ಗಾಂಧಿ ಪಥದಲ್ಲಿ ಸ್ಫಟಿಕದಂತಹ ಖಾದಿ ಕಥೆ

Team Udayavani, Sep 29, 2019, 5:19 AM IST

ಆಧುನಿಕತೆಯ ಅಬ್ಬರದಲ್ಲಿ ಖಾದಿ ವಸ್ತ್ರಗಳ ಮಳಿಗೆಗಳೇ ಮಾಯವಾಗುತ್ತಿವೆ. ಕೆಲವು ಜಿಲ್ಲೆಗಳಲ್ಲಿ ಖಾದಿ ಭಂಡಾರವೇ ಇಂದಿಗೂ ಇಲ್ಲ. ಸರಕಾರವು ಜಿಲ್ಲೆಗೊಂದಾದರೂ ಖಾದಿ ಶೋ ರೂಮ್‌ ತೆರೆಯಬೇಕಾಗಿದೆ. ಇಲ್ಲಿ ಲಾಭ ಅಥವಾ ನಷ್ಟಗಳ ಪ್ರಶ್ನೆಗಳನ್ನು ಬದಿಗಿರಿಸಿ, ಖಾದಿಗೆ ಕೊಡುವ ಗೌರವ ಎಂಬ ಭಾವನೆ ಬೆಳೆಯಬೇಕಾಗಿದೆ.

ಬ್ರಿಟಿಷರ ವಿರುದ್ಧ ಹೋರಾಡಿದ ದಿನಗಳನ್ನು ನೆನಪಿಸಿಕೊಂಡಾಗ ನಮ್ಮ ಕಣ್ಣೆದುರು ನಿಲ್ಲುವುದು ಚರಕ, ರಾಟೆ, ಖಾದಿ, ಗಾಂಧಿ ಟೋಪಿ. ಈ ಉಡುಗೆಗಳು ಅಂದು ದೇಶಭಕ್ತಿಯ ಸಂಕೇತಗಳು. ಈ ಉಡುಗೆಗಳನ್ನು ಧರಿಸಿದವರು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. ಬ್ರಿಟಿಷರ ವಿರೋಧ ಹೆಚ್ಚಾದಷ್ಟೂ ಖಾದಿ ಪ್ರಚಾರದ ಮೆರುಗೂ ಹೆಚ್ಚಾಗುತ್ತಿತ್ತು. ಹೋರಾಟಗಾರರ ಮನೆ ಮನೆಗಳಲ್ಲೂ ಚರಕ, ತಕಲಿ, ರಾಟೆಗಳು ದೇಶಭಕ್ತಿಯ ಸಂಕೇತಗಳಾಗಿ ಕಂಗೊಳಿಸುತ್ತಿದ್ದವು. ಖಾದಿಗೆ ಕಾವು ಕೊಟ್ಟ ಮಹಾತ್ಮ ಗಾಂಧಿಯವರೇ ತಮ್ಮ ಆತ್ಮಕಥೆಯೊಳಗೆ ಖಾದಿ ಕಥೆಯನ್ನೂ ನೆನಪಿಸಿಕೊಂಡಿದ್ದಾರೆ.

