ಭಾರತದ ಅಭಿವೃದ್ಧಿಗೆ ಬದ್ಧತೆಯ ಹೆಜ್ಜೆ

ಮೋದಿ 2.0 ಸರಕಾರದ ಮೊದಲ ಐವತ್ತು ದಿನ

Team Udayavani, Aug 1, 2019, 5:37 AM IST

ಮೋದಿ ಸರಕಾರದ ಎರಡನೇ ಅವಧಿಯ ಮೊದಲ 50 ದಿನಗಳನ್ನು ‘ನಿರ್ಧಾರಾತ್ಮಕ ಮತ್ತು ದಿಕ್ಸೂಚಿ’ ಎಂದು ಪರಿಗಣಿಸಬಹುದು. ಕೇಂದ್ರ ಸರಕಾರವು ತನ್ನ ಮೊದಲ ಐವತ್ತು ದಿನಗಳನ್ನು ಭಾರತವನ್ನು 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿಸುವ ನಿಟ್ಟಿನಲ್ಲಿ ಬುನಾದಿ ಹಾಕಲು ವಿನಿಯೋಗಿಸಿದೆ. ಮೂಲಸೌಕರ್ಯ ಮತ್ತು ವ್ಯಾಪಾರೋದ್ಯಮ ವೃದ್ಧಿಗೆ, ಸರ್ವರ ಸಶಕ್ತೀಕರಣ ಮತ್ತು ರೈತರ ಆದಾಯ ದ್ವಿಗುಣಗೊಳಿಸುವಿಕೆಗೆ ಆದ್ಯತೆ ನೀಡಿದೆ.

ಸರ್ವರ ಸಶಕ್ತೀಕರಣವನ್ನು ಖಾತ್ರಿಪಡಿಸಲು ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌’ ಎಂಬ ಬದ್ಧತೆಯೊಂದಿಗೆ 2019-20ರಿಂದ 2021-22 ಅವಧಿಯಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ಬಡವರಿಗಾಗಿ 1.95 ಕೋಟಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. 2022ರೊಳಗೆ, ಅಂದರೆ ದೇಶದ ಸ್ವಾತಂತ್ರ್ಯದ 75ನೇ ವರ್ಷದ ಸಂದರ್ಭದಲ್ಲಿ ಪ್ರತಿಯೊಂದು ಗ್ರಾಮೀಣ ಕುಟುಂಬವೂ ವಿದ್ಯುತ್‌ ಸಂಪರ್ಕ ಮತ್ತು ಸ್ವಚ್ಛ ಅಡುಗೆ ಅನಿಲ ಸಂಪರ್ಕ ಹೊಂದಿರುವಂತೆ ಸರಕಾರವು ನೋಡಿಕೊಳ್ಳಲಿದೆ.

‘ಜಲ ಜೀವನ ಮಿಷನ್‌’ ಅಡಿಯಲ್ಲಿ ಎಲ್ಲಾ ಗ್ರಾಮೀಣ ಮನೆಗಳಿಗೂ 2024ರೊಳಗೆ ಸುರಕ್ಷಿತ -ಸ್ವಚ್ಛ ಕುಡಿಯುವ ನೀರನ್ನು ಒದಗಿಸಲಾಗುವುದು. ವಾರ್ಷಿಕ 1.5 ಕೋಟಿ ರೂ. ಗಳಿಗೂ ಕಡಿಮೆ ವ್ಯವಹಾರ ಇರುವ 3 ಕೋಟಿ ಚಿಲ್ಲರೆ ವ್ಯಾಪಾರಸ್ಥರು ಮತ್ತು ಸಣ್ಣ ಅಂಗಡಿದಾರರಿಗೆ ಪಿಂಚಣಿ ಸೌಲಭ್ಯವನ್ನು ‘ಪ್ರಧಾನ ಮಂತ್ರಿ ಕರ್ಮಯೋಗಿ ಮಾನಧನ ಯೋಜನೆ’ ಅಡಿಯಲ್ಲಿ ಒದಗಿಸಲಾಗುವುದು. ಪ್ರತೀ ಸ್ವಸಹಾಯ ಗುಂಪಿನ (ಎಸ್‌.ಎಚ್.ಜಿ.) ಓರ್ವ ಮಹಿಳೆಗೆ ಮುದ್ರಾ ಯೋಜನೆ ಅಡಿಯಲ್ಲಿ 1 ಲಕ್ಷ ರೂ.ಗಳವರೆಗೆ ಸಾಲ ಪಡೆಯಲು ಅವಕಾಶ ನೀಡಲಾಗುವುದು. ಸಬ್ಸಿಡಿಯೇತರ ಎಲ್.ಪಿ.ಜಿ. ದರ ಸಿಲಿಂಡರೊಂದಕ್ಕೆ 100 ರೂ. ಇಳಿಕೆಯಾಗಿದೆ.

