“ಕಲಿಕಾ ಹಬ್ಬ’ ಎಂಬ ನಿತ್ಯೋತ್ಸವ…!


Team Udayavani, Dec 22, 2022, 6:05 AM IST

“ಕಲಿಕಾ ಹಬ್ಬ’ ಎಂಬ ನಿತ್ಯೋತ್ಸವ…!

ಆಟದ ಮೈದಾನದಲ್ಲಿನ ಮಕ್ಕಳ ಸಂಭ್ರಮವನ್ನು ತರಗತಿಯೊಳಗೆ ನಾವೆಂದೂ ಕಾಣುವುದಿಲ್ಲ. ತರಗತಿ ಪ್ರವೇಶಿಸುತ್ತಿದ್ದಂತೆಯೇ ಬಹುತೇಕ ಮಕ್ಕಳ ಮುಖ ಸಪ್ಪೆ. ಇನ್ನು ಪ್ರತಿಯೊಂದು ಹಬ್ಬ ಮುಗಿದಾಗ ಪ್ರತೀ ಮಗುವೂ “ಛೇ ಇಷ್ಟು ಬೇಗ ಮುಗಿಯಿತಲ್ಲ’ ಎಂದು ಅವಲತ್ತು ಕೊಳ್ಳುತ್ತದೆ. ಇಂಥದ್ದೊಂದು ವಾತಾವರಣ ಕಲಿಕೆಯಲ್ಲಿ ಏಕೆ ಸೃಷ್ಟಿಯಾಗಬಾರದು? ಒತ್ತಾಯದಿಂದ ತುರುಕುವ ಕಲಿಕೆಯ ಬದಲು, ಮಗುವಿಗೆ ಕಲಿಕೆಯೇ ಒಂದು ಹಬ್ಬವಾಗಿಬಿಟ್ಟರೆ?!

ಯಾವುದೇ ಹೊಸತನ್ನು ಕಲಿಯುವುದೆಂದರೆ, ಯಾರಿಗೇ ಆಗಲಿ ಕುತೂಹಲ, ಆಸಕ್ತಿ, ಸಂಭ್ರಮಗಳು ಮೇಳೈಸಬೇಕು. ಆದರೆ ಕಲಿಕೆಯ ತಾಣಗಳಾಗ ಬೇಕಾ ಗಿರುವ ಅದೇ ತರಗತಿ ಕೋಣೆಗಳು ಮಗುವಿಗೇಕೆ ಬಂಧನದ ಜೈಲುಗಳಂತೆ ಗೋಚರವಾಗುತ್ತದೆ? ನಮ್ಮ ಸಾಂಪ್ರದಾಯಿಕ ತರಗತಿಗಳು ಅಂಕಬಾಕತನದ ಏಕೈಕ ಗುರಿಯೊಂದಿಗೆ ಬರಿಯ ಬಾಯಿಪಾಠ ಮಾಡಿಸುತ್ತ, ಗೆಲುವಿನ ರೇಸ್‌ನಲ್ಲಿ ಮಗುವನ್ನು ದೂಡಿಬಿಟ್ಟು ಒದ್ದಾಡಿಸುವ ಕೆಲಸವನ್ನಷ್ಟೇ ಮಾಡುತ್ತಿದೆ. ಇದರಲ್ಲಿ ಕಂಠ ಪಾಠ ಮಾಡಿ ಅಂಕಗಳಿಸುವ ಸಾಮರ್ಥ್ಯ ಹೊಂದಿದ ಮಗು, ಇಷ್ಟವಿಧ್ದೋ ಇಲ್ಲದೆಯೋ ತರಗತಿ ಕೋಣೆ ಯನ್ನು ಸ್ವೀಕರಿಸಲು ಪ್ರಯತ್ನಿಸುತ್ತದೆ. ಪರಿಣಾಮವಾಗಿ ತರಗತಿಯೊಳಗಿನ ಕಲಿಕೆ ಎಂದರೆ ಮಗುವಿಗೆ ಬಹುಬಾರಿ ಅಲರ್ಜಿ ಆರಂಭವಾಗುತ್ತದೆ.