1908ರಲ್ಲಿ ಗಾಂಧೀಜಿಯವರು ಬರೆದ ಹಿಂದ್‌ ಸ್ವರಾಜ್‌ ಪುಸ್ತಕದಲ್ಲಿ ಚರಕದ ಕುರಿತು ಕೆಲವು ಸಾಲುಗಳನ್ನು ಉಲ್ಲೇಖೀಸಿದರು. ಅವರ ಪ್ರಕಾರ ಭಾರತದ ಈಗಿನ ದಾರಿದ್ಯಕ್ಕೆ ಬ್ರಹ್ಮಾಸ್ತ್ರವೇ ಕೈಮಗ್ಗ. 1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಮರಳಿದ ಗಾಂಧೀಜಿಯವರ ತಲೆಯಲ್ಲಿ ಕೈಮಗ್ಗ, ರಾಟೆಗಳೇ ತುಂಬಿದ್ದವು. ಚರಕ, ರಾಟೆಗಳ ಬಗ್ಗೆ ಗಾಂಧೀಜಿಯವರಿಗೆ ಆರಂಭದಲ್ಲಿ ಹೆಚ್ಚಿನ ಜ್ಞಾನ ಇರಲಿಲ್ಲ. ಅದನ್ನು ಅವರೇ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ. ಈ ಬಗ್ಗೆ ಹೆಚ್ಚಿನ ಅನುಭವಗಳನ್ನು ಗಳಿಸಿಕೊಳ್ಳಲು ಅವುಗಳ ಪ್ರಾಯೋಗಿಕ ಅಧ್ಯಯನಕ್ಕೆ ತಮ್ಮನ್ನು ತೊಡಗಿಸಿಕೊಂಡರು. ಸಾಬರಮತಿ ಆಶ್ರಮವು ಈ ಕುರಿತ ಚಿಂತನೆ, ಪ್ರಯೋಗ ಹಾಗೂ ಅನ್ವೇಷಣೆಗಳಿಗೆ ವೇದಿಕೆಯಾಯಿತು.

ಆಶ್ರಮದಲ್ಲಿ ಖಾದಿಯ ಕನಸು
ವಿದೇಶಿ ವಸ್ತುಗಳ ದಹನದೊಂದಿಗೆ ದೇಶೀಯ ವಸ್ತುಗಳಿಗೆ ವಿಶೇಷ ಪ್ರಾಶಸ್ತ್ಯ ಕೊಡಲಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಇದೊಂದು ಚಳವಳಿಯ ರೂಪ ಪಡೆಯಿತು. ಖಾದಿಯು ವಿದೇಶದ ವಸ್ತ್ರದ ವಿರುದ್ಧ ಅಸ್ತ್ರವಾಯಿತು. ಖಾದಿ ಪ್ರಚಾರಕ್ಕೂ ಆದ್ಯತೆ ಸಿಕ್ಕಿತು.

ಸಾಬರಮತಿಯಿಂದಲೇ ಈ ಆಂದೋಲನ ಆರಂಭವಾಯಿತು. ಖಾದಿಗೆ ಉತ್ತೇಜನ ನೀಡುವ ಮೊದಲ ಹಂತವಾಗಿ ಸಾಬರಮತಿ ಆಶ್ರಮದಲ್ಲಿ ಕೈಮಗ್ಗವೊಂದು ಅಸ್ತಿತ್ವಕ್ಕೆ ಬಂದಿತು. ಮಗ್ಗ ಬಂದಾಯಿತು. ಬಟ್ಟೆ ನೇಯಬೇಕಲ್ಲವೇ? ಅದಕ್ಕೆ ಅಗತ್ಯವಾದುದು ಸೂಕ್ತ ತರಬೇತಿ. ಅನುಭವಿ ತರಬೇತಿಗಾರರ ಅನ್ವೇಷಣೆ ಗಾಂಧೀಜಿಯವರಿಗೆ ಮುಂದಿನ ಸವಾಲಾಯಿತು. ಅಂತೂ ತರಬೇತಿಗಾರರನ್ನು ತಮ್ಮ ಆಶ್ರಮಕ್ಕೆ ಬರಮಾಡಿಕೊಂಡರು. ಆದರೆ ಗಾಂಧೀಜಿಯವರು ನಿರೀಕ್ಷಿಸಿದಂತೆ ಆತ ತನ್ನ ವಿದ್ಯೆಯನ್ನು ಪ್ರಾಮಾಣಿಕವಾಗಿ ಕಲಿಸಲಿಲ್ಲ. ಕೈಮಗ್ಗದ ಕಲೆ ಮತ್ತಷ್ಟು ಒಗಟಾಗಿಯೇ ಉಳಿಯಿತು.