ವ್ಯಾಪಾರೋದ್ಯಮಕ್ಕೆ ಉತ್ತೇಜನ ನೀಡಲು ಮೋದಿ ಸರಕಾರವು 2019ರ ಬಜೆಟಿನಲ್ಲಿ 400 ಕೋ.ರೂ. ವರೆಗೆ ವಾರ್ಷಿಕ ವಹಿವಾಟು ನಡೆಸುವ ಕಂಪೆನಿಗಳಿಗೆ ಸಾಂಸ್ಥಿಕ ತೆರಿಗೆ ದರವನ್ನು 25% ಎಂದು ನಿಗದಿ ಮಾಡಿದೆ. ಮೊದಲು ಈ ಅವಕಾಶ ಮಿತಿ 250 ಕೋಟಿ.ರೂ.ಗಳವರೆಗೆ ಇತ್ತು. ಒಟ್ಟು ಕಂಪೆನಿಗಳ ಪೈಕಿ 99.3 % ನಷ್ಟು ಕಂಪೆನಿಗಳು ಇದರ ವ್ಯಾಪ್ತಿಗೆ ಬರುತ್ತವೆ. ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ‘ಸ್ಟ್ಯಾಂಡ್‌ ಅಪ್‌ ಇಂಡಿಯಾ’ ಯೋಜನೆಯು 2025ರವರೆಗೆ ಮುಂದುವರೆಯಲಿದೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರಕಾರ ಶೂನ್ಯ ಬಂಡವಾಳ ಕೃಷಿ, ಕೃಷಿಯಲ್ಲಿ ಸಾಂಪ್ರದಾಯಿಕ ವಿಧಾನಗಳಿಗೆ ಮರಳುವಿಕೆ ಮುಂತಾದ ವಿವಿಧ ಕ್ರಮಗಳಿಂದ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಕ್ಕೆ ಗಮನ ಹರಿಸುವ ಮೂಲಕ ರೈತರ ಕಲ್ಯಾಣವನ್ನು ಆದ್ಯತೆಯಾಗಿ ಪರಿಗಣಿಸಿದೆ. 5 ಕೋಟಿ ಸಣ್ಣ ಮತ್ತು ಮಧ್ಯಮ ರೈತರ ಭವಿಷ್ಯಕ್ಕೆ ಸರಕಾರ ಸ್ವಯಂ ಮತ್ತು ದೇಣಿಗೆ ಪಿಂಚಣಿಯನ್ನು ಜಾರಿಗೆ ತಂದು ಅವರ ಭವಿಷ್ಯವನ್ನು ಭದ್ರ ಮಾಡಿದೆ. ಖಾರೀಫ್ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (ಎಂ.ಎಸ್‌.ಪಿ.) ಹೆಚ್ಚಳಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಉಪ ಸಮಿತಿ ಅಂಗೀಕಾರ ನೀಡಿದ್ದು, ಇದರಿಂದ ರೈತರಿಗೆ ಉತ್ಪಾದನಾ ವೆಚ್ಚದ 1.5 ಪಟ್ಟು ದರ ದೊರೆಯಲಿದೆ.

