತ್ಸವ’, ಇಂಥ ಘೋಷಣೆಯನ್ನು ಮೊಳಗಿಸಲಾದ ಸಾರ್ವಜನಿಕ ಸಮಾರಂಭಗಳಲ್ಲಿ ಒಂದು. ನಿಜಕ್ಕೂ ಅಚ್ಚರಿಯ ಸಂಗತಿಯೆಂದರೆ ಲಿಂಗಾಯತ ಮಠಾಧಿಪತಿಗಳು ಅಥವಾ ಆ ಸಮುದಾಯದ ಧಾರ್ಮಿಕ ಮುಂದಾಳುಗಳು ಕರ್ನಾಟಕದ ಅತಿಗಣ್ಯರ ಹಾಗೂ ಪ್ರಬುದ್ಧರ ಸಾಲಿನಲ್ಲಿರುವವರ ಹೆಚ್ಚಿನ ಮಠಗಳಿಗೆ ಸುದೀರ್ಘ‌ ಇತಿಹಾಸವಿದೆ. ಮಠಾಧಿಪತಿಗಳಾಗಿ ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿರುವ ದಾಖಲೆಯನ್ನೂ ಈ ಧಾರ್ಮಿಕ ಮುಂದಾಳುಗಳು ಹೊಂದಿದ್ದಾರೆ. ಸಮುದಾಯದಿಂದಲೂ ಉನ್ನತ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಇವರುಗಳು ಇತ್ತೀಚಿನ ವರ್ಷಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ಪೀಠಾಧಿಪತಿಗಳಂತೆ ಅಲ್ಲ. ಹಾಗೆ ನೋಡಿದರೆ ಈಚಿನ ವರ್ಷಗಳಲ್ಲಿ ಸ್ಥಾಪನೆಗೊಂಡ ಮಠ-ಪೀಠಗಳ ಅಧಿಪತಿಗಳು ಹಿಂದಿನ ಧಾರ್ಮಿಕ ಸಂಸ್ಥೆಗಳ ಆಚಾರ ವಿಚಾರಗಳನ್ನು ಅನುಸರಿಸುತ್ತಿದ್ದವರೇ.

ಇಲ್ಲಿ ಒತ್ತಿ ಹೇಳಬೇಕಾದ ಮಾತೆಂದರೆ, ಯಾವುದೇ ಹಿಂದೂ ಮಠ, ಬ್ರಾಹ್ಮಣ, ವೀರಶೈವ ಅಥವಾ ಲಿಂಗಾಯತ, ಒಕ್ಕಲಿಗ, ಕುರುಬ ಅಥವಾ ಇತರ ಯಾವುದೇ ನಿರ್ದಿಷ್ಟ ಜಾತಿಗೆ ಸೇರಿದ್ದು ಎನ್ನಲು ಸಾಧ್ಯವಿಲ್ಲ. ಒಂದು ನಿರ್ದಿಷ್ಟ ಜಾತಿ- ಪಂಗಡದೊಳಗೆ ಅವರಿಗೆ ನಿಷ್ಠರಾಗಿರುವ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿರಬಹುದು, ಅದು ಬೇರೆ ಮಾತು. ಮಠಗಳು ಯಾವುದೇ ರೀತಿಯಲ್ಲಿ (ಉದಾಹರಣೆಗೆ ದಾಸೋಹ/ಭೋಜನದ ವಿಚಾರದಲ್ಲಿ) ಯಾವುದೋ ನಿರ್ದಿಷ್ಟ ಜಾತಿಗೆ ಸೇರಿದವರಲ್ಲಿ ಹೆಚ್ಚಿನ ಒಲವು ತೋರುವ ಮೂಲಕ ಇತರ ಪಂಗಡಗಳವರ ಬಗ್ಗೆ ಭೇದವೆಣಿಸಿದಲ್ಲಿ ಇಂಥ ನಡೆಯನ್ನು ತಪ್ಪೆಂದೇ ಹೇಳಬೇಕಾಗುತ್ತದೆ. ಇಂಥ ಸಂಕುಚಿತ ಭಾವವನ್ನು ಮೀರಿ ನಿಂತ ಸೇವಾತತ್ಪರತೆಗೆ ಅತ್ಯಂತ ಶ್ರೇಷ್ಠ ಉದಾಹರಣೆಯೆಂದರೆ, ಜಾತಿ ಧರ್ಮ ಪರಿಗಣಿಸದೆ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಅನ್ನ, ವಿದ್ಯೆ ನೀಡಿದ್ದ ಸಿದ್ಧಗಂಗಾ ಮಠದ ದಿವಂಗತ ಶಿವಕುಮಾರ ಸ್ವಾಮೀಜಿ. ಅದೇ ರೀತಿ ಓರ್ವ ಬ್ರಾಹ್ಮಣ ಸಂನ್ಯಾಸಿಯಾಗಿ ಯಾವುದೇ ಧಾರ್ಮಿಕ ಸಾಮಾಜಿಕ ನಿರ್ಬಂಧ/ನಿಷೇಧಗಳನ್ನು ಲೆಕ್ಕಿಸದೆ ಸಾರ್ವಜನಿಕವಾಗಿ ಎಲ್ಲೆಡೆ ಓಡಾಡುತ್ತ ಸಮಸ್ತ ಹಿಂದೂಗಳ ಪರವಾಗಿ ಧ್ವನಿಯೆತ್ತುವ ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಸ್ವಾಮೀಜಿ.

