ಮುಸ್ಲಿಂ ಕಾನೂನು ಮಂಡಳಿ ಕೋಪವೂ, ಬಿಎಚ್‌ಯು ಗದ್ದಲವೂ

Team Udayavani, Nov 22, 2019, 5:00 AM IST

ಮುಸ್ಲಿಂ ವೈಯಕ್ತಿಕ ಕಾಯಿದೆಗಳಲ್ಲಿ ಸುಧಾರಣೆ ತರುವ ಪ್ರಯತ್ನಗಳನ್ನೆಲ್ಲ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧಿಸುತ್ತಲೇ ಬಂದಿದೆ. ಹಾಗೆಂದು ಅದರ ನಿಲುವಿಗೆ ನಾವು ತಕರಾರೆತ್ತಿದ ಮಾತ್ರಕ್ಕೆ, ಇನ್ನಾವುದೇ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂಗಳ ಅವಿವೇಕದ ವರ್ತನೆಯನ್ನು ಸಮರ್ಥಿಸಬೇಕೆಂದೇನೂ ಇಲ್ಲ. ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗಕ್ಕೆ ಫಿರೋಜ್‌ ಖಾನ್‌ ಎಂಬ ಮುಸ್ಲಿಂ ಸಂಸ್ಕೃತ ವಿದ್ವಾಂಸರನ್ನು ಅಸಿಸ್ಟೆಂಟ್‌ ಪ್ರೊಫೆಸರ್‌ ಆಗಿ ನೇಮಕ ಮಾಡಲಾಗಿರುವುದನ್ನು ವಿರೋಧಿಸಲಾಗುತ್ತಿರುವುದು ಸರಿಯೇ?

ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಲು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ನಿರ್ಧರಿಸಿದೆ; ಇದು ಅಚ್ಚರಿಯ ಸಂಗತಿಯೇನೂ ಅಲ್ಲ. ಮುಸ್ಲಿಂ ವೈಯಕ್ತಿಕ ಕಾಯಿದೆಗಳಲ್ಲಿ ಸುಧಾರಣೆ ತರುವ ಉದ್ದೇಶದ ಯಾವುದೇ ಪ್ರಯತ್ನವನ್ನು ಅದರಲ್ಲೂ ವಿಶೇಷವಾಗಿ, ಮುಸ್ಲಿಂ ಮಹಿಳೆಯರಿಗೆ ಸಂಬಂಧಿಸಿದ ಕಾಯಿದೆಗಳನ್ನು ಅಷ್ಟೇಕೆ , ಮುಸ್ಲಿಂ ಸಮುದಾಯದ ನಡಾವಳಿಗೆ ವಿರುದ್ಧವಾದ ನ್ಯಾಯಾಲ ಯದ ತೀರ್ಪುಗಳನ್ನು ಕೂಡ ಮಂಡಳಿ ವಿರೋಧಿಸುತ್ತಲೇ ಬಂದಿದೆ. ಶಾಬಾನೂ ಪ್ರಕರಣ ಹಾಗೂ ತ್ರಿವಳಿ ತಲಾಖ್‌ ಪದ್ಧತಿಗೆ ಸಂಬಂಧಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಮಾತ್ರವಲ್ಲ ತ್ರಿವಳಿ ತಲಾಖ್‌ ಕುರಿತ ಶಾಸನವನ್ನೂ ಎಐಎಂಪಿ ಎಲ್‌ಬಿ ವಿರೋಧಿಸಿತ್ತು. ಈ ಮಂಡಳಿಗೆ ಸಂಬಂಧಿಸಿದ ಕೆಲವರು ನ.17ರಂದು ಪತ್ರಿಕಾಗೋಷ್ಠಿ ಕರೆದು ಎಐಎಂಪಿಎಲ್‌ಬಿ ಈ ದೇಶದ ಮುಸ್ಲಿಮರನ್ನು ಪ್ರತಿನಿಧಿಸುವಂಥ ಘಟಕ ಎಂಬ ಹೇಳಿಕೆ ನೀಡಿದ್ದರು. ರಾಮ ಜನ್ಮಭೂಮಿ ವಿಷಯದಲ್ಲಿ ನಿಮ್ಮ ನಿಲುವೇನು ಎಂಬ ಪ್ರಶ್ನೆಯನ್ನು ಈ ಸಂದರ್ಭದಲ್ಲಿ ಮಂಡಳಿಯ ಪ್ರತಿನಿಧಿಗಳಿಗೆ ಹಾಕಲಾಗಿತ್ತು. ಈ ಮಂಡಳಿಯಲ್ಲಿ ಮುಸ್ಲಿಂ ಉಲೇಮಾ (ಧಾರ್ಮಿಕ ಮುಂದಾಳು)ಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ವಿಶೇಷವಾಗಿ ದೇವ್‌ಬಂದಿ ಉಲೇಮಾ, ಜಮಾಯಿತ್‌-ಎ- ಉಲೇಮಾ ಹಾಗೂ ಇನ್ನಿತರ ಉಲೇಮಾಗಳ ಪ್ರತಿನಿಧಿಗಳು ಇದರ ಲ್ಲಿದ್ದಾರೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಈ ಮಂಡಳಿ ಇಡೀ ದೇಶ ದಲ್ಲೇ ಅತ್ಯಂತ ಸಂಪ್ರದಾಯಬದ್ಧ ಘಟಕವಾಗಿದ್ದು, ಮುಸ್ಲಿಂ ಕಾನೂನು ಸಂಬಂಧಿ ಸುಧಾರಣೆಗಳ ಕಡು ವಿರೋಧಿಯಾಗಿದೆ.