ಮಗುವಿನಲ್ಲಿ ಯಾವುದೇ ಕಲಿಕೆ ಆಗಬೇಕಿದ್ದರೂ ಅದು ಮಗುವಿಗೆ ಅನುಭವದ ಮೂಲಕ ಆಗಬೇಕು. “ಅನುಭವ ಇಲ್ಲದೆ ಕಲಿಕೆ ಆಗುವುದೇ ಇಲ್ಲವೆ?’ ಎಂಬುದು ನಿಮ್ಮ ಪ್ರಶ್ನೆಯಾದರೆ, ಆಗಬಹುದು. ಆದರೆ ಅದರ ಪ್ರಮಾಣ, ಪರಿಮಾಣ, ಆಳ, ಹರವು, ಹಾಳತ ಎಲ್ಲವೂ ತೀರಾ ಎಂದರೆ ತೀರಾ ಸೀಮಿತ. ಅದು ಪ್ರಯತ್ನ ಪೂರ್ವಕವಾಗಿ ಮಗುವಿನೊಳಗೆ ತುರುಕಿದ್ದಾದ್ದರಿಂದ, ಅದು ಮಗುವಿನೊಳಗೆ ಬಾಳಿ ಬದುಕುವ ಸಾಧ್ಯತೆಯೂ ತೀರಾ ಅಲ್ಪ. ಹೀಗಾಗಿಯೇ ಪರೀಕ್ಷೆ ಮುಗಿಸಿ, ಪರೀಕ್ಷಾ ಕೊಠಡಿ ಯಿಂದ ಹೊರಬಂದ ಮಗು, ಜೈಲಿನಿಂದ ಹೊರಬಂದ ಕೈದಿಯಂತೆ ಸಂಭ್ರಮ ಪಡುತ್ತದೆ! ಪರೀಕ್ಷೆ ಯಲ್ಲಿ ಮೂರು ಗಂಟೆ ಅಕ್ಷರ ವಾಂತಿ ಮಾಡಿದ್ದನ್ನು ಮುಂದಿನ ಜೀವನಕ್ಕೆ ನೆನಪಿಟ್ಟುಕೊಳ್ಳುವ ಮಾತಂತೂ ಕಲ್ಪಿಸಲೂ ಸಾಧ್ಯವಿಲ್ಲ ಬಿಡಿ. ತನ್ನ ಕಲಿಕೆಯನ್ನು ಬರಿಯ ಪರೀಕ್ಷೆ ಯಲ್ಲಿ ಉತ್ತರ ಪತ್ರಿಕೆಯ ಮೇಲೆ ಗೀಚಿದ ಮರುಕ್ಷಣಕ್ಕೆ ಕೆಟ್ಟ ಕನಸಿನಂತೆ ಮರೆಯುವುದೇ ಉದ್ದೇಶ ವಾಗುವುದಾದರೆ ಅಂಥಾ ಕಲಿಕೆಯಿಂದ ನಮ್ಮ ಮಗು ಏನನ್ನು ಗಳಿಸಿದಂತಾಯಿತು? ನಮ್ಮ ಮಕ್ಕಳನ್ನು ಶಾಲೆ ಎಂಬ ವ್ಯವಸ್ಥೆಯೊಳಗೆ ಕಳುಹಿಸಿ ಪೋಷಕರಾದ ನಾವು ಪಡೆದ ಸಾರ್ಥಕ್ಯವಾದರೂ ಏನು? ಇದು ಬದಲಾಗಿ, ಕಲಿಕೆ ಎಂದರೆ ಮಗು ಹಬ್ಬದಂತೆ ಸಂಭ್ರಮಿಸುವ ಸಾಧ್ಯತೆ ಗಳು ಆಗಲೇಬೇಕಿರುವ ತುರ್ತು ನಮ್ಮ ಸಮಾಜದ ಮುಂದಿದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಬಹು ಆಪ್ತವಾದ ಪ್ರಯತ್ನವೇ “ಕಲಿಕಾ ಹಬ್ಬ’.