ಈ ಪ್ರಯತ್ನಗಳ ನಡುವೆ ಆಶ್ರಮವಾಸಿಗಳಿಗೆ ಗಾಂಧೀಜಿ ಕರೆಯೊಂದನ್ನು ಕೊಟ್ಟರು. ನಮ್ಮ ಕೈಯಿಂದ ತಯಾರಿಸಿದ ಬಟ್ಟೆಗಳನ್ನೇ ಧರಿಸಬೇಕು. ಗಾಂಧೀಜಿಯವರ ಈ ಕೋರಿಕೆಯಿಂದ ಮಿಲ್‌ ಬಟ್ಟೆಗಳು ದೂರ ಸರಿದವು. ಆದರೆ ಅಗತ್ಯಕ್ಕನುಗುಣವಾದ ಬಟ್ಟೆಗಳನ್ನು ಪೂರೈಸಿ ಕೊಳ್ಳಲು ಸ್ವಲ್ಪ ಕಷ್ಟವಾಯಿತು. ಹಾಗಾಗಿ ನೇಕಾರರ ಮೊರೆ ಹೋಗುವ ಅನಿವಾರ್ಯ ಪರಿಸ್ಥಿತಿ ಎದುರಾಯಿತು. ಇಲ್ಲಿಯೂ ಒಂದು ಸಮಸ್ಯೆಯಡಿಯಲ್ಲಿ ಗಾಂಧೀಜಿ ಯವರು ಸಿಲುಕಿಕೊಂಡರು. ಆಗಿನ ಭಾರತದ ಹೆಚ್ಚಿನ ನೇಕಾರರು ನೇಯುತ್ತಿದ್ದ ಬಟ್ಟೆಗಳ ನೂಲುಗಳು ವಿದೇಶಿ ಗಿರಣಿಗಳದ್ದಾಗಿತ್ತು. ಗಾಂಧೀಜಿಯವರಿಗೆ ಈ ವಿದೇಶಿ ಗಿರಣಿಗಳ ನೂಲುಗಳ ಬಳಕೆ ಹಿಡಿಸಲಿಲ್ಲ. ಸ್ವದೇಶಿ ನೂಲನ್ನು ನೇಯುವ ನೇಕಾರರ ಹುಡುಕಾಟಕ್ಕೆ ಗಾಂಧೀಜಿಯವರು ತೊಡಗಿದರು. ಕೆಲವು ದಿನಗಳ ಅವಿಶ್ರಾಂತ ಶ್ರಮದಿಂದ ಸ್ವದೇಶಿ ನೂಲಿನಿಂದ ಬಟ್ಟೆ ತಯಾರಿಸುವ ಕೆಲವರನ್ನು ಪತ್ತೆ ಹಚ್ಚಿದರು. ಆದರೆ ಈ ನೇಕಾರರು ಕೆಲವು ಷರತ್ತುಗಳನ್ನು ಗಾಂಧಿಯವರ ಮುಂದಿಟ್ಟರು. ನಾವು ಬಟ್ಟೆ ತಯಾರಿಸಿ ಕೊಡಲು ಸಿದ್ಧ. ಆದರೆ ಅವುಗಳನ್ನು ಆಶ್ರಮವಾಸಿಗಳು ಕೊಂಡುಕೊಳ್ಳಬೇಕು. ಈ ನಿಯಮಕ್ಕೆ ಗಾಂಧೀಜಿಯವರು ಒಪ್ಪಿದರು. ಆಶ್ರಮದವರು ಕೊಂಡುಕೊಳ್ಳುವುದರೊಂದಿಗೆ ಇತರರೂ ಕೊಳ್ಳುವಂತೆ ಪ್ರಚಾರ ನಡೆಸಿದರು.