ಎಲ್ಲಕ್ಕಿಂತ ಮೊದಲಿಗೆ ಹೇಳಬೇಕಾದ ಮಾತೆಂದರೆ ಈ ಮಂಡಳಿ ಯಾವುದೇ “ಅಧಿಕೃತ’ ಘಟಕವಲ್ಲ. ಇದೊಂದು ಸರಕಾರೇತರ ಸಂಘಟನೆ. ಇಂದಿರಾ ಪ್ರಧಾನಿಯಾಗಿದ್ದಾಗ ಅಸ್ತಿತ್ವಕ್ಕೆ ಬಂದಿದ್ದ ಘಟಕ ಇದು. ಇಸ್ಲಾಮಿ ಕಾಯಿದೆಗಳನ್ನು ವಿಶೇಷವಾಗಿ 1937ರ ಮುಸ್ಲಿಂ ವೈಯಕ್ತಿಕ ಕಾಯಿದೆ (ಷರಿಯಾ)ಯನ್ನು ರಕ್ಷಿಸುವ ಹಾಗೂ ಇಂಥ ಕಾಯಿದೆಗಳ ಅನುಷ್ಠಾನವನ್ನು ಮುಂದುವರಿಸುವ ಆಶಯದಿಂದ ಇದನ್ನು ಅಸ್ತಿತ್ವಕ್ಕೆ ತರಲಾಗಿತ್ತು. ಆ ದಿನಗಳಲ್ಲಿ ಮುಸ್ಲಿಮರು (ದಾವೂದಿ ಬೋರಾ ಹಾಗೂ ಇಸ್ಮಾಯಿಲಿಗಳಂಥ ಶಿಯಾ ಪಂಗಡದವರು) ಹಿಂದು ವೈಯಕ್ತಿಕ ಕಾಯಿದೆಗಳನ್ನು ಅನುಸರಿಸಬೇಕಿತ್ತು. ಇಂದು ಕೂಡ ಈ ಮಂಡಳಿ ಭಾರತದ ಎಲ್ಲ ಮುಸ್ಲಿಮರನ್ನು ಪ್ರತಿನಿಧಿಸುತ್ತಿಲ್ಲ, ಏಕೆಂದರೆ ಅದು ಅಹ್ಮದೀಯ ಪಂಗಡದವರನ್ನು ಒಳಗೊಂಡಿಲ್ಲ. ಅಂದರೆ ಪಾಕಿಸ್ಥಾನದಲ್ಲಿನ ನಿಲುವನ್ನೇ ಇಲ್ಲೂ ಅನುಸರಿಸಲಾಗುತ್ತಿದೆ. (ಪಾಕಿಸ್ಥಾನದಲ್ಲಿ ಅಹ್ಮದೀಯ ಪಂಗಡದವರಿಗೆ ಮಾನ್ಯತೆ ಇಲ್ಲ). ವಿಪರ್ಯಾ ಸವೆಂದರೆ ಪಾಕಿಸ್ಥಾನದ ಸಂಸ್ಥಾಪಕರಲ್ಲಿ ಒಬ್ಬರು ಅಹ್ಮದೀಯ ಪಂಗಡದವರೇ (ಸರ್‌ ಎಂ. ಜಾಫ‌ರುಲ್ಲಾ ಖಾನ್‌). ಖ್ಯಾತ ನ್ಯಾಯಶಾಸ್ತ್ರವೇತ್ತ ಜಾಫ‌ರುಲ್ಲಾ ಖಾನ್‌ ರಾಷ್ಟ್ರ ವಿಭಜನೆಯ ಬಳಿಕ ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರ ಸ್ಥಾಪಿಸಬೇಕೆಂಬ ಮುಸ್ಲಿಂ ಲೀಗಿನ ಬೇಡಿಕೆ ಕುರಿತಾಗಿದ್ದ “ಲಾಹೋರ್‌ ನಿರ್ಣಯ’ವನ್ನು ಬರೆದು ಕೊಟ್ಟವರು. 1940ರಲ್ಲಿ ಲಾಹೋರ್‌ನಲ್ಲಿ ನಡೆದ ಮುಸ್ಲಿಂ ಲೀಗ್‌ನ ವಾರ್ಷಿಕಾಧಿವೇಶನದಲ್ಲಿ ಸ್ವೀಕರಿಸಲಾಗಿದ್ದ ನಿರ್ಣಯ ಅದು. ಅಷ್ಟೇ ಅಲ್ಲ ವಿಶ್ವಸಂಸ್ಥೆಯಲ್ಲಿ ಜಮ್ಮು-ಕಾಶ್ಮೀರ ಕುರಿತ ಭಾರತದ ನಿಲುವನ್ನೂ ಅವರು ವಿರೋಧಿಸಿದ್ದರು.