ಏನಿದು “ಕಲಿಕಾ ಹಬ್ಬ’?
ಕರ್ನಾಟಕದ ಶಿಕ್ಷಣ ಇಲಾಖೆಯ “ಸಮಗ್ರ ಶಿಕ್ಷಣ ಕರ್ನಾಟಕ’ ಯೋಜನಾ ವಿಭಾಗವು ರಾಜ್ಯ ಮಾತ್ರವಲ್ಲ, ಇಡೀ ದೇಶದಲ್ಲೇ ಮೊದಲ ಬಾರಿಗೆ “ಕಲಿಕಾ ಹಬ್ಬ’ ಎಂಬ ಚೇತೋಹಾರಿ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದೆ. ಮಗುವಿನ ಕಲಿಕೆಯು ಸಂಪೂರ್ಣವಾಗಿ ಅನು ಭವ ಜನ್ಯವಾಗಿರುವುದರ ಜತೆಗೆ ಮಗು ತನ್ನನ್ನು ತಾನು ಸ್ವತಃ ತೊಡಗಿಸಿಕೊಳ್ಳುವ ಸ್ವಕಲಿಕೆಯ ಕಾರ್ಯ ಕ್ರಮ ಇದಾಗಿದೆ. ಆರಂಭದ ಹಂತವಾಗಿ ಇದೇ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ರಾಜ್ಯದ ಒಟ್ಟು 4,103 ಕ್ಲಸ್ಟರ್‌ಗಳಲ್ಲಿ ಕ್ಲಸ್ಟರ್‌ಮಟ್ಟದ “ಕಲಿಕಾ ಹಬ್ಬ’ಗಳು ಸಂಪನ್ನಗೊಳ್ಳಲಿವೆ. ರಾಜ್ಯದ ಸರಕಾರಿ ಶಾಲೆಯ 4ರಿಂದ 9ನೇ ತರಗತಿಯ ಮಕ್ಕಳು ಈ ಹಬ್ಬದ ಸಂಭ್ರಮದಲ್ಲಿ ತಮ್ಮನ್ನು ತಾವು ಮೈಮರೆತು ನಲಿಯಲಿದ್ದಾರೆ, ನಲಿಯುತ್ತಾ ಕಲಿಯುವವರಿದ್ದಾರೆ. ಇದಕ್ಕಾಗಿ ಈಗಾಗಲೇ ರಾಜ್ಯ, ಜಿಲ್ಲಾಮಟ್ಟದಲ್ಲಿ ವಿವಿಧ ಕಾರ್ಯಾಗಾರಗಳು ನಡೆ ದಿದ್ದು, ಕಲಿಕಾ ಹಬ್ಬದ ಆಶಯವನ್ನು ಮಕ್ಕಳಿಗೆ ತಲುಪಿಸುವುದಕ್ಕಾಗಿ ಕಾರ್ಯತತ್ಪರರಾದ ಕ್ರಿಯಾಶೀಲ ಅಧಿ ಕಾರಿಗಳು ಮತ್ತು ಶಿಕ್ಷಕರ ಅತ್ಯುತ್ತಮ ತಂಡಗಳು ರಾಜ್ಯಾದ್ಯಂತ ಸಿದ್ಧಗೊಂಡಿವೆ.

ಕಲಿಕೆಯೇ ಒಂದು ಹಬ್ಬವಾದರೆ?!
“ಕಲಿಕಾ ಹಬ್ಬ’ ಎಂಬುದು ಸಂಪೂರ್ಣವಾಗಿ ಮಗುವಿನ ಒಂದು ಸ್ವಕಲಿಕೆಯ ಕಲಿಕಾ ವಿಧಾನವಾಗಿದೆ. ನಮ್ಮ ಮನೆಗಳಲ್ಲಿ ಯಾವುದಾದರೂ ಹಬ್ಬವಿದ್ದಾಗ ನಮ್ಮೆಲ್ಲ ರೊಳಗೂ ಎಂಥಾ ಆಹ್ಲಾದಕರವಾದ ಲಹರಿ ಯೊಂದು ಆವಿರ್ಭವಿಸಿರುತ್ತದೆ! ನಮಗೇ ಗೊತ್ತಿಲ್ಲದೆ ಮನೆಯ ಕೆಲಸಗಳಲ್ಲಿ ನಮ್ಮನ್ನು ನಾವು ಎಷ್ಟೊಂದು ಸಂತೋಷದಿಂದ ತೊಡಗಿಸಿಕೊಳ್ಳುತ್ತೇವೆ. ಅದೆಷ್ಟು ಹೊಸ ವಿಚಾರಗಳನ್ನು ಹಿರಿಯರಿಂದ, ನಮ್ಮ ಸ್ನೇಹಿತರಿಂದ, ಸರೀಕರಿಂದ ತಿಳಿದುಕೊಳ್ಳುತ್ತೇವೆ. ಅಲ್ಲಿ ಯಾವುದೇ ಒತ್ತಾಯವಿರುವುದಿಲ್ಲ. ಹಬ್ಬವೆಂದಾಗ ಅಲ್ಲಿ ನಮ್ಮೆಲ್ಲರ ತನ್ಮಯವಾದ ಪಾಲ್ಗೊಳ್ಳುವಿಕೆ ಇರುತ್ತದೆ, ಸ್ವಾತಂತ್ರ್ಯವಿರುತ್ತದೆ, ಹುಡುಕಾಟವಿರುತ್ತದೆ, ರುಚಿಕಟ್ಟಾದ ಅನುಭವವಿರುತ್ತದೆ. ಹೀಗಾಗಿಯೇ ಹಬ್ಬ ಮುಗಿದಾಗ ಪ್ರತೀ ಮಗುವೂ “ಛೇ ಇಷ್ಟು ಬೇಗ ಹಬ್ಬ ಮುಗಿಯಿತಲ್ಲ’ ಎಂದು ಅವಲತ್ತುಕೊಳ್ಳುತ್ತದೆ.