ರಾಟೆಗಾಗಿ ಶೋಧ
ನೂಲಿಗಾಗಿ ಗಿರಣಿಗಳ ಮೊರೆ ಹೋಗುವುದನ್ನು ತಪ್ಪಿಸಬೇಕೆಂಬುದು ಗಾಂಧಿಯವರ ಮುಂದಿನ ಚಿಂತನೆ. ಆಶ್ರಮದಲ್ಲಿಯೇ ನೂಲನ್ನು ತಯಾರಿಸುವುದು. ಇದಕ್ಕೆ ಅತ್ಯಗತ್ಯವಾದುದು ರಾಟೆ. ರಾಟೆಗಾಗಿ ಮತ್ತೆ ಗಾಂಧೀಜಿಯವರು ಸುತ್ತಾಡಿದರು. 1917ನೇ ಇಸವಿ. ಬರೋಡದಲ್ಲಿ ಶೈಕ್ಷಣಿಕ ಸಮ್ಮೇಳನ. ಗಾಂಧೀಜಿ ಅದರ ಅಧ್ಯಕ್ಷರು. ಗಾಂಧೀಜಿಯವರು ಅಲ್ಲಿ ಒಬ್ಬಳು ಮಹಿಳೆಯನ್ನು ಭೇಟಿಯಾದರು. ಆಕೆಯ ಹೆಸರು ಶ್ರೀಮತಿ ಗಂಗಾ ಬಹನ್‌. ಆಕೆ ವಿಧವೆ. ಕುದುರೆ ಸವಾರಿ ಬಲ್ಲವಳು. ಧೀಮಂತ ಮಹಿಳೆ. ಅತ್ಯಂತ ಧೈರ್ಯಶಾಲಿ. ಗಾಂಧೀಜಿಯವರು ಅವಳಲ್ಲಿ ರಾಟೆಯ ವಿಚಾರ ಪ್ರಸ್ತಾಪಿಸಿದರು. ಗಾಂಧೀಜಿಯವರ ಬೇಡಿಕೆಯನ್ನು ಈಕೆ ಗಂಭೀರವಾಗಿಯೇ ಸ್ವೀಕರಿಸಿದಳು. ರಾಟೆಗಾಗಿ ಎಲ್ಲೆಡೆ ಹುಡುಕಾಟ ನಡೆಸಿದಳು. ಕೊನೆಗೂ ಬರೋಡಾದ ಸಮೀಪದ ವಿಜಾಪುರದಲ್ಲಿ ರಾಟೆಗಳಿರುವ ವಿಚಾರ ತಿಳಿಯಿತು. ಅಲ್ಲಿನ ಮನೆ ಮನೆಗಳನ್ನು ಸುತ್ತಿದಳು.

ಆ ಮನೆಗಳಲ್ಲಿ ರಾಟೆಗಳೆಲ್ಲ ಮೂಲೆಗುಂಪಾಗಿ ಮನೆಯ ಅಟ್ಟದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದವು. ಅಲ್ಲಿನ ನೇಕಾರರೂ ಒಂದು ಷರತ್ತನ್ನು ವಿಧಿಸಿದರು. ತಮಗೆ ಯಾರಾದರೂ ಹತ್ತಿಯನ್ನು ಒದಗಿಸಿದಲ್ಲಿ ನೂಲನ್ನು ತಯಾರಿಸುತ್ತೇವೆ. ಆದರೆ ಆ ನೂಲುಗಳನ್ನು ಕೊಂಡುಕೊಳ್ಳಬೇಕು. ಗಂಗಾ ಬಹೆನ್‌ ಗಾಂಧೀಜಿಯವರಿಗೆ ಈ ವಿಷಯ ತಿಳಿಸಿದರು. ಗಾಂಧೀಜಿಯವರು ಸಮ್ಮತಿಸಿದರು. ಅಂತೂ ಮತ್ತೆ ರಾಟೆಗಳು ಕ್ರಿಯಾಶೀಲವಾದವು.