ಕೃಷಿಕರಿಗೆ ಸಾಮಾಜಿಕ ಸುರಕ್ಷಾ ವ್ಯವಸ್ಥೆಯನ್ನು ಒದಗಿಸಲು ಕೇಂದ್ರ ಸರಕಾರವು ಮೂರು ವರ್ಷಗಳಲ್ಲಿ 10,774.50 ಕೋ.ರೂ.ಗಳಷ್ಟನ್ನು ವ್ಯಯ ಮಾಡಲಿದೆ. ಪ್ರಧಾನ ಮಂತ್ರಿ -ಕಿಸಾನ್‌ ಯೋಜನೆಯನ್ನು ಭೂ ಹಿಡುವಳಿಯ ವಿಸ್ತಾರವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಅರ್ಹ ರೈತರ ಕುಟುಂಬಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಪ್ರಧಾನ ಮಂತ್ರಿ-ಕಿಸಾನ್‌ ಯೋಜನೆಯ ವ್ಯಾಪ್ತಿಯು 14.5 ಕೋಟಿ ರೈತರಿಗೆ ವಿಸ್ತರಣೆಯಾಗಲಿದೆ.

ಮುಂದಿನ ಐದು ವರ್ಷಗಳಲ್ಲಿ ಮೂಲಸೌಕರ್ಯಗಳಿಗೆ 100 ಲಕ್ಷ ಕೋಟಿ.ರೂ. ಹೂಡಿಕೆ ಮಾಡುವ ಮತ್ತು ರೈಲ್ವೇ ನಿಲ್ದಾಣಗಳ ಆಧುನೀಕರಣಕ್ಕೆ ಒತ್ತು ನೀಡುವ ಸರಕಾರದ ನಿರ್ಧಾರ, ಮೂಲಸೌಕರ್ಯಗಳಿಗೆ ಭಾರೀ ಉತ್ತೇಜನ ನೀಡಲಿದೆ.

ಎಲ್ಲಾ ವಲಯಗಳ ಸಿಬ್ಬಂದಿಗಳಿಗೆ ಸಕಾಲದಲ್ಲಿ ವೇತನವನ್ನು ಖಾತ್ರಿಪಡಿಸುವ ವೇತನ ವಿಧೇಯಕ ಸಂಹಿತೆಯ ಅಂಗೀಕಾರದಿಂದ 50 ಕೋಟಿ ಕಾರ್ಮಿಕರಿಗೆ ಪ್ರಯೋಜನವಾಗುವ ನಿರ್ಧಾರ, ಎಲ್ಲರಿಗೂ ಸುರಕ್ಷಿತ -ಸ್ವಚ್ಛ ಕುಡಿಯುವ ನೀರು ಒದಗಿಸುವ ಜಲ ಶಕ್ತಿ ಸಚಿವಾಲಯದ ರಚನೆ, ದೇಶೀಯ ಮತ್ತು ವಿದೇಶೀ ಪ್ರವಾಸಿಗರ ಭೇಟಿಯ ಪ್ರಮಾಣವನ್ನು ಸುಧಾರಿಸಲು 17 ಪ್ರಮುಖ ಪ್ರವಾಸೀ ಸ್ಥಳಗಳನ್ನು ವಿಶ್ವ ದರ್ಜೆಯ ಪ್ರವಾಸೀ ಕೇಂದ್ರಗಳಾಗಿ ಅಭಿವೃದ್ದಿಪಡಿಸುವಿಕೆ, ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್‌ ನಿಷೇಧಿಸಿ ಲಿಂಗತ್ವ ಸಮಾನತೆಯನ್ನು ಮತ್ತು ಲಿಂಗತ್ವ ನ್ಯಾಯವನ್ನು ಖಾತ್ರಿಪಡಿಸುವ ಹೊಸ ವಿಧೇಯಕಕ್ಕೆ ಅನುಮೋದನೆ, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಗೆ ಮರಣ ದಂಡನೆಯಂತಹ ಶಿಕ್ಷೆಯ ಪ್ರಸ್ತಾಪಗಳು ಮೋದಿ ಸರಕಾರದ ನಯಾ ಭಾರತ್‌ ನಿರ್ಮಾಣಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲಿ ಸೇರಿವೆ.