ಇದು ಕಲಿಕೆಯಲ್ಲಿ ಏಕೆ ಆಗಬಾರದು? ಖಂಡಿತ. ಇಂತಹುದೇ ಒಂದು ಪ್ರಯತ್ನ ಕಲಿಕಾ ಹಬ್ಬ. ಮಕ್ಕಳು ಸಂಭ್ರಮದಿಂದ, ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಒಡನಾಟದ ಕಲಿಕೆಯ ಮೂಲಕ ಪ್ರಶ್ನೆಗಳು, ಪ್ರಯೋಗ ಗಳು, ವೀಕ್ಷಣೆಗಳು…ಹೀಗೆ ಅನುಭಾವಾತ್ಮಕವಾಗಿ ಕಲಿ ಯಲಿದ್ದಾರೆ. ಪರಸ್ಪರ ಚರ್ಚೆಗಳು, ಮುಕ್ತ ಸಂವಾದಗಳು, ಹಲವಾರು ಯೋಜನೆಗಳು, ಹಾಡು, ಹಸೆ, ನೃತ್ಯ, ನಾಟಕಗಳು ಇತ್ಯಾದಿ ಸುಮನೋಹರ ವಿಧಾನಗಳಿಂದ ಶಿಕ್ಷಕರ ನೆರವಿನಿಂದ ಮಗುವೇ ಸ್ವತಃ ವಿಮರ್ಶಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು, ಪ್ರಶ್ನೆ ಮಾಡುವುದನ್ನು ಕಲಿಕೆಯ ಆಸ್ಥೆಯ ಭಾಗವನ್ನಾಗಿಸಿಕೊಳ್ಳುವ ಮೂಲಕ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳಲಿದ್ದಾರೆ. ಇಲ್ಲಿ ಮಗುವಿನ ಪ್ರಶ್ನೆಯೇ ಪ್ರಜ್ಞೆಯಾಗಲಿದೆ! ಏಕೆಂದರೆ “ಕಲಿಕಾ ಹಬ್ಬ’ದ ಮೂಲ ಆಶಯವೇ “ಪ್ರಶ್ನೆಯು ಪ್ರಜ್ಞೆ ಯಾಗಲಿ’ ಎಂಬುದು. ಮಗು ತನ್ನನ್ನು ತಾನು ರಚನಾತ್ಮಕ ತರಗತಿಯೊಳಗೆ ತೊಡಗಿಸಿಕೊಳ್ಳಲಿದೆ. “ಕಲಿಕಾ ಹಬ್ಬ’ದ ಮೂಲ ಆಶಯವೇ ಇದು.

ಕಲಿಕಾ ಹಬ್ಬದಲ್ಲಿ ಮಗು “ಮಾಡು-ಆಡು’, “ಊರು ತಿಳಿಯೋಣ’, “ಕಾಗದ-ಕತ್ತರಿ’, “ಆಡು-ಹಾಡು’ ಎಂಬ ನಾಲ್ಕು ಗುಂಪುಗಳಲ್ಲಿ ಅನೇಕ ನಾವೀನ್ಯಪೂರ್ಣವಾದ ವಿಚಾರಗಳನ್ನು ಕಲಿಯಲಿದೆ. ಇಲ್ಲಿ ಮಗುವಿಗೆ “ಬೋರ್‌’ ಎನ್ನುವ ಪದವೇ ಹತ್ತಿರ ಸುಳಿಯಲಾರದು. ಹೆಜ್ಜೆಹೆಜ್ಜೆಗೂ ಮಗು ಚಟುವಟಿಕೆಗಳ ಮೂಲಕವೇ ತಾನು ಸ್ವತಃ ಅನುಭವಿಸಿ ಕಲಿಯುವುದರಿಂದ ಇಲ್ಲಾದ ಕಲಿಕೆಯನ್ನು ಪರೀಕ್ಷೆ ಬಿಡಿ- ಜೀವಮಾನಕ್ಕೂ ಮರೆಯಲಾರದು. ಜತೆಗೆ ಮುಖ್ಯವಾಗಿ, ತಾನು ಇಲ್ಲಿ ಕಲಿತದ್ದನ್ನು ತನ್ನ ಇತರ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದರಿಂದ ಈ “ಕಲಿಕಾ ಹಬ್ಬ’ ಒಂದು ನಿರ್ದಿಷ್ಟ ಅವಧಿಗೆ ಮುಗಿದು ಹೋಗದೇ ಅದು ಚಟುವಟಿಕೆಗಳಾಗಿ ನಿರಂತರವಾಗಿ ಮುಂದು ವರಿ ಯುತ್ತಿರುತ್ತದೆ. ಆ ಮೂಲಕ ಸಾಂಪ್ರದಾಯಕ ಕಲಿಕಾ ಪ್ರಕಾರದಿಂದ ಹೊರಳಿ, ಮಗು ಈ ಸಡಗರದ ಕಲಿಕೆಯ ಸಾರಸತ್ವವನ್ನು ತನ್ನದಾಗಿಸಿಕೊಳ್ಳುವುದನ್ನು ಇಡೀ ಸಮುದಾಯವೇ ಕಣ್ಣಾಗಿಸಿಕೊಳ್ಳಲಿದೆ.

