ಜಯಚಾಮರಾಜ ಜನ್ಮಶತಮಾನ -ನೆನಪು ನಮನ

Team Udayavani, Oct 18, 2019, 5:50 AM IST

ಒಡೆಯರ್‌ ಅವರನ್ನು ಅವರ ಕೆಲ ನಿಕಟ ಸಹಾಯಕರು ಮಾತ್ರವಲ್ಲ ಆಪ್ತ ಸಲಹಾಕಾರರೇ ನಡುನೀರಲ್ಲಿ ಕೈ ಬಿಟ್ಟರು. ಸರ್‌ ಆರ್ಕಾಟ್‌ ರಾಮಸ್ವಾಮಿ ಅವರು ತಮ್ಮದೇ ಲೆಕ್ಕಾಚಾರ ಹೊಂದಿದ್ದರು. “ಆರ್ಕಾಟ್‌ ಬಹಿಷ್ಕಾರ’ ಹಾಗೂ “ತಂಬುಚೆಟ್ಟಿ ಚಟ್ಟಕಟ್ಟಿ’ ಎಂಬ ಹಣೆಪಟ್ಟಿಗಳಲ್ಲಿ ಪ್ರತಿಭಟನೆ ಆರಂಭಿಸುವಂತೆ ಅವರು ಕಾಂಗ್ರೆಸ್‌ ನಾಯಕರನ್ನು ಪ್ರಚೋದಿಸಿದರು. ಮುಂದಿನ ವರ್ಷಗಳಲ್ಲಿ ಮಹಾರಾಜರ ಆಪ್ತ ಸಹಾಯಕರಲ್ಲಿ ಕೆಲವರು ಮೈಸೂರು, ಬೆಂಗಳೂರು, ಮದ್ರಾಸ್‌, ಬಾಂಬೆ ಮತ್ತಿತರ ಕಡೆಗಳಲ್ಲಿದ್ದ ಅರಮನೆಯ ಬೆಲೆಬಾಳುವ ಸೊತ್ತುಗಳನ್ನು ಕವಡೆ ಕಾಸಿಗೆ ಮಾರಾಟವಾಗುವಂತೆ ಮಾಡಿದರು.

ದೇಶದ ಯಾವುದೇ ಭೂತಪೂರ್ವ ರಾಜವಂಶಗಳ ಮೇಲಿನ ಸಾರ್ವಜನಿಕ ಪ್ರೀತಿ – ವಿಶ್ವಾಸಗಳ ಪ್ರಮಾಣವನ್ನು ಲೆಕ್ಕ ಹಾಕಿ ನೋಡಿ. ನಮ್ಮ ಮೈಸೂರು ಸಂಸ್ಥಾನದ ಪ್ರಜೆಗಳು ನಮ್ಮ ಒಡೆಯರ್‌ ಮನೆತನದ ಮೇಲಿರಿಸಿದ್ದ ಪ್ರೀತಿ – ವಿಶ್ವಾಸದಷ್ಟೇ ಜನಪ್ರಿಯತೆ ತಮ್ಮ ಅರಸೊತ್ತಿಗೆಯ ಮೇಲೂ ಇದೆ ಎಂದು ಅವು ಯಾವ ಬಗೆಯಲ್ಲೂ ಹೇಳಿಕೊಳ್ಳುವಂತಿಲ್ಲ! 1970-71ರ ಅವಧಿಯಲ್ಲಿ ದೇಶದಲ್ಲಿದ್ದ ರಾಜಮಹಾರಾಜರುಗಳಿಗೆ ಸಲ್ಲುತ್ತಿದ್ದ ರಾಜಧನದ ಪಾವತಿಯನ್ನು ಸ್ಥಗಿತಗೊಳಿಸಿ, ಅವರ ಮಾನ್ಯತೆಯನ್ನು ರದ್ದು ಪಡಿಸಿದ್ದ ಅಂದಿನ ಇಂದಿರಾ ಗಾಂಧಿ ಸರಕಾರ, ಇಂಥ ರಾಜವಂಶಗಳ ಪೈಕಿ ಹೆಚ್ಚಿನವು ಜನರ ನೆನಪಿನಿಂದ ಅಳಿದು ಹೋಗಲಿವೆ ಎಂದು ಯೋಚಿಸಿತ್ತು. ಆದರೆ ಅದರ ಅಂದಾಜು ಸುಳ್ಳಾಯಿತು.