ಚಂದ್ರಯಾನ-2ರ ಯಶಸ್ವೀ ಉಡ್ಡಯನ ಭಾರತವನ್ನು ಬಾಹ್ಯಾಕಾಶದ ಸೂಪರ್‌ ಪವರ್‌ ಆಗಿಸಿದೆ. ಕಳೆದ ಮೂರು ದಶಕಗಳಿಂದ ಕಾಶ್ಮೀರ ಕಣಿವೆ ಹಾಗೂ ಜಮ್ಮು ಮತ್ತು ಕಾಶ್ಮೀರದ ರಾಜಕೀಯವನ್ನು ತಮ್ಮ ಇಚ್ಛಾನುಸಾರ ಒತ್ತೆಯಾಳನ್ನಾಗಿಸಿಕೊಂಡಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಂಡವರಲ್ಲಿ ಮೋದಿಯವರದ್ದು ಮೊದಲ ಸರಕಾರವಾಗಿದೆ.

ಜಮ್ಮು ಮತ್ತು ಕಾಶ್ಮೀರ ಮೀಸಲು (ತಿದ್ದುಪಡಿ)ಯು ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ವಾಸಿಸುತ್ತಿರುವ ಜಮ್ಮು ಮತ್ತು ಕಾಶ್ಮೀರದ ಜನತೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬಹಳ ದೂರದೃಷ್ಟಿಯ ಕ್ರಮವಾಗಿದೆ. ಅವರೀಗ ನೇರ ನೇಮಕಾತಿಯಲ್ಲಿ, ಪದೋನ್ನತಿಯಲ್ಲಿ ಮೀಸಲಾತಿ ಮತ್ತು ವಿವಿಧ ವೃತ್ತಿಪರ ಕಾಲೇಜು ಗಳಿಗೆ ಸೇರ್ಪಡೆಯಲ್ಲಿ ಮೀಸಲಾತಿಯನ್ನು ಪಡೆಯಬಹುದಾಗಿದೆ. ಕೊನೆಯ ಮೈಲಿನವರೆಗೂ ಅಭಿವೃದ್ಧಿಯನ್ನು ಕೊಂಡೊಯ್ಯುವ ಅದ್ಭುತ ಉಪಕ್ರಮ ಇದಾಗಿದೆ.

ಕಪ್ಪು ಹಣದ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಧಿಕಾರಶಾಹಿಯಲ್ಲಿ ಭ್ರಷ್ಟಾಚಾರ ತಡೆಯಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸ್ವಚ್ಛ ಭಾರತ್‌ ಆಂದೋಲನ ಮತ್ತು ಬೇಟಿ ಬಚಾವೋ ಬೇಟಿ ಪಡಾವೋ ಆಂದೋಲನ ಜಾಗತಿಕ ಮನ್ನಣೆ, ಶ್ಲಾಘನೆ ಪಡೆದಿವೆ.