ಒಂದು ವೇಳೆ ಡಿಕೆಶಿ ಭ್ರಷ್ಟಾಚಾರ ಅಥವಾ ಆದಾಯಕ್ಕಿಂತ ಹೆಚ್ಚಿನ ಧನಸಂಗ್ರಹದ ಆರೋಪಕ್ಕೆ ಹೊರತಾದ ಕಾರಣಕ್ಕಾಗಿ ಬಂಧನ ಕ್ಕೊಳಗಾಗಿದ್ದಲ್ಲಿ ಒಕ್ಕಲಿಗರ ಪ್ರತಿಭಟನೆಗೆ ಕೊಂಚವಾದರೂ ಸಮರ್ಥನೆ ಇರುತ್ತಿತ್ತೇನೋ. ಅವರು ಬಂಧಿಸಲ್ಪಟ್ಟಿರುವುದು ಜೆಪಿಯವರ ಆಂದೋಲನದಂಥ ಅಥವಾ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಂಥ ಹೋರಾಟಕ್ಕಾಗಿ ಅಲ್ಲ ಅಥವಾ ಸರಕಾರದಿಂದ ಅನ್ಯಾಯಕ್ಕೊಳಗಾದವರ ಪರವಾಗಿ ನಿಂತದ್ದಕ್ಕಾಗಿಯೂ ಅಲ್ಲ. ಅಥವಾ ನಕ್ಸಲೀಯರ ಪ್ರಕರಣದಲ್ಲಿ ಆಗುವಂತೆ ಸರಕಾರದ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿಯೂ ಅಲ್ಲ. ಇಂಥ ಅಪರಾಧಗಳನ್ನು ಎಸಗಿದ್ದಕ್ಕಾಗಿ ಅವರ ದಸ್ತಗಿರಿ ಯಾಗಿದ್ದಲ್ಲಿ ಅವರ ಬೆಂಬಲಿಗರು, ಪಕ್ಷದ ಸಹೋದ್ಯೋಗಿಗಳು ಅಥವಾ ಅವರ ಜಾತಿಗೆ ಸೇರಿದವರು ನಡೆಸಿದ ಪ್ರತಿಭಟನೆ ಸಮರ್ಥನೀಯ ಎನಿಸುತ್ತಿತ್ತು. ಸರಕಾರವನ್ನು ಅನೇಕ ಬಾರಿ ಸಂಕಷ್ಟಗಳಿಂದ ಪಾರು ಮಾಡಿರುವ ಅತ್ಯಂತ ಕ್ರಿಯಾಶೀಲ ಸಚಿವ, ಸಮಸ್ಯೆಗಳನ್ನು ನಿವಾರಿಸುವ ಪ್ರವೀಣ (ಟ್ರಬಲ್‌ ಶೂಟರ್‌) ಎಂಬ ಶ್ಲಾಘನೆಗೆ ಪಾತ್ರವಾಗಿರುವರಾದರೂ ವಾಸ್ತವವಾಗಿ ಶಿವಕುಮಾರ್‌ ವ್ಯವಹಾರೋದ್ಯಮ ಕುಶಲಿ ರಾಜಕಾರಣಿ; ಇಂಥ ರಾಜಕೀಯ ಪಟುಗಳು ತಮ್ಮ ವ್ಯವಹಾರೋದ್ಯಮವನ್ನು ಇನ್ನಷ್ಟು ವೃದ್ಧಿಸಿಕೊಳ್ಳುವುದಕ್ಕಾಗಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ, ಜಾತಿ ಚಿಂತನೆ ಪ್ರಬಲವಾಗಿರುವ ರಾಜ್ಯಗಳಲ್ಲಿ ಒಂದಾಗಿರುವ ತಮಿಳುನಾಡಿನಲ್ಲಿ ಕೂಡ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಬಂಧನಕ್ಕೆ ಸಂಬಂಧಿಸಿದಂತೆ ಅಲ್ಲಿನ ಚೆಟ್ಟಿಯಾರ್‌ ಸಮುದಾಯದವರು ಪ್ರತಿಭಟನೆಗೆ ಮುಂದಾಗಿಲ್ಲ ದಿರುವುದು. ಡಿಕೆಶಿಗೆ ಹೋಲಿಸಿದರೆ ಚಿದಂಬರಂ ರಾಷ್ಟ್ರೀಯ ಮಟ್ಟದ ರಾಜಕೀಯ ನಾಯಕರು; ಕೇಂದ್ರ ಸಚಿವರಾಗಿ ಅತ್ಯಂತ ಪ್ರಭಾವೀ ಹುದ್ದೆಗಳನ್ನು ನಿರ್ವಹಿಸಿದವರು. ಎಲ್ಲೋ ಅವರ ಕೆಲ ಮಿತ್ರರಷ್ಟೇ ಚಿದಂಬರಂ ಬಂಧನದ ಬಗ್ಗೆ ಆಕ್ಷೇಪವೆತ್ತಿದ್ದಾರೆ. ಅಪರಾಧ ನಡೆಸಿದ ಆರೋಪ ಸಾಬೀತುಪಡಿಸುವ ಪುರಾವೆಗಳಿಲ್ಲದಿದ್ದರೂ ನಡೆದಿರುವ ಬಂಧನ ಇದೆಂಬುದು ಇಂಥ ಕೆಲ ನಿಕಟ ಮಿತ್ರರ ಆಕ್ಷೇಪ. ಇಂಥ ಬೆರಳೆಣಿಕೆಯ ಮಿತ್ರರಲ್ಲಿ ಓರ್ವ ಪತ್ರಿಕೋದ್ಯಮಿ ಕೂಡ ಇದ್ದಾರೆ.