ಈ ವರ್ಷದ ದಸರಾ ಆಚರಣೆ ಒಂದು ರೀತಿಯಲ್ಲಿ ವಿಶಿಷ್ಟವಾದುದಾಗಿತ್ತು. ಯಾಕೆಂದರೆ, ಇದು ಮಹಾರಾಜ ಜಯಚಾಮರಾಜ ಒಡೆಯರ್‌ ಅವರ ಜನ್ಮಶತಮಾನೋತ್ಸವ ವರ್ಷ (ಜುಲೈ 18,1919 – ಸೆಪ್ಟೆಂಬರ್‌ 23, 1974). ಅವರು ತೀರಿಕೊಂಡುದು ಬೆಂಗಳೂರಿನ ಅರಮನೆಯಲ್ಲಿ. ಅವರ ಅಂತ್ಯಕ್ರಿಯೆ ನಡೆದುದು ಮೈಸೂರಿನಲ್ಲಿ. ಈ ಅಂತಿಮ ಯಾತ್ರೆಯ ವರದಿಯನ್ನು ಮಾಡುವ ಅವಕಾಶ ನನಗೆ ಲಭಿಸಿತ್ತು. ಬೆಂಗಳೂರಿ ನಿಂದ ಮೈಸೂರುವರೆಗಿನ 145 ಕಿ.ಮೀ. ದೂರಕ್ಕೂ ಸಾವಿರಾರು ಜನರು ಕಣ್ಣೀರುಗರೆಯುತ್ತ ನಿಂತಿದ್ದರು. ಈ ಅಶ್ರುಪೂರ್ಣ ವಿದಾಯ ನಮ್ಮ ಇಂದಿನ ರಾಜಕೀಯ ಕ್ಷೇತ್ರದ ಮಾಸ್‌ ಲೀಡರ್‌ಗಳು ಹಾಗೂ ಸಿನಿಮಾ ತಾರೆಯರು ಕೂಡ ಅಸೂಯೆ ಪಡುವಂಥ ರೀತಿಯಲ್ಲಿತ್ತು. ಮೈಸೂರು ರಾಜ ವಂಶಸ್ಥರ ಬಂಧುವೇ ಆಗಿದ್ದ ಆಗಿನ ಮುಖ್ಯಮಂತ್ರಿ ಡಿ. ದೇವರಾಜ ಅರಸರೇ, ಈ ಶೋಕಪೂರ್ಣ ಅಂತಿಮ ಯಾತ್ರೆಯ ನೇತೃತ್ವ ವಹಿಸಿದ್ದರು. ಜಯಚಾಮರಾಜ ಒಡೆಯರ್‌ ಅವರು ಮಹಾರಾಜರಾಗಿ ಮೈಸೂರು ಪ್ರಾಂತ್ಯವನ್ನು ಆಳುತ್ತಿದ್ದಾಗ ತಮ್ಮ ಯೋಗ್ಯತೆಯಿಂದಾಗಿಯೇ ಜನರ ಪಾಲಿನ ನಿಜವಾದ ತಾರೆಯಾಗಿದ್ದವರು.

ಮುಂದಿನ ದಿನಗಳಲ್ಲಿ, ಅರ್ಥಾತ್‌ ಗಣರಾಜ್ಯ ವ್ಯವಸ್ಥೆ ಚಾಲ್ತಿಗೆ ಬಂದ ಕಾಲದಲ್ಲಿ ಮೈಸೂರಿನ ರಾಜಪ್ರಮುಖರಾಗಿದ್ದಾಗ ಹಾಗೂ ಮೈಸೂರು (ಕರ್ನಾಟಕ) ಮತ್ತು ಮದ್ರಾಸ್‌ (ತಮಿಳುನಾಡು) ಪ್ರಾಂತ್ಯಗಳ ರಾಜ್ಯಪಾಲರಾಗಿದ್ದಾಗಲೂ ತಾರೆಯಾಗಿಯೇ ಮಿಂಚಿದ್ದರು. ತಮ್ಮ ಬಾಲ್ಯಕಾಲದಲ್ಲಿ ಯುವರಾಜ ಜಯ ಒಡೆಯರ್‌ ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಅವರು, ಎಲ್ಲರ ಅಚ್ಚುಮೆಚ್ಚಿನ ಯುವರಾಜರಾಗಿದ್ದರು. ಹಳೇ ಮೈಸೂರು ಭಾಗದ ಜನರು ಅವರನ್ನು ಅಭಿಮಾನ-ಗೌರವಗಳಿಂದ ಕಾಣುತ್ತಿದ್ದರು.