ಪಾಕಿಸ್ಥಾನದ ಏಕೈಕ ನೋಬೆಲ್‌ ಪ್ರಶಸ್ತಿ ಪುರಸ್ಕೃತರೆಂಬ ಹೆಗ್ಗಳಿಕೆಯ ಗಣಿತಶಾಸ್ತ್ರಜ್ಞ ಅಬ್ದುಸ್ಸಲಾಮ್‌ ಕೂಡ ಅಹ್ಮದೀಯರೇ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಒಂದು ಸಮಸ್ಯೆಯೆಂದರೆ ಅದು ಮುಸ್ಲಿಂ ವೈಯಕ್ತಿಕ ಕಾಯಿದೆಗಳನ್ನು ಧರ್ಮ ಹಾಗೂ ಸಂಸ್ಕೃತಿಗಳೊಡನೆ ಸಮೀಕರಿಸಿ ಮಾತನಾಡುತ್ತದೆ. ಈಗ ನೆಲಸಮ ಗೊಂಡಿರುವ ಬಾಬರಿ ಮಸೀದಿ, ಉರ್ದು ಭಾಷೆ, ಅಲೀಗಢ ವಿಶ್ವವಿದ್ಯಾನಿಲಯ ಅಲ್ಪಸಂಖ್ಯಾತ‌ ಶಿಕ್ಷಣ ಸಂಸ್ಥೆಯೆಂಬ ವಾದ, ಮದ್ರಸಗಳಲ್ಲಿ ಮುಸ್ಲಿಂ ಮಕ್ಕಳಿಗೆ ಶಿಕ್ಷಣ ಮುಂತಾದ ವಿಷಯಗಳಲ್ಲಿ ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಲೇ ಬಂದಿರು ವುದಕ್ಕೆ ಇದೇ ಕಾರಣ. ಇನ್ನು, ಮುಸ್ಲಿಂ ಮಹಿಳೆಯರಿಗೆ ಸಂಬಂಧಿಸಿದ ಕಾಯಿದೆಗಳಲ್ಲಿ ಸುಧಾರಣೆ ತರಬೇಕೆಂಬ ವಿಷಯ ದಲ್ಲಿ ಆಕ್ರಮಣಕಾರಿ ವಿರೋಧ ಪ್ರದರ್ಶಿಸುತ್ತಿದೆ. ಮಂಡಳಿ ವ್ಯಕ್ತಪಡಿ ಸುತ್ತಾ ಬಂದಿರುವ ನಿಲುವುಗಳನ್ನು ವಿವಿಧ ನ್ಯಾಯಶಾಸ್ತ್ರ ವಿಶಾರದರು (ನ್ಯಾ| ಮೊಹಮ್ಮದ್‌ ಕರೀಂ, ಡಾ| ರಫೀಕ್‌ ಜಕಾರಿಯ, ಅಲ್ಪಸಂಖ್ಯಾತರ ಆಯೋಗದ ಹಿಂದಿನ ಅಧ್ಯಕ್ಷ ಪ್ರೊ| ತಾಹೀರ್‌ ಮೆಹಮೂದ್‌ ಇತ್ಯಾ ದಿ) ವಿವಿಧ ಸಂದರ್ಭಗಳಲ್ಲಿ ವಿರೋಧಿಸಿದ್ದಾರೆ. ಶಾಬಾನೂ ಪ್ರಕರಣದಲ್ಲಿ ತೀರ್ಪಿನ ಒಕ್ಕಣೆ ಬರೆದವರಲ್ಲೊಬ್ಬರಾದ ಅಂದಿನ ಶ್ರೇಷ್ಠ ನ್ಯಾಯಮೂರ್ತಿ ವೈ.ವಿ. ಚಂದ್ರಚೂಡ್‌ ಸಹ ಮಂಡಳಿಯ ನಿಲುವು ಪ್ರಶ್ನಿಸಿದ್ದರು. ಪ್ರೊ| ತಾಹಿರ್‌ ಮೆಹಮೂದ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮುಸ್ಲಿಂ ಸಮುದಾಯಕ್ಕೆ ಪ್ರಯೋಜನ ಕಾರಿಯಾಗಿ ಪರಿಣಮಿಸ ಬಹುದಾದ ಎಲ್ಲ ಪ್ರಯತ್ನಗಳಿಗೂ ಮಂಡಳಿ ಅಡ್ಡಿಯಾಗಿ ರುವುದರಿಂದ ಅದನ್ನು ಬರ್ಖಾಸ್ತು ಗೊಳಿಸಬೇಕೆಂದು ಆಗ್ರಹಿಸಿದ್ದರು. ಮುಸ್ಲಿಂ ಕಾನೂನು ದೇಶದ ಸಿವಿಲ್‌ ಕಾನೂನಿನ ಭಾಗವೇ ಹೊರತು ಮುಸ್ಲಿಂ ಧರ್ಮದ ಅಂಗವಲ್ಲ ಎಂದು ವಾದಿಸಿದ್ದರು. ಅಂದಹಾಗೆ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಯೋಧ್ಯಾ ತೀರ್ಪನ್ನು ವಿರೋಧಿ ಸುತ್ತಿರುವುದೇಕೆ? ರಾಮಜನ್ಮಭೂಮಿ ಸಂಕೀರ್ಣದಿಂದ ಹೊರಗಡೆ ಎಲ್ಲಾದರೂ ಮಸೀದಿ ಕಟ್ಟಿಕೊಳ್ಳಿ ಎಂದು ನ್ಯಾಯಾಲಯ ಆದೇಶಿಸಿರುವುದಕ್ಕಾಗಿ.