ರಾಜ್ಯದಲ್ಲೀಗ ಆಡಳಿತ ನಡೆಸುತ್ತಿರುವ ಬಿಜೆಪಿ ತಮ್ಮ ನಾಯಕರನ್ನೇ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಸುತ್ತಿದೆ ಎನ್ನುವ ವಿಪಕ್ಷೀಯ ನಾಯಕರ ನಿಲುವು ಕೊಂಚ ಮಟ್ಟಿಗೆ ಸಮರ್ಥನೀಯವೂ ಹೌದು. ಹಾಗೆ ನೋಡಿದರೆ ಭ್ರಷ್ಟಾಚಾರಿಗಳಿಗೆ ಜಾತಿ, ಸಮುದಾಯ ಪಕ್ಷಗಳೆಂಬ ಗಡಿಮಿತಿಗಳಿಲ್ಲ. ಅವರಲ್ಲಿರು ವುದು ವೈಯಕ್ತಿಕ ಮೆರೆದಾಟದ ಮಹತ್ವಾಕಾಂಕ್ಷೆ. ಬಿಜೆಪಿ ತನ್ನದೇ ಪಕ್ಷದ ವಿವಿಧ ಪದಾಧಿಕಾರಿಗಳಲ್ಲಿರುವ ಭ್ರಷ್ಟಾಚಾರ ಪ್ರವೀಣರನ್ನು ಕಾನೂನುಕ್ರಮದ ಕುಣಿಕೆಯಿಂದ ಬಚಾಯಿಸಿಕೊಳ್ಳಲು ಅವಕಾಶ ಮಾಡಿಕೊಡಬಾರದು. ಅವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಆದಾಯ ತೆರಿಗೆ ಅಧಿಕಾರಿಗಳಿಗೆ, ಜಾರಿ ನಿರ್ದೇಶನಾಲಯಕ್ಕೆ ಅಥವಾ ಸಿಬಿಐಗೆ ಅವಕಾಶ ಕಲ್ಪಿಸಿಕೊಡಬೇಕು.