2019ರ ದಸರಾ ಆಚರಣೆಯನ್ನು ನಾವು ಜಯಚಾಮರಾಜರ ನೆನಪಿಗೆ ಅರ್ಪಿಸಬೇಕಿತ್ತು. ಆದರೂ ಅವರ ಜನ್ಮಶತಾಬ್ದದ ನೆನಕೆ ಉತ್ಸವದ ಹಿನ್ನೆಲೆಯಲ್ಲಿ ಇದ್ದೇ ಇತ್ತೆನ್ನಬಹುದು. ಅವರೇ ರಚಿಸಿದ್ದ ಕರ್ನಾಟಕ ಸಂಗೀತದ ಕೃತಿಗಳ ಹಾಡುಗಾರಿಕೆಗಾಗಿ ಒಂದು ಇಡೀ ದಿನವನ್ನು ಮೀಸಲಿಡಲಾಗಿತ್ತು. ಈ ಕಾರ್ಯಕ್ರಮ ಬೆಳಗಿನಿಂದ ಸಂಜೆಯ ತನಕವೂ ಸಾಗಿತ್ತು. ಉಜ್ವಲ ದೀಪಾಲಂಕೃತ ಮೈಸೂರು ಅರಮನೆಯ ಸೊಬಗು, ಅಲಂಕೃತ ಆನೆಗಳ ಸಾಲು, ಅಶ್ವಾರೋಹಿ ಪೊಲೀಸರ ಗಡಣ, ಅರಮನೆಯ ರಥಗಳ ಬಳಕೆ ಇತ್ಯಾದಿಗಳಿಲ್ಲ ದಿದ್ದರೆ ದಸರಾ ಮಹೋತ್ಸವಕ್ಕೆ ಕಳೆ ಇರುವುದಿಲ್ಲ ವೆನ್ನುವುದೇನೋ ನಿಜ. ವಾಸ್ತವವಾಗಿ ಟಾಬ್ಲೋಗಳಾಗಲಿ, ಜನಪದ ನೃತ್ಯಗಳ ತಂಡಗಳಾಗಲಿ ಜನರನ್ನು ಹೆಚ್ಚಿನ ಮಟ್ಟಿಗೇನೂ ಆಕರ್ಷಿಸಲಾರವು. ದಸರಾ ಮೆರವಣಿಗೆ ಹಾಗೂ ಪಂಜು ಮೆರವಣಿಗೆಯಂಥ ಶೋಭಾಯಾತ್ರೆಯ ಅಂಗಗಳು ಇನ್ನೂ ಜನರನ್ನು ಆಕರ್ಷಿಸುತ್ತಿವೆ ಯೆಂದಾದರೆ, ಇದು ಮಹಾರಾಜ ಕೃಷ್ಣರಾಜ ಒಡೆಯರ್‌ ಹಾಗೂ ಜಯಚಾಮರಾಜ ಒಡೆಯರ್‌ ಇವರುಗಳು ಬಿಟ್ಟು ಹೋಗಿರುವ ಬಳುವಳಿಯೆಂದೇ ಹೇಳಬೇಕು. ಘನತೆ ಗಾಂಭೀರ್ಯಗಳ ಮಟ್ಟಿಗೆ ಜಯಚಾಮರಾಜರನ್ನು ಸರಿಗಟ್ಟುವವರು ಯಾರೂ ಇರಲಿಕ್ಕಿಲ್ಲ. ಅವರೊಬ್ಬ ಎತ್ತರವಾದ ಆಳು. ಭವ್ಯವಾದ ವ್ಯಕ್ತಿತ್ವ ಅವರದು. ಅವರೊಬ್ಬ ಸುಂದರ ಪುರುಷ. ಅದ್ಭುತವಾದ ಅಂಗಸೌಷ್ಟವದಿಂದ ಕಂಗೊಳಿಸುತ್ತಿದ್ದವರು. ಅವರ ತಂದೆ ಕಂಠೀರವ ನರಸಿಂಹ ರಾಜರಾಗಲಿ (1888-1940), ದೊಡ್ಡಪ್ಪ ಮಹಾರಾಜ ಕೃಷ್ಣರಾಜ ಒಡೆಯರಾಗಲಿ ಕೃಶ ಶರೀರಗಳೇ. 1971ರಲ್ಲಿ ಸಂವಿಧಾನದ 26 ನೆಯ ತಿದ್ದುಪಡಿಯ ಮೂಲಕ ರಾಜಧನ ರದ್ದಾದ ಬಳಿಕ, ಅವರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಿದರು.

ರಾಜಧನ ರದ್ದು ಪಡಿಸಲಾಗಿದ್ದ ಕಾಲದಲ್ಲಿ ಜಯಚಾಮರಾಜ ಒಡೆಯರ್‌ ಅವರಿಗೆ ವರ್ಷಕ್ಕೆ 26 ಲಕ್ಷ ರೂ. ರಾಜಧನ ಲಭಿಸುತ್ತಿತ್ತು. ಹೈದರಾಬಾದಿನ ನಿಜಾಮರ ಬಳಿಕ ದೊಡ್ಡ ಮೊತ್ತದ ರಾಜಧನ ದೊರೆಯುತ್ತಿದ್ದುದು ಜಯ ಚಾಮರಾಜರಿಗೇನೇ. ನಿಜಾಮರಿಗೆ ದೊರೆಯುತ್ತಿದ್ದುದು ವರ್ಷಕ್ಕೆ 40 ಲಕ್ಷ ರೂ.ಗಳು. ದೊಡ್ಡ ಮೊತ್ತದ ರಾಜಧನ ಲಭಿಸುತ್ತಿತ್ತೇನೋ ಸರಿ, ಆದರೆ ಮಹಾ ರಾಜರ ಖರ್ಚುವೆಚ್ಚಗಳೂ ಅಷ್ಟೇ ಅಗಾಧವಾಗಿದ್ದವು. ಅಲ್ಲದೆ ಅಂದಿನ ಸಮಾಜವಾದಿ ಧೋರಣೆಯ ದಿನಗಳಲ್ಲಿ ಕೇಂದ್ರ ಸರಕಾರ ತೆರಿಗೆ ಪಾವತಿಯ ವಿಷಯದಲ್ಲಿ ಇವರಿಗೆ ಕರುಣೆ ತೋರಿಸುತ್ತಿರಲಿಲ್ಲ. ಮೈಸೂರು ಅರಮನೆಯಲ್ಲಿ ಅಂದಿನ ದಿನಗಳಲ್ಲಿ 900ಕ್ಕೂ ಅಧಿಕ ನೌಕರ – ಚಾಕರರಿದ್ದರು.