ಸ್ವಯಂ ಹತ್ತಿ ಸಂಗ್ರಹ
ಇದೇ ಸಂದರ್ಭದಲ್ಲಿ ಸಾಬರಮತಿಯ ಆಶ್ರಮದಲ್ಲಿ ಚರಕ, ರಾಟೆ ಮೊದಲಾದ ಉಪಕರಣಗಳು ತಮ್ಮ ನೆಲೆಗಳನ್ನು ಕಂಡುಕೊಂಡವು. ಆದರೆ ಗಾಂಧೀಜಿಯವರಲ್ಲಿ ಮತ್ತೂಂದು ಕನಸು ಇದೇ ಸಮಯದಲ್ಲಿ ಚಿಗುರಿತು. ಬೇರೆಯವರು ತಯಾರಿಸಿದ ನೂಲನ್ನೇ ಏಕೆ ಬಳಸಬೇಕು? ನಾವೇ ಏಕೆ ಹತ್ತಿಯನ್ನು ಸಂಪಾದಿಸಬಾರದು?

ಆ ಹತ್ತಿಯಿಂದ ನೂಲನ್ನು ನಾವೇ ಏಕೆ ತಯಾರಿಸಬಾರದು? ಪುನಃ ಗಾಂಧೀಯವರು ತಮ್ಮ ಅನಿಸಿಕೆಗಳನ್ನು ಗಂಗಾ ಬಹೆನ್‌ರವರ ಮುಂದಿಟ್ಟರು. ಆಕೆ ಕೂಡಲೇ ಕಾರ್ಯಪ್ರವೃತ್ತಳಾದಳು. ಹತ್ತಿಗಳನ್ನು ಒದಗಿಸಬಲ್ಲ ಒಬ್ಬನನ್ನು ಕಂಡು ಗಾಂಧೀಜಿಯವರಿಗೆ ಪರಿಚಯಿಸಿದಳು. ಆತ ಹತ್ತಿಯನ್ನು ಹೆಕ್ಕಿ ತಂದು ಕೊಡುವ ಹೊಣೆಯನ್ನು ಹೊತ್ತನು. ಆತನ ತಿಂಗಳ ಸಂಬಳ 35 ರೂ. ಗಾಂಧೀಜಿಯವರಿಗೆ ಸಂಬಳಕ್ಕಿಂತ ಮುಖ್ಯವಾದುದು ಗುಣಮಟ್ಟದ ಹತ್ತಿ. ಅವರು ಈ ವೇತನ ನೀಡಲು ಒಪ್ಪಿದರು. ಹತ್ತಿಗಾಗಿ ತಾವೇ ಭಿಕ್ಷೆ ಬೇಡಲೂ ಗಾಂಧೀಜಿ ಮುಂದಾದರು. ಈ ಶ್ರಮಗಳ ಫ‌ಲವಾಗಿ ಆಶ್ರಮದಲ್ಲಿ ಮೊದಲ ಖಾದಿ ಬಟ್ಟೆ ತಯಾರಾಯಿತು. ಅದರ ಬೆಲೆ ಒಂದು ಗಜದ ಅಳತೆಗೆ 17 ಆಣೆ.