ಬಿಎಚ್‌ಯು ವಿವಿ: ಸಂಸ್ಕೃತ-ಮುಸ್ಲಿಂ ಚರ್ಚೆ
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ನಿಲುವಿಗೆ ನಾವು ತಕರಾರೆತ್ತಿದ ಮಾತ್ರಕ್ಕೆ, ಇನ್ನಾವುದೇ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂಗಳು ಅವಿವೇಕದಿಂದ ವಿಪರೀತವಾಗಿ ನಡೆದುಕೊ ಳ್ಳುವುದನ್ನು ನಾವು ಸಮರ್ಥಿಸಬೇಕೆಂದೇನೂ ಇಲ್ಲ. ಇಲ್ಲೊಂದು ಘಟನೆ ನೋಡಿ – ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗಕ್ಕೆ ಫಿರೋಜ್‌ ಖಾನ್‌ ಎಂಬ ಸಂಸ್ಕೃತ ವಿದ್ವಾಂಸರನ್ನು ಅಸಿಸ್ಟೆಂಟ್‌ ಪ್ರೊಫೆಸರ್‌ ಆಗಿ ನೇಮಕ ಮಾಡಲಾಗಿ ರುವುದನ್ನು ವಿರೋಧಿಸಿ, ಅಲ್ಲಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆಂದು ವರದಿಗಳು ಹೇಳುತ್ತಿವೆ. ಮುಸ್ಲಿಂ ಸಮುದಾಯದ ಒಬ್ಬರನ್ನು ನೇಮಕ ಮಾಡಿರುವುದು ವಿವಿ ಕಾಯ್ದೆಗೆ ವಿರುದ್ಧದ ಕ್ರಮ ಎನ್ನುವುದು ವಿದ್ಯಾರ್ಥಿಗಳ ವಾದ. ಕೇವಲ ಹಿಂದುಗಳು, ಜೈನರು, ಬೌದ್ಧರು ಹಾಗೂ ಆರ್ಯ ಸಮಾಜಿಗಳಷ್ಟೇ ಸಂಸ್ಕೃತ ವಿಭಾಗವನ್ನು ಪ್ರವೇಶಿಸಬಹುದೆಂದು ವಿವಿಯ ಸ್ಥಾಪಕ, ಭಾರತರತ್ನ ಮದನ ಮೋಹನ ಮಾಳವೀಯರು ಅಂದೇ ನಿಯಮ ರೂಪಿಸಿದ್ದರು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಕಾಲೇಜಿನ ಆಡಳಿತ ಮಂಡಳಿಗೆ ನೆನಪು ಮಾಡಿಕೊಟ್ಟಿದ್ದಾರೆ. ಮದನ ಮೋಹನ ಮಾಳವೀಯರ ಮಾತನ್ನು ಸಾಹಿತ್ಯ ವಿಭಾಗದ ಶಿಲಾಫ‌ಲಕವೊಂದರಲ್ಲಿ ಕಡೆದಿರಿಸಲಾಗಿದೆ ಎನುತ್ತಾರೆ ವಿದ್ಯಾರ್ಥಿಗಳು. ಆದರೆ ಈ ಶಿಲಾಫ‌ಲಕ ಸ್ವಾತಂತ್ರ್ಯ ಪೂರ್ವ ದಿನಗಳದು; ಸಂವಿಧಾನ ಜಾರಿಗೊಳ್ಳುವ ಮುನ್ನಿನದು ಎನ್ನುವುದು ಇನ್ನು ಕೆಲವರ ವಾದ. ಫಿರೋಜ್‌ ಖಾನ್‌ರನ್ನು ಆಯ್ಕೆ ಮಾಡಿದ್ದು ವಿವಿ ಅನುದಾನ ಆಯೋಗದ ಹಾಗೂ ಭಾರತ ಸರಕಾರದ ಮಾರ್ಗದರ್ಶಿ ಸೂತ್ರಗಳನ್ನು ಲಕ್ಷ್ಯದಲ್ಲಿರಿಸಿಕೊಂಡ ಅಧಿಕೃತ ಆಯ್ಕೆ ಸಮಿತಿ ಎನ್ನುತ್ತವೆ ವಿವಿ ಮೂಲಗಳು.

