ನವೀನ್‌ ಪಟ್ನಾಯಕ್‌ ಎಂಬ ನಯನಾಜೂಕಿನ ನಾಯಕ

Team Udayavani, May 22, 2019, 6:20 AM IST

ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅತ್ಯಂತ ಘನಸ್ಥಿಕೆಯಿಂದ ನಡೆದುಕೊಂಡಿರುವುದಕ್ಕಾಗಿ ರಾಜಕಾರಣಿಯೊಬ್ಬನಿಗೆ ಪ್ರಶಸ್ತಿ ನೀಡಲು ಯಾವುದಾದರೂ ಸಂಸ್ಥೆ ನಿರ್ಧರಿಸಿದಲ್ಲಿ, ನಿಶ್ಚಿತವಾಗಿಯೂ ಅಂಥ ಪ್ರಶಸ್ತಿ ಸಲ್ಲಬೇಕಿರುವುದು ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರಿಗೆ.

ಆಂಧ್ರಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ – ಈ ರಾಜ್ಯಗಳಲ್ಲಿ 17ನೆಯ ಲೋಕಸಭಾ ಚುನಾವಣೆಯ ಹಾಗೂ ವಿಧಾನಸಭಾ ಚುನಾವಣೆಗಳ ಪ್ರಚಾರ ಕಾರ್ಯದಲ್ಲಿ ಅತ್ಯಂತ ಅಸಂಸದೀಯ ಭಾಷೆಯ ಬಳಕೆ ಧಾರಾಳವಾಗಿಯೇ ನಡೆದಿದೆ.

ಇದರರ್ಥ, ಇದಕ್ಕಿಂತ ಹಿಂದಿನ ಚುನಾವಣೆಗಳಲ್ಲಿ ನಡೆದಿದ್ದ ಗೊಂದಲ-ಗಲಾಟೆಗಳ ಪ್ರಮಾಣ ಇದಕ್ಕಿಂತ ಕಡಿಮೆ ಇತ್ತು ಎಂದೇನಲ್ಲ. ಈ ಹಿಂದೆ ಕೂಡ ರಾಜಕೀಯ ನಾಯಕರು ಬೈಗುಳ ಹಾಗೂ ಟೀಕೆಗಳನ್ನು ಪರಸ್ಪರ ಎರಚಾಡಿಕೊಂಡದ್ದಿದೆ. ಆದರೆ ತೀವ್ರತೆಯ ಮಟ್ಟ ಇಂದಿನದಕ್ಕಿಂತ ಸ್ವಲ್ಪ ಕಡಿಮೆಯಿದ್ದಿರಬಹುದು ಅಷ್ಟೆ.

ಈಗ ನವೀನ್‌ ಪಟ್ನಾಯಕರ ನಡವಳಿಕೆಯನ್ನೇ ನೋಡೋಣ. ಮುಖ್ಯಮಂತ್ರಿ ಹುದ್ದೆಯನ್ನು ಅವರು 2000ದ ಮಾರ್ಚ್‌ನಿಂದ ನಿರ್ವಹಿಸುತ್ತಾ ಬಂದಿದ್ದಾರೆ. ಇದೊಂದು ದಾಖಲೆಯೇ ಹೌದು. ಈ ನಾಲ್ಕು ಅಧಿಕಾರಾವಧಿಗಳಲ್ಲಿ ಅವರು ನಡೆದುಕೊಂಡ ರೀತಿಯನ್ನು ನೋಡಬೇಕಾದರೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಭಾಷಣಗಳಿಗೆ ಅವರು ಸ್ಪಂದಿಸಿದ ರೀತಿಯನ್ನು ಒಂದು ಸ್ಯಾಂಪಲ್ ಆಗಿ ಪರಿಗಣಿಸಬಹುದು.

ನವೀನ್‌ ಪಟ್ನಾಯಕ್‌ ತಮ್ಮ ಮುಖ್ಯಮಂತ್ರಿ ಹುದ್ದೆಯ ಬೀಳ್ಕೊಡುಗೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕುಟುಕಿದ್ದರು ಮೋದಿ. ಇದಕ್ಕೆ ಪಟ್ನಾಯಕ್‌ರಿಂದ ಬಂದ ಮಾರುತ್ತರ – ‘ನನ್ನ ಮುಂದಿನ ಪ್ರತಿಜ್ಞಾ ಸ್ವೀಕಾರ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳು ಮುಖ್ಯ ಅತಿಥಿಯಾಗಿ ಬರಬೇಕೆಂದು ಆಹ್ವಾನಿಸುತ್ತಿದ್ದೇನೆ’

ಒಡಿಶಾ ಕರಾವಳಿಯಲ್ಲಿ ಬೀಸಿದ ಫೋನಿ ಚಂಡ ಮಾರುತದ ಸಮಯದಲ್ಲಿ ಪಟ್ನಾಯಕ್‌ ಜನರನ್ನು ಸ್ಥಳಾಂತರಗೊಳಿಸುವ ಕೆಲಸವನ್ನು ನಿರ್ವಹಿಸಿದ ಬಗೆಯನ್ನು ಅವರು ನಡೆಸಿದ ರಕ್ಷಣಾ ಕಾರ್ಯ ಹಾಗೂ ಸಂತ್ರಸ್ತರ ಪುನರ್ವಸತಿ ಕಾರ್ಯಗಳನ್ನು ಮೋದಿ ಶ್ಲಾಘಿಸಿದ್ದೇನೋ ನಿಜ.

‘ಚಂಡಮಾರುತ ಒಡಿಶಾ ಕರಾವಳಿ ಜಿಲ್ಲೆಗಳಿಗೆ ಅಪ್ಪಳಿಸುವುದಕ್ಕೆ ಮೊದಲೇ ಅಲ್ಲಿಂದ ಜನರನ್ನು ತೆರವುಗೊಳಿಸುವಲ್ಲಿ ಪಟ್ನಾಯಕ್‌ ಶ್ಲಾಘನೀಯವಾಗಿ ಶ್ರಮಿಸಿದ್ದಾರೆ’ ಎಂದು ಮೋದಿ ಹೊಗಳಿದ್ದರು. ಇದೇ ವೇಳೆ ಚಂಡಮಾರುತ ಸಂಬಂಧದ ಪರಿಹಾರ ಹಣ ಕುರಿತಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ವರ್ತಿಸಿದ ಬಗೆಯನ್ನು ಪಟ್ನಾಯಕ್‌ ನಡೆಯೊಂದಿಗೆ ಹೋಲಿಸಿ ನೋಡದಿರಲು ಸಾಧ್ಯವಿಲ್ಲ.

ಚುನಾವಣ ಪ್ರಚಾರ ಕಾರ್ಯದ ನಡುವೆಯೇ ಘಟಿಸಿದ ಇಂಥದೊಂದು ಪ್ರಕೃತಿ ವಿಕೋಪವನ್ನು ಪಟ್ನಾಯಕ್‌ ಸ್ಥಿಮಿತವನ್ನು ಕಳೆದುಕೊಳ್ಳದೆ ಗಂಭೀರವಾಗಿಯೇ ನಿಭಾಯಿಸಿದರು. ಇದಕ್ಕೆ ಪೂರಕವೆಂಬಂತೆ ಪ್ರಧಾನಿ ಮೋದಿ ಭುವನೇಶ್ವರದಲ್ಲಿ ಒಡಿಶಾ ಸರಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮೀಕ್ಷಾ ಸಭೆ ನಡೆಸಿದರು.

ಇದಕ್ಕೆ ವ್ಯತಿರಿಕ್ತವಾಗಿ ಮಮತಾ ಬ್ಯಾನರ್ಜಿ ಚಂಡ ಮಾರುತದಿಂದ ಉಂಟಾದ ಹಾನಿಗೆ ಸಂಬಂಧಿಸಿದಂತೆ ಚರ್ಚಿಸಲು ಪ್ರಧಾನಿ ಮಾಡಿದ ಫೋನ್‌ ಕರೆಯನ್ನು ಸ್ವೀಕರಿಸದಿರುವ ಮೂಲಕ ಪ್ರಧಾನಿ ಪದವಿಗೆ ಅಗೌರವ ತೋರಿದರು. ಅಧಿಕಾರಿಗಳೆಲ್ಲ ಚುನಾವಣೆಯ ಕಾರ್ಯದಲ್ಲಿ ವ್ಯಸ್ತರಾಗಿದ್ದಾರೆ. ಹಾಗಾಗಿ ಮೋದಿ ಅವರಿಗೆ ಪ.ಬಂಗಾಲದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಲಿಲ್ಲ ಎಂದರು ಮಮತಾ.

ಆದರೆ, ಆಮೇಲೆ ಆಕೆ ಅತ್ಯಂತ ಒರಟು ಪದಗಳ ಹೇಳಿಕೆಯೊಂದನ್ನು ಉಗ್ಗಡಿಸಿದರು. ನರೇಂದ್ರಮೋದಿ ಅವರನ್ನು ಪ್ರಧಾನಿಯೆಂಬುದಾಗಿ ಗುರುತಿಸುವ ಬಗೆಗಿನ ಹೇಳಿಕೆ ಅದು. ಈ ಹೇಳಿಕೆಗೆ ಅತ್ಯಂತ ಹರಿತವಾಗಿ ಪ್ರತಿಕ್ರಿಯಿಸಿದ ಮೋದಿ ಅವರು ಪಾಕಿಸ್ತಾನದ ಪ್ರಧಾನಮಂತ್ರಿಯೇ ಭಾರತದ ಪ್ರಧಾನಿ ಎನ್ನುವುದು ಬಹುಶಃ ಆಕೆಯ ನಿಲುವು ಎಂದು ಚುಚ್ಚಿದರು.

ಚಂಡಮಾರುತ ತಂದಿರುವ ಹಾನಿ ಕುರಿತಂತೆ ಮೋದಿ ಅವರು ಪ.ಬಂಗಾಲದ ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿದ ವಿಷಯದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷದ ಮಹಾ ಕಾರ್ಯದರ್ಶಿ ಪಾರ್ಥ ಸಾರಥಿ ಕಡ್ಡಿಯನ್ನು ಗುಡ್ಡವನ್ನಾಗಿ ಮಾಡಿದರು; ಈ ವಿಷಯವನ್ನು ಅನುಕೂಲ ಸಿಂಧು ರಾಜಕೀಯ ವಿವಾದವನ್ನಾಗಿಸಿದರು. ಇದು ಸಂವಿಧಾನ ಪ್ರಣೀತ ಒಕ್ಕೂಟ ವ್ಯವಸ್ಥೆಯ ಮೇಲೆ ಪ್ರಧಾನಿ ನಡೆಸಿರುವ ದಾಳಿ ಎಂದೂ ಬಣ್ಣಿಸಿದರು.

ಹೀಗೆಂದ ಮಾತ್ರಕ್ಕೆ ಪ್ರಧಾನಿ ಹಾಗೂ ಪಟ್ನಾಯಕ್‌ ಪರಸ್ಪರರ ಮೇಲೆ ದಾಳಿ ನಡೆಸುವ ಕೆಲಸವನ್ನು ಬದಿಗಿಟ್ಟ ರೆಂದಲ್ಲ. ಹಾಗೆ ನೋಡಿದರೆ ಬಿಜೆಪಿ, ಪಟ್ನಾಯಕ್‌ ನೇತೃತ್ವದ ಬಿಜೂ ಜನತಾದಳದ ಸರಕಾರವನ್ನು ಉರುಳಿಸಲು ಹಾಗೂ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಸಾಧ್ಯವಿದ್ದಷ್ಟು ಹೆಚ್ಚು ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ನಿಟ್ಟಿನಲ್ಲಿ ಸಕಲ ಪ್ರಯತ್ನಗಳನ್ನೂ ನಡೆಸಿದೆ.

ಪಟ್ನಾಯಕ್‌ ಕುರಿತ ಚರ್ಚೆಯನ್ನು (ಸದ್ಯಕ್ಕೆ ) ತಾನು ಕೈ ಬಿಟ್ಟಿರುವುದಾಗಿ ಮೋದಿ ತಮ್ಮ ಪ್ರಚಾರದ ಎರಡು ಹಂತಗಳಲ್ಲೂ ಹೇಳಿದ್ದರು. ಆದರೆ ಒಡಿಶಾದ ಕೆಲ ಅಧಿಕಾರಿಗಳು ಪ್ರಚಾರ ಕಾರ್ಯದ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವುದರಿಂದ ಪಟ್ನಾಯಕ್‌ ಅವರ ಮೇಲೆ ವಾಗ್ಧಾಳಿ ನಡೆಸಲೇಬೇಕಾಗಿದೆ ಎಂದಿದ್ದರು.

‘ಒಡಿಶಾವನ್ನು ಬದಲಾಯಿಸುತ್ತೇವೆ; ನಮಗೊಂದು ಅವಕಾಶ ಕೊಡಿ’ ಎನ್ನುವುದು ಮೋದಿ ಅವರ ಪ್ರಚಾರದ ತಾರಕ ಮಂತ್ರವಾಗಿತ್ತು. ಒಂದು ಹಂತದಲ್ಲಂತೂ ಪಟ್ನಾಯಕ್‌ ಅವರು ಖಾರವಾಗಿಯೇ ಪ್ರತಿಕ್ರಿಯಿಸಿದ್ದುದು – ಚಂಡಮಾರುತದ ಪರಿಣಾಮವಾಗಿ ರಾಜ್ಯದಲ್ಲಿ ಉಂಟಾದ ಪ್ರಕ್ಷುಬ್ಧತೆ ಉತ್ತುಂಗ ಸ್ಥಿತಿಯಲ್ಲಿದ್ದಾಗ ರಾಜ್ಯಕ್ಕೆ ಭೇಟಿ ನೀಡದೆ ಹೋದ ಪ್ರಧಾನಿ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದಿದ್ದರು.

ಮೋದಿ ಹಾಗೂ ಅಮಿತ್‌ ಶಾ ಅವರ ನೇತೃತ್ವದ ಪ್ರಚಾರದ ಕಾವು ಜೋರಾಗಿಯೇ ಇತ್ತು. ಇಬ್ಬರೂ ಸಮರೋಪಾದಿಯಲ್ಲಿ ನಡೆದ ಪ್ರಚಾರದ ಮುಂಚೂಣಿಯಲ್ಲಿದ್ದರು. ಕೆಲ ವರ್ಷಗಳ ಕಾಲ ಬಿಜೆಪಿ ಒಡಿಶಾದಲ್ಲಿದ್ದ ಬಿಜೂ ಜನತಾದಳದ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಕಿರಿಯ ಪಾಲುದಾರನಾಗಿತ್ತು. 2008ರಲ್ಲಿ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯವರ ಹತ್ಯೆಯಾದ ಬಳಿಕ ಎರಡೂ ಪಕ್ಷಗಳು ದೂರವಾದವು.

ಚುನಾವಣಾ ಪ್ರಚಾರದ ವೇಳೆ ವಿರೋಧ ಪಕ್ಷವನ್ನು ಹೇಗೆ ನಡೆಸಿಕೊಳ್ಳಬೇಕೆಂಬ ವಿಷಯದಲ್ಲಿ ನವೀನ್‌ ಪಟ್ನಾಯಕ್‌ ಅವರು ರಾಹುಲ್ ಗಾಂಧಿ, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಚಂದ್ರಬಾಬು ನಾಯ್ಡು, ಲಾಲೂ ಅವರ ಪುತ್ರರು, ಸ್ಟಾಲಿನ್‌, ಚಂದ್ರಶೇಖರ ರಾವ್‌, ಮೆಹಬೂಬಾ ಮುಫ್ತಿ, ಅಸಾಸುದ್ದೀನ್‌ ಓವೈಸಿ ಹಾಗೂ ಮಮತಾ ದೀದಿ – ಇವರೆಲ್ಲರಿಗಿಂತ ಹೆಚ್ಚು ಘನತೆಯಿಂದ ನಡೆದುಕೊಂಡಿರುವುದು ಹೀಗೆ.

ಜನತಾ ಜನಾರ್ದನನಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಕಡಿಮೆ ಪ್ರಾಮುಖ್ಯ ನೀಡುವುದು ರಾಜಕೀಯ ನಾಯಕರ ಪರಿಪಾಠವೇ ಆಗಿರುವುದರಿಂದ ಇಂದು ಬೊಬ್ಬೆ -ಬೈಗುಳ ತಾರಕಕ್ಕೇರಿವೆ. ಕರ್ನಾಟಕವನ್ನೇ ನೋಡಿ, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸುಮಲತಾ ಅವರ ಜಾತಿ ಪ್ರಶ್ನೆಯನ್ನೆತ್ತಿಕೊಂಡು ಶಿವರಾಮೇಗೌಡರು ಸಿಟ್ಟಿನಿಂದ ಕೂಗಾಡಿದ್ದನ್ನು ಮರೆಯುವುದು ಹೇಗೆ?

ನವೀನ್‌ ಪಟ್ನಾಯಕ್‌ (ಜ. 1946) ನಮ್ಮ ದೇಶದ ಹಿರಿಯ ಹಾಗೂ ವಿದ್ವತ್‌ ಸಂಪನ್ನ ರಾಜಕಾರಣಿಗಳಲ್ಲಿ ಒಬ್ಬರು. ಅವರೊಬ್ಬ ಕವಿ; ಇಂಗ್ಲಿಷ್‌ ಭಾಷೆಯಲ್ಲಿ ಬರೆಯುವ ಸಾಹಿತಿ. ಒಡಿಶಾದಲ್ಲಿ ದೀರ್ಘ‌ಕಾಲ ಮುಖ್ಯಮಂತ್ರಿಯಾಗಿ ಅವರು ಯಶಸ್ಸು ಪಡೆದಿದ್ದಾರೆ. ಅದಕ್ಕೆ ಇನ್ನೊಂದು ಕಾರಣವಿದೆ, ರಾಜ್ಯದ ಭಾಷೆಯಾದ ಒಡಿಯಾದಲ್ಲಿ ಅವರಿಗೆ ಸಾಕಷ್ಟು ಪ್ರಭುತ್ವವಿಲ್ಲದಿದ್ದರೂ ಅವರು ಮುಖ್ಯಮಂತ್ರಿಯಾಗಿದ್ದಾರೆ; ಸಲೀಸಾಗಿ ಚುನಾವಣೆಗಳನ್ನು ಗೆಲ್ಲುತ್ತಾ ಬಂದಿದ್ದಾರೆ.

ಒಡಿಯಾ ಭಾಷೆಯಲ್ಲಿ ಅವರು ಮಾಡುವ ಭಾಷಣಗಳನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿರುತ್ತದೆ. ರಾಜಕಾರಣಿಗೆ ಜನರ ಭಾಷೆ ಗೊತ್ತಿಲ್ಲದಿದ್ದರೂ ಅವರ ಹೃದಯವನ್ನು ಗೆಲ್ಲಲು ಸಾಧ್ಯ ಎಂಬುದನ್ನು ಅವರ ವೃತ್ತಿಜೀವನ ತೋರಿಸಿಕೊಟ್ಟಿದೆ. ರಾಜ್ಯದ ವಿಧಾನಸಭೆಯಲ್ಲಿ ಅವರು ಮಾತನಾಡುವುದು ಇಂಗ್ಲಿಷ್‌ನಲ್ಲೇ.

ನವೀನ್‌ ಒಡಿಶಾದ ದಂತಕತೆಯೇ ಆಗಿರುವ ಬಿಜಯ್‌ ಆನಂದ್‌ ಪಟ್ನಾಯಕ್‌ (ಬಿಜೂ ಪಟ್ನಾಯಕ್‌: 1916-1997) ಅವರ ದ್ವಿತೀಯ ಪುತ್ರ. ಭಾರತೀಯ ರಾಜಕಾರಣದ ಎತ್ತರದ ವ್ಯಕ್ತಿತ್ವವಾದ ಬಿಜೂ ಪಟ್ನಾಯಕ್‌ ಮಿಲಿಟರಿ ವ್ಯವಹಾರಗಳಲ್ಲಿ ತಜ್ಞತೆ ಇದ್ದವರು. ರಕ್ಷಣಾ ಖಾತೆಯ ವಿಷಯಗಳಲ್ಲಿ ಅವರು ಅಂದಿನ ಪ್ರಧಾನಿ ನೆಹರೂ ಅವರ ಅನಧಿಕೃತ ಸಲಹಾಕಾರರಾಗಿದ್ದವರು. ಓರ್ವ ಸಮರ್ಥ ವಿಮಾನ ಚಾಲಕರಾಗಿದ್ದ ಅವರು ಡಚ್ ಇಂಪೀರಿಯಲಿಸ್ಟ್‌ ಗಳೊಂದಿಗಿನ ಹೋರಾಟದ ವೇಳೆ ಇಂಡೋನೇಶ್ಯದ ಸ್ವಾತಂತ್ರ್ಯ ಹೋರಾಟಗಾರರನ್ನು ರಕ್ಷಿಸಿ ಕರೆತಂದವರು.

ಬಿಜೂ ಅವರು ಎರಡು ಅವಧಿಗಳಿಗೆ ಒಡಿಶಾದ ಮುಖ್ಯ ಮಂತ್ರಿಯಾಗಿದ್ದವರು ; ಕೇಂದ್ರದಲ್ಲಿ ಜನತಾಪಾರ್ಟಿ ಸರಕಾರವಿದ್ದಾಗ ಅದರಲ್ಲಿ ಸಚಿವ ಸ್ಥಾನವನ್ನೂ ನಿರ್ವಹಿಸಿದವರು. 1983ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಲು ಎಸ್‌. ಬಂಗಾರಪ್ಪ ಹಾಗೂ ಇತರರು ನಡೆಸಿದ ಹಕ್ಕು ಸಾಧನೆಯ ನಡುವೆಯೂ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ನೇಮಕಗೊಳ್ಳಲು ಬಿಜೂ ಅವರೇ ಕಾರಣ. ನನಗೆ ನೆನಪಿದೆ, ಜನತಾ ಕ್ರಾಂತಿರಂಗದ ಕೆಲ ಕಾರ್ಯಕರ್ತರು ಹೆಗಡೆಯವರನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಪಟ್ನಾಯಕ್‌ ಅವರ ಕುರ್ತಾವನ್ನು ಹರಿದು ಹಾಕಿದ್ದರು. ಎತ್ತರದ ಆಳಾಗಿದ್ದ ಹಾಗೂ ಉನ್ನತ ವ್ಯಕ್ತಿತ್ವದ ಬಿಜೂ ಪಟ್ನಾಯಕ್‌ ಇಂಥ ಘಟನೆಗಳಿಗೆ ಮಹತ್ತ್ವ ನೀಡದೆ ಬದಿಗೆ ಸರಿಸಿದ್ದರು.

ಮೆದು ಮಾತುಗಳು ಮೃದು ನಡವಳಿಕೆಯ ನವೀನ್‌ ಪಟ್ನಾಯಕ್‌ ವ್ಯಕ್ತಿತ್ವಕ್ಕೂ ಅವರ ತಂದೆಯ ವ್ಯಕ್ತಿತ್ವಕ್ಕೂ ಹಲವು ವ್ಯತ್ಯಾಸಗಳಿವೆ. ಅಂಕಣಕಾರ ಖುಷ್ವಂತ್‌ ಸಿಂಗ್‌ ಅವರು ನವೀನ್‌ ಪಟ್ನಾಯಕ್‌ ಕುರಿತಂತೆ ಸಲ್ಲದ ಟೀಕೆಗಳನ್ನು ಮಾಡಿದ್ದುಂಟು. ನವೀನ್‌ಗೂ ಮಮತಾ ದೀದಿಗೂ ಸಾಮ್ಯತೆಯಿರುವುದಾದರೆ ಅದು ಒಂದೇ ಒಂದು ವಿಷಯದಲ್ಲಿ . ನವೀನ್‌, ಮಮತಾ ಇಬ್ಬರೂ ಅವಿವಾಹಿತರೇ.

1936ರವರೆಗೆ ಒಡಿಶಾ ರಾಜ್ಯದ ಭೂಭಾಗ ಅವಿಭಜಿತ ಬಂಗಾಲದ ಅಂಗವಾಗಿತ್ತು. ಮಧುಸೂದನ್‌ ದಾಸ್‌, ಮಹಾರಾಜ ಕೃಷ್ಣಚಂದ್ರ ಗಜಪತಿ (ಪ್ರಥಮ ಪ್ರಧಾನಿ), ಬಿಸ್ವನಾಥ್‌ ದಾಸ್‌ ಮತ್ತಿತರ ಪ್ರಯತ್ನದಿಂದಾಗಿ ಒಡಿಶಾ ರಾಜ್ಯ ಅಸ್ತಿತ್ವಕ್ಕೆ ಬಂತು. ಅಂದ ಹಾಗೆ, ಒಡಿಶಾ, ನಮ್ಮ ದೇಶದ ಭಾಷಾವಾರು ರಾಜ್ಯಗಳಲ್ಲಿ ಮೊದಲನೆಯದು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