1960ರ ದಶಕದಲ್ಲಿ ಮಹಾರಾಜ ಜಯಚಾಮರಾಜ ಒಡೆಯರ್‌ ಅವರು ಭಾರತದ ಉಪರಾಷ್ಟ್ರಪತಿಯಾಗಿ ಚುನಾಯಿತರಾಗುವರೆಂಬ ವ್ಯಾಪಕ ನಿರೀಕ್ಷೆಯಿತ್ತು. ರಾಷ್ಟ್ರಪತಿಯಾಗುವ ಆರ್ಹತೆ- ಯೋಗ್ಯತೆಗಳೂ ಅವರಿಗೆ ಇದ್ದವು. ಆದರೆ ಆ ಉನ್ನತ ಹುದ್ದೆಗಳಿಗೆ ಇತರ ಹಲವು ಮಂದಿ ಸ್ಪರ್ಧಾಕಾಂಕ್ಷಿಗಳಿದ್ದುದರಿಂದ ಜಯಚಾಮರಾಜರಿಗೆ ಆ ಅವಕಾಶ ಲಭಿಸಲಿಲ್ಲ. ಸ್ವತಃ ಮಹಾರಾಜರೇ ರಾಜಕೀಯ ಪ್ರವೇಶಕ್ಕಾಗಿ ತಮ್ಮ ಸ್ವಂತ ವರ್ಚಸ್ಸನ್ನು ಬಳಸಲಿಲ್ಲ. ಅವರು ಇನ್ನೂ ಜನಪ್ರಿಯರಾಗಿ ಉಳಿದಿರುವುದಕ್ಕೆ ಬಹುಶಃ ಇದೇ ಕಾರಣ. ರಾಜಸ್ಥಾನ, ಗುಜರಾತ್‌, ಒಡಿಶಾ ಮತ್ತು ಮಧ್ಯಪ್ರದೇಶಗಳ ರಾಜಮನೆತನಗಳ ಯುವರಾಜರುಗಳು ರಾಜಕೀಯ ಪ್ರವೇಶಿಸಿದರು; ಅವರಲ್ಲಿ ಕೆಲವರು ಅವಕಾಶವಾದಿ ರಾಜಕೀಯದಾಟದಲ್ಲಿ ಪ್ರವೀಣರಾಗಿ ಬಿಟ್ಟರು; ಇಂದಿರಾ ಪರಿ ವಾರವನ್ನು ತಡೆಯುವವರೇ ಇಲ್ಲ ಎಂಬ ಸತ್ಯವನ್ನು ಮನಗಂಡು ಆ ದಂಡನ್ನು ಸೇರಿಕೊಂಡರು. ಈ ಮಾತಿಗೆ ಅತ್ಯುತ್ತಮ ಉದಾ ಹರಣೆ ಯೆಂದರೆ ಗ್ವಾಲಿಯರ್‌ ರಾಜಮನೆತನದ ಮಾಧವರಾವ್‌ ಸಿಂಧಿಯಾ. ಅವರು ಸಲ್ಲಿಸಿದ್ದ ಅರ್ಜಿಯ ಪರಿಣಾಮವಾಗಿಯೇ ರಾಜಧನರದ್ಧತಿ ಹಾಗೂ ಯುವರಾಜ ರುಗಳ ಮಾನ್ಯತೆ ರದ್ಧತಿ ಕುರಿತ ರಾಷ್ಟ್ರಪತಿ ಆದೇಶವನ್ನು ಸರ್ವೋತ್ಛ ನ್ಯಾಯಾಲಯ (1970 ರಲ್ಲಿ) ರದ್ದು ಪಡಿಸಿದ್ದು. ಆ ದಿನಗಳಲ್ಲಿ ಅವರು ತಮ್ಮ ತಾಯಿ, (ರಾಜಮಾತೆ) ವಿಜಯರಾಜೇ ಅವರೊಂದಿಗೆ ಭಾರತೀಯ ಜನಸಂಘದಲ್ಲಿದ್ದರು. ಆದರೆ, 26ನೆಯ ಸಂವಿಧಾನ ತಿದ್ದುಪಡಿ ಮಸೂದೆಯ ಮೂಲಕ ರಾಜಧನ ರದ್ದಾದ ಬೆನ್ನಿಗೇ ಮಾಧವ ರಾವ್‌ ಸಿಂಧಿಯಾ ಸದ್ದಿಲ್ಲದೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಸಿಂಧಿಯಾಗಳು ಹಾಗೂ ಇಂದೋರ್‌ ಸಂಸ್ಥಾನದ ಹೋಳ್ಕರ್‌ಗಳು ಇಂಥ ಅವಕಾಶವಾದಿ ತನಕ್ಕೆ ಹೆಸರಾದವರು. ಕೇವಲ ಇಬ್ಬರು ಮರಾಠಾ ಸರದಾರರುಗಳು ಬ್ರಿಟಿಷರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿದ್ದರೆ ನಮ್ಮ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಥೆಯೇ ಬೇರೆಯಾಗಿರುತ್ತಿತ್ತು ಎಂಬ ಮಾತು ಇನ್ನೂ ಕೇಳಿ ಬರುತ್ತಿಲ್ಲವೇ? ಆ ಇಬ್ಬರೂ ತಟಸ್ಥ ಧೋರಣೆ ತಳೆದರು; ತಮ್ಮ ಸಂಪತ್ತನ್ನು ರಕ್ಷಿಸಿಕೊಂಡರು. ಕೇವಲ ಕೆಲವೇ ಸಣ್ಣ ಪುಟ್ಟ ರಾಜ ರಾಣಿಯರು ಮಾತ್ರ ದಂಗೆಯಲ್ಲಿ ಸೇರಿಕೊಂಡರು; ತಮ್ಮ ಜೀವ ಹಾಗೂ ರಾಜ್ಯಾಧಿಕಾರವನ್ನು ಕಳೆದುಕೊಂಡರು.