ಆದರೆ ಇಲ್ಲಿ ಕೇಳಬೇಕಾದ ಮೂಲಭೂತ ಪ್ರಶ್ನೆಯೊಂದಿದೆ – ಸಂಸ್ಕೃತ ಭಾಷೆಯ ಕಲಿಕೆಯೆನ್ನುವುದು ಕೇವಲ ಹಿಂದೂ ಧರ್ಮ ಹಾಗೂ ಆ ಧರ್ಮದ ವ್ಯಾಪ್ತಿಯೊಳಗಿನ ನಿರ್ದಿಷ್ಟ ಜಾತಿಗಳಿಗಷ್ಟೆ ಸೀಮಿತವೆ? ಸಂಸ್ಕೃತ ನಮ್ಮ ರಾಷ್ಟ್ರಭಾಷೆಗಳಲ್ಲೊಂದು; ಹಿಂದೂಗಳಲ್ಲದವರೂ ಅದನ್ನು ಕಲಿಯುತ್ತಾರೆಂದರೆ ನಿಜಕ್ಕೂ ಅದೊಂದು ಸಂತಸದ ಸಂಗತಿ. ಕೆಲವರಿದ್ದಾರೆ, ಅವರ ಪ್ರಕಾರ ಸಂಸ್ಕೃತ ಒಂದು ಮೃತಭಾಷೆ; ನಿತ್ಯ ವ್ಯವಹಾರದಲ್ಲಿ ಅದಕ್ಕೆ ಯಾವುದೇ ಸ್ಥಾನಮಾನ ಇಲ್ಲ. ಈ ವಿಷಯಕ್ಕೆ ಇನ್ನೊಂದು ಮಗ್ಗುಲಿದೆ-1980ರ ದಶಕದಲ್ಲಿ ಕರ್ನಾಟಕದಲ್ಲಿ ನಡೆದ ಗೋಕಾಕ್‌ ಸಮಿತಿ ವರದಿಯ ಅನುಷ್ಠಾನಕ್ಕೆ ಆಗ್ರಹಿಸಿ ನಡೆದ ಆಂದೋಲನದ ಹಿಂದಿನ ನಿಲುವೇ ಇದಾಗಿತ್ತು – ಸಂಸ್ಕೃತ ಭಾಷೆ ಕನ್ನಡಕ್ಕೆ ಅಪಾಯಕಾರಿ ಎಂಬ ನಿಲುವು. ಶಾಲೆಗಳಲ್ಲಿ ಸಾಮಾನ್ಯ ವಾಗಿ ಮಕ್ಕಳು ಸಂಸ್ಕೃತವನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು ಅಂಕಗಳು ಸಿಗಬಹುದೆಂಬ ನಿರೀಕ್ಷೆಯಿಂದ. ಇಲ್ಲಿ ನೆನಪಿಸಿಕೊಳ್ಳ ಬೇಕಾದ ಮಾತೆಂದರೆ, ದೇಶದಲ್ಲಿ ಸಂವಿಧಾನ ಜಾರಿಗೊಳ್ಳುವುದಕ್ಕೂ ಮುನ್ನ, ಭಾರತ ಸ್ವಾತಂತ್ರ್ಯ ಪಡೆಯುವುದಕ್ಕೂ ಮುನ್ನವೇ ಮೈಸೂರಿನ ದಿವಾನ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರು ಬೆಂಗಳೂರಿನಲ್ಲಿ ಬ್ರಾಹ್ಮಣೇತರ ಮಕ್ಕಳಿಗಾಗಿಯೇ ಪ್ರತ್ಯೇಕ ಸಂಸ್ಕೃತ ಶಾಲೆಯೊಂದನ್ನು ಆರಂಭಿಸಿದ್ದರು. ಮೈಸೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಕೇವಲ ಬ್ರಾಹ್ಮಣ ಮಕ್ಕಳಿಗಷ್ಟೇ ಕಲಿಸಲಾಗುತ್ತಿತ್ತು. ಮಿರ್ಜಾ ಸಾಹೇಬರು ಬೆಂಗಳೂರಿನಲ್ಲಿ ಬ್ರಾಹ್ಮಣೇತರ ಮಕ್ಕಳಿಗಾಗಿ ಸಂಸ್ಕೃತ ಶಾಲೆ ಆರಂಭಿಸಿದ್ದಕ್ಕೆ ಇದೇ ಕಾರಣ.