-ಸುರೇಶ್‌ ಮರಕಾಲ ಸಾೖಬರಕಟ್ಟೆ

ಟಾಪ್ ನ್ಯೂಸ್

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

1-manipal-station

ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪ; ಐವರು ವಿದ್ಯಾರ್ಥಿಗಳು ವಶಕ್ಕೆ

tdy-2

ಕನಸಿನಲ್ಲಿ ʼಶ್ರೀಕೃಷ್ಣʼ ದೇವರನ್ನು ಕಂಡು ನಿದ್ದೆಯಿಂದ ಎಚ್ಚೆದ್ದ ಸಚಿವ.!

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

TDY-22

ಸ್ಟಾರ್ಟ್‌ಅಪ್‌ ಕನಸು ಹೊತ್ತವರ ಚಿತ್ರ: ಮೇಡ್ ಇನ್ ಬೆಂಗಳೂರು

TDY-1

ಆನ್ಲೈನ್‌ ನಲ್ಲಿ ವಿದ್ಯುತ್‌ ಬಿಲ್‌ ಕಟ್ಟಲು ಹೋಗಿ 7 ಲಕ್ಷ ರೂ. ಕಳೆದುಕೊಂಡ ಮಹಿಳೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಸುರು ಜಲಜನಕ: ಭವಿಷ್ಯದ ಇಂಧನ

ಹಸುರು ಜಲಜನಕ: ಭವಿಷ್ಯದ ಇಂಧನ

ವಿಶ್ವದ ಅಶಾಂತಿಗೆ ಪಾಕಿಸ್ಥಾನದ ಮಹತ್ವದ ಕೊಡುಗೆ!

ವಿಶ್ವದ ಅಶಾಂತಿಗೆ ಪಾಕಿಸ್ಥಾನದ ಮಹತ್ವದ ಕೊಡುಗೆ!

ಮನವ ಶೋಧಿಸಬೇಕು ನಿತ್ಯ

ಮನವ ಶೋಧಿಸಬೇಕು ನಿತ್ಯ

ನಾವು ಡಿಜಿಟಲ್‌ ಬ್ಯಾಂಕಿಂಗ್‌ಗೆ ಕಾಲಿಟ್ಟಿದ್ದೇವಷ್ಟೇ…

ನಾವು ಡಿಜಿಟಲ್‌ ಬ್ಯಾಂಕಿಂಗ್‌ಗೆ ಕಾಲಿಟ್ಟಿದ್ದೇವಷ್ಟೇ…

ಕನ್ನಡ ಶಾಲೆ ಗಟ್ಟಿಗೊಳಿಸಿ ಕನ್ನಡ ಉಳಿಸಿ

ಕನ್ನಡ ಶಾಲೆ ಗಟ್ಟಿಗೊಳಿಸಿ ಕನ್ನಡ ಉಳಿಸಿ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

1-manipal-station

ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪ; ಐವರು ವಿದ್ಯಾರ್ಥಿಗಳು ವಶಕ್ಕೆ

tdy-2

ಕನಸಿನಲ್ಲಿ ʼಶ್ರೀಕೃಷ್ಣʼ ದೇವರನ್ನು ಕಂಡು ನಿದ್ದೆಯಿಂದ ಎಚ್ಚೆದ್ದ ಸಚಿವ.!

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.