ರಾಜ ಮಹಾರಾಜರುಗಳ ಪೈಕಿ ಕೆಲವರಾದರೂ ವ್ಯಾಪಕ ಅನುಭವ, ಸಂಘಟನಾ ಸಾಮರ್ಥ್ಯ, ಜ್ಞಾನ ಹಾಗೂ ಪ್ರಾಮಾಣಿಕತೆ ಹೊಂದಿದವರಿದ್ದರು. ಸ್ವಾತಂತ್ರೊéàತ್ತರ ಭಾರತದಲ್ಲಿ ಇಂಥವರ ಅನುಭವ ಸಂಪನ್ನತೆಯನ್ನು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು. ಆದರೆ ಅಂಥದೊಂದು ಕೆಲಸಕ್ಕೆ ಢೋಂಗಿ ಸಮಾಜವಾದ ಹಾಗೂ ಪೂರ್ವಾಗ್ರಹಗಳು ಅಡ್ಡಿಯಾಗಿ ಪರಿಣಮಿಸಿದವು. ಈ ನಡುವೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಕೆಲವರಿಗೆ ಉನ್ನತ ಹುದ್ದೆಗಳನ್ನು ನೀಡಲಾಯಿತು. ಇಂಥ ಕೆಲವರನ್ನು ರಾಜಪ್ರಮುಖರನ್ನಾಗಿ, ಮುಂದಿನ ದಿನಗಳಲ್ಲಿ ರಾಜ್ಯಪಾಲರುಗಳನ್ನಾಗಿ ನೇಮಕಮಾಡಲಾಯಿತು; ಇದಕ್ಕೆ ರಾಜಕೀಯ ಒತ್ತಡಗಳೇ ಕಾರಣ. ಜಯಚಾಮರಾಜ ಒಡೆಯರ್‌ ಇಂಥವರಲ್ಲೊಬ್ಬರು.

ಅವರು 1956ರಿಂದ 1959ರವರೆಗೆ ಮೈಸೂರಿನ ರಾಜ ಪ್ರಮುಖರಾಗಿದ್ದರು; ಮುಂದೆ 1964ರ ವರೆಗೆ ರಾಜ್ಯಪಾಲ ರಾಗಿದ್ದರು. ಇದಾದ ಬಳಿಕ ಮುಂದಿನೆರಡು ವರ್ಷಗಳ ಕಾಲ ಮದ್ರಾಸ್‌ ಪ್ರಾಂತ್ಯದ ರಾಜ್ಯಪಾಲ ಹುದ್ದೆಯಲ್ಲಿದ್ದರು.