ಒಂದು ಉದಾಹರಣೆಯೆಂದರೆ ಗಾಲಿ ಜನಾರ್ದನ ರೆಡ್ಡಿಯ ವರದು. ಅವರ ವಿರುದ್ಧದ ಪ್ರಕರಣಗಳನ್ನು ತಾರ್ಕಿಕ ಅಂತ್ಯ ಕಾಣಿಸುವ ಹಂತಕ್ಕೆ ತನಿಖಾ ಪ್ರಕ್ರಿಯೆಯನ್ನು ಒಯ್ಯುವ ಕೆಲಸವಾಗಬೇಕು. ಆಂಧ್ರಪ್ರದೇಶದ ಅರಣ್ಯಾಧಿಕಾರಿಯೊಬ್ಬರು ಜನಾರ್ದನ ರೆಡ್ಡಿಯವರ ವಿರುದ್ಧ ಕಾನೂನು ಕ್ರಮ ಪ್ರಕ್ರಿಯೆಯನ್ನು ಆರಂಭಿಸಿದವರೆಂಬ ಕಾರಣಕ್ಕಾಗಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಕಹಿಸತ್ಯವನ್ನು ಇತ್ತೀಚೆಗಷ್ಟೇ ಪ್ರಕಟವಾಗಿರುವ ವರದಿಗಳು ಬಹಿರಂಗಗೊಳಿಸಿವೆ.