ಸ್ವಾರಸ್ಯ ನೋಡಿ – ಬನಾರಸ್‌ ಹಿಂದೂ ವಿವಿಯಲ್ಲಿ ಸದ್ಯ ನಡೆಯುತ್ತಿರುವ ಚಳವಳಿಗೆ 75 ವರ್ಷಗಳಷ್ಟು ಪೂರ್ವ ನಿದರ್ಶನ ವೊಂದಿದೆ. 1944ರಲ್ಲಿ ಅಹ್ಮದ್‌ ಹಸನ್‌ ದಾನಿ ಎಂಬ ಮುಸ್ಲಿಂ ವಿದ್ಯಾರ್ಥಿಯೊಬ್ಬ ಇದೇ ಸಂಸ್ಕೃತ ವಿಭಾಗಕ್ಕೆ ಸೇರ್ಪಡೆಗೊಂಡಿದ್ದ. ಪಂಡಿತ ಮಾಳವೀಯರು ಆಗ ಅಲ್ಲೇ ಇದ್ದರು. ಹಸನ್‌ ಆ ವಿವಿಯ ಎಂಎ (ಸಂಸ್ಕೃತ) ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್‌ ಗಳಿಸಿದ್ದ. ವಿ.ವಿ.ಯ ಪ್ರಪ್ರಥಮ ಮುಸ್ಲಿಂ ಪದವೀಧರನೆಂಬ ಮನ್ನಣೆಗೆ ಪಾತ್ರನಾಗಿದ್ದ . ಆತನಿಗೆ ಆಗಿನ (ಸ್ವಾತಂತ್ರ್ಯಪೂರ್ವದ) “ಯುನೈಟೆಡ್‌ ಪ್ರಾವಿನ್ಸಸ್‌’ ಸರಕಾರ “ಅಧ್ಯಾಪನ ಫೆಲೋಶಿಪ್‌’ ನೀಡಿ ಗೌರವಿಸಿತ್ತು. ಆದರೆ, ಆ ಪದವೀಧರ ವಿದ್ವಾಂಸ ಮುಸ್ಲಿಂ ಎಂಬ ಕಾರಣದಿಂದ ಆ ವಿವಿಯಲ್ಲಿ ಬೋಧಿಸಲು ಅವಕಾಶ ಸಿಗಲಿಲ್ಲ. ರಾಷ್ಟ್ರ ವಿಭಜನೆಯ ಬಳಿಕ ದಾನಿ ಅವರು (1920-2009) ಪಾಕ್‌ಗೆ ಹೋದರು; ಮುಂದಿನ ವರ್ಷಗಳಲ್ಲಿ ಆ ರಾಷ್ಟ್ರದ ಶ್ರೇಷ್ಠ ಪುರಾತತ್ವ ಶಾಸ್ತ್ರಜ್ಞರೆಂದು, ಇತಿಹಾಸಕಾರರೆಂದು, ಭಾಷಾ ವಿಜ್ಞಾನಿಯೆಂದು ಹೆಸರು ಪಡೆದರು. ಓರ್ವ ಭಾಷಾವಿಶಾ ದರರಾಗಿ ಅವರು ತಮಿಳು, ಬಂಗಾಲಿ, ಹಿಂದಿ, ಪಂಜಾಬಿ ಮತ್ತು ಸಂಸ್ಕೃತ ಸಹಿತ 15 ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿದ್ದರು. ಓರ್ವ ಪುರಾತಣ್ತೀ ಶಾಸ್ತ್ರಜ್ಞರಾಗಿ ಮೊದಲಿಗೆ ಅವರು ಸರ್‌ ಮಾರ್ಟಿ ಮೋರ್‌ ವ್ಹೀಲರ್‌ ಅವರ ನೇತೃತ್ವದ ತಂಡದಲ್ಲಿದ್ದು , ತಕ್ಷಶಿಲೆ ಹಾಗೂ ಮೊಹೆಂಜೊ ದಾರೋ ಗಳಲ್ಲಿ ನಡೆದ ಉತ್ಖನನ ಕಾರ್ಯ ಗಳಲ್ಲಿ ಪಾಲ್ಗೊಂಡಿದ್ದರು. ದಾನಿ, ಪಾಕ್‌ ಚರಿತ್ರೆ ರಚಿಸಿದ್ದಲ್ಲದೆ, ಸಿಂಧೂ ಕಣಿವೆ ನಾಗರಿಕತೆಯ ಮೇಲೆ ದಕ್ಷಿಣ ಭಾರತೀಯ ಸಂಸ್ಕೃತಿಯ ಪ್ರಭಾವ ಇರಲಿಲ್ಲ ಎಂಬ ತಮ್ಮ ದೃಢ ನಿಲುವು ಪ್ರತಿಪಾದಿಸಿದರು. ಪಾಕ್‌ನ ಸಾಂಸ್ಕೃತಿಕ ಚರಿತ್ರೆ ಬೌದ್ಧ, ಪರ್ಶಿ ಯನ್‌ ಹಾಗೂ ಸೂಫಿ ಪ್ರಭಾವಗಳ ಮೂಲಕ ಮಧ್ಯ ಏಶ್ಯಾ ದೊಂದಿಗೆ ಸಂಬಂಧ ಹೊಂದಿದೆ ಎಂದೂ ಅವರು ಹೇಳಿದ್ದರು.