ಮಹಾರಾಜರುಗಳ ದಿವಾನರು ಹಾಗೂ ಇತರ ನಾಗರಿಕ ಸೇವಾ ಧುರಂಧರರ ವಿಷಯದಲ್ಲೂ ಆದುದು ಹೀಗೆಯೇ. ಮೈಸೂರಿನ ದಿವಾನರಾಗಿ 15 ವರ್ಷಗಳಷ್ಟು ದೀರ್ಘ‌ಕಾಲ ಸೇವೆ ಸಲ್ಲಿಸಿದ ಸರ್‌ ಮಿರ್ಜಾ ಇಸ್ಮಾಯಿಲ್‌ ಹಾಗೂ ಅವರ ಉತ್ತರಾಧಿಕಾರಿ ಸರ್‌ ಎನ್‌. ಮಾಧವ ರಾವ್‌ ಇವರುಗಳ ಕೊಡುಗೆಯನ್ನು ಸ್ವತಂತ್ರ ಭಾರತ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಸರ್‌ ಎನ್‌. ಮಾಧವ ರಾವ್‌ ಭಾರತದ ಸಂವಿಧಾನದ ಕರಡು ರಚನಾ ಸಮಿತಿಯಲ್ಲಿ ಸದಸ್ಯರಾಗಿದ್ದವರು. ಮಿರ್ಜಾ ಇಸ್ಮಾಯಿಲ್‌ ಅವರು ಪಾಕಿಸ್ಥಾನದ ಅಧ್ಯಕ್ಷರಾಗಿದ್ದ ಎಂ.ಎ. ಜಿನ್ನಾ ಮತ್ತಿತರ ಪಾಕ್‌ ನಾಯಕರಿಂದ ಬಂದಿದ್ದ ಆಕರ್ಷಕ ಹುದ್ದೆಗಳ ಆಹ್ವಾನವನ್ನು ತಿರಸ್ಕರಿಸಿ ಬೆಂಗಳೂರಿನಲ್ಲೇ ಉಳಿದುಕೊಂಡರು. ಮಹಾತ್ಮಾ ಗಾಂಧಿಯ ವರಿಗೆ ಮಹಾರಾಜ ಕೃಷ್ಣರಾಜ ಒಡೆಯರ್‌ ಹಾಗೂ ಸರ್‌ ಮಿರ್ಜಾ ಇಸ್ಮಾಯಿಲ್‌ ಇವರಿಬ್ಬರ ಬಗ್ಗೆ ತುಂಬಾ ಗೌರವವಿತ್ತು.

ಮೈಸೂರಿನಲ್ಲಿ “ಉತ್ತರದಾಯಿ ಸರಕಾರ’ (ರಾಜ್ಯಪ್ರಭುತ್ವವಿದ್ದ ರಾಜ್ಯಗಳ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಲಾಗಿದ್ದ ಹೆಸರಿದು) ಅಸ್ತಿತ್ವಕ್ಕೆ ಬರಬೇಕೆಂದು ಆಗ್ರಹಿಸಿ ನಡೆಸಲಾಗುತ್ತಿದ್ದ ಆಂದೋಲನವನ್ನು ಜಯಚಾಮರಾಜ ಒಡೆಯರ್‌ ಹತ್ತಿಕ್ಕಿದ್ದರಾ ದರೂ, ಅವರಿಗೆ ಕಾಂಗ್ರೆಸ್‌ ನಾಯಕರೊಂದಿಗೆ ಅತ್ಯುತ್ತಮ ಸಂಬಂಧ ವಿತ್ತು. ಕಾಂಗ್ರೆಸ್‌ ನೇತಾರರು ಅವರನ್ನು ಸಂಬೋಧಿಸುತ್ತಿ ದ್ದುದು “ಹಿಸ್‌ ಹೈನೆಸ್‌’ ಎಂದೇ. ಕಾಂಗ್ರೆಸ್‌ ನಾಯಕರೊಂದಿಗಿನ ಒಡೆಯರ್‌ ಅವರ ನಿಕಟ ಸಂಬಂಧಕ್ಕೆ ಒಂದು ಉದಾಹರಣೆಯೆಂ ದರೆ ಅತ್ಯಂತ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮೈಸೂರು ಸಂಸ್ಥಾನದ ಕಾಂಗ್ರೆಸ್‌ ನೇತಾರ ಕೆ.ಟಿ. ಭಾಷ್ಯಂ ಅಯ್ಯಂಗಾರ್‌ ಅವರು ತಮ್ಮ ಅಮೆರಿಕ ಪ್ರವಾಸಕ್ಕಾಗಿ ಸಾಲ ಒದಗಿಸುವಂತೆ ಒಡೆಯರ್‌ ಅವರನ್ನು ವಿನಂತಿಸಿದ್ದ ಪ್ರಸಂಗ. 1947ರಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಏರ್ಪಡಿಸಲಾಗಿದ್ದ ಅಂತಾ ರಾಷ್ಟ್ರೀಯ ಕಾರ್ಮಿಕರ ಮಹಾ ಸಂಘಟನೆಯ ಸಮಾವೇಶಕ್ಕಾಗಿ ತೆರಳಲಿದ್ದ ಭಾರತೀಯ ನಿಯೋಗದ ಸದಸ್ಯರಲ್ಲಿ ಭಾಷ್ಯಂ ಅವರೂ ಒಬ್ಬರಾಗಿದ್ದರು. ಹೀಗೆ ಪ್ರತಿನಿಧಿಗಳಾಗಿ ಹೋಗುವವರು ಇಂದಿನವರಂತೆ ಸರಕಾರಿ ವೆಚ್ಚದಲ್ಲಿ ತೆರಳುವಂತಿರಲಿಲ್ಲ.