ಈ ದಿನಗಳಲ್ಲಿ ಭ್ರಷ್ಟಾಚಾರಕ್ಕೆ ರಾಜಕೀಯ ಬಣ್ಣ ಬಳಿಯ ಲಾಗುತ್ತಿದೆ. ವಿಧಾನ ಮಂಡಲದ ಅಧಿವೇಶನಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಇಂಥ ಆಟವನ್ನು ನೋಡುತ್ತಾ ಇದ್ದೇವೆ. ಕೆಲ ಶಾಸಕರು ಅಥವಾ ರಾಜಕಾರಣಿಗಳು ತಮ್ಮದೇ ಜಾತಿಯ ರಾಜಕಾರಣಿಗಳ ವಿರುದ್ಧವಷ್ಟೇ ಭ್ರಷ್ಟಾಚಾರದ ಆರೋಪವನ್ನು ಮಾಡುತ್ತಿರುವುದನ್ನು ಅಗತ್ಯವಾಗಿ ಗಮನಿಸಬೇಕು. ತಮ್ಮ ಜಾತಿಗೆ ಸೇರಿರದ ಮಂತ್ರಿಯ ಬಗೆಗೋ ಅಧಿಕಾರಿಯ ಬಗೆಗೋ ಇಂಥ ಆರೋಪ ಮಾಡಿದರೆ, ಈ ಆರೋಪ ಹುರುಳಿಲ್ಲದ್ದು ಎಂದು ತಳ್ಳಿ ಹಾಕಲಾಗುತ್ತದೆ! ನಮ್ಮ ವಿಧಾನಸಭೆ, ವಿಧಾನ ಪರಿಷತ್ತು -ಎರಡು ಕಡೆಗಳಲ್ಲೂ ನಿರ್ಭೀತ ನಿಲುವಿನಿಂದ ಭ್ರಷ್ಟಾಚಾರ ಆರೋಪಗಳನ್ನು ಮಾಡುವವರು ಇಂದಿನ ದಿನಗಳಲ್ಲಿ ಇಲ್ಲವೇ ಇಲ್ಲ ಎಂಬಷ್ಟು ಅಪರೂಪ. ಫಿರೋಜ್‌ ಗಾಂಧಿಯವರನ್ನು ನೆನಪಿಸಿಕೊಳ್ಳಿ. ತಮ್ಮ ಮಾವ ಜವಾಹರಲಾಲ್‌ ಅವರ ಸರಕಾರವನ್ನೇ ತರಾಟೆಗೆ ತೆಗೆದುಕೊಳ್ಳಲು ಹಿಂದೆಮುಂದೆ ನೋಡದೆ ಇದ್ದ ಫಿರೋಜ್‌ ಗಾಂಧಿಯಂಥವರು ಇಂದು ಎಲ್ಲಿದ್ದಾರೆ? ಇಂದಿನ ಸಾಮಾನ್ಯ ರಾಜಕಾರಣಿಯಾಗಿದ್ದರೆ, ತನ್ನ ಮಾವನ ಸರಕಾರದಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲಿಕ್ಕಾಗಿ ಆತ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದ! ಈ ಹಿಂದೆ ರಾಮಕೃಷ್ಣ ಹೆಗಡೆ ಹಾಗೂ ಎ.ಕೆ. ಸುಬ್ಬಯ್ಯ (ಇವರು ಇತ್ತೀಚೆಗಷ್ಟೆ ತೀರಿಕೊಂಡರು) ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾಗ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಸಿದ್ದನ್ನು ನಾನೇ ವರದಿ ಮಾಡಿದ್ದಿದೆ.