ಈ ಸರಕಾರದ ಮೊದಲ ಐವತ್ತು ದಿನಗಳು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿವೆ. ‘ಯೋಗ ದಿನ’ವನ್ನು ಜೂನ್‌ 21ರಂದು ಭಾರೀ ಉತ್ಸಾಹದಿಂದ ಜಗತ್ತಿನಾದ್ಯಂತ ಆಚರಿಸಲಾಗಿದೆ. ಅಂತಾರಾಷ್ಟ್ರೀಯ ನ್ಯಾಯಾಲಯ ಕುಲಭೂಷಣ್‌ ಜಾಧವ ಪ್ರಕರಣದಲ್ಲಿ ಭಾರೀ ಅನುಕೂಲಕರ ತೀರ್ಪನ್ನು ನೀಡಿದೆ. ವಿದೇಶಾಂಗ ನೀತಿಯಲ್ಲಿ ನೆರೆ ಹೊರೆಯವರಿಗೆ ಪ್ರಾಶಸ್ತ್ಯ ಧೋರಣೆಗೆ ಬದ್ಧತೆಯನ್ನು ವ್ಯಕ್ತಪಡಿಸಿರುವುದರಿಂದಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಯಾನಕ ಈಸ್ಟರ್‌ ಭಯೋತ್ಪಾದಕ ದಾಳಿಯ ಬಳಿಕ ಶ್ರೀಲಂಕಾಕ್ಕೆ ಪ್ರವಾಸ ಕೈಗೊಂಡ ಮೊದಲ ವಿಶ್ವ ನಾಯಕರಾದರು. ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ವಕ್ಫ್ ಆಸ್ತಿಗಳ ಡಿಜಿಟಲೀಕರಣವೂ ಇದರಲ್ಲಿ ಸೇರಿದ್ದು, ಇದರಿಂದ ವಕ್ಫ್ ಆಸ್ತಿಗಳ ಉತ್ತಮ ಬಳಕೆ ಮತ್ತು ಅದರಲ್ಲಿ ಪಾರದರ್ಶಕತೆ ಖಾತ್ರಿಯಾಗಲಿದೆ ಹಾಗೂ ಆ ಆಸ್ತಿಗಳು ಸಮಾಜದ ಒಳಿತಿಗೆ ಲಭ್ಯವಾಗುತ್ತವೆ. 83 ಶೇಕಡದಷ್ಟು ವಕ್ಫ್ ಆಸ್ತಿಗಳ ಡಿಜಿಟಲೀಕರಣ ಪೂರ್ಣಗೊಂಡಿದ್ದು, ಇನ್ನುಳಿದ ಆಸ್ತಿಗಳನ್ನು ಮುಂದಿನ 50 ದಿನಗಳಲ್ಲಿ ಡಿಜಿಟಲೀಕರಣಗೊಳಿಸಲಾಗುವುದು.

ಒಟ್ಟು 100 ಸಾಮಾನ್ಯ ಸೇವಾ ಕೇಂದ್ರಗಳನ್ನು ಮಂಜೂರು ಮಾಡಲಾಗಿದ್ದು, ಅವುಗಳನ್ನು ದೇಶದ ವಿವಿಧೆಡೆಗಳಲ್ಲಿ ಸ್ಥಾಪಿಸಲಾಗುವುದು. ಈ ಕೇಂದ್ರಗಳು ಅಲ್ಪಸಂಖ್ಯಾತರಿಗೆ ಮತ್ತು ಇತರ ಆವಶ್ಯಕತೆ ಇರುವ ಜನತೆಗೆ ವಿದ್ಯಾರ್ಥಿ ವೇತನ ಹಾಗೂ ಇತರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ಏಕ ಗವಾಕ್ಷದಂತೆ ಒದಗಿ ಬರಲಿವೆ ಮತ್ತು ರಾಜ್ಯ ಸರಕಾರಗಳ ಜೊತೆ ಸಮನ್ವಯ ಸಾಧಿಸಿ ಸರಕಾರಿ ಇಲಾಖೆಗಳು ಹಾಗೂ ಇತರ ಸೌಲಭ್ಯಗಳ ಸಂಪರ್ಕ ಮತ್ತು ಮಾಹಿತಿ ಒದಗಿಸುವ ಮೂಲಕ ಆವಶ್ಯಕತೆ ಇರುವವರಿಗೆ ನೆರವಾಗಲಿವೆ.

ಮುಖ್ತಾರ್‌ ಅಬ್ಟಾಸ್‌ ನಕ್ವಿ ಕೇಂದ್ರ ಸಚಿವರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