ತಮ್ಮ ಖರ್ಚನ್ನು ತಾವೇ ಭರಿಸಿಕೊಳ್ಳಬೇಕಿತ್ತು. ಭಾಷ್ಯಂ ಬರಿಗೈಯ ನೇತಾರರಾಗಿದ್ದರು. ಮಹಾರಾಜರು ಅವರ ವಿನಂತಿಯನ್ನು ಮನ್ನಿಸಿ 50,000 ರೂ.ಗಳ ಸಾಲವನ್ನು ಒದಗಿಸಿದ್ದರು; ಆದರೆ ಭಾಷ್ಯಂ ಅವರಿಗೆ ಈ ಸಾಲವನ್ನು ಮರಳಿಸುವುದು ಸಾಧ್ಯವಾಗಲೇ ಇಲ್ಲ.

ಅವರ ಆಡಳಿತ ಕಾಲದ ಸಿಂಹಾವಲೋಕನ ಮಾಡಿದಾಗ ನಮಗೆ ಕಾಣುವುದಿಷ್ಟು: ಜಯಚಾಮರಾಜ ಒಡೆಯರ್‌ ಅವರನ್ನು ಅವರ ಕೆಲ ನಿಕಟ ಸಹಾಯಕರು ಮಾತ್ರವಲ್ಲ ಆಪ್ತ ಸಲಹಾಕಾರರೇ ನಡುನೀರಲ್ಲಿ ಕೈ ಬಿಟ್ಟರು. ಅವರು ಮಹಾರಾಜರಾಗಿ ಪಟ್ಟಾಭಿಷಿಕ್ತರಾದಾಗ ಅವರಿಗೆ ಕೇವಲ 21ರ ಹರೆಯ. ಮುಂದಿನ ವರ್ಷವೇ ಅವರು ದಿವಾನ್‌ ಮಿರ್ಜಾ ಇಸ್ಮಾಯಿಲ್‌ರನ್ನು ವಜಾಗೊಳಿಸಿದರು. ಬಳಿಕ ಅವರ ಕಾರ್ಯದರ್ಶಿ, ಆಮಾತ್ಯಶಿರೋಮಣಿ ಸರ್‌ ಟಿ. ತಂಬುಚೆಟ್ಟಿ ಅತ್ಯಂತ ಪ್ರಭಾವಿಯಾಗಿ ಬೆಳೆದು ನಿಂತರು; ತಮ್ಮ ತಪ್ಪು ನಿರ್ಧಾರ ಹಾಗೂ ತಪ್ಪು ಆಯ್ಕೆಗಳ ಮೂಲಕ ಆಡಳಿತವನ್ನು ರಾಡಿರಂಪ ಗೊಳಿಸಿದರು. ಕಾಂಗ್ರೆಸ್‌ ನಾಯಕರು ಅವರನ್ನು ದ್ವೇಷಿಸುತ್ತಿದ್ದರು.