ಹೌದು, ಎಲ್ಲರೂ ಹೇಳುವಂತೆ, “ಕಾಲ ಬದಲಾಗಿದೆ’. 30 ವರ್ಷಗಳ ಹಿಂದೆ ರಾಜೀವ್‌ ಗಾಂಧಿಯವರು ವೀರೇಂದ್ರ ಪಾಟೇಲರನ್ನು ಅನ್ಯಾಯವಾಗಿ ಮುಖ್ಯಮಂತ್ರಿ ಪದವಿಯಿಂದ ತೆಗೆದು ಹಾಕಿದಾಗ ಆ ನಿರ್ಧಾರವನ್ನು ಪ್ರತಿಭಟಿಸುವುದಕ್ಕೆ ಯಾವ ಲಿಂಗಾಯತ ಸ್ವಾಮೀಜಿಯೂ ಮುಂದೆ ಬರಲಿಲ್ಲ. ಅಥವಾ ಆ ಜಾತಿ/ಸಮುದಾಯದ ಯಾರೂ ಬೀದಿಗಿಳಿದು ಹೋರಾಟ ನಡೆಸಲಿಲ್ಲ. ಅದೇ ರೀತಿ ಇಂದಿರಾ ಗಾಂಧಿಯವರು ಎಸ್‌. ನಿಜಲಿಂಗಪ್ಪನವರ ಮೇಲೆ ಗೂಬೆ ಕೂರಿಸಿ ಅವರನ್ನು ತನ್ನ ರಾಜಕೀಯ ದಾಳಿಯ ಪರಮಗುರಿಯನ್ನಾಗಿಸಿಕೊಂಡಾಗಲೂ ಯಾರೂ ಪ್ರತಿಭಟನೆಯ ದನಿಯೆತ್ತಲಿಲ್ಲ. ಯಡಿಯೂರಪ್ಪ ಅವರ ಉಚ್ಚಾಟನೆಯೆಂಬ ಊಹಾಪೋಹದ ವಿಷಯವನ್ನು ಎತ್ತಿದ ಲಿಂಗಾಯತ ಮಠಾಧಿಪತಿಗಳು ವೈಯಕ್ತಿಕ ನೆಲೆಯಲ್ಲಿ ಯಡಿಯೂರಪ್ಪನವರ ಬೆಂಬಲಿಗರೇ, ಅಲ್ಲವೇ ಎಂಬ ವಿಷಯ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಸ್ವಾಮೀಜಿಗಳು ತಮ್ಮಷ್ಟಕ್ಕೆ ತಾವು ಸಮಾಜ ಸೇವೆಯಲ್ಲಿ ನಿರತರಾಗಿದ್ದುಕೊಂಡು (ಈ ಮೂಲಕ) ರಾಜಕೀಯ ಪಕ್ಷಗಳ ಮೇಲೆ ಪ್ರಭಾವ ಬೀರಿದರೆ ಚೆನ್ನಾಗಿರುತ್ತದೆ. ಅಥವಾ ಅವರು ರಾಜಕಾರಣವನ್ನೇ ಬಯಸುತ್ತಾರಾದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತೆ ಪೂರ್ಣ ಪ್ರಮಾಣದ ರಾಜಕಾರಣಿಗಳಾಗಬಹುದು!

ಅರಕೆರೆ ಜಯರಾಮ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಹಿಂಗಾರು ಮಾರುತಗಳ ಭರ್ಜರಿ ಪ್ರವೇಶ ದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿ ಸುತ್ತಿದೆ. ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ...

  • ಏಷಿಯಾದ ಮೊದಲ "ಬಿಪಿಎಲ್‌'ಗೆ ಭಾನುವಾರ ಪ್ರಾಯೋಗಿಕ ಚಾಲನೆ ಸಿಕ್ಕಿದೆ. ಈ ಒಂದು ಪಥ ಯಶಸ್ವಿಯಾದರೆ, ನಗರ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಿಗೆ ಮುನ್ನುಡಿ...

  • ಬೆಂಗಳೂರು: ಅಲಯನ್ಸ್‌ ವಿವಿಯ ವಿಶ್ರಾಂತ ಕುಲಪತಿ ಹಾಗೂ ರಾಜಕಾರಣಿ ಡಾ.ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ಹಾಗೂ ಸುಪಾರಿ ಹಂತಕನಿಗೆ ಉತ್ತರ...

  • ವೀರ ಸಾವರ್ಕರ್‌ಗೆ "ಭಾರತ ರತ್ನ' ನೀಡುವ ಮಹಾರಾಷ್ಟ್ರ ಬಿಜೆಪಿ ಪ್ರಣಾಳಿಕೆಯ ಅಂಶದ ಬಗ್ಗೆ ರಾಜಕೀಯ ನಾಯಕರ ವಾಕ್ಸಮರ ಭಾನುವಾರವೂ ಮುಂದುವರಿದಿದೆ. ಇದೇ ವಿಚಾರವಾಗಿ...

  • ಬೆಂಗಳೂರು: ಅನಿಷ್ಠ ಹಾಗೂ ನಿಷೇಧಿತ ದೇವದಾಸಿ ಪದ್ಧತಿಯಿಂದ ಮುಕ್ತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಗೌರವ ಹಾಗೂ ಘನತೆಯ ಬದುಕು ಕಟ್ಟಿಕೊಳ್ಳುತ್ತಿರುವ...