ಮೋದಿ ಸರಕಾರ ಈ ವರ್ಷ ಮುಸ್ಲಿಂ ಸಂಸ್ಕೃತ ವಿದ್ವಾಂಸ ಹನೀಫ್ ಖಾನ್‌ ಶಾಸ್ತ್ರಿಯವರಿಗೆ ಪದ್ಮಶ್ರೀ ನೀಡಿ ಗೌರವಿ ಸಿರುವುದನ್ನು ಬನಾರಸ್‌ ಸಂಸ್ಕೃತ ವಿ.ವಿ.ಯ ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ನೆನಪಿಸಬೇಕಾಗಿದೆ. ಉ.ಪ್ರ.ದಲ್ಲೂ ವೇದ ವಿದ್ವಾಂಸ ಮುಸ್ಲಿಮರೊಬ್ಬರಿದ್ದಾರೆ – ಹಯತುಲ್ಲಾ ಚತುರ್ವೇದಿ. ಭಾಷೆ ಧರ್ಮ-ಧರ್ಮಗಳ ನಡುವಿನ ಗೋಡೆಗಳನ್ನು ಕೆಡವಿ ಹಾಕುವ ಶಕ್ತಿಯನ್ನು ಹೊಂದಿದೆ ಎಂಬ ಈ ವೈದಿಕ ವಿದ್ವಾಂಸ, ಸಂಸ್ಕೃತ ಭಾಷೆಯ ಪ್ರಚಾರದಲ್ಲೀಗ ನಿರತರಾಗಿದ್ದಾರೆ. ಕರ್ನಾಟಕ ದಲ್ಲಿ ಹಿಂದೆ ಹರಿಕಥಾ ಪ್ರಕಾರದಲ್ಲಿ ಪ್ರವೀಣರಾಗಿದ್ದ ಮುಸ್ಲಿಂ ಸೇನಾಧಿಕಾರಿಯೊಬ್ಬರಿದ್ದರು. ಅವರೇ ಮೆ| ಅಬ್ದುಲ್‌ ಗಫ‌ೂರ್‌ ಎಂಬ ಸಂಸ್ಕೃತ ವಿದ್ವಾಂಸರು. ಭೂಸೇನೆಯಿಂದ ನಿವೃತ್ತರಾದ ಬಳಿಕ ಅವರು ಎನ್‌ಸಿಸಿಯಲ್ಲಿ ಸೇವೆ ಸಲ್ಲಿಸಿದ್ದರು. ಅವರ ಹರಿಕಥಾ ಕಾರ್ಯಕ್ರಮಗಳು ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದವು.

ಯಾವುದೇ ಭಾಷೆಯ ಕಲಿಕೆಗೆ ಸಂಬಂಧಿಸಿದಂತೆ ಯಾವುದೇ ತೆರನಾದ ನಿಷೇಧವಾಗಲಿ, ಬಹಿಷ್ಕಾರವಾಗಲಿ ಸಲ್ಲದು. ಮುಸ್ಲಿಮರಿಗೆ ಸಂಸ್ಕೃತ ಕಲಿಯಲು ಪ್ರೋತ್ಸಾಹ ನೀಡಬೇಕು; ಇದೇ ವೇಳೆ ಹಿಂದೂಗಳನ್ನು ಉರ್ದು, ಪರ್ಶಿಯನ್‌, ಅರೇಬಿಕ್‌, ಲ್ಯಾಟಿನ್‌ ಕಲಿಯುವಂತೆ ಉತ್ತೇಜಿಸಬೇಕು. ಲ್ಯಾಟಿನ್‌ ಬಗ್ಗೆ ಹೇಳಬೇಕಾದರೆ ಅದು ಕ್ರಿಶ್ಚಿಯನ್ನರಿಗಷ್ಟೇ ಮೀಸಲಾದ ಭಾಷೆಯೆಂಬ ಭಾವನೆಯೂ ಸಲ್ಲದು.

ಇಂದಿಗೂ  ಈ ಮಂಡಳಿ ಎಲ್ಲ ಮುಸ್ಲಿಮರನ್ನು ಪ್ರತಿನಿಧಿಸುತ್ತಿಲ್ಲ, ಏಕೆಂದರೆ ಅದು ಅಹ್ಮದೀಯ ಪಂಗಡದವರನ್ನು ಒಳಗೊಂಡಿಲ್ಲ.

ಸರ್‌ ಮಿರ್ಜಾ ಇಸ್ಮಾಯಿಲ್‌ ಬೆಂಗಳೂರಿನಲ್ಲಿ ಬ್ರಾಹ್ಮಣೇತರ ಮಕ್ಕಳಿಗಾಗಿಯೇ ಪ್ರತ್ಯೇಕ ಸಂಸ್ಕೃತ ಶಾಲೆಯೊಂದನ್ನು ಆರಂಭಿಸಿದ್ದರು.

ಮೋದಿ ಸರ್ಕಾರ ಮುಸ್ಲಿಂ ಸಂಸ್ಕೃತ ವಿದ್ವಾಂಸ ಹನೀಫ್ ಖಾನ್‌ರಿಗೆ ಪದ್ಮಶ್ರೀ ನೀಡಿರುವುದನ್ನು ಬಿಎಚ್‌ಯು ವಿದ್ಯಾರ್ಥಿಗಳಿಗೆ ನೆನಪಿಸಬೇಕಿದೆ.

  • ಅರಕೆರೆ ಜಯರಾಮ್‌

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