ಮಹಾರಾಜರು ಮೈಸೂರನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಲು ಸಿದ್ಧರಿದ್ದರಾದರೂ ಮೈಸೂರಿನ ಕೊನೆಯ ದಿವಾನರಾಗಿದ್ದ ಸರ್‌ ಆರ್ಕಾಟ್‌ ರಾಮಸ್ವಾಮಿ ಮುದಲಿಯಾರ್‌ ಅವರು ತಮ್ಮದೇ ಲೆಕ್ಕಾಚಾರ ಹೊಂದಿದ್ದರು. ಸ್ವಾತಂತ್ರ್ಯದ ಬಳಿಕ ರಾಷ್ಟ್ರಧ್ವಜ ಹಾರಿಸಬೇಕೆಂಬ ಹಾಗೂ ಚುನಾಯಿತ ಸರಕಾರವನ್ನು ಸ್ವಾಗತಿಸಬೇಕೆಂಬ ಬೇಡಿಕೆಯನ್ನು ಒಪ್ಪಿಕೊಳ್ಳಲಾಗದಂಥ ಅಸಂವೇದಿ ನಿಲುವು ಅವರದಾಗಿತ್ತು. “ಆರ್ಕಾಟ್‌ ಬಹಿಷ್ಕಾರ’ ಹಾಗೂ “ತಂಬುಚೆಟ್ಟಿ ಚಟ್ಟಕಟ್ಟಿ’ ಎಂಬ ಹಣೆಪಟ್ಟಿಗಳಲ್ಲಿ ಪ್ರತಿಭಟನೆ -ಪ್ರದರ್ಶನಗಳನ್ನು ಆರಂಭಿಸುವಂತೆ ಅವರು ಕಾಂಗ್ರೆಸ್‌ ನಾಯಕರನ್ನು ಪ್ರಚೋದಿಸಿದರು. ಮುಂದಿನ ವರ್ಷಗಳಲ್ಲಿ ಮಹಾರಾಜರ ಆಪ್ತ ಸಹಾಯಕರಲ್ಲಿ ಕೆಲವರು ಮೈಸೂರು, ಬೆಂಗಳೂರು, ಮದ್ರಾಸ್‌, ಬಾಂಬೆ ಮತ್ತಿತರ ಕಡೆಗಳಲ್ಲಿದ್ದ ಅರಮನೆಯ ಬೆಲೆಬಾಳುವ ಸೊತ್ತುಗಳನ್ನು ಕವಡೆ ಕಾಸಿಗೆ ಮಾರಾಟವಾಗುವಂತೆ ಮಾಡಿದರು. ಸ್ವಲ್ಪಕಾಲ ಬೆಂಗಳೂರಿನ ಅರಮನೆಯ ಮೇಲಿನ ಅಧಿಕಾರ ಕೂಡ ಒಡೆಯರ್‌ ವಂಶಜರ ಕೈತಪ್ಪಿ ಹೋಗಿತ್ತು. ಇನ್ನು ಮೈಸೂರು ಅರಮನೆಯನ್ನು ಸರಕಾರ ಸ್ವಾಧೀನ ಪಡಿಸಿಕೊಂಡಿರುವ ಕ್ರಮವನ್ನು ಒಡೆಯರ್‌ ಕುಟುಂಬ ಸವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ. ಆಡಳಿತಾರೂಢ ಬಿಜೆಪಿ ಸರಕಾರ, ಅರಮನೆಯ ಅಧಿಕಾರವನ್ನು ಒಡೆಯರ್‌ ವಂಶಸ್ಥರಿಗೆ ಹಿಂದಿರುಗಿಸಿದಲ್ಲಿ ಈ ಮೂಲಕ ಜಯಚಾಮರಾಜ ಒಡೆಯರ್‌ ಅವರಿಗೆ ಸೂಕ್ತ ರೀತಿಯ ಗೌರವ ಸಲ್ಲಿಸಿದಂತಾಗುತ್ತದೆ.

ಜಯಚಾಮರಾಜ ಒಡೆಯರ ಪ್ರಥಮ ವಿವಾಹ ವಿಫ‌ಲವಾಯಿತೆಂದೇ ಹೇಳಬಹುದು. ಈ ವಿವಾಹ ನಡೆದುದು 1938ರಲ್ಲಿ. ಹಾಗೇ ಮಹಾರಾಜರ ಪ್ರಥಮ ಪತ್ನಿಯಾಗಿ ಮೈಸೂರು ಅರಮನೆ ಪ್ರವೇಶಿಸಿದ ಉತ್ತರ ಪ್ರದೇಶದ ದಕ್ಷಿಣ ಭಾಗದ ಚಾರ್‌ಖರೀ ರಾಜ್ಯದ ರಾಜಕುಮಾರಿ ಸತ್ಯಪ್ರೇಮ ಕುಮಾರಿ, ಅರಸು ಮನೆತನದ ಕಟ್ಟುನಿಟ್ಟಿನ ಸಾಂಪ್ರದಾಯಿಕ ನಡಾವಳಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ ತವರಿಗೆ ಹಿಂದಿರುಗಿದ್ದರು. ಆದರೆ, ಸ್ವಭಾವತಃ ಸ್ನೇಹಪರ ವ್ಯಕ್ತಿಯಾಗಿದ್ದ ಆಕೆ ಕೊನೆಯ ವರ್ಷಗಳಲ್ಲಿ ಮೈಸೂರಿಗೆ ಮರಳಿದ್ದರು.

ಮಹಾರಾಜರ ಜೀವಿತ ಕಾಲದ ಅಂತಿಮ ವರ್ಷಗಳು ಮೈಸೂರು ರಾಜವಂಶದ ಮೇಲೆ ದೊಡ್ಡಮಟ್ಟಿನ ಗೌರವ ಇರಿಸಿಕೊಂಡಿದ್ದವರ ಪಾಲಿಗೆ ತೀರಾ ನಿರಾಶಾದಾಯಕವಾಗಿದ್ದವು. ಮಹಾರಾಜರ ಆಳ್ವಿಕೆಯ ಯುಗ ಅಂತ್ಯಗೊಳ್ಳುವುದರೊಂದಿಗೆ ಅರಸು ಮನೆತನದ ಅದೃಷ್ಟ ರೇಖೆಯೂ ಕ್ಷೀಣಿಸಿತು. ದೇವರಾಜ ಅರಸ್‌ ಜಾರಿಗೊಳಿಸಿದ ಭೂ ಮಸೂದೆಯಿಂದಾಗಿ ಮೈಸೂರು ಅರಸೊತ್ತಿಗೆ ಇನ್ನಿಲ್ಲ ಮುನ್ನಿಲ್ಲದಂಥ ಸಂಕಷ್ಟಕ್ಕೆ ಸಿಲುಕಿತು.

– ಅರಕೆರೆ ಜಯರಾಮ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