ಖಾದಿ ಮತ್ತು ಗಾಂಧಿ ಇಂದು
ಇಂದು ಗಾಂಧಿ ಟೋಪಿ, ಖಾದಿ ವಸ್ತ್ರಗಳು ಕಣ್ಮರೆಯಾಗುತ್ತಿವೆ. ಗಾಂಧಿವಾದಿಗಳು ಇಂದು ಅಪರೂಪವಾಗಿದ್ದಾರೆ. ಗಾಂಧೀಜಿಯವರೂ ಚರ್ಚೆಯ ವಿಷಯವಾಗುತ್ತಿದ್ದಾರೆ. ಗಾಂಧಿಯವರ ಹೆಸರಿನ ಬಳಕೆಯಲ್ಲಿಯೂ ಅರ್ಥ ವ್ಯತ್ಯಾಸವಾಗುತ್ತಿದೆ. ಅತ್ಯಂತ ನಿರುಪದ್ರವಿ, ಮೃದು ಸ್ವಭಾವದ ಹಾಗೂ ಆಧುನಿಕತೆಗೆ ಹೊಂದಿಕೊಳ್ಳದ ವ್ಯಕ್ತಿಯನ್ನು ಗಾಂಧಿ ಎಂದು ತಮಾಷೆ ಮಾಡಲಾಗುತ್ತಿದೆ. ತರಗತಿಯಲ್ಲಿ ಮೂರನೇ ದರ್ಜೆಯಲ್ಲಿ ಪಾಸಾದವರನ್ನು ಗಾಂಧಿ ಕ್ಲಾಸ್‌ ಎಂದೂ ವಿಡಂಬಿಸಲಾಗುತ್ತಿದೆ. ಆಧುನಿಕತೆಯ ಅಬ್ಬರದಲ್ಲಿ ಖಾದಿ ವಸ್ತ್ರಗಳ ಮಳಿಗೆಗಳೇ ಮಾಯವಾಗುತ್ತಿವೆ. ಕೆಲವು ಜಿಲ್ಲೆಗಳಲ್ಲಿ ಖಾದಿ ಭಂಡಾರವೇ ಇಂದಿಗೂ ಇಲ್ಲ. ಸರಕಾರವು ಕನಿಷ್ಠ ಜಿಲ್ಲೆಗೊಂದಾದರೂ ಉತ್ತಮ ಖಾದಿ ಶೋ ರೂಮ್‌ ತೆರೆಯುವುದರ ಮೂಲಕ ಇದಕ್ಕೆ ಜೀವ ತುಂಬಬೇಕಾಗಿದೆ. ಇಲ್ಲಿ ಲಾಭ ಅಥವಾ ನಷ್ಟಗಳ ಪ್ರಶ್ನೆಗಳನ್ನು ಬದಿಗಿರಿಸಿ, ಖಾದಿಗೆ ಕೊಡುವ ಗೌರವ ಎಂಬ ಭಾವನೆ ಬೆಳೆಯಬೇಕಾಗಿದೆ.

ಡಾ| ಶ್ರೀಕಾಂತ್‌ ಸಿದ್ದಾಪುರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಹಿಂಗಾರು ಮಾರುತಗಳ ಭರ್ಜರಿ ಪ್ರವೇಶ ದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿ ಸುತ್ತಿದೆ. ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ...

  • ಏಷಿಯಾದ ಮೊದಲ "ಬಿಪಿಎಲ್‌'ಗೆ ಭಾನುವಾರ ಪ್ರಾಯೋಗಿಕ ಚಾಲನೆ ಸಿಕ್ಕಿದೆ. ಈ ಒಂದು ಪಥ ಯಶಸ್ವಿಯಾದರೆ, ನಗರ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಿಗೆ ಮುನ್ನುಡಿ...

  • ಬೆಂಗಳೂರು: ಅಲಯನ್ಸ್‌ ವಿವಿಯ ವಿಶ್ರಾಂತ ಕುಲಪತಿ ಹಾಗೂ ರಾಜಕಾರಣಿ ಡಾ.ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ಹಾಗೂ ಸುಪಾರಿ ಹಂತಕನಿಗೆ ಉತ್ತರ...

  • ವೀರ ಸಾವರ್ಕರ್‌ಗೆ "ಭಾರತ ರತ್ನ' ನೀಡುವ ಮಹಾರಾಷ್ಟ್ರ ಬಿಜೆಪಿ ಪ್ರಣಾಳಿಕೆಯ ಅಂಶದ ಬಗ್ಗೆ ರಾಜಕೀಯ ನಾಯಕರ ವಾಕ್ಸಮರ ಭಾನುವಾರವೂ ಮುಂದುವರಿದಿದೆ. ಇದೇ ವಿಚಾರವಾಗಿ...

  • ಬೆಂಗಳೂರು: ಅನಿಷ್ಠ ಹಾಗೂ ನಿಷೇಧಿತ ದೇವದಾಸಿ ಪದ್ಧತಿಯಿಂದ ಮುಕ್ತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಗೌರವ ಹಾಗೂ ಘನತೆಯ ಬದುಕು ಕಟ್ಟಿಕೊಳ್ಳುತ್ತಿರುವ...