ರಾಜ್ಯದಲ್ಲೀಗ ಅಸಂಬದ್ಧ ರಾಜಕೀಯ ನಾಟಕ


Team Udayavani, Sep 19, 2018, 6:00 AM IST

x-15.jpg

ರಾಜಕೀಯ ನೈತಿಕತೆಯ ಕೊರತೆ ಏನೇ ಇದ್ದರೂ ಮುಂದಿನ ಲೋಕಸಭಾ ಚುನಾವಣೆಯ ತನಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಮುಂದುವರಿಯಲು ಅವಕಾಶ ನೀಡಬೇಕು. ನಮ್ಮ ರಾಜಕೀಯ ನಾಯಕರು ನಗೆಪಾಟಲಿಗೀಡಾಗುವಂತೆ ಮಾಡಿರುವ ಬೆಳಗಾವಿಯ ಕೊಳಕು ರಾಜಕೀಯದ ನೆಪದಲ್ಲಿ ಸಮ್ಮಿಶ್ರ ಸರಕಾರದಿಂದ ಹೊರಬಂದರೂ ಕಾಂಗ್ರೆಸಿಗೆ ಹೆಚ್ಚೇನೂ ಲಾಭ ಆಗಲಾರದು.

ಕರ್ನಾಟಕದಲ್ಲೀಗ ಅಸಂಬದ್ಧ ರಾಜಕೀಯದ ನಾಟಕ ನಡೆಯುತ್ತಿದೆ. ಪರಿಣಾಮವಾಗಿ, ರಾಜ್ಯದಲ್ಲಿ ಅರಾಜಕತೆ ತಾಂಡವಾಡುತ್ತಿದೆ. ಎಚ್‌. ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ಲಕ್ವಾ ಬಡಿದಂತಾಗಿದೆ. ಕಳೆದ ಹದಿನೈದು ದಿನಗಳಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಸಹಿತ ಅವರ ಸಂಪುಟದ ಹಲವು ಸಚಿವರು ಬೆಳಗಾವಿಯಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಆರಿಸುವುದರಲ್ಲೇ ಮಗ್ನರಾಗಿದ್ದಾರೆ. ಮಂತ್ರಿಗಳೆಲ್ಲ ರಾಜಕೀಯ ವಿದ್ಯಮಾನಗಳಲ್ಲೇ ಮುಳುಗಿರುವುದರಿಂದ ಹಿರಿಯ ಅಧಿಕಾರಿಗಳೇ ಆಡಳಿತವನ್ನು ನಡೆಸುವಂತಾಗಿದೆ.

ಪ್ರಾಕೃತಿಕ ವಿಕೋಪಗಳಲ್ಲಿ ರಾಜ್ಯದ ಹಲವು ಭಾಗಗಳು ತತ್ತರಿಸಿದ್ದ ಸಂದರ್ಭದಲ್ಲೇ ನಾಟಕೀಯ ರಾಜಕೀಯ ವಿದ್ಯಮಾನಗಳೂ ಘಟಿಸಿದವು. ಹಿಂದೆಂದೂ ಕಂಡಿರದಂಥ ಮಹಾಮಳೆ ಹಾಗೂ ಪ್ರವಾಹ ಪೂರ್ಣ ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ವಿನಾಶ ಉಂಟುಮಾಡುತ್ತಿದ್ದರೆ, ಹಲವು ಜಿಲ್ಲೆಗಳು ಇನ್ನೂ ಒಂದು ವರ್ಷದ ತೀವ್ರ ಬರಗಾಲವನ್ನು ಅನುಭವಿಸುವ ದುರವಸ್ಥೆಯಲ್ಲಿವೆ. ನೆರೆಯಿಂದಾದ ಹಾನಿಯ ಪ್ರಮಾಣವನ್ನು ಅಂದಾಜಿಸಿ ವರದಿ ನೀಡಲು ಕೇಂದ್ರ ಸರಕಾರದ ಪರಿಶೀಲನ ತಂಡಗಳು ರಾಜ್ಯಕ್ಕೆ ಭೇಟಿ ನೀಡಿದ್ದು ರಾಜ್ಯದ ಸಂಕಷ್ಟ ಸ್ಥಿತಿಗೆ ಸಾಕ್ಷ್ಯ ನುಡಿಯುತ್ತಿವೆ. 

ಕನ್ನಡದ ವಾರ್ತಾ ವಾಹಿನಿಗಳಂತೂ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಟಾಳ್ಕರ್‌ ಹೆಸರುಗಳನ್ನು ಪದೇ ಪದೇ ಉಲ್ಲೇಖೀಸಿ ಅಸಹ್ಯವಾಗಿ ಬಾಯಿ ಬಡಿದುಕೊಳ್ಳುತ್ತಿವೆ. ಗಡಿ ಜಿಲ್ಲೆ ಬೆಳಗಾವಿಯ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌ ಒಂದರ ಚುನಾವಣೆಗೆ ಸಂಬಂಧಿಸಿ ಇವರ ಬೀದಿ ಜಗಳ ಸಮ್ಮಿಶ್ರ ಸರಕಾರದ ಅಸ್ತಿತ್ವವನ್ನೇ ಅಲುಗಾಡಿಸುತ್ತಿದೆ ಎಂದರೆ, ಆ ಸರಕಾರದ ಬುಡ ಎಷ್ಟು ಗಟ್ಟಿಯಿದೆ ಎಂಬುದನ್ನು ಗಮನಿಸಬಹುದು. ಇದು ಕಾಂಗ್ರೆಸ್‌ ಪಕ್ಷದ ಆಂತರಿಕ ಕಲಹ. ಆದರೆ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿಯೂ ಅಧಿಕಾರದಿಂದ ದೂರವುಳಿದು ನೋವು ತಿನ್ನುತ್ತಿರುವ ಬಿಜೆಪಿ ಬೆಳಗಾವಿಯ ಪ್ರಕ್ಷುಬ್ದ ಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿದೆ. ಕದಡಿದ ನೀರಿನಲ್ಲಿ ಗಾಳ ಹಾಕಿ ಮೀನು ಹಿಡಿಯಲು ಮುಂದಾಗಿರುವ ಜತೆಗೆ ಇತರ ಕ್ಷೇತ್ರಗಳಲ್ಲೂ ಸಮ್ಮಿಶ್ರ ಸರಕಾರದ ಅಂಗಪಕ್ಷಗಳ ಶಾಸಕರನ್ನು ಸೆಳೆಯುವ ಪ್ರಯತ್ನಗಳನ್ನು ಮುಂದುವರಿಸಿದೆ.

ಜಾರಕಿಹೊಳಿ ಕುಟುಂಬದ ನಾಲ್ವರು ಸಹೋದರರ ಪೈಕಿ ಇಬ್ಬರಿಗೆ ಹಾಗೂ ಲಕ್ಷ್ಮೀ ಹೆಬ್ಟಾಳ್ಕರ್‌ ಅವರಿಗೆ ವಾರ್ತಾ ವಾಹಿನಿಗಳು ಎಷ್ಟೇ ಪ್ರಚಾರ ಕೊಡುತ್ತಿದ್ದರೂ ಈ ಮೂವರೂ ತಾಲೂಕು ಪಂಚಾಯತ್‌ ಹಂತದ ರಾಜಕಾರಣಿಗಳಷ್ಟೇ. ರಾಜ್ಯ ರಾಜಕಾರಣದಲ್ಲಿ ಅಸ್ತಿತ್ವ ಸಾರುವಷ್ಟು ಮಟ್ಟವನ್ನು ಅವರು ಏರಿಲ್ಲ ಎಂದೇ ಹೇಳಬೇಕಾಗುತ್ತದೆ. ಮಾಧ್ಯಮಗಳು ಅವರಿಗೆ ಗರಿಷ್ಠ ಪ್ರಚಾರ ಕೊಡುವ ತನಕ ರಾಜ್ಯದ ರಾಜಧಾನಿಯಲ್ಲಿ ಇವರ ಪರಿಚಯ ಕೆಲವರಿಗಷ್ಟೇ ಇತ್ತು. ನಾಲ್ವರು ಸಹೋದರರ ಪೈಕಿ ಸತೀಶ್‌ ಜಾರಕಿಹೊಳಿ ರಾಜ್ಯದ ಮುಖ್ಯಮಂತ್ರಿಯಾಗಬಲ್ಲರು ಎಂದು ಒಬ್ಬರು ಹೇಳಿರುವುದು ಅಚ್ಚರಿ ಮೂಡಿಸುತ್ತಿದೆ. ವಿನಯಪೂರ್ವಕವಾಗಿ “ಇಲ್ಲ’ ಎಂದು ಹೇಳುವುದೇ ಇದಕ್ಕೆ ಉತ್ತರ. ರಾಜ್ಯ ಮಟ್ಟದ ನಾಯಕರಾಗುವ ವ್ಯಕ್ತಿತ್ವ ಅಥವಾ ಗುಣವನ್ನು ಅವರು ಈವರೆಗೂ ಬೆಳೆಸಿಕೊಂಡಿಲ್ಲ. ಅವರಿಗಿಂತ ಉನ್ನತ ಸಾಧನೆಗಳನ್ನು ಮಾಡಿದ ಹಲವು ರಾಜಕಾರಣಿಗಳು ಹಾಗೂ ಸಮಾಜ ಸೇವಕರು ಮಂತ್ರಿ ಕೂಡ ಆಗಲಿಲ್ಲ. ಈ ಹಿಂದೆ ಕಾಂಗ್ರೆಸ್‌ ನಾಯಕರಾಗಿದ್ದ ಎಚ್‌.ಸಿ. ಲಿಂಗಾ ರೆಡ್ಡಿ, ವೈ. ರಾಮಚಂದ್ರ ಹಾಗೂ ಕೆ. ಶ್ರೀರಾಮುಲು (ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಹಾಗೂ ಮತ್ತೂಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಉಪಮುಖ್ಯಮಂತ್ರಿ ಆಗುವುದಾಗಿ ಹೇಳಿಕೊಳ್ಳುತ್ತಿರುವ ಇದೇ ಹೆಸರಿನ ಬಿಜೆಪಿಯ ಮುಖಂಡರೊಬ್ಬರಿದ್ದಾರೆ. ಗೊಂದಲ ಬೇಡ) ಅವರೆಲ್ಲ ಸಚಿವರಾಗಲೇ ಇಲ್ಲ. ಅಷ್ಟು ಬೇಡ, ಸ್ವಲ್ಪವೇ ಹಿಂದಕ್ಕೆ ನೋಡಿದರೂ ಜ್ಞಾನಿ ಹಾಗೂ ಸಮರ್ಥರಾಗಿದ್ದ ಡಾ| ಬಿ.ಕೆ. ಚಂದ್ರಶೇಖರ್‌ ಅವರು ರಾಜ್ಯ ದರ್ಜೆಯ ಸಚಿವರಷ್ಟೇ ಆಗಿ ತೃಪ್ತಿಪಡಬೇಕಾಯಿತು. ಲಕ್ಷ್ಮೀ ಹೆಬ್ಟಾಳ್ಕರ್‌ ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯೂ ಆಗಿದ್ದಾರೆ. ಅದಕ್ಕಿಂತ ಹೆಚ್ಚೇನೂ ಇಲ್ಲ. ಆದರೆ, ಅವರಲ್ಲಿ ರಾಜಕೀಯ ಮಹತ್ವಾಕಾಂಕ್ಷೆ ಬೆಟ್ಟದಷ್ಟಿದೆ.

ಮಹಿಳಾ ಶಾಸಕಿ ಹಾಗೂ ಜಾರಕಿಹೊಳಿ ಕುಟುಂಬದ ಇಬ್ಬರು ಸಹೋದರರ ನಡುವೆ ಬೆಳಗಾವಿಯಲ್ಲಿ ನಡೆಯುತ್ತಿರುವ ಕುಸ್ತಿಯೇ ಈಗ ಆ ಜಿಲ್ಲೆಯ ಪ್ರಮುಖ ಬೆಳವಣಿಗೆ. 1956ರ ಬಳಿಕ ಜಿಲ್ಲೆಯಲ್ಲಿ ಪ್ರಭಾವಶಾಲಿಯಾಗಿ ಬೆಳೆದ ಲಿಂಗಾಯತರು ಹಾಗೂ ಹಿಂದುಳಿದ ವರ್ಗಗಳ ನಡುವಿನ ಸಮರವಾಗಿಯೂ ಇದು ಗುರುತಿಸಿಕೊಂಡಿದೆ. ಕಾಂಗ್ರೆಸಿನಲ್ಲಿದ್ದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭಿಸಿದ ಅಹಿಂದ ಚಳವಳಿಯ ಜತೆಗೆ ಗುರುತಿಸಿಕೊಂಡಿರುವ ಜಾರಕಿಹೊಳಿ ಸಹೋದರರ ಪೈಕಿ ರಮೇಶ್‌ ಸಚಿವರೂ ಆಗಿದ್ದಾರೆ. ಸಾರಾಯಿ ಗುತ್ತಿಗೆದಾರರಾಗಿ ಬೆಳಕಿಗೆ ಬಂದ ಲಕ್ಷ್ಮಣರಾವ್‌ ಜಾರಕಿಹೊಳಿ ಕುಟುಂಬ ಆ ಮೇಲೆ ಬೆಳಗಾವಿಯ ರಾಜಕೀಯ, ಸಕ್ಕರೆ ಕಾರ್ಖಾನೆಗಳು ಹಾಗೂ ಇತರ ಕ್ಷೇತ್ರಗಳಲ್ಲಿ ಬೆಳೆದು ಬಂದಿದೆ. ಜಿಲ್ಲೆಯ ಮಟ್ಟಿಗೆ ಇಂದಿಗೂ ಜಾರಕಿಹೊಳಿ ಕುಟುಂಬ ಏಕಸ್ವಾಮ್ಯ ಸಾಧಿಸಿದೆ. ನಾಲ್ವರು ಸಹೋದರರ ಪೈಕಿ ಬಾಲಚಂದ್ರ ಅರಭಾವಿಯಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಮೇಶ್‌ ಗೋಕಾಕ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ, ಸತೀಶ್‌ ಯಮಕನಮರಡಿ ಕ್ಷೇತ್ರದಲ್ಲಿ ಸತತವಾಗಿ ಜಯಗಳಿಸಿದ್ದಾರೆ. ಕೊನೆಯ ಸಹೋದರ ಲಖನ್‌ ಕೂಡ ಶಾಸನ ಸಭೆಯಲ್ಲಿ ಜನರನ್ನು ಪ್ರತಿನಿಧಿಸುವ ವಿಫ‌ಲ ಪ್ರಯತ್ನ ಮಾಡಿದ್ದಾರೆ.

ಜಾರಕಿಹೊಳಿ ಕುಟುಂಬದಲ್ಲಿ ಒಂದು ಅಲಿಖೀತ ನಿಯಮ ಪಾಲನೆಯಾಗುತ್ತಿದೆ. ಅಧಿಕಾರ ಹಿಡಿಯಬಲ್ಲಷ್ಟು ಸಮರ್ಥವಾಗಿರುವ ವಿವಿಧ ರಾಜಕೀಯ ಪಕ್ಷಗಳಿಂದ ಈ ಸಹೋದರರು ಸ್ಪರ್ಧಿಸುತ್ತಾರೆ. ಮಂಡ್ಯದಂತಹ ಕೆಲವು ಜಿಲ್ಲೆಗಳ ರಾಜಕಾರಣಿಗಳೂ ಇದೇ ನೀತಿಯನ್ನು ಅನುಸರಿಸುತ್ತಾರೆ. ಅಲ್ಲಿ ಅವರು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮಧ್ಯೆ ತಮ್ಮ ನಿಷ್ಠೆ ಬದಲಿಸುತ್ತಿರುತ್ತಾರೆ. ಜಾರಕಿಹೊಳಿ ಸಹೋದರರು ಜೆಡಿಎಸ್‌ನಲ್ಲಿ ಇಲ್ಲ. ಏಕೆಂದರೆ, ಅವರ ಜಿಲ್ಲೆಯಲ್ಲಿ ಆ ಪಕ್ಷಕ್ಕೆ ಅಸ್ತಿತ್ವವೇ ಇಲ್ಲ. ಬೇರೆ ಬೇರೆ ಪಕ್ಷ ಹಾಗೂ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ಅವರು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಎರಡರಲ್ಲೂ ಪ್ರಾತಿನಿಧ್ಯ ಪಡೆಯುತ್ತಾರೆ. ಈ ಆಟಕ್ಕೆ ಸಹಕರಿಸುತ್ತ ಅವರು ಬೆಳಗಾವಿ ರಾಜಕೀಯದ ಮೇಲೆ ಹಿಡಿತ ಹೊಂದಲು ಸಹಕರಿಸುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳೇ ಇದಕ್ಕೆ ಹೊಣೆ ಎಂದರೆ ತಪ್ಪಿಲ್ಲ. ಶಾಸಕರಾಗಿ ಆಯ್ಕೆಯಾಗುವುದೇ ಮುಖ್ಯ ಎನಿಸಿರುವ ಈ ಕುಟುಂಬಕ್ಕೆ ರಾಜಕೀಯ ನಿಷ್ಠೆ ಗೌಣ.

ಜಾರಕಿಹೊಳಿ – ಕರ್ನಿಂಗ್‌ ದ್ವೇಷ
ಜಾರಕಿಹೊಳಿ ಕುಟುಂಬ ಈ ಹಿಂದೆ ಗೋಕಾಕ್‌ ಹಾಗೂ ಆಸುಪಾಸಿನಲ್ಲಿ ಪ್ರಬಲವಾಗಿದ್ದ ಕರ್ನಿಂಗ್‌ ಕುಟುಂಬದಿಂದ ಬದ್ಧ ವೈರತ್ವ ಎದುರಿಸಿತ್ತು. ಕರ್ನಿಂಗ್‌ ಕುಟುಂಬವೂ ಸಾರಾಯಿ ವ್ಯವಹಾರವನ್ನೇ ನಡೆಸುತ್ತಿತ್ತು. ಆಗಾಗ ಈ ಎರಡೂ ಕುಟುಂಬಗಳ ಮಧ್ಯೆ ಘರ್ಷಣೆ ಸಂಭವಿಸುತ್ತಿತ್ತು. ಕರ್ನಿಂಗ್‌ ಕುಟುಂಬದಲ್ಲಿ ಒಬ್ಬರಾದ ಶಂಕರ್‌ 1998ರಲ್ಲಿ ಗೋಕಾಕ್‌ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಆದರೆ, ರಾಜಕೀಯದಲ್ಲಿ ಅದಕ್ಕಿಂತ ಹೆಚ್ಚಿನ ಸಾಧನೆ ಮಾಡುವುದು ಅವರಿಂದ ಆಗಲಿಲ್ಲ. ಕರ್ನಿಂಗ್‌ ಹಾಗೂ ಜಾರಕಿಗೊಳಿ ಕುಟುಂಬದ ನಡುವಿನ ಕಲಹ ಮಿತಿ ಮೀರಿದಾಗ ರಾಜ್ಯ ಸರಕಾರ ಆಯೋಗವೊಂದನ್ನು ರಚಿಸಿ, ತನಿಖೆ ನಡೆಸಿ, ತಪ್ಪಿತಸ್ಥರನ್ನು ಗುರುತಿಸುವಂತೆ ಸೂಚಿಸಿತು ಎಂಬ ವಿಚಾರ ಹಲವರಿಗೆ ಗೊತ್ತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ.ಎನ್‌. ಕೃಷ್ಣನ್‌ ನೇತೃತ್ವದ ಆಯೋಗ ತನಿಖೆ ಮಾಡಿ, ವರದಿ ಒಪ್ಪಿಸಿದರೂ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬೆಳಗಾವಿಯಂತಹ ಅಭಿವೃದ್ಧಿಶೀಲ ಜಿಲ್ಲೆಯಲ್ಲಿ ಉತ್ತರ ಪ್ರದೇಶ, ಬಿಹಾರ ಮುಂತಾದ ರಾಜ್ಯಗಳಲ್ಲಿರುವಂತೆ ಜಾರಕಿಹೊಳಿ ಕುಟುಂಬ ರಾಜಕೀಯ ಮಾಡುತ್ತಿರುವುದೇ ಇದಕ್ಕೆ ಕಾರಣವಿದ್ದೀತು. ಈ ದಿನಗಳಲ್ಲಿ ಜಾರಕಿಹೊಳಿಗಳಿಗೆ ಉಂಬಳಿ ಕೊಟ್ಟಂತಿರುವ ಗೋಕಾಕ ಬ್ರಿಟಿಷ್‌ ಕಾಲದಲ್ಲಿ ಆರಂಭವಾದ ಸುಪ್ರಸಿದ್ಧ ಜವಳಿ ಮಿಲ್‌ ಇರುವ ತಾಣ. ನೂಲು ಉತ್ಪಾದನೆಯಲ್ಲಿ ಈ ಮಿಲ್‌ ಹೆಸರು ಮಾಡಿದೆ.

ಈ ಜಿಲ್ಲೆಯ ರಾಜಕೀಯಕ್ಕೆ ತಾವೇ ನಾಯಕರು ಎನ್ನುವ ಮನಸ್ಥಿತಿಯಲ್ಲಿರುವ ಜಾರಕಿಹೊಳಿ ಸಹೋದರರು, ಬೆಳಗಾವಿ ರಾಜಕೀಯದಿಂದ ದೂರ ಇರುವಂತೆ ತಾಕೀತು ಮಾಡಿದ್ದಾರೆ. ಜಿಲ್ಲೆಯ ರಾಜಕೀಯ ವಿದ್ಯಮಾನಗಳು ನಿಯಂತ್ರಣ ತಪ್ಪಲು ಅವಕಾಶ ಕೊಟ್ಟಿದ್ದೇ ಪ್ರದೇಶ ಕಾಂಗ್ರೆಸ್‌ ಸಮಿತಿ ಹಾಗೂ ಎಐಸಿಸಿಯ ತಪ್ಪು. ಜಾರಕಿಹೊಳಿ ಸಹೋದರರು ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತು ಕೇಳಬಹುದೇನೋ.

ಜಾರಕಿಹೊಳಿ – ಹೆಬ್ಟಾಳ್ಕರ್‌ ಗಲಾಟೆಯ ಲಾಭ ಪಡೆದು ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪಗಳಿವೆ. ಆದರೆ, ಬಿಜೆಪಿ ಮುಂದಿನ ವರ್ಷದ ಲೋಕಸಭಾ ಚುನಾವಣೆ ತನಕ ಅವಕಾಶಕ್ಕಾಗಿ ಕಾಯುವುದೊಳಿತು. ಪ್ರಧಾನಿ ನರೇಂದ್ರ ಮೋದಿ ಮುಂದಿನ ಸಲವೂ ಅಧಿಕಾರ ಉಳಿಸಿಕೊಳ್ಳುತ್ತಾರೋ ಎಂಬ ವಿಚಾರದ ಮೇಲೆ ಸಮ್ಮಿಶ್ರ ಸರಕಾರದ ಭವಿಷ್ಯವೂ ನಿಂತಿದೆ. ರಾಷ್ಟ್ರ ರಾಜಕಾರಣಕ್ಕೆ “ಆಪರೇಷನ್‌ ಕಮಲ’ದಂತಹ ಕೊಡುಗೆ ನೀಡಿದ್ದು ರಾಜ್ಯ ಬಿಜೆಪಿಯ ಸಾಧನೆ. ಪ್ರತಿಪಕ್ಷದ ಅಂತಹ ಮಹತ್ವವೇನೂ ಇಲ್ಲದ ಶಾಸಕರ ಕೈಯಲ್ಲಿ ರಾಜೀನಾಮೆ ಕೊಡಿಸಿ, ಅವರು ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲುವಂತೆ ಮಾಡಿದ ಬಿಜೆಪಿ ಅದರ ಲಾಭ ಉಂಡಿದ್ದು ಅಲ್ಪಾವಧಿಗಷ್ಟೇ. ಆಪರೇಷನ್‌ ಎಂಬ ಶಬ್ದ ಈಗ ರಾಜಕೀಯದಲ್ಲಿ ಕೆಟ್ಟ ಅರ್ಥವನ್ನು ಪಡೆದುಕೊಂಡಿದೆ. ಅದು ಬಿಜೆಪಿಯ ಪ್ರತಿಷ್ಠೆಗೂ ಧಕ್ಕೆಯುಂಟುಮಾಡಿದೆ. ಅಧಿಕಾರಕ್ಕಾಗಿ ಬಿಜೆಪಿ ಬಳ್ಳಾರಿಯ ರೆಡ್ಡಿ ಸಹೋದರರನ್ನು ಅವಲಂಬಿಸಿರುವುದೂ ಆ ಪಕ್ಷಕ್ಕೆ ಹಿನ್ನಡೆಯೇ ಸರಿ. ಹಿಂದೆ ಮಾಡಿದ ತಪ್ಪನ್ನು ಬಿಜೆಪಿ ಮತ್ತೆ ಮಾಡಬಾರದು. ಪ್ರತಿಪಕ್ಷದಲ್ಲೇ ಉಳಿದು ರಚನಾತ್ಮಕ ಕೆಲಸಗಳನ್ನು ಮಾಡಬೇಕು. ಹೇಗಿದ್ದರೂ ಬಿಜೆಪಿ ರಾಜ್ಯದಲ್ಲಿ ಆಡಳಿತ ಮಾಡುವುದಕ್ಕಿಂತ ಪ್ರತಿಪಕ್ಷವಾಗಿಯೇ ಹೆಚ್ಚು ಗುರುತಿಸಿಕೊಂಡಿದೆ.

ರಾಜಕೀಯ ನೈತಿಕತೆಯ ಕೊರತೆ ಏನೇ ಇದ್ದರೂ ಮುಂದಿನ ಲೋಕಸಭಾ ಚುನಾವಣೆಯ ತನಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಮುಂದುವರಿಯಲು ಅವಕಾಶ ನೀಡಬೇಕು. ನಮ್ಮ ರಾಜಕೀಯ ನಾಯಕರು ನಗೆಪಾಟಲಿಗೀಡಾಗುವಂತೆ ಮಾಡಿರುವ ಬೆಳಗಾವಿಯ ಕೊಳಕು ರಾಜಕೀಯದ ನೆಪದಲ್ಲಿ ಸಮ್ಮಿಶ್ರ ಸರಕಾರದಿಂದ ಹೊರಬಂದರೂ ಕಾಂಗ್ರೆಸಿಗೆ ಹೆಚ್ಚೇನೂ ಲಾಭ ಆಗಲಾರದು. 

ಈ ಹಿಂದೆ ಬಿಜೆಪಿಗೆ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆದ ಕುಮಾರಸ್ವಾಮಿ ಅವರಿಗೂ ಅದೇ ಸವಕಲು ನಾಣ್ಯವನ್ನು ತೋರಿಸುವ ತುಡಿತವನ್ನು ಕಾಂಗ್ರೆಸ್‌ ನಿಯಂತ್ರಿಸಿಕೊಳ್ಳಬೇಕು.

ಟಾಪ್ ನ್ಯೂಸ